ಮಂಗಳವಾರ, ಸೆಪ್ಟೆಂಬರ್ 4, 2012

ಗಲ್ಫ್ ದೇಶಗಳಲ್ಲಿ ಕನ್ನಡ ಚಟುವಟಿಕೆಗಳು ಮತ್ತು ನಾನು

       ಕನ್ನಡ ಭಾಷೆ ನಮ್ಮ ಜೀವನದ ಅಂಗ, ನಮ್ಮ identity ಎಂಬ ಅರಿವಾಗಿದ್ದು ನಮ್ಮ ದೇಶವನ್ನು ಬಿಟ್ಟಾಗಲೇ. ನಮ್ಮ ಜನರೊಂದಿಗೆ ಬೆರೆಯಬೇಕು, ನಮ್ಮ ಮಕ್ಕಳಿಗೆ ನಮ್ಮ ಭಾಷೆಯನ್ನೂ ಸರಿಯಾಗಿ ಕಲಿಸಬೇಕು ಎಂಬ ತುಡಿತ ನಾವು ನಮ್ಮ ನೆಲದಿಂದ ದೂರವಾದಾಗ ಜಾಸ್ತಿಯಾಗುತ್ತದೆ ಎನಿಸುತ್ತದೆ.ಎಲ್ಲರಿಗೂ ಈ ಭಾವನೆಗಳು ಬರಲೇಬೇಕೆಂದಿಲ್ಲ! ಆದರೆ ಹೊರಬಂದಾಗ ಇಂತಹ ಜನರು ಒಟ್ಟಾಗುತ್ತಾರೆ . ಅವರ ಪ್ರಯತ್ನಗಳ ಪಲವೇ ಹಲವು ಕನ್ನಡ ಸಂಗಟ ನೆಗಳು ವಿಶ್ವದೆಲ್ಲೆಡೆ ತಲೆ ಎತ್ತಲು ಕಾರಣ.

           ನಾನು ಕರ್ನಾಟಕವನ್ನು ಬಿಟ್ಟು ಹೊರಗಿದ್ದು ಈಗ ಹದಿನೈದು ವರ್ಷಗಳೇ ಕಳೆದಿವೆ. ಈ ಹದಿನೈದು ವರ್ಷಗಳಲ್ಲಿ ೮ ವರ್ಷಗಳನ್ನು ಹೊರನಾಡ ಕನ್ನಡಿಗಳಾಗಿ  ಕಳೆದಿದ್ದೇನೆ  ಮತ್ತು ಉಳಿದ ವರ್ಷಗಳನ್ನು ಹೊರದೇಶದ  ಕನ್ನಡಿಗಳಾಗಿ ಕಳೆದಿದ್ದ್ದೇನೆ. ಆದರೆ ಅಷ್ಟೂ ವರ್ಷ ಕನ್ನಡದೊಂದಿಗಿನ ನನ್ನ ನಂಟು ಗಾಢವಾಗುತ್ತ  ಬಂದಿದೆ, ನನ್ನ ಭಾಷೆಯ ಬಗೆಗಿನ ನನ್ನ ಅಭಿಮಾನವನ್ನು ಹೆಚ್ಚಿಸಿವೆ.

        ನನ್ನ ದಾಂಪತ್ಯ ಜೀವನದ ಮೊದಲ ವರ್ಷಗಳನ್ನು ಕಳೆದ ಪುಣೆ ನನಗೆ ಮೊದಲಿಗೆ ಕನ್ನಡ ಸಂಘದ ಪರಿಚಯ ಮಾಡಿಸಿತು. ಅಲ್ಲಿನ ಕನ್ನಡ ಸಂಘದ ಸಕ್ರಿಯ ಸದಸ್ಯೆಯಾಗಿದ್ದ ನಾನು ಅಲ್ಲಿನ ಕನ್ನಡ ಗ್ರಂಥಾಲಯ ಸಂಪೂರ್ಣ ಲಾಭವನ್ನು ಪಡೆದವರಲ್ಲಿ ಒಬ್ಬಳಾಗಿದ್ದೆ. ಭೈರಪ್ಪನವರ ತಂತು, ಮಂದ್ರ ಮುಂತಾದ ಕೃತಿಗಳನ್ನು ಓದುವ ಅವಕಾಶ, ಹೊರರಾಜ್ಯದಲ್ಲಿದ್ದೂ ಕನ್ನಡದ ಪತ್ರಿಕೆಗಳನ್ನು ಓದುವ ಭಾಗ್ಯ ನನ್ನದಾಗಿತ್ತು. ಕನ್ನಡ ಮಹಿಳೆಯರ ಭಜನಾ ತಂಡವೂ ಇತ್ತು, ನಾವೆಲ್ಲಾ ಕೂಡಿ ಗಣಪತಿ ಹಬ್ಬದಲ್ಲಿ ಕನ್ನಡ ದಾಸರ  ಪದಗಳನ್ನು ಹಾಡುತ್ತಲೂ ಇದ್ದೆವು. ಇವೆಲ್ಲವನ್ನೂ ಬಿಟ್ಟು ವಿದೇಶಗಳನ್ನು ನೋಡೋಣವೆಂದು ಸೌದಿ ಅರೇಬಿಯಾಕ್ಕೆ ಬಂದೆವು.

ಸೌದಿಯಲ್ಲಿ ಕನ್ನಡ  ಶಿಕ್ಷಕಿಯಾಗಿ:

ಐದು ವರ್ಷದ ಮಗಳನ್ನು ಶಾಲೆಗೇ ಸೇರಿಸಲು ನಾವಿದ್ದ ಯಾನ್ಬು ಎಂಬ ಹಳ್ಳಿಯಲ್ಲಿದ್ದ ಏಕಮಾತ್ರ ಭಾರತಿಯ ಶಾಲೆಗೇ ಹೋದಾಗ ಅಲ್ಲಿ ಶಿಕ್ಷಕಿಯರ ಅಗತ್ಯವಿದೆ ಎಂಬ ವಿಚಾರ ತಿಳಿಯಿತು. ನಾನೊಂದು ಅರ್ಜಿ ಗುಜರಾಯಿಸಿದೆ, ಇರಲಿ ನೋಡೋಣ ಎಂದು. ನನ್ನ ಅಚ್ಚರಿಗೆ ಒಂದು ತಿಂಗಳಲ್ಲಿ ನನಗೆ ಸಂದರ್ಶನಕ್ಕೆ ಕರೆ ಬಂತು, ಕೆಲಸವೂ ಸಿಕ್ಕಿತು. ಚಿಕ್ಕ ಮಕ್ಕಳ ಶಿಕ್ಷಕಿಯಾಗಿ ನನ್ನ ನೋಂದಾವಣೆಯಾಯಿತು . ಅಲ್ಲದೆ ಅಲ್ಲಿದ್ದ ಕನ್ನಡ ಮಕ್ಕಳಿಗೆ ಐಚ್ಚಿಕ ವಿಷಯವಾಗಿ ಕನ್ನಡ ಕಲಿಸುವ ಜವಾಬ್ದಾರಿಯೂ ನನಗೆ ಒದಗಿತು. ಇದು ಅಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ ಅವಧಿಯ  ಅತ್ಯಂತ ಆನಂದದಾಯಕ ಭಾಗವಾಗಿತ್ತು. ನನ್ನ ಮಗಳ ಕನ್ನಡ ಕಲಿಕೆಯ ಬದ್ರ ಬುನಾದಿ ಇಲ್ಲಿ ಆಯಿತು.
                 ಮಕ್ಕಳಿಗೆ  ''ಅ ಆ'' ದೊಂದಿಗೆ ಕೆಲವು ಕನ್ನಡ ಕವಿತೆಗಳನ್ನು ಹೇಳಿಕೊಟ್ಟು ಅನಂದಿಸಿದ್ದಲ್ಲದೆ, ಇಲ್ಲಿನ ಶಾಲೆಯ ವಾರ್ಷಿಕೋತ್ಸವದಲ್ಲಿ ನಮ್ಮ ಕನ್ನಡ ಮಕ್ಕಳಿಂದ ನಿಸ್ಸಾರ್ ಅಹ್ಮದ್ ಅವರ ನಿತ್ಯೋತ್ಸವ ವನ್ನು ಹಾಡಿಸಿ, ಕನ್ನಡದ ಒಂದು ಜಾನಪದ  ಹಾಡಿಗೆ ನ್ರತ್ಯ ಮಾಡಿಸಿದೆ. ನನ್ನೊಳಗಿನ ಶಿಕ್ಷಕಿಯನ್ನು ಕಂಡು ಕೊಳ್ಳಲು ಈ ಅವಕಾಶ ನನಗೆ ಸಹಾಯ ಮಾಡಿತು.
         
                 ಅಷ್ಟರಲ್ಲಿ ನನ್ನ ಪತಿಗೆ ಈ ಮರಳುಗಾಡಿನ ಇನ್ನೊಂದು ದೇಶವಾದ ಒಮಾನಿನ ರಾಜಧಾನಿ ಮಸ್ಕತ್ತಿನಲ್ಲಿ ಹೊಸ ಕೆಲಸದ ಅವಕಾಶ ದೊರೆಯಿತು. ಮೊದಲು ಸಿಕ್ಕಿದ ಅವಕಾಶದಲ್ಲಿ ಈ ಕಟ್ಟುನಿಟ್ಟಿನ ಸೌದಿ ಅರಬಿಯಾವನ್ನು ಬಿಡೋಣ, ಮಗಳನ್ನು ಸ್ವಲ್ಪ ಒಳ್ಳೆಯ ವಾತಾವರಣದಲ್ಲಿ ಬೆಳೆಸೋಣ ಎಂದುಕೊಂಡು ನಮ್ಮ 15 ತಿಂಗಳ ಸೌದಿ ವಾಸವನ್ನು ಅಂತ್ಯಗೊಳಿಸಿ, ಗಂಟು ಮೂಟೆ ಕಟ್ಟಿಕೊಂಡು ಹೊಸ ನಾಡಿಗೆ ಹೊರೆಟೆವು.

ಮಸ್ಕತ್  ಕನ್ನಡ ಸಂಘ ಮತ್ತು ನಾನು:

ಸಂಪೂರ್ಣ ತಂಡ 
 ಹೊಸ ದೇಶ,ಹೊಸ ಊರು; ಯಾರ ಪರಿಚಯವೂ ಇಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ಕಾಡುವ ಏಕಾಕಿತನವನ್ನು ಕೊನೆಗಾಣಿಸಲು ನಾವು ನಮ್ಮ ಸಂಘ ಸಂಸ್ಥೆಗ ಳತ್ತ ತಿರುಗುತ್ತೇವೆ. ಅಂತೆಯೇ ನಾವು ಮಸ್ಕತ್ತಿನಲ್ಲಿ ಬಲವಾಗಿ ನೆವೂರಿರುವ ಬಾರಿತೀಯ ಸಮುದಾಯದ ಭಾರತೀಯ ಸಂಘ ಮಸ್ಕತ್ತಿನ, ಇಲ್ಲಿನ ಕನ್ನಡ ಸಂಘದ ಸದಸ್ಯತ್ವವನ್ನು ತೆಗೆದುಕೊಂಡೆವು. ಭಾರತಿಯ ಸಂಘದ ಚಟುವಟಿಕೆಗಳು ನಮ್ಮನ್ನು ನಿರಾಸೆಗೊಳಿಸಿದರೂ, ಕನ್ನಡ ಸಂಘ ನಮಗೆ ಚಟುವಟಿಕೆಗಳ ಬಾಗಿಲನ್ನೇ ತೆರೆಯಿತು. ಇಲ್ಲಿನ ಸಂಘ ಕ್ರೀಡೆ, ಸಾಹಿತ್ಯ, ಸಾಂಸ್ಕ್ರತಿಕ , ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಸಕ್ರಿಯವಾಗಿದೆ.ನಾನು ಮತ್ತು ನನ್ನ ಮಗಳು ಇವರು ಏರ್ಪಡಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಬಾಗವಹಿಸುವ ಕಡ್ಡಾಯ ನಿಯಮವನ್ನು ಪಾಲಿಸಿದೆವು. ಇದರ ಪಲವೆಂದರೆ ನಮ್ಮ ನಾಲ್ಕು ವರ್ಷದ  ಸದಸ್ಯತ್ವದ ಅವಧಿಯಲ್ಲಿ ನಾವು ಪಟ್ಟಿ ಮಾಡಲು ಸಾದ್ಯವಿಲ್ಲದಷ್ಟು ಸಾಂಸ್ಕ್ರತಿಕ ,  ಸಾಹಿತ್ಯಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಿದ್ದು !!

ಅಮ್ಮ &ಮಗಳು ನ್ರತ್ಯದ ಭಂಗಿ 
ಇಪ್ಪತ್ತು ವರ್ಷಗಳ ನಂತರ ನಾನು ಭರತ ನಾಟ್ಯವನ್ನು  ಮಗಳೊಂದಿಗೆ ನರ್ತಿಸುವಂತಾಗಿದ್ದು, ಕನ್ನಡ ಸಂಘದ ಕಾರ್ಯಕ್ರಮಗಳ ನಿರೂಪಕಿಯಾಗಿ ಬೆಳೆದಿದ್ದು - ನನಗೆ ಗೊತ್ತಿಲ್ಲದ ನನ್ನ ವ್ಯಕ್ತಿತ್ವದ ಮಜಲುಗಳನ್ನು ಈ ಕನ್ನಡಸಂಘ ನನಗೆ ಪರಿಚಯಿಸಿತು. ನನ್ನ ಮಗಳಂತೂ ನಟನೆ, ಮಾತುಗಾರಿಕೆ, ನ್ರತ್ಯ, ಕನ್ನಡ ಕಲಿಕೆ- ಹೀಗೆ ಅವಳ ಹತ್ತು ಹಲವು ಪ್ರತಿಭೆಯನ್ನು ಗುರುತಿಸಿಕೊಳ್ಳುವಂತಾಗಿದ್ದು - ಇವೆಲ್ಲ ನಮ್ಮ ಮಸ್ಕತ್ ಕನ್ನಡ ಸಂಘದ ಒಡನಾಟದ ಮುಖ್ಯ ಅಂಶಗಳು  ಎನ್ನಬಹುದು.

                   ಇಲ್ಲಿನ ಕನ್ನಡ ಸಂಘದ ಕನ್ನಡ ತರಗತಿಯಲ್ಲಿ ಶಿಕ್ಷಕಿಯಾಗಿದ್ದು ಒಂದು ಉತ್ತಮ ಅನುಭವ. ದೂರ ದೇಶದಲ್ಲಿ ಬಂದು ನಮ್ಮ ಭಾಷೆಯನ್ನು  ಕಲಿಸುವುದು ಒಂದು ಮನಸ್ಸಿಗೆ ಸಂತೋಷ ಕೊಡುವ ಚಟುವಟಿಕೆ. ಅಂತೆಯೇ ನಾನು ಈ ಚಟುವಟಿಕೆಯಲ್ಲಿ ತೊಡಗಿಕೊಂಡೆ. ಕಲಿಸುತ್ತಾ ಹೋದಂತೆ ನಮ್ಮ ಮಕ್ಕಳ  ಉತ್ಸಾಹ ನನ್ನನ್ನು ಹುರಿದುಂಬಿಸುತ್ತಿತ್ತು . ನಾನು ಓದಿ ಮರೆತಿದ್ದ ಹಳಗನ್ನಡ , ನಡುಗನ್ನಡವನನೆಲ್ಲ ನೆನಪಿಸಿಕೊಂಡೆ ಮತ್ತು ಮಕ್ಕಳಿಗೆ ಕಲಿಸಲಾರಂಭಿಸಿದೆ . ನನ್ನ ಶಿಷ್ಯರು ಸೇರಿ ಕುಮಾರವ್ಯಾಸ ಭಾರತದ ಒಂದು ಭಾಗವನ್ನು ನಿರರ್ಗಳವಾಗಿ ವಾಚಿಸಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ.

ಪುಣ್ಯಕೋಟಿ ಯಾಗಿ ಪ್ರೀತಿ 
ಪುಣ್ಯಕೋಟಿ ಯಾಗಿ ಪ್ರೀತಿ 
                    ಕನ್ನಡ ಸಂಘದೊಂದಿಗಿನ ನಮ್ಮ ಚಟುವಟಿಕೆಗಳಲ್ಲಿ ನಮ್ಮ ಇನ್ನೊದು ಅವಿಸ್ಮರಣೀ ಯ ಆನುಭವ ವೆಂದರೆ  ಇಲ್ಲಿಗೆ ಪ್ರಭಾತ ಕಲಾವಿದರ ಭೇಟಿ . ಪ್ರಭಾತ್ ಕಲಾವಿದರು ಇಲ್ಲಿನ ಕೆಲವು ಸ್ಥಳೀಯ ಕಲಾವಿದರನ್ನು ಅವರ ಕಿನ್ದರಿಜೋಗಿಗಾಗಿ ಬೇಕೆಂದರು. ಉತ್ಸಾಹಿ ಸದಸ್ಯರೆಲ್ಲ ಸೇರಿಕೊಂಡೆವು. ಅವರ "ಕರ್ನಾಟಕ ವೈಭವ' ರೂಪಕದ ಭಾಗವಾದ "ಪುಣ್ಯಕೋಟಿಯ ಕರುವಾಗಿ ನನ್ನ ಮಗಳು ಪ್ರೀತಿ ಆಯ್ಕೆಯಾದಳು. 8 ವರ್ಷದ ಬಾಲಕಿಯಾದ ಅವಳಿಗೆ ಎರಡು ದಿನಗಳಲ್ಲಿ ಕಲಿತು ಆ ನುರಿತ ಕಲಾವಿದರಿಗೆ ಸರಿಸಮನಾಗಿ  ನಟಿಸುವುದು ಅವಳಿಗೊಂದು ಸವಾಲಾಗಿತ್ತು. ಆದರೆ ಅವಳು ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮನಗೆದ್ದಳು.

                    ಇನ್ನೂ ಈ ಸಂಘದಿಂದ ಏನನ್ನೆಲ್ಲ ಸಾದಿಸುತ್ತೆವೂ ಕಾಡು ನೋಡೋಣ. ಜೈ ಕರ್ನಾಟಕ.

ಶನಿವಾರ, ಜೂನ್ 23, 2012

ಬ್ಲಾಗಿನಲ್ಲಿ ಬರವಣಿಗೆ ನಿಲ್ಲಿಸಬಾರದು

ನಾನು ನನ್ನ ಬ್ಲಾಗಿನಲ್ಲಿ ಏನನ್ನೂ ಹಾಕದೆ ಹಲವು ತಿಂಗಳುಗಳೇ  ಕಳೆದವು. ಪುರುಸೊತ್ತಿಲ್ಲ ಎನ್ನುವುದೊಂದು ನೆವವಷ್ಟೇ .
ಇನ್ನ್ನು ಮೇಲೆ ಹಾಗಾಗಬಾರದು.ಬರೆಯುತ್ತಿರಬೇಕು. ಯಾರಾದರೂ ಓದುತ್ತಾ ರೋ  ಇಲ್ಲವೋ , ನನ್ನ ತ್ರಪ್ತಿಗಾಗಿ ಬರೆಯಬೇಕು . ಇದು ನನ್ನ ಇಂದಿನ ನಿರ್ಧಾರ.

            ನಾವು ಮುಂದಿನ ತಿಂಗಳು ಅಮೇರಿಕಾ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಅದಕ್ಕೆ ಮೊದಲು ನನ್ನ ಯೂರೋಪಿನ ಅನುಭವಗಳನ್ನು ದಾಕಲಿಸಬೇಕೆನ್ದಿದ್ದೆ, ಆದರೆ ಅದನ್ನು ಮಾಡಲಿಲ್ಲ. ಅದಾದ ನಂತರ ಇದು ಎಂದು ಮುಂದುವರಿಸುತ್ತಾ ಹೋದರೆ ನನ್ನ ಬ್ಲಾಗು ನಿಂತೇ ಹೋಗಬಹುದು. ಅದೇ ಬರೆಯಬೇಕು, ಇದೆ ಬರೆಯಬೇಕು ಅಂತಲೆಲ್ಲ ನಿಯಮಗಳನ್ನು ಮಾಡುತ್ತಾ ಹೋದರೆ ನನ್ನ ಉಳಿದೆಲ್ಲ ಚಟುವಟಿಕೆಗಳಂತೆ ಬರವಣಿಗೆಯೂ ಮುಂದುವರಿಯುವುದಿಲ್ಲ. ಮನಸ್ಸಿಗೆ ಬಂದದ್ದನ್ನು ಬಂದಾಗ ಬರೆಯಬೇಕು.

               ನಿನ್ನೆ ನಮ್ಮ ಗುಂಪಿನ ಕೆರೋಕೆ ಕಾರ್ಯಕ್ರಮದಲ್ಲಿ ಶಶಿ ಹಾಡಿದ್ದು ಒಂದು ವಿಶೇಷ. ಬಹಳ ದಿನಗಳಿಂದ ಜನರ ಮುಂದೆ ಅವನು ಹಾಡುವಂತೆ ಮಾಡಬೇಕೆಂಬ ಪ್ರಯತ್ನ ನಿನ್ನೆ ಪಲಿಸಿತು. ಅದಾದ ನಂತರ ಬರೆಯದೆ ಮೂಲೆ ಗುಂಪಾಗಿದ್ದ ನನ್ನ ಬ್ಲಾಗನ್ನು ಎಬ್ಬಿಸಲೇ ಬೇಕೆಂದು ಕುಳಿತೆ ಮನಬಂದದ್ದನ್ನು ಗೀಚಿದೆ.

ಬುಧವಾರ, ಜನವರಿ 4, 2012

ಸೌದಿಯಲ್ಲಿ ನಾವು-೩. ಭಯದ ನೆರಳಲ್ಲಿ ಭಾರತೀಯರು

            ಇಸ್ಲಾಮಿ ಕಾನೂನಿನ ಹೆಸರಿನಲ್ಲಿ ಬಂದಿತವಾಗಿರುವ ಈ ದೇಶದಲ್ಲಿ  ಹೊಟ್ಟೆ ಪಾಡಿಗಾಗಿಯೋ , ಜೀವನದಲ್ಲಿ ಹೊಸತನ್ನು ನೋಡುವ ಕಾತರದಿಂದಲೋ ಬಂದು ನೆಲಸುತ್ತಿರುವ ವಿದೇಶಿಯರ ಬವಣೆ ಒಂದೆರಡಲ್ಲ.ಕೈ ತುಂಬಾ ಹಣ, ಆರಾಮದ ಜೀವನ ದೊರೆತರೂ ಒಂದು ರೀತಿಯ ಅಭದ್ರತೆ ಇಲ್ಲಿ ನೆಲಸಿರುವ ಜನರ ಮನದಲ್ಲಿ ಕಾಡುತ್ತಿರುತ್ತದೆ!! ನಾನು ಇಲ್ಲಿ ಬಂದು ಸ್ನೇಹಿತರ ಗುಂಪಿನಲ್ಲಿ ಒಂದಾಗಿ, ಹೊಸತರದ ಜೀವನವನ್ನು ಅನುಭವಿಸಲು ತೊಡಗಿದರೂ, ಇಲ್ಲಿಯೇ ಬಹಳ ವರ್ಷ ನೆಲಸಿದ ಹಿರಿಯರ ಬಾಯಿಯಲ್ಲಿ ಕೇಳುವ ಕಥೆಗಳು ಕೆಲೋವೊಮ್ಮೆ ಭಯ ಹುಟ್ಟಿಸಿದರೆ ಕೆಲೋವೊಮ್ಮೆ ನಗು ತರಿಸುತ್ತಿತ್ತು.

        ನನಗೆ  ಇಲ್ಲಿನ  ಭಾರತೀಯ ಶಾಲೆಯಲ್ಲಿ ಅದ್ಯಾಪಕಿಯಾಗಿ ಕೆಲಸ ಮಾಡುವ ಅವಕಾಶ ಒದಗಿತು. ಈ ಅವಕಾಶ ನನಗೆ ಇಲ್ಲಿನ ಜನ ಜೀವನದ ಬಗೆಗೆ ಸ್ವಲ್ಪ ಮಟ್ಟಿಗೆ ತಿಳಿದು ಕೊಳ್ಳುವ ಅವಕಾಶ ಒದಗಿತು. ಇಲ್ಲಿನ ಎಲಾ ಉದ್ಯೋಗಗಳಿಗೂ  ಸ್ಥಳಿಯರ ಬೆಂಬಲ ಬೇಕಾಗುತ್ತದೆ. ನಮ್ಮ ಶಾಲೆಯೂ  ಹಾಗೆಯೇ ಒಬ್ಬ ಸ್ಥಳೀಯ ಸೌದಿ ನಾಗರಿಕನ ಮಾಲಿಕತ್ವದಲ್ಲಿ ನಡೆಯುತ್ತಿತ್ತು. ಇಲ್ಲಿನ ಎಲ್ಲ ಸಿಬ್ಬಂದಿಗಳೂ ಮಹಿಳೆಯರು. ಶಾಲೆಗೇ ಮಹಿಳೆಯರಿಗೆ, ಪುರುಷರಿಗೆ ಬೇರೆ ಬೇರೆ ಬಾಗಿಲುಗಳಿದ್ದವು. ಅಂತೆಯೇ  ನಾವುಗಳು ಬುರ್ಖಾದೊಳಗೆ ಶಾಲೆ ತಲುಪಿ ಒಳಗಡೆ ಸೇರಿಕೊಳ್ಳುತ್ತಿದ್ದೆವು. ಯಾರಾದರು ಅಂದರೆ ಮಕ್ಕಳ ಹೆತ್ತವರು ಬೆಟ್ಟಿಯಾಗಲು    ಬಂದರೆ ನಮ್ಮ ಮುಖವನ್ನು ಮುಚ್ಚಿಕೊಂಡು ಹೋಗುತ್ತಿದ್ದೆವು.

ಮದ್ಯಾಹ್ನ ಜನ ಸಂಚಾರವೇ ಇರದ ರಸ್ತೆಯಲ್ಲಿ ಇಳಿದು ನಮ್ಮ ಮನೆಯನ್ನು ಸೇರಿಕೊಳ್ಳುತ್ತಿದ್ದೆವು. ಒಂದು ದಿನ ನಾನು ಮಗಳೊಡನೆ ಬಸ್ಸಿಳಿದು ಮನೆಯೊಳಗೇ ಬರುತ್ತಿದ್ದಂತೆ ನಮ್ಮ ಎದುರು ಮನೆಯ ಪ್ರಿಯಾಳ ಫೋನು!! ನಿನ್ನ ಮನೆಯ ಕರೆಗಂಟೆ ಸದ್ದಾದರೆ ಬಾಗಿಲು ತೆಗೆಯಬೇಡವೆಂದು ಅವಳು ನನಗೆ ಎಚ್ಚರಿಕೆ ಕೊಟ್ಟಳಲ್ಲದೆ   ಒಬ್ಬ ಸೌದಿ ಮನುಷ್ಯ ಕಾರಿನಲ್ಲಿ ನಮ್ಮ ಬಸ್ಸಿನ ಹಿಂದೆ ಬರುತ್ತಿದ್ದನೆಂದೂ, ನಾವು ಒಳಗೆ ಬರುತ್ತಿದ್ದಂತೆ ಅವನೂ ಅವನ ಕಾರಿನಿಂದಿಳಿದು ಅಲ್ಲೇ ಎಲ್ಲೂ ಇದ್ದಾನೆಂದೂ ತಿಳಿಸಿದಳು. ನನಗೆ ಎಲ್ಲೀಲ್ಲದ ಭಯವಾಯಿತು. ಯಾರೂ ನಮ್ಮ ಮನೆಯ ಕರೆಗಂಟೆ ಒತ್ತದಿದ್ದರೂ, ಎಂತಹ ಜಾಗಕ್ಕೆ ಬಂದು ನೆಲಸಿದ್ದೆವಪ್ಪ ಎಂದು ದಿಗಿಲಾಯಿತು. ಇಲ್ಲಿ ಈ ತರಹ ಸೌದಿಗಳು ಒಂಟಿಯಾಗಿರುವ ಭಾರತಿಯ ಮಹಿಳೆಯರನ್ನು ಕಂಡು ಕಿರುಕುಳ ಕೊಡುವುದು ಹಲವರ ಬಾಯಿಯಲ್ಲಿ ಕೇಳಿದ ಸಂಗತಿ!! ಕೆಲವು ಮನೆಗಳಲ್ಲಂತೂ ಸೌದಿ ಗಂಡಸರು ನುಗ್ಗಿ ಕಿರುಕುಳ ಕೊಟ್ಟ ಘಟನೆಗಳು ಕೇಳಿಬರುತ್ತಿತ್ತು.

         

ಸೌದಿ ಗಂಡಸರ ಬಗೆಗಿನ ಕಥೆಗಳು:

     ಸೌದಿಗಳ ನಿಗೂಡ ಸಮಾಜ ಅವರನ್ನು ಅನುಮಾನದಿಂದ ಕಾಣುವಂತೆ ಮಾಡುತ್ತದೆ. ಇಲ್ಲಿ ಏನೂ ಎದುರಿಗೆ ನಡೆಯುವುದಿಲ್ಲ. ಇಲ್ಲಿ ನೆಲಸಿರುವ ವಿದೇಶಿಯರಿಗೆ ಇಲ್ಲಿನ ಸ್ಥಳೀಯ ಜನಗಲೊಂದಿಗಿನ ಒಡನಾಟ ಬಹಳ ಕಡಿಮೆ. ಮನೆಗಳೂ ಹಾಗೆಯೇ, ಒಳಗೆ ಹೋದೊಡನೆ ಎರಡು ಭಾಗವಾಗುತ್ತದೆ- ಹೆಂಗಸರಿಗೆ ಮತ್ತು ಗಂಡಸರಿಗೆ. ಅವರವರ ಭಾಗಕ್ಕೆ ಅವರವರು ಹೋಗಬೇಕು.ಗಂಡು ಮಕ್ಕಳಿಗೆ ಹತ್ತುವರ್ಷವದೊನೆ ಅವರು ತಮ್ಮ ಅಕ್ಕ-ತಂಗಿಯರ ಮುಖವನ್ನೂ ನೋಡುವಂತಿಲ್ಲ.!!

       ಇಂತಹ ಹಿನ್ನೆಲೆ ಇರುವ ಸೌದಿ ಪೌರನೊಬ್ಬ ಭಾರತಿಯನೊಡನೆ ಸ್ನೇಹ ಬೆಳೆಸಿದನಂತೆ.ನಾವು ಭಾರತಿಯರದು ಆತಿಥ್ಯದಲ್ಲಿ ಎತ್ತಿದ ಕೈ . ಸ್ನೇಹ ಬೆಳೆದಂತೆ ಈ ಭಾರತಿಯ ಆತನನ್ನು ಮನೆಗೆ ಔತಣಕ್ಕೆ ಅವ್ಹಾನಿಸಿದನಂತೆ.ಭಾರತಿಯನ ಪತ್ನಿ ಸುಂದರಿಯಾಗಿದ್ದಳಂತೆ, ಊಟವು ಸೌದಿ ಪುರುಷನಿಗೆ ಹಿಡಿಸಿತಂತೆ.ಸ್ವಲ್ಪ ಸಮಯದ ನಂತರ ಸೌದಿ ಗೆಳೆಯ ಭಾರತಿಯನನ್ನು ಪತ್ನಿ ಸಮೇತ ತನ್ನ ಮನೆಗೆ ಕರೆದನತೆ. ಗೆಳೆಯನ ಮನೆಗೆ ಹೋದ ತಕ್ಷಣ  ಅವರ ಸಂಪ್ರದಾಯದಂತೆ ಭಾರತಿಯ ಪತಿ ಪುರುಷರ ವಿಭಾಗಕ್ಕೆ, ಪತ್ನಿ ಮಹಿಳೆಯರಿರಿವ ಜಾಗಕ್ಕೆ ಹೋದರಂತೆ. ಆದರೆ ಊಟ ಮುಗಿಸಿ ಹೊರಡಲನುವಾಗಿ   ಪತ್ನಿಯನ್ನು ಕರೆಯಲು ಭಾರತಿಯ ತನ್ನ ಗೆಳೆಯನನ್ನು ಕೇಳಿದರೆ, ಆಟ ನಿನ್ನ ಪತ್ನಿ ಇಲ್ಲಿ ಯಾವಾಗ ಬಂದಿದ್ದಳೆಂದು ಮರು ಪ್ರಶ್ನಿಸಿದನಂತೆ!! ಭಾರತೀಯನಿಗೆ ಅವನ ಪತ್ನಿ ಮತ್ತೆ ನೋಡಲು ಸಿಗಲಿಲ್ಲವಂತೆ.

    ಇನ್ನೊಮ್ಮೆ ೨-೩ ಭಾರತಿಯ ಕುಟುಂಬಗಳು ಒಟ್ಟಾಗಿ ವಿಹಾರಕ್ಕೆ ಹೋಗುತ್ತಿದ್ದರಂತೆ.ಈ ರೀತಿ ಹೋಗುವ ಗುಂಪನ್ನು ಮುತ್ತಾವಗಳು ಪ್ರಶ್ನಿಸುತ್ತಾರೆ. ಅವರೆಲ್ಲರೂ ಕಾನೂನು ಪ್ರಕಾರ ದಂಪತಿಗಳೆಂದು ಧ್ರಡಿಕರಿಸಿಕೊಳ್ಳುತ್ತಾರೆ. ಇದಕ್ಕಾಗಿ ಎಲ್ಲರೂ ಇಕಾಮಾ ( ಸೌದಿಯಲ್ಲಿ ನೆಲಸಿರುವ ಅನ್ಯದೆಶಿಯರಿಗೆ ಅಲ್ಲಿನ ಸರಕಾರ ಕೊಡುವ ಗುರುತಿನ ಚೀಟಿ. ಇದರಲ್ಲಿ ಕೆಲಸು ಮಾಡುವವನು ಮತ್ತು ಅವನ ಕುಟುಂಬದ ವಿವರಗಳಿರುತ್ತದೆ.) ಇದು ಸಿಗಬೇಕಾದರೆ ಅಲ್ಲಿ ಬಂದು  ನೆಲಸಿ ಎರಡು ತಿಂಗಳಾದರೂ ಆಗಬೇಕು. ಅದು ಬರುವ ತನಕ ಎಲ್ಲರು ತಮ್ಮ ಗುರುತಿಗಾಗಿ passport ಹಿಡಿದುಕೊಂಡು ಹೋಗಬೇಕು.
ಅಲ್ಲಿದ್ದ ಒಂದು ಕುಟುಂಬ ಹೊಸದಾಗಿ ಬಂದಿದ್ದು ಅವನ ಪತ್ನಿ passport ತರಲು ಮರೆತಿದ್ದಳು.ಆ ಮುತ್ತವ ಈ ಹೆಳೆಯಿಂದ ಆ ಮಹಿಳೆಯನ್ನು ತನ್ನೊಡನೆ ಕರೆದೊಯ್ದನಂತೆ.ಮತ್ತೆ ಆತನಿಗೆ ಪತ್ನಿ ಮರಳಿ ಸಿಗಲಿಲ್ಲವಂತೆ!!

   ಈ ಕಥೆಗಳನ್ನು ನನ್ನ ಪತಿ ಕಟ್ಟುಕಥೆಗಳೆಂದು  ತಳ್ಳಿ ಹಾಕಿದರೂ ,ನಾನು ಮಾತ್ರ ಈ ಸೌದಿಯಲ್ಲಿ ಏನು ಬೇಕಾದರೂ ಆಗಬಹುದೆಂದು ತಬ್ಬಿಬ್ಬಾಗುತ್ತಿದ್ದೆ. ಒಮ್ಮೆ ನಾವೇ ಆಹ್ವಾನಿತರಾದ ಒಬ್ಮರ ನೆಯಲ್ಲಿ ಮೇಲೆ ಹೇಳಿದ ಇಕಾಮ ಸಂಬದಿ ರಗಳೆಗಳು ನಡೆಯಿತು. ಅವರ ಮನೆಗೆ ಬರಬೇಕಾದ ಒಂದು ಕುಟುಂಬ ಇನ್ನೂ ಹೊಸದಾಗಿ ಬಂದಿತ್ತು.ಆದ್ದರಿಂದ ಅವರನ್ನು ಕರೆತರಲು ನಮ್ಮ ಅತ್ಹಿತೆಯರು ಹೋಗಿದ್ದರು. ಬರುವಾಗ ಕಾರಿನಲ್ಲಿ ಇಬ್ಬರು ಪುರುಷರು, ಒಂದು ಮಹಿಳೆ (ಅತಿಥಿಯ  ಪತ್ನಿ) ಅವಳು ಹೊಸದಾಗಿ ಬಂದ ಕಾರಣ ಅವಳ ಪತಿಯ ಇಕಾಮದಲ್ಲಿ ಅವಳ ಹೆಸರಿನ್ನೂ ಬಂದಿರಲಿಲ್ಲ. ಅವರನ್ನು ದಾರಿಯಲ್ಲಿ ಮುತ್ತವ ಪ್ರಶ್ನಿಸಿದ. ದುರದ್ರಷ್ಟವಶಾತ್ ಅವಳು ತನ್ನ passport ಮರೆತು  ಬಂದಿದ್ದಳು. ಅವರನ್ನೆಲ್ಲ ಪೋಲಿಸ್ ತಾಣೆಗೆ  ಕೊಂಡೊಯ್ದ ಅವರು, ಇನ್ನೊಬ್ಬರು ಹೋಗಿ ಅವಳ passport ತೋರಿಸುವ  ತನಕ   ಅವರನ್ನೆಲ್ಲ  ಅಲ್ಲಿರಿಸಿದ್ದರು.


ಹೀಗೆ ಭಯದ ನೆರಳಿನಲ್ಲಿ ಭಾರತದಂತಹ ಸ್ವತಂತ್ರ ರಾಷ್ಟ್ರದ ಪ್ರಜೆಗಳಾದ ಜನರು ಈ ದೇಶದಲ್ಲಿ ವಾಸಿಸುತ್ತಿರುತ್ತಾರೆ. ಈ ಭಯದಿಂದಲೂ ಏನೂ ಇಲ್ಲಿ ಬಹಳ ಬೇಗ ಗೆಳೆಯರು ಆತ್ಮಿಯರಾಗುತ್ತಾರೆ.ಭಾರತಿಯ ಸಮುದಾಯವಂತೂ ಒಂದು ಕುತುಂಬದಂತೆ  ಇಲ್ಲಿ ವಾಸಿಸುತ್ತದೆ ಎನ್ನಬಹುದು.