ಸೋಮವಾರ, ಮಾರ್ಚ್ 7, 2011

ನಾ ಕಂಡ ಈಜಿಪ್ಟ

                                     ನಮ್ಮ ಈಜಿಪ್ಟ್ ಪ್ರವಾಸ 



            ಈಜಿಪ್ಟ್- ಈಗ ಎಲ್ಲಿ  ನೋಡಿದರೂ ಈಜಿಪ್ತಿನದೇ ಸುದ್ದಿ. ನಮ್ಮ ಗಲ್ಫ್ ನ್ಯೂಸ್ ಪತ್ರಿಕೆಯಂತೂ ಪೂರ್ತಿ ಈಜಿಪ್ಟಿನ  ಕ್ರಾಂತಿಯ ಸುದ್ದಿಗಳಿಂದ ತುಂಬಿಹೊಗಿರುತ್ತದೆ. ಈಗ ಪತ್ರಿಕೆಗಳಲ್ಲಿ ಬರುವ ಈಜಿಪ್ಟಿನ ಚಿತ್ರಗಳನ್ನು ನೋಡಿದರೆ ನಾವು ಕಳೆದ ತಿಂಗಳು ನೋಡಿಬಂದಿದ್ದು ಈ ದೇಶವನ್ನೇ ಹೌದೆ ಎಂದು  ಅಚ್ಚರಿಯಾಗುತ್ತದೆ!!  ಈಗಿನ ಪರಿಸ್ತಿತಿಯನ್ನು ನೋಡಿದರೆ ಪುನಃ ಅಲ್ಲಿ ಪ್ರವಾಸಿಗರು ಹೋಗುವಂತಾಗುವುದು ಯಾವಾಗಲೋ?! ಆದ್ದರಿಂದ ಈಗ ನನ್ನ ಈಜಿಪ್ಟಿನ ಅನುಭವಗಳನ್ನು ದಾಕಲಿಸುವುದು ಅತ್ಯಂತ ಪ್ರಸ್ತುತ.
                
                 ನಾವು ಅರಬ್ಬರ ಪ್ರಪಂಚಕ್ಕೆ ಬಂದು ಐದು ವರ್ಷಗಳಿಂದಲೂ ಈಜಿಪ್ಟಿಗೆ ಹೋಗುವ ಯೋಚನೆಯನ್ನು ಮಾಡುತ್ತಲಿದ್ದೆವು. ಎರಡು ಬಾರಿ ಟಿಕೆಟುಗಳನ್ನು ಕಾದಿರಿಸಿಯೂ ನಮ್ಮ ಪ್ರವಾಸ ಕಾರಣಾಂತರಗಳಿಂದ ರದ್ದಾಗಿತ್ತು. ಆದರೆ ಈ ಬಾರಿ ಅದ್ದೂರಿಯಾಗಿ ಅಮ್ಮ, ಮಧುರಾಳ ಕುಟುಂಬದೊಂದಿಗೆ ನೆರವೇರಿತು. ೨೦೧೦ರ ಡಿಸೆಂಬರ್ ೨೬ ರಂದು ಬೆಸ್ಟ್ ವೇ ತ್ರವೆಲ್ನವರು ಮಾಡಿರುವ ವ್ಯವಸ್ಥೆಯನ್ನು ನಂಬಿ ಷಾರ್ಜಾದಿಂದ ಈಗಿಪ್ತಿನ luxor ಎಂಬ ನಗರಕ್ಕೆ ವಿಮಾನವೇರಿದೆವು. ರಾತ್ರಿ ಏರಡು ಗಂಟೆಗೆ ಚಳಿಯಲ್ಲಿ ಅಲ್ಲಿ ಇಳಿದಾಗ ನಮ್ಮನ್ನು ಕರೆದೊಯ್ಯಲು ಜನ ಕಾಯುತ್ತಿತ್ತು! ಒಂದು ಬಸ್ಸಿನಲ್ಲಿ ಒಬ್ಬ ನಮ್ಮನ್ನು ಕರೆದೊಯ್ದು. ಲಕ್ಷರ್ ಪಟ್ಟಣ ಆ ರಾತ್ರಿಯಲ್ಲಿಯೂ ಇನ್ನೂ ಮಲಗಿರಲಿಲ್ಲ. ಕ್ರಿಸಮಸ್   ಹಬ್ಬದ ವಿದ್ಯುತ್ ಅಲಂಕಾರಗಳು ಊರಿನ ಎಲ್ಲ ಕಡೆ ಪ್ರವಾಸಿಗರನ್ನು ಸ್ವಾಗತಿಸುತ್ತಿತ್ತು. ಊರು ಹಳೆಯದಾರೂ ಚೊಕ್ಕವಾಗಿತ್ತು. ನಮ್ಮನ್ನು ಕರೆದೊಯ್ಯುತ್ತಿದ್ದ ಆಸಾಮಿ  ಹಲವು ಏಟಿಎಂಗಳ ಬಳಿಯಲ್ಲಿ ನಿಲ್ಲಿಸಿ ಹಣವನ್ನು ತೆಗೆಸಿ ಸಂಪೂರ್ಣ  ಹಣ ಪಡೆದ ನಂತರ ನಮ್ಮನ್ನು  ಹಡಗಿಗೆ ಬಿಡಲಾಯಿತು. ಪ್ರೀತಿ ಮತ್ತು ಶ್ರೆಯಾರಿಗೆ ನಮ್ಮನ್ನು ಬಿಡಲು ಬಂದಿದ್ದ ಆಸಾಮಿಯ ಇಂಗ್ಲಿಶ್  ಮಾತನಾಡುವ ರೀತಿ ಸಮಯ ಕಳೆಯುವ ಮೋಜನ್ನು ಒದಗಿಸಿತು. ಅರಬ್ಬೀ ಬಾಷೆಯಲ್ಲಿ  ಅಕ್ಷರ ಇಲ್ಲದುದರಿಂದ ಇವರು ಅನ್ನು ಎಂದು ಉಚ್ಚರಿಸುತ್ತಾರೆ. ನಮ್ಮ guide ಪೀಟರ, ಬೀಟರ್ ಆಗುತ್ತಾನೆ. ಪ್ರೀತಿ ಅವುಗಳನ್ನು ಕೇಳಿ ನಗುವುದು, ಶ್ರೇಯಾ ಅವನ ಸದ್ದನ್ನು ಅನುಕರಿಸುವುದು: ನಮಗೂ ನಗುವೂ ನಗು.

ನಮ್ಮ ಕ್ರುಸಿನ ಅನುಭವ:
                    
            ಅಂತೂ ನಮ್ಮ ಹದಗಿನೊಳಗೆ  ಬಂದೆವು. ಅಲ್ಲಿನ  ಚಿಕ್ಕ, ಚಿಕ್ಕ ಕೋಣೆಗಳನ್ನು ನೋಡಿ ಸ್ವಲ್ಪ ಬೇಸರವಾದರೂ, ಮುಂದಿನ ನಾಲ್ಕು ದಿನಗಳ ಅನುಭವಗಳು ಅವನ್ನೆಲ್ಲ ಮರೆಯಿಸಿತು. ನ್ಯೇಲ್ ನದಿಯ ಮೇಲೆ ತೇಲುತ್ತ, ಅವಳ ತೀರದ ಮೇಲಿರುವ ಸ್ಮಾರಕಗಳನ್ನು ನೋಡುತ್ತಾ ನಾವು ಮೂರು ದಿನ ಕಳೆದೆವು. ಈ ಮೂರು ದಿನಗಳು ನಮ್ಮ ಜೀವನದ ಅತ್ಯತ್ತಮ್ಮ ದಿನಗಳಲ್ಲಿ ಕೆಲವು ಎನಿಸುತ್ತದೆ.  ಕೋಣೆಯ ಕಿಟಕಿಯಿಂದ ಶಾಂತವಾಗಿ ಹರಿಯುವ ನ್ಯೇಲ್ , ಪಕ್ಕದ ಹಸಿರು, ಅದರಾಚೆಗಿನ ಮರುಭೂಮಿಯ ದ್ರಶ್ಯ-ನೋಡಿದಸ್ಟೂ ಮನ ತಣಿಯುತ್ತಿರಲಿಲ್ಲ. ಮೂರು ಮಾಳಿಗೆಯ ಹಡಗಿನ ಮೇಲ್ಚಾವಾಣಿಯಲ್ಲಿ  ಒಂದು ಚಿಕ್ಕ ಈಜುಕೊಳವಿತ್ತು, ಸುತ್ತಲಿನ ನೋಟವಂತೂ ಅವಿಸ್ಮರಣೀಯ. ೭,೦೦೦ ವರುಷಗಳ ಮಾನವನ ಇತಿಹಾಸವನ್ನು ನೋಡುತ್ತಾ, ಎಲ್ಲದಕ್ಕೋ ಸಾಕ್ಷಿಯಗಿಯೂ, ತನ್ನಷ್ಟಕ್ಕೆ ತಾನು ಹರಿಯುತ್ತಿರುವ ನಯ್ಲನ್ನು   ನೋಡುವಾಗ ಮನಸ್ಸಿನಲ್ಲಿ ಹಲವು ಭಾವನೆಗಳು ಮೂಡುತ್ತಿದ್ದವು. ಅಗಲವಾಗಿ, ಶಾಂತವಾಗಿ ಹರಿಯುವ ಈ ನದಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ.  ಸಾವಿರಾರು ವರ್ಷಗಳಿಂದಲೂ ಈಜಿಪ್ಟಿನ ಜೀವನಾದಿಯಗಿರುವ ಈ ನದಿ ಇಂದಿಗೂ ಈಜಿಪ್ಟಿನ ಜನರ ಅನ್ನದಾತೆ.

ನ್ಯಲ್ನ ಮೇಲೆ ಹೋಗುತ್ತಿರುವ ವಿಹಾರಿ ಹಡಗು

ನ್ಯಲ್ನಲ್ಲಿ ಸೂರ್ಯಾಸ್ತ 


                ಲುಕ್ಷೊರ್ನಲ್ಲಿ ಹಡಗು  ಹತ್ತಿದ  ನಾವು ಅಸ್ವಾನ್ ತನಕ ಹೋಗುವವರಿದ್ದೆವು. ದಾರಿಯಲ್ಲಿ ಕರ್ನಾಕ್ ದೇವಸ್ತಾನ, ಲುಕ್ಷೊರ್ ದೇವಸ್ತಾನ, ಕೊಂ-ಒಮ್ಬೋ, ರಾಣಿ ನೆಫಾರ್ತರಿಯ ದೇವಾಲಯ, ಎದ್ಫು ದೇವಸ್ತಾನಗಳನ್ನು ನೋಡಿದೆವು.ದೊರೆಗಳ ಕಣಿವೆ (Valley of Kings) ಯನ್ನೂ  ನೋಡಿದೆವು. ಬರುತ್ತೇವೆಂದು ತಯಾರಿ ಸುರುವಾದಾಗಿನಿಂದ ಸಮಯ ಸಿಕ್ಕಾಗೆಲ್ಲ ಓದಿ ಈಜಿಪ್ಟಿನ ಬಗೆಗೆ ಒಂದು ಸ್ಥೂಲ ಕಲ್ಪನೆಯನ್ನು ಹಾಕಿಕೊಂಡು ಬಂದಿದ್ದೆ. ಈ ಸ್ಮಾರಕಗಳ ಚಿತ್ರಗಳನ್ನೂ ನೋಡಿದ್ದೇ. ಆದರೂ ಇವು ಯಾರೂ ಊಹಿಸಲೂ ಆಗದಷ್ಟು ಭವ್ಯವಾಗಿವೆ.ನಮ್ಮ ಹಿಂದೂ ಧರ್ಮದ ದೇವಸ್ತಾನಗಳಿಗೆ ಹೋಲುವ ಈ ದೇವಸ್ತಾನಗಳು ೪೦೦೦ ವರ್ಷಗಳ ಹಿಂದೆಯೇ ನಿರ್ಮಿಸಲ್ಪತ್ತಿದ್ದವು ಎಂದು ನೋಡುವಾಗ ವಿಸ್ಮಯ ಎನಿಸುತ್ತ.ದೆ. ನಮ್ಮ ದೇವಸ್ತಾನಗಳಂತೆ ಗರುಡಗಂಬ, ಗರ್ಭಗುಡಿ, ದೇವರ  ಪ್ರಥಿಮೆಗಳನ್ನೆಲ್ಲ ನೋಡಬಹುದು. ಇಲ್ಲಿನ ಅರಸರುಗಳು ಅರಮನೆಗಳ ಬದಲು ಭವ್ಯವಾದ ದೇವಾಲಯಗಳನ್ನು ಕಟ್ಟಿದ್ದಾರೆ.

                      ದೊರೆಗಳ ಕಣಿವೆ (valley of kings) ಬೆಟ್ಟಗಳ ನಡುವೆ ಇರುವ ಈ  ಜಾಗ  ಪ್ರಾಚಿನ ಈಜಿಪ್ಟಿನ ದೊರೆಗಳ ಸಮಾಧಿ ಸ್ಥಳ. ಇಲ್ಲಿ ಸಾಲಾಗಿ ಹಲವು ಖಾಲಿ ಸುರಂಗಗಳಂತಹ ಗುಹೆಗಳನ್ನು ಈಗ ನೋಡಬಹುದ. ಇಲ್ಲಿ ಪರೋಗಳನ್ನ್ನು ಮಮ್ಮಿ ಮಾಡಿ ಸಮಾಧಿ ಮಾಡಿದ್ದರು. ಆದರೆ ಆ ಸಮಾಧಿಗಳಲ್ಲಿ  ಅವರು ತುಂಬಿದ್ದ ನಿಧಿಗಾಗಿ ಹೆಚ್ಚಿನ ಎಲ್ಲ ಮಮ್ಮಿಗಳನ್ನು  ಲೂಟಿ ಮಾಡಲಾಗಿದೆಯಂತೆ. ಇಲ್ಲಿ ಸಿಕ್ಕಿದ ತುತಂಕಾಮನ್ ಎಂಬ ಬಾಲಕ ರಾಜನ ಸಮಾಧಿಯೂ ಸಂಪೂರ್ಣ ದೊರೆತ ಏಕಮಾತ್ರ ಸಮಾಧಿಯಂತೆ. ಉತ್ಕತನದಲ್ಲಿ ಸಿಕ್ಕಿದ ಈ ಬೆಲೆಬಾಳುವ ಸಾಮಗ್ರಿಗಳನ್ನು, ಮಮ್ಮಿಗಳನ್ನು ಕೈರೋದ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. 

ಕರ್ನಾಕ್ ದೇವಾಲಯದ ಸ್ಫಿನ್ಕ್ಷನ ಸಾಲು
                                         

ರಮ್ಸೆಸ್ ರಾಜನ ಪ್ರತಿಮೆಯ ಮುಂದೆ, ಕಾರ್ನಾಕ್ ದೇವಾಲಯಾ

             ಈ ಭವ್ಯ ಸ್ಮಾರಕಗಳನ್ನು ನಿರ್ಮಿಸಿದ ಈಜಿಪ್ಟಿನ ಪುರಾತನ ನಾಗರೀಕತೆ ಈಗ ಸಂಪೂರ್ಣ ನಶಿಸಿ ಹೋಗಿದೆ. ಅವರ ಧರ್ಮದ ಹೆಚ್ಚಿನ ಮಾಹಿತಿಗಳು ಈಗ ಲಭ್ಯವಿಲ್ಲ. ಈಗ ಲಭಿಸಿರುವ ಮಾಹಿತಿಗಳೂ ೧೮-೧೯ ನೇ ಶತಮಾನಗಲ್ಲಿನ ಪಾಶ್ಚಾತ್ಯ ಇತಿಹಾಸಕಾರರ ಪರಿಶ್ರಮಗಳಿಂದ. ನಮ್ಮ guide ಪೀಟರನ ಅರಬ್ ಇಂಗ್ಲಿಷನ್ನು ಅರ್ಥ ಮಾಡಿಕೊಳ್ಳುತ್ತ ಅವನು ಕೊಡುವ ವಿವರಣೆಗಳನ್ನು ಕೇಳುತ್ತ ಹಲವು ವಿಚಾರಗಳನ್ನು ತಿಳಿದೆವು. ಪುರಾತನ ಈಜಿಪ್ಟಿನ  ಜನರು ನಮ್ಮಂತೆ ಹಲವು ದೇವತೆಗಳ ಆರಾಧನೆ ಮಾದುತ್ತ್ತಿದ್ದರು. ಅಮೊನ್(ಲಕ್ಷರಿನ ದೇವ) ರಾ (ಸೂರ್ಯ ದೇವ), ಹೊರುಸ್(ರಕ್ಷಣೆಯ ದೇವತೆ), ಜಹುತಿ(ಮುಮ್ಮಿಗಳನ್ನು ಮಾಡುವಾಗ ನೆರವಾಗುವ ದೇವ), ಐಸಿಸ್ (ಎಲ್ಲ ದೇವರ ಮಾತೆ, ಇವಳಿಗೆ ಗೋವಿನ ಮುಖ)-ಇವೆಲ್ಲ ಕೆಲುವು ಪ್ರಮುಖ ದೇವತೆಗಳು. ಅಲ್ಲದೆ ನಮ್ಮಂತೆ ಗ್ರಾಮದೇವತೆಯ ಪೂಜೆಯನ್ನು  ಕಾಣಬಹುದು.ಇವರ ದೇವಸ್ತಾನಗಳ ಗೋಡೆಯ ಮೇಲೆ ರಾಜರು ದೇವರಿಗೆ  ಹಲವು ಸೇವೆಗಳನ್ನು ಅರ್ಪಿಸುತ್ತಿರುವ ಚಿತ್ರಗಳನ್ನು, ಹಲವು ರೀತಿಯ ಉತ್ಸವದ ಚಿತ್ರಗಳನ್ನೂ ಕಾಣಬಹುದು.  ಹಿಂದೂ ಧರ್ಮಕ್ಕೂ ಇವರ ಧರ್ಮಕ್ಕೋ ಹಲವು ಹೋಲಿಕೆಗಳು ಕಾಣುತ್ತವೆ. ನಮ್ಮಂತೆ ಇವರಿಗೂ ಗೋಮಾತೆ. ಭಾರತದಿಂದ ಸಾವಿರಾರು ಮೈಲುಗಳ ದೂರದಲ್ಲಿರುವ ಅಲ್ಲಿನ ಧರ್ಮಕು, ನಮ್ಮ ಸನಾತನ ಧರ್ಮಕ್ಕೂ ಹೋಲಿಕೆಯಿರುವುದು ಆಶ್ಚರ್ಯ!  ಹಿಂದೂ ಧರ್ಮ ಉಳಿದುಕೊಂಡು ಬಂದಿದೆ. ಈಜಿಪ್ಟ್ ಈಗ ಮುಸಲ್ಮಾನ ರಾಷ್ಟ್ರ. ಇಲ್ಲಿನ ೯೦% ಮಂದಿ ಮುಸಲ್ಮಾನರು. ಉಳಿದವರಲ್ಲಿ ಹೆಚ್ಚಿನವರು ಕಾಪ್ಟಿಕ್ ಕ್ರಿಸ್ತರು.
      
              
           ಭಾರತೀಯರಿಗೆ ಈಜಿಪ್ಟಿನ ಜನ ಬಹಳ ಹಾರ್ದಿಕ ಸ್ವಾಗತ ನೀಡುತ್ತಾರೆ. ನಾವು ಎಲ್ಲೀ ಹೋಗಲಿ, ನಮ್ಮನ್ನು ಕಂಡೊಡನೆ, "ಇಂಡಿಯಾ, ನಮಸ್ತೆ, ಅಮಿತಾಬ್ ಬಚ್ಚನ್" ಎಂಬ ನುಡಿಗಳು ನಮ್ಮ ಕಿವಿಗೆ ಬೀಳುತ್ತವೆ. ಹಿಂದಿ ಸಿನೆಮಾ ತಾರೆಯರ ಹೆಸರುಗಳಂತೂ ಸಾಲಾಗಿ ಬರುತ್ತಿತ್ತು. ಆದರೆ ಅಮಿತಾಬ್ ಬಚ್ಚನ್ ಮಾತ್ರ ಎಲ್ಲರಿಗೂ ತಿಳಿದಿರುವ ಮಹಾನ್ ನಟ. ಒಬ್ಬ ಈಜಿಪ್ತಿನ ಪೌರನಿಗೆ ಅಮಿತಾಬ್ ಬಚ್ಚನ್  ಧರ್ಮ ಯಾವುದೆಂದು ಬೇಕಿತ್ತು. ಅರಬ್ಬೀ ಮಿಶ್ರಿತ  ಇಂಗ್ಲಿಷಿನಲ್ಲಿ ಕಷ್ಟಪಟ್ಟು  ಅವನು ಹಿಂದುವೋ, ಮುಸಲ್ಮಾನನೋ? ಎಂದು ಕೇಳಿದ. ನಾನು ಅಮಿತಾಬ್ ಹಿಂದೂ ಎಂದಿದ್ದು ಈತನನ್ನು ಸ್ವಲ್ಪ ಪೆಚ್ಚಾಗಿಸಿತು! ಇನ್ನೊಮ್ಮೆ ನಾನು  ಮತ್ತು ಶಶಿ ಕುಡಿಯುವ ನೀರು ತರಲು ಹೋದಾಗ ಶಾಲೆಯ ಹುಡುಗಿಯರೊಂದಿಗೆ ನಮ್ಮ ಬೇಟಿಯಾಯಿತು. ಅವರಿಗೆ ನಮ್ಮೊಡನೆ ಮಾತನಾಡಲು ಭಾಷೆ ತೊಡಕಾದರೂ ಭಾರತೀಯರನ್ನು ಮಾತನಾಡಿಸುವ ಹುಮ್ಮಸ್ಸು. ಹಿಂದಿ ಸಿನೆಮಾದ ಕೆಲವು ಹೀರೋಗಳನ್ನು ನೋಡಿದ್ದಿರಾ?- ಎಂಬ ಹಲವು ಪ್ರಶ್ನೆಗಳನ್ನು ಕೇಳಿದರು, ತಾವು  ತಿನ್ನುತ್ತಿದ್ದ ಪೊಟ್ಟಣದಿಂದ ಒಂದೆರಡು ಚಿಪ್ಸುಗಳನ್ನೂ ನಮಗೆ ಕೊಟ್ಟರು. ನಮ್ಮ ಬಾಲಿವುಡ್ ಚಿತ್ರರಂಗ ಪ್ರಪಂಚದ ಎಲ್ಲ ಭಾಗಗಳಿಗೂ ಭಾರತದ ರಾಯಭಾರಿಯಾಗಿ  ಪ್ರಖ್ಯಾತವಾಗಿದೆಯಲ್ಲ ಎಂದು ನನಗೆ ಆಶ್ಚರ್ಯವಾಯಿತು. ಇಲ್ಲಿನ ಇನ್ನೊಂದು ಕಿರಿಕಿರಿಯಾಗುವ  ವಿಚಾರವೆಂದರೆ ವ್ಯಾಪಾರಗಳಲ್ಲಿ ಚರ್ಚೆ ಕುಡಿಯುವ ನೀರಿನ ಬಾಟಲಿಗೂ ಚರ್ಚೆ ಮಾಡಬೇಕಿತ್ತು! 

          ಶ್ರೇಯಾ ಹೋದಲ್ಲೆಲ್ಲ  ತನ್ನ  ಮುಗ್ಧ  ನುಡಿಗಳಿಂದ  ನಮಗೆಲ್ಲ ಒಳ್ಳೆಯ ಮನರಂಜನೆ ಒದಗಿಸುತ್ತಿದ್ದಳು. ಅಬುಧಾಬಿಗೆ ಬರುವಾಗ ದೊಡ್ದೊಪ್ಪನೆಂದರೆ ಅಳುತ್ತಿದ್ದವಳು ಈಗ  ದೊಡ್ಡಪ್ಪನ ಸ್ನೇಹಿತೆಯಾಗಿದ್ದಳು. ಪ್ರೀತಿಗೂ  ಈ  ಪ್ರವಾಸ  ಶ್ರೆಯಳಿಂದಾಗಿ ಬಹಳ  ಚಟುವಟಿಕೆಗಳಿಂದ ಕಳೆಯುತ್ತಿತ್ತು. ಅವಳ  ಆಸಕ್ತಿಯಂತೆ ಕೇಳಿದ ಈಜಿಪ್ಟಿನ ದೇವ, ದೇವತೆಯರ ಹೆಸರುಗಳನ್ನೂ ಒಂದು ಕಾಗದದಲ್ಲಿ ಬರೆಯುವ, ನೋಡಿದ ಜಾಗಗಳ ಬಗೆಗೆ ಸಾಧ್ಯವಾದ ಮಾಹಿತಿ ಕಲೆ ಹಾಕುವ ಕೆಲಸಗಳನ್ನು ಮಾಡುತ್ತಿದ್ದಳು. ಬೇರೆ ಸಮಯದಲ್ಲಿ ಶ್ರೆಯಾಳನ್ನು  ಗೊಂಬೇಯೇನೂ  ಎಂಬಂತೆ  ತನ್ನ  ಇಷ್ಟಕ್ಕನುಸಾರವಾಗಿ  ಆಡಿಸುತ್ತಿದ್ದಳು. ಅಮ್ಮ ಅವಳ ಮೊದಲ ವಿದೇಶ ಪ್ರವಾಸವನ್ನು ಮಕ್ಕಳು ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಅನುಭವಿಸುತ್ತಿದ್ದಳು. ದಿನವೂ ನೋಡಿದ ವಿಚಾರಗಳನ್ನು ಬರೆದುಕೊಳ್ಳುತ್ತಿದ್ದಳು, ಹೊಸ ವಿಚಾರಗಳ  ಬಗ್ಗೆ  ಟಿಪ್ಪಣಿ  ಮಾಡಿಕೊಳ್ಳುತ್ತಿದ್ದಳು.ಅಮ್ಮನ ಈ  ಜೀವನೋತ್ಸಾಹ ನಮಗೆ ಮಾದರಿಯಾಗಬೇಕು. ನಾನೂ, ಮಧುರಳೂ ಬಹು ದಿನಗಳ ಬಳಿಕ ನಮಗೆ ಒಟ್ಟಿಗೆ  ಕಳೆಯಲು  ದೊರಿಕದ ಸಮಯವನ್ನು ಅನುಭವಿಸಿದೆವು. ಪ್ರಸನ್ನನಿಗೆ ಸ್ವಲ್ಪ ಜ್ವರವಿದ್ದುದರಿಂದ ಎರಡು ದಿನ ಮಲಗಿರಬೀಕಾಯಿತು. ಶಶಿಗೆ ಈ ತರಹದ ಆರಾಮವೆಂದರೆ ಯಾವಾಗಲೂ ಇಷ್ಟ. ಅವನು ಅದರ ಆನಂದವನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದ.

                
                 ನಮ್ಮ ಹಡಗಿನಲ್ಲಿ  ಇದ್ದವರ  ಪೈಕಿ ಹೆಚ್ಚಿನವರು ಬಿಳಿಜನರು. ಒಂದು ಭಾರತಿಯ ದಂಪತಿಗಳು ಮುಂಬೈನಿಂದ ಬಂದವರು ನಮಗೆ ಪರಿಚಯವಾದರು. ಆದರೆ  ಸ್ಮಾರಕಗಳ ಬಳಿ ಹಲವು ಭಾರತಿಯ ಗುಂಪುಗಳು ಕಾಣಸಿಗುತ್ತಿದ್ದವು. ಒಂದು ದೊಡ್ಡ ತಮಿಳರ ಗುಂಪು ನನ್ನನ್ನು ಆಕರ್ಷಿಸಿತು. ಅವರ ಗುಂಪಿನಲ್ಲಿ ಬೇರೆ ಬೇರೆ ಕಡೆ ನೆಲಸಿರುವ ಒಂದೇ ಕುಟುಂಬದ ಸದಸ್ಯರು  ಅಮೆರಿಕದಿಂದ, ಇಂಗ್ಲೆಂಡಿನಿಂದ, ಕುವೈತಿನಿಂದ -ಎಲ್ಲ ಬಂದು ಇಲ್ಲಿ ಒಟ್ಟಾಗಿ ಈಜಿಪ್ತನ್ನು ಪ್ರವಾಸ ಮಾಡುತ್ತಿದರು.

                      
                   ನಮ್ಮ ಹಡಗಿನ ಊಟೋಪಚಾರಗಳ ಬಗೆಗೆ ಬರೆಯದೇ ನಮ್ಮ ಪ್ರವಾಸ ಕಥನವೇ ಅಪೂರ್ಣವಾಗುತ್ತದೆ. ಅಷ್ಟು ಚೆನ್ನಾಗಿತ್ತು ಅವರ ಅಡಿಗೆ ಮತ್ತು ಅದನ್ನು ಅವರು  ಪ್ರಸ್ತುತ ಪಡಿಸುತ್ತಿದ್ದ ರೀತಿ! ನಾವು  ಹೋಗುವ ಮೊದಲೇ ಹೋಗಿಬಂದ ಸ್ನೇಹಿತರು ಈಜಿಪ್ಟಿನಲ್ಲಿ ಸಸ್ಯಹಾರಿಗಳಿಗೆ ಕಷ್ಟ ಎಂದಿದ್ದರು. ಆದ್ದರಿಂದ ಊಟದ ಬಗ್ಗೆ ಸ್ವಲ್ಪವೂ ಅಪೇಕ್ಷೆಯನ್ನು ನಾವು ಇಟ್ಟು ಕೊಂಡಿರಲಿಲ್ಲ. ಆದರೆ ಇಲ್ಲಿ ಎಲ್ಲ ಪ್ರವಾಸಿಗರ ಗುಂಪುಗಳಿಗೂ ಪ್ರತ್ಯೇಕ ಮೇಜನ್ನು ನಿಗದಿಗೊಳಿಸಿದ್ದರು. ನಾವು ಪ್ರತಿ ಬಾರಿ  ಹೋದಾಗಲೂ ಅಲ್ಲಿಯೇ ಕುಳಿತುಕೊಳ್ಳಬೇಕು. ನಾವು ಮಾತ್ರ ಸಸ್ಯಾಹಾರಕ್ಕೆ  ವಿಶೇಷ ಬೇಡಿಕೆ ಕೊಟ್ಟವರೆನಿಸುತ್ತದೆ. ಆದ್ದರಿಂದ ಊಟಕ್ಕೆ ನಮ್ಮ ಮೇಜಿನ ಮೇಲೆ ಎರಡು ಸಸ್ಯಾಹಾರಿ ಬಕ್ಷ್ಯಗಳು ದಿನವೂ ನಮ್ಮನ್ನು ಕಾಯುತ್ತಿತ್ತು! ಅಲ್ಲದೆ ಸಲಾಡ್, ಸಿಹಿತಿಂಡಿಗಳು ಆರಿಸಲು ಆಗದಷ್ಟು ಬಗೆ ದಿನವೂ ಇರುತ್ತಿತ್ತು. ಊಟದ ಸಮಯವಾದೊಡನೆ ಒಬ್ಬ ಬಂದು ಹಡಗಿನ ಪ್ರತಿ ಕೋಣೆಯ ಎದುರಿಗೂ ಗಂಟೆ ಬಾರಿಸಿ ಸೂಚಿಸಿ ಹೋಗುತ್ತಿದ್ದ. ಕೂಡಲೇ ಎಲ್ಲರೂ ಊಟದ ಕೊನೆಗೆ ಧಾಳಿ! ಸಂಜೆಯ ವೇಳೆ  ಹಡಗಿನ ಮೇಲು ಚಾವಣಿಯಲ್ಲಿ ಬಿಸಿ ಬಿಸಿ ಕಾಫಿ, ಟೀ ; ಒಟ್ಟಿಗೆ ತಾಜಾ  ಕೇಕು ಬೆಣ್ಣೆ ಬಿಸ್ಕತ್ತುಗಳು. ರಾತ್ರಿಯೂ ಬಗೆ ಬಗೆ  ಮ್ರಷ್ಟಾನ್ನ ಭೋಜನ. ನಾವೆಲ್ಲರೂ ಒಟ್ಟಿಗೆ ಬಂದು ಅಲ್ಲಿ ಕುಳಿತು ಆರಾಮವಾಗಿ ಮಾತನಾಡುತ್ತ ಊಟ ಮದುತ್ತಿದುದನ್ನು ಮನಸ್ಲ್ಕು ಇನ್ನೂ ನೆನಪಿಸುತ್ತಿರುತ್ತದೆ  ದಿನ ಕಳೆದದ್ದು ಗೊತ್ತಾಗಲೇ ಇಲ್ಲ. ಕಣ್ಣಿಗೂ, ಬಾಯಿಗೂ, ಹೊಟ್ಟೆಗೂ ಹಬ್ಬ.



ಅಬು ಸಿಂಬಲ್ :

               ಕ್ರುಸಿನ ಕೊನೆಯ ದಿನ ನಮ್ಮ ಕಾರ್ಯಕ್ರಮ 'ಅಬು ಸಿಂಬಲ್ 'ನ ಬೇಟಿ. ಅಲ್ಲಿಗೆ ಹೋಗಲು ಆಸ್ವಾನ್ ನಿಂದ   ದಕ್ಷಿಣಕ್ಕೆ ೨೫೦ ಕಿ.ಮೀ. ಪ್ರಯಾಣ ಮಾಡಬೇಕಿತ್ತು. ಆ ದಾರಿಯು ಸಂಪೂರ್ಣ ಮರುಭೂಮಿಯಾಗಿರುವುದರಿಂದಲೋ , ರಕ್ಷಣೆಯ ದ್ರಿಸ್ತಿಯಿಂದಲೋ ಅಲ್ಲಿಗೆ ಒಂದು ಗುಂಪು ವಾಹನಗಳು ರಕ್ಷಣೆಯ ಸಮೇತ ದಿನಕ್ಕೆರಡು ಬಾರಿ ಮಾತ್ರ ಹೋಗುತ್ತಿತ್ತು. ನಮಗೆ ಸಂಜೆ ಐದು ಗಂಟೆಗೆ ಕೈರೋಗೆ ರೈಲು  ಹಿಡಿಯ ಬೇಕಾಗಿದ್ದುದರಿಂದ ನಾವು ಬೆಳಿಗ್ಗೆ ಮೂರು  ಗಂಟೆಯ ತಂದದೊಂದೊಗೆ ಹೊರಡಬೇಕಾಯಿತು. 'ಅಷ್ಟು ಬೇಗವಲ್ಲ!' ಎಂಬ ಚಿಂತೆಯಿಂದ ಎದ್ದು ಹೊರತು ಬಂದು ನೋಡುತ್ತೇವೆ ಏನು ನೋಡುವುದು ........ಜನರ ಉತ್ಸಾಹ ಹಬ್ಬದ ವಾತಾವರಣವನ್ನೇ ನಿರ್ಮಿಸಿತ್ತು. ಹೊರಡುವವರಿಗೆಲ್ಲ ಒಂದೊಂದು ತಿಂಡಿಯ ಪೊಟ್ಟಣ ತಯಾರಾಗಿ ಕುಳಿತಿತ್ತು. ಆ ರಾತ್ರಿಯಲ್ಲಿ ಎಲ್ಲರಿಗೂ ಬಿಸಿ ಕಾಪಿಯ ವ್ಯವಸ್ತೆಯೂ ಆಗಿತ್ತು. ಪ್ರೀತಿಗಂತೂ  ಉತ್ಸಾಹಕ್ಕೆ ಎಲ್ಲೆಯೇ ಇರಲಿಲ್ಲ.ನಮ್ಮ ಪೀಟರ್ ನಮಗೆ ಮುಂದಿನ ಜಾಗ ಕೊಡಿಸಿಲಿಕ್ಕಾಗ ಅಗತ್ಯಕ್ಕಿಂತ ಬೇಗ ಕರೆದೊಯ್ದಿದ್ದನೆಂದು ಬಸ್ಸಿಗಾಗಿ ಕಾಡು ನಾವೇ ಮೊದಲು ಹತ್ತಿದಾಗ ನಮಗೆ ತಿಳಿಯಿತು. ಬಸ್ಸು ಪೂರ್ತಿ ತುಂಬಿಸಿಕೊಂಡು ಮರುಭೂಮಿಯ ಹಾದಿಯಲ್ಲಿ ಸಾಗತೊಡಗಿತು. ನಮ್ಮ ಬಸ್ಸಿನ ಹಿಂದೆ, ಮುಂದೆ ಬಸ್ಸುಗಳ ಸಾಲು ಕಾಣುತ್ತಿತ್ತು. ಅರ್ಧ ನಿದ್ದೆಯಿಂದ ಬಂದಿದ್ದ ಜನಗಳೆಲ್ಲ ನಿದ್ದೆ ಹೋದರು. ಮದ್ಯದಲ್ಲಿ ಸೂರ್ಯೋದಯದ ದ್ರಶ್ಯ ಕಾಣತೊಡಗಿತು.....ಜನಗಳೆಲ್ಲ ಎದ್ದು ಫೋಟೋ ತೆಗೆಯ   ತೊಡಗಿದರು.  ಮತ್ತೆ ಎಲ್ಲರೂ ನಿದ್ದೆ!!

            ಅಬುಸಿಂಬಲ್ ಈಜಿಪ್ಟಿನ  ದಕ್ಷಿಣದ ತುದಿ. ಇಲ್ಲಿಂದ ಇನ್ನೂ ದಕ್ಷಿಣಕ್ಕೆ  ಹೋದರೆ ಸುಡಾನ್ ಸಿಗುತ್ತದೆ. ಭೂಮದ್ಯ ರೇಖೆಗೆ ಸಮಿಪವಾಗುತ್ತಿದುದರಿಂದ  ಇಲ್ಲಿ ಸೂಯ ಪ್ರಖರವಾಗಿ ಸೆಖೆ ಇತ್ತು. ನಾಸ್ಸೇರ್ ಸರೋವರದ ದಡದಲ್ಲಿರುವ ಎರಡು  ದೇವಸ್ತಾನಗಳು ಮಾತ್ರ ಅಧ್ಬುತವಾಗಿದ್ದವು. ರಮ್ಸೆಸ್,  ಹೊರಸ್, ಕತ್ತಲ ದೇವರು ಮತ್ತು ಐಸಿಸ್ - ಮೂರ್ತಿಗಳು, ಅವುಗಳ ಗಾತ್ರದಿಂದ ಅವಿಸ್ಮರಣೀಯ ಅನುಭವವನ್ನು ಕೊಡುತ್ತದೆ. ಮೂರು ಸಾವಿರ ವರ್ಷಗಳ ಹಿಂದೆಯೇ ಯಾವ ಆಧುನಿಕ ಸೌಲಭ್ಯಗಳ ಸಹಾಯವಿಲ್ಲದೆಯೇ ಅವಗಳನ್ನು ಕತ್ತಿರುವುದು ಆ ಪುರಾತನ ನಾಗರಿಕತೆಯ ಪ್ರಭುದ್ದತೆಯನ್ನು ತೋರಿಸುತ್ತದೆ. ಅಸ್ವಾನಿನ  ಆಣೆಕಟ್ಟು  ಕಟ್ಟುವಾಗ ಮುಳುಗಡೆಯಾಗುವ ಪ್ರದೇಶದಲ್ಲಿದ್ದ ಈ ಸ್ಮಾರಕವನ್ನು ೧೯೬೫ ರ ಸುಮಾರಿಗೆ ಈಗಿರುವ ಜಾಗದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಸಹಾಯದಿಂದ ಪುನರ್ನಿರ್ಮಾಣ ಮಾಡಿದ್ದಾರೆ. ಈ ದೇವಾಲಯಗಳ ಒಳಗೆ ಈಜಿಪ್ಟಿನ ಜನರ ಲಿಪಿಯಾದ ಹಿರೋಗ್ಲಫಿಯನ್ನು ಗೋಡೆಗಳ ಮೇಲೆಲ್ಲಾ ಕಾಣಬಹುದು. ನಮ್ಮ ಗೈಡ ಪೀಟರ್ಗೆ ಪುನಃ ಬಸ್ಸಿನಲ್ಲಿ ಜಾಗ  ಹಿಡಿಯುವ ತವಕ!
ರಾಣಿ ನೆಫಾರ್ತರಿ ದೇವಾಲಯ 

ರಮ್ಸೆಸನ ದೇವಾಲಯ 
               
ನಮ್ಮ ಮದುವೆಯ ೧೪ನೆಯ ವಾರ್ಷಿಕೋತ್ಸವವನ್ನು ಈ ಅಬುಸಿಇನ್ಬಲಿನ ಸ್ಮಾರಕಗಳ  ಬಳಿಯಲ್ಲಿ ಕಳೆದಿದ್ದು ಈ ದಿನವನ್ನು ಸ್ಮರಣೀಯವಾಗಿಸಿತು.  

ಈಜಿಪ್ಟಿನ ರಾಜಧಾನಿ ಕೈರೋ  :


      ಡಿಸೆಂಬರ್ ೨೯ರ ಸಂಜೆ ನಾವು ಆಸ್ವಾನಿನಿಂದ ಪ್ರಥಮದರ್ಜೆಯ ರೈಲಿನಲ್ಲಿ ಕೈರೋಗೆ ಪ್ರಯಾಣ ಮಾಡುವುದೆಂದು ನಿಗದಿಯಾಗಿತ್ತು. ಅದರಂತೆ ನಮ್ಮ ಹಡಗಿಗೆ ಭಾರವಾದ  ಮನಸ್ಸಿನಿಂದ ವಿದಾಯ ಹೇಳಿ ರೈಲು ನಿಲ್ದಾಣದತ್ತ ಹೊರಟೆವು. ನಾಲ್ಕೇ  ದಿನಗಳಲ್ಲಿ ಹದಗಿನೊಂದಿಗೆ ಅಲ್ಲಿನ ಸಿಬ್ಬಂದಿಗಳೊಂದಿಗೆ ಒಂದು ರೀತಿಯ ಭಾವನಾತ್ಮಕ ಸಂಭಂದ ಬೆಳೆದಿತ್ತು. ನಮ್ಮ ಇಷ್ಟು ಜನರ ಸಾಮಾನುಗಳೂ ಕಡಿಮೆಯೇನಿರಲಿಲ್ಲ. ಎಲ್ಲವನ್ನೂ ಸಾಗಿಸಿ ನಮ್ಮ ರೈಲು ಬರುವ ಜಾಗಕ್ಕೆ ಹೋಗುವಶ್ಟರಲ್ಲಿ  ಬೆವರು ಸುರಿಯುತ್ತಿತ್ತು.

          ನಮ್ಮ ಸಾಮಾನುಗಳಿಗೂ, ನಮಗೂ ಜಾಗ ಮಾಡಿ ಕುಳಿತೆವು. ಇದು ನಮ್ಮ ಭಾರತೀಯ ರೈಲಿನಂತಿರಲಿಲ್ಲ;  ಬಹಳ ಶಬ್ದ, ಕುಳುಕಾತಗಳೊಂದಿಗೆ  ಬೆಳಗ್ಗಿನ ತನಕ ಅದರಲ್ಲಿ ಕುಳಿತೆವು. ಶೌಚಾಲಯದಲ್ಲಿ ನೀರು ಇರಲಿಲ್ಲ, ಸ್ವಚ್ಚತೆಯೆಂಬ ಶಬ್ದವೇ ಇಲ್ಲಿನ ಜನರಿಗೆ ಗೊತ್ತಿಲ್ಲವೇನೂ ಎಂಬಷ್ಟು ಗಲೀಜು ಮಾಡಿದ್ದರು. ಅಂತೂ ಎರಡು ಗಂಟೆ ತಡವಾಗಿ ನಾವು ಕೈರೋ ತಲುಪಿದೆವು. ಕೈರೋ ಹತ್ತಿರುವಾಗುತ್ತಿದಂತೆ ನಮಗೆ  ಬಡತನದ, ಅಸೌಚ್ಯದ ಅರಿವು ಆಗಿತ್ತು. ನಾವು ಹಡಗಿನಲ್ಲಿ ತಿರುಗುವಾಗ  ಸ್ಮಾರಕಗಳ ವೀಕ್ಷಣೆಗೆ ಮಾತ್ರ ಹೊರಗೆ ಹೋಗುತ್ತಿದೆವು. ಆದ್ದರಿಂದ ಇಲ್ಲಿನ ಜನರ ಜೀವನ ಮಟ್ಟದ ಅರಿವು ಆಗಿರಲಿಲ್ಲ. ಮತ್ತ್ತು ದಕ್ಷಿಣ ಈಜಿಪ್ಟಿನ ಊರುಗಳು ಹಳೆಯದಾದರೂ ಸ್ವಚ್ಚವಾಗಿತ್ತಿದ್ದರು. ಊರುಗಳಲ್ಲಿ ಹಳೆಯ ವಾಹನಗಳನ್ನು ನೋಡಿ, ಎಂಬತ್ತರ ದಶಕದ ಭಾರತದಂತಿದೆ ಎಂದು ಮಾತನಾಡಿದ್ದೆವು. ಆದರೆ ಕೈರೋ ನೋಡಿದರೆ ಇವರು ಸ್ವತಂತ್ರ ಪೂರ್ವ ಭಾರತದ ಸ್ಥಿತಿಯಲ್ಲೂ ಇಲ್ಲ ಎನಿಸಿತು. ರಾಜಧಾನಿಯಾದ ನಗರದ ಒಂದು ಕಟ್ಟಡಕ್ಕೂ ಸುಣ್ಣ ಬಣ್ಣವಿಲ್ಲ, ಸಿಮೆಂಟಿನ ಗಾರೆಯೂ ಇಲ್ಲ. ಇಡಿ ಊರೇ   ಹಾಳು ಸುರಿಯುತ್ತಿತ್ತು.

          ನಮಗೆ ನಿಗದಿಗೊಳಿಸಿದ  ಕ್ಯಟರಾಕ್ಟ್  ಹೋಟೆಲಿನಲ್ಲಿ ಸಾಮಾನುಗಳನ್ನು ಇಟ್ಟು, ನಿತ್ಯಕರ್ಮಗಳನ್ನು  ಮುಗಿಸಿ, ಕೈರೋದಲ್ಲಿ ನಮಗೆ  ನಿಗದಿಯಾಗಿದ್ದ ಗೈಡ್ ಅಶ್ರಫನೊಂದಿಗೆ ನಾವು ಖಾತರದಿಂದ ಕಾದಿದ್ದ ಪಿರಮಿಡ್ಡುಗಳನ್ನು ನೋಡಲು ಹೋದೆವು. ನಾವು ಬೆಳಗ್ಗಿನಿಂದ ಏನೂ ತಿಂದಿರಲಿಲ್ಲ. ಭಾರತಿಯ ಊಟಕ್ಕೆ ಕರೆದೊಯ್ಯಲು ಅಶ್ರಫ್ನಿಗೆ ಹೇಳಿದೆವು.ತಾಜಮಹಲ್ ಗೆ ಕರೆದೊಯ್ದ ಭಾರತಿಯ ಮೂಲದ ಈಜಿಪ್ತಿನವರು ನಡೆಸುತ್ತಿದ್ದ ಈ ಖಾನಾವಳಿಯಲ್ಲಿ ಸ್ವಲ್ಪ ದುಬಾರಿಯೇನಿಸಿದರೂ ನಮಗೆ  ಭಾರತಿಯ ಊಟ, ಅದೂ ಸಸ್ಯಾಹಾರ ಸಿಕ್ಕಿತು. ಶ್ರೇಯಾ ನಿದ್ದೆ ಮಾಡಿದ್ದಳು. ಅವಳಿಗೆ ಊಟ ಕಟ್ಟಿಸಿ, ನಾವೆಲ್ಲಾ ತಿಂದು, ಪಿರಮಿಡ್ಡು ನೋಡಲು ತೆರಳಿದೆವು. ದಾರಿಯಲ್ಲಿ ಕಟ್ಟಡಗಳ ಸಂದಿಯಲ್ಲಿ ಪಿರಮಿಡ್ಡು ಕಂಡಾಗಲೆಲ್ಲ ರೋಮಾಂಚನ. ಚಿಕ್ಕಂದಿನಿಂದ ಚಿತ್ರಗಳಲ್ಲಿ ನೋಡಿದ,  ಅದರ ಬಗೆಗೆ ಕೇಳಿದ,  ಪಿರಮಿಡ್ಡುಗಳನ್ನು ಕಣ್ಣಾರೆ ನೋಡಲು ಹೂಗುತ್ತಿದೇವೆ; ಆದೂ ಅಕ್ಕ ತಂಗಿಯರ ಪರಿವಾರ ಒಟ್ಟಾಗಿ, ಅಮ್ಮನೊಂದಿಗೆ!!

                  ಪಿರಮಿಡ್ಡುಗಳ ಸಮೂಹದ ದ್ವಾರಕ್ಕೆ ನಮ್ಮ ವಾಹನ ನಿಂತುಕೊಂಡಿತು. ಆದರೆ ನಾವು ಎಣಿಸಿದಂತೆ ಪಿರಮಿಡ್ಡುಗಳು  ಮರುಭೂಮಿಯ ಪಕ್ಕದಲ್ಲಿ ಇರದೇ ಈ ಸ್ಮಾರಕದ ಪಕ್ಕದ ತನಕವೂ ಊರನ್ನು ಎದ್ವಾ ತದ್ವಾ ಕಟ್ಟಿದ್ದಾರೆ. ಟಿಕೇಟು ಪಡೆದು   ಪಿರಮಿಡ್ಡುಗಳ ಎದುರಿಗೆ ಬಂದೆವು. ಮೂರು ಪಿರಮಿಡ್ಡುಗಳ ಈ ಸಮುಚ್ಚಯ ಮಾನವ ನಿರ್ಮಿತ ಅತ್ಯಂತ ಹಳೆಯ ಸ್ಮಾರಕ.ಅಷ್ಟು ವರ್ಷಗಳಿಂದ ಮಾನವ ಇತಿಹಾಸದ ಎಲ್ಲ ಆಗು ಹೋಗುಗಳಿಗೂ ಸಾಕ್ಷಿಯಾಗಿ ಹಾಗೆಯೇ ನಿಂತಿವೆ. ಪ್ರಾಚೀನ ಈಜಿಪ್ಟಿನ ಪರೋಹಗಳಾದ ಕಫ್ರೆ , ಮನ್ಕಾಉರೆ ಮತ್ತು ಕುಫು -ಇವರ ಪಿರಮಿಡ್ಡುಳು ಇಲ್ಲಿವೆ .
                
               ಪಿರಮಿಡ್ಡುಗಳೆಂದರೆ ಈಜಿಪ್ಟಿನ ಜನರ ಸಮಾಧಿ.ಪ್ರಾಚೀನ ಈಜಿಪ್ಟಿನ ಜನರ ನಂಬಿಕೆಯಂತೆ ಒಬ್ಬ ಮನುಷ್ಯನಿಗೆ  ಸಾವಿನ ನಂತರ ಹೊಸ ಜೀವನ ಸಿಗುತ್ತದೆ; ಆ ಮುಂದಿನ ಜೀವನಕ್ಕೆ ಈ ದೇಹದ ಅಗತ್ಯವಿದೆ; ಆದ್ದರಿಂದ ಈ ದೇಹವನ್ನು ರಕ್ಷಿಸಬೇಕು.  ಪಿರಮಿಡ್ಡುಗಳ  ಒಳಗೆ ಹಲುವು ಕೋಣೆಗಳನ್ನು  ನಿರ್ಮಿಸಿ ಅದರಲ್ಲೆಲ್ಲ ಇನ್ನೊಂದು  ಜೀವನಕ್ಕೆ ಅಗತ್ಯವಾದ ಸಾಮಾನುಗಳನ್ನೆಲ್ಲ ಜೋಡಿಸಿ ಇಟ್ಟಿದ್ದರಂತೆ. ಅವರ ವಿಜ್ಞಾನ ಎಷ್ಟು ಮುಂದುವರಿದಿತ್ತೆಂದರೆ ಇನ್ನೂ ಆತಿ ದೊಡ್ಡ ಪಿರಮಿಡ್ಡಿನ  ಒಂದು ಬಾಗವನ್ನು ಮಾತ್ರ ಅದ್ಯಯನ ಮಾಡಲು ಸಾದ್ಯವಾಗಿದೆಯಂತೆ.

                   ಅತಿಚಿಕ್ಕ ಪಿರಮಿಡ್ಡು  ಮ್ಯನ್ಕುರೆಯದ್ದು. ನಾವು ಮತ್ತೊಂದು ಟಿಕೇಟು ಖರೀದಿಸಿ ಅದರೊಳಗೆ ತೆವಳಿಕೊಂಡು ಹೋಗಿಬಂದೆವು. ಅಮ್ಮ. ಮಧುರ ಮತ್ತು ಶ್ರೇಯಾ ಹೊರಗಡೆಯೇ ಉಳಿದರು. ಒಳಗಡೆ ಕಾಲಿ ಕೋಣೆಗಳನ್ನು ನೋಡಿ ಬಂದೆವು.  ಹೆಚ್ಚಿನ ಪಿರಮಿಡ್ಡುಗಳ ಒಳಗಿದ್ದ ಸೊತ್ತನ್ನೆಲ್ಲ ಜನರು ಲೂಟಿ ಮಾಡಿಯೇ ಖಾಲಿ ಮಾಡಿದ್ದರಂತೆ. ಸಿಕ್ಕಿದವುಗಳನ್ನು ಕೈರೋ ವಸ್ತು ಸಂಗ್ರಹಾಲಯದಲ್ಲಿ ಇಟ್ಟಿದ್ದಾರೆ.

                        ಜಗತ್ವಿಖ್ಯಾತ ಸ್ಪಿಂಕ್ಸ್ ಕೂಡ ಇದೇ ಸಮುಚ್ಚ್ಲ್ಲಯದಲ್ಲಿದೆ. ಐದು ಗಂಟೆಗೆ ಈ ಸ್ಮಾರಕಗಳ ಒಳ ಪ್ರವೇಶ ನಿಲ್ಲಿಸುವುದರಿಂದ  ಬಹಳ ಜನಸಂದಣಿ ಇತ್ತು. ಪ್ರಪಂಚದ ಹಲುವು ಮೂಲೆಗಳಿಂದ ಬಂದ ಜನ ಎಲ್ಲಿ ತಮಗೆ ತಪ್ಪಿ ಹೋಗುವುದೋ ಎಂದು ನುಗ್ಗುತ್ತಿದ್ದರು. ನಾವೂ ನುಗ್ಗಿದೆವು, ನೋಡಿದೆವು. ಒಬ್ಬ ಪರೋಹನ ಮುಖ, ಸಿಂಹದ ದೇಹದ ಸ್ಪಿಂಕ್ಸ್ ಇದಾವುದನ್ನೂ ಲೆಕ್ಕಿಸದೆ, ೫೦೦೦ ವರ್ಷಗಳಿಂದ ಹಾಗೆಯೇ ನಿಂತಿದ್ದ! ಸ್ಮಾರಕಗಳ ಬಳಿಯಲ್ಲೆಲ್ಲ ಮಾರಾಟ ಮಾಡುವವರ ಬರಾಟೆ, ಚರ್ಚೆ , ಖರೀದಿ -ಎಲ್ಲವೂ ನಡೆದಿತ್ತು. ನಾನೂ  ಕೆಲವು  ವಸ್ತುಗಳ ಖರೀದಿ ಮಾಡಿದೆ. ಅಲ್ಲಿನ ರಕ್ಷಣಾ ಸಿಬಂದಿಗಳು ಸಮಯವಾದೊದನೆ ಜನರನ್ನು ಸ್ಮಾರಕದಿಂದ ದೂರ ಓಡಿಸುವ ಕೆಲಸದಲ್ಲಿ ನಿರತರಾದರು. ನಾನು ಒಬ್ಬನೊಡನೆ ಸ್ವಲ್ಪ ವಾದವನ್ನೂ ಮಾಡಿದೆ, ಪ್ರಪಂಚಡಾದ್ಯಂತದಿಂದ ನಿಮ್ಮ ಸ್ಮಾರಕಗಳನ್ನು ನೋಡಲು ಬರುವ ಜನರಿಗೆ ಅದನ್ನು ಕಣ್ತುಂಬ ನೋಡಲೂ ಬಿಡದೆ ಓಡಿಸುತ್ತಿರುವಿರಲ್ಲ ಎಂದು. ಸಂಜೆ ೭.೩೦ಗೆ ಪಿರಮಿಡ್ಡು ಮತ್ತು ಸ್ಪಿಂಕ್ಸ್ನ ಇದಿರು ದ್ವನಿ ಮತ್ತು ಬೆಳಕಿನ ಪ್ರದರ್ಶನವಿತ್ತು. ಚಳಿಯಲ್ಲಿ ಕುಳಿತು ನೋಡಿದೆವು. ಆದರೆ ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಅದು ಇರಲಿಲ್ಲ.

                                   ಕೈರೋದ ಪ್ರಾಚ್ಯ ವಸ್ತು ಸಂಗ್ರಹಾಲಯ  ನೋಡಿದ್ದು ಒಂದು ಒಳ್ಳೆಯ ಅನುಭವ. ಇಲ್ಲಿ ತುತನ ಕಾಮನ್  ಸಮಾಧಿಯಲ್ಲಿ  ದೊರೆತ ಎಲ್ಲ ವಸ್ತುಗಳನ್ನು ಇಡಲಾಗಿದೆ.ಆ ಚಿನ್ನದ ವಸ್ತುಗಳ ಕರಕುಶಲತೆ ಅವರ ಪ್ರಾಚೀನ ಜನರ ನಾಗರಿಕತೆಯ ಪ್ರೌಡಿಮೆಯನ್ನು ತೋರುತ್ತದೆ. ಈ ಸಂಗ್ರಹಾಲಯದ ಮಮ್ಮಿಗಳ ಕೋಣೆ ಅತ್ಯಾಕರ್ಷಕವಾದ ಜಾಗ. ಆದ್ದರಿಂದ ಅದರೊಳಗೆ ಹೋಗಬೇಕಾದರೆ ಇನ್ನೊದು ಟಿಕೇಟು ಪಡೆಯಬೇಕು.ನಾವು ಪರವಾಗಿಲ್ಲವೆಂದು ಅದನ್ನು ಖರಿದಿಸಿ ಒಳಗೆ ಹೋದೆವು. ಸಾಲಾಗಿ ಮಲಗಿಸಿದ ಮಮ್ಮಿಗಳನ್ನು ನೋಡಿ ವಿಚಿತ್ರ ಭಾವನೆಯುಂಟಾಯಿತು. ಮಮ್ಮಿ ಎಂದರೆ ರಕ್ಷಿಸಿ ಇತ್ತ ಮೃತ ಶರೀರ. ರಾಜ ರಮ್ಸೆಸ್, ಕುಫು , ಮನ್ಕುರೆ.......ಇತ್ಯಾದಿಗಳ ಮಮ್ಮಿಗಳಿದ್ದವು. ಕೆಲವು ಸಾಕು ಪ್ರಾಣಿಗಳ ಮಮ್ಮಿಗಳೂ ನೋಡಸಿಕ್ಕಿದವು. ಸಾವಿನಾಚೆಗಿನ ಜೀವನದ  ಬಗೆಗಿನ ಮಾನವನ ಪ್ರಶ್ನೆಗಳು ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಮುಂದುವರಿದ ವಿಜ್ಞಾನವೂ  ಈ ನಿಟ್ಟಿನಲ್ಲಿ ಏನೂ ಸಹಕಾರಿಯಾಗಲಿಲ್ಲ.

ಅಲೆಕ್ಸಾಂಡ್ರಿಯಾ :

           ಈಜಿಪ್ಟಿನ  ಉತ್ತರದ ತುದಿಯ ನಗರ. ಅಲೆಕ್ಸಾಂಡರ್, ಗ್ರೀಕ್ ದೊರೆ ಕ್ರಿ. ಪೂ. ೩೫೦ ರಲ್ಲಿ ಈಜಿಪ್ಟಿನ ಮೇಲೆ ಯುಧ್ದ ಮಾಡಿ ವಶಪಡಿಸಿಕೊಂಡಾಗ ಕಟ್ಟಿದ ನಗರ. ಅಂದಿನಿಂದ ಈಜಿಪ್ಟಿನ ಪ್ರಮುಖ ನಗರವಾಗಿರುವ  ಇದು ನಮ್ಮ ಪ್ರವಾಸದ ಕೊನೆಯ ತಾಣ. ಕೈರೋದಿಂದ ೨೫೦  ಕಿ. ಮೀ. ದೂರದಲ್ಲಿರುವ ಈ ನಗರವನ್ನು ಮೂರು ಗಂಟೆಗಳ ಪ್ರಯಾಣದಲ್ಲಿ ಸೇರಿದೆವು.

        ಅಶ್ರಫ್ ನಮ್ಮೊಂದಿಗೆ ಬಂದಿದ್ದ. ದಾರಿಯಲ್ಲಿ ಈಜಿಪ್ಟಿನ ರಾಜಕೀಯದ ಬಗೆಗೆ ಅವನ ಅಭಿಪ್ರಾಯಗಳನ್ನು, ಅಸಮಾಧಾನಗಳನ್ನು ಹೇಳುತ್ತಾ ಬಂದ. ಇವನು ಪಿಟರನಿಗಿಂತ ಒಳ್ಳೆಯ ಗಯ್ದ್ .ನಾವು ಹಾಡುತ್ತ, ಶ್ರೆಯಾಳನ್ನು  ಮನರಂಜಿಸುತ್ತ  ದಾರಿ ಕಳೆದೆವು.
                
               ಮೆಡಿತರೆನಿಯನ್ ಸಮುದ್ರ ತೀರದಲ್ಲಿರುವ ಈ ನಗರ ಸುಂದರವಾಗಿದೆ. ಅವತ್ತು ಅಲ್ಲಿ ಮೋಡವಾಗಿ ಸಣ್ಣ ಮಳೆ ಹನಿ ಬಿಳುತ್ತಿದುದು ನಮ್ಮ ತಿರುಗಾಟಕ್ಕೆ ಅನುಕೂಲವಾಯಿತು., ಇಲ್ಲಿ ಕಾಪ್ಟಿಕ್ ಕ್ರಿಸ್ತರ ಹಳೆಯ ಚರ್ಚನ್ನು, ಯಹೂದಿಗಳ ಸಿನೆಗಾಗ್ನ್ನೂ ನೋಡಿದೆವು. ಎಲ್ಲ ಕಡೆಯೂ ಅಶ್ರಾಫ್ ಹಣ ಕೊಡುತ ನಮ್ಮನ್ನು ಕರೆದೊಯ್ಯುತ್ತಿದ್ದ. ಎಲ್ಲ ಕಡೆ ಬಹಳ ಭದ್ರತಾ ಸಿಬಂದಿಗಲಿದ್ದುದು ಕಾಣುತ್ತಿತ್ತು. ಕಡೆಗೆ ನಮಗೆ ಅಶ್ರಾಫ್  ಹೇಳಿದ ಅಲ್ಲಿ ಹಿಂದಿನ ರಾತ್ರಿ ಹೊಸವರ್ಷದ ಆಚರಣೆಯಲ್ಲಿದ್ದ ಕ್ರಿಸ್ತ  ಚರ್ಚಿನಲ್ಲಿ ಬಾಂಬುಸ್ಪೋಟಗೊಂಡು ಹಲವು ಸಾವು  ನೋವುಗಳಾಗಿತ್ತಂತೆ
                    
                     ಹೀಗೆ ನಮ್ಮ ಈಜಿಪ್ಟ್ ಪ್ರವಾಸ ಕೊನೆಯ ಹಂತ ತಲುಪಿತು. ರಾತ್ರಿ ರಾಡಿಸನ್ ಬ್ಲೂ ಹೋಟೆಲಿನಲ್ಲಿ ತಂಗಿ ಬೆಳಿಗ್ಗೆ ಮರಳಿ ಹೋಗಲು ವಿಮಾನ ನಿಲ್ದಾಣಕ್ಕೆ ಹೋದೆವು. ಇಲ್ಲಿ ಸಾಮಾನು ತೆಗೆದುಕೊಂದು ಹೋಗಲು ಇಟ್ಟಿದ್ದ ಕೈಗಾಡಿಗಳು  ತುಕ್ಕು ಹಿಡಿದು ಮುರಿದು ಹೋಗಿದ್ದವು. ಇವನ್ನೆಲ್ಲ ನೆನಸಿಕೊಂಡರೆ ಅಲ್ಲಿ ಇಷ್ಟು ವರ್ಷ ಕ್ರಾಂತಿ ಮಾಡದೆ ಅನ್ಯಾಯಗಳನ್ನು ಜನರು ಸಹಿಸಿದ್ದೆ ಆಶ್ಚರ್ಯವೆನಿಸುತ್ತದೆ. ಅಲ್ಲಿ ವಿಮಾನವೇರಿ ಮೂರೂ ಗಂಟೆಗಳ ಪ್ರಯಾಣದ ನಂತರ ಶಾರ್ಜಾದಲ್ಲಿ  ಇಳಿಯಿತು. ಇಲ್ಲಿಗೆ ಅಮ್ಮ, ಮಧುರ, ಪ್ರಸನ್ನ ಮತ್ತು ಶ್ರೇಯಾಗೆ ನಾವು ವಿದಾಯ ಹೇಳಬೇಕಿತ್ತು. ಅಮ್ಮ ತುಂಬಾ ಭಾವುಕಳಾಗಿದ್ದಳು. ನನಗೆ ಬೇಸರವೆನಿಸಿದರೂ ಇಷ್ಟು ದಿನ ಒಟ್ಟಿಗೆ ತಿರುಗಾಡಿದ ಸಂತೋಷ ಮನದಲ್ಲಿ ಹಸಿರಾಗಿತ್ತು. ಭಾರವಾದ ಮನಸ್ಸಿನಿಂದ ಎಲ್ಲರನ್ನೂ ಬಿಳ್ಕೊಟ್ಟು  ನಮ್ಮ ದಾರಿ  ಹಿಡಿದೆವು. ಒಂದು   ಕ್ರಾಂತಿಯ  ಮುನ್ನ  ನಾವು  ಮಾಡಿಬಂದ ಈ  ಪ್ರವಾಸವು ಬಹುಕಾಲ  ನಮ್ಮ  ನೆನಪಿನಲ್ಲಿರುವುದು ಮಾತ್ರ ಖಂಡಿತ.

2 ಕಾಮೆಂಟ್‌ಗಳು: