ಹುಟ್ಟಿದಾಗ ಸಂಪೂರ್ಣ ಪರಾವಲಂಬಿ ಆಗಿರುವ ಮಗು ನಿಧಾನವಾಗಿ ತನ್ನ ಪರಿಸರದಿಂದ ಜೀವಿಸಲು ಬೇಕಾದ ಎಲ್ಲ ವಿದ್ಯೆಗಳನ್ನು ಅನುಕರಣೆಯಿಂದ ಕಲಿಯುತ್ತಾ ಹೋಗುತ್ತದೆ. ಅವುಗಳಲ್ಲಿ ಭಾಷೆ ಮುಖ್ಯವಾದದ್ದು . ತನ್ನ ಸುತ್ತಮುತ್ತಲ ಪರಿಸರದಲ್ಲಿ ಆಡುವ ಭಾಷೆಯನ್ನು ಕಲಿಯುವ ಮಗುವಿಗೆ ಅದೇ ಮಾತೃಭಾಷೆಯಾಗುತ್ತದೆ. ಈ ಭಾಷೆಯು ನಾವು ಯಾವುದೇ ಹೊಸ ಭಾಷೆಯನ್ನು ಕಲಿತರೂ ನಮ್ಮ ಹೃದಯಕ್ಕೆ ಹತ್ತಿರವಾಗಿ, ನಮ್ಮ ಆಪ್ತ ಭಾಷೆಯಾಗಿ ಉಳಿದುಕೊಳ್ಳುತ್ತದೆ. ನಾವು ದೇಶವನ್ನು ಬಿಟ್ಟು ಒಂದು ಪರಕೀಯ ಸ್ಥಳಕ್ಕೆ ಬಂದಾಗ ನಮಗೆ ನಮ್ಮ ಭಾಷೆ ಕಿವಿಯ ಮೇಲೆ ಬಿದ್ದಾಗ ಆಗುವ ಸಂತಸವನ್ನು ವರ್ಣಿಸಲು ಸಾಧ್ಯವಾಗುವುದಿಲ್ಲ. ಆಗಲೇ ಗೊತ್ತಾಗುವುದು ನಮ್ಮ ಮಾತೃಭಾಷೆಯ ಬೆಲೆ. ನಮ್ಮ ಭಾಷೆಯನ್ನು ಮಾತನಾಡುವವರು ಬಹಳ ಬೇಗ ನಮಗೆ ಆಪ್ತರಾಗುತ್ತಾರೆ, ಒಟ್ಟಿಗೆ ನಮ್ಮ ಸಂಘ ಹುಟ್ಟುತ್ತದೆ. ಹೀಗೆ ನಾವು ಎಲ್ಲೇ ಹೋದರೂ ನಮ್ಮ ವ್ಯಕ್ತಿತ್ವದ ಭಾಗವಾಗಿ ಮಾತೃಭಾಷೆ ನಮ್ಮೊಂದಿಗೆ ಇರುತ್ತದೆ. ನಾವು ಕನ್ನಡವನ್ನು ನಮ್ಮ ಮಕ್ಕಳಿಗೆ ಅಥವಾ ಯಾರಾದರೂ ಯಾವುದೋ ದೇಶದಲ್ಲಿದ್ದುಕೊಂಡು ತಮ್ಮ ಭಾಷೆಯನ್ನು ತಮ್ಮ ಮಕ್ಕಳಿಗೆ ಕಲಿಸಲು ಯಾಕೆ ಶ್ರಮ ಓಡುತ್ತಾರೆ ಎಂದು ಹೇಳಲು ಇಷ್ಟು ದೊಡ್ಡ ಪೀಠಿಕೆ ಕೊಡಬೇಕಾಯಿತು. ಎಲ್ಲರಿಗೂ ಈ ಭಾವನೆಗಳು ಇಷ್ಟು ಬಲವಾಗಿ ಇರಬೇಕೆಂದೇನಿಲ್ಲ, "ಲೋಕೋ ಬಿನ್ನರುಚಿ ". ಆದರೆ ಭಾಷೆಯ ಬಗೆಗೆ ಇಂತಹ ಭಾವನೆಗಳಿರುವವರ ಗುಂಪು ತಮ್ಮ ಮುಂದಿನ ತಲೆಮಾರು ಈ ಭಾವನೆಗಳಿಂದ ವಂಚಿತರಾಗಬಾರದೆಂದು ತಮ್ಮ ಭಾಷೆಯನ್ನು ಮಕ್ಕಳಿಗೆ ಕಲಿಸಲು ಆರಂಭಿಸುತ್ತಾರೆ. ಇಂತಹ ಸಮಮನಸ್ಕ ಕನ್ನಡಿಗರ ಪ್ರಯತ್ನದ ಫಲವೇ ಮಸ್ಕತ್ತಿನ ಕನ್ನಡ ತರಗತಿಗಳು.
ಮಸ್ಕತ್ ಕನ್ನಡ ಶಾಲೆಯ ಇತಿಹಾಸ:-
ಪ್ರತಿವರ್ಷ ಆಗಸ್ಟ್ ತಿಂಗಳಿನಲ್ಲಿ ತರಗತಿಗಳು ಆರಂಭವಾಗುತ್ತದೆ, ಮುಂದಿನ ಮೇ ತಿಂಗಳಿನಲ್ಲಿ ವಾರ್ಷಿಕ ಪರೀಕ್ಷೆಯ ಬಳಿಕ ಶೈಕ್ಷಣಿಕ ವರ್ಷ ಮುಕ್ತಾಯವಾಗುತ್ತದೆ. ಈಗ ಮಸ್ಕತ್ ಕನ್ನಡ ತರಗತಿಯಲ್ಲಿ ಒಟ್ಟು 130
ವಿದ್ಯಾರ್ಥಿಗಳು ಇದ್ದಾರೆ. 6 ಮಟ್ಟದಲ್ಲಿ 8 ಸ್ವಯಂ ಸೇವಕ ಶಿಕ್ಷಕಿಯರು ನಿಸ್ವಾರ್ಥವಾಗಿ ಕನ್ನಡ ಕಲಿಸುತ್ತಿದ್ದಾರೆ.
2017 ರಲ್ಲಿ ಕನ್ನಡ ತರಗತಿಗಳಿಗೆ ಭಾರತೀಯ ಶಾಲೆಯಲ್ಲಿ ತರಗತಿಗೆ ಸ್ಥಳವನ್ನು ಕೊಡುವುದನ್ನು ಕಾರಣಾಂತರಗಳಿಂದ ನಿಲ್ಲಿಸಿದರು. ಇದ್ದಕ್ಕಿದ್ದಂತೆ ಕನ್ನಡ ತರಗತಿಗಳಿಗೆ ಸ್ಥಳವಿಲ್ಲದಂತಾಯಿತು. ಕನ್ನಡ ತರಗತಿಗಳು ಮತ್ತೊಂದು ಹಿನ್ನೆಡೆಯನ್ನು ಎದುರಿಸಬೇಕಾಯಿತು. ಸಂಘದ ಕೆಲವು ಸದಸ್ಯರ ಪ್ರಯತ್ನದಿಂದ NTI (National Training Institute) ನ ತರಗತಿಗಳು ಇಲ್ಲಿನ ವಾರದ ರಜಾ ದಿನವಾದ ಶುಕ್ರವಾರ ಮಧ್ಯಾಹ್ನ ದೊರೆಯಿತು. ಎಲ್ಲ ಶಿಕ್ಷಕಿಯರು, ವಿದ್ಯಾರ್ಥಿಗಳು ಈ ಸಮಯಕ್ಕೂ ಒಪ್ಪಿ ತರಗತಿಗಳು ನಡೆಯಲು ಆರಂಭವಾಯಿತು. ಹೊಸ ಸ್ಥಳದ ಶುಲ್ಕ ದುಬಾರಿಯಿದ್ದು ಕನ್ನಡ ಸಂಘದ ಹಣಕಾಸಿನ ಸ್ಥಿತಿಗೆ ನಿಲುಕದಿದ್ದಾಗ ಕೆಲವು ಉತ್ಸಾಹಿ ಸದಸ್ಯರ ಧನ ಸಹಾಯದಿಂದ ಮಸ್ಕತ್ತಿನ ಕನ್ನಡ ಮಕ್ಕಳ ಕನ್ನಡ ಕಲಿಕೆ ಮುಂದುವರಿದಂತಾಯಿತು ಮುಂದೆ 2020 ರ ಕೊರೊನಾ ಲಾಕ್ದೌನ್ ತನಕ ಕನ್ನಡ ತರಗತಿಗಳು ಈ ಹೊಸ ಸ್ಥಳದಲ್ಲಿ ನಡೆಯಿತು.
ಕೊರೊನಾ ಕಳೆದೆರಡು ವರ್ಷಗಳಲ್ಲಿ ನಮ್ಮ ಜೀವನಕ್ರಮವನ್ನು ಸಂಪೂರ್ಣ ಬದಲಾಯಿಸಿದಂತೆ ನಮ್ಮ ಕನ್ನಡ ತರಗತಿಗಳ ಮೇಲೂ ತನ್ನ ಪರಿಣಾಮ ಬೀರಿತು. ಎಲ್ಲ ಕಡೆ ಶಾಲೆಗಳು, ತರಗತಿಗಳು ಅಂತರ್ಜಾಲಕ್ಕೆ ವರ್ಗಾವಣೆಯಾದಂತೆ ಕನ್ನಡ ತರಗತಿಗಳೂ ಸ್ವಲ್ಪಕಾಲ ಸ್ಥಗಿತಗೊಂಡು ಅಂತರ್ಜಾಲದಲ್ಲಿ 2020 ರ ಮೇ ತಿಂಗಳಲ್ಲಿ ಆರಂಭವಾಯಿತು. ನಿಧಾನವಾಗಿ ಶಿಕ್ಷಕ- ಶಿಕ್ಷಕಿಯರೂ ಈ ಹೊಸ ಪದ್ಧತಿಗೆ ಹೊಂದಿಕೊಂಡರು. ವಾರ್ಷಿಕ ಪರೀಕ್ಷೆಗಳು ಅಂತರ್ಜಾಲದಲ್ಲಿ ನಡೆಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶ್ರೀಯುತ ನಾಗಾಭರಣ ಅವರ ಅಧ್ಯಕ್ಷತೆಯಲ್ಲಿ ಪ್ರಪಂಚದಾದ್ಯಂತದ ಕನ್ನಡ ಶಿಕ್ಷಕರನ್ನು ಒಂದುಗೂಡಿಸಿ ಒಂದು ವಾಟ್ಸಾಪ್ ಗುಂಪು ಮಾಡಿ ಪ್ರಪಂಚದ ಎಲ್ಲ ಕನ್ನಡ ತರಗತಿಗಳನ್ನು ಒಂದುಗೂಡಿಸಿದರು. ಉತ್ತಮ ಲೇಖಕರಿಂದ, ಶಿಕ್ಷಣ ತಜ್ಞರಿಂದ ಆನ್ಲೈನ್ ಕನ್ನಡ ಕಲಿಸುವ ಶಿಕ್ಷಕರಿಗೆ ಕೊರೊನಾ ಸಮಯದಲ್ಲಿ ಕೆಲವು ಕಾರ್ಯಾಗಾರಗಳನ್ನು ನಡೆಸಿದರು. ಈ ಎಲ್ಲ ಚಟುವಟಿಕೆಗಳು ಮಸ್ಕತ್ ಕನ್ನಡ ಶಿಕ್ಷಕರಲ್ಲಿ ಹೊಸ ಹುರುಪನ್ನು ತುಂಬಿತು. ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಅಂತರ್ಜಾಲದಲ್ಲಿ ನಡೆಯಿತು.ವಿದ್ಯಾರ್ಥಿಗಳು
ಉತ್ಸಾಹದಿಂದ ಭಾಗವಹಿಸಿ ನಿರೂಪಣೆಯ ತನಕ ಎಲ್ಲವನ್ನೂ ಅಂತರ್ಜಾದ ಕಾರ್ಯಕ್ರಮಗಳಲ್ಲಿ ಮಾಡತೊಡಗಿದರು. ಹೊಸ ಸ್ಥಿತಿಗೆ ಹೊಂದಿಕೊಂಡ ಮಸ್ಕತ್ ಕನ್ನಡ ಮಕ್ಕಳ ಕನ್ನಡ ಕಲಿಕೆ ಅಂತರ್ಜಾಲದಲ್ಲಿ ನಿರಾತಂಕವಾಗಿ ಮುಂದುವರಿಯುತ್ತಿದೆ. ಈಗ ಕೊರೊನಾ ತಗ್ಗಿ ಜೀವನದ ಎಲ್ಲ ಚಟುವಟಿಕೆಗಳು ಮೊದಲಿನಂತೆ ನಡೆಯತೊಡಗಿದರೂ ಕನ್ನಡ ತರಗತಿಗಳು ಬಹುತೇಕ ಅಂತರ್ಜಾಲದಲ್ಲಿ ನಡೆಯುತ್ತಿದೆ. ಆದರೆ ಚಟುವಟಿಕೆಗಳು,
ಪರೀಕ್ಷೆಗಳು ಗುರುವಿನ ಸಮ್ಮುಖದಲ್ಲಿ ನಡೆಯುತ್ತಿದೆ.
ಕನ್ನಡ ಕಮ್ಮಟಗಳು:-
ನಮ್ಮ ಕನ್ನಡ ತರಗತಿಗಳ ಮಕ್ಕಳು ಕೇವಲ ಕನ್ನಡ ಓದಿ ಬರೆದರೆ ಸಾಲದು ಅವರಲ್ಲಿ ಕನ್ನಡ ಪ್ರಜ್ಞೆ ಬೆಳೆಯಬೇಕು, ಅವರು ಕರ್ನಾಟಕದ ಸಂಸ್ಕ್ರತಿ,
ಭೂಗೋಳ ಮುಂತಾದ ವಿಷಯಗಳನ್ನು ತಿಳಿಯಬೇಕು;
ಅವರು ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ಯೋಚಿಸಬೇಕು ಎನ್ನುವ ಆಶಯದೊಂದಿಗೆ 10 ದಿನಗಳ ಚಳಿಗಾಲದ ಕನ್ನಡ ಶಿಬಿರವನ್ನು ಚಳಿಗಾಲದ ರಜೆಯಲ್ಲಿ 2014 ರಿಂದ ಮಾಡಲು ಆರಂಭಿಸಿದೆವು. ಈ ಶಿಬಿರಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕನ್ನಡ ಮಾತನಾಡಲು ಬಂದರೆ ಸಾಕು ಓದಲು ಬರಬೇಕೆಂದಿಲ್ಲ ಎಂಬ ನಿಯಮದೊಂದಿಗೆ ಕನ್ನಡ ಅರ್ಥವಾಗುವ ಆಸಕ್ತ ಮಕ್ಕಳನ್ನು ಸೇರಿಸಿಕೊಂಡು ಮಾಡಿಸುವ ಈ ಶಿಬಿರದಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಕನ್ನಡದ ಹಾಡುಗಳು, ಕಥೆಗಳು, ಗಾದೆಗಳು, ಒಗಟುಗಳು, ಕನ್ನಡ ಭಾಷಾ ಆಟಗಳು, ಕನ್ನಡ ಭಾಷೆ, ರಾಜ್ಯದ ಬಗೆಗಿನ ವಿವಿಧ ಮಾಹಿತಿಗಳನ್ನು ವಿವಿಧ ಚಟುವಟಿಕೆಗಳ ಮೂಲಕ ತಿಳಿಸುತ್ತಿದ್ದೆವು. ಮಕ್ಕಳ ಕನ್ನಡ ಭಾಷೆಯ.ಮಟ್ಟದ ಪ್ರಕಾರ ಆವರಿಗೆ ಪಾತ್ರಗಳನ್ನು ನೀಡಿ ನಾಟಕವನ್ನು ಅಭ್ಯಾಸ ಮಾಡಿಸುತ್ತಿದ್ದೆವು. ಆಶು ಭಾಷಣ, ನೀಡಿದ ವಿಷಯಗಳ ಮೇಲೆ ಅಭ್ಯಾಸ ಮಾಡಿದ ಭಾಷಣ, ಕನ್ನಡದ ಜಾನಪದ ಆಟಗಳಾದ ಹಸು-ಹುಲಿ, ಟೊಪ್ಪಿ ಆಟ- ಮುಂತಾದ ಆಟಗಳು, ಕನ್ನಡದ ಪ್ರಸಿದ್ಧ ಚಲನಚಿತ್ರಗಳ ಪ್ರದರ್ಶನ - ಹೀಗೆ ವಿವಿಧ ಚಟುವಟಿಕೆಗಳ ಮೂಲಕ ಅವರ ಕನ್ನಡದ ಜ್ಞಾನವನ್ನು ಹೆಚ್ಚಿಸುವ ಪ್ರಯತ್ನ ಈ ಕಮ್ಮಟದಲ್ಲಿ ಆಗುತ್ತಿತ್ತು.
ಕೊನೆಯ ದಿನ ಸಮಾರೋಪ ಸಮಾರಂಭ ಮಾಡಿ ಶಿಬಿರದಲ್ಲಿ ಕಲಿತ ನಾಟಕದ ಪ್ರದರ್ಶನ, ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ ರಸಪ್ರಶ್ನೆ ಸ್ಪರ್ಧೆ; ಶಿಬಿರದಲ್ಲಿ ನಡೆಸಿದ ಸ್ಪರ್ಧೆ ಗಳ ಬಹುಮಾನ ವಿತರಣೆ- ಮುಂತಾದ ಕಾರ್ಯಕ್ರಮ ಮಾಡಿ ಪೋಷಕರ ಎದುರು ಪ್ರದರ್ಶಿಸಿ ಶಿಬಿರ ಮುಕ್ತಾಯವಾಗುತ್ತಿತ್ತು. ಶಿಬಿರದ ಕಾರ್ಯಕ್ರಮಗಳ ನಿರೂಪಣೆಯನ್ನೂ ವಿದ್ಯಾರ್ಥಿಗಳು ಮಾಡುತ್ತಿದ್ದರು. ಈ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಆಯೋಜಿಸಿದ ಶಿಕ್ಷಕರು ಅದರ ಅನುಭವಗಳನ್ನು ಈಗಲೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ. ಈಗ ಮೂರು ವರ್ಷಗಳಿಂದ ಕೊರೊನಾದ ಕಾರಣ ಈ ಶಿಬಿರ
ಮಾಸಿಕ ಪೂರಕ ಚಟುವಟಿಕೆಗಳು:-
ಕಳೆಡೆರದು ವರ್ಷಗಳಿಂದ ಅಂತರ್ಜಾಲದ ಮೂಲಕ ನಡೆಯುತ್ತಿರುವ ಕನ್ನಡ ತರಗತಿಗಳನ್ನು ಮಕ್ಕಳಿಗೆ ಆಸಕ್ತಿಕರವನ್ನಾಗಿಸಲು ಶಿಕ್ಷಕಿಯರು ಅನೇಕ ವಿಧದಲ್ಲಿ ಪ್ರಯತ್ನಿಸುತ್ತಿದ್ದೇವೆ. ಪ್ರತಿ ತಿಂಗಳು ತರಗತಿವಾರು ಅವರ ಮಟ್ಟಕ್ಕೆ ಸರಿಯಾಗಿ ಸ್ಪರ್ಧೆಗಳನ್ನು ಆಯೋಜಿಸಿ ತರಗತಿ ಮಟ್ಟದ ಸ್ಪರ್ಧೆಗಳನ್ನು ಅಂತರ್ಜಾಲದಲ್ಲಿ ನಡೆಸುತ್ತಿದ್ದೇವೆ. ನಮ್ಮ ಸಂಘದ ಸಹೃದಯ ಬಂಧುಗಳು ತೀರ್ಪುಗಾರರಾಗಿ ಇದಕ್ಕೆ ಸಹಕರಿಸುವುದರ ಮೂಲಕ ಭಾಗವಹಿಸುವ ವಿದ್ಯಾರ್ಥಿಗಳ ಉತ್ಸಾಹವನ್ನು ಹೆಚ್ಚಿಸುತ್ತಾರೆ. ಅಶುಭಾಷಣ, ಚಿತ್ರ ನೋಡಿ ಕನ್ನಡದಲ್ಲಿ ಬರೆ, ತಯಾರಿಸಿದ ಭಾಷಣ, ಕನ್ನಡದ ಗಾದೆಗಳ ವಿವರಣೆ, ಕನ್ನಡದ ಒಗಟುಗಳನ್ನು ವಿವರಿಸುವುದು,
ಪ್ರಭಂದ ಸ್ಪರ್ಧೆ, ಕಥೆ ಕಟ್ಟುವ ಆಟ, ಕನ್ನಡದ ಕವಿತೆ, ವಚನಗಳ ವಾಚನ- ಮುಂತಾದ ಚಟುವಟಿಕೆಗಳನ್ನು ಮಾಸಿಕ ಚಟುವಟಿಕೆಗಳಾಗಿ ಇಲ್ಲಿಯವರೆಗೆ ಆಯೋಜಿಸಿದ್ದೇವೆ.
ಮಸ್ಕತ್ ಕನ್ನಡಶಾಲೆಯ ಮಾಜಿ ಕನ್ನಡ ಶಿಕ್ಷಕರು :
ಮಸ್ಕತ್ ಕನ್ನಡ ತರಗತಿಗಳ 17
ವರ್ಷಗಳ ಇತಿಹಾಸದಲ್ಲಿ ಅನೇಕ ಸ್ವಯಂಸೇವಕ ಶಿಕ್ಷಕ ಶಿಕ್ಷಕಿಯರು ತಮ್ಮ ಸೇವೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇಲ್ಲಿ ಬೆಳೆಯುವ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಭಾಷೆಯ ಬಗೆಗೆ ಆಸಕ್ತಿ ಮೂಡಿಸಲು ನಿಸ್ವಾರ್ಥವಾಗಿ ಪ್ರಯತ್ನಿಸಿದ್ದಾರೆ. ನಮ್ಮ ಕೆಲವು ಪ್ರಮುಖ ಮಾಜೀ ಶಿಕ್ಷಕರ ಹೆಸರುಗಳು, ಅನುಭವಗಳು ಇಲ್ಲದೇ ಈ ಲೇಖನ ಅಪೂರ್ಣ ಎನಿಸುತ್ತದೆ. ಅವರಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿದ್ದ ಕೆಲವರನ್ನು ಈ ಲೇಖನವನ್ನು ಬರೆಯಲು ನಾನು ಆರಂಭಿಸಿದಾಗ ಸಂಪರ್ಕಿಸಿ ಅವರ ಮಸ್ಕತ್ ಕನ್ನಡ ತರಗತಿಗಳ ಅನುಭವಗಳನ್ನು ಕೇಳಿದ್ದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಕೆಲವರ ಅನುಭವಗಳನ್ನು ಇಲ್ಲಿ ದಾಖಲಿಸಿದ್ದೇನೆ.
ಕಿರಣ್ ಮಂಜುನಾಥ್ : ವೃತ್ತಿಯಲ್ಲಿ ಅಭಿಯಂತರರಾದ ಇವರು ಕೊರೊನಾ ಸಮಯದಲ್ಲಿ ಕಾರಣಾಂತರಗಳಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳಬೇಕಾಯಿತು. ಅಲ್ಲಿದ್ದುಕೊಂಡೇ ಎರಡು ವರ್ಷ ಅಂತರ್ಜಾಲದ ಮೂಲಕ ತಮ್ಮ ಕನ್ನಡ ಪಾಠವನ್ನು ಮುಂದುವರಿಸಿದ್ದ ಇವರು ಈಗಲೂ ಇಲ್ಲಿನ ಶಿಕ್ಷಕವೃಂದಕ್ಕೆ ಬೇಕಾದ ತಾಂತ್ರಿಕ ಸಹಾಯವನ್ನು ಅಲ್ಲಿಂದಲೇ ಮಾಡುತ್ತಿರುತ್ತಾರೆ. ಅವರ ಅನುಭವಗಳನ್ನು ಇವರ ಮಾತುಗಳಲ್ಲೇ ಓದುಗರ ಮುಂದಿಡುತ್ತೇನೆ-"ನಾನು ಸುಮಾರು ೯ ವರ್ಷ ಮಸ್ಕತ್ತಿನಲ್ಲಿ ಕನ್ನಡ ಶಿಕ್ಷಕನಾಗಿ ಕೆಲಸ ಮಾಡಿದೆ. ಶಿಕ್ಷಕನಾಗಿ ಪೂರ್ವಾನುಭವವಿಲ್ಲದೆ ನಾನು ಮಕ್ಕಳಿಗೆ ಹೇಳಿಕೊಡಲಾಗುವುದೆ ಎಂದು ಅನುಮಾನಿಸಿದೆ. ಆದರೆ ಹೊರದೇಶದಲ್ಲಿ ನಮ್ಮ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಪಸರಿಸುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಒಪ್ಪಿದೆ. ವಾರಾಂತ್ಯದಲ್ಲಿ ಕನ್ನಡ ಕಲಿಯುವ ಪುಟ್ಟ ಮಕ್ಕಳ ಉತ್ಸುಕತೆಯನ್ನು ನೋಡಿ ಆಶ್ಚರ್ಯವಾಯಿತು. ಮಕ್ಕಳು ಕನ್ನಡ ಭಾಷೆಯನ್ನು ಕಲಿತು, ಓದಿ, ಬರೆದು, ಮಾತನಾಡುವುದನ್ನು ನೋಡಿ ತುಂಬಾ ಖುಷಿಯಾಯಿತು.ಶ್ರೀ ಜಾನಕಿನಾಥ್ ಮತ್ತು ಶಿವಣ್ಣ ಅವರ ಜೊತೆಯಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪಠ್ಯಕ್ರಮವನ್ನು ಆಧರಿಸಿ ಮಸ್ಕತ್ ಕನ್ನಡ ಶಾಲೆಯಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ಅಳವಡಿಸಿದೆ. ೨ನೆಯ ತರಗತಿಯಿಂದ ಶುರು ಮಾಡಿ, ೪ನೆಯ ತರಗತಿಯವರೆಗೆ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದೆ.. ಬಹುಶಃ ಕಲಿಸಿದ್ದಕಿಂತ ಕಲಿತಿದ್ದೆ ಹೆಚ್ಚು, ಅದ್ಭುತ ಅನುಭವ."
ಶ್ರೀ ಶಿವಣ್ಣನವರು ಮಸ್ಕತ್ ಕನ್ನಡ ಶಿಕ್ಷಣದ ಸಂಚಾಲಕನಾಗಿ ಕನ್ನಡ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಡು ಸುಮಾರು ನಾಲ್ಕು ವರ್ಷ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರಲ್ಲದೆ ಶ್ರೀಮತಿ ಶ್ರೀಲಕ್ಷ್ಮೀ ಉಡುಪ, ಶ್ರೀ ಅನಿಲ್, ಮಮತಾ ರಾವ್, ಸರಸ್ವತಿ ಭಟ್, ಗಣೇಶ್ ಹೆಗ್ಡೆ, -ಮುಂತಾದವರು ಇಲ್ಲಿ ಕನ್ನಡ ಶಿಕ್ಷಕವೃಂದದ ಭಾಗವಾಗಿದ್ದು ಈಗ ಭಾರತದಲ್ಲಿ ವಾಸಿಸುತ್ತಿದ್ದಾರೆ.
ಮಸ್ಕತ್ತಿನ ಪ್ರಸ್ತುತ ಕನ್ನಡ ಶಿಕ್ಷಕರ ತಂಡ:
ಪ್ರಸ್ತುತ ಶ್ರೀಮತಿ ಜಯಾ ಛಬ್ಬಿ, ಶ್ರೀಮತಿ ಸ್ಮಿತಾ ಹೊಳ್ಳ, ಶ್ರೀಮತಿ ಪ್ರೀತಿ ಶಿವಯೋಗಿ, ಶ್ರೀಮತಿ ನಿರ್ಮಲ ಅಮರೇಶ, ಶ್ರೀಮತಿ ಕವಿತಾ ಜಗದೀಶ್, ಶ್ರೀಮತಿ ಜ್ಯೋತಿ ಹೆಗ್ಡೆ, ಶ್ರೀಮತಿ ಶೋಭಾ ಮತ್ತು ನಾನು ಸುಧಾ ಶಶಿಕಾಂತ್ ಶಿಕ್ಷಕಿಯರ ತಂಡದಲ್ಲಿದ್ದು ಮಸ್ಕತ್ತಿನ ಕನ್ನಡ ಶಾಲೆಯನ್ನು ಮುನ್ನೆಡುಸುತ್ತಿದ್ದೇವೆ.
| ಪ್ರಸ್ತುತ ಕನ್ನಡ ಶಿಕ್ಷಕರ ತಂಡ |
ಮಸ್ಕತ್ ಕನ್ನಡ ಶಾಲೆಯ ಶಿಕ್ಷಕಿಯಾಗಿ ನನ್ನ ಅನುಭವ:-
2008 ರಿಂದ ಈಗಿನ ತನಕ ಇಲ್ಲಿಯ ಕನ್ನಡ ಶಿಕ್ಷಣದ ಭಾಗವಾಗಿರುವ ನಾನು, ನನ್ನ ಅನುಭವಗಳನ್ನು ಇಲ್ಲಿ ಧಾಖಲಿಸಲೇಬೇಕಾಗುತ್ತದೆ. ಉಳಿದ ಎಲ್ಲ ಶಿಕ್ಷಕರು ಹೇಳಿದಂತೆ ಇದೊಂದು ವಿಶಿಷ್ಟ ಅನುಭವ. ಮೊದಲಿಗೆ ಮಗಳಿಗೆ ಕನ್ನಡ ಕಲಿಸಲು ತರಗತಿಗೆ ಸೇರಿಸಿದ ನಾನು, ಕೆಲವೇ ದಿನಗಳಲ್ಲಿ ನಾನೂ ಕನ್ನಡ ಕಲಿಸಲು ಸೇರಿಕೊಂಡೆ. ಕ್ರಮೇಣ ಇದು ನನ್ನ ಜೀವನದ ಭಾಗವಾಯಿತು. ಇಲ್ಲಿನ ತರಗತಿಗಳಲ್ಲಿ ನಾನು ಯಾವಾಗಲೂ ಹಿರಿಯ ತರಗತಿಯನ್ನೇ ತೆಗೆದುಕೊಳ್ಳುತ್ತಿದ್ದೆ. ಪ್ರತೀ ವರ್ಷದ ನನ್ನ ವಿದ್ಯಾರ್ಥಿಗಳೊಡನೆ ಒಂದು ಆತ್ಮೀಯ ಭಾವನೆ ಬೆಳೆಯುತ್ತಿತ್ತು ಹಿರಿಯ ತರಗತಿಯಾಗಿದ್ದರಿಂದ ಓದಿ ಬರೆಯಲು ನನ್ನ ವಿದ್ಯಾರ್ಥಿಗಳಿಗೆ ಸರಿಯಾಗಿ ಬರುತ್ತಿದ್ದುದರಿಂದ ವಿದ್ಯಾರ್ಥಿಗಳ ಆಸಕ್ತಿಗೆ ಸರಿಯಾಗಿ ಅವರಿಗೆ ಪಾಠಗಳನ್ನು ಮಾಡುತ್ತಿದ್ದೆ. ಕೆಲವು ವಿದ್ಯಾರ್ಥಿಗಳು ಬಹಳ ಆಸ್ಥೆಯಿಂದ ಕಲಿತು ಕಾವ್ಯ ವಾಚನವನ್ನೂ ಕನ್ನಡ ಸಂಘದ ವೇದಿಕೆಯಲ್ಲಿ ಪ್ರದರ್ಶಿಸಿದ್ದು ನನಗೆ ಹೆಮ್ಮೆಯ ವಿಷಯ. ಈ ಮಕ್ಕಳಿಂದ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ, ರಸಪ್ರಶ್ನೆ ಗಳನ್ನು ಮಾಡಿಸಿದ್ದು ; ವಿದ್ಯಾರ್ಥಿಗಳನ್ನೆಲ್ಲ ಸೇರಿಸಿಕೊಂಡು ನಾಟಕಗಳನ್ನು ಮಾಡಿಸಿದ್ದು- ಎಲ್ಲವೂ ಶಿಕ್ಷಕಿಯಾಗಿ ನನ್ನ ನೆನಪಿನಲ್ಲಿ ಯಾವಾಗಲೂ ಉಳಿಯುವ ಘಟನೆಗಳು. ಇಲ್ಲಿ ಶಾಲೆಯನ್ನು ಮುಗಿಸಿ ಮುಂದೆ ಓದಲು ಭಾರತಕ್ಕೆ ಹೋಗಿರುವ ನನ್ನ ಕನ್ನಡ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಗೆ ನನ್ನನ್ನು ನೆನಪಿಸಿ ಕೊಂಡು ಸಂದೇಶವನ್ನು ಕಳುಹಿಸಿದಾಗ ಮನಸ್ಸಿಗೆ ಆಗುವ ಸಂತೋಷ ಬಣ್ಣಿಸಲು ಆಗುವುದಿಲ್ಲ. ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳು ಕನ್ನಡ ಓದಲು ಬರೆಯಲು ತಡವರಿಸುತ್ತಿರುವಾಗ ಇಲ್ಲಿ ಬೆಳೆದ ಮಕ್ಕಳು ಆತ್ಮವಿಶ್ವಾಸದಿಂದ ಕನ್ನಡವನ್ನು ಓದಲು ಬರೆಯಲು ಕಲಿತಿರುವುದು, ಆ ಭಾಷೆಯ ಬಗೆಗೆ ಗೌರವ ವನ್ನು ಬೆಳೆಸಿಕೊಂಡಿರುವುದು, ಈ ಕೆಲಸದಲ್ಲಿ ನಾನು ಭಾಗಿಯಾಗಿರುವುದು - ಇವೆಲ್ಲ ನನ್ನ ಜೀವನದ ಒಂದು ಸಾರ್ಥಕ ಭಾಗವಾಗಿ ನನ್ನ ಹೃದಯಕ್ಕೆ ಹತ್ತಿರವಾದ ಸುಂದರ ಅನುಭವಾಗಳಾಗಿ ನನ್ನೊಂದಿಗೆ ಇರುತ್ತದೆ.
ನಮ್ಮ ಪ್ರತಿಭಾವಂತ ಹಳೆಯ ವಿದ್ಯಾರ್ಥಿಗಳು:
ಮಸ್ಕತ್ತಿನ ಕನ್ನಡ ಶಿಕ್ಷಕಿಯಾಗಿ ಕಳೆದ 15 ವರ್ಷಗಳ ನನ್ನ ಅನುಭವದಲ್ಲಿ ನಾನು ಇಲ್ಲಿ ಹೆಸರಿಸಲೇಬೇಕಾದ ಕೆಲವು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರು ಇಲ್ಲಿ ಕಲಿಯುವಾಗ ಇಲ್ಲಿನ ಎಲ್ಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದುದಲ್ಲದೇ ಇಲ್ಲಿ ಕಲಿತ ಕನ್ನಡವನ್ನು ಮಸ್ಕತ್ ಬಿಟ್ಟು ತಮ್ಮ ಮುಂದಿನ ಓದಿಗೆಂದು ಹೋದಲ್ಲಿಯೂ ಬಳಸಿಕೊಂಡಿದ್ದಾರೆ, ಈ ಭಾಷೆಯ ಜ್ಞಾನವನ್ನು ತಮ್ಮ ಆಸಕ್ತಿಯಿಂದ ಬೆಳೆಸಿಕೊಂಡಿದ್ದಾರೆ.
ಶಿಶಿರ್ ನಾಗರಾಜ್- 2009 ರಿಂದ 2013 ರ ತನಕ ಇಲ್ಲಿ ಕನ್ನಡವನ್ನು ಕಲಿತ ಈತ ಇಲ್ಲಿನ ಎಲ್ಲ ಚಟುವಟಿಕೆಗಳಲ್ಲಿ ಮುಂದಿರುತ್ತಿದ್ದುದಲ್ಲದೇ ಕನ್ನಡದಲ್ಲಿ ರಸಪ್ರಶ್ನೆ ಕಾರ್ಯಕ್ರಮ ವನ್ನೂ ಇಲ್ಲಿ ನಡೆಸಿದ್ದ. ಮುಂದೆ ಬೆಂಗಳೂರಿನ ಪಿ ಇ ಎಸ್ ಯೂನಿವರ್ಸಿಟಿ ಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರುವ ಈತ ಪ್ರಸ್ತುತ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಐಚ್ಚಿಕ ಕನ್ನಡವನ್ನೇ ಒಂದು ಭಾಷೆಯಾಗಿ ತೆಗೆದುಕೊಂಡು ಮೊದಲ ಹಂತದ ಪರೀಕ್ಷೆಯನ್ನು ತೇರ್ಗಡೆಯಾಗಿದ್ದಾನೆ. ಅವನ ಮಸ್ಕತ್ ಕನ್ನಡ ಕಲಿಕೆಯ ಅನುಭವ- "ಮಸ್ಕತ್ತಿನಿಂದ ಬೆಂಗಳೂರಿಗೆ ಬಂದ ನನಗೆ ಕನ್ನಡ ಭಾಷೆಯಲ್ಲಿನ ಜ್ಞಾನವು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಹತ್ತಿರವಾಗಿಸಿತು. ಇಂಜಿನಿಯರಿಂಗ್ ಓದುವ ಸಮಯದಲ್ಲಿ ಕನ್ನಡವು ಕಡ್ಡಾಯವಾದ ಭಾಷೆಯಾಗಿದ್ದು ನನ್ನ ಪೂರ್ವ ಕನ್ನಡ ಕಲಿಕೆ ಬಹಳಷ್ಟು ಸಹಾಯಕ್ಕೆ ಬಂದಿತು. ಹಾಗೆಯೆ ಕನ್ನಡ ಭಾಷೆಯು ಸರ್ಕಾರೀ ನೌಕರಿಗೆ ಅವಶ್ಯಕವಾಗಿದ್ದರಿಂದ ನನ್ನ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಕನ್ನಡ ಭಾಷಾ ಸಾಮರ್ಥ್ಯವು ನೆರವಿಗೆ ಬಂತು. ಅಂತೆಯೇ ನೂತನವಾದ ತಂತ್ರಜ್ಞಾನಗಳಾದ NLP, AI ಗಳ ಮೇಲೆ ಕೆಲಸ ಮಾಡುತ್ತಿರುವ ನನಗೆ ಕನ್ನಡ ಕಲಿತಿರುವುದುಯ ಸಹಾಯ ವಾಗುತ್ತಿದೆ."
ಪ್ರೀತಿ ಕೊಡಂಚ - 2008 ರಿಂದ 2013ರ ತನಕ ಇಲ್ಲಿ ಕನ್ನಡವನ್ನು ಕಲಿತ ಈಕೆ ಮುಂದೆ ಪದವಿಯನ್ನು ಮಾಡಿದ್ದು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ. ಅಲ್ಲಿ ಕನ್ನಡೆತರರಿಗೆ ಕನ್ನಡ ಕಲಿಸುವ ಚಟುವಟಿಕೆಯಲ್ಲಿ ಉತ್ಸಾಹದಿಂದ ತೊಡಗಿಕೊಂಡದ್ದಲ್ಲದೆ, ಕನ್ನಡ ನಾಟಕಗಳು, ಕನ್ನಡದ ಯಾವುದೇ ಸಾಂಸ್ಕ್ರತಿಕ ಕಾರ್ಯಕ್ರಮ ವನ್ನು ಆಸ್ಥೆಯಿಂದ ನೋಡುವ ಸಂಸ್ಕಾರವನ್ನು ನಮ್ಮ ಕನ್ನಡ ತರಗತಿ ಇವಳಿಗೆ ಹಾಕಿಕೊಟ್ಟಿತ್ತು. ಪ್ರಸಕ್ತ NIMHANS ನಲ್ಲಿ ಮನಃಶಾಸ್ತ್ರದಲ್ಲಿ Mphil ಮಾಡುತ್ತಿದ್ದಾಳೆ. ಮಸ್ಕತ್ತಿನಲ್ಲಿ ಕನ್ನಡ ಕಲಿತ ಅನುಭವ ಅವಳ ಪ್ರಕಾರ- " ಮನಃಶಾಸ್ತ್ರ ನಾನು ಅಧ್ಯಯನ ಮಾಡುತ್ತಿರುವ ವಿಷಯವಾದುದರಿಂದ ರೋಗಿಗಳೊಡನೆ ಸಂವಹಿಸಲು ಕನ್ನಡ ಭಾಷೆಯ ಜ್ಞಾನ ಬಹಳ ಉಪಯುಕ್ತವಾಗಿದೆ. ಅಲ್ಲದೇ ಆನೇಕ ಪಾಶ್ಚಾತ್ಯ ಮನೋರೋಗಿಗಳನ್ನು ಚಿಕಿತ್ಸೆ ಮಾಡಲು ಬೇಕಾಗವು ಪ್ರಶ್ನಾವಳಿಗಳನ್ನು ಇಂಗ್ಲಿಷಿನಿಂದ ಎಲ್ಲರೂ ಕನ್ನಡದಲ್ಲಿ ಉಪಯೋಗಿಸುವಂತೆ ಕನ್ನಡಕ್ಕೆ ಭಾಶಾಂತರಿಸಲೂ ನನಗೆ ಸಾಧ್ಯವಾಗಿದೆ. ನಾನು ಪದವಿ ಮಾಡುವಾಗ ಕರ್ನಾಟಕದ ಕೆಲವು ಹಳ್ಳಿಯ ಶಾಲಾ ಮಕ್ಕಳಲ್ಲಿ ಮಾನಸಿಕ ಸ್ವಾಸ್ತ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆ. ಇದೆಲ್ಲ ಸಾಧ್ಯವಾದದ್ದು ನನ್ನ ಕನ್ನಡ ಭಾಷಾ ಜ್ಞಾನದಿಂದ. ಮನಃಶಾಸ್ತ್ರಜ್ಞೆಯಾಗಿ ಅನೇಕ ಭಾಷೆಗಳನ್ನು ಕಲಿಯುವುದರಿಂದ ಮೆದುಳಿನ ಮೇಲೆ ಆಗುವ ಉತ್ತಮ ಪರಿಣಾಮಗಳ ಬಗೆಗೆ ತಿಳಿದಿದ್ದೆ. ಅದರಿಂದಾಗುವ ಸಾಮಾಜಿಕ ಮತ್ತು ಭಾವನಾತ್ಮಕ ಪ್ರಯೋಜನಗಳು ಈಗ ಕಳೆದ ಐದು ವರ್ಷಗಳ ಬೆಂಗಳೂರಿನ ವಾಸದಲ್ಲಿ ನನಗೆ ತಿಳಿಯಿತು. ನನ್ನ ಮಾತೃಭಾಷೆಯ ಜ್ಞಾನವು ನನ್ನ ಜನರೊಂದಿಗೆ ನಾನು ಸಂವಹಿಸುವ ರೀತಿಯನ್ನೇ ಬದಲಿಸುವುದಲ್ಲದೆ, ನನ್ನನ್ನು ಈ ಸ್ಥಳದೊಂದಿಗೆ ಭಾವನಾತ್ಮಕವಾಗಿ ಜೋಡಿಸುತ್ತದೆ"
ಅಮೂಲ್ಯ ಇಚಗಿರಿ - 2012 ರಿಂದ 2016 ರವರೆಗೆ ಮಸ್ಕತ್ತಿನ ಕನ್ನಡ ತರಗತಿಗಳಲ್ಲಿ ಕನ್ನಡವನ್ನು ಕಲಿತ ಈಕೆ ಪ್ರಸಕ್ತ ಪುಣೆಯ ಪ್ರತಿಷ್ಠಿತ ....ಕಾಲೇಜಿನಲ್ಲಿ ಬಯೋ ಟೆಕ್ನಾಲಗಿಯಲ್ಲಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾಳೆ. ಅವಳ ಅಭಿಪ್ರಾಯ ದಲ್ಲಿ ಮಸ್ಕತ್ತಿನ ಕನ್ನಡ ಶಾಲೆಗೆ ಹಾಜರಾಗಿ ಅವಳು ಕನ್ನಡವನ್ನು ಮಾತ್ರ ಕಲಿಯಲಿಲ್ಲ ಅದು ಅವಳ ವ್ಯಕ್ತಿತ್ವದ ಬೆಳವಣಿಗೆಗೆ ಬಹಳ ಸಹಕಾರಿಯಾಯಿತು. ಇಲ್ಲಿನ ಕನ್ನಡ ಕಮ್ಮಟದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ಕನ್ನಡದಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸಿದ್ದನ್ನು ಅವಳು ಈಗಲೂ ಮೆಲುಕು ಹಾಕುತ್ತಾಳೆ
ನೂತನ್ ಭಟ್ : ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ತನ್ನ MBBS ಮುಗಿಸಿ ಈಗ ಸ್ನಾತಕೋತ್ತರ ಪದವಿಗೆ ತಯಾರಿ ನಡೆಸುತ್ತಿರುವ ಈಕೆ 2007 ರಿಂದ 2012 ರವರೆಗೆ ಮಸ್ಕತ್ತಿನ ಕನ್ನಡ ತರಗತಿಯ ವಿದ್ಯಾರ್ಥಿ. ಅವಳ ಮಾತುಗಳಲ್ಲಿ " ಮಸ್ಕತ್ತಿನಲ್ಲಿ ಕನ್ನಡದ ಉಪಯೋಗ ನನಗೆ ಬಹಳವಾಗಿ ಆಗಿದೆ. ಮೊದ ಮೊದಲು ಬೆಂಗಳೂರಿಗೆ ಬಂದಾಗ ಇಲ್ಲಿನ ಬಸ್ಸಿನ ಕನ್ನಡದ ಫಲಕಗಳನ್ನು ಓದುವಾಗ ಬಹಳ ಸಂತೋಷವಾಗುತ್ತಿತ್ತು. ನಂತರ ಕನ್ನಡಿಗಳಾಗಿ ಸರಿಯಾಗಿ ಕನ್ನಡದಲ್ಲಿ ಮಾತನಾಡಲು ವೈದ್ಯೆಯಾಗಿ ಕನ್ನಡದ್ ರೋಗಿಗಳೊಡನೆ ಸಂವಹಿಸಲು ಈ ಭಾಷೆಯ ಜ್ಞಾನ ನನಗೆ ಬಹಳ ಉಪಯುಕ್ತವಾಗಿದೆ. ನನಗೆ ಕನ್ನಡ ಕಲಿಸಿದ ಎಲ್ಲಾ ಗುರುಗಳನ್ನು ನಾನು ನೆನೆಯುತ್ತಿರುತ್ತೇನೆ"
ಹೀಗೆ ಮಸ್ಕತ್ತಿನಲ್ಲಿ ಕನ್ನಡ ಪಾಠ ಒಂದು ವಾರಾಂತ್ಯದ ಒಂದು ಚಿಕ್ಕ ಚಟುವಟಿಕೆಯಾಗಿ ನನ್ನ ದಿನಚರಿಯ ಭಾಗವಾಗಿ ಆರಂಭವಾಗಿದ್ದು ನನ್ನ ಲೋಕವೇ ಆಗಿ ಪರಿವರ್ತಿತವಾಗಿದೆ ಎಂದು ಈ ಲೇಖನ ಬರೆಯುವಾಗಲೇ ನನ್ನ ಅರಿವಿಗೆ ಬಂದಿದ್ದು. ಈ ಒಂದು ಚಟುವಟಿಕೆಯು ವೃತ್ತಿಯಿಂದ ಶಿಕ್ಷಕಿಯಲ್ಲದ ನನಗೆ ಜೀವನವಿಡೀ ನೆನಪಿನಲ್ಲಿಡುವಂತಹ ಒಳ್ಳೆಯ ವಿದ್ಯಾರ್ಥಿಗಳನ್ನು, ಅನೇಕ ಸ್ನೇಹಿತರನ್ನು ನೀಡಿದ್ದಲ್ಲದೇ ಒಂದು ಭಾಷೆಯನ್ನು ಪಾಠ ಮಾಡುವ ರೀತಿಯನ್ನು ಕಲಿಸಿದೆ. ವಿದೇಶದಲ್ಲಿದ್ದು ಇಷ್ಟು ವರ್ಷ ಇಲ್ಲಿ ಬೆಳೆಯುವ ಮಕ್ಕಳಿಗೆ ನಮ್ಮ ಮಾತೃಭಾಷೆ ಕನ್ನಡದ ಬಗ್ಗೆ ಅರಿವು ಮೂಡಿಸುವ ಅವಕಾಶ ಮಾಡಿಕೊಟ್ಟ ಈ ಕನ್ನಡ ತರಗತಿಗಳ ಸಾಧನೆ ನಿಜವಾಗಿ ಶ್ಲಾಘನೀಯ. ಯಾವುದೇ ಭಾಷೆ ಸಮರ್ಥವಾಗಿ ಮುಂದುವರಿಯಬೇಕಾದರೆ ಅದನ್ನು ನಮ್ಮ ಮುಂದಿನ ತಲೆಮಾರು ಚೆನ್ನಾಗಿ ಕಲಿತಿರಬೇಕು. ನಮ್ಮ ಭಾಷೆಯನ್ನೂ ನಮ್ಮ ಮುಂದಿನ ತಲೆಮಾರಿಗೆ ನಾವು ಕಲಿಸುವ ಒಂದು ಚಿಕ್ಕ ಪ್ರಯತ್ನವನ್ನು ವಿದೇಶದಲ್ಲಿದ್ದು ಮಾಡಿ ಯಶಸ್ವಿಯಾಗಿರುವ ತೃಪ್ತಿ ಮಸ್ಕತ್ ಕನ್ನಡ ಶಾಲೆಯ ಭಾಗವಾಗಿರುವ ಎಲ್ಲರಿಗೂ ಇದೆ.
ಬರಹ -ಸುಧಾ ಶಶಿಕಾಂತ್, ಮಸ್ಕತ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ