ಸುಂದರ ಭೌಗೋಳಿಕ ವೈವಿಧ್ಯತೆಯಿಂದ ವಿಶಿಷ್ಟ ವಾಗಿರುವ ದೇಶ ಒಮಾನ್. ನಮ್ಮ ಕಳೆದ ಹದಿನೈದು ವರ್ಷಗಳ ಈ ನೆಲದ ವಾಸವು ನಮಗೆ ಕೊಡಮಾಡಿದ ಅನುಭವಗಳು ಅನೇಕ. ಈ ದೇಶದ ಜನರ ಸಹೃದಯತೆಯೂ ವಿಶಿಷ್ಟವಾದದ್ದು. ಒಮಾನಿನ ಜನರು ತುಂಬಾ ಮೃದು ಸ್ವಭಾವದ ಸ್ನೇಹಪರರು. ನಾವು ಪರಕೀಯರು, ವಿದೇಶದಲ್ಲಿದ್ದೇವೆ ಎಂಬ ಭಾವನೆಯು ನಮಲ್ಲಿ ಮೂಡದಂತಹ ವಾತಾವರಣವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿಸಿದ ಇಲ್ಲಿನ ದಿವಂಗತ ದೊರೆ ಸುಲ್ತಾನ್ ಖುಬೂಸ್ ಅವರನ್ನು ಇಲ್ಲಿ ಸ್ಮರಿಸಲೇ ಬೇಕಾಗುತ್ತದೆ. ಈ ದೇಶವನ್ನು ಐವತ್ತು ವರ್ಷಗಳು ಆಳಿ ವಸುದೈವಂ ಕುಟುಂಬಕಮ್ ಎಂಬ ಮನೋಭಾವವನ್ನು ಇಲ್ಲಿನ ಜನರಲ್ಲಿ ಭದ್ರವಾಗಿ ಬೇರೂರಿಸಿದ್ದಾರೆ. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಬಂದಾಗಲೇ ಇಲ್ಲಿನ ಜನರ ಸ್ನೇಹಪರತೆ ನಮ್ಮ ಅನುಭವಕ್ಕೆ ಬರುತ್ತದೆ. ಇಲ್ಲಿನ ಟ್ಯಾಕ್ಸಿ ಚಾಲಕ, ಪೊಲೀಸರು, ಯಾವುದೇ ಆಫೀಸಿನ ದ್ವಾರಪಾಲಕನೆ ಸಿಗಲಿ ಮೊದಲಿಗೆ 'ಸಲಾಂ
ವಲೈಕುಂ' (ಅರೇಬಿಕ್ ಭಾಷೆಯ ಶುಭಾಶಯ ಸೂಚಕ ನುಡಿಗಟ್ಟು) ಹೇಳಿಯೇ ಮಾತಿಗಿಳಿಯುತ್ತಾರೆ. ಇಲ್ಲಿ ಅನೇಕ ದೇಶದ ಜನಗಳು ಕೆಲಸಕ್ಕಾಗಿ ಬಂದು ದಶಕಗಳಿಂದ ಇಲ್ಲಿಯೇ ವಾಸಿಸುತ್ತಿರುವುದೇ ಇದಕ್ಕೆ ಸಾಕ್ಷಿ.
ಇಲ್ಲಿ ಹಿಂದುಗಳ ಎರಡು ದೇವಾಲಯಗಳಿವೆ. ದೇವಾಲಯಗಳ ಹೊರಗೆ ತೆಂಗಿನಕಾಯಿ, ಹೂವು ಮಾರುವ ಒಮಾನಿಗಳು "ಶಿವ್ ಜಿ ಕೆ ಲಿಯೇ ನಾರಿಯಲ್ ಲೇಲೋ ಬೆಹನ್' ಎಂದು ಮಾರುವುದನ್ನು ಕೇಳಿ ನಾನು ಬೆರಗಾಗುತ್ತಿದ್ದೆ. ಹಿಂದುಗಳ ಹಬ್ಬಗಳೆಲ್ಲವನ್ನೂ ಭಾರತಕ್ಕಿಂತ ಅದ್ದೂರಿಯಾಗಿ, ಇಲ್ಲಿನ ದೇವಾಲಯಗಳಲ್ಲಿ, ಅಲ್ಲದೇ ಗಣೇಶನ ಹಬ್ಬ, ನವರಾತ್ರಿಯನ್ನಂತೂ ಮನೆಮನೆಗಳಲ್ಲೂ ಸುಂದರವಾಗಿ ಆಚರಿಸಲಾಗುತ್ತದೆ. ನಮ್ಮ ದೀಪಾವಳಿ ಹಬ್ಬವೆಂದರೆ ನನ್ನ ಒಮಾನಿ ಗೆಳತಿಯರಿಗೆ ಎಲ್ಲಿಲ್ಲದ ಕುತೂಹಲ. ಹಬ್ಬಕ್ಕೆ ತಪ್ಪದೆ ನಮಗೆ ಸಂದೇಶವನ್ನು ಕಳುಹಿಸುವ ಆವರನ್ನೆಲ್ಲ ಕರೆದು ನಾವು ಭಾರತೀಯರು ದೀಪಾವಳಿಯನ್ನು ಆಚರಿಸುತ್ತೇವೆ. ಇಲ್ಲಿ ಕ್ರೈಸ್ತರ ಚರ್ಚುಗಳೂ ಇವೆ. ಅಲ್ಲಿನ ಪ್ರಾರ್ಥನೆಗಳು ಸಹಸ್ರಾರು ಭಕ್ತರ ಸೇರುವಿಕೆಯೊಂದಿಗೆ ನಿರ್ವಿಘ್ನವಾಗಿ ನಡೆಯುತ್ತದೆ.
ಇಲ್ಲಿನ ಜನರಿಗೆ ಹಂಚಿಕೊಂಡು ತಿನ್ನುವುದೆಂದರೆ ಎಲ್ಲಿಲ್ಲದ ಸಂತೋಷ. ಕಚೇರಿಗಳಲ್ಲಿ ಅವರು ಏನನ್ನಾದರೂ ತಿನ್ನಲು ತಂದುಕೊಂಡರೆ ಅದನ್ನು ಸಹದ್ಯೋಗಿಗಳಿಗೆಲ್ಲ ಕೊಡುವಷ್ಟು ತಂದು ಎಲ್ಲರಿಗೂ ಹಂಚಿಯೇ ತಿನ್ನುವುದು ಅವರ ಪರಿಪಾಠ. ಪ್ರತಿದಿನವೂ ಅಷ್ಟೂ ಜನರಿಗೆ ತಾವು ತಿನ್ನ ಬಯಸುವ ವಸ್ತುಗಳನ್ನು ತರುವ ಇವರ ಸ್ನೇಹ ಭಾವವನ್ನು ಕಂಡು ನನ್ನ ಹೃದಯ ತುಂಬಿ ಬಂದಿದ್ದಿದೆ. ಅರೇಬಿಕ್ ಕಾಫಿ ಮತ್ತು ಖರ್ಜೂರ ಇವರ ಸಹೃದಯತೆಯ ಮತ್ತು ಸ್ನೇಹದ ಸಂಕೇತ. ಇವನ್ನು ಇಲ್ಲಿನ ಎಲ್ಲ ಕಚೇರಿಗಳಲ್ಲಿ ಎಲ್ಲಾರು ತೆಗೆದುಕೊಳ್ಳುವಂತೆ ಇಟ್ಟೇ ಇರುತ್ತಾರೆ.
ಇಸ್ಲಾಮಿನ ಪವಿತ್ರ ಮಾಸ ರಾಮದಾನ್ ತಿಂಗಳು ಪೂರ್ತಿ ದಾನ ಧರ್ಮಗಳಲ್ಲಿ ಕಳೆಯುತ್ತಾರೆ. ಕೌಟುಂಬಿಕ ಮೌಲ್ಯ ಗಳು ಇವರ ಸಮಾಜದಲ್ಲಿ ಭದ್ರವಾಗಿದೆ. ಎಲ್ಲ ಹಬ್ಬಗಳಿಗೂ ಕುಟುಂಬದ ಸದಸ್ಯರೆಲ್ಲರೂ ಸೇರಿಯೇ ಆಚರಿಸುತ್ತಾರೆ. ಬೇರೆ ಬೇರೆ ಕಡೆ ಉದ್ಯೋಗದಲ್ಲಿರುವ ಮಕ್ಕಳೆಲ್ಲ ತಂದೆತಾಯಿಗಳ ಬಳಿಗೆ ಹೋಗಿ ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸುತ್ತಾರೆ. ಅಲ್ಲದೇ ತಮ್ಮ ಸಾಂಪ್ರದಾಯಿಕ ಪದ್ಧತಿಗಳನ್ನು ಪ್ರೀತಿಸುವ ಇವರು ಉಡುಗೆ ತೊಡುಗೆಗಳಲ್ಲಿ ಪಾಶ್ಚಾತ್ಯ ಪ್ರಭಾವ ಬಹಳ ಕಡಿಮೆ. ಅಲ್ಲದೇ ತಮ್ಮ ಸಾಂಪ್ರದಾಯಿಕ ಪದ್ಧತಿ ಗಳನ್ನು ಪ್ರೀತಿಸುವ ಇವರು ಉಡುಗೆ ತೊಡುಗೆಗಳಲ್ಲಿ ಪಾಶ್ಚಾತ್ಯ ಪ್ರಭಾವ ಬಹಳ ಕಡಿಮೆ. ಯಾವುದೇ ದೇಶಕ್ಕೆ ಹೋಗಲಿ, ಏನೇ ಪದವಿಯಲ್ಲಿರಲಿ; ತಮ್ಮ ದೇಶದ ಸಾಂಪ್ರದಾಯಿಕ ದಿಶ್-ದಶಾ ಹಾಕಿಯೇ ಇವರು ಎಲ್ಲ ಕಾರ್ಯವನ್ನು ನಿರ್ವಹಿಸುತ್ತಾರೆ.
"ಜನನಿ ಜನ್ಮ ಭೂಮಿಶ್ಚ್ ಸ್ವರ್ಗಾದಪಿ ಗರಿಯಶೀ" ಎಂಬ ಋಷಿ ವಾಕ್ಯವನ್ನು ಸ್ವಲ್ಪ ಬದಲಿಸಿ “ಜನನಿ ಕರ್ಮಭೂಮಿಶ್ಚ ಸ್ವರ್ಗಾದಪಿ ಗರಿಯಶೀ ಎಂದು ಬದಲಾಯಿಸುವಂತೆ ಮಾಡಿದ ನಾಡು ಒಮಾನ್” ಎಂದು ತುಂಬು ಮನಸ್ಸಿನಿಂದ ಹೇಳಬಹುದು. ಪ್ರಪಂಚದ ಅನೇಕ ದೇಶಗಳನ್ನು ಸುತ್ತಿದ ಅನುಭವಗಳಲ್ಲಿ ಒಮಾನ್ ಬಹಳ ವಿಶಿಷ್ಟವಾದ ದೇಶ. ಧರ್ಮ ಜಾತಿಯ ಭೇದವಿಲ್ಲದೇ ನಿಷ್ಕಲ್ಮಶ ಮಾನವೀಯ ಪ್ರೀತಿ ಇಲ್ಲಿನವರ ನದವಳಿಕೆಯಲ್ಲಿ ನಮ್ಮ ಅರಿವಿಗೆ ಬರುತ್ತದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ