ಶುಕ್ರವಾರ, ಜನವರಿ 30, 2026

ಕೌಲಾಲಂಪುರ ಕಥೆಗಳು

ಕಳೆದ ಇಪ್ಪತ್ತು ವರ್ಷಗಳ ವಿದೇಶದ ವಾಸದಲ್ಲಿ ಅನೇಕ ದೇಶಗಳನ್ನು ನಗರಗಳಿಗೆ ಪ್ರವಾಸ ಹೋಗುವ ಸಂಧರ್ಭಗಳು ನನಗೆ ಬಂದಿವೆ. ಅವುಗಳಲ್ಲಿ ಮಲೇಶಿಯಾ ದೇಶದ ರಾಜಧಾನಿ ಕೌಲಾಲಂಪುರ ಇತ್ತೀಚಿನದು ಮತ್ತು ವಿಶಿಷ್ಟವಾದದು. ಎಲ್ಲ ನಗರಗಳಂತೆ ಇದೊಂದು ಮಹಾನಗರ. ಅಲ್ಲೇನು ಹೊಸತು ಇರಲು ಸಾಧ್ಯ ಎನ್ನುವ ಅನ್ಯಮನಸ್ಕತೆಯಿಂದಲೇ ಹೋದರೂ ಈ ನಗರ ನಾವಿದ್ದ ಮೂರು ದಿನಗಳಲ್ಲಿ ನನ್ನ ಮೇಲೆ ವಿಶೇಷವಾದ ಮೋಡಿಯನ್ನೇ ಮಾಡಿತು. ಸ್ವಚ್ಚತೆ, ಹಸಿರಿನಿಂದ ಕೂಡಿದ ಪರಿಸರ, ವೈವಿಧ್ಯಮಯ ಸಂಸ್ಕತಿಯ ಜನರು, ಸುಂದರವಾದ ಮತ್ತು ಒಳ್ಳೆಯ ಗುಣಮಟ್ಟದ ರಸ್ತೆಗಳು, ನಗುಮೊಗದ ಸ್ಥಳೀಯ ಜನತೆ- ಇಲ್ಲಿನ ಪ್ರವಾಸವನ್ನು ಮೆಚ್ಚುವಂತೆ ಮಾಡುವ ಕೆಲವು ಆಂಶಗಳು. ಭಾರತಿಯರಿಗೆ ಉಚಿತ ಪ್ರವೇಶವಿರುವುದರಿಂದ ವೀಸಾ ಪಡೆಯುವ ಗೋಜು ಇಲ್ಲ. ಪ್ರಪಂಚದಲ್ಲಿ ವರ್ಷದಲ್ಲಿ ಅತಿ ಹೆಚ್ಚು ಜನರು ಸಂದರ್ಶಿಸುವ ನಗರಗಳಲ್ಲಿ ಒಂದಾಗಿರುವ ಈ ನಗರ ಮಲೇಷ್ಯಾ ನಿಜವಾದ ಏಷ್ಯಾ (Malaysia truly Asia) ಎನ್ನುವ ಸಾಲನ್ನು ಸಾರ್ಥಕಗೊಳಿಸುತ್ತದೆ.

ಸಂಸ್ಕೃತಿಗಳ ಮಿಶ್ರಣ:-
      ಚೀನಿ, ಮಾಲೆ ಮತ್ತು ಭಾರತೀಯ ಸಂಸ್ಕೃತಿಯ ಸುಂದರ ಮಿಲನದ ಪ್ರತೀಕದಂತಿರುವ ಈ ನಗರದಲ್ಲಿ ಈ ಎಲ್ಲ ಸಂಸ್ಕೃತಿ ಗಳ ಗುರುತನ್ನು ಕಾಣಬಹುದು. ನಗರದಲ್ಲಿರುವ  ಚೀನಿ ದೇವಸ್ಥಾನಗಳು ಶಾಂತಿಯ ಕೇಂದ್ರಗಳಾಗಿದ್ದು ನಿಜವಾಗಿ ಭೇಟಿನೀಡಬೇಕಾದ ಸ್ಥಳಗಳಾಗಿವೆ. ಸುಂದರವಾಗಿ ನಿರ್ಮಿತವಾದ ಅನೇಕ ಮಸೀದಿಗಳಿವೆ.

ಬಾತುಮಿ ಗುಹೆಗಳು:-
ಕೌಲಾಲಂಪುರ ನಗರ ಕೇಂದ್ರದ ಸಮೀಪದಲ್ಲಿರುವ ಈ ನೈಸರ್ಗಿಕ ಗುಹೆಗಳು ಇಲ್ಲಿನ ಹಿಂದೂ ದೇವಾಲಯಗಳ ಜಾಗವಾಗಿ ಮಾರ್ಪಟ್ಟಿವೆ. ಇಲ್ಲಿ ಕೆಲಸಕ್ಕಾಗಿ ಭಾರತದಿಂದ ಆಗಮಿಸಿದ ತಮಿಳರು ತಾವು ನಂಬಿದ ದೇವರಾದ ವೇಲಾಯುಧನನ್ನು ಈ ಗುಹೆಯಲ್ಲಿ ಸುಮಾರು 200 ವರ್ಷಗಳಷ್ಟು ಹಿಂದೆ ಸ್ಥಾಪಿಸಿ ಪೂಜಿಸಲು ಆರಂಭಿಸಿದರು. ಈಗಲೂ ಪ್ರತಿದಿನ ಪೂಜೆಗೊಳ್ಳಲ್ಪಡುವ ಇದು ಒಂದು ಯಾತ್ರಾಸ್ಥಳ ವಾಗಿಯೂ, ಪ್ರವಾಸೀ ತಾಣವಾಗಿಯೂ ಪ್ರಸಿದ್ಧವಾಗಿದೆ. ವರ್ಷದಲ್ಲಿ ಒಮ್ಮೆ ನಡೆಯುವ------- ಇಲ್ಲಿನ ವಾರ್ಷಿಕ ಅತ್ಯಂತ ಜನಪ್ರಿಯ ಉತ್ಸವ. ಇಲ್ಲಿನ ರಾಮಾಯಣದ ಗುಹೆಯಲ್ಲಿ ರಾಮಾಯಣದ ಸಂಪೂರ್ಣ ಕಥೆಯನ್ನು ಮೂರ್ತಿಗಳಲ್ಲಿ ಮನಮೋಹಕವಾಗಿ ಕಟ್ಟಿಟ್ಟಿದ್ದಾರೆ. ಇಲ್ಲೊಂದು ಹನುಮಾನ್ ದೇವಾಲಯವೂ ಇದೆ. ಹಸಿರಿನಿಂದ ತುಂಬಿದ ಈ ಜಾಗದಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ಈ ದೇವಾಲಯಗಳನ್ನು ನಿರ್ಮಿಸಿರುವುದು ಅದರ ಸೌಂದರ್ಯವನ್ನು ಹೆಚ್ಚಿಸಿದೆ.
       ಕೌಲಾಲಂಪುರ ನಗರ ಕೇಂದ್ರದಲ್ಲಿಯೂ ಭಾರತೀಯರ ಪ್ರಾಬಲ್ಯವನ್ನು ಕಾಣಬಹುದು. ನಗರದಲ್ಲಿಯೂ ಅನೇಕ ಜನಪ್ರಿಯ ದೇವಸ್ಥಾನಗಳಿವೆ. ಲಿಟಲ್ ಇಂಡಿಯಾ ಎಂದು ಕರೆಯಲ್ಪಡುವ ರಸ್ತೆಯಂತೂ ಭಾರತದ ಯಾವುದೋ ನಗರವನ್ನು ಸಂದರ್ಶಿಸಿದಂತೆ ಅನಿಸುತ್ತದೆ. ಇಲ್ಲಿ ಅನೇಕ ಭಾರತೀಯರು ಮನೆಗಳನ್ನು ಖರೀದಿಸಿ ಅಲ್ಲಿಯೇ ದೀರ್ಘಕಾಲದ ವೀಸಾವನ್ನು ಪಡೆದು ನೆಲಸಿಯೂ ಇದ್ದಾರೆ.

ಆಧುನಿಕ ಕೌಲಾಲಂಪುರ:-
ಕೌಲಾಲಂಪುರದ ಮತ್ತೊಂದು ಮುಖವೆಂದರೆ ಇದರ ಆಧುನಿಕತೆ. ಉನ್ನತ ಕಟ್ಟಡಗಳು, ವಿಶಾಲ ರಸ್ತೆಗಳು, ವೇಗದ ಸಾರಿಗೆ ವ್ಯವಸ್ಥೆ, ಮಿಂಚುವ ಶಾಪಿಂಗ್ ಮಾಲ್‌ಗಳು. ಆದರೆ ಇಲ್ಲಿನ ವಿಶಿಷ್ಟತೆ ಎಂದರೆ ಈ ಎಲ್ಲ ಆಧುನಿಕತೆಯ ಮಧ್ಯೆಯೂ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಸರ್ಕಾರ ನೀಡಿರುವ ಆದ್ಯತೆ.

ನಗರದ ಹೃದಯ ಭಾಗದಲ್ಲಿರುವ ಪ್ರಸಿದ್ಧ ಪೆಟ್ರೋನಾಸ್ ಟವರ್ಸ್ (Petronas Twin Towers) ಕೌಲಾಲಂಪುರದ ಹೆಮ್ಮೆಯ ಚಿಹ್ನೆ. ಈ ಟವರ್‌ಗಳು ರಾತ್ರಿ ಹೊತ್ತಿನಲ್ಲಿ ಬೆಳಕಿನ ಹೊಳಪಿನಲ್ಲಿ ಮಿಂಚುತ್ತಾ ನೋಟಕ್ಕೆ ಅಸಾಧಾರಣ ಸೌಂದರ್ಯ ನೀಡುತ್ತವೆ. ಇವುಗಳ ಪಕ್ಕದಲ್ಲಿಯೇ ಸುಂದರವಾದ ಕೆಎಲ್‌ಸಿಸಿ ಪಾರ್ಕ್ (KLCC Park) ಇದೆ, ಇದು ಸ್ಥಳೀಯರು ಹಾಗೂ ಪ್ರವಾಸಿಗರು ವಿಶ್ರಾಂತಿ ಪಡೆಯಲು, ನಡಿಗೆ ಹೋಗಲು ಅತ್ಯಂತ ಇಷ್ಟಪಡುವ ಸ್ಥಳ.

ನಗರದ ಮೋನೊರೈಲ್ ಮತ್ತು ಮೆಟ್ರೋ ವ್ಯವಸ್ಥೆ ಅತ್ಯಂತ ಸುಗಮವಾಗಿದ್ದು, ಟ್ರಾಫಿಕ್ ಜಾಮಿನಿಂದ ದೂರವಾಗಲು ಸಹಾಯಮಾಡುತ್ತದೆ. ಈ ನಗರದಲ್ಲಿನ ಶಾಪಿಂಗ್ ಮಾಲ್‌ಗಳು—ಪೆವಿಲಿಯನ್ ಮಾಲ್, ಸುನ್‌ವೇ ಪಿರಮಿಡ್, ಮಿಡ್ ವ್ಯಾಲಿ ಮೆಗಾ ಮಾಲ್ ಮುಂತಾದವು—ಆಧುನಿಕ ಜೀವನಶೈಲಿಯ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತವೆ.

ಆಹಾರದ ವಿಷಯದಲ್ಲಿಯೂ ಕೌಲಾಲಂಪುರ ಅಚ್ಚರಿಯುಂಟುಮಾಡುತ್ತದೆ. ಚೀನೀ, ಮಾಲೆ, ಭಾರತೀಯ, ಪಾಶ್ಚಾತ್ಯ—ಎಲ್ಲ ಸಂಸ್ಕೃತಿಯ ಊಟಗಳನ್ನು ಇಲ್ಲಿ ರುಚಿಸಬಹುದು. ಬೀದಿ ಆಹಾರದಿಂದ ಹಿಡಿದು ಐದು ನಕ್ಷತ್ರದ ರೆಸ್ಟೋರೆಂಟ್‌ಗಳ ತನಕ ಪ್ರತಿಯೊಂದು ಹಂತದಲ್ಲಿಯೂ ವೈವಿಧ್ಯಮಯ ಆಯ್ಕೆಗಳಿವೆ. ಜಾಲನ್ ಅಲೋರ್- ಎನ್ನುವ ತಿನಿಸುಗಳ ರಸ್ತೆ ಬಹಳ ಪ್ರಸಿದ್ಧವಾದ ರಸ್ತೆಯಲ್ಲಿ ರಾತ್ರಿ ನಡೆಯುವುದೇ ಒಂದು ಅನುಭವ.ಕಿಕ್ಕಿರಿದ ಜನರಿಂದ ಕೂಡಿರುವ ಈ ಗಲ್ಲಿಯ ಇಕ್ಕೆಲಗಳಲ್ಲಿ ಎಲ್ಲ ರೀತಿಯ ಮಾಂಸಾಹಾರ ಮಾರುವ ಅಂಗಡಿಗಳು, ತಿನ್ನುವ ಜನಗಳು! 

ಗಗನ ಚುಂಬಿ ಕಟ್ಟಡಗಳ ಜಗಮಗಿಸುವ ಕೌಲಾಲಂಪುರದ ರಾತ್ರಿಯ ನೋಟ ಬಹಳ ಸುಂದರವಾಗಿರುತ್ತದೆ. ಆದ್ದರಿಂದಲೇ ಇಲ್ಲಿನ ಗಗನಚುಂಬಿ ಕಟ್ಟಡಗಳ ಮೇಲ್ಛಾವಣಿಯಲ್ಲಿನ ಹೋಟೆಲುಗಳು ಬಹಳ ಪ್ರಸಿದ್ಧ. ಪೆಟ್ರೋನಾಸ್ ಗೋಪುರದ ನೋಟವಿರುವ ಇಂತಹ ಹೋಟೆಲುಗಳಲ್ಲಿ ಜಾಗ ಕಾಯ್ದಿರಿಸಬೇಕಾಗುತ್ತದೆ. ಇಂದಿನ ಸಾಮಾಜಿಕ ಮಾಧ್ಯಮದ ರೀಲುಗಳ ಸಮಯದಲ್ಲಿ ಈ ಹೋಟೆಲುಗಳಲ್ಲಿ ಜಾಗ ಕಾಯ್ದಿರಿಸಿಕೊಂಡು ರೀಲು ಮಾಡಲೆಂದೇ ಜನರು ಬರುತ್ತಾರೆ !!!

ನಿದ್ರಿಸದ ನಗರ: -

ಪಬ್ ಸಂಸೃತಿಯ ಊರಾದ ಈ.ನಗರದ ತುಂಬೆಲ್ಲ ಪಬ್ಬುಗಳನ್ನು ಕಾಣಬಹುದು. ಮೋಜಿಗೆಂದೇ ಇಲ್ಲಿಗೆ ಬರುವ ಜನರು ರಾತ್ರಿಯಿಡೀ ಪಬ್ ನಿಂದ ಪಬ್ಬಿಗೆ ಸುತ್ತುತ್ತಾ ಮೋಜು ಮಾಡುತ್ತಾರೆ. ಮಸಾಜು ಮಾಡುವವರು, ಬೆಳೆವೆಣ್ಣುಗಳು- ಎಲ್ಲವೂ ಇಲ್ಲಿ ಅತ್ಯಂತ ಸುಲಭದಲ್ಲಿ ದೊರೆಯುತ್ತದೆ. ಇಲ್ಲಿನ ಬಹುತೇಕ ಮಸಾಜು ಕೇಂದ್ರಗಳು ರಾತ್ರಿಯಿಡೀ ತೆರೆದಿರುತ್ತದಂತೆ


ಕೌಲಾಲಂಪುರದಲ್ಲಿ ದಿನ ಕಳೆದರೆ ಅದು ಕೇವಲ ಪ್ರವಾಸವಲ್ಲ, ಅದು ಒಂದು ಅನುಭವ. ಸಂಸ್ಕೃತಿ, ಪ್ರಕೃತಿ, ಆಧುನಿಕತೆ, ಮನುಷ್ಯತ್ವ—ಎಲ್ಲವೂ ಸಮ್ಮಿಲನಗೊಂಡಿರುವ ಈ ನಗರ ಒಮ್ಮೆ ಭೇಟಿ ಮಾಡಬೇಕಾದ ಜಾಗ









ಗುರುವಾರ, ಜನವರಿ 29, 2026

ಮಸ್ಕತ್ತಿನಲ್ಲಿನಿರೂಪಕಿಯಾಗಿ ನಾನು:-



ಬದುಕೆಂಬ ಜಟಕಾ ಬಂಡಿ ನಮ್ಮನ್ನು ಇಪ್ಪತ್ತು ವರ್ಷಗಳ ಹಿಂದೆ ತಂದು ಹಾಕಿದ್ದು ಮಸ್ಕತ್ತೆಂಬ ಸುಂದರ ಊರಿಗೆ. ಯಾವುದೇ ನಿರೀಕ್ಷೆ ಇಲ್ಲದೇ ಕೇವಲ ಕುತೂಹಲದಿಂದ ಇನ್ನೊಂದು ದೇಶ ನೋಡೋಣ ಎಂದು ಈ ಊರಿಗೆ ಬಂದ ನಾವು ಇಲ್ಲಿಯೇ ಉಳಿದುಕೊಂಡೆವು. ಆಗ 6ವರ್ಷದ ಮಗಳ ತಾಯಿಯಾಗಿದ್ದ ನಾನು ಈಗ ಮಗಳ ಮದುವೆ ಮುಗಿಸಿ ಜೀವನದ ಇನ್ನೊಂದು ಹಂತದಲ್ಲಿದ್ದೇನೆ.

ಹಿಂದಿರುಗಿ ನೋಡಿದಾಗ ಮಸ್ಕತ್ ನಗರ ನನಗೆ ಎಷ್ಟೊಂದು ಸುಂದರ ನೆನಪುಗಳನ್ನು ಕೊಟ್ಟಿದೆಯಲ್ಲಪ್ಪ ಅನಿಸುತ್ತದೆ. ಸ್ನಾತಕೋತ್ತರ ಕಾನೂನು ಪಧವಿಧರೆಯಾಗಿ ನಾನು ಓದಿದ ವಿಷಯದಲ್ಲಿ ಇಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂದು ನನ್ನದೊಂದು ಬಯೋಡಾಟ ಮಾಡಲು ಹೆಣಗುತ್ತಲೇ ಇಲ್ಲಿನ ಕನ್ನಡ ಸಂಘದ ಸದಸ್ಯರಾದೆವು. ಕನ್ನಡ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಮಗಳನ್ನು ಸೇರಿಸಿಕೊಂಡು ಭಾಗವಹಿಸಲು ಆರಂಭಿಸಿದೆ. ಅದು ನನ್ನನ್ನು ಈ ಸಂಘದ ಒಳಗೆ ಕರೆದೊಯ್ದಿತು.
ಕನ್ನಡ ಸಂಘದ ವೇದಿಕೆಯಲ್ಲಿ ನೃತ್ಯ, ಶಾಸ್ತ್ರೀಯ ನೃತ್ಯ , ಅಡುಗೆ ಸ್ಪರ್ಧೆಯಲ್ಲಿ ಗೆಲುವು, ಕನ್ನಡ ಶಿಕ್ಸಕಿಯಾಗಿ ನನ್ನ ಸೇರ್ಪಡೆ - ಹೀಗೆ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚುತ್ತಾ ಹೋಯಿತು.

ಒಮ್ಮೆ 2012 ರಲ್ಲಿ ಕರ್ನಾಟಕ ಸಂಘ ಆಯೋಜಿಸಿದ ನಾಟಕ ಕಾರ್ಯಕ್ರಮದ ನಿರೂಪಕಿಯ ಜವಾಬ್ದಾರಿ ನನ್ನ ಹೆಗಲೇರಿತು. ನಿರೂಪಕಿಯಾಗಿ  ನನಗೆ ದೊರೆತ ಮೆಚ್ಚುಗೆ ಮತ್ತು ಹೆಚ್ಚಿದ ಆತ್ಮವಿಶ್ವಾಸದಿಂದ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಮಸ್ಕತ್ ಭೇಟಿಯ ಕಾರ್ಯಕ್ರಮದ ನಿರೂಪಣೆಯನ್ನು ಒಪ್ಪಿಕೊಂಡೆ. ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ನಿಜವಾಗಿ ಒಂದು ಧನ್ಯತೆಯ ಭಾವವನ್ನು ತಂದಿತು. ಮುಂದೆ ಕನ್ನಡ ಸಂಘದ ಯುಗಾದಿ ಕಾರ್ಯಕ್ರಮ, ನಾಡಹಬ್ಬ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಓಂಕಾರ ಸಮಿತಿಯ ಜ್ಞಾನಾಮೃತ ಕಾರ್ಯಕ್ರಮದ ಶ್ರೀ ಗುರುರಾಜ ಕರ್ಜಗಿ ಮತ್ತು ಪಾವಗಡ ಪ್ರಕಾಶ್ ರಾವ್ ಅವರ ಕಾರ್ಯಕ್ರಮಗಳ ನಿರೂಪಣೆ. ಕಾರ್ಯಕ್ರಮದ ನಿರೂಪಕಿಯಾಗಿ ಅಷ್ಟು ದೊಡ್ಡ ವಿದ್ವಾಂಸರ ಹತ್ತಿರದ ಒಡನಾಟ ಒಂದು ಒಳ್ಳೆಯ ಅನುಭವ. ದೊಡ್ಡ ವಿದ್ವಾಂಸರ ಕಾರ್ಯಕ್ರಮವನ್ನು ನಿರೂಪಿಸಲು ಅವರ ಬಗೆಗೆ ನಾವು ಮಾಡುವ ಅಧ್ಯಯನ ನಮ್ಮ ಜ್ಞಾನವೃದ್ಧಿಗೆ ಕಾರಣವಾಗುವುದು ಒಂದು ಲಾಭ. ಪ್ರಕಾಶ್ ರಾವ್ ಅವರಿಂದ ಮೆಚ್ಚುಗೆ ಗಳಿಸಿದ್ದು ನನ್ನ ನಿರೂಪಣಾ ಅನುಭವಗಳ ಅತ್ಯುತ್ತಮ ಉಡುಗೊರೆ.

ಕನ್ನಡ ವಿದ್ಯಾರ್ಥಿಗಳಿಂದ ನಿರೂಪಣೆ:-

ಮಸ್ಕತ್ ಕನ್ನಡ ತರಗತಿಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಗಳನ್ನು ನಿರೂಪಣೆ ಮಾಡಿಸಿದ್ದು ನನ್ನ ಇಲ್ಲಿನ ಕಾರ್ಯಕ್ರಮ ನಿರೂಪಣೆಗಳ ಇನ್ನೊಂದು ಗರಿ.  ಇಲ್ಲಿ ತಮ್ಮ ಮಾತೃಭಾಷೆಯನ್ನು ಓದಲು ಬರೆಯಲು ಕಲಿಯುತ್ತಿರುವ ಮಕ್ಕಳು ಕನ್ನಡದಲ್ಲಿ ನಿರೂಪಣೆ ಮಾಡುವುದು ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಕನ್ನಡ ಸಂಘದ ನಾಡಹಬ್ಬ ದಸರಾದ ಕಾರ್ಯಕ್ರಮವನ್ನು ನನ್ನ ವಿದ್ಯಾರ್ಥಿಗಳಾದ ಶಿಶಿರ ಮತ್ತು ಪ್ರೀತಿ ಸುಂದರವಾಗಿ ನಿರೂಪಿಸಿ ಎಲ್ಲರ ಮೆಚ್ಚಗೆ ಗಳಿಸಿದ್ದು ಒಂದು ಸವನೆನಪು. ಕಳೆದ ಹತ್ತು ವರ್ಷಗಳಿಂದ ಮಸ್ಕತ್ ಕನ್ನಡ ಶಾಲೆಯ ವಿದ್ಯಾರ್ಥಿಗಳೇ   ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ.