ಗುರುವಾರ, ಜನವರಿ 29, 2026
ಮಸ್ಕತ್ತಿನಲ್ಲಿನಿರೂಪಕಿಯಾಗಿ ನಾನು:-
ಬದುಕೆಂಬ ಜಟಕಾ ಬಂಡಿ ನಮ್ಮನ್ನು ಇಪ್ಪತ್ತು ವರ್ಷಗಳ ಹಿಂದೆ ತಂದು ಹಾಕಿದ್ದು ಮಸ್ಕತ್ತೆಂಬ ಸುಂದರ ಊರಿಗೆ. ಯಾವುದೇ ನಿರೀಕ್ಷೆ ಇಲ್ಲದೇ ಕೇವಲ ಕುತೂಹಲದಿಂದ ಇನ್ನೊಂದು ದೇಶ ನೋಡೋಣ ಎಂದು ಈ ಊರಿಗೆ ಬಂದ ನಾವು ಇಲ್ಲಿಯೇ ಉಳಿದುಕೊಂಡೆವು. ಆಗ 6ವರ್ಷದ ಮಗಳ ತಾಯಿಯಾಗಿದ್ದ ನಾನು ಈಗ ಮಗಳ ಮದುವೆ ಮುಗಿಸಿ ಜೀವನದ ಇನ್ನೊಂದು ಹಂತದಲ್ಲಿದ್ದೇನೆ.
ಹಿಂದಿರುಗಿ ನೋಡಿದಾಗ ಮಸ್ಕತ್ ನಗರ ನನಗೆ ಎಷ್ಟೊಂದು ಸುಂದರ ನೆನಪುಗಳನ್ನು ಕೊಟ್ಟಿದೆಯಲ್ಲಪ್ಪ ಅನಿಸುತ್ತದೆ. ಸ್ನಾತಕೋತ್ತರ ಕಾನೂನು ಪಧವಿಧರೆಯಾಗಿ ನಾನು ಓದಿದ ವಿಷಯದಲ್ಲಿ ಇಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂದು ನನ್ನದೊಂದು ಬಯೋಡಾಟ ಮಾಡಲು ಹೆಣಗುತ್ತಲೇ ಇಲ್ಲಿನ ಕನ್ನಡ ಸಂಘದ ಸದಸ್ಯರಾದೆವು. ಕನ್ನಡ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಗಳನ್ನು ಸೇರಿಸಿಕೊಂಡು ಭಾಗವಹಿಸಲು ಆರಂಭಿಸಿದೆ. ಅದು ನನ್ನನ್ನು ಈ ಸಂಘದ ಒಳಗೆ ಕರೆದೊಯ್ದಿತು.
ಕನ್ನಡ ಸಂಘದ ವೇದಿಕೆಯಲ್ಲಿ ನೃತ್ಯ, ಶಾಸ್ತ್ರೀಯ ನೃತ್ಯ , ಅಡುಗೆ ಸ್ಪರ್ಧೆಯಲ್ಲಿ ಗೆಲುವು, ಕನ್ನಡ ಶಿಕ್ಸಕಿಯಾಗಿ ನನ್ನ ಸೇರ್ಪಡೆ - ಹೀಗೆ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚುತ್ತಾ ಹೋಯಿತು.
ಒಮ್ಮೆ 2012 ರಲ್ಲಿ ಕರ್ನಾಟಕ ಸಂಘ ಆಯೋಜಿಸಿದ ನಾಟಕ ಕಾರ್ಯಕ್ರಮದ ನಿರೂಪಕಿಯ ಜವಾಬ್ದಾರಿ ನನ್ನ ಹೆಗಲೇರಿತು. ನಿರೂಪಕಿಯಾಗಿ ನನಗೆ ದೊರೆತ ಮೆಚ್ಚುಗೆ ಮತ್ತು ಹೆಚ್ಚಿದ ಆತ್ಮವಿಶ್ವಾಸದಿಂದ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಮಸ್ಕತ್ ಭೇಟಿಯ ಕಾರ್ಯಕ್ರಮದ ನಿರೂಪಣೆಯನ್ನು ಒಪ್ಪಿಕೊಂಡೆ. ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ನಿಜವಾಗಿ ಒಂದು ಧನ್ಯತೆಯ ಭಾವವನ್ನು ತಂದಿತು. ಮುಂದೆ ಕನ್ನಡ ಸಂಘದ ಯುಗಾದಿ ಕಾರ್ಯಕ್ರಮ, ನಾಡಹಬ್ಬ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಓಂಕಾರ ಸಮಿತಿಯ ಜ್ಞಾನಾಮೃತ ಕಾರ್ಯಕ್ರಮದ ಶ್ರೀ ಗುರುರಾಜ ಕರ್ಜಗಿ ಮತ್ತು ಪಾವಗಡ ಪ್ರಕಾಶ್ ರಾವ್ ಅವರ ಕಾರ್ಯಕ್ರಮಗಳ ನಿರೂಪಣೆ. ಕಾರ್ಯಕ್ರಮದ ನಿರೂಪಕಿಯಾಗಿ ಅಷ್ಟು ದೊಡ್ಡ ವಿದ್ವಾಂಸರ ಹತ್ತಿರದ ಒಡನಾಟ ಒಂದು ಒಳ್ಳೆಯ ಅನುಭವ. ದೊಡ್ಡ ವಿದ್ವಾಂಸರ ಕಾರ್ಯಕ್ರಮವನ್ನು ನಿರೂಪಿಸಲು ಅವರ ಬಗೆಗೆ ನಾವು ಮಾಡುವ ಅಧ್ಯಯನ ನಮ್ಮ ಜ್ಞಾನವೃದ್ಧಿಗೆ ಕಾರಣವಾಗುವುದು ಒಂದು ಲಾಭ. ಪ್ರಕಾಶ್ ರಾವ್ ಅವರಿಂದ ಮೆಚ್ಚುಗೆ ಗಳಿಸಿದ್ದು ನನ್ನ ನಿರೂಪಣಾ ಅನುಭವಗಳ ಅತ್ಯುತ್ತಮ ಉಡುಗೊರೆ.
ಕನ್ನಡ ವಿದ್ಯಾರ್ಥಿಗಳಿಂದ ನಿರೂಪಣೆ:-
ಮಸ್ಕತ್ ಕನ್ನಡ ತರಗತಿಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಗಳನ್ನು ನಿರೂಪಣೆ ಮಾಡಿಸಿದ್ದು ನನ್ನ ಇಲ್ಲಿನ ಕಾರ್ಯಕ್ರಮ ನಿರೂಪಣೆಗಳ ಇನ್ನೊಂದು ಗರಿ. ಇಲ್ಲಿ ತಮ್ಮ ಮಾತೃಭಾಷೆಯನ್ನು ಓದಲು ಬರೆಯಲು ಕಲಿಯುತ್ತಿರುವ ಮಕ್ಕಳು ಕನ್ನಡದಲ್ಲಿ ನಿರೂಪಣೆ ಮಾಡುವುದು ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಕನ್ನಡ ಸಂಘದ ನಾಡಹಬ್ಬ ದಸರಾದ ಕಾರ್ಯಕ್ರಮವನ್ನು ನನ್ನ ವಿದ್ಯಾರ್ಥಿಗಳಾದ ಶಿಶಿರ ಮತ್ತು ಪ್ರೀತಿ ಸುಂದರವಾಗಿ ನಿರೂಪಿಸಿ ಎಲ್ಲರ ಮೆಚ್ಚಗೆ ಗಳಿಸಿದ್ದು ಒಂದು ಸವನೆನಪು. ಕಳೆದ ಹತ್ತು ವರ್ಷಗಳಿಂದ ಮಸ್ಕತ್ ಕನ್ನಡ ಶಾಲೆಯ ವಿದ್ಯಾರ್ಥಿಗಳೇ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ