"ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್" - ಕವಿರಾಜಮಾರ್ಗ (9ನೆಯ ಶತಮಾನ)
ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣಿತಮತಿಗಳ್- ಕವಿರಾಜಮಾರ್ಗ(9ನೆಯ ಶತಮಾನ)
ನೆನೆವುದೆನ್ನ ಮನ ಬನವಾಸಿ (ಕರ್ಣಾಟ) ದೇಶಮ್- ಆದಿಕವಿ ಪಂಪ(10ನೆಯ ಶತಮಾನ)
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು- ಕುವೆಂಪು(20ನೆಯ ಶತಮಾನ)
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು (21ನೆಯ ಶತಮಾನ)
ನಮ್ಮ ನಾಡು ಭಾಷೆಯ ಬಗೆಗೆ ಹೆಮ್ಮೆಯನ್ನು ತರಿಸುವ, ಸುಮಾರು ಕ್ರಿ.ಶ 9ನೆಯ ಶತಮಾನದಿಂದ ಇಂದಿನ 21ನೆಯ ಶತಮಾನದ ಕಾಲಘಟ್ಟದವರೆಗೆ ಹರಡಿ ಕೊಂಡಿರುವ ಘೋಷಣೆಗಳನ್ನು ಕೇಳಿದೊಡನೆ ನಮ್ಮ ಭಾಷಾಭಿಮಾನ ನಮ್ಮಲ್ಲಿ ಜಾಗ್ರತಗೊಳ್ಳುತ್ತದೆ. ನಮ್ಮ ಭಾಷೆಯ ಬಗೆಗೆ ನಮ್ಮ ಹೆಮ್ಮೆ ಉಕ್ಕುತ್ತದೆ.
2000 ವರ್ಷಕ್ಕೂ ಮಿಕ್ಕಿದ ಇಂತಹ ಭವ್ಯ ಪರಂಪರೆಯಿರುವ ಕನ್ನಡ ಭಾಷೆಯ ಮತ್ತು ಸಂಸ್ಕ್ರತಿಯ ಹಿನ್ನೆಲೆಯುಳ್ಳ ಅದರ ವಾರಿಸುದಾರರಾಗುರುವ ನಾವೆಲ್ಲ ಆ ಪರಂಪರೆಯನ್ನು ಮುನ್ನೆಡೆಸಲು ಯೋಗ್ಯತೆಯನ್ನು ಗಳಿಸಿದರೆ ಮಾತ್ರ ಅದರ ನಿಜವಾದ ಬೆಲೆ ನಮಗೆ ಅರ್ಥವಾಗುತ್ತದೆ. ನಾನು ಇತ್ತೀಚೆಗೆ ಭಾಗವಹಿಸುತ್ತಿದ್ದ ಒಂದು ಸಭೆಯಲ್ಲಿ ಅನೇಕ ಭಾಷಣಕಾರರು ನಮ್ಮ ಭಾಷೆಯನ್ನು ಉಳಿಸುವ ಬೆಳೆಸುವ ಬಗೆಗೆ ಭಾಷಣಗಳನ್ನು ಮಾಡುತ್ತಿದ್ದರು ಘೋಷಣೆ ಗಳನ್ನು ಕೂಗುತ್ತಿದ್ದರು. ಈ ತರಹದ ಘೋಷಣೆಗಳು ಇತ್ತೀಚೆಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ನವೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಭಾಷೆಯ ಉಳಿವಿಗೆ ಇಂತಹ ಘೋಷಣೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ
ಕನ್ನಡದ ಮೊದಲ ಲಿಖಿತ ದಾಖಲೆ ಹಲ್ಮಿಡಿ ಶಾಸನದ ಆಧಾರದ ಮೇಲೆ ಹೇಳುವುದಾದರೆ ನಮ್ಮ ಭಾಷೆ ಬರೆಯುವಷ್ಟು , ಆಡಳಿತ ಭಾಷೆಯಾಗುವಷ್ಟು ಸಾಮರ್ಥ್ಯ ಪಡೆದೇ 1500 ವರ್ಷಗಳಾಗಿವೆ. ಅದಕ್ಕೂ ಮೊದಲು ಅದು ಎಷ್ಟು ವರ್ಷಗಳಿಂದ ಮಾತನಾಡುತ್ತಿದ್ದರು ಎನ್ನುವುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಜನರ ಆಡು ಮಾತಿನಲ್ಲಿ, ಜನಪದ ಹಾಡಿನಲ್ಲಿ, ಜಾನಪದ ಕಲೆಗಳಲ್ಲಿ ಭಾಷೆ ಸಹಜವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತಿರುತ್ತದೆ. ಅಂದರೆ ಯಾರ ಸಹಾಯವೂ ಇಲ್ಲದೇ ತನ್ನಲ್ಲಿರುವ ಶಕ್ತಿಯಿಂದ ಭಾಷೆ ತಾನಾಗಿ ಇಷ್ಟು ಸಹಸ್ರಾರು ವರ್ಷ ಭವ್ಯವಾಗಿ ಬೆಳೆದು ಬಂದಿದೆ.
ಒಬ್ಬ ಮನುಷ್ಯನ ಜೀವಿತಾವಧಿ ಹೆಚ್ಚೆಂದರೆ ನೂರು ವರ್ಷ. ಭಾಷೆಯ ಇತಿಹಾಸಕ್ಕೆ ಹೋಲಿಸಿದರೆ ನೂರು ವರ್ಷ ಅತ್ಯಂತ ಕಡಿಮೆ. ಈ ಭಾಷೆಯನ್ನು ಉಳಿಸಲು ನಾವು ಯಾರೂ ಅಲ್ಲ. ಈಗ ನಮಗೆ ಅದನ್ನು ಬಳಸುವ, ಅದರ ಭವ್ಯತೆಯನ್ನು ಮನಗಾಣುವ ಅಭಿಮಾನ ಶೂನ್ಯತೆ ತುಂಬಿದ್ದರೆ ಅದು ನಮ್ಮ ನಷ್ಟವೇ ಹೊರತು ಆ ಭಾಷೆಯ, ಪರಂಪರೆಯ ನಷ್ಟವಲ್ಲ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಕನ್ನಡ ಅಥವಾ ಪ್ರಪಂಚದ ಯಾವುದೇ ಭಾಷೆ ಬೆಳೆಯಬೇಕಾದರೆ ಅದು ಜನರ ದೈನಂದಿನ ಜೀವನದಲ್ಲಿ ಬಳಕೆಯಾಗಬೇಕು, ಮಕ್ಕಳು ಬೆಳೆಯುವಾಗ ಅವರು ಬೌದ್ಧಿಕವಾಗಿ ಆ ಭಾಷೆಯಲ್ಲಿ ಯೋಚಿಸಲು, ಚಿಂತಿಸಲು ತೊಡಗಬೇಕು. ಅವಾಗ ಮಾತ್ರ ಭಾಷೆ ಮುಂದಿನ ತಲೆಮಾರುಗಳಿಗೆ ಹರಿಯುತ್ತದೆ. ನಮ್ಮ ಬೌದ್ಧಿಕ ಬೆಳವಣಿಗೆ ನಾವು ಪರ ಭಾಷೆಯಲ್ಲಿ ಮಾತನಾಡಿದಾಗ ಮಾತ್ರವೆಂದು ಜನ ಯೋಚಿಸತೊಡಗಿದಾಗ ಭಾಷೆ ಬಲಹೀನವಾಗುತ್ತದೆ. ಕನ್ನಡಿಗರು ಭಾಷೆಯ ಬಗೆಗೆ ಅಭಿಮಾನ ಶೂನ್ಯರು ಎನ್ನುವ ಅಭಿಮತ ಈಗ ಎಲ್ಲ ಕಡೆ ಇದೆ. ಹಾಗಾಗಿ ಕನ್ನಡಿಗರಾಗಿ ನಮ್ಮೆಲ್ಲರ ಮೊದಲ ಕರ್ತವ್ಯ ನಮ್ಮ ಮಕ್ಕಳಿಗೆ ನಾವು ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಕನ್ನಡ ಮಾತನಾಡಲು, ಓದಲು ಬರೆಯಲು ಕಲಿಸುವುದು. ಮನೆಯಲ್ಲಿ ಖಡ್ಡಾಯವಾಗಿ ಕನ್ನಡ ಮಾತನಾಡುವುದು. ಇಷ್ಟು ಮಾಡಿದರೆ ಉಳಿದದ್ದೆಲ್ಲ ತಂತಾನೇ ಆಗುತ್ತದೆ. ಕನ್ನಡ ಭಾಷೆ ಮುಂದುವರಿಯುತ್ತದೆ, ಬೆಳೆಯುತ್ತದೆ.
ಈಗ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಪರಭಾಷೆಗಳ ಪ್ರಾಬಲ್ಯ, ಬೆಂಗಳೂರಿಗರ ಕಂಗ್ಲೀಷ್ ಕೇಳಿದಾಗ ಕನ್ನಡದ ಭವಿಷ್ಯದ ಬಗೆಗೆ ಸ್ವಲ್ಪ ದಿಗಿಲಾಗುವುದು ಸಹಜ. ಆದರೆ ವಿಶಾಲ ಕರ್ನಾಟಕದ ಉಳಿದ ಕಡೆ ಕನ್ನಡ ಇನ್ನೂ ಭದ್ರವಾಗಿದೆ ಎನ್ನುವುದು ಸುಳ್ಳಲ್ಲ. ನಾನು ಕಳೆದವಾರದ ನನ್ನ ಲೇಖನದಲ್ಲಿ ಹೇಳಿದಂತೆ ತಂತ್ರಜ್ಞಾನದಲ್ಲಿ ಕನ್ನಡವನ್ನು ಬಳಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಕನ್ನಡದ ವಿವಿಧ ಪ್ರಾಂತಗಳ ವಿಶಿಷ್ಟವಾದ ಭಾಷೆಗಳೆಲ್ಲ ಸಾಮಾಜಿಕ ಜಾಲತಾಣಗಳ ಪ್ರಭಾವ ಆರಂಭವಾದ ಮೇಲೆ ತಮ್ಮ ಬಲವನ್ನು, ಪ್ರಭಾವವನ್ನು ಹೆಚ್ಚಿಸಿಕೊಂಡಿದೆ ಎಂದೇ ಹೇಳಬಹುದು. ಉದಾಹರಣೆಗೆ ಕುಂದಾಪುರ ಕನ್ನಡ ಈಗ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಮನು ಹಂದಾಡಿಯವರ ಕುಂದಗನ್ನಡದ ಹಾಸ್ಯ ಪ್ರಪಂಚದ ಎಲ್ಲೆಡೆ ಪಸರಿಸಲು ಸಾಧ್ಯವಾಗಿದ್ದು, ವಿಶ್ವ ಕುಂದಾಪ್ರ ಕನ್ನಡ ದಿನವೆಂದು ಕನ್ನಡದ ಈ ಉಪಭಾಷೆಯನ್ನು ವಿಶ್ವದಾದ್ಯಂತ ಸಂಭ್ರಮಿಸಲು ಸಾಧ್ಯವಾಗಿದ್ದು ತಂತ್ರಜ್ಞಾನದ ಸಹಾಯದಿಂದ. ಕಳೆದವಾರ ಬೆಂಗಳೂರಿನ ಒಂದು ಪುಸ್ತಕಸಂತೆಯಲ್ಲಿ ಜನ ಮುಗಿಬಿದ್ದು ಕನ್ನಡ ಪುಸ್ತಕಗಳನ್ನು ಕೊಳ್ಳುವುದನ್ನು ನೋಡಿದಾಗ ನಮ್ಮ ಭಾಷೆಗೆ ಇನ್ನೂ ಸಾವಿರಾರು ವರ್ಷಗಳ ಭದ್ರವಾದ ಭವಿಷ್ಯವಿದೆ ಅನ್ನಿಸಿತು. ಹಾಗಾಗಿ ಕನ್ನಡ ಭಾಷೆ ತನ್ನೆದುರಿಗೆ ಬಂದ ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಶಕ್ತಿಯನ್ನು ತಾನೇ ಪಡೆದಿದೆ. "ಕಲಿಯೋಕೆ ನೂರು ಭಾಷೆ, ಆಡೋಕೆ ಒಂದೇ ಭಾಷೆ- ಕನ್ನಡ" ಎಂಬ ನಿಯಮವನ್ನು ಕನ್ನಡಿಗರು ಖಡ್ಡಾಯವಾಗಿ ಪಾಲಿಸುವಂತಾಗಲಿ. ನಮ್ಮ ಭಾಷೆಯು ಅಚಂದ್ರಾರ್ಕವಾಗಿ ಉಳಿಯುವಂತಾಗಲಿ ಎನ್ನುವ ಆಶಯವನ್ನು ಸಂಕಲ್ಪವನ್ನು ಈ ರಾಜ್ಯೋತ್ಸವದ ತಿಂಗಳಲ್ಲಿ ಮಾಡೋಣ
"ಸುಲಿದ ಬಾಳೆಯ ಹಣ್ಣಿನಂದದಿ,
ತೆಗೆದ ಸಿಗುರಿನ ಕಬ್ಬಿನಂದದಿ ,
ಅಳಿದ ಉಷ್ಣದ ಹಾಲಿನಂದದಿ
ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನಿನ್ನೇನು?" - ಎಂದು ಹದಿನೇಳನೆಯ ಶತಮಾನದಲ್ಲಿ ಮಹಾಲಿಂಗಕವಿ ಅವರು ಬರೆದ "ಅನುಭವಾಮೃತ" ಎಂಬ ಕೃತಿಯ ಒಂದು ಪದ್ಯಭಾಗದ ಸಾಲುಗಳಿಗೆ
"ಆಂಗ್ಲಭಾಷೆಯಿಲಿನ್ನೇನು? ಪರಭಾಷೆಗಳಲಿನ್ನೇನು?"- ಎಂದು ಸೇರಿಸುತ್ತಾ ನಮ್ಮ ಸುಂದರ ಭಾಷೆಯಾದ ಕನ್ನಡವನ್ನು ಸಹಜವಾಗಿ ಶುದ್ಧವಾಗಿ ಬಳಸೋಣ ; ಅತಿ ಅಗತ್ಯವಿಲ್ಲದೇ ಅನ್ಯ ಭಾಷೆಗಳಲ್ಲಿ ಸಂವಹನ ಮಾಡವುದು ಬೇಡ ಎಂಬ ಕಿವಿಮಾತನ್ನು ಹೇಳುತ್ತಾ ನನ್ನ ಈ ರಾಜ್ಯೋತ್ಸವ ತಿಂಗಳಿನ ವಿಶೇಷ ಲೇಖನ ಸರಣಿಯನ್ನು ಮುಗಿಸುತ್ತೇನೆ.
ಲೇಖನ: ಸುಧಾ ಶಶಿಕಾಂತ್, ಮಸ್ಕತ್

.jpg)


