ಗುರುವಾರ, ಜೂನ್ 16, 2011

ಅಬುಧಾಬಿಯಲ್ಲಿ ಒಂದು ವರ್ಷ


                 ಅರಬ್ ಸಂಯುಕ್ತ ಸಂಸ್ತಾನದ(ಯುಎಇ)  ರಾಜಧಾನಿ  ಅಬುಧಾಬಿಯಲ್ಲಿ ಒಂದು ವರ್ಷ ಕಳೆದು ಮರಳಿ ಮಸ್ಕತ್ತಿಗೆ ಹೊರಟಿರುವ ಈ ಸಂದರ್ಭದಲ್ಲಿ ಅಬುಧಾಬಿಯ ನನ್ನ ಅನುಭವಗಳನ್ನು ದಾಕಲಿಸೋಣ ಎನಿಸಿತು. ಕಳೆದ ವರ್ಷ ನನ್ನ ಪತಿ ಶಶಿಯನ್ನು ಒಂದು ಕೆಲಸದ ಮೇರೆ ಅವನ ಕಂಪೆನಿಯವರು ಇಲ್ಲಿಗೆ ಕಳುಹಿಸಿದಾಗ ನಾನೂ, ಮಗಳು ಪ್ರೀತಿಯೂ ಹೊರಟೆವು. ಆವಾಗ ತಿಳಿಯಿತು ಇಲ್ಲಿನ ಭಾರತಿಯ ಶಾಲೆಗಳಲ್ಲಿ ಪ್ರವೇಶ ಸಿಗುವುದು ಒಂದು ಯಜ್ಞವೆಂದು.  ಮಸ್ಕತ್ತಿನ ಕನ್ನಡ ಸಂಘದ ಅಧ್ಯಕ್ಷರ ಸಹಾಯದಿಂದ ಪ್ರವೇಶ ಪಡೆದು, ನಾವೆಲ್ಲರೂ ಇಲ್ಲಿಗೆ ಬಂದೆವು. ಕೇವಲ ನಲವತ್ತು ವರ್ಷಗಳ ಹಿಂದೆ ಮರುಭೂಮಿಯಾಗಿದ್ದ  ಈ ದೇಶ  ಇಷ್ಟು ಸ್ವಲ್ಪ ಸಮಯದಲ್ಲಿ  ಸಾಧಿಸಿದ ಪ್ರಗತಿಯನ್ನು ಇಲ್ಲಿ ಇದ್ದೆ ಅನುಭವಿಸಿ ನೋಡಬೇಕು.


ಕಾಂಕ್ರಿಟ್ ಕಾಡಿನ ಮದ್ಯ 
ಅಬುಧಾಬಿ ಒಂದು ಗಗನ ಚುಂಬಿ ಕಟ್ಟಡಗಳ ಕಾಂಕ್ರಿಟ್ ಕಾಡು.ಇಲ್ಲಿ ಬಂದು ವಾಸಿಸಲು ಶುರುಮಾಡಿದಾಗಲೇ ತಿಳಿದಿದ್ದು ಇಲ್ಲಿನ ಕಷ್ಟಗಳು. ಇಲ್ಲಿ ವಾಹನ ನಿಲುಗಡೆಗೆ ಜಾಗವೇ ಇಲ್ಲ . ಒಂದರ ಪಕ್ಕ ಒಂದು ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತ ಬಂದಿರುವ  ಈ ನಗರದಲ್ಲಿ ವಾಹನ ನಿಲುಗಡೆಗಾಗಿ ಹೋರಾಡಬೇಕು. ಕಿಟಕಿಯಿಂದ ಹೊರಗೆ ನೋಡಿದರೆ ಕಾಣುವುದು ಕಾರುಗಳ ಹೊಳೆ. ರಸ್ತೆಗಳ ಇಕ್ಕೆಲಗಳಲ್ಲಿ ಅಲ್ಲದೆ  ನಡುವೆಯೂ ಒಂದು ಸಾಲು ಕಾರುಗು ನಿಲುಗಡೆಯಾಗಿರುತ್ತವೆ. ಮಾನವ ನಾಗರಿಕತೆಯ ಕೊಡುಗೆಯಾದ ನಗರವನ್ನು  ಸರಿಯಾಗಿ ಯೋಜಿಸದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಅಬುಧಾಬಿಯ ಪಾರ್ಕಿಂಗ್ ಪರದಾಟ ಒಂದು ನಿದರ್ಶನ. ಈಗ ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿನ ನಗರಾಡಳಿತ ಹಲವು ವಿದಗಳಿಂದ ಪ್ರಯತ್ನಿಸುತ್ತಿದೆ, ಆದರೆ  ಕಾಲ   ಮಿಂಚಿದೆ!  ಗಗನಚುಂಬಿ ಕಟ್ಟಡಗಳಿಂದಾಗಿ ಚಿಕ್ಕ ಪ್ರದೇಶದಲ್ಲಿ  ಜನ ನಿಬಿಡತೆ ಜಾಸ್ತಿ. ಆದ್ದರಿಂದ ಇಲ್ಲಿನ ಗಲ್ಲಿಗಲ್ಲಿಗಳಲ್ಲಿ ಕಾಣುವುದು ಸಾಲು ಕಸದ ತೊಟ್ಟಿಗಳು ಮತ್ತು ಹೇಗಂದರೆ ಹಾಗೆ  ನಿಲ್ಲಿಸಿದ ಕಾರುಗಳು!! ಇಲ್ಲಿ ಆಕಾಶವನ್ನು ಸರಿಯಾಗಿ ನೋಡಲು  ಕಷ್ಟಪಡಬೇಕು.




 ಅಬುಧಾಬಿಯಲ್ಲಿ ದಾಕಲಿಸಬಹುದಾದ ಹಲವು ಒಳ್ಳೆಯ ವಿಚಾರಗಳು ಇವೆ. ಇಲ್ಲಿನ ಸುಮಾರು ಹತ್ತು ಕಿ.ಮಿ. ಉದ್ದದ ಕಾರ್ನಿಶ್ ( ಅರೇಬಿಕ್ ನಲ್ಲಿ ಸಮುದ್ರತೀರದ ಪಕ್ಕದ ದಾರಿ)  ನಿಜವಾಗಿಯೂ ನೋಡಬೇಕಾದ ಸ್ಥಳ. ಅಷ್ಟುದ್ದದ ಜಾಗಕ್ಕೂ ನಡೆಯುವ ಮಾರ್ಗ, ಸೈಕಲ್  ಮಾಡಲು ದಾರಿ, ಮಾರ್ಗದುದ್ದಕ್ಕೂ ಸುಂದರವಾಗಿ ಬೆಳಿಸಿ ಆರೈಕೆ ಮಾಡುತ್ತಿರುವ ಗಿಡಗಳು; ಇದು ಮರುಭೂಮಿ ಎನ್ನುವುದನ್ನೇ ಮರೆಸುತ್ತದೆ. ಇಲ್ಲಿನ ರಸ್ತೆಗಳು ಬಹಳ ಸುಸ್ತಿತಿಯಲ್ಲಿವೆ.  ಬಿಳಿಯ ಅಮ್ರತಶಿಲೆಯಲ್ಲಿ ನಿರ್ಮಾಣಗೊಂಡ  ಶೇಖ್ ಜ್ಹಾಯೇದ್ ಮಸೀದಿ ಇಲ್ಲಿನ ಇನ್ನೊದು ಆಕರ್ಷಣೆ. ಅಬುಧಾಬಿಯ ಇನ್ನೊಂದು ಸಾಧನೆಯೆಂದರೆ ಸಮುದ್ರವನ್ನು ಒತ್ತ್ತುವರಿ ಮಾಡಿ ಇವರು ಅಭಿವೃದ್ದಿಪಡಿಸಿರುವ ದ್ವೀಪಗಳು. ಇವು ಮಾನವನ ಅದಮ್ಯ ಸಾಮರ್ಥ್ಯಕ್ಕೆ ಸಂಕೆತಗಳಂತೆ ಕಾಣುತ್ತವೆ.


ಶೇಖ್ ಜ್ಹಾಯೇದ್  ಮಸೀದಿ
















ಅಬುಧಾಬಿ ಕನ್ನಡಿಗರೊಂದಿಗೆ : 

           ಪಾಕಿಸ್ತಾನ, ಪಿಲಿಪೈನ್ಸ್, ಲೆಬನೋನ್, ಈಜಿಪ್ಟ್  ಮತ್ತು ಇತರ ಅರಬ್ ದೇಶದ ಜನತೆಯೇ ಹೆಚ್ಚಾಗಿ ಕಾಣುವ ಈ ನಗರದಲ್ಲಿ ಭಾರತೀಯರು ಬಹಳ ಸಂಕ್ಯೆಯಲ್ಲಿ ಇದ್ದಾರೆ. ಭಾರತಿಯ ಸಮುದಾಯದಲ್ಲಿ ಕೇರಳದ ಜನತೆಗೆ ಮೊದಲ ಸ್ಥಾನ.
ಅವರು ಎಷ್ಟರ ಮಟ್ಟಿಗೆ ಇದ್ದಾರೆಂದರೆ ಹಲವು ಅಂಗಡಿಗಳ ನಾಮ ಪಳಕಗಳು ಮಲಯಾಳಿಯಲ್ಲಿ ಇರುತ್ತವೆ, ಮಲಯಾಳಿ ಭಾಷೆಯ ಎರಡು ರೇಡಿಯೋ ಕೇಂದ್ರಗಳಿವೆ!!  ಕನ್ನಡದವರು , ಅದರಲ್ಲಿಯೂ  ಕರಾವಳಿ ಕರ್ನಾಟಕದ ಜನ ಇಲ್ಲಿ ತುಂಬಾ ಇದ್ದಾರೆ. ಬಿ. ಆರ್. ಶೆಟ್ಟರು ಇದಕ್ಕೆ ಕಾರಣ ಎನಿಸುತ್ತದೆ. ಇಲ್ಲಿ ಇರುವುದು ಮಾತ್ರವಲ್ಲ, ನಿಜ ಅರ್ಥದಲ್ಲಿ ಭಾರತಿಯ ರಾಯಭಾರಿಯಾಗಿ, ಇಲ್ಲಿ ನಮ್ಮ ಸಂಸ್ಕೃತಿಯನ್ನು ಬೇರೂರಿಸಿದ್ದಾರೆ. ಇಲ್ಲಿ ದೇವಸ್ತಾನ ಮಾಡಲು ಇಲ್ಲಿನ ಆಡಳಿತ ಅನುಮತಿ ನೀಡದಿದ್ದರೂ ಮನೆಗಳಲಿ, ಸಭಾಬವನಗಳಲ್ಲಿ ಭಾರತಿಯ ಹಬ್ಬಗಳನ್ನು ಆಚರಿಸಿ, ಭಾರತೀಯರು ಸಂತೋಷ ಪಡುತ್ತಾರೆ.

           ಇಲ್ಲಿನ ಬ್ರಾಹ್ಮಣಸಂಘ ಒಂದು ಕನ್ನಡ ಬ್ರಾಹ್ಮಣ ಸಮುದಾಯದ ಗುಂಪು. ಇಪ್ಪತ್ತು- ಇಪ್ಪತ್ತೈದು ಕುಟುಂಬಗಳ ಈ ಗುಂಪು ಪ್ರತಿತಿಂಗಳು ಸರತಿಯಂತೆ ಪ್ರತಿ ಸದಸ್ಯರ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ. ಇದೆ ಹೆಳೆಯಲ್ಲಿ ಎಲ್ಲರ ಮಕ್ಕಳು ಶ್ಲೋಕಗಳನ್ನು ಕಲಿಯುತ್ತವೆ, ಪೂಜೆಯನ್ನು ನೋಡುತ್ತವೆ. ಹೆಂಗಸರ ಜರಿಸೀರೆಗಳು ಹೊರಬರುತ್ತವೆ. ನಮ್ಮ ಸಂಸ್ಕೃತಿಯು ಸ್ವಲ್ಪ ಅಂಶಗಳಾದರೂ ಮುಂದಿನ ಪೀಳಿಗೆಗೆ ಮುಂದುವರಿಯುತ್ತದೆ. ನಾವೂ ಹಲವು ಮನೆಗಳಲ್ಲಿ ಪೂಜೆಗೆ ಹೋಗುವಂತಾಯಿತು. ಇಲ್ಲಿನ ಮಹಿಳೆಯರ ಗುಂಪು ಪ್ರತೀ ಮಂಗಳವಾರ ಶಂಕರಾಚಾರ್ಯರ ಸೌಂದರ್ಯ ಲಹರಿ ಓದುತ್ತಾರೆ. ಈ ಗುಂಪನ್ನು ಸೇರಿದ್ದು ನನಗೆ ಒಳ್ಳೆಯ ಸಮಯಕಳೆಯುವ ಸಾದನವಾಯಿತು. ಸೌಂದರ್ಯ ಲಹರಿ ಸಪ್ತಾಹಕ್ಕೆ ಹಾಜರಾದೆ, ಶಂಕರ ಜಯಂತಿ ಪ್ರಯುಕ್ತ  ದಶಶ್ಲೋಕಿ, ಗುರುವಷ್ಟಕಂ ಓದಿದೆವು. ನಾನು ಇವುಗಳನ್ನೆಲ್ಲ ಕಲಿಯುವಂತಾಯಿತು.
          
             ಮಗಳ ಸಂಗೀತ ಪಾಟಗಳು ನಿಲ್ಲಬಾರದೆಂದು ನಾನು ಬಹಳ ಪ್ರಯತ್ನ ಮಾಡಿದೆ. ಆದರೆ  ಇಲ್ಲಿ ಸರಿಯಾದ ಗುರುವನ್ನು ಹುಡುಕಲು ನನ್ನಿಂದ ಸಾಧ್ಯವಾಗಲಿಲ್ಲ. ನಮಿತ ಮತ್ತು ಅನಂತ್ ಇಲ್ಲಿ ಕೆಲವು ವರ್ಷಗಳಿಂದ ನೆಲಸಿ ಕನ್ನಡತನವನ್ನು ಇಲ್ಲಿ ಉಳಿಸಲು ಪ್ರಯತ್ನಿಸುತ್ತಿರುವ  ದಂಪತಿಗಳು. ನಮಗೆ ದೂರದ ಸಂಬಂದಿಗಳಾದ  ಅವರ ಪರಿಚಯ ನಮ್ಮ ಅಬುಧಾಬಿಯ ವಾಸವನ್ನು ಬಿಡುವಿಲ್ಲದಂತೆ ಮಾಡಿಸಿತು.  ಅವರು ಆಯೋಜಿಸಿದ್ದ  ಪುರಂದರದಾಸರ ಆರಾದನೆಯಲ್ಲಿ, ರಾಜ್ಯೋತ್ಸವ ನ್ರತ್ಯ ನಾಟಕ 'ನಾಟ್ಯರಾಣಿ ಶಾಂತಲ' ದಲ್ಲಿ ಪ್ರೀತಿಯು ಬಾಗವಹಿಸಿದಳು. ಅವಳೊಡನೆ ಅಭ್ಯಾಸಕ್ಕೆ ಹೋಗುವುದು, ಅಲ್ಲಿ ಹಲವರ ಪರಿಚಯ, ಸಹಾಯ ಎಂದು ಕೆಲುವು ದಿನಗಳ ಚಟುವಟಿಕೆಗಳಾಯಿತು. ಮನೆಯಲ್ಲಿ ಎಲ್ಲರ ಬಾಯಿಯಲ್ಲಿಯೂ  ಅಂತಃಪುರದ ಗೀತೆಗಳು ನಲಿದಾಡಿದವು. ಕನ್ನಡ ಸಂಘದ ರಾಜ್ಯೋತ್ಸವ  ಆಚರಣೆಯು  ಗಂಗಾವತಿ ಬೀಚಿ, ನರಸಿಂಹ ಜೋಶಿಯರ ನಗೆ ಭಾಷಣದಿಂದ ಜನರನ್ನು ರಂಜಿಸಿತು.             


     
         
                       



ಪುರಂದರದಾಸರ ಆರಾದನೆ

ತ್ಯಾಗರಾಜ ಆರಾಧನೆಯಲ್ಲಿ ಹಾಡುತ್ತಿರುವಾಗ  


        ಇಲ್ಲಿನ ಕರ್ನಾಟಕ ಸಂಗೀತ ಸಭಾದವರು ಆಯೋಜಿಸಿದ್ದ ತ್ಯಾಗರಾಜ ಆರಾದನೆಯಲ್ಲೂ ಪ್ರೀತಿ ಪಾಲ್ಗೊಂಡಳು. ಶ್ರೀಯುತ ಕುಮಾರ್ ಆಯೋಜಿಸಿದ್ದ ಸಂಗೀತ ಉತ್ಸವದಲ್ಲ್ಲಿ ನಾಗಮಣಿ ಶ್ರೀನಾಥ್ ಮತ್ತು ಸುಮಾ ಸುಧೀಂದ್ರರ ಇದಿರಿನಲ್ಲಿ ನಮ್ಮ ನಮಿತಾಳ ತಂಡದ ಮಹಿಳೆಯರ ಹಾಡುಗಾರಿಕೆಯಿತ್ತು. ಈ ಬಾರಿ ನಾನು ಬಾಗವಹಿಸಿದ್ದೆ ಮಗಳಲ್ಲ. ಹೀಗೆ ಸಾಂಸ್ಕ್ರತಿಕವಾಗಿ ಇಲ್ಲಿನ ಭಾರತಿಯ ಸಮುದಾಯ ಬಹಳ ಚಟುವಟಿಕೆಯಿಂದಿದ್ದು , ನಮ್ಮನ್ನು  ತೊಡಗಿಸಿಕೊಳ್ಳಲು ತುಂಬಾ ಅವಕಾಶಗಳನ್ನು ಕೊಡುತ್ತದೆ.

           

ಯು ಎ ಇ ಯಲ್ಲಿ ನಮ್ಮ ಮನೆಯವರು:






 ನಮ್ಮ ಮನೆಗೆ  ಅತ್ತೆ- ಮಾವ, ಅಮ್ಮ, ನಮ್ಮ ತಂಗಿಯರ ಕುಟುಂಬಗಳು - ಹೀಗೆ ಬರುವವರು ಇದ್ದದ್ದು ನಮಗೆ ಇಲ್ಲಿ ದಿನ ಕಳೆದಿದ್ದು  ಗೊತ್ತಗದಂತಾಗಿತ್ತು. ಪಪ್ಪಾ, ಅಮ್ಮ ಇಬ್ಬರೂ ಒಟ್ಟಾಗಿ ಪುರುಸೋತ್ತಿನಲ್ಲಿ ಮಗಳ ಮನೆಗೆಂದು ಬರುವುದು ಕನಸಾಗಿಯೀ ಉಳಿಯಿತು, ವಿಧಿ ಪಪ್ಪನಿಗೆ ಅಷ್ಟು ಪುರುಸೊತ್ತು ಕೊಡಲೇ ಇಲ್ಲ. ಅಮ್ಮನಾದರೂ ಬರಲಿ ಎಂದು ಯೋಚಿಸಿ, 
ತಯಾರಿ ನಡೆಸಿದರೂ ಅಮ್ಮ ಬರುವವರೆಗೆ ನನಗೆ ಆತಂಕ ಏನಾದರೂ ಆಗಿ ಅಮ್ಮನ ಕಾರ್ಯಕ್ರಮ ರದ್ದಾಗಬಹುದೆಂಬ  ಆತಂಕ. ಆದರೆ ಈ ಬಾರಿ ದೇವರು ನಮ್ಮ ಪ್ರಾರ್ಥನೆ  ಆಲಿಸಿದ. ಅಮ್ಮ ಅಂದುಕೊಂಡಂತೆ ಮಸ್ಕತ್ತಿಗೆ ಬಂದು, ಅಲ್ಲಿ ನಾಲ್ಕು ದಿನ ತಿರುಗಾಡಿ ನಂತರ ಇಲ್ಲಿಗೆ ಬಂದಳು. ಅಮ್ಮನೊಡನೆ ಅಬುಧಾಬಿ ಯನ್ನು ಸುತ್ತುವ ಸಂಭ್ರಮ! ನನ್ನ ತಂಗಿ ಮಧುರಳು ಪರಿವಾರ ಸಮೇತ  ಬಂದಳು. ಪುಟ್ಟ ಶ್ರೇಯಾ ದೊಡ್ಡಮ್ಮ, ದೊಡ್ಡಪ್ಪ ಎಂದು ನಮ್ಮೊಡನೆ ತಿರುಗಾಡಿತು. ಎಲ್ಲರೂ ಕೂಡಿ ಅಲ ಇನ್ ಗೆ ಹೋದೆವು, ದುಬೈ ಮಾಲಿನ ಸಂಗೀತ ಕಾರಂಜಿ, ಅಬುಧಾಬಿಯ ಬ್ರಿಹತ್ ಮಸಿದಿ, ಎಂದೆಲ್ಲ ತಿರುಗಾಡಿದೆವು. ಪ್ರೀತಿಯು ಗೌಜಿನಿಂದ ಎಲ್ಲರೊಡನೆ ಬೆರೆತಳು. 

             ಅತ್ತೆ ಮಾವ  ಬಂದಾಗ ಬೇಸಿಗೆಯ ಜಳ! ಆದರೂ ಇಲ್ಲಿನ ಹವಾನಿಯನ್ತ್ರಕಗಳಿಂದಾಗಿ ಮನೆಯೊಳಗೇ ಚಳಿಯಲ್ಲಿ ಸಾಕಾಗುತ್ತೆ ಎನ್ನುತ್ತಿದ್ದರು. ಪ್ರೀತಿಯ ರಜೆ, ರಮಾದಾನ್ ಹಬ್ಬದ ಉಪವಾಸದ ವಾತಾವರಣಗಳಿಂದ ಅವರು ಬಂದಾಗ ದಿನಕಳೆದದ್ದು  ತಿಳಿಯುತ್ತಿರಲಿಲ್ಲ. ಇಲ್ಲಿ ಅಂದರೆ ಸಂಯುಕ್ತ ಅರಬ್ ಸಂಸ್ತಾನದಲ್ಲಿ ರಮಾದಾನ್ ತಿಂಗಳೆಂದರೆ ವಿಶೇಷ. ಇದು ಮುಸಲ್ಮಾನರ ರಾಜ್ಯವಾವಾದ್ದರಿಂದ ಸರಕಾರ ಉಪವಾಸಕ್ಕಾಗಿ ಹಲವು ವ್ಯವಸ್ತೆಗಳನ್ನು ಮಾಡುತ್ತದೆ. ಇಡಿ ದೇಶದ ಸರಕಾರೀ, ಖಾಸಗಿ ಕಚೇರಿಗಳೆಲ್ಲ ಅರ್ಧ ದಿನ ಕೆಲಸ ಮಾಡುತ್ತವೆ! ಉಪವಾಸವಿಲ್ಲದವರಿಗೂ ಮೋಜು. ಆದರೆ ಹಗಲೆಲ್ಲ ಹೋಟೆಲುಗಳು ಮುಚ್ಚಿರುತ್ತವೆ, ಸರಕಾರದ ಆದೇಶದಂತೆ. ಸಾರ್ವಜನಿಕ ಜಾಗ ಗಳಲ್ಲಿ  ತಿನ್ನುವುದು, ಕುಡಿಯುವುದು ಉಪವಾಸದ ಸಮಯಗಳಲ್ಲಿ ನಿಷೆದಿಸಲಾಗಿರುತ್ತದೆ. ಬೆಳಿಗ್ಗಿನ ಪ್ರಾರ್ಥನೆಯ ನಂತರ ಆರಂಭವಾದ ಉಪವಾಸ ಮುಸ್ಸಂಜೆಯ  ಪ್ರಾರ್ಥನೆಯ ತನಕ ನೀರನ್ನು ಕುಡಿಯದೆ  ನಡೆಯುತ್ತದೆ. ಶಾಲೆಗಳಿಗೂ ಅವಧಿಯನ್ನು ಕಡಿಮೆಮಾದಲಾಗಿರುತ್ತದೆ. ಒಟ್ಟಿನಲ್ಲಿ ಇಡಿ ದೇಶದ ದಿನಚರಿ ಒಂದು ತಿಂಗಳು ಬದಲಾಗುತ್ತದೆ. ತಡ ರಾತ್ರಿಯ ತನಕ  ಈ ಒಂದು ತಿಂಗಳು ಶಾಪ್ಪಿಂಗ್ ಮಾಲುಗಳು ತೆರೆದಿರುತ್ತವೆ. ಬೆಳಿಗ್ಗಿನಿಂದ ಸಂಜೆಯ ತನಕ ಬನಗುಡುವ ರಸ್ತೆಗಳು ರಾತ್ರಿ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತದೆ. ರಮಾದಾನ್ ತಿಂಗಳಿನಲ್ಲಿ ದಾನ ಧರ್ಮಗಳು ತುಂಬಾ ನಡೆಯುತ್ತವೆ. ಮಾಲುಗಳಲ್ಲಿ ಕರ್ಜೂರ ಮತ್ತು ಹುಣಸೆನಿರುಗಳನ್ನು ಉಪವಾಸ ಮುಗಿಸುವ ಹೊತ್ತಿನಲ್ಲಿ ಹಂಚಲಾಗುತ್ತದೆ. ಹೀಗೆ ಉಪವಾಸ ಮಾಡುವವರು, ಮಾಡದವರು ಎಲ್ಲರಿಗು ಹಬ್ಬ .

        ನನ್ನ  ಪತಿ ಶಶಿಯ ತಂಗಿ ಸೀಮಾ ಕುಟುಂಬ ಸಮೇತ ಅಮೆರಿಕಾದಿಂದ ಇಲ್ಲಿಗೆ ಬಂದಳು. ಅವರು ಅಮೆರಿಕಾದ ಪ್ರಜೆಯಾದ ಕಾರಣ ಅವರಿಗೆ ಇಲ್ಲಿನ ವೀಸಾದ  ರಗಳೆ ಇಲ್ಲ. ಅಮೇರಿಕಾದ ಪ್ರಜೆಗಳಿಗೆ ಇಲ್ಲಿ ಕಾರು ಚಲಾಯಿಸಲು ಕೊಡ ಅಲ್ಲಿನ ಲ್ಯಸೆನ್ಸ್ ನಡೆಯುತ್ತದೆ. ಮತ್ತೆ ಅವರೊಡನೆ  ಇಲ್ಲಿನ ಭಾರತಿಯ ಹೊಟೇಲುಗಳಲ್ಲಿ, ಮರುಭೂಮಿಯಲ್ಲಿ, ಮಾಲುಗಳಲ್ಲಿ ಸುತ್ತಿದೆವು!


ದುಬೈ ಎಂಬ ಮಾಯಾನಗರಿ: 


ಅತ್ಯಂತ ಎತ್ತರದ ಬುರ್ಜ್ ಖಲಿಫಾ 

 ದುಬೈ ಬಗೆಗೆ ಬರೆಯದೆ ಸಂಯುಕ್ತ ಅರಬ್ ಸಂಸ್ತಾನದ ಬಗೆಗಿನ ಲೇಖನ ಅಪೂರ್ಣ. ಯು ಎ ಇ ಯಾ ನಿಜವಾದ ಆಕರ್ಷಣೆ  ದುಬೈ ನಗರ. ಅರೇಬಿಯನ್ ನೈಟ್ಸ್ ನ ಕಲ್ಪನೆಯ ನಗರದಂದೆ ವಿದ್ಯುದ್ದೀಪಗಳಿಂದ ಕಂಗೊಳಿಸುವ ಈ ನಗರದಲ್ಲಿ ಇಲ್ಲದ ಪ್ರವಾಸಿ ಆಕರ್ಷಣೆಯೇ ಇಲ್ಲ. ಮರುಭೂಮಿಯ ಸವಾರಿ, ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಕಲಿಫಾ, ಹಿಮಗಿರಿಗಳ ತಂಪು  ಅನುಭವ ಕೊಡುವ ಸ್ಕಿ ಮಾಡುವ ತಾಣ!; ನಾವು ಹೆಸರಿಸಿದರೆ ಸಾಕು  ಅದು  ಅಲ್ಲಿದೆ. ಈ ಮಾಯಾನಗರಿಗೆ ನಾವು ಅಬುದಾಬಿಯಿಂದ ಒಂದು  ಗಂಟೆಯಲ್ಲಿ ತಲುಪಬಹುದು. ಹತ್ತು ಹಲವು ಬಾರಿ ಸಂದರ್ಶಿಸಿದರು ಪ್ರತಿ ಬಾರಿ ಏನಾದರು ಹೊಸತನ್ನು ನೋಡುವಂತೆ ಮಾಡುವ ಈ ನಗರ ನಿಜವಾಗಿ ಒಂದು ಮಾಯಾಲೋಕವನ್ನೇ ಸ್ರಷ್ಟಿ ಮಾಡಿದೆ. ಇಲ್ಲಿಯೂ ಸಮುದ್ರವನ್ನು ಒತ್ತುವರಿ  ಮಾಡಿ ನಿರ್ಮಿಸಿರುವ   ಪಾಮ್ ಜ್ಹುಮೈರ ದ್ವೀಪ ನೋಡಲು ಕಣ್ಣಿಗೊಂದು ಹಬ್ಬ.

       ಇಲ್ಲಿಯೂ ಕನ್ನಡಿಗರು ಹಲವು ಸಾಂಸ್ಕ್ರತಿಕ  ಕಾರ್ಯಕ್ರಮವನ್ನು ಆಯೋಜಿಸುತ್ತಾರೆ, ಭಾರತದಿಂದ ನಮ್ಮ ಕಲಾವಿದರನ್ನು, ಸಾಹಿತಿಗಳನ್ನು ಕರೆಸುತ್ತಾರೆ. `ನಮ್ಮ ಕುಂದಾಪುರದ ರೂಪಕಲಾ ತಂಡದ ಮೂರು ಮುತ್ತು ನಾಟಕ ಆಯೋಜಿಸಲಾಗಿತ್ತು. ನಮ್ಮೂರಿನಿಂದ ಇಲ್ಲಿಯ  ತನಕ ಬಂದು ಅವರು ಪ್ರದರ್ಶಿಸಿದ ನಾಟಕಕ್ಕೆ ಹೋಗಿದ್ದು ನನಗೆ ಒಂದು ಹ್ರದಯ ಸ್ಪರ್ಶಿ ಅನುಭವ. ಅಲ್ಲಿ ನನ್ನ ಪ್ರಾಥಮಿಕ ಶಾಲೆಯ ಕೆಲುವು ಗೆಳತಿಯರ ಬೇಟಿಯಾಯಿತು!  

          ದ್ವನಿ ಪ್ರತಿಷ್ಠಾನದವರು ಆಯೋಜಿಸಿದ್ದ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ನೀಡಿದ್ದ ಬೇಟಿ ಇನ್ನೊಂದು ಸ್ಮರಣಿಯ ಅನುಭವ.  ನಮ್ಮೊರಿನವರೆ ಆದ ಡುಂಡಿರಾಜರ ಅದ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಬಾಗವಹಿಸಿದ್ದ ಹವ್ಯಾಸಿ ಚುಟುಕು ಕವಿಗಳ ಕವಿತೆಗಳು ಉತ್ತಮವಾಗಿದ್ದವು. ಡುಂಡಿರಾಜರ ಮಾತೊಂತು ನಗೆಯ ಸ್ಪೋಟಕ್ಕೆ ಕಾರಣವಾಯಿತು. ಅವತ್ತು ಸನ್ಮಾನ ಗೊಂಡವರಲ್ಲಿ   ಜಯಪ್ರಕಾಶ್ ಮಾವಿನಕುಳಿಯವರಿದ್ದರು. ಬಾಲ್ಯದಲ್ಲಿ ನ್ರತ್ಯ ತರಗತಿಯಲ್ಲಿ ಪರಿಚಯವಿದ್ದ  ಇವರನ್ನು ಇಲ್ಲಿ ಬೆಟ್ಟಿಯಾಗಿದ್ದು, ಅವರಿಗೆ ನನ್ನ ಪರಿಚಯವಿದ್ದದ್ದು  ಒಂದು ಆಕಸ್ಮಿಕ!

          ನಮ್ಮೂರು, ದೇಶಗಳಿಂದ ದೂರವಾದ ಜನಗಳು ಎಲ್ಲಿಯೋ ಬಂದು ನಮ್ಮತನವನ್ನು ಅರಸುತ್ತ, ಈ ದೇಶದಲ್ಲೊಂದು ಮಿನಿ ಭಾರತವನ್ನೇ ನಿರ್ಮಾಣ ಮಾಡಿದ್ದಾರೆ. ಭಾರತದಲ್ಲಿದುಕೊಂಡು ಸಿಗದ ಸಾಂಸ್ಕ್ರತಿಕ ಲೋಕ ಈ ಅರಬ್ ನಾಡಿನಲ್ಲಿ ನನಗೆ ದೊರಕಿದೆ.











2 ಕಾಮೆಂಟ್‌ಗಳು:

  1. ಅಬುದಾಬಿ ಪರಿಚಯ ಚೆನ್ನಾಗಿದೆ. ಅಲ್ಲಿ ಭಾರತೀಯರ , ಕನ್ನಡಿಗರ ಚಟುವಟಿಕೆ ಬಗ್ಗೆ ಓದಿ ಖುಶಿಯಾಯ್ತು.

    ನಿಜ, ಭಾರತದಿಂದ ಹೊರಗಿರುವವರಲ್ಲೇ ಭಾರತ ಸಂಸ್ಕೃತಿಯ ಬಗ್ಗೆ ತುಡಿತ ಜಾಸ್ತಿ ಇರುತ್ತದೆ ಅನ್ನಿಸುತ್ತಿದೆ..

    ಪ್ರತ್ಯುತ್ತರಅಳಿಸಿ