ಕಳೆದ ಇಪ್ಪತ್ತು ವರ್ಷಗಳ ವಿದೇಶದ ವಾಸದಲ್ಲಿ ಅನೇಕ ದೇಶಗಳನ್ನು ನಗರಗಳಿಗೆ ಪ್ರವಾಸ ಹೋಗುವ ಸಂಧರ್ಭಗಳು ನನಗೆ ಬಂದಿವೆ. ಅವುಗಳಲ್ಲಿ ಮಲೇಶಿಯಾ ದೇಶದ ರಾಜಧಾನಿ ಕೌಲಾಲಂಪುರ ಇತ್ತೀಚಿನದು ಮತ್ತು ವಿಶಿಷ್ಟವಾದದು. ಎಲ್ಲ ನಗರಗಳಂತೆ ಇದೊಂದು ಮಹಾನಗರ. ಅಲ್ಲೇನು ಹೊಸತು ಇರಲು ಸಾಧ್ಯ ಎನ್ನುವ ಅನ್ಯಮನಸ್ಕತೆಯಿಂದಲೇ ಹೋದರೂ ಈ ನಗರ ನಾವಿದ್ದ ಮೂರು ದಿನಗಳಲ್ಲಿ ನನ್ನ ಮೇಲೆ ವಿಶೇಷವಾದ ಮೋಡಿಯನ್ನೇ ಮಾಡಿತು. ಸ್ವಚ್ಚತೆ, ಹಸಿರಿನಿಂದ ಕೂಡಿದ ಪರಿಸರ, ವೈವಿಧ್ಯಮಯ ಸಂಸ್ಕತಿಯ ಜನರು, ಸುಂದರವಾದ ಮತ್ತು ಒಳ್ಳೆಯ ಗುಣಮಟ್ಟದ ರಸ್ತೆಗಳು, ನಗುಮೊಗದ ಸ್ಥಳೀಯ ಜನತೆ- ಇಲ್ಲಿನ ಪ್ರವಾಸವನ್ನು ಮೆಚ್ಚುವಂತೆ ಮಾಡುವ ಕೆಲವು ಆಂಶಗಳು. ಭಾರತಿಯರಿಗೆ ಉಚಿತ ಪ್ರವೇಶವಿರುವುದರಿಂದ ವೀಸಾ ಪಡೆಯುವ ಗೋಜು ಇಲ್ಲ. ಪ್ರಪಂಚದಲ್ಲಿ ವರ್ಷದಲ್ಲಿ ಅತಿ ಹೆಚ್ಚು ಜನರು ಸಂದರ್ಶಿಸುವ ನಗರಗಳಲ್ಲಿ ಒಂದಾಗಿರುವ ಈ ನಗರ ಮಲೇಷ್ಯಾ ನಿಜವಾದ ಏಷ್ಯಾ (Malaysia truly Asia) ಎನ್ನುವ ಸಾಲನ್ನು ಸಾರ್ಥಕಗೊಳಿಸುತ್ತದೆ.
ಸಂಸ್ಕೃತಿಗಳ ಮಿಶ್ರಣ:-
ಚೀನಿ, ಮಾಲೆ ಮತ್ತು ಭಾರತೀಯ ಸಂಸ್ಕೃತಿಯ ಸುಂದರ ಮಿಲನದ ಪ್ರತೀಕದಂತಿರುವ ಈ ನಗರದಲ್ಲಿ ಈ ಎಲ್ಲ ಸಂಸ್ಕೃತಿ ಗಳ ಗುರುತನ್ನು ಕಾಣಬಹುದು. ನಗರದಲ್ಲಿರುವ ಚೀನಿ ದೇವಸ್ಥಾನಗಳು ಶಾಂತಿಯ ಕೇಂದ್ರಗಳಾಗಿದ್ದು ನಿಜವಾಗಿ ಭೇಟಿನೀಡಬೇಕಾದ ಸ್ಥಳಗಳಾಗಿವೆ. ಸುಂದರವಾಗಿ ನಿರ್ಮಿತವಾದ ಅನೇಕ ಮಸೀದಿಗಳಿವೆ.
ಬಾತುಮಿ ಗುಹೆಗಳು:-
ಕೌಲಾಲಂಪುರ ನಗರ ಕೇಂದ್ರದ ಸಮೀಪದಲ್ಲಿರುವ ಈ ನೈಸರ್ಗಿಕ ಗುಹೆಗಳು ಇಲ್ಲಿನ ಹಿಂದೂ ದೇವಾಲಯಗಳ ಜಾಗವಾಗಿ ಮಾರ್ಪಟ್ಟಿವೆ. ಇಲ್ಲಿ ಕೆಲಸಕ್ಕಾಗಿ ಭಾರತದಿಂದ ಆಗಮಿಸಿದ ತಮಿಳರು ತಾವು ನಂಬಿದ ದೇವರಾದ ವೇಲಾಯುಧನನ್ನು ಈ ಗುಹೆಯಲ್ಲಿ ಸುಮಾರು 200 ವರ್ಷಗಳಷ್ಟು ಹಿಂದೆ ಸ್ಥಾಪಿಸಿ ಪೂಜಿಸಲು ಆರಂಭಿಸಿದರು. ಈಗಲೂ ಪ್ರತಿದಿನ ಪೂಜೆಗೊಳ್ಳಲ್ಪಡುವ ಇದು ಒಂದು ಯಾತ್ರಾಸ್ಥಳ ವಾಗಿಯೂ, ಪ್ರವಾಸೀ ತಾಣವಾಗಿಯೂ ಪ್ರಸಿದ್ಧವಾಗಿದೆ. ವರ್ಷದಲ್ಲಿ ಒಮ್ಮೆ ನಡೆಯುವ------- ಇಲ್ಲಿನ ವಾರ್ಷಿಕ ಅತ್ಯಂತ ಜನಪ್ರಿಯ ಉತ್ಸವ. ಇಲ್ಲಿನ ರಾಮಾಯಣದ ಗುಹೆಯಲ್ಲಿ ರಾಮಾಯಣದ ಸಂಪೂರ್ಣ ಕಥೆಯನ್ನು ಮೂರ್ತಿಗಳಲ್ಲಿ ಮನಮೋಹಕವಾಗಿ ಕಟ್ಟಿಟ್ಟಿದ್ದಾರೆ. ಇಲ್ಲೊಂದು ಹನುಮಾನ್ ದೇವಾಲಯವೂ ಇದೆ. ಹಸಿರಿನಿಂದ ತುಂಬಿದ ಈ ಜಾಗದಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ಈ ದೇವಾಲಯಗಳನ್ನು ನಿರ್ಮಿಸಿರುವುದು ಅದರ ಸೌಂದರ್ಯವನ್ನು ಹೆಚ್ಚಿಸಿದೆ.
ಕೌಲಾಲಂಪುರ ನಗರ ಕೇಂದ್ರದಲ್ಲಿಯೂ ಭಾರತೀಯರ ಪ್ರಾಬಲ್ಯವನ್ನು ಕಾಣಬಹುದು. ನಗರದಲ್ಲಿಯೂ ಅನೇಕ ಜನಪ್ರಿಯ ದೇವಸ್ಥಾನಗಳಿವೆ. ಲಿಟಲ್ ಇಂಡಿಯಾ ಎಂದು ಕರೆಯಲ್ಪಡುವ ರಸ್ತೆಯಂತೂ ಭಾರತದ ಯಾವುದೋ ನಗರವನ್ನು ಸಂದರ್ಶಿಸಿದಂತೆ ಅನಿಸುತ್ತದೆ. ಇಲ್ಲಿ ಅನೇಕ ಭಾರತೀಯರು ಮನೆಗಳನ್ನು ಖರೀದಿಸಿ ಅಲ್ಲಿಯೇ ದೀರ್ಘಕಾಲದ ವೀಸಾವನ್ನು ಪಡೆದು ನೆಲಸಿಯೂ ಇದ್ದಾರೆ.
ಆಧುನಿಕ ಕೌಲಾಲಂಪುರ:-
ಕೌಲಾಲಂಪುರದ ಮತ್ತೊಂದು ಮುಖವೆಂದರೆ ಇದರ ಆಧುನಿಕತೆ. ಉನ್ನತ ಕಟ್ಟಡಗಳು, ವಿಶಾಲ ರಸ್ತೆಗಳು, ವೇಗದ ಸಾರಿಗೆ ವ್ಯವಸ್ಥೆ, ಮಿಂಚುವ ಶಾಪಿಂಗ್ ಮಾಲ್ಗಳು. ಆದರೆ ಇಲ್ಲಿನ ವಿಶಿಷ್ಟತೆ ಎಂದರೆ ಈ ಎಲ್ಲ ಆಧುನಿಕತೆಯ ಮಧ್ಯೆಯೂ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಸರ್ಕಾರ ನೀಡಿರುವ ಆದ್ಯತೆ.
ನಗರದ ಹೃದಯ ಭಾಗದಲ್ಲಿರುವ ಪ್ರಸಿದ್ಧ ಪೆಟ್ರೋನಾಸ್ ಟವರ್ಸ್ (Petronas Twin Towers) ಕೌಲಾಲಂಪುರದ ಹೆಮ್ಮೆಯ ಚಿಹ್ನೆ. ಈ ಟವರ್ಗಳು ರಾತ್ರಿ ಹೊತ್ತಿನಲ್ಲಿ ಬೆಳಕಿನ ಹೊಳಪಿನಲ್ಲಿ ಮಿಂಚುತ್ತಾ ನೋಟಕ್ಕೆ ಅಸಾಧಾರಣ ಸೌಂದರ್ಯ ನೀಡುತ್ತವೆ. ಇವುಗಳ ಪಕ್ಕದಲ್ಲಿಯೇ ಸುಂದರವಾದ ಕೆಎಲ್ಸಿಸಿ ಪಾರ್ಕ್ (KLCC Park) ಇದೆ, ಇದು ಸ್ಥಳೀಯರು ಹಾಗೂ ಪ್ರವಾಸಿಗರು ವಿಶ್ರಾಂತಿ ಪಡೆಯಲು, ನಡಿಗೆ ಹೋಗಲು ಅತ್ಯಂತ ಇಷ್ಟಪಡುವ ಸ್ಥಳ.
ನಗರದ ಮೋನೊರೈಲ್ ಮತ್ತು ಮೆಟ್ರೋ ವ್ಯವಸ್ಥೆ ಅತ್ಯಂತ ಸುಗಮವಾಗಿದ್ದು, ಟ್ರಾಫಿಕ್ ಜಾಮಿನಿಂದ ದೂರವಾಗಲು ಸಹಾಯಮಾಡುತ್ತದೆ. ಈ ನಗರದಲ್ಲಿನ ಶಾಪಿಂಗ್ ಮಾಲ್ಗಳು—ಪೆವಿಲಿಯನ್ ಮಾಲ್, ಸುನ್ವೇ ಪಿರಮಿಡ್, ಮಿಡ್ ವ್ಯಾಲಿ ಮೆಗಾ ಮಾಲ್ ಮುಂತಾದವು—ಆಧುನಿಕ ಜೀವನಶೈಲಿಯ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತವೆ.
ಆಹಾರದ ವಿಷಯದಲ್ಲಿಯೂ ಕೌಲಾಲಂಪುರ ಅಚ್ಚರಿಯುಂಟುಮಾಡುತ್ತದೆ. ಚೀನೀ, ಮಾಲೆ, ಭಾರತೀಯ, ಪಾಶ್ಚಾತ್ಯ—ಎಲ್ಲ ಸಂಸ್ಕೃತಿಯ ಊಟಗಳನ್ನು ಇಲ್ಲಿ ರುಚಿಸಬಹುದು. ಬೀದಿ ಆಹಾರದಿಂದ ಹಿಡಿದು ಐದು ನಕ್ಷತ್ರದ ರೆಸ್ಟೋರೆಂಟ್ಗಳ ತನಕ ಪ್ರತಿಯೊಂದು ಹಂತದಲ್ಲಿಯೂ ವೈವಿಧ್ಯಮಯ ಆಯ್ಕೆಗಳಿವೆ. ಜಾಲನ್ ಅಲೋರ್- ಎನ್ನುವ ತಿನಿಸುಗಳ ರಸ್ತೆ ಬಹಳ ಪ್ರಸಿದ್ಧವಾದ ರಸ್ತೆಯಲ್ಲಿ ರಾತ್ರಿ ನಡೆಯುವುದೇ ಒಂದು ಅನುಭವ.ಕಿಕ್ಕಿರಿದ ಜನರಿಂದ ಕೂಡಿರುವ ಈ ಗಲ್ಲಿಯ ಇಕ್ಕೆಲಗಳಲ್ಲಿ ಎಲ್ಲ ರೀತಿಯ ಮಾಂಸಾಹಾರ ಮಾರುವ ಅಂಗಡಿಗಳು, ತಿನ್ನುವ ಜನಗಳು!
ಗಗನ ಚುಂಬಿ ಕಟ್ಟಡಗಳ ಜಗಮಗಿಸುವ ಕೌಲಾಲಂಪುರದ ರಾತ್ರಿಯ ನೋಟ ಬಹಳ ಸುಂದರವಾಗಿರುತ್ತದೆ. ಆದ್ದರಿಂದಲೇ ಇಲ್ಲಿನ ಗಗನಚುಂಬಿ ಕಟ್ಟಡಗಳ ಮೇಲ್ಛಾವಣಿಯಲ್ಲಿನ ಹೋಟೆಲುಗಳು ಬಹಳ ಪ್ರಸಿದ್ಧ. ಪೆಟ್ರೋನಾಸ್ ಗೋಪುರದ ನೋಟವಿರುವ ಇಂತಹ ಹೋಟೆಲುಗಳಲ್ಲಿ ಜಾಗ ಕಾಯ್ದಿರಿಸಬೇಕಾಗುತ್ತದೆ. ಇಂದಿನ ಸಾಮಾಜಿಕ ಮಾಧ್ಯಮದ ರೀಲುಗಳ ಸಮಯದಲ್ಲಿ ಈ ಹೋಟೆಲುಗಳಲ್ಲಿ ಜಾಗ ಕಾಯ್ದಿರಿಸಿಕೊಂಡು ರೀಲು ಮಾಡಲೆಂದೇ ಜನರು ಬರುತ್ತಾರೆ !!!
ನಿದ್ರಿಸದ ನಗರ: -
ಪಬ್ ಸಂಸೃತಿಯ ಊರಾದ ಈ.ನಗರದ ತುಂಬೆಲ್ಲ ಪಬ್ಬುಗಳನ್ನು ಕಾಣಬಹುದು. ಮೋಜಿಗೆಂದೇ ಇಲ್ಲಿಗೆ ಬರುವ ಜನರು ರಾತ್ರಿಯಿಡೀ ಪಬ್ ನಿಂದ ಪಬ್ಬಿಗೆ ಸುತ್ತುತ್ತಾ ಮೋಜು ಮಾಡುತ್ತಾರೆ. ಮಸಾಜು ಮಾಡುವವರು, ಬೆಳೆವೆಣ್ಣುಗಳು- ಎಲ್ಲವೂ ಇಲ್ಲಿ ಅತ್ಯಂತ ಸುಲಭದಲ್ಲಿ ದೊರೆಯುತ್ತದೆ. ಇಲ್ಲಿನ ಬಹುತೇಕ ಮಸಾಜು ಕೇಂದ್ರಗಳು ರಾತ್ರಿಯಿಡೀ ತೆರೆದಿರುತ್ತದಂತೆ
ಕೌಲಾಲಂಪುರದಲ್ಲಿ ದಿನ ಕಳೆದರೆ ಅದು ಕೇವಲ ಪ್ರವಾಸವಲ್ಲ, ಅದು ಒಂದು
ಅನುಭವ. ಸಂಸ್ಕೃತಿ, ಪ್ರಕೃತಿ, ಆಧುನಿಕತೆ, ಮನುಷ್ಯತ್ವ—ಎಲ್ಲವೂ ಸಮ್ಮಿಲನಗೊಂಡಿರುವ ಈ ನಗರ ಒಮ್ಮೆ ಭೇಟಿ ಮಾಡಬೇಕಾದ ಜಾಗ
