"ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು" - ಎನ್ನುವ ಪ್ರಸಿದ್ಧ ಕನ್ನಡ ಚಿತ್ರ ಗೀತೆಯ ಸಾಲು ಜೀವನದ ಗಹನವಾದ ತತ್ವವನ್ನು ಸರಳವಾಗಿ ಹೇಳುತ್ತದೆ. ಒಂದು ಭಾಷೆಯ ಪ್ರಸ್ತುತತೆಗೂ ಈ ತತ್ವವನ್ನು ಅಳವಡಿಸಬಹುದು. ಭಾಷೆ ಒಂದು ಜೀವಂತ ವಸ್ತು. ಅದು ಬದಲಾಗುತ್ತಾ, ಅಭಿವೃದ್ಧಿ ಹೊಂದುತ್ತಾ, ಕಾಲಕ್ಕೆ ತಕ್ಕಂತೆ ಇದ್ದಾಗ ಮಾತ್ರ ಅದರ ಬದುಕು ಸಫಲವಾಗುತ್ತದೆ.
ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಪಠ್ಯ ಸಂಗ್ರಹ, ಇ-ಗ್ರಂಥಾಲಯ, ಆನ್ಲೈನ್ ಶಿಕ್ಷಣ, ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣಗಳು - ಇವೆಲ್ಲ ಇಂದಿನ ಜೀವನದ ಅವಿಭಾಜ್ಯ ಅಂಗ. ಅವುಗಳಿಲ್ಲದೆ ನಮ್ಮ ದಿನವನ್ನು ಯೋಚಿಸಲು ಸಾಧ್ಯವಿಲ್ಲ. ಮನೆಯಲ್ಲಿನ ದೀಪವನ್ನು ಬೆಳಗಿಸಲು, ಕಚೇರಿಯ ಕೆಲಸ, ಬ್ಯಾಂಕಿಂಗ್, ವೈದ್ಯಕೀಯ, ಪ್ರಯಾಣ, ಪಾಠಗಳು, ತರಬೇತಿಗಳು, ಸಂಗೀತ ನ್ರತ್ಯ ಮುಂತಾದ ಕಲೆಗಳ ಕಲಿಕೆ—ಎಲ್ಲೆಲ್ಲೂ ಯಂತ್ರ, ಡೇಟಾ ಮತ್ತು ತಂತ್ರಜ್ಞಾನ ನಮ್ಮ ಅವಿಭಾಜ್ಯ ಸಂಗಾತಿ. ಜೀವನದ ಯಾವ ಭಾಗವೂ ತಂತ್ರಜ್ಞಾನದ ಪ್ರಭಾವದಿಂದ ಹೊರತಾಗಿಲ್ಲ. ಅಂತೆಯೇ ತಂತ್ರಜ್ಞಾನ ವನ್ನು ಬಿಟ್ಟು ಯಾವುದೇ ಭಾಷೆ ಉಳಿಯುವುದು ಅಸಾಧ್ಯವೆನ್ನುವುದು ಸತ್ಯ. ಹಾಗಾಗಿ ನಮ್ಮ ಭಾಷೆಯನ್ನು ಈ ಮಾಧ್ಯಮಗಳ ಮೂಲಕ ಹೇಗೆ ಸಶಕ್ತಗೊಳಿಸಬಹುದು ಎಂದು ನಾವು ಯೋಚಿಸುವುದು ಬಹಳ ಅಗತ್ಯ ಅನಿಸುತ್ತದೆ. ಈ ಪೈಪೋಟಿಯ ಜಗತ್ತಿನಲ್ಲಿ ನಮ್ಮ ಕನ್ನಡವೂ ತಂತ್ರಜ್ಞಾನವನ್ನು ಅಪ್ಪಿಕೊಂಡಾಗ ಮಾತ್ರ ತನ್ನ ಸ್ಥಾನವನ್ನು ಉಳಿಸಿಕೊಳ್ಳುತ್ತದೆ.
*ಡಿಜಿಟಲ್ ಕನ್ನಡದ ಬೆಳವಣಿಗೆ*
ಇಂದು ಭಾಷೆ ಬದುಕಲು ಕಾಗದ-ಪುಸ್ತಕ ಸಾಕಾಗುವುದಿಲ್ಲ. ಡಿಜಿಟಲ್ ಜಗತ್ತಿನಲ್ಲಿ ತನ್ನ ಸ್ಥಳವನ್ನು ಗೆಲ್ಲಬೇಕು.ಈಗಾಗಲೇ ಕನ್ನಡದ ಬಳಕೆಯನ್ನು ಸಾಕಷ್ಟು ಅಂತರ್ಜಾಲ ದಲ್ಲಿ ಕಾಣುತ್ತಿದ್ದೇವೆ.
• ಡಿಜಿಟಲ್ ಪುಸ್ತಕಗಳು, ಆಡಿಯೋ ಪುಸ್ತಕಗಳು, ಈ-ಮ್ಯಾಗಜೀನ್‌ಗಳು ಲಭ್ಯವಾಗುತ್ತಿವೆ - ಇವುಗಳೆಲ್ಲ ನಮ್ಮ ಅಂಗೈಯಲ್ಲಿ ಬೇಕೆಂದಾಗ ಓದಲು ಸಿಗುವುದರಿಂದ ಆಸಕ್ತರಿಗೆ ಬೇಕಾದ ಪುಸ್ತಕಗಳನ್ನು ಪಡೆದುಕೊಳ್ಳುವುದು ಸುಲಭವಾಗಿದೆ. ಲೇಖಕರಿಗೆ ವಾಚಕರನ್ನು ತಲುಪುವುದೂ ಬಹಳ ಸುಲಭ
• ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳು ಆನ್ಲೈನ್‌ನಲ್ಲಿ ದೊರೆಯುತ್ತಿವೆ
• ಕನ್ನಡದಲ್ಲಿ ಮೊಬೈಲ್ ಕೀಬೋರ್ಡ್ ಮತ್ತು ಧ್ವನಿ ಆಧಾರಿತ ಟೈಪಿಂಗ್ ಕನ್ನಡದಲ್ಲಿ ಬರೆಯುವುದನ್ನು ಸುಲಭವಾಗಿಸಿದೆ
• ಅನುವಾದ ವ್ಯವಸ್ಥೆಗಳು (ಗೂಗಲ್ ಲೈವ್ ಭಾಷಾಂತರ) ಮತ್ತು ಕನ್ನಡ ಚಾಟ್‌ಬಾಟ್‌ಗಳು ಬೆಳೆಯುತ್ತಿವೆ - ಇವುಗಳಿಂದ ಭಾಷಾಂತರ, ಪರಭಾಷಿಕರೊಡನೆ ಸಂವಹನ ಸುಲಭವಾಗಿದೆ
• ಯೂಟ್ಯೂಬ್ ಚಾನಲ್‌ಗಳು, ಪಾಡ್‌ಕಾಸ್ಟ್‌ಗಳು, ಬ್ಲಾಗ್‌ಗಳು ಕನ್ನಡ ಅಭಿರುಚಿಯನ್ನು ಬೆಳೆಸುತ್ತಿವೆ - ಲೇಖಕರ ಮತ್ತು ಓದುಗರ ನಡುವಿನ ಸಂವಹನವನ್ನು ಇದು ಹಿಂದೆಂದಿಗಿಂತಲೂ ಸಮರ್ಥವಾಗಿ ಈ ಅಂತರ್ಜಾಲದ ಮಾಧ್ಯಮಗಳು ಮಾಡುತ್ತಿವೆ.
• ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇಂಸ್ಟಾ ಗ್ರಾಮ್ ಗಳಲ್ಲಿ ಸಾಹಿತ್ಯಪ್ರಿಯರ ಗುಂಪುಗಳನ್ನು ಮಾಡಿಕೊಂಡು ಪುಸ್ತಕ ವಿಮರ್ಶೆ, ಓದು, ಸಂದರ್ಶನಗಳು ನಡೆಯುತ್ತಿವೆ.
• ಗೋಖಲೆ ಸಂಸ್ಥೆ ಮುಂತಾದ ಕನ್ನಡದ ಪ್ರಮುಖ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ಯೌಟ್ಯೂಬ್ ನೇರಪ್ರಸಾರ ಮಾಡುವುದರಿಂದ ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ನಿಮ್ಮ ಆಸಕ್ತಿಯ ಕ್ಷೇತ್ರದ ಕಾರ್ಯಕ್ರಮಗಳನ್ನು ನೋಡುವುದು ಬಹಳ ಸುಲಭ. ಹಾಗಾಗಿ ದೇಶ, ಗಡಿಗಳ ನಿರ್ಬಂಧವಿಲ್ಲದೇ ಕಾರ್ಯಕ್ರಮಗಳನ್ನು ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯ
ಇವುಗಳೆಲ್ಲ ತಲೆಮಾರುಗಳ ನಡುವಣ ಕೊಂಡಿಯಾಗಿ ನಮ್ಮ ಭಾಷೆಯನ್ನು ಅಂತರ್ಜಾಲದ ಯುಗಕ್ಕೆ ಸಿದ್ದ ಮಾಡುತ್ತಿದೆ. ಈ ಹೊಸ ಸನ್ನಿವೇಶದಲ್ಲಿ ದೇಶದ ಗಡಿ ಭಾಷೆಯನ್ನು ನಿರ್ಬಂಧಿಸುವುದಿಲ್ಲ. ತಂತ್ರಜ್ಞಾನದ ಮೂಲಕ ಭಾಷೆಯ ಹೊಸ ಸಾಧ್ಯತೆಗಳನ್ನು ಅರಿತು ನಮ್ಮ ಭಾಷೆಯನ್ನು ವಿಶ್ವಭಾಷೆಯನ್ನಾಗಿಸುವುದು ಸುಲಭ.
ಇನ್ನೂ ಕನ್ನಡದಲ್ಲಿ ರಚನೆಯಾಗುವ ವಿಷಯಗಳ ಪ್ರಮಾಣ ಹೆಚ್ಚಬೇಕು. ಕನ್ನಡದಲ್ಲಿ ಗೂಗಲ್, ಯೂಟ್ಯೂಬ್, ವಿಕಿಪೀಡಿಯಾ, ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಗುಣಮಟ್ಟದ ವಿಷಯಗಳು ಹೆಚ್ಚಿದಂತೆ ನಮ್ಮ ಭಾಷೆ ವಿಶ್ವಮಟ್ಟಕ್ಕೆ ತಲುಪುತ್ತದೆ. ಇವೆಲ್ಲವೂ ಕನ್ನಡವನ್ನು ಜನಜೀವನದಲ್ಲಿ ಬಲವಾಗಿಸಿ ಹೊಸ ತಲೆಮಾರಿಗೆ ಕನ್ನಡ ಆಧುನಿಕತೆಯಿಂದ ಕೂಡಿದ ಭಾಷೆ ಎಂಬ ಭಾವವನ್ನು ಹುಟ್ಟಿಸುತ್ತಿವೆ.
*ಕನ್ನಡ ಕಲಿಕೆಯಲ್ಲಿ ತಂತ್ರಜ್ಞಾನ:-*
ಕನ್ನಡದಲ್ಲಿ ಬರೆಯುವಂತೆ, ಮಾತನಾಡುವಂತೆ, ಕಲಿಯುವಂತೆ ಮಾಡುವ ಕೆಲಸ ಮನೆ, ಶಾಲೆ ಮತ್ತು ಸಮುದಾಯದಿಂದಲೇ ಆರಂಭವಾಗಬೇಕು.
ಪರಭಾಷಾ ದಾಸ್ಯ ಭಾವನೆಯನ್ನು ಬಿಟ್ಟು ಭಾಷೆಗಳ ಬಗೆಗೆ ಮಕ್ಕಳಿಗೆ ಪ್ರೀತಿಯನ್ನು ಬೆಳೆಸುವುದು, ಸಾಧ್ಯವಾದಷ್ಟು ಭಾಷೆಯನ್ನು ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸುವುದು ನಿಜವಾಗಿ ತಂದೆತಾಯಿಗಳು ಮಾಡಬೇಕಾದ ಕೆಲಸ. ಮಾತೃಭಾಷೆಯನ್ನು ಶುದ್ಧವಾಗಿ ಮಾತನಾಡಲು ಬರುವುದು ಮಕ್ಕಳ ವ್ಯಕ್ತಿತ್ವಕ್ಕೆ ಉತ್ತಮ ಆತ್ಮವಿಶ್ವಾಸ ವನ್ನು ಕೊಡುತ್ತದೆ. ತಂತ್ರಜ್ಞಾನದ ಲಾಭವನ್ನು ಪಡೆದು ಕನ್ನಡ ಭಾಷಾ ಕಲಿಕೆಯಲ್ಲಿ ಇದನ್ನು ಬಳಸುವ ಕೆಲಸ ಆಗಲೇ ಆರಂಭವಾಗಿದೆ.
ವಿದೇಶದಲ್ಲಿ ವಾಸಿಸುವ ಅನೇಕ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ. ತಂತ್ರಜ್ಞಾನವನ್ನು ಕನ್ನಡ ಕಲಿಕೆಯಲ್ಲಿ ಬಳಸಲು ಮಾಡಿದ ಕೆಲಸಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ
• ಕನ್ನಡ ಶಾಲೆಗಳು, ಕನ್ನಡ ಸಾಹಿತ್ಯ ವೇದಿಕೆಗಳು, ಆನ್ಲೈನ್ ತರಗತಿಗಳು - ಎಲ್ಲ ಕನ್ನಡದಲ್ಲಿ ನಡೆಯುತ್ತಿವೆ.
• ಮಕ್ಕಳಿಗೆ ಕನ್ನಡ ಕಲಿಸಲು ಅನೇಕ ಆಪ್ ಗಳ ಬೆಳವಣಿಗೆಯಾಗಿದೆ.
• ಅಮೆರಿಕದಲ್ಲಿ ಆರಂಭಗೊಂಡ ಕನ್ನದ ಅಕಾಡೆಮಿ ಕನ್ನಡವನ್ನು ಮಕ್ಕಳಿಗೆ ಕಲಿಸಲು ಅಂತರ್ಜಾಲದಲ್ಲಿಯೇ ಬೇಕಾದ ಎಲ್ಲ ಪರಿಕರಗಳನ್ನು ತಯಾರಿಸಿ ಕನ್ನಡ ಕಲಿಕೆಯನ್ನು ಕಂಪ್ಯೂಟರೀಕರಿಸಿದೆ
ಮಕ್ಕಳು ಮೊಬೈಲ್ ಹಿಡಿದುಕೊಂಡಾಗ ಅವರನ್ನು ಕನ್ನಡದಲ್ಲಿ ಸಂವಹಿಸಲು ಪ್ರೋತ್ಸಾಹಿಸಬೇಕು. ಅವರಿಗೆ ಆಸಕ್ತಿ ಹುಟ್ಟಿಸುವಂತಹ ಚಟುವಟಿಕೆಯನ್ನು ನಮ್ಮ ಭಾಷೆಯಲ್ಲಿ ಮೊಬೈಲಿನಲ್ಲಿಯೇ ದಿನಕ್ಕೆ ಸ್ವಲ್ಪಹೊತ್ತು ಮಾಡಬಹುದು. ನಾವೆಲ್ಲ ಮಾತನಾಡುವುದು ಮಾತ್ರವಲ್ಲ ಸಾಧ್ಯವಾದಲ್ಲೆಲ್ಲ ಅಂದರೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸುವಾಗ, ಹಬ್ಬಗಳ ಶುಭಾಶಯಕೋರಿಕೊಳ್ಳುವಾಗ ಕನ್ನಡದಲ್ಲಿಯೇ ಖಡ್ಡಾಯವಾಗಿ ಬರೆದರೆ ನಮ್ಮ ಮಕ್ಕಳು ಅದನ್ನು ಓದಿಯೇ ಓದುತ್ತಾರೆ.
ಕೇವಲ ಭಾವನಾತ್ಮಕವಾಗಿ ಭಾಷೆಯನ್ನು ಪ್ರೀತಿಸುವುದರಿಂದ ಸಾಕಾಗದು; ಅದನ್ನು ಉಪಯೋಗಿಸುವ, ಪೋಷಿಸುವ, ತಂತ್ರಜ್ಞಾನದಲ್ಲಿ ಬೆಳೆಸುವ ಜವಾಬ್ದಾರಿಯೂ ನಮ್ಮದೆ ಎನ್ನುವುದನ್ನು ಎಲ್ಲರೂ ಅರಿತರೆ ಕನ್ನಡವು ಇನ್ನೂ ಉಜ್ವಲ ಭವಿಷ್ಯದ ಹೊಸ್ತಿಲಿನಲ್ಲಿದೆ ಎನ್ನುವುದು ಖಂಡಿತಾ.ಈಗ ನಡೆಯುತ್ತಿರುವ ಪ್ರಯತ್ನ ವನ್ನು ಸಮರ್ಥವಾಗಿ ಮುಂದುವರಿಸಿ ಪ್ರಪಂಚದಾದ್ಯಂತ ಬೆಳೆಯುವ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ ಇನ್ನೂ ಹೆಚ್ಚಿನ ಉತ್ಸಾಹದಿಂದ ನಡೆಯಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು ಎನ್ನುವ ಕಗ್ಗದ ಸಾಲುಗಳಂತೆ ತಂತ್ರಜ್ಞಾನ ವೆಂಬ ಹೊಸಚಿಗುರಿನೊಂದಿಗೆ ಸಮೃದ್ಧ ಕನ್ನಡ ಭಾಷೆಯೆಂಬ ಹಳೆ ಬೇರನ್ನು ಕೂಡಿಸಿ ಸೊಗಸಾದ ಮರವನ್ನು ಬೆಳೆಸಲು ಖಂಡಿತಾ ಸಾಧ್ಯ.
ಲೇಖನ: ಸುಧಾ ಶಶಿಕಾಂತ್, ಮಸ್ಕತ್
 |
| Published in Desiswara on 22-11-2025 |