ಮತ್ತೆ ಬಂದಿತು ರಾಜ್ಯೋತ್ಸವ
(ಭಾಗ 2): ಹೊರನಾಡ ಕನ್ನಡಿಗರು ಮತ್ತು ಕನ್ನಡ ಭಾಷೆ
ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನ, ಹೆಮ್ಮೆ ಉಂಟಾಗುವುದು ನಾವು ನಮ್ಮ ಮಣ್ಣಿನಿಂದ ದೂರ ಹೋದಾಗ ಎನ್ನುವುದು ನನ್ನ ಸ್ವಂತ ಅನುಭವ. ನನ್ನ ವೈವಾಹಿಕ ಜೀವನದ 30ವರ್ಷಗಳಲ್ಲಿ ಮೊದಲ 10 ವರ್ಷ ಹೊರನಾಡ ಕನ್ನಡಿಗಳಾಗಿ ಕಳೆದಿದ್ದೇನೆ ; ಉಳಿದ ಇಪ್ಪತ್ತು ವರ್ಷವಿದೇಶಿ ಕನ್ನಡಿಗಳಾಗಿ ಕಳೆದಿದ್ದೇನೆ. ಆದರೆ ಅಷ್ಟೂ ವರ್ಷಗಳೂ ಕನ್ನಡದೊಂದಿಗಿನ ನನ್ನ ನಂಟು ಜಾಸ್ತಿಯಾಗಿದ್ದಲ್ಲದೇ ಸ್ವಭಾಷೆಯ ದೊಡ್ಡ ಸ್ನೇಹಿತರ ಬಳಗವನ್ನು, ವಿವಿಧ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶವನ್ನೂ ಈ ಜೀವನ ನನಗೆ ಒದಗಿಸಿ ನನ್ನನ್ನು ಅಪ್ಪಟ ಹೆಮ್ಮೆಯ ಕನ್ನಡಿಗಳನ್ನಾಗಿಸಿದೆ. ಅನ್ಯ ಭಾಷೆಯ ನೆಲದಲ್ಲಿ ಜೀವನ ಮಾಡಲು ಅರಂಭಿಸಿದಾಗ ಕಿವಿಯ ಮೇಲೆ ನಮ್ಮ ಭಾಷೆ ಬಿದ್ದರೆ — ಅನಾಯಾಸವಾಗಿ ಮುಖದಲ್ಲಿ ನಗು ಮೂಡುತ್ತದೆ, ಕೂಡಲೇ ತಿರುಗಿ ಕೇಳುತ್ತೇವೆ — "ನೀವು ಕನ್ನಡದವರಾ? ಯಾವ ಊರಿನವರು?" - ಹೀಗೆ ಸಂಭಾಷಣೆ ಆರಂಭವಾಗಿ ಅಜ್ಞಾತರ ನಡುವಿನ ಬಂಧವೂ ರೂಪುಗೊಳ್ಳುತ್ತದೆ. ಭಾಷೆ ನಮ್ಮನ್ನು ಹತ್ತಿರಕ್ಕೆ ತರುವ ಸೇತುವೆಯಂತೆ ಕೆಲಸ ಮಾಡುತ್ತದೆ. ಅದರ ಫಲವೇ ಭಾರತದ ಬೇರೆ ಬೇರೆ ಊರುಗಳಲ್ಲಿ, ಪ್ರಪಂಚದಾದ್ಯಂತ ಬೆಳೆಯುತ್ತಿರುವ ಕನ್ನಡ ಸಂಘಗಳು ಮತ್ತು ಸಂಘಟನೆಗಳು. ಹೊರನಾಡ ಮತ್ತು ಹೊರದೇಶದ ಕನ್ನಡಿಗರು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಅಸಾಧಾರಣ ಪಾತ್ರವಹಿಸಿದ್ದಾರೆ, ವಹಿಸುತ್ತಿದ್ದಾರೆ.
ಹೊರನಾಡ ಕನ್ನಡಿಗರು:-
ಭಾರತದ ಪುಣೆ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಅಹ್ಮದಾಬಾದ್ ಮುಂತಾದ ಕನ್ನಡೇತರ ಮಹಾನಗರಗಳಲ್ಲಿ ಕನ್ನಡಿಗರು ಸಂಘಟಿತರಾಗಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ಕನ್ನಡದ ಕಾಯಕವನ್ನು ಹಲವು ದಶಕಗಳಿಂದ ಮಾಡುತ್ತಿದ್ದಾರೆ. ಅವರ ಮಕ್ಕಳಿಗೆ ಕನ್ನಡ ಕಲಿಸುವ ಕನ್ನಡ ಶಾಲೆಗಳು, ಹಬ್ಬ ಹರಿದಿನಗಳಲ್ಲಿ ಆಯೋಜಿಸುವ ಕನ್ನಡ ಹಬ್ಬಗಳು, ನಾಟಕಗಳು, ಕಾವ್ಯಗೋಷ್ಠಿಗಳು — ಇವೆಲ್ಲ ಭಾಷೆಯನ್ನು ಉಳಿಸಲು, ಬೆಳೆಸಲು ಉತ್ತಮ ದಾರಿಗಳು. ಮುಂಬೈ ಮತ್ತು ದೆಹಲಿಯ ವಿಶ್ವ ವಿದ್ಯಾಲಯಗಳಲ್ಲಿರುವ ಕನ್ನಡ ಪೀಠ ಕನ್ನಡದ ಬಗೆಗೆ ಸಂಶೋಧನೆ ಮಾತ್ರವಲ್ಲದೆ ಅನೇಕ ಲೇಖಕರನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದೆ. ದೆಹಲಿ, ಮುಂಬೈ ಕನ್ನಡ ಸಂಘಗಳಂತೂ ತಮ್ಮ ವಿವಿಧ ಚಟುವಟಿಕೆಗಳ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಮುಂಚೂಣಿಯಲ್ಲಿ ನಿಂತಿವೆ. ದೆಹಲಿಯ ಕನ್ನಡ ಭವನ, ಮುಂಬೈ ಕನ್ನಡಿಗರ ಅನೇಕ ಸಾಂಸ್ಕೃತಿಕ ಕೇಂದ್ರಗಳು ಹಲವು ದಶಕಗಳಿಂದ ಕನ್ನಡ ಭಾಷೆ ಸಂಸ್ಕೃತಿಯು ಅನ್ಯ ಭಾಷೆಯ ನೆಲದಲ್ಲಿ ನೆಲೆಯೂರಲು ಕಾರಣವಾಗಿದೆ. ಪುಣೆಯ ಕನ್ನಡ ಸಂಘದ ಭಾಗವಾಗಿದ್ದ ನಾನು ಎಸ್. ಎಲ್. ಭೈರಪ್ಪನವರ ಸಂಪೂರ್ಣ ಸಾಹಿತ್ಯವನ್ನು ಅಲ್ಲಿನ ಗ್ರಂಥಾಲಯದಲ್ಲಿಯೇ ಓದಿದ್ದು !! - ಅನ್ಯ ನೆಲದಲ್ಲಿ ನಮ್ಮ ಭಾಷೆಯವರ ಗುಂಪು ಸಾಧ್ಯವಾಗಿಸಬಹುದಾದ ಕನ್ನಡಮಯ ಪರಿಸರಕ್ಕೆ ಇದೊಂದು ಚಿಕ್ಕ ಉದಾಹರಣೆ.
ವಿದೇಶಿ/ಅನಿವಾಸಿ ಕನ್ನಡಿಗರು:-
ಅಮೆರಿಕಾ, ಆಸ್ಟ್ರೇಲಿಯಾ, ದುಬೈ, ಮಲೇಶಿಯಾ, ಸಿಂಗಪೂರ್, ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳಲ್ಲಿ ಅನಿವಾಸಿ ಕನ್ನಡಿಗರು ಅನೇಕ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅವರ ಕಾರ್ಯಕ್ರಮಗಳಲ್ಲಿ “ಕನ್ನಡ ರಾಜ್ಯೋತ್ಸವ”, “ಯುಗಾದಿ”, “ದಸರಾ”, “ದೀಪಾವಳಿ” ಹೀಗೆ ಹಬ್ಬಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುತ್ತಿದ್ದಾರೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ನಡೆಯುವ ವಾರ್ಷಿಕ ಅಕ್ಕ (AKKA) , ನಾವಿಕ (NAVIKA) ಸಮ್ಮೇಳನಗಳಂತೂ ಕನ್ನಡದ ಕಲಾವಿದರಿಗೆ, ಸಾಹಿತಿಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಒದಗಿಸುತ್ತಾ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.
ನಾನಿರುವ ಮಸ್ಕತ್ತಿನಲ್ಲಿ ಕನ್ನಡ ಸಂಘ, ಓಂಕಾರ ಸಮಿತಿ, ಚಾಲುಕ್ಯ ಕೂಟ, ಬಸವ ಬಳಗ, ಮುಂತಾದ ವೇದಿಕೆಗಳ ಮೂಲಕ ಕನ್ನಡ ಚಟುವಟಿಕೆಗಳು ಅನೇಕ ವಿಧವಾಗಿ ನಡೆಯುತ್ತಿದೆ. ಈ ವೇದೀಕೆಗಳ ಮುಖಾಂತರ ರಾ. ಗಣೇಶ, ಗುರುರಾಜ ಕರ್ಜಗಿ, ಪ್ರಭಾತ್ ಕಲಾವಿದರು, ಸಿ ಅಶ್ವಥ್, ವಿಜಯಪ್ರಕಾಶ್, ಮೈಸೂರು ಮಹಾರಾಜರು, ಪಾವಗಡ ಪ್ರಕಾಶ ರಾವ್, ಬಿ. ಎಂ. ಹೆಗ್ಡೆ, ವಿಶ್ವೇಶ್ವರ ಭಟ್ - ಮುಂತಾದ ಕನ್ನಡದ ಹೆಸರಾಂತ ವ್ಯಕ್ತಿಗಳನ್ನು ಬೇಟಿಮಾಡುವ ಸೌಭಾಗ್ಯ ಇಲ್ಲಿನ ಕನ್ನಡಿಗರದ್ದಾಗಿದೆ.
ಇಲ್ಲೆಲ್ಲ ವಾರಾಂತ್ಯದ ಕನ್ನಡ ತರಗತಿಗಳ ಮೂಲಕ ಇಲ್ಲಿ ಬೆಳೆಯುವ ಮಕ್ಕಳಿಗೆ ಕನ್ನಡ ಓದಲು ಬರೆಯಲು ಕಲಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ “ವಾಟ್ಸಪ್ ಕನ್ನಡ ಗುಂಪುಗಳು”, “ಯೂಟ್ಯೂಬ್ ಕನ್ನಡ ಚಾನೆಲ್‌ಗಳು”, “ಆನ್‌ಲೈನ್ ಪಾಠಗಳು” ಅವರ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸುತ್ತಿವೆ. ನಮ್ಮ ಭಾಷೆಯ ಜನರನ್ನು ಒಂದುಗೂಡಿಸಲು ತಂತ್ರಜ್ಞಾನವೂ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಕೊರೋನಾ ಸಮಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಾಗಾಭರಣ ಅವರ ನೇತೃತ್ವದಲ್ಲಿ ವಿಶ್ವದಾದ್ಯಂತ ನಡೆಯುವ ಕನ್ನಡ ತರಗತಿಗಳ ಶಿಕ್ಷಕರನ್ನು ಒಂದು ವಾಟ್ಸಾಪ್ ಗುಂಪಿನ ಒಳಗಡೆ ತಂದಿದ್ದು ಒಂದು ದೊಡ್ಡ ಸಾಧನೆ. ಈ ಗುಂಪು ಈಗಲೂ ಕನ್ನಡ ಚಟುವಟಿಕೆಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಎಲ್ಲ ಕಡೆಯಲ್ಲಿನ ಕನ್ನಡ ಸಂಘಗಳು ಹೊರತರುವ ಈ-ಪತ್ರಿಕೆಗಳೂ ಈ ಗುಂಪಿನ ಮೂಲಕ ಪ್ರಸಾರವಾಗುತ್ತಿವೆ.
ನಡುನಾಡೆ ಇರಲಿ ಗಡಿನಾಡೇ ಇರಲಿ ಕನ್ನಡದ ಕಳೆಯ ಕೆಚ್ಛೆವು ಎನ್ನುವ ಕರ್ಕಿಯವರ ಸಾಲುಗಳ್ಳನ್ನು ಸಾಕಾರಗೊಳಿಸುತ್ತಾ ಈ ಚಟುವಟಿಕೆಗಳು ಹೊರನಾಡ ಕನ್ನಡಿಗರ ಮನದಲ್ಲಿ ‘ ನಾನು ಕನ್ನಡಿಗ’ ಎಂಬ ಭಾವನೆಯನ್ನು ಮೂಡಿಸುತ್ತವೆ ಮತ್ತು ಭಾಷೆಯನ್ನೂ ಬೆಳೆಸಲು ಅವರು ಮಾಡುವ ಈ ಪ್ರಯತ್ನಗಳು ಕರ್ನಾಟಕದಲ್ಲಿರುವ ಕನ್ನಡಿಗರಿಗೂ ಪ್ರೇರಣೆಯಾಗಿ ನಿಂತಿವೆ. ಭಾಷೆಯನ್ನು ಮಾತನಾಡುವುದರಿಂದಲೇ ಅಲ್ಲ, ಅದನ್ನು ಬದುಕುವುದರಿಂದ, ಹಂಚಿಕೊಳ್ಳುವುದರಿಂದ, ಮುಂದಿನ ಪೀಳಿಗೆಗೆ ನೀಡುವುದರಿಂದ ಮಾತ್ರ ಅದು ಜೀವಂತವಾಗಿರುತ್ತದೆ. ಹೊರನಾಡ ಮತ್ತು ಅನಿವಾಸಿ ಕನ್ನಡಿಗರ ಎಲ್ಲ ಪ್ರಯತ್ನಗಳೂ ಭಾಷೆಯನ್ನೂ ಬಲಗೊಳಿಸುವಲ್ಲಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.
ಲೇಖನ: ಸುಧಾ ಶಶಿಕಾಂತ್, ಮಸ್ಕತ್
![]() |
| Published in Udayavani Desiswara |

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ