![]() |
| ವಕಾಟಿಪು ಸರೋವರದ ತೀರದಲ್ಲಿ ಕ್ವೀನ್ಸ್ ಟೌನ್ ಪಟ್ಟಣ |
ಭೂಮಿಯ ದಕ್ಷಿಣಾರ್ಧ ಗೋಳದ ಕಟ್ಟಕಡೆಯ ದೇಶವಾದ ನ್ಯೂಜಿಲ್ಯಾಂಡ್ ಪ್ರಪಂಚದ ಸುಂದರವಾದ ದೇಶಗಳಲ್ಲಿ ಒಂದು. ದೇಶದ ದಕ್ಷಿಣ ದ್ವೀಪಗಳ ಒಟಾಗೋ ಪ್ರಾಂತದ ಒಂದು ಪ್ರಮುಖ ಪ್ರವಾಸೀ ತಾಣ ಕ್ವೀನ್ಸ್ ಟೌನ್. ವಕಾಟಿಪು ಸರೋವರ ಮತ್ತು ಬೆಟ್ಟಗಳಿಂದ ಸುತ್ತುವರಿದಿರುವ ಈ ಊರು ಒಂದು ಸುಂದರ ಪ್ರದೇಶ ಮತ್ತು ಪ್ರವಾಸಿಗರ ಸ್ವರ್ಗ. ವಕಾಟಿಪು ಮಹಾ ಸರೋವರ ನ್ಯೂಜಿಲಾಂಡಿನ ಅತ್ಯಂತ ದೊಡ್ಡ ಸರೋವರ. ಸುಮಾರು 275 ಚದರ ಮೈಲಿಗಳಷ್ಟು ವಿಶಾಲವಾಗಿರುವ ಈ ಸರೋವರದ ಉದ್ದ 80 ಕಿ. ಮೀ ಗಳು. ಉತ್ತರದಲ್ಲಿ ಗ್ಲೆನೋರ್ಚಿ ಎಂಬ ಪಟ್ಟಣದಿಂದ ದಕ್ಷಿಣದಲ್ಲಿ ಕಿಂಗ್ಸ್ಟೋನ್ ಎಂಬ ಪಟ್ಟಣದ ತನಕ ಹಬ್ಬಿಕೊಂಡಿರುವ ಈ ಅಪಾರ ಜಲರಾಶಿಯ ಉತ್ತರದ ತೀರದಲ್ಲಿ ಕ್ವೀನ್ಸ್ ಟೌನ್ ಪಟ್ಟಣ ಇದೆ. ಸಿಹಿ ನೀರಿನ ಈ ಮಹಾ ಸರೋವರಕ್ಕೆ ರೀಸ್ ಮತ್ತು ಡಾರ್ಟ್ ನದಿಗಳಿಂದ ನೀರು ಹರಿಯುತ್ತದೆ. ಅಲ್ಲದೆ ಸುತ್ತುವರಿದಿರುವ ಹಿಮಾಚ್ಚಾದಿದ ಬೆಟ್ಟಗಳಿಂದ ಹಿಮ ಕರಗಿದ ನೀರು, ಮಳೆ ನೀರು ಹರಿದು ಬಂದು ಈ ಸರೋವರ ಸದಾ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇಲ್ಲಿನ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸುವುದೇ ಇಲ್ಲಿಗೆ ಬರುವ ಪ್ರವಾಸಿಗರ ಪ್ರಥಮ ಆಕರ್ಷಣೆ. ಸುಸಜ್ಜಿತವಾದ ವಿಮಾನ ನಿಲ್ದಾಣ ಇರುವುದರಿಂದ ವಿಮಾನದಲ್ಲಿ ಇಲ್ಲಿಗೆ ಬರಬಹುದು. ಅಥವಾ ಇಲ್ಲಿನ ಸುಂದರ ರಸ್ತೆಗಳಲ್ಲಿ ಕಾರು ಚಲಾಯಿಸಿಕೊಂಡು ಸುಂದರವಾದ ದೃಶ್ಯಗಳನ್ನು ಸವಿಯುತ್ತಾ ಇಲ್ಲಿಗೆ ಬರಬಹುದು. ರಸ್ತೆಗಳ ಮೂಲಕ ಪ್ರವಾಸ ಮಾಡುವುದು ಈ ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಮಾಧ್ಯಮ. ವಿದೇಶದಿಂದ ಬಂದು ಇಲ್ಲಿ ಪ್ರವಾಸ ಮಾಡ ಬಯಸುವ ಪ್ರವಾಸಿಗರಿಗೆ ಯಾವ ತರಹದ ಕಾರು ಬೇಕೋ ಆ ತರಹದ ಕಾರನ್ನು ಒದಗಿಸುವ ವ್ಯವಹಾರ ಇಲ್ಲಿನ ಲಾಭದಾಯಕ ಉದ್ಯಮ ಅನಿಸುತ್ತದೆ. ಅಂತಹ ಅನೇಕ ಸಂಸ್ಥೆಗಳು ಈ ಸೌಲಭ್ಯವನ್ನು ಒದಗಿಸುತ್ತವೆ. ನಾವು ಕ್ರೈಸ್ಟ್ ಚರ್ಚ್ ಪಟ್ಟಣಕ್ಕೆ ವಿಮಾನದಲ್ಲಿ ಬಂದು ನಂತರ ಕಾರು ಚಲಾಯಿಸಿಕೊಂಡು ಇಲ್ಲಿಗೆ ಬಂದೆವು.
![]() |
| ನಮ್ಮ ಮನೆಯಿಂದ ಕಾಣುತ್ತಿದ್ದ ಸರೋವರದ ದೃಶ್ಯ |
ಬಂಜಿ ಜಂಪಿಂಗ್, ಜೆಟ್ ಬೋರ್ಡಿನ್ಗ್, ವೇಗದ ದೋಣಿಗಳು, ಪ್ಯಾರಾ ಗ್ಲಾಯ್ಡಿಂಗ್, ಸ್ಕಾಯ್ ಡೈವಿಂಗ್- ಇಂತಹ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಇಲ್ಲಿಗೆ ಬಂದರೆ ಇವುಗಳನ್ನೆಲ್ಲ ಮಾಡಬೇಕೆಂಬುದು ಯುವ ಪ್ರವಾಸಿಗರ ಅಭಿಮತ. .ಪ್ರವಾಸಿಗಳಿಗೆ ಈ ಸಾಹಸ ಚಟುವಟಿಕೆಗಳನ್ನು ಒದಗಿಸಲು ಪೈಪೋಟಿ ನಡೆಸುತ್ತಿರುವ ಅನೇಕ ಅಂಗಡಿಗಳು ಪಟ್ಟಣದಲ್ಲಿದೆ. ಸೈಕಲ್ ಮಾಡಿಕೊಂಡು ಬೆಟ್ಟಗಳನ್ನು ಹತ್ತುವುದು, ಚಾರಣ- ಇವೆಲ್ಲ ಈ ದೇಶದಲ್ಲಿ ಮಾಡಬಹುದಾದ ಕೆಲವು ಜನಪ್ರಿಯ ಚಟುವಟಿಕೆಗಳು. ಇವುಗಳಿಗೆಲ್ಲ ಬೇಕಾಗುವ ಸಲಕರಣೆಗಳನ್ನು ಎರವಲು ಪಡೆಯುವ ಅಂಗಡಿಗಳೂ ಇಲ್ಲಿವೆ. ಪ್ರವಾಸಿಗರಿಗೆ ಬೇಕಾದ ಚಿಕ್ಕ ಚಿಕ್ಕ ಅಗತ್ಯ ಗಳನ್ನು ಮನಗಂಡು ಸೌಲಭ್ಯಗಳನ್ನು ದೇಶದ ತುಂಬೆಲ್ಲ ಮಾಡಿಟ್ಟಿದ್ದಾರೆ. ಇಲ್ಲಿ ಮಾಡಬಹುದಾದ ಎಲ್ಲ ಚಟುವಟಿಕೆಗಳ ಮಾಹಿತಿ, ಅದಕ್ಕೆ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಬೇಕಾದ ಎಲ್ಲ ಸೌಕರ್ಯ ಗಳೂ ಇಲ್ಲಿದೆ. ಇವನ್ನೆಲ್ಲ ಮಾಡಲು ಮನಸ್ಸಿಲ್ಲದಿದ್ದರೆ ನಗರದಲ್ಲಿ ಸುಂದರ ಉದ್ಯಾನವಿದೆ. ಇಲ್ಲಿಗೆ ವಿಶಿಷ್ಟವಾದ ಪಕ್ಷಿ ಸಂಕುಲವಿದೆ. ಅವುಗಳ ವೀಕ್ಷಣೆ ಮಾಡಬಹುದು. ಗಾಂಡೊಲ ಸವಾರಿ ಮಾಡಬಹುದು. ದೊಡ್ಡ ದೊಡ್ಡ ದೋಣಿಗಳನ್ನು ಹತ್ತಿಕೊಂಡು ಸರೋವರದ ಮೂಲಕ ಸಂಚರಿಸುತ್ತ ಪ್ರಕ್ರತಿ ವೀಕ್ಷಣೆ ಮಾಡಬಹುದು.
ಪಟ್ಟಣದಲ್ಲಿ ವಿವಿಧ ರೀತಿಯ,ದೇಶದ ಪ್ರವಾಸಿಗರು ತುಂಬಿರುವುದು ಕಾಣುತ್ತದೆ. ಎಲ್ಲ ದೇಶದ ಜನರ ಆಹಾರದ ಅಗತ್ಯಗಳನ್ನು ಪೂರೈಸಲು ವಿವಿಧ ದೇಶಗಳ ಆಹಾರವನ್ನು ಬಡಿಸುವ ಹೋಟೆಲುಗಳು ಇಲ್ಲಿವೆ. ಅನೇಕ ಭಾರತೀಯ ಹೋಟೆಲುಗಳೂ ಇಲ್ಲಿದ್ದವು. ಇಷ್ಟು ಜನ ಬರುವ ಜಾಗವಾದರೂ ತುಂಬಾ ಚೊಕ್ಕವಾಗಿದ್ದು ಎಲ್ಲಿಯೂ ಒಂದು ಕಸ, ಬೇಡದ ಪ್ಲಾಸ್ಟಿಕ್ ಹುಡುಕಿದರೂ ಸಿಗುವುದಿಲ್ಲ. ವಕಾಟಿಪು ಸರೋವರದ ಎದುರಿಗೇ ಇರುವ ನಮ್ಮ ವಾಸಸ್ಥಾನ ಪಟ್ಟಣದ ಕೇಂದ್ರ ಭಾಗದಲ್ಲಿತ್ತು.
ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ :-
![]() |
ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ ರಸ್ತೆ |
ಕ್ವೀನ್ಸ್ ಟೌನ್ ನಿಂದ 30 ಕಿ. ಮೀ ಉದ್ದದ ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ ಎನ್ನುವ ಸುಂದರವಾದ ರಸ್ತೆಯ ಮೂಲಕ ಹೋಗಿ ಬರುವುದು ಒಂದು ಸುಂದರ ಅನುಭವ. ಗ್ಲೆನೋರ್ಕಿ ಪಟ್ಟಣವನ್ನು ಕ್ವೀನ್ಸ್ ಟೌನ್ ನಗರಕ್ಕೆ ಸೇರಿಸುವ ಈ ರಸ್ತೆ ನಿರ್ಮಾಣವಾಗಿದ್ದು 1951 ರಿಂದ 1956 ರ ನಡುವೆ. ಈ ರಸ್ತೆಯ ನಿರ್ಮಾಣ ಈ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದೆ. ಈ ರಸ್ತೆ ನಿರ್ಮಾಣವಾಗುವ ಮೊದಲು ಸರೋವರದ ಜಲಮಾರ್ಗದಲ್ಲಿಯೇ ಈ ಎರಡು ಊರುಗಳ ಸಂಪರ್ಕವಂತೆ. ವಕಾಟಿಪು ಸರೋವರದ ಪಕ್ಕವೇ ಸಾಗುವ ಈ ಸುಂದರ ರಸ್ತೆ ಇಲ್ಲಿನ ಅತ್ಯುತ್ತಮ ಮತ್ತು ಸುಂದರ ರಸ್ತೆಗಳಲ್ಲಿ ಒಂದು. ದಾರಿಯಲ್ಲಿ ಬೆನೆಟ್ಟೊನ್ ಬ್ಲಫ್ ಒಂದು ಸುಂದರ ಜಾಗ ಸಿಗುತ್ತದೆ. ಅಲ್ಲಿ ಇಳಿದರೆ ಒಂದು ಚಿಕ್ಕ ಬೆಟ್ಟ. ಅದನ್ನು ಹತ್ತಿಕೊಂಡು ಹೋದರೆ ಮತ್ತೆ ವಿಶಾಲವಾದ ವಕಾಟಿಪು ಸರೋವರದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಯೂ ಮಧ್ಯೆ ಮಧ್ಯೆ ತಂಗುದಾಣಗಳನ್ನು ಮಾಡಿಟ್ಟು ತುಂಬಾ ಮಳೆ ಬಂದರೆ ನಿಲ್ಲಲು ಸೂರು ಇರುವಂತೆ ಮಾಡಿದ್ದಾರೆ. ಇಂತಹ ಚಿಕ್ಕ ಚಿಕ್ಕ ಸುಂದರ ಜಾಗಗಳು ದಾರಿಯುದ್ದಕ್ಕೂ ಸಿಗುತ್ತವೆ.
ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ತೋಟಗಳು ಕಾಣಸಿಗುತ್ತವೆ. ಇಲ್ಲಿನ ತೋಟಗಳೆಂದರೆ ಅಲ್ಲಿ ಹಸು, ಕುರಿ, ಜಿಂಕೆಗಳು, ಅಲ್ಪಾಕಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಮೇಯುತ್ತಿರುತ್ತವೆ. ಅವುಗಳನ್ನು ನೋಡುವುದೇ ಚಂದ. ಈ ದೃಶ್ಯ ಗಳನ್ನು ಸವಿಯುತ್ತಾ ತೆರಳುವುದು ಒಂದು ಆಹ್ಲಾದಕರ ಅನುಭವ.
![]() |
| ರಸ್ತೆಯ ಬದಿಯಲ್ಲಿ ಕಾಣ ಸಿಗುವ ದೃಶ್ಯ |
ಗ್ಲೆನೋರ್ಕಿ:-
![]() |
| ಕಾಮನಬಿಲ್ಲು ಮೂಡಿರುವ ವಕಾಟಿಪು ಸರೋವರ |
ಗ್ಲೆನೋರ್ಕಿ ಒಂದು ಸುಂದರವಾದ ಪುಟ್ಟ ಪಟ್ಟಣ. ಇಲ್ಲಿ ಮತ್ತೆ ವಕಾಟಿಪು ಸರೋವರದ ನೋಟವನ್ನು ಕಣ್ತುಂಬಿಕೊಳ್ಳಬಹುದು. ಅನೇಕ ಚಾರಣದ ರಸ್ತೆಗಳು ಇಲ್ಲಿಂದ ಆರಂಭವಾಗುವುದರಿಂದ ಚಾರಣಿಗರ ಜನಪ್ರಿಯ ಜಾಗ ಇದು. ಡಾರ್ಟ್ ನದಿಯು ಇಲ್ಲಿಯೇ ಬಂದು ಸರೋವರವನ್ನು ಸೇರುವುದರಿಂದ ನದಿಯ ಮೇಲೆ ಮಾಡುವ ಸಾಹಸ ಕ್ರೀಡೆಗಳಿಗೂ ಇಲ್ಲಿ ಅವಕಾಶವಿದೆ. ಅಲ್ಲಿ ಮಳೆ ಬರುತ್ತಿತ್ತು. ಮಳೆಯಲ್ಲಿ ಕೊಡೆ ಹಿಡಿದು ಎಲ್ಲರೂ ಇಲ್ಲಿನ ಲಗೂನ್ ಬಳಿ ಒಂದು ಚಿಕ್ಕ ನಡಿಗೆ ಮಾಡಿದೆವು. ಇಲ್ಲಿನ ಸುಂದರವಾದ ಮೀ. & ಮಿಸೆಸ್ ಗ್ಲೇನ್ ಕೆಫೆಯಲ್ಲಿ ಕುಳಿತು ಊಟ ಮಾಡಿದೆವು .

ಲಗೂನ್
ಪ್ಯಾರಾಡೈಸ್:-

ಗ್ಲೆನೋರ್ಕಿ ಯಿಂದ ಸ್ವಲ್ಪ ಮುಂದೆ ಹೋದರೆ ಇನ್ನೊಂದು ಪ್ರವಾಸಿ ತಾಣ ಹೆಸರು ಪ್ಯಾರಾಡೈಸ್ ಅಂದರೆ ಸ್ವರ್ಗ! ನೋಡೋಣ ಎಂದು ಹೋದೆವು. ಇಲ್ಲಿಗೆ ತಲುಪುವ ದಾರಿ ಸ್ವಲ್ಪ ದುರ್ಗಮವಾಗಿತ್ತಾದರೂ ಸುಂದರ ರಮಣಿಯ ದೃಶ್ಯಗಳಿದ್ದವು. ಅಲ್ಲಿ ಜನರು ಪರ್ವತದಲ್ಲಿ ಬೈಕ್ ತೆಗೆದುಕೊಂಡು ಹೋಗಲು ತಯಾರಾಗುತ್ತಿದ್ದರು. ರಸ್ತೆಯನ್ನು ಬಿಟ್ಟು ಕಚ್ಚಾ ರಸ್ತೆಗಳಲ್ಲಿ ವಾಹನ ಚಲಾಯಿಸುವ ಆನಂದವನ್ನು ಸವಿಯುತ್ತಿದ್ದರು. ದೊಡ್ಡ ದೊಡ್ಡ ಕ್ಯಾರವಾನ್ ಗಳನ್ನು ಕ್ಯಾನ್ಪರ್ ವ್ಯಾನುಗಳನ್ನು ಬಾಡಿಗೆಗೆ ತೆಗೆದುಕೊಂಡು ಅದರಲ್ಲಿಯೇ ವಾಸವಿದ್ದು ಪ್ರವಾಸ ಮಾಡುವುದು ಈ ದೇಶದ ಇನ್ನೊಂದು ಜನಪ್ರಿಯ ಚಟುವಟಿಕೆ. ಅಂತಹ ಪ್ರವಾಸಿಗರ ಮತ್ತು ಮೌಂಟನ್ ಬೈಕಿಂಗ್ ಮಾಡುವವರ ಅಚ್ಚುಮೆಚ್ಚಿನ ತಾಣವಂತೆ ಪ್ಯಾರಾಡೈಸ್!
ಲೇಖನ- ಸುಧಾ ಶಶಿಕಾಂತ್ , ಮಸ್ಕತ್
ಈ ಪ್ರವಾಸ ಕಥನದ ಈ ಭಾಗ ಉದಯವಾಣಿ ದೇಸೀ ಸ್ವರದ ಮೇ ೩, ೨೦೨೫ ರಂದು ಪ್ರಕಟವಾಗಿತ್ತು







.jpg)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ