ನ್ಯೂಜಿಲ್ಯಾಂಡ್ ವಿಶಾಲವಾದ ದ್ವೀಪ ರಾಷ್ಟ್ರ. ಉತ್ತರ ಮತ್ತು ದಕ್ಷಿಣ ದ್ವೀಪಗಳಾಗಿ ದೇಶವನ್ನು ವಿಂಗಡಿಸಲಾಗಿದೆ. ಉತ್ತರ ದ್ವೀಪವು ರಾಜಧಾನಿಯಾದ ವೆಲ್ಲಿಂಗ್ಟನ್, ಅತ್ಯಂತ ದೊಡ್ಡ ನಗರವಾದ ಆಕಲಾಂಡ್ ಗಳನ್ನೊಳಗೊಂಡಿದೆ. ಕ್ರೈಸ್ಟ್ ಚರ್ಚ್, ಆರೋಕಿ ಪರ್ವತ, ಟೆಕಾಪೂ, ಟಿಅನೌ, ಮಿಲ್ಫಾರ್ಡ್ ಸೌಂಡ್, ಕ್ಯಿನ್ಸ್ ಟೌನ್ ಮುಂತಾದ ಸುಂದರ ಪ್ರದೇಶಗಳನ್ನು ಸಂದರ್ಶಿಸಿ ದಕ್ಷಿಣ ದ್ವೀಪದ ಪ್ರವಾಸ ಮುಗಿಸಿದ ನಾವು ಉತ್ತರದ್ವೀಪದ ಅತ್ಯಂತ ದೊಡ್ದನಗರವಾದ ಆಕಲಾಂಡಿಗೆ ಬಂದೆವು. ಮಹಾನಗರವು ಯಾವುದೇ ನಗರದಂತೆ ವಾಹನ ದಟ್ಟಣೆಯಿಂದ ನಮ್ಮನ್ನು ಸ್ವಾಗತಿಸಿತು. ಇಲ್ಲಿಗೆ ನಾವು ತಲುಪಬೇಕಾದ್ದಕ್ಕಿಂತ ಸುಮಾರು ಜಾಸ್ತಿ ಹೊತ್ತು ಬೇಕಾಗಿ ಬೆಂಗಳೂರಿನ ನೆನಪು ತರಿಸುತ್ತಿತ್ತು.
ಈಗ ಇಂಗ್ಲಿಷ್ ಭಾಷೆ ಮಾತನಾಡುವ ಕೋಮನ್ ವೆಲ್ತ್ ರಾಷ್ಟ್ರಗಳಲ್ಲಿ ಒಂದಾದ ಈ ದೇಶಕ್ಕೆ ಯುರೋಪಿನ ಜನರು ಬಂದು ವಾಸಿಸಲಾರಂಭಿಸಿದ್ದು ಸುಮಾರು 18 ನೆಯ ಶತಮಾನದ ಆರಂಭದಲ್ಲಿ. ಇದಕ್ಕೂ ಮೊದಲು ಪೊಲೀನೆಶಿಯಾದಿಂದ ಇಲ್ಲಿಗೆ 13ನೆಯ ಶತಮಾನದಲ್ಲಿ ಆಗಮಿಸಿದ್ದ 'ಮಾವೊರಿ' ಎಂಬ ಬುಡಕಟ್ಟು ಜನಾಂಗ ಈ.ನೆಲದ ಮೊದಲ ನಿವಾಸಿಗಳೆನಿಸಿದ್ದಾರೆ. ವಿಶಿಷ್ಟವಾದ ಇವರ ಸಂಸ್ಕೃತಿ ಇಲ್ಲಿಗೆ ಬರುವ ಪ್ರವಾಸಿಗರ ಒಂದು ಮುಖ್ಯ ಆಕರ್ಷಣೆ. ಮಾವೊರಿ ಭಾಷೆ ಇಲ್ಲಿನ ಅಧಿಕೃತ ಭಾಷೆಗಳಲ್ಲಿ ಒಂದು. ಎಲ್ಲ ಜಾಗಗಳಿಗೂ ಮಾವೊರಿ ಹೆಸರು ಬೇರೆ ಇದೆ ಉದಾಹರಣೆಗೆ ಒಟೆರುವಾ (ನ್ಯೂಜಿಲ್ಯಾಂಡ್) ,ಫಿಯೋಫಿಯೊತಾಹಿ(ಮಿಲ್ಫರ್ಡಸೌಂಡ್ ) ಇತ್ಯಾದಿ. ಮಾವೊರಿ ಸಂಸ್ಕೃತಿಯನ್ನು ಅನುಭವಿಸಲು, ಅರಿಯಲು ಉತ್ತರ ದ್ವೀಪವು ಸರಿಯಾದ ತಾಣ.
ಆಕ್ಲ್ಯಾಂಡ್ ನಗರ
ಆಕಲಾಂಡಿನ ಮೌಂಟ್ ಈಡನ್ ಇಲ್ಲಿನ ಒಂದು ಸುಂದರ ಜಾಗ. ಅಲ್ಲಿಂದ ಇಡೀ ನಗರದ ದೃಶ್ಯ ಸುಂದರವಾಗಿ ಕಾಣುತ್ತದೆ. ಇಡೀ ನಗರ ಸ್ಥಬ್ಧವಾಗಿರುವ ಜ್ವಾಲಾಮುಖಿಯ ಮೇಲೆ ಬೆಳದಿದೆ. ಈಡನ್ ಗುಡ್ಡದ ಮೇಲೆ ಜ್ವಾಲಾಮುಖಿಯ ಕುರುಹಾಗಿ ಒಂದು ದೊಡ್ಡ ಕಂದಕ ಇದೆ. ಇದು ಮಾವೋರಿಗಳ ಪವಿತ್ರ ಜಾಗವೂ ಹೌದು. ಅಲ್ಲಿಂದ ಇಳಿದು ಇಲ್ಲಿನ ಸಾರ್ವಜನಿಕ ಸಾರಿಗೆಯ ಬಸ್ಸಿನಲ್ಲಿ ಇಲ್ಲಿನ ಫೆರ್ರಿ ನಿಲ್ದಾಣಕ್ಕೆ ಹೋದೆವು.
ಮಹಡಿಯ ಬಸ್ಸಿನಲ್ಲಿ ಮೇಲೆ ಹತ್ತಿ ಕುಳಿತು ಮಾಡಿದ ಬಸ್ ಸವಾರಿ ಆಕಲಾಂಡ್ ನಗರದ ದರ್ಶನ ಮಾಡಿಸಿತು. ದಾರಿಯಲ್ಲಿ ಆಕಲಾಂಡ್ ವಿಶ್ವ ವಿದ್ಯಾಲಯ, ಅಲ್ಲಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು ಕಾಣಸಿಕ್ಕಿದರು. ಎಲ್ಲ ರಸ್ತೆಗಳಲ್ಲೂ ಬಸ್ಸಿಗೆಂದೇ ನಿರ್ದಿಷ್ಟ ಪಥವಿದ್ದು ವಾಹನಗಳು ಶಿಸ್ತಿನಿಂದ ಚಲಿಸುತ್ತಿದ್ದವು. ಉತ್ತಮಗುಣಮಟ್ಟದ ರಸ್ತೆಗಳು, ಶಿಸ್ತನ್ನು ಪಾಲಿಸುವ ಜನರಿಂದ ಊರಿನ ವಾಹನ ದಟ್ಟಣೆ ಸಹ್ಯ ಆಗಿತ್ತು.
ಸುಸಜ್ಜಿತ ಫೆರಿ ನಿಲ್ದಾಣದಲ್ಲಿ ಟಿಕೇಟು ಪಡೆದು ಡೆವನ್ ಪೋರ್ಟಿಗೆ ಹೋಗಿ ಅಲ್ಲಿಂದ ಕಾಣುವ ಆಕ್ಲ್ಯಾಂಡಿನ ದೃಶ್ಯವನ್ನು ನೋಡೋಣ ಎಂದು ಹೋದೆವು. ಊರಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದೋಣಿಯಲ್ಲಿ ಹೋಗುವ ಅನುಭವ ಚೆನ್ನಾಗಿರುತ್ತದೆ. ಶಾಂತ ಪ್ರದೇಶವಾದ ಈ ಜಾಗವು ಮನೆಗಳಿರುವ ಬಡಾವಣೆ. ಸಂಜೆಯ ಹೊತ್ತಿಗೆ ಅಲ್ಲಿ ಅಡ್ಡಾಡುವಾಗ ನಾವು ಅಲ್ಲಿರುವ ಬಾರುಗಳಲ್ಲಿ ಜನಸಂದಣಿ ಮತ್ತು ಹಬ್ಬದ ವಾತಾವರಣವನ್ನು ನೋಡಿದೆವು. ಇದೇ ಇಲ್ಲಿನ ಸಂಸ್ಕ್ರತಿಯಂತೆ. ಮನೆಯವರೆಲ್ಲ ಸೇರಿ ಕುಟುಂಬದ ವಾರ್ತಾಲಾಪ ಮಾಡುವ ರೀತಿ!
![]() |
| ಡೆವನ್ ಪೋರ್ಟ್ ನಿಂದ ಕಾಣುವ ಆಕ್ಲ್ಯಾಂಡ ನಗರ |
ಇಲ್ಲಿ ಈಗ ಸೆಕೆಗಾಲ ಮುಗಿದು ಚಳಿಗಾಲ ಆರಂಭವಾಗುವ ಮೊದಲಿನ ಸಮಯ (autumn). ಹಾಗಾಗಿ ಮಳೆ ಬರುವ ಸಾಧ್ಯತೆ ಹೆಚ್ಚು. ನಾವು ಬರುವಾಗಲೇ ಮಳೆ ನಮ್ಮನ್ನು ಸ್ವಾಗತಿಸಿತ್ತು. ರಾತ್ರಿ ನಾವು ಫೇರ್ರಿಯಿಂದ ಹೊರಗೆ ಬರುವಾಗ ಮಳೆ ಆರಂಭವಾಗಿತ್ತು. ಮಳೆಯಲ್ಲಿ ಪಿಝ ತಿಂದು ಇಲ್ಲಿನ ಜನಪ್ರಿಯ ಐಸ್ ಕ್ರೀಂ ಅಂಗಡಿ 'GIAPPO' ನ ಸಾವಯವ ಐಸ್ಕ್ರೀಂ ತಿಂದು ಮಲಗಿದೆವು.
ರಾತ್ರಿಯಿಡೀ ಮಳೆ ಸುರಿದಿತ್ತು. ಬೆಳಗ್ಗೆಯೂ ಮಳೆ ಬಿಡಲಿಲ್ಲ. ಇಲ್ಲಿನ ಪ್ರಾದೇಶಿಕ ಮಾರುಕಟ್ಟೆಗೆ ಹೋಗಬೇಕೆಂದುಕೊಂಡ ನಮ್ಮ ಯೋಚನೆಯನ್ನು ಕೈಬಿಟ್ಟು ಇಲ್ಲಿನ ಒಂದು ಮಾಲಿನೊಳಗೆ ಹೋದೆವು. ಮದ್ಯಾಹ್ನ ಬಿರುಗಾಳಿಯಲ್ಲಿ ನಡೆದುಕೊಂಡು Maritime Museum ಗೆ ಹೋದೆವು. ಈ ದೇಶದ ಕಡಲಿನೊಂದಿಗಿನ ನಂಟನ್ನು ಸುಂದರವಾಗಿ ಈ ಸಂಗ್ರಹಾಲಯದಲ್ಲಿ ಪ್ರಸ್ತುತಪಡಿಸಿದ್ದಾರೆ. ಮಾವೋರಿಗಳು ಇಲ್ಲಿಗೆ ಬಂದ ಬಗೆ, ಯುರೋಪಿನ ಜನರು ನಿಧಾನವಾಗಿ ಬಂದು ಇಲ್ಲಿ ನೆಲಸಿದ ಬಗೆ, ತಿಮಿಂಗಿಲಗಳನ್ನು ಭೇಟಿಯಾಡಿದ ಜನರ ಸಾಹಸಗಳನ್ನೆಲ್ಲ ದಾಖಲಿಸಿಟ್ಟಿದ್ದಾರೆ. ಪ್ರಪಂಚದ ಎಲ್ಲ ಮೂಲೆಗಳನ್ನೂ ಆವರಿಸಿ ಪರಿಸರವನ್ನು ಮನುಷ್ಯ ತನಗೆ ಬೇಕಾದಂತೆ ಬಳಸಿದ ಬಗೆಯನ್ನು ಕಂಡು ಖೇದಗೊಳ್ಳುತ್ತಾ, ಮನುಷ್ಯನನ್ನೂ ಅವನಿಗೆ ಈ ಬುದ್ಧಿಶಕ್ತಿಯನ್ನು ಕೊಟ್ಟು ಸೃಷ್ಟಿಸಿದ ಪ್ರಕೃತಿಯೇ ನೋಡಿಕೊಳ್ಳುತ್ತದೆ ಎಂದುಕೊಳ್ಳುತ್ತಾ ಪ್ರವಾಸವನ್ನು ಮುಂದುವರಿಸಿದೆ.
ರೋಟಾರುವಾ:-
ಆಕ್ಲ್ಯಾಂಡಿನಿಂದ ಎರಡು ಗಂಟೆ ಪ್ರಯಾಣದ ದೂರದಲ್ಲಿರುವ ರೋಟಾರುವಾ ಇಲ್ಲಿನ ವಿಶಿಷ್ಟ ಬಿಸಿನೀರಿನ ಬುಗ್ಗೆಗಳು (Geothermal geysers) ಮಾವೊರಿ ಸಂಸ್ಕ್ರತಿಯ ಕೇಂದ್ರಗಳಿಂದ ನ್ಯೂಜಿಲೆಂಡ್ ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ನಾವು ಸಂದರ್ಶಿಸಿದ 'ತೆ ಪುಯಾ' ಕೇಂದ್ರವು ವಿಶ್ವ ಪ್ರಸಿದ್ಧ ಪೊಕುಟು ಗೀಸರ್, ಮಾವೊರಿ ಸಂಸ್ಕ್ರತಿಯ ಪ್ರದರ್ಶನ, ಮಾವೊರಿ ಕಲೆಗಳ ತರಬೇತಿ ಕೇಂದ್ರ ಮತ್ತು ಇಲ್ಲಿನ ವಿಶಿಷ್ಟ ಹಕ್ಕಿಯಾಗಿರುವ ಕಿವಿ ಸಂರಕ್ಷಣಾ ಕೇಂದ್ರ ಎಲ್ಲವನ್ನೂ ಹೊಂದಿದ್ದು.ನಮಗೆ ಈ ಎಲ್ಲ ಅನುಭವಗಳನ್ನು ಸುಂದರವಾಗಿ ಒದಗಿಸಿ ತೇ ವಾಕರೇವಾ ಕಣಿವೆಯ ವೈಶಿಷ್ಟ್ಯಗಳನ್ನು ಪರಿಚಯಿಸಿತು.
![]() |
| ಜಿಯೋ ಥರ್ಮಲ್ ಗೀಸರ್ |
ಲಕ್ಷಾಂತರ ವರ್ಷಗಳ ಹಿಂದೆ ಇಲ್ಲಿ ನಡೆದ ಜ್ವಾಲಾಮುಖಿಗಳ ಸ್ಫೋಟವು ಇಲ್ಲಿನ ಈಗಿನ ಈ ಬಿಸಿನೀರಿನ ಬುಗ್ಗೆಗಳು, ಬಿಸಿ ಮಣ್ಣಿನ ಕುಂಡಗಳನ್ನು ಮತ್ತು ಈ ವಾತಾವಾರಣವನ್ನು ಸೃಷ್ಟಿಸಿದೆ. ಕುದಿಯುತ್ತಾ ಹೊಗೆಯಾಡುತ್ತಿರುವ ಈ ಬಿಸಿ ನೀರಿನ ಬುಗ್ಗೆಗಳ ನಡುವೆ ಓಡಾಡುವುದು ಒಂದು ಸುಂದರ ಅನುಭವ. ಅಷ್ಟು ದೊಡ್ಡ ಜಾಗದಲ್ಲಿ ನೆಲದ ಕೆಳಗಿನಿಂದ ಹಬೆಯಾಡುತ್ತ ಇರುವ ನೀರು ಅಲ್ಲಲ್ಲಿ ಕಾರಂಜಿಗಳಂತೆ ಚಿಮ್ಮುತ್ತದೆ. ಈ ನೀರು, ಮಣ್ಣು ಎಲ್ಲ ಚರ್ಮದ ಆರೋಗ್ಯವರ್ಧಕವೆಂದು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಪಟ್ಟಣದ ತುಂಬಾ ಸ್ಪಾಗಳನ್ನು ಬಿಸಿನೀರಿನ ಕುಂಡಗಳನ್ನು ನೋಡಬಹುದು.
ವಿಶಾಲವಾಗಿರುವ ರೋಟಾರುವಾ ಸರೋವರದ ಪಕ್ಕದಲ್ಲಿಯೇ ಬೆಳೆದಿರುವ ಈ ಪಟ್ಟಣ ಸುಂದರವಾಗಿದೆ.
ಮಾವೊರಿ ಅನುಭವ ;-
ಮಾವೊರಿ ಜನರು ನೋಡಲು ವಿಭಿನ್ನವಾಗಿ ನೋಡಿದೊಡನೆ ಗುರುತಿಸಲು ಸಾಧ್ಯವಾಗುವಂತೆ ಇರುತ್ತಾರೆ. ಮೈಗೆಲ್ಲ ಹಚ್ಛೆ ಹಾಕಿಕೊಳ್ಳುವುದು ಇವರ ಸಂಪ್ರದಾಯ. ಅವರ ಹಕ ನೃತ್ಯ, ಸಾಂಪ್ರದಾಯಿಕ ಸ್ವಾಗತ ಮತ್ತು ಕೆಲವು ನೃತ್ಯಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದರು. ಅವರ ಸಂಸ್ಕೃತಿಯ ಬಗೆಗೆ ಹೆಮ್ಮೆಯನ್ನು ಅವರ ಮಾತುಗಳಲ್ಲಿ ನಾವು ಅರಿತುಕೊಳ್ಳಬಹುದು . ಮಾವೊರಿ ಸಾಂಪ್ರದಾಯಿಕ ಮರದ ಕೆತ್ತನೆಯನ್ನು , ಇತರ ಸಾಂಪ್ರದಾಯಿಕ ಕಲೆಗಳಿಗೆ ತರಬೇತಿ ಕೊಡುವ ಕೇಂದ್ರವಿದೆ.
![]() |
| ಹಕ ನೃತ್ಯ್ಸ |
![]() |
| ಮಾವೊರಿ ಸ್ವಾಗತ |
ಇಲ್ಲಿ ತರಬೇತಿ ಪಡೆಯಲು ಅವರ ಜನಾಂಗದವರಿಗೆ ಮಾತ್ರ ಸಾಧ್ಯವಂತೆ. ಈಗ ಬೇರೆ ಬೇರೆ ದೇಶಗಳಲ್ಲಿ ನೆಲಸಿರುವ ಮಾವೊರಿ ಯುವಕರು ಇಲ್ಲಿ ನಿಷ್ಠೆಯಿಂದ ಮಾಡಿರುವ ಕಲಾಕೃತಿಗಳ ಮರದ ಕೆತ್ತನೆಗಳನ್ನು ನೋಡಬಹುದು. ನಾವು ಮರಳಿ ಮಸ್ಕತ್ತಿಗೆ ಹೋಗುವಾಗ ನಮ್ಮ ಸಹಪ್ರಯಾಣಿಕಳೊಬ್ಬಳು ಮಾವೊರಿ ಇದ್ದಳು.
ವೈಟಾಮೋ ಮಿಂಚುಹುಳಗಳ ಗುಹೆಗಳು:-
ಇಲ್ಲಿಗೆ ಬಂದವರೆಲ್ಲ ಮಾಡುವ ಇನ್ನೊಂದು ಆಕರ್ಷಣೆಯೇ ಈ ಮಿಂಚುಹುಳಗಳ ಗುಹೆಗಳು. ಈ ಗುಹೆಗಳನ್ನು ನೋಡಲು ರೋಟಾರುವಾ ದಿಂದ 200 ಕಿ.ಮಿ ಕಾರು ಚಲಾಯಿಸಿಕೊಂಡು ಹೋಗಬೇಕಿತ್ತು. ಮತ್ತೆ ಸುಂದರವಾದ ದಾರಿಯನ್ನು ನೋಡುತ್ತಾ ಹೋಗುವ ಅನುಭವ ಚೆನ್ನಾಗಿತ್ತು. ದಾರಿಯಲ್ಲಿ ಇಕ್ಕೆಲಗಳಲ್ಲಿ ಕಾಣುವ ತೋಟಗಳ ಹೊರಗೆ ಇರುತ್ತಿದ್ದ ಅಂಚೆ ಡಬ್ಬಿಗಳು ನನ್ನನ್ನು ಎಲ್ಲಾ ಕಡೆ ಆಕರ್ಷಿಸುತ್ತಿದ್ದವು. ದೊಡ್ಡ ದೊಡ್ಡ ತೋಟಗಳಲ್ಲಿ ಮನೆಗಳು ತುಂಬಾ ಹಿಂದೆ ಇರುವುದರಿಂದ ರಸ್ತೆಯ ಅಂಚಿನಲ್ಲಿ ಅಲಂಕಾರಿಕವಾಗಿ ಈ ಡಬ್ಬಿಗಳನ್ನು ಮಾಡಿಟ್ಟಿದ್ದಾರೆ ಬಂದ ಅಂಚೆಯನ್ನು ಈ ಪೆಟ್ಟಿಗೆಗಳಲ್ಲಿ ಹಾಕಿ ಹೋಗುತ್ತಾರೆಂದು ಕಾಣುತ್ತದೆ.
ವೈಟಾಮೋ ಗುಹೆಗಳ ಒಳಗೆ ಒಂದು ಬಾರಿಗೆ ನಿಗದಿತ ಸಂಖ್ಯೆ ಯ ಜನಗಳನ್ನು ಮಾತ್ರ ಒಳಗೆ ಬಿಡುತ್ತಾರೆ. ಮೊದಲೇ ಟಿಕೇಟು ತೆಗೆದುಕೊಂಡು ನಮ್ಮ ಸಮಯವನ್ನು ಕಾಯ್ದಿರಿಸಬೇಕು. ಕತ್ತಲೆಯ ಗುಹೆಯೊಳಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಮಿನುಗುವ ಈ ಹುಳಗಳನ್ನು ನೋಡುವುದು ಒಂದು ಉತ್ತಮ ಅನುಭವ. ನಮಗೆ ಗುಹೆಯನ್ನು ತೋರಿಸಿದ ವ್ಯಕ್ತಿ ಮಾವೊರಿ ಜನಾಂಗದವನು. ಅವನ ಭಾಷೆ, ಮಾತನಾಡುವ ರೀತಿ ವಿಶಿಷ್ಟವಾಗಿತ್ತು
ಒಂದು ಚಿಕ್ಕ ವಿಶೇಷ ತಮ್ಮ ಊರಿನಲ್ಲಿದ್ದರೂ ಅದನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಗೊಳಿಸಿ ಸೌಕರ್ಯ ಗಳನ್ನು ಮಾಡಿ ಪ್ರವಾಸಿಗರು ಬರುವಂತೆ ಆಕರ್ಷಿಸಿ ಹಣಮಾಡುವುದನ್ನು ಕಲಿಯಲು ಇಲ್ಲಿಗೆಲ್ಲ ಬರಬೇಕು ಅನ್ನಿಸಿತು. ನಮ್ಮ ದೇಶದ ಪ್ರವಾಸೀ ತಾಣಗಳ ದುರವಸ್ಥೆ ನೆನಪಾಗಿ ಮನಸ್ಸಿಗೆ ಬೇಸರವೂ ಆಯಿತು.
![]() |
| ಹೊರಗಿನಿಂದ ವೈಟಾಮೋ ಗುಹೆಯ ನೋಟ |
ನ್ಯೂಜಿಲ್ಯಾಂಡಿನಲ್ಲಿ ಭಾರತೀಯರು:-
ಇಲ್ಲಿ ಎಲ್ಲ ಕಡೆಗಳಲ್ಲಿಯೂ ಭಾರತೀಯರು ಕಾಣಸಿಗುತ್ತಾರೆ. ದಿನಸಿ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ ಕೆಲಸ ಮಾಡುತ್ತಿರುವ ಯುವಕ ಯುವತಿಯರು ಹೆಚ್ಚಾಗಿ ಭಾರತಿಯರಾಗಿರುತ್ತಿದ್ದುದನ್ನು ಗಮನಿಸಿದೆ. ಇಲ್ಲಿ ಪೌರತ್ವ ನೀಡುವ ಕಾರಣ ಅನೇಕ ಭಾರತೀಯರು ಇಲ್ಲಿಗೆ ವಲಸೆ ಬಂದಿದ್ದಾರೆ. ಭಾರತೀಯರ ಅಂಗಡಿಗಳಿವೆ.
ಇಲ್ಲಿ ಟ್ಯಾಕ್ಸಿ ಕರೆದರೆ ಭಾರತೀಯ ಪಂಜಾಬಿ ಜನರು ಬರುತ್ತಾರೆ ಅಲ್ಲದೇ. ನಮ್ಮನ್ನು ಮಾತಿಗೆಳೆಯುತ್ತಾರೆ. ಇಲ್ಲಿನ ಜೀವನದ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ನಮ್ಮನ್ನು ಟೆಸ್ಲಾ ಕಾರಿನಲ್ಲಿ ಕರೆದೊಯ್ದ ದೆಹಲಿಯ ಚಾಲಕ ಸುಮಾರು 17 ವರ್ಷಗಳಿಂದ ಇಲ್ಲಿದ್ದಾನಂತೆ. ಅವನು ಹೇಳುವಂತೆ ಇಲ್ಲೀಗ ಆರ್ಥಿಕ ಮುಗ್ಗಟ್ಟು ನಡೆಯುತ್ತಿರುವುದರಿಂದ ಜೀವನ ನಡೆಸುವುದು ಕಷ್ಟವಂತೆ.ಇಲ್ಲಿನ ಪೌರತ್ವ ಸಿಕ್ಕಿದ ಬಳಿಕ ಆಸ್ಟ್ರೇಲಿಯಾಗೆ ಹೋದರೆ ಸಂಬಳ ಜಾಸ್ತಿL ಸಿಗುತ್ತದಂತೆ. ಇನ್ನೊಮ್ಮೆ ನಮನ್ನು ವಿಮಾನನಿಲ್ದಾಣಕ್ಕೆ ಬಿಟ್ಟ ಚಾಲಕ ಇಲ್ಲಿನ ವಿಶ್ವ ವಿದ್ಯಾಲಯದಲ್ಲಿ ಓದುತ್ತಾ ಈ ಕೆಲಸವನ್ನು ಮಾಡಿಕೊಂಡಿದ್ದಾನೆ. ನಾವಿರುವ ಮಸ್ಕತ್ತಿನ ಜೀವನದ ಬಗೆಗೆ ಆಸ್ಥೆಯಿಂದ ವಿಚಾರಿಸುತ್ತಿದ್ದ. ಇಲ್ಲಿನ ಪ್ರವಾಸಿಗರಲ್ಲಿ ಅನೇಕ ಭಾರತೀಯರು ಕಾಣುತ್ತಾರೆ.
ಪ್ರವಾಸ ಮಾಡಲು ಸುಂದರವಾಗಿರುವ ಈ ದೇಶದಲ್ಲಿ ಜೀವನ ಮಾಡುವುದು ಸ್ವಲ್ಪ ನೀರಸ ಎನ್ನಿಸಿತು. ಜೀವನ ವೆಚ್ಚ ತುಂಬಾ ದುಬಾರಿ ಇರುವ ಈ ದೇಶಕ್ಕೆ ವಲಸೆ ಬಂದು ನೆಲೆಸಿ ಜೀವನವನ್ನು ಕಟ್ಟಿಕೊಳ್ಳುವುದು ಒಂದು ಹೋರಾಟವೇ ಅನ್ನಿಸಿತು.
ಮತ ಪ್ರಚಾರ :-
ನಮ್ಮ ಉತ್ತರ ದ್ವೀಪದ ಪ್ರಯಾಣದಲ್ಲಿ ಅನೇಕ ಧರ್ಮದ ಜನರು ಮತ ಪ್ರಚಾರಕರೊಂದಿಗೆ ನಮ್ಮ ಭೇಟಿಯಾಗಿತ್ತು. ರೋಟೋರುವದಲ್ಲಿ ಸಂಜೆ ಬಿಸಿನೀರಿನ ಬುಗ್ಗೆಯನ್ನು ಹುಡುಕಿಕೊಂಡು ಹೋಗುತ್ತಿರುವಾಗ ಪ್ಯಾಲಿಸ್ತೀನಿನ ಸಮ ಸಮರ್ಥಕರು ಧ್ವಜ ಹಿಡಿದು ಇಸ್ರೇಲಿನ ವಿರುದ್ಧ ಘೋಷಣೆ ಕೂಗುತ್ತಿದ್ದುದು ಕಂಡುಬಂತು. ಸುಮ್ಮನೆ ನಗರದಲ್ಲಿ ಒಂದು ಸುತ್ತು ಹೋಗುತ್ತ್ತಿರುವಾಗ ಅಲ್ಲೊಂದು ಸಣ್ಣ ಜಾತ್ರೆಯಂತೆ ಜನಗಳು ಸೇರಿರುವ ರಸ್ತೆ ಕಂಡಿತು. ನೋಡಿದರೆ ಗುರುವಾರದ ಸ್ಥಳೀಯ ಮಾರುಕಟ್ಟೆಯಂತೆ. ಅಲ್ಲಿ ಶ್ರೀಲಂಕಾದ ಕ್ರೈಸ್ತ ಗುಂಪು ತಮ್ಮದೊಂದು ಮಳಿಗೆ ಇಟ್ಟುಕೊಂಡು ಸಂಗೀತ, ನೃತ್ಯಗಳೊಂದಿಗೆ ಕ್ರೈಸ್ತಮತ ಪ್ರಚಾರ ನಡೆಸುತ್ತಾ ಕ ರಪತ್ರಗಳನ್ನು ಹಂಚುತ್ತಿದ್ದರು. ಅಲ್ಲಿ ಸ್ಥಳೀಯ ಉದ್ಯಮಿಗಳ ಅಂಗಡಿಗಳು, ತರಕಾರಿ ಮಾರುವ ರೈತರು ಎಲ್ಲರ ಮಳಿಗೆಗಳು ಇದ್ದವು. ನಾವು ಅದೇ ರಸ್ತೆಯಲ್ಲಿದ್ದ ಭಾರತೀಯ ಬೈಲ್ ವಾಲಜಿ ಹೋಟೆಲಿನಲ್ಲಿ ಊಟಕ್ಕೆ ಹೋದರೆ ಅಲ್ಲಿ ಹನುಮಾನ್ ಚಾಲೀಸಾ ಹಾಡನ್ನು ಗಟ್ಟಿಯಾಗಿ ಹಾಕಿದ್ದರು ಹಾಕಿಕೊಂಡು ವಿವಿಧ ದೇಶಗಳ ಗ್ರಾಹಕರಿಗೆ ಊಟ ನೀಡುತ್ತಿದ್ದರು!! ಹೀಗೆ ಪ್ರಪಂಚದ ವಿವಿಧ ಧರ್ಮಗಳು ಈ ಒಂದು ರಸ್ತೆಯಲ್ಲಿ ಒಂದಾಗಿದ್ದುದು ಕಂಡುಬಂತು
ಆಕ್ಲ್ಯಾಂಡಿನಲ್ಲಿ ಒಂದು ಮಾರುಕಟ್ಟೆಗೆ ಹೋಗುತ್ತಿರುವಾಗ ಕ್ರೈಸ್ತಮತದ ಪ್ರಚಾರಕರು ಪ್ರಚಾರ ನಡೆಸುತ್ತಿದ್ದರು. ಅದನ್ನು ನೋಡಿಕೊಂಡು ಮುಂದೆ ಹೋಗುತ್ತಿರುವಾಗ ಒಂದಿಷ್ಟು ಕರಪತ್ರಗಳನ್ನು ಹಿಡಿದುಕೊಂಡು ಜೆಹೋವಾ ಪಂಥದ ಪ್ರಚಾರ ಮಾಡುತ್ತಿದ್ದ ಯುವಕ ಸಿಕ್ಕಿದ. ಇದು ಮತ ಪ್ರಚಾರ ಎಂದು ತಿಳಿಯದ ನಾನು ಅವನು ಹಿಡಿದಿದ್ದ ಕರಪತ್ರದ ಬಗೆಗೆ ಆಸಕ್ತಿ ತೋರಿಸಿದ್ದಕ್ಕೆ ಅವನು ಇದು ಸಂತೋಷದ ಕುಟುಂಬ ಜೀವನದ ಬಗ್ಗೆ ನನಗೆ ತಿಳಿಸುತ್ತದೆ ಎಂದು ಹೇಳಿ ನನಗೆ ಕೊಟ್ಟ !!
ವಿವಿಧ ಹೊಸ ಅನುಭವಗಳನ್ನು ನೀಡಿದ ನಮ್ಮ ನ್ಯೂಜಿಲ್ಯಾಂಡ್ ಪ್ರವಾಸ ಕ್ರೈಸ್ಟ್ ಚರ್ಚ್ ನಲ್ಲಿ ಆರಂಭವಾಗಿ ಆಕ್ಲ್ಯಾಂಡಿನಲ್ಲಿ ಮುಗಿಯಿತು. ಇಲ್ಲಿಂದ ಮಲೇಷಿಯಾದ ಮಾರ್ಗವಾಗಿ ಸುಮಾರು ೧೯ ಗಂಟೆಗಳ ಪ್ರಯಾಣದ ನಂತರ ನಾವಿರುವ ಮಧ್ಯಪ್ರಾಚ್ಯದ ನಗರ ಮಸ್ಕತ್ ನಗರವನ್ನು ತಲುಪಿದೆವು









ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ