![]() |
| ನಮ್ಮ ಹಡಗು ಮಿಲ್ಫರ್ಡ್ ಮಾರಿನರ್ |
ಮಿಲ್ಫರ್ಡ್ ಮಾರಿನರ್ ದೋಣಿಯಲ್ಲಿ ಮಿಲ್ಫರ್ಡ್ ಸೌಂಡ್/ಫಿಯೋಫಿಯೋತಹಿಯ ಅನುಭವ:-
ನಿಗದಿತ ಸಮಯದಲ್ಲಿ ನಮ್ಮ ಹಡಗಿನ ಒಳಗೆ ಬಂದೆವು ಕ್ಯಾಪ್ಟನ್ ಸಿಬ್ಬಂದಿಗಳನ್ನು ಪರಿಚಯಿಸಿದ. ನಮ್ಮ ಹಡಗಿನಲ್ಲಿ ಅಡುಗೆ ಮಾಡುವವರು, ತಿಂಡಿಯನ್ನು ಕೊಡುವವರು, ಚಟುವಟಿಕೆಗಳನ್ನು ಮಾಡಿಸುವವರು ಮತ್ತು ಒಬ್ಬಳು ಪರಿಸರ ತಜ್ಞೆ ಇದ್ದರು. ನಂತರ ಎಲ್ಲ ಪ್ರವಾಸಿಗರಿಗೆ ಅವರವರ ಕೋಣೆಯ ಕೀಲಿಗಳನ್ನು ಕೊಟ್ಟು ಬಂದವರಿಗೆ ಚಹಾ ಮತ್ತು ತಿಂಡಿಗಳ ಸೇವೆಯಾಯಿತು. ನಮ್ಮೂರಿನ ಗೊಳಿಬಜೆಯನ್ನು ನೆನಸಿಕೊಂಡು ಇವರ ಕೇಕ್ ತಿಂದೆವು. ವಿವಿಧ ದೇಶಗಳ ವಿವಿಧ ವಯೋಮಾನದ ಪ್ರವಾಸಿಗರು ನಮ್ಮ ಹಡಗಿನಲ್ಲಿ ಇದ್ದರು.
ಮೇಲಿನ ಡೆಕ್ ಗೆ ಹೋದರೆ ಭವ್ಯವಾದ ಪ್ರಕೃತಿಯ ರುದ್ರ ರಮಣೀಯ ನೋಟ ನಮ್ಮ ಕಣ್ಣು, ಮನಸ್ಸನ್ನು ತುಂಬಿತು. ಒಂದು ಕಡೆ ಹಸಿರು ಬೆಟ್ಟ, ಮಧ್ಯೆ ಮಧ್ಯೆ ಹರಿಯುವ ನೀರಿನ ಝರಿಗಳು, ಇನ್ನೊಂದು ಕಡೆ ಮೊನಚಾದ ಕಲ್ಲಿನ ಪರ್ವತ, ಮಧ್ಯದಲ್ಲಿ ಹಿಮವತ್ ಪರ್ವತ, ಸುತ್ತಲೂ ನೀರು- ವರ್ಣಿಸಲು ಶಬ್ದಗಳೇ ಸಾಲದಷ್ಟು ಪ್ರಕೃತಿ ಸೌಂದರ್ಯ. ಹಿಂದಿನ ದಿನ ಜೋರಾಗಿ ಮಳೆ ಬಂದು ಬಿಟ್ಟಿತ್ತು; ಇಂದು ಶುಭ್ರ ಆಕಾಶವಿತ್ತು - ಇಲ್ಲಿನ ಭವ್ಯತೆಯನ್ನು ಸವಿಯಲು ಇದು ಅತ್ಯಂತ ಪ್ರಶಸ್ತವಾದ ಸಮಯವಂತೆ. ನಮಗೆ ಇಲ್ಲಿನ ದೃಶ್ಯಗಳನ್ನು ಸುಂದರವಾಗಿ ತೋರಿಸಲು ಬೇಕಾದ ವೇದಿಕೆಯನ್ನು ಪ್ರಕ್ರತಿ ನಿರ್ಮಿಸಿತ್ತು
ನಮ್ಮ ಹಡಗು ಚಲಿಸಲು ಆರಂಭಿಸಿತು. ಚಲಿಸುತ್ತ ಭವ್ಯ ಸ್ಟ್ರಿಂಗ್ಜ ಜಲಪಾತದ ಸಮೀಪಕ್ಕೆ ಬಂತು. ಜಲಪಾತದ ತುಂತುರು ಹನಿಗಳು ನಮ್ಮ ಮೇಲೆಲ್ಲ ಪನ್ನೀರಿನಂತೆ ಹಾರುತ್ತಿತ್ತು. ಈ ಜಲಪಾತವು ಬೀಳುವ ಜಾಗದಲ್ಲಿ ನೀರು ತುಂಬಾ ಆರ ಇರುವುದರಿಂದ ಜಲಪಾತವು ಕಡ್ಡಿಯಂತೆ ಅಷ್ಟೇ ಆಳಕ್ಕೆ ಹೋಗುತ್ತದೆ. ಹಾಗಾಗಿ ದೋಣಿಗಳು ಇದರ ಹತ್ತಿರದವರೆಗೆ ಬರಲು ಸಾಧ್ಯವಾಗುತ್ತದೆ. ನಿನ್ನೆ ತಾನೇ ಮಳೆ ಬಂದಿದ್ದರಿಂದ ಅನೇಕ ತಾತ್ಕಾಲಿಕ ಜಲಪಾತಗಳೂ ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.
![]() |
| ಸ್ಟ್ರಿಂಗ್ ಜಲಪಾತ |
ಜಲಪಾತದ ಅನುಭವದ ನಂತರ ಚಟುವಟಿಕೆಗಳು ಆರಂಭವಾದವು.ಕಯಾಕ್ ದೋಣಿಯ ಸವಾರಿ, ಗುಂಪುಗಳಲ್ಲಿ ಫಿಯೋರ್ಡಿನ ಮಾಹಿತಿ ಪಡೆದುಕೊಳ್ಳುತ್ತಾ ಮಾಡುವ ದೋಣಿ ಸವಾರಿಗಳನ್ನು ಮಾಡಬಾಗುದಾಗಿತ್ತು. ನಾವು ಆರು ಜನರಲ್ಲಿ ಮೂರು ಜನ ಕಯಾಕ್ ಸವಾರಿ ಮಾಡಿದರೆ ಮೂವರು ಪುಟ್ಟ ದೋಣಿಯ ಗುಂಪು ಸವಾರಿ ಮಾಡಿದೆವು. ಎರಡು ಸವಾರಿಯೂ ವಿಭಿನ್ನ ಅನುಭವ ನೀಡಿದವು. ನಂತರ ಇಲ್ಲಿ ಈಜುವವರಿಗೆ ಈಜಲೂ ಅವಕಾಶವಿತ್ತು. ದೋಣಿಯಲ್ಲಿ ಸಾಗುವಾಗ ಕಂಡ ಸುಂದರ ದೃಶ್ಯಗಳು ಕಣ್ಣು ಮತ್ತು ಮನಸ್ಸುಗಳನ್ನು ತಣಿಸುತ್ತಿತ್ತು. ಒಂದು ಕಡೆ ಪೆಮ್ಬ್ರೋಕ್ ಹಿಮಪರ್ವತ, ಅದರ ಕೆಳಗೆ ದಟ್ಟ ಕಾಡು, ಕಾಡಿನ ಮುಂದೆ ಹ್ಯಾರಿಸನ್ ನದಿ ಬಂದು ಸಮುದ್ರಕ್ಕೆ ಸೇರುವ ದೃಶ್ಯ- ಇವೆಲ್ಲ ಒಂದೇ ನೋಟಕ್ಕೆ ಸಿಗುತ್ತಿತ್ತು. ಈ ತರಹದ ದೃಶ್ಯ ಪ್ರಪಂಚದಲ್ಲಿ ಇಲ್ಲಿ ಬಿಟ್ಟರೆ ದಕ್ಷಿಣ ಅಮೆರಿಕಾದ ಚಿಲಿ ದೇಶದಲ್ಲಂತೆ !! ಇಲ್ಲಿ ಸುತ್ತಲೂ ಕಾಣುವ ದಟ್ಟ ಕಾಡು ಇಲ್ಲಿನ ಈ ಕಲ್ಲುಗುಡ್ಡಗಳ ಚಡಿಯಲ್ಲಿಯೇ ತಮ್ಮ ಬೇರನ್ನು ಬಿಟ್ಟು ಮೇಲಿನ ಪದರದ ಮಣ್ಣೇ ಇಲ್ಲದೆಯೇ ಬೆಳೆದಿರುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯ. ಹಾಗಾಗಿ ಬಾರೀ ಮಳೆಗೆ ಸಿಕ್ಕು ಒಂದು ಬೇರು ಕಳಚಿತೆಂದರೆ ಸಂಪೂರ್ಣ ಪದರವೇ ಕಳಚಿ ಒಂದು ಭಾಗದ ಕಾಡೇ ನೀರಿನೊಳಕ್ಕೆ ಹೋಗುತ್ತದೆ.
![]() |
| ಕಯಾಕ್ ಮಾಡುವ ದೃಶ್ಯ |
ಚಟುವಟಿಕೆಗಳು ಮುಗಿಯುವಷ್ಟರಲ್ಲಿ ಊಟದ ಸಮಯ. ವಿವಿಧ ದೇಶಗಳ ಪ್ರವಾಸಿಗರಿದ್ದ ಹಡಗಿನಲ್ಲಿ ಎಲ್ಲರಿಗೂ ನಿಗದಿತ ಟೇಬಲ್ಲುಗಳಲ್ಲಿ ಕೂಡಿಸಿ ಶಿಸ್ತಾಗಿ ಊಟ ಬಡಿಸುತ್ತಿದ್ದರು. ಸಸ್ಯಾಹಾರಿಗಳಾದ ನಮ್ಮ ಅಗತ್ಯವನ್ನು ಮೊದಲೇ ತಿಳಿಸಿದ್ದುದರಿಂದ ನಮಗೆ ಊಟದಲ್ಲಿ ಸಾಕಷ್ಟ ಆಯ್ಕೆಗಳಿದ್ದವು. ಊಟದ ನಂತರ ಇಲ್ಲಿನ ಪರಿಸರದ ಬಗೆಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಹಡಗಿನ ಪರಿಸರ ತಜ್ಞೆ ನೀಡಿದಳು. ಸುಮಾರು ೧೫-೨೦ ನಿಮಿಷಗಳ ಅವಳ ಸಚಿತ್ರ ವಿವರಣೆ ಇಲ್ಲಿನ ಜೀವ ಸಂಕುಲದ ಮಾಹಿತಿ, ಇಲ್ಲಿನ ವಾತಾವರಣದ ವಿವರಣೆ, ಹಡಗಿನಲ್ಲಿ ಪಯಣಿಸಿದ ಪ್ರಯಾಣಿಕರ ಅನುಭವಗಳನ್ನೊಳಗೊಂಡು ಈ ಜಾಗದ ಭವ್ಯತೆಯ ಸಂಪೂರ್ಣ ಅರಿವನ್ನು ನಮ್ಮಲ್ಲಿ ಮೂಡಿಸಿತು.
![]() |
| ನಮ್ಮ ದೋಣಿಯಿಂದ ತೆಗೆದ ಚಿತ್ರ |
ಟೆಕಾಪೂ- ಟೇಯಾನೌ - ಮಿಲ್ಫರ್ಡ್ ಸೌಂಡ್ ದಾರಿ:-
ನಿಧಾನವಾಗಿ ಬೆಳಕಾಗುತ್ತಿದ್ದಂತೆ ಸುತ್ತಲಿನ ಪ್ರಕೃತಿ ಸೌಂದರ್ಯ ನಮಗೆ ಗೋಚರಿಸತೊಡಗಿತು. ಡನ್ ಸ್ಟನ್ ಸರೋವರದ ಎದುರಿನ ಒಂದು ಚಂದದ ಜಾಗದಲ್ಲಿ ಚಹಾ ಕುಡಿಯೋಣವೆಂದು ನಿಲ್ಲಿಸಿದೆವು. ಹಿಂದೆಯೇ ತೋಟ, ಮುಂದೆ ಹಣ್ಣು, ತರಕಾರಿಗಳನ್ನು ಮಾರುವ ಸುಂದರವಾದ ಅಂಗಡಿ. ಅಲ್ಲೊಬ್ಬ ಚೂಟಿ ಹುಡುಗ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಅವನ ಅಮ್ಮನ ತೋಟವಂತೆ. ಇವತ್ತು ಅವನ ರಜೆಯ ಮೊದಲ ದಿನವಾದ್ದರಿಂದ ಅಮ್ಮನಿಗೆ ನೆರವಾಗಲು ಬಂದಿದ್ದ.
ಅಲ್ಲಿಂದ ಸ್ವಲ್ಪ ಮುಂದೆ ಹೋದಾಗ Roaring Meg Stream ಹರಿಯುತ್ತಿತ್ತು. ಇಳಿದು ನೋಡಿದರೆ ಹೆಸರಿಗೆ ತಕ್ಕಂತೆ ಬೋರ್ಗರೆಯುತ್ತ ಹರಿಯುತ್ತಿದ್ದ ಮೆಗ್ ನದಿ ಮತ್ತು ಅದಕ್ಕೆ ಕಟ್ಟಿದ ಜಲ ವಿದ್ಯುತ್ ಸ್ಥಾವರ ಕಂಡಿತು. ಇಲ್ಲಿನ ವಿದ್ಯುತ್ ಉತ್ಪಾದನೆಯ ಬಹುಪಾಲು ಇಂತಹ ಸ್ಥಾವರಗಳಿಂದ ಪೂರೈಕೆಯಾಗುತ್ತದಂತೆ.
ಮುಂದಿನ ದಾರಿಯಲ್ಲಿ ಬೃಹತ್ ವಕಾಟಿಪು ಸರೋವರ ಕಾಣಲು ಆರಂಭಿಸಿತು. ಈ ಸರೋವರದ ಸೌಂದರ್ಯ ನಮ್ಮನ್ನು ಬಹಳ ಆಕರ್ಷಿಸಿತು. ಪ್ರತಿ ತಿರುವಿನಲ್ಲೂ ಹೊಸತರಂತೆ ಕಾಣುತ್ತಿದ್ದ ಈ ಸರೋವರ ಛಾಯಾಗ್ರಾಹಕರನ್ನು ಮರುಳುಗೊಳಿಸುತ್ತಿತ್ತು. ಅಲ್ಲಲ್ಲಿ ಕ್ಯಾಂಪಿಂಗ್ ಮಾಡುವವರಿಗೆ ಜಾಗ ಮಾಡಿಟ್ಟಿದ್ದರು. ಜನಗಳು ಕ್ಯಾನ್ಪರ್ ವ್ಯಾನುಗಳು, ಟೆಂಟುಗಳನ್ನು ಹಾಕಿಕೊಂಡು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದರು.
ಟೇಯನೌನಲ್ಲಿ ನಿಲ್ಲಿಸಿ ಊಟ ಮಾಡಿಕೊಂಡು ಕಾರುಗಳಿಗೆ ಪೆಟ್ರೋಲ್ ತುಂಬಿಸಿ ಮಿಲ್ಫಾರ್ಡ್ ರಸ್ತೆಯಲ್ಲಿ ಚಲಿಸಲು ಆರಂಭಿಸಿದೆವು. ಇನ್ನು ಸುಮಾರು ೧೧೨ ಕಿ.ಮೀ ಗಳಷ್ಟು ದೂರ ಚಲಿಸಿದರೆ ಫಿಯೋಫಿಯೊತಹಿ ಈ ರಸ್ತೆ ಇಲ್ಲಿನ ಅತ್ಯಂತ ಸುಂದರ ರಸ್ತೆಗಳಲ್ಲಿ ಒಂದು. ದಾರಿಯುದ್ದಕ್ಕೂ ಅನೇಕ ಸುಂದರ ಜಾಗಗಳು ಸಿಗುತ್ತಾ ಹೋಗುತ್ತದೆ. ಆದರೆ ಯಾವುದೇ ತಿಂಡಿ ಅಂಗಡಿಗಳು, ಮೊಬೈಲ್ ಟವರುಗಳು ಇಲ್ಲಿಲ್ಲ. ಆದ್ದರಿಂದ ಪರಿಸರ ಶಾಂತವಾಗಿದೆ.
ಮಿರರ್ ಸರೋವರ ಎಂಬ ಜಾಗದಲ್ಲಿ ಹೆಸರಿಗೆ ಅನ್ವರ್ಥವಾಗುವಂತೆ ಸುತ್ತಲಿನ ಅರಲ್ ಬೆಟ್ಟಗಳ ಪ್ರತಿಬಿಂಬ ಸರೋವರದ ನೀರಿನಲ್ಲಿ ಕಾಣುತ್ತದೆ. ಸರೋವರದ ಸುತ್ತಲೂ ಇರುವ ಪಕ್ಷಿಗಳು ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಸುತ್ತವೆ. ದಾರಿಯಲ್ಲಿ ಜಾಗಕ್ಕೂ ಮೊದಲು ಹಾಕಿರುವ ಫಲಕಗಳು, ಕಾರು ನಿಲ್ಲಿಸಲು ಮಾಡಿರುವ ಸುಸಜ್ಜಿತ ಜಾಗ, ಶೌಚಗ್ರಹಗಳು, ಜಾಗದ ಬಗೆಗೆ ಮಾಹಿತಿ- ಇವೆಲ್ಲ ಇಲ್ಲಿನ ಪ್ರವಾಸವನ್ನು ಮೆಲುಕು ಹಾಕುವಂತೆ ಮಾಡುತ್ತದೆ.
![]() |
| ಮಿರರ್ ಸರೋವರ |
![]() |
| ಚಾಸ್ಮ್ ಅರಣ್ಯ |
ಹೀಗೆ ನಮ್ಮ ಪಿಯೋ ಪಿಯೋ ತಹಿಯ ಪ್ರವಾಸ ಒಂದು ದಿವ್ಯ ಅನುಭವ ನೀಡಿದ್ದರಲ್ಲಿ ಸಂಶಯವಿಲ್ಲ. ಸಾವಿರಾರು ಮೈಲಿ ಪಯಣಿಸಿ ಖಂಡಗಳನ್ನು ದಾಟಿ ಬಂದು ಒಂದು ಹೊಸ ಭೂಭಾಗವನ್ನು ನೋಡಿದ, ಅನುಭವಿಸಿದ ಧನ್ಯತೆ ನಮ್ಮದಾಗಿದೆ
![]() |
| Published on 10-05-2025 |










ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ