ಉದ್ಯೋಗಕ್ಕಾಗಿ ವಿದೇಶಕ್ಕೆ ಬಂದು ನೆಲೆಸುವುದು ಭಾರತಿಯರಿಗಂತೂ ಸಾಮಾನ್ಯವಾದ ವಿಚಾರ. ಮಧ್ಯಪ್ರಾಚ್ಯದ ದೇಶಗಳು ಭಾರತಿಯರ ಎರಡನೆಯ ಮನೆ ಅಂತಲೇ ಹೇಳಬಹುದು. ಈ ಮರಳುಗಾಡನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಇಲ್ಲಿಯ ಜೀವನಕ್ಕೆ ಹೊಂದಿಕೊಳ್ಳುತ್ತಾ ಸಾಧ್ಯವಿದ್ದಷ್ಟು ವರ್ಷ ಇಲ್ಲಿ ಕೆಲಸ ಮಾಡಿ, ಇಲ್ಲಿ ಉಳಿಸಿದ ಹಣದಿಂದ ಸ್ವದೇಶದಲ್ಲಿ ಮನೆ ಮಠ ಮಾಡಿಕೊಂಡು ಮತ್ತೆ ಭಾರತಕ್ಕೆ ಹೋಗಿ ನಿವೃತ್ತ ಜೀವನವನ್ನು ಕಳೆಯುವುದು ಗಲ್ಫ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಜೀವನ ನಿಯಮ. ಆದರೆ ಇಲ್ಲಿ ಬಂದು ನೆಲಸಿ ಇಲ್ಲಿನ ನೆಲದಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳಸಿ, ನಮ್ಮ ಪರಂಪರೆಯ ಒಂದು ಭದ್ರವಾದ ಬುನಾದಿಯನ್ನೇ ಹಾಕಿಕೊಟ್ಟು, ತಾವು ನೆಲಸಿದಲ್ಲೆಲ್ಲ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಅಂತಹ ಒಬ್ಬ ಅಪರೂಪದ ಮಸ್ಕತ್ತಿನ ಕನ್ನಡಿಗ ನಮ್ಮ ಶ್ರೀ ಕಲ್ಮಂಜೇ ಲಕ್ಷ್ಮೀ ನಾರಾಯಣ ಆಚಾರ್ಯರು. ಮಸ್ಕತ್ ಕನ್ನಡಿಗರಿಗೆ ತಂದೆಯಂತೆ ಇದ್ದು ಆಧ್ಯಾತ್ಮ ವೈದಿಕ ಪರಂಪರೆಯ ದೀಪವನ್ನು ಈ ಬಿಸಿಲುಭೂಮಿಯ ಮನೆ ಮನೆಯಲ್ಲಿ ಬೆಳಗಿ, ಅದಕ್ಕೊಂದು ಶ್ರೀಮಂತ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ನಗುಮುಖದ ಆಚಾರ್ಯರು ಸಂಪರ್ಕಕ್ಕೆ ಬಂದವರೆನ್ನೆಲ್ಲ ಸೆಳೆಯುತ್ತಿದ್ದ ಧೀಮಂತ ವ್ಯಕ್ತಿತ್ವ. ತಮ್ಮ ನಲವತ್ತೆರಡು ವರ್ಷಗಳ ಒಮಾನಿನನ ವಾಸದಲ್ಲಿ ಇಲ್ಲಿರುವ ಭಾರತಿಯರೆಲ್ಲರಿಗೆ ಸಮಾಧಾನವನ್ನು ಹೇಳುವ ಹಿರಿಯಣ್ಣನಾಗಿ, ಇಲ್ಲಿನ ದೇವಾಲಯಗಳಲ್ಲಿ ನಡೆಯುವ ವೈದಿಕ ಸಂಪ್ರದಾಯದ ಪೂಜೆಗಳ ಮುಂದಾಳುವಾಗಿ, ಸಂಘಟಕನಾಗಿ ಅವರು ಮಾಡಿದ ಸಮಾಜ ಸೇವೆ ಅತ್ಯಮೂಲ್ಯ ವಾದದ್ದು.
ವೈಯ್ಯಕ್ತಿಕ ಜೀವನ:-
ಉಡುಪಿಯಲ್ಲಿ ಶ್ರೀಮತಿ ಕಾವೇರಮ್ಮ ಮತ್ತು ಶ್ರೀ ಹಯವದನಾಚಾರ್ಯರ ಮಗನಾಗಿ ಜನಿಸಿದ ಆಚಾರ್ಯರ ವಿದ್ಯಾಭ್ಯಾಸ ಉಡುಪಿಯಲ್ಲಿ ಆಯಿತು. ಬಾಲ್ಯದಲ್ಲಿಯೇ ವೈದಿಕ ಪರಂಪರೆಯಲ್ಲಿ, ಆಚರಣೆಗಳಲ್ಲಿ ಆಸಕ್ತಿ ಬೆಳೆಯಲು ಅವರ ತಾತ ಕಾರಣರಾದರು. ಎಂಟು ವರ್ಷದ ಬಾಲಕ ಆಚಾರ್ಯರಿಗೆ ಉಪನಯನ ಮಾಡಿ ಪೂಜಾ ವಿಧಿ ವಿಧಾನಗಳನ್ನು ಅವರಿಗೆ ಅವರ ತಾತ ಕಲಿಸಿದರು. ಬಾಲ್ಯದಲ್ಲಿಯೇ ಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳನ್ನು ನೋಡುತ್ತಾ, ಮಾಡುತ್ತಾ ಆಚಾರ್ಯರು ಬೆಳೆದರು. ಬಿ ಕಾಮ್ ಪದವಿಯ ನಂತರ ಉದ್ಯೋಗ ನಿಮಿತ್ತ 1982 ರಲ್ಲಿ ಒಮಾನಿನ ಸಲಾಲಕ್ಕೆ ಬಂದಿಳಿದ ಆಚಾರ್ಯರು ಅಲ್ಲಿನ ಉಡುಪಿ ಹೋಟೆಲಿನ ಮ್ಯಾನೇಜರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅಲ್ಲಿ 3-4 ವರ್ಷಗಳ ಉದ್ಯೋಗದ ಬಳಿಕ ಉಷಾ ಅವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 1988 ರಲ್ಲಿ ಮಸ್ಕತ್ತಿಗೆ ಆಗಮಿಸಿದರು. ಅವರ ಪುತ್ರ ಗುರು ಇಲ್ಲಿಯೇ ಹುಟ್ಟಿ ಬೆಳೆದ. ಇವರು ರುವಿಯ ಒಮಾನ್ ಎಕ್ಸಪ್ರೆಸ್ ಹೋಟೆಲಿನಲ್ಲಿ ಮ್ಯಾನೇಜರ್ ಆಗಿ, ಇಲ್ಲಿನ ಅನೇಕ ಖಾಸಗಿ ಕಂಪನಿಗಳಲ್ಲಿ ಲೆಕ್ಕ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ನಡೆಸುತ್ತಾ 2019 ರಲ್ಲಿ ನಿವೃತ್ತಿ ಹೊಂದಿದರು. ಅಷ್ಟರಲ್ಲಿಯೇ ಅವರ ಪುತ್ರ ಇಲ್ಲಿಯೇ ಉದ್ಯೋಗ ಆರಂಭಿಸಿದ್ದರಿಂದ ತಮ್ಮ ವಾಸವನ್ನು ನಿವೃತ್ತಿಯ ನಂತರವೂ ಪತ್ನಿಯೊಂದಿಗೆ ತಮ್ಮ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಮುಂದುವರಿಸಿದ್ದರು.
ಮಸ್ಕತ್ತಿನ ಸಾರ್ವಜನಿಕ ಉತ್ಸವಗಳಲ್ಲಿ ಆಚಾರ್ಯರು :-
ಬಾಲ್ಯದ ಅವರ ಆಸಕ್ತಿಯಾದ ಪೂಜೆಗಳು ದೈವಭಕ್ತಿ ಆಚಾರ್ಯರ ವ್ಯಕ್ತಿತ್ವದ ಭಾಗವೇ ಆಗಿತ್ತು. ಹಾಗಾಗಿ ಅವರು ತಮ್ಮ ಈ ಆಸಕ್ತಿಯ ಕ್ಷೇತ್ರವನ್ನು ಮರಳುಗಾಡಿನ ಈ ಮುಸ್ಲಿಮ್ ದೇಶದಲ್ಲಿಯೂ ಮುಂದುವರಿಸಿದರು. ಮಸ್ಕತ್ತಿಗೆ ಬಂದ ಸ್ವಲ್ಪ ಸಮಯದಲ್ಲಿಯೇ ಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ತುಳುಕೂಟದ ಸಾರ್ವಜನಿಕ ಗಣೇಶೋತ್ಸವದ ಪೂಜೆಯ ಹೊಣೆಯನ್ನು ಹೊತ್ತು 2006 ರ ವರೆಗೆ ಸುಮಾರು 20 ವರ್ಷಗಳು ನಿರಂತರವಾಗಿ ಮಸ್ಕತ್ತಿನ ಸಾರ್ವಜನಿಕ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು ಪ್ರತೀವರ್ಷ ಈ ಪೂಜೆಯಲ್ಲಿ ಒಂದೊಂದು ಬದಲಾವಣೆಯನ್ನು ತಂದಿದ್ದರು. ಭಕ್ತರೂ ಈ ಸೇವೆಗಳಲ್ಲಿ ಪಾಲ್ಗೊಳ್ಳುವಂತಾಗಲು ಲಡ್ಡುಸೇವೆ, 108 ಕಾಯಿ ಸೇವೆ, ರಂಗಪೂಜೆ ಮುಂತಾದ ಹೊಸ ಸೇವೆಗಳನ್ನು ಆರಂಭಿಸಿದರು. ಮಹಾರಾಷ್ಟ್ರೀಯರು ನಡೆಸುವ ಸಾರ್ವಜನಿಕ ಗಣೇಶೋತ್ಸವದ ಪೂಜೆಯನ್ನೂ ಹಲವು ವರ್ಷ ಆಚಾರ್ಯರು ಮಾಡಿದ್ದಾರೆ.
1997 ರಲ್ಲಿ ಸಮಾನ ಮನಸ್ಕರೊಂದಿಗೆ ಇವರು ಆರಂಭಿಸಿದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಹೋತ್ಸವವು ಪ್ರತೀ ವರ್ಷವೂ ತಪ್ಪದೇ ನಡೆಯುತ್ತ ಬಂದಿದೆ. ಅನೇಕ ವರ್ಷ ಮನೆಗಳಲ್ಲಿ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಧ್ಯ ಆರಾಧನೆ ಆಚಾರ್ಯರ ಮನೆಯಲ್ಲಿಯೇ ನಡೆಯುತ್ತಿತ್ತು. ಸುಮಾರು 2005 ರಿಂದ ಇಲ್ಲಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಾ ಬಂದಿದೆ.
ಇಲ್ಲಿ ಅನೇಕ ದೊಡ್ಡ ಭಾರತೀಯ ಉದ್ಯಮಿಗಳು ಹಲವು ರೀತಿಯ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ.. ಅಂತಹ ಉದ್ಯಮಗಳ ದೀಪಾವಳಿಯ ಲಕ್ಷ್ಮಿ ಪೂಜೆ, ಗಣಹೋಮ, ಇವುಗಳನ್ನೆಲ್ಲ ಆಚಾರ್ಯರು ಮಾಡುತ್ತಿದ್ದರು.
ಓಂಕಾರ ಸಮಿತಿ (ಒಮಾನ್ ಕರ್ನಾಟಕ ಆರಾಧನಾ ಸಮಿತಿ) ಎಂಬ ಸಮಾನ ಮನಸ್ಕರ ಗುಂಪು 2011 ರಲ್ಲಿ ರೂಪುಗೊಂಡು ಇಲ್ಲಿ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವವನ್ನು ಆರಂಭಿಸಿದಾಗ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸುಮಾರು 10 ವರ್ಷಗಳ ಕಾಲ ಇವರು ನಡೆಸುವ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದರು. ಇವಲ್ಲದೇ ಬಂಟರು, ವಿಶ್ವ ಕರ್ಮ, ತುಳುವರು, ಅಯ್ಯಪ್ಪ ಪೂಜೆ- ಹೀಗೇ ಯಾವುದೇ ಸಮುದಾಯದವರು ಧಾರ್ಮಿಕ ಕಾರ್ಯಕ್ರಮ ವನ್ನು ಆಯೋಜಿಸಿ ಆಹ್ವಾನ ನೀಡಿದರೂ ನಗುತ್ತಲೇ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದ ಆಚಾರ್ಯರು ಭಕ್ತಿ ಮತ್ತು ನಿಷ್ಠೆಯಿಂದ ಅವನ್ನು ನೆರವೇರಿಸುತ್ತಿದ್ದರು.
ಸತ್ಯನಾರಾಯಣ ಪೂಜೆ ಮತ್ತು ಆಚಾರ್ಯರು:-
2006 ರಲ್ಲಿ ಅವರ ತಂದೆಯ ಸಲಹೆಯಂತೆ ಮನೆಗಳಿಂದ ಆಹ್ವಾನ ಬಂದಾಗ ಹೋಗಿ ಸತ್ಯನಾರಾಯಣ ಪೂಜೆಯನ್ನು ಮಾಡಿಸಲು ತೊಡಗಿದ ಆಚಾರ್ಯರು ಮುಂದಿನ ವರ್ಷಗಳಲ್ಲಿ ಮಸ್ಕತ್ತಿನಲ್ಲಿ ಸತ್ಯನಾರಾಯಣ ಪೂಜೆಗೆ ಒಂದು ಹೊಸ ಪರಂಪರೆಯನ್ನೇ ಹುಟ್ಟು ಹಾಕಿದರು. ಅವರ ಸ್ಪಷ್ಟ ಮಂತ್ರೋಚ್ಚಾರಣೆ, ಕನ್ನಡ, ತುಳು, ಹಿಂದಿ- ಹೀಗೆ ಯಾವ ಭಾಷೆಯಲ್ಲಿ ಬೇಕಾದರೂ ಕಥೆ ಹೇಳುವ ಸಾಮರ್ಥ್ಯ, ಪೂಜೆಗೆ ಬಂದವರೆನ್ನೆಲ್ಲ ಸೇರಿಸಿಕೊಂಡು ವಿಷ್ಣು ಸಹಸ್ರನಾಮ, ಭಜನೆಗಳನ್ನು ಮಾಡಿಸುವ ಅವರ ಕ್ರಮಗಳೆಲ್ಲ ಅವರನ್ನು ಮಸ್ಕತ್ ಕನ್ನಡಿಗರ ಕುಲಪುರೋಹಿತರನ್ನಾಗಿಸಿತು. ಪೂಜೆ ಎಂದರೆ ಆಚಾರ್ಯರು, ಆಚಾರ್ಯ ರೆಂದರೆ ಪೂಜೆ ಎಂಬಂತೆ ಇಲ್ಲಿ ನೆಲಸಿದ ನಮ್ಮೆಲ್ಲರ ಮನೋಭಾವವಾಯಿತು. ಯಾರ ಮನೆಗೆ ಹೋದರೆ ಅಲ್ಲಿ ಎನಿರುತ್ತದೋ ಅದರಲ್ಲಿಯೇ ಹೊಂದಿಕೊಂಡು, ಪೂಜೆಯ ತಯಾರಿಯನ್ನೆಲ್ಲ ತಾವೇ ಮಾಡಿಕೊಂಡು ಭಕ್ತಿಯಿಂದ ಆಚಾರ್ಯರು ಮಾಡುತ್ತಿದ್ದ ಸತ್ಯನಾರಾಯಣ ಪೂಜೆಗೆ ತಲೆಭಾಗದವರೇ ಇಲ್ಲ. ಅಲ್ಲದೇ ಪೂಜೆ ಮಾಡಿಸಿದವರಿಗೆ ಮಾತ್ರವಲ್ಲ ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಈ ಪೂಜೆ ತಮ್ಮದೆಂಬ ಭಾವ ಬರುವಂತಹ ಧನಾತ್ಮಕ ವಾತಾವರವನ್ನು ತಮ್ಮ ಪೂಜೆಗಳಲ್ಲಿ ಆಚಾರ್ಯರು ತರಿಸುತ್ತಿದ್ದರು. ಇಂತಹ ಅಸಂಖ್ಯ ಪೂಜೆಗಳನ್ನು 2023 ರ ಆಕ್ಟೊಬರ್ ತನಕ ಬಿಡುವಿಲ್ಲದೆ ಆಚಾರ್ಯರು ಮಾಡಿಸಿದರು.
ಉಡುಪಿ ಬ್ರಾಹ್ಮಣ ಸಮಾಜ:( UBS)-
2016 ರಲ್ಲಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ಆರಂಭವಾದ ಈ ಸಂಘವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಸಾಮಾಜ ಸೇವೆಯನ್ನು ಮಾಡುತ್ತ ಒಮಾನ್ ಕನ್ನಡಿಗರನ್ನು, ಪ್ರಮುಖವಾಗಿ ಕರಾವಳಿ ಕರ್ನಾಟಕದ ಭಾಗದ ಜನರನ್ನು ಒಂದುಗೂಡಿಸುವಲ್ಲಿ ಉತ್ತಮ ಕಾರ್ಯವನ್ನು ಕೈಗೊಂಡಿದೆ. ಸೌರಮಾನ ಯುಗಾದಿ ಮತ್ತು ಶ್ರೀಕೃಷ್ಣನ ಜನ್ಮಾಷ್ಟಮಿ ಈ ಸಮೂಹದಿಂದ ಆಚರಿಸಲ್ಪಡುವ ಪ್ರಮುಖ ಹಬ್ಬಗಳು. ಈ ಹಬ್ಬಗಳನ್ನು ಪ್ರತಿವರ್ಷ ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಪ್ರಮುಖ ವಾರ್ಷಿಕ ಕಾರ್ಯಕ್ರಮ ವೆಂದರೆ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಂಗೀತ ಸೇವೆ. ಇಲ್ಲಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮ ಇವರ ಪ್ರಮುಖ ಆಕರ್ಷಣೆ. ಉಡುಪಿ ಬ್ರಾಹ್ಮಣ ಸಮಾಜದ ಕಾರ್ಯಕ್ರಮಗಳ ಹಿಂದಿರುವ ಶಕ್ತಿ ಲಕ್ಷ್ಮೀನಾರಾಯಣ ಆಚಾರ್ಯರು. ಇಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಯನ್ನು ಮೊದಲಿನಿಂದ ಕೊನೆಯತನಕ ಆಚಾರ್ಯರು ವಹಿಸಿಕೊಂಡು ಎಲ್ಲರನ್ನೂ ಸೇರಿಸಿಕೊಂಡು ನಡೆಸುತ್ತಿದ್ದರು. ಉಡುಪಿ ಬ್ರಾಹ್ಮಣ ಮಹಿಳೆಯರಿಗೆ ಭಜನೆ ಹಾಡುವಂತೆ ಹುರಿದುಂಬಿಸಿ ಇವರ ಒಂದು ಭಜನಾ ಮಂಡಳಿಯನ್ನು ಆರಂಭಿಸುವಲ್ಲಿ ಆಚಾರ್ಯರ ಪಾತ್ರ ದೊಡ್ಡದಾಗಿದೆ. ತುಳಸಿ ಸಂಕೀರ್ತನೆಯನ್ನು ಗುಂಪಿನ ಸದಸ್ಯರಿಗೆ ಕಲಿಸಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರ ಎದುರಿಗೆ ಪ್ರದರ್ಶಿಸಿ ಅವರಿಂದ ಭೇಷ್ ಎನಿಸಿಕೊಂಡಿದ್ದರು. ಪೂಜಾ ಕೈಂಕರ್ಯ, ಶ್ರೀಸೂಕ್ತದ ಪಾರಾಯಣ ಮುಂತಾದವನ್ನು ಎಲ್ಲರಿಗೂ ಕಲಿಸುವುದರಲ್ಲಿಯೂ ಉತ್ಸಾಹ ತೋರಿಸುತ್ತಿದ್ದ ಆಚಾರ್ಯರು ಮಸ್ಕತ್ತಿನ ಅನೇಕರಿಗೆ ಇವುಗಳನ್ನು ಕಲಿಸಿದ ಗುರುವೂ ಆಗಿದ್ದಾರೆ.
ಯು ಬಿ ಎಸ್ ಗುಂಪಿನ ಸದಸ್ಯರು ಹೇಳುವಂತೆ ಎಲ್ಲರಿಗೂ ಆಚಾರ್ ಅಣ್ಣನಾಗಿದ್ದ ಅವರ ಮನೆ ಮತ್ತು ಮನ ಯಾವಾಗಲೂ ತೆರೆದಿತ್ತು. ಸಂತೋಷ ಅಥವಾ ದುಃಖ ಯಾವುದನ್ನೇ ಹಂಚಿಕೊಳ್ಳಲು ಆಚಾರ್ಯ ದಂಪತಿಗಳು ತಯಾರಿದ್ದರು ಅವರು ತಮ್ಮ ನಗು, ತುಂಟತನದ ವರ್ತನೆಗಳಿಂದ ಗುಂಪಿನ ಮಕ್ಕಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಮಸ್ಕತ್ತಿನಲ್ಲಿ ಇತರೆ ಗುಂಪುಗಳು ಆಯೋಜಿಸುವ ವಿವಿಧ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಯುಬಿಎಸ್ (UBS) ಸದಸ್ಯರ ಭಾಗವಹಿಸುವಿಕೆಗೆ ಅವರ ಪ್ರೋತ್ಸಾಹ ನೀಡುತ್ತಿದ್ದರು..ಅವರ ಪತ್ನಿ ಉಷಕ್ಕ ಆಚಾರ್ಯರ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಆಚರಣೆಗೆ ತರಲು ಆಚಾರ್ಯ ರೊಂದಿಗೆ ಶ್ರಮಿಸಿದರು . ಮಸ್ಕತ್‌ನಲ್ಲಿ ಮೊಸರು ಕುಡಿಕೆ ಉತ್ಸವ, ತುಳಸಿ ಪೂಜೆ - ಯಾವುದನ್ನೂ ಮರೆಯದಂತೆ, ನಮ್ಮ ಊರಿನ ವಾತಾವರಣವನ್ನು ಇಲ್ಲಿಯೇ ಸೃಷ್ಟಿಸಿದರು.
ಭಾರತದಿಂದ ವಿದ್ಯಾಭೂಷಣರು, ಪ್ರವೀಣ್ ಗೋಡ್ಕಿಂಡಿ ಮುಂತಾದ ಸಂಗೀತ ಕಲಾವಿದರನ್ನು ಕರೆಸಿ ಒಳ್ಳೆಯ ಸಂಗೀತ ಕಾರ್ಯಕ್ರಮವನ್ನು ಮಸ್ಕತ್ ಕನ್ನಡಿಗರಿಗೆ ಏರ್ಪಡಿಸಿದ್ದರು. ಕಳೆದ ವರ್ಷ ಅಂದರೆ 2023ರಲ್ಲಿ ಪುತ್ತಿಗೆ ಪೀಠಾಧೀಶರಾದ ಸುಗುಣೇಂದ್ರ ತೀರ್ಥರು ಆಗಮಿಸಿ ಫೆಬ್ರುವರಿ 10 ರಿಂದ 16 ರ ತನಕ ಇಲ್ಲಿ ಆಚಾರ್ಯರ ಮನೆಯಲ್ಲಿ ನೆಲೆಸಿ ಕಾರ್ಯಕ್ರಮ ವನ್ನು ನಡೆಸಿಕೊಟ್ಟರು. ಉಡುಪಿ ಬ್ರಾಹ್ಮಣ ಸಮಾಜವು ತಾಯ್ನಾಡಿನಿಂದ ದೂರವಿರುವ ಕರಾವಳಿ ಪ್ರದೇಶದ ಬ್ರಾಹ್ಮಣರ ಒಂದು ದನಿಯಾಗಿ ಇಲ್ಲಿ ಬೆಳೆಯುವ ಆ ಭಾಗದ ಮಕ್ಕಳಿಗೆ ಅಲ್ಲಿನ ಸಾಂಪ್ರದಾಯಿಕ ಆಚರಣೆಗಳನ್ನು ತಿಳಿಸುವ ವೇದಿಕೆಯಾಗಿ, ಸಾಮಾಜಿಕ ಕಾರಣಗಳಿಗೆ ಸ್ಪಂದಿಸುತ್ತಾ ಊರಿನಲ್ಲಿ ಅಗತ್ಯವಿದ್ದವರಿಗೆ ಧನ ಸಹಾಯ ಮಾಡುತ್ತಾ, ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ
ಸ್ನೇಹಿತರು ಕಂಡಂತೆ ಆಚಾರ್ಯರು: -
ಆಚಾರ್ಯರು ತುಂಬಾ ಶಿಸ್ತು ಮತ್ತು ಕಟ್ಟುನಿಟ್ಟಿನ ನಿಯಮಗಳ ಜೀವನ ನಡೆಸುತ್ತಿದ್ದರು. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಿದ್ದ ಅವರು ತಮ್ಮ ಬೆಳಗ್ಗಿನ ಪೂಜೆಯನ್ನೆಲ್ಲ ಮುಗಿಸುವ ತನಕ ನೀರನ್ನೂ ಕುಡಿಯಿತ್ತಿರಲಿಲ್ಲವಂತೆ. ಏಕಾದಶಿ , ಸಂಕಷ್ಟ ಚತುರ್ಥಿಯ ಉಪವಾಸಗಳನ್ನು ತಪ್ಪದೇ ಮಾಡುತ್ತಿದ್ದರು. ಆದರೆ ಅವರ ನಿಯಮ ಅನುಷ್ಠಾನಗಳು ಅವರ ಜೀವನ ಪ್ರೀತಿಗೆ ಅಡ್ಡಿಯಾಗಿರಲಿಲ್ಲ. ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಷ್ಟೇ ಆಸ್ಥೆಯಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಆಚಾರ್ಯರು ಅಜಾತಾಶತ್ರುವಾಗಿದ್ದರು.
ಅವರ ಮಸ್ಕತ್ತಿನ ನಾಲ್ಕು ದಶಕಗಳ ಜೀವನದ ಒಡನಾಡಿಯಾಗಿದ್ದ ಶ್ರೀ ಶಶಿಧರ ಶೆಟ್ಟರು ಹೇಳುವಂತೆ ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುವ ಸಕಾರಾತ್ಮಕ ಛಲ ಆಚಾರ್ಯರಲ್ಲಿ ಇತ್ತು. ಅವರೊಂದಿಗೆ ಸೇರಿ ಅನೇಕ ದೊಡ್ಡ ದೊಡ್ಡ ಪೂಜೆಗಳನ್ನು ಮಾಡಿಸಿದ್ದ ಇವರು ಅವರೊಂದಿಗಿನ ಸ್ನೇಹ ಮರೆಯಲಾಗದ್ದು ಎನ್ನುತ್ತಾ ಅವರ ಅಗಲಿಕೆ ಸಹೋದರನನ್ನು ಕಳೆದುಕೊಂಡಂತೆ ಆಗಿದೆ ಎನ್ನುತ್ತಾರೆ.
ಅವರ ದೀರ್ಘ ಕಾಲದ ಸ್ನೇಹಿತರಲ್ಲಿ ಒಬ್ಬರಾದ ಶ್ರೀಮತಿ ರಾಜಶ್ರೀ ಮತ್ತು ಶ್ರೀ ಕೃಷ್ಣಪ್ರಸಾದ್ ಅವರು ಹೇಳುವಂತೆ ಅವರು ಎಲ್ಲರನ್ನು ಪ್ರೀತಿಸುವ ಆಧುನಿಕ ಸನ್ಯಾಸಿಯಾಗಿದ್ದರು. ಓಮಾನಿನಲ್ಲಿಯಾಗಲಿ ಅಥವಾ ಭಾರತದಲ್ಲಾಗಲೀ ತುಂಬಾ ಜನರ ಸಂಪರ್ಕವನ್ನು ಹೊಂದಿದ್ದ ಅವರು ಯಾರಿಗಾದರೂ ಸಹಾಯ ಬೇಕೆಂದಾಗ ಥಟ್ ಎಂದು ಸರಿಯಾದ ವ್ಯಕ್ತಿಯೊಡನೆ ಜೀವನವನ್ನು ನೋಡುವ ಅವರ ವಿಧಾನ, ಯಾವುದೇ ಸಂಸ್ಥೆಯ, ಸಾಮಾಜಿಕ ಕೆಲಸದ ಭಾಗವಾಗಲು ಸದಾ ನಗುತ್ತಾ ತಯಾರಿರುವ ಅವರ ಇಚ್ಚಾಶಕ್ತಿ, ಅವರನ್ನು ಮಸ್ಕತ್‌ನಲ್ಲಿ ಅಥವಾ ಒಮಾನಿನಲ್ಲಿ ಎಲ್ಲರ ಮೆಚ್ಚಿನ ವ್ಯಕ್ತಿಯಾಗಿಸಿತು ಅವರು ವಸುದೈವ ಕುಟುಂಬಕಂ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.
ಅವರ ನೆರಮನೆಯಲ್ಲಿದ್ದ ಪಾವನ ಕೌಸ್ತುಬ್ ಹೇಳುವಂತೆ ಆಚಾರ್ಯರು ಜೀವನದ ಎಲ್ಲ ಅನುಭವಗಳನ್ನು ಅಷ್ಟೇ ಲವವಿಕೆಯಿಂದ ಅನುಭವಿಸುತ್ತಿದ್ದರು. ತಮ್ಮ ನೆರೆಹೊರೆಯವರೊಂದಿಗೆ ಸೇರಿ ಸಂಭ್ರಮಿಸುವ ಯಾವುದೇ ಅವಕಾಶವನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ ಆಡುವ ವಿನೋದದ ಆಟಗಳಲ್ಲಿ, ನಾಟಕಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ ಭಾಗವಹಿಸುತ್ತ ತಮ್ಮ ಪತ್ನಿಯನ್ನೂ ಈ ಚಟುವಟಿಕೆಗಳಿಗೆ ಪ್ರೊತ್ಸಾಹಿಸುತ್ತಿದ್ದರು.
ಇಂತಹ ವಿಶಿಷ್ಟ ವ್ಯಕ್ತಿತ್ವದ ಆಚಾರ್ಯರು 2023ರ ಡಿಸೆಂಬರ್ 8ರಂದು ಅಲ್ಪಕಾಲದ ಆಸ್ವಾಸ್ತ್ಯದಿಂದ ಇಹಲೋಕ ತ್ಯಜಿಸಿದರು. ಅವರು ಇನ್ನಿಲ್ಲ ಅಂತ ಅಂದುಕೊಳ್ಳಲು ತುಂಬಾ ಕಷ್ಟವೆನಿಸುತ್ತದೆ. ಆದರೆ ವಿಧಿ ಬರೆದ ಈ ಕಠಿಣ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು.ಅವರು ಇವತ್ತು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು ಆದರೆ ಭಾವನಾತ್ಮಕ ವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಮನೆಯಲ್ಲಿ ಅಚ್ಚಳಿಯದೆ ಇರುವ ನೆನಪುಗಳನ್ನು ಉಳಿಸಿದ್ದಾರೆ. ನಮ್ಮ ಮನೆಗಳಲ್ಲಿ ನಾವು ಸತ್ಯನಾರಾಯಣ ಪೂಜೆ ಮಾಡಿದಾಗ ನಮ್ಮ ಕಣ್ಮುಂದೆ ಬಂದೇ ಬರುತ್ತಾರೆ
"ಜಾತಸ್ಯ ಹಿ ಧ್ರುವಂ ಮೃತ್ಯು,
ಧ್ರುವಂ ಜನ್ಮ ಮೃತಸ್ಯ ಚ
ತಸ್ಮಾದ್ ಅಪರಿಹಾರ್ಯೇ
ನ ತುಂ ಸೋಚಿತುಮರ್ಹಸಿ" ಎನ್ನುವ ಗೀತೆಯ ಶ್ಲೋಕದಂತೆ ಇಲ್ಲಿದ್ದವರೆಲ್ಲರೂ ಹೋಗಲೇಬೇಕು. ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ನುಡಿಯಂತೆ ನಗುನಗುತ್ತಾ ಜೀವನಕ್ಕೆ ವಿದಾಯ ಹೇಳಿದ ಆಚಾರ್ಯರಿಗೆ ಅನಾಯಾಸೇನ ಮರಣ, ವಿನಾ ದೈನ್ಯೇನ ಜೀವಿತವನ್ನು ಅವರು ಅಗಾಧವಾಗಿ ನಂಬಿದ್ದ ಆ ಪರಮಾತ್ಮ ದಯಪಾಲಿಸಿದ್ದ. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವು ಜೀವನ ನಡೆಸುವುದೇ ನಾವು ಅವರಿಗೆ ಕೊಡಬಹುದಾದ ಶ್ರದ್ಧಾಂಜಲಿ.
ಸುಧಾ ಶಶಿಕಾನ್ತ್, ಮಸ್ಕತ್
![]() |
| ಕನ್ನಡಪ್ರಭ ಎನ್ ಅರ್ ಐ ಅವ್ರತ್ತಿಯಲ್ಲಿ ಪ್ರಕಟವಾಗಿದ್ದು |
![]() |
| In Udayavani Desiswara |
https://omankannadigaru.blogspot.com/2024/03/blog-post.html





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ