"ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರ...." ಸಂಸ್ಕ್ರತ ಶ್ಲೋಕ
"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" - ಎನ್ನುವ ದಾಸವಾಣಿ
"ಮನಶ್ಚೇನ್ನ ಲಗ್ನಮ್ ಗುರೊರಂಗ್ರಿ ಪದ್ಮೇ ತತಃ ಕಿಂ...." ಎನ್ನುವ ಶಂಕರಾಚಾರ್ಯರ ಗುರುವಷ್ಟಕ
ಮೇಲಿನ ಎಲ್ಲ ಮುಕ್ತಕಗಳು ನಮಗರಿವಿಲ್ಲದೆಯೇ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇವೆಲ್ಲ ಒಬ್ಬ ಮನುಷ್ಯನ ಜೀವನದಲ್ಲಿ ಗುರುವಿಗಿರುವ ಮಹತ್ವದ ಸ್ಥಾನವನ್ನು; ನಮ್ಮ ಭಾರತೀಯ ಸಂಸ್ಕೃತಿಯು ಗುರುವಿಗೆ ಕೊಟ್ಟಿರುವ ವಿಶೇಷ ಸ್ಥಾನವನ್ನು ತೋರಿಸುತ್ತದೆ.
ಚಾಣಕ್ಯ -ಚಂದ್ರಗುಪ್ತ; ಗುರು ರಾಮದಾಸ್ -ಶಿವಾಜಿ; ಹರಿಹರ,ಬುಕ್ಕ-ವಿದ್ಯಾರಣ್ಯರು- ಇವರೆಲ್ಲ. ಭಾರತದ ಇತಿಹಾಸ ಪ್ರಸಿದ್ಧ ಗುರುಶಿಷ್ಯರ ಜೋಡಿಗಳು. ಗುರುಗಳ ಮಾರ್ಗದರ್ಶನ ದಿಂದ ಶಿಷ್ಯರು ಏರಬಹುದಾದ ಎತ್ತರವನ್ನು ಸಾಧಿಸಿ ತೋರಿಸಿದವರು. ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು" ಎನ್ನುವ ಪ್ರಸಿದ್ಧ ಹೇಳಿಕೆಯನ್ನು ಸತ್ಯವಾಗಿಸಿದವರು.
ಮಣ್ಣಿನ ಮುದ್ದೆಯಂತಿರುವ ಮಗು ಈ ಜೀವನದಲ್ಲಿ ಬೆಳೆಯುತ್ತಾ ಮನುಷ್ಯ ಎನಿಸಿಕೊಳ್ಳುವ ಪಯಣದಲ್ಲಿ ಅವನು ಏನಾಗುತ್ತಾನೆ ಎನ್ನುವುದು ಅವನು ಬೆಳೆಯುವ ವಾತಾವರಣ, ಅವನ ಮೇಲೆ ಘಾಡವಾಗಿ ಪ್ರಭಾವ ಬೀರುವ ಜನಗಳಿಂದ ನಿರ್ಧಾರವಾಗುತ್ತದೆ. ಒಳ್ಳೆಯ ಗುರು ಒಬ್ಬ ವ್ಯಕ್ತಿಯ ಜೀವನದಲ್ಲಿ ಬಹುಮುಖ್ಯ ನಾಗುತ್ತಾನೆ. ಹಾಗಾಗಿ ಶಿಕ್ಷಕನ ವೃತ್ತಿಯು ಪ್ರಪಂಚದಲ್ಲಿ ಅತ್ಯಂತ ಪವಿತ್ರವಾದ ವೃತ್ತಿ ಎನಿಸಿಕೊಳ್ಳುತ್ತದೆ. ಈ ಪವಿತ್ರ ವೃತ್ತಿಗೆ ಯಾಕೋ ನಮ್ಮ ಸಮಾಜದಲ್ಲಿ ಈಗ ಅದಕ್ಕೆ ಬೇಕಾದ ಮನ್ನಣೆ ಸಿಗುತ್ತಿಲ್ಲ ಎನಿಸುತ್ತದೆ. ಬೆಳೆಯುವ ಮಕ್ಕಳು ಏನಾಗುತ್ತೀರಿ ಎಂದು ಕೇಳಿದಾಗ ಶಿಕ್ಷಕ ಅಥವಾ ಶಿಕ್ಷಕಿ ಆಗುತ್ತೇನೆ ಎಂದರೆ ಅವರನ್ನು ನಾವು ಪ್ರೋತ್ಸಾಹಿಸಿ ಅವರು ದಿಕ್ಕಿನಲ್ಲಿ ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ.
ದಿನಬೆಳಗಾದರೆ ಅಮಾನವೀಯ ಕೃತ್ಯಗಳ ಸುದ್ದಿಗಳನ್ನು ಎಲ್ಲ ಕಡೆ ಕೇಳುತ್ತಿರುವ ಈ ದಿನಗಳಲ್ಲಿ ಸ್ವಸ್ಥ ಪ್ರಜೆಗಳನ್ನು ಬೆಳೆಸುವ ಉತ್ತಮ ಗುರುಗಳ ಅಗತ್ಯ ಬಹಳವಿದೆ.ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಎ. ಪಿ.ಜೆ ಅಬ್ದುಲ್ ಕಲಾಂ, ಕರ್ನಾಟಕದ ಅನುಭವಿ ಶಿಕ್ಷಣತಜ್ಞ ಶ್ರೀ ಗುರುರಾಜ ಕರ್ಜಗಿ -ಇವರೆಲ್ಲ ಸಾವಿರಾರು ವಿದ್ಯಾರ್ಥಿಗಳ ಸ್ಪೂರ್ತಿಗೆ ಕಾರಣರಾದಆಧುನಿಕ ಮಹಾನ್ ಗುರುಗಳು. ಅಂತಹ ಗುರುಗಳು ಸಾವಿರ ಸಂಖ್ಯೆಯಲ್ಲಿ ಬರಬೇಕು.
ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಬಹಳ ಮಹತ್ವದ ದಿನ. ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸಪ್ಟೆಂಬರ್ ಐದನ್ನು ಭಾರತದಲ್ಲಿ ಶಿಕ್ಷಕರದಿನವನ್ನಾಗಿ ಆಚರಿಸಿದರೆ, ಪಾಶ್ಚಾತ್ಯ ದೇಶಗಳಲ್ಲಿ ಆಕ್ಟೊಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಉತ್ತಮ ಶಿಕ್ಷಕರು ಬೆಳೆಯುವಂತೆ ಮಾಡುವುದು ಈಗಿನ ಸಮಾಜದ ಅಗತ್ಯವಾಗಿದೆ.
ಲೇಖನ: ಸುಧಾ ಶಶಿಕಾಂತ್, ಮಸ್ಕತ್
![]() |

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ