ಭಾನುವಾರ, ನವೆಂಬರ್ 27, 2011

ಸೌದಿಯಲ್ಲಿ ನಾವು-೨ ನನ್ನ ಸಂಗೀತ ತರಗತಿಯ ಅನುಭವ


ಇಲ್ಲಿಗೆ ಬಂದು ಮಗಳಿಗೆ ನಮ್ಮ ಕಲೆ ಸಂಸ್ಕ್ರತಿಯ ಪರಿಚಯ ಮಾಡಿಸಬೇಕೆಂದು ನಿರ್ಧರಿಸಿ ಬಂದಿದ್ದ್ದೆ ನಾನು. ಇಲ್ಲಿ ಬಂದು ನೋಡಿದರೆ ಏನು ನೋಡುವುದು?! ಇಲ್ಲಿನ ಜನ ಜೀವನ ಧರ್ಮದ ಸುತ್ತಲೇ ಸುತ್ತುತ್ತಿದೆ. ಹೆಂಗಸರು ಸಂಪೂರ್ಣ ಕಪ್ಪು ವಸ್ತ್ರಗಳದಿಯಲ್ಲಿ ಕರಗಿ ಹೋಗಿದ್ದಾರೆ, ಅವರಿಗೆ ಹೊರಗಿನ ಗಾಳಿ ಕೂಡ ಸೋಕುವುದಿಲ್ಲ; ಮನೆಯ ಹೊರ ಚಾವಡಿಗೆ ಬರಬೇಕಾದರೆ  ತಲೆಯನ್ನೆಲ್ಲ ಮುಚ್ಚಿಕೊಂಡು ಬರಬೇಕು. ಇಲ್ಲಿ ಮನಸ್ಸಿಗೆ ಸಂತಸ ಕೊಡುವ ಸಂಗೀತ ನ್ರತ್ಯಗಳು ಕಾನೂನು ಬಾಹಿರ ಚಟುವಟಿಕೆಗಳು. ಅವನ್ನು ಬಹಿರಂಗವಾಗಿ ಇನ್ನೊಬ್ಬರ ಎದುರು ಪ್ರದರ್ಶಿಸುವುದು, ಹೇಳಿಕೊಡುವುದು ನಿಶಿದ್ದ.

ದೈರ್ಯ ಮಾಡಿ ನನ್ನೊಬ್ಬಳು ಗೆಳತಿಯೊಡನೆ ನಾನು ತಕ್ಕ ಮಟ್ಟಿಗೆ ಸಂಗೀತ ನ್ರತ್ಯಗಳನ್ನು ಕಲಿತಿರುವುದಾಗಿ ತಿಳಿಸಿದೆ. ನಮ್ಮ ಮಿತ್ರ ಸಮೂಹದಲ್ಲೆಲ್ಲ ವಿಚಾರ ತಿಳಿಸಿದಳು.ಸೌದಿ ಅರೇಬಿಯದಲ್ಲಿ ಉದ್ಯೋಗದ ಅನಿವಾರ್ಯತೆಯಿಂದ ವರ್ಷಾನುಗಟ್ಟಲೆ ಇರುವ ಭಾರತೀಯರು  ಸಾಂಸ್ಕ್ರತಿಕ ಹಸಿವೆಯಿಂದ ಬಳಲುತ್ತಿರುತ್ತಾರೆ. ನನ್ನ ವಿದ್ಯೆಯ ಬಗೆಗೆ ತಿಳಿದಿದ್ದೆ ತಡ ಮಕ್ಕಳಿಗೆ ಕಳಿಸಿಕೊಡುವಂತೆ ಭಾರತಿಯ ಸಮುದಾಯದಿಂದ ಕೋರಿಕೆಗಳು ಬರಲು ಆರಂಭವಾಯಿತು. ಒಬ್ಬಳು ತನ್ನ ಮಗಳನ್ನು ಕರೆದುಕೊಂಡು ಬಂದು ಅವತ್ತು ಒಳ್ಳೆಯ ದಿನ ತರಗತಿ ಆರಂಭಿಸು ಎಂದು ಹಠ ಹಿಡಿದಳು. ನನ್ನ ಸಂಗೀತ ತರಗತಿ ಇಬ್ಬರು ವಿದ್ಯಾರ್ಥಿಗಳೊಡನೆ ಆರಂಭವಾಯಿತು.

ತರಗತಿಯನ್ನು ಆರಂಭಿಸಿದ್ದೇನೋ ಆಗಿತ್ತು. ಆದರೆ ಭಯ ನನ್ನನ್ನು ಕಾಡುತ್ತಿತ್ತು. ಕೆಲವು ಸ್ನೇಹಿತೆಯರು ಇಲ್ಲಿ ಮೊದಲು ಇಂತಹ ತರಗತಿಗಳನ್ನು ಆರಂಭಿಸಿ, ಉಟ್ಟ ಬಟ್ಟೆಯಲ್ಲಿ ಭಾರತಕ್ಕೆ ಹೋಗಬೇಕಾದ ಪರಿಸ್ತಿತಿಯನ್ನು ತಂದುಕೊಂಡವರ  ಕಥೆಯನ್ನು ಹೇಳಿದಳು. ನನಗಂತೂ ಜೀವವೇ ಕೈಗೆ ಬಂದಂತಾಯಿತು. ಸುಮ್ಮನೆ ನಗೆಕೆ ಈ ಉಸಾಬರಿ ಎಂದು ತರಗತಿಯನ್ನು ನಿಲ್ಲಿಸುವ ಯೋಚನೆ ಮಾಡಿದೆ.ಆದರೆ ನನ್ನ ಸ್ನೇಹಿತೆಯರು ಒಪ್ಪಲಿಲ್ಲ, ಶಶಿ ಬಹಳ ದೈರ್ಯ ಹೇಳಿದ. ಹುಚ್ಚು ದೈರ್ಯ ದಿಂದ ನನ್ನ ತರಗತಿ ಮುಂದು ವರಿಯಿತು. ಬಹಳ ಶಬ್ದ ಮಾಡುತ್ತಿದ್ದ ನಮ್ಮ AC ಯನ್ನು ಜೋರಾಗಿ ಹಾಕಿಕೊಂಡು ( ಶಬ್ದ ಹೊರಗೆ ಕೇಳದಿರಲೆಂದು) ತರಗತಿ ನಡೆಯುತ್ತಿತ್ತು.

           ಇರದಿದ್ದ  ಶಿಷ್ಯವ್ರಿಂದ ಬಹಳ ಬೇಗ ೧೩ ಕ್ಕೇರಿತು. ವಾರಕ್ಕೆ ಎರಡೇ ದಿನಗಳಿದ್ದ ತರಗತಿಗಳನ್ನು ನಾಲ್ಕು ದಿನಗಳು ತೆಗೆದುಕೊಲ್ಲತೊಡಗಿದೆ. ಮಕ್ಕಳು ಸರಳೆ ವರಸೆ, ಜಂಟಿ ವರಸೆ, ಅಲಂಕಾರಗಳನ್ನು ಮುಗಿಸಿ ಗೀತೆಯ ತನಕ ಬಂದರು. ಪುಟ್ಟ ಪ್ರಿತಿಗಂತೂ ಸಂಗೀತ ತರಗತಿಯ ದಿನಗಳೆಂದರೆ ಸಂಬ್ರಮ. ಅವಳು ಶ್ರುತಿಬದ್ದವಾಗಿ ಹಾಡಲು ಕಲಿತಳು. ಕೇರಳ, ಬಂಗಾಳ, ಮುಂಬೈ , ಗೋವಾ , ಕರ್ನಾಟಕ ಹೀಗೆ ವಿವಿಧ ಪ್ರಾಂತ್ಯಗಳ   ಪುಟ್ಟ ಮಕ್ಕಳು ಒಟ್ಟಾಗಿ ಭಾರತದ  ವಿವಿದತೆಯಲ್ಲಿ  ಏಕತೆಯ ಸ ರೀ ಗ ಮ ವನ್ನು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹಾಡುವಾಗ ಮನಸ್ಸಿಗೆ ಬಹಳ ಸಂತಸವಾಗುತ್ತಿತ್ತು. ಭಯ ನನ್ನ ಮನಸ್ಸಿನಿಂದ ಮಾಯವಾಗುತ್ತಿತ್ತು. ಹೀಗೆ ನನ್ನ ತರಗತಿಗಳು ನಾವು ಸೌದಿ ಯನ್ನು ಬಿಡುವ ತನಕ ನಡೆಯಿತು. ಯಾರೂ ನಮ್ಮ ತಂಟೆಗೆ ಬರಲಿಲ್ಲ, ನಮ್ಮ ಕೆಳಗಿನ ಮನೆಯ ಪಾಕಿಸ್ತಾನಿ ಕುಟುಂಬವೂ ನಮ್ಮ ವಿರುಧ್ಧ ಏನನ್ನೂ ಹೇಳಲಿಲ್ಲ!!

 

ಬುಧವಾರ, ಅಕ್ಟೋಬರ್ 12, 2011

ಸೌದಿಯಲ್ಲಿ ನಾವು - 1-ಸೌದಿಯಲ್ಲಿನ ವಿದೇಶಿಯರ ಜೀವನಕ್ಕೊಂದು ಮುನ್ನುಡಿ

ನನ್ನ ಜೀವನದ ಅನುಭವಗಳನ್ನು ದಾಕಲಿಸುವುದು ನನ್ನ ಬ್ಲಾಗಿನ ಮುಖ್ಯ ಉದ್ದೇಶ. ಅಂತೆಯೇ, ನನ್ನ ವಿವಿದ ದೇಶದ ಅನುಭವಗಳನ್ನು ದಾಕಲಿಸುತ್ತ ಬರುತ್ತಿರುವ ನಾನು ಈಗ ಸೌದಿ ಅರೇಬಿಯಾದ ನನ್ನ ಒಂದು ವರ್ಷದ ಅನುಭವಗಳನ್ನು ಬರೆಯಲು ಹೊರಟಿದ್ದೇನೆ.  ಜೀವನದ ಬಗೆಗೆ ಸರಿಯಾದ ದ್ರಷ್ಟಿಕೋನ ಬೆಳೆಸಿಕೊಳ್ಳಲು ಪ್ರಪಂಚದ ಎಲ್ಲರೂ ಈ ದೇಶಕ್ಕೆ ಭೇಟಿ ಕೊಡಬೇಕು, ಅಷ್ಟು ಆಸಕ್ತಿದಾಯಕ, ವಿಶಿಷ್ಟ ಈ ಜಾಗ!! ಇತ್ತಿಚೀನ ಪತ್ರಿಕೆಗಳು ಅರಬ್ ಜನರ ಪ್ರತಿಭಟನೆಗಳ  ಸುದ್ದಿಯಲ್ಲಿ ತುಂಬಿ ಹೋಗಿರುತ್ತದೆ. ಅದರ ನಡುವೆ ಸೌದಿ ಮಹಿಳೆಯರೂ  ತಮ್ಮ ಹಕ್ಕಿಗಾಗಿ ಹೋರಾಡುತ್ತ್ತಿರುವ ಸುದ್ದಿಗಳನ್ನು ಓದಿ ನನ್ನ ಸೌದಿಯ  ಅನುಭವಗಳ ನೆನಪು ನನ್ನನು ಬಹಳವಾಗಿ ಕಾಡಲು ತೊಡಗಿವೆ. ಅವನ್ನು ಬರಹ ರೂಪಕ್ಕಿಲಿಸಲು ಇದೆ ಸಕಾಲವೆಂದು ಸುರು ಮಾಡಿದ್ದೇನೆ.

                    ವಕೀಲೆಯಾಗಿ ಗುರುತಿಸಿಕೊಳ್ಳಬೇಕು ಎಂಬ ಬಯಕೆಯಿಂದ ಕಾನೂನು ಪದವಿ ಪಡೆದು, ಅದರಲ್ಲಿ ಉನ್ನತ ವ್ಯಾಸಂಗ ಮಾಡಿ, ಕೊನೆಗೆ ಬಂದಿಳಿದಿದ್ದು ಸೌದಿ ಅರೇಬಿಯಾದ ಪಶ್ಚಿಮದ ಕೆಂಪು ಸಮುದ್ರದ ತೀರದಲ್ಲಿರುವ ಯಾನ್ ಬೂ ಎಂಬ ಚಿಕ್ಕ ಪಟ್ಟಣದಲ್ಲಿ.ಮೊದಲ ಬಾರಿಗೆ ವಿದೇಶಕ್ಕೆ ಹೊರಟಿದ್ದು, ಅದೂ ಸೌದಿ ಅರೇಬಿಯಾಕ್ಕೆ!! ಯಾವುದೇ ನಿರಿಕ್ಷೆಗಳಿಲ್ಲದೆಯೇ, ಆರು ತಿಂಗಳ ಹಿಂದೆಯೇ ಇಲ್ಲಿಗೆ ಬಂದಿದ್ದ ಪತಿಯನ್ನು ಸೇರಿಕೊಳ್ಳುವ ಉದ್ದೇಶದಿಂದ ಮಗಳೊಂದಿಗೆ ಬಂದಿಳಿದೆ.ಇಳಿದೊಡನೆ ಶಶಿ ಹಾಕಿಕೊಳ್ಳಲು ಬುರ್ಖಾ ಕೊಟ್ಟಾಗಲೂ ನನಗೆ ನಾನು ಬಂದಿಳಿದ ದೇಶದ ಕಟ್ಟುಪಾಡುಗಳು ಇಷ್ಟು  ಶಿಸ್ತಿನಿಂದ ಪಾಲಿಸ ಬೇಕಾದ ನಿಯಮಗಳೆಂಬ ಅರಿವಾಗಲಿ ಗೊತ್ತಾಗಲಿಲ್ಲ. ಬುರ್ಖಾ ದರಿಸದೆ ಹಾಗೆಯೇ ಕಾರಿನಲ್ಲಿ ಕುಳಿತು ಜೆದ್ದದಿಂದ ಯಾನ್ ಬೂಗೆ ಬಂದಿಳಿದೆವು.ನಮಗೆಂದು ಶಶಿಯ ಕಂಪನಿಯವರು ನೀಡಿದ್ದ ಮನೆಯೇನೂ ಸುಂದರವಾಗಿತ್ತು. ಆದರೆ ಇಲ್ಲಿನ ಬುರ್ಖಾ ಹಾಕಿಕೊಳ್ಳಬೇಕಾದ ಅನಿವಾರ್ಯತೆ ನನ್ನನ್ನು ಗಾಬರಿಗೊಳಿಸಿತ್ತು. ಬುರ್ಖಾ ಹಾಕಿಕೊಳ್ಳಲು ಏನಂತೆ! ಹಾಕಿಕೊಂಡರಾಯಿತು, ಎಂದುಕೊಂಡು ಇಲ್ಲಿಗೆ; ಲಘುವಾಗಿ ಇಲ್ಲಿಗೆ ಬಂದ ನನಗೆ ಈಗ ಪರಿಸ್ತಿತಿಯ ಗಂಭೀರತೆ ಅರ್ಥವಾಯಿತು. ಆದರೆ ಇಲ್ಲಿ ಬಹಳ ಭಾರತಿಯರಿರುವುದು, ಅದರಲ್ಲಿ ಹಿಂದುಗಳಲ್ಲೆಲರೂ ಬುರ್ಖಾ ಹಾಕುವುದು ನೋಡಿ ನಿದಾನವಾಗಿ ಅದಕ್ಕೆ ಹೊಂದಿಕೊಳ್ಳತೊಡಗಿದೆ.

          ಕಿಂಗ್ದೊಂ ಆಫ್ ಸೌದಿ  ಅರೇಬಿಯ '- ಇಪ್ಪತ್ತನೆಯ ಶತಮಾನದ ಒಂದು ಅತ್ಯಾದುನಿಕ ರಾಜ್ಯ.ಇಲ್ಲಿನ  ಆಡಳಿತವನ್ನು ಪಿತ್ರಪ್ರಧಾನ ರಾಜ ವಂಶದವರು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ರಾಜನು ಮುಸ್ಲಿಮರ  ಎರಡು ಪವಿತ್ರ ಮಸಿದಿಗಳಾದ ಮಕ್ಕ ಮತ್ತು ಮದಿನಾದ ರಕ್ಷಕ. ಇಲ್ಲಿನ ಕಾನೂನು ಇಸ್ಲಾಮಿಕ್ ಕಾನೂನು. ಇವರು ಇಸ್ಲಾಮನ್ನು ಅನುಸರಿಸುವ ರೀತಿಯೇ ವಿಶಿಷ್ಟ. ಇಲ್ಲಿ ಮಹಿಳೆಯರಿಗೆ ಬಹಳ ಕಟ್ಟುಪಾಡುಗಳು-ಹೆಂಗಸರು ಹೊರಕ್ಕೆ ಹೋಗಬೇಕಾದರೆ ಬುರ್ಖಾ ದರಿಸಬೇಕು; ಹೆಂಗಸರು ಹೊರಾಗೆ ಕೆಲಸ ಮಾಡುವಂತಿಲ್ಲ; ಹೆಂಗಸರು ಒಬ್ಬರೇ ಹೊರಗಡೆ ಎಲ್ಲಿಗೂ ಹೋಗಬಾರದು; ಅಂದರೆ ತಮ್ಮ ಗಂಡ ಅಥವಾ ಮಗನೊಂದಿಗೆ  ಮಾತ್ರ ಹೊರಗೆ ಹೋಗಬಹುದು,....... ಹೀಗೆ . ಅವುಗಳನ್ನು ಕಾರ್ಯರೂಪಕ್ಕೆ ತರಲು 'ಮುತ್ತಾವ' ನೆಂಬ ಆರಕ್ಷಕ. ಈತ ಯಾರಾದರೂ ಬುರ್ಖಾ ದರಿಸದೆ, ಅಥವಾ ತಲೆಯ ಕೊದಲನ್ನು  ಮುಚ್ಚದೆ ಹೋಗುತ್ತಿದ್ದರೆ ತಡೆದು ನಿಲ್ಲಿಸಿ  ತಲೆಯ ಮೇಲೆ ಬಟ್ಟೆ ಹಾಕಿ ಮುಚ್ಚಿಕೊಳ್ಳಲು ಹೇಳುತ್ತಾನೆ.

              ಇಲ್ಲಿನ ಕಾನೂನಿನ ಪ್ರಕಾರ ಇಲ್ಲಿ ಚಿತ್ರ ಮಂದಿರಗಳಾಗಲಿ, ಮನರಂಜನೆಯ ಇತರ  ತಾಣಗಳಾಗಲಿ  ಇಲ್ಲ. ಏನೇ ಮಾಡಬೇಕಾದರೂ ಅದಕ್ಕೆ ಒಂದು ನಿಯಮವಿರುತ್ತದೆ. ಅದಕ್ಕೆ ಸರಿಯಾಗಿಯೇ ಮಾಡಬೇಕು. ಮುಸಲ್ಮಾನರ ದಿನದ ಐದು ಬಾರಿಯ ನಮಾಜಿಗೆ ಇಲ್ಲಿ ಸಲಾ ಎನ್ನುತ್ತಾರೆ. ಈ ಪ್ರಾರ್ಥನೆಯ ಸಮಯದ ಸುತ್ತಲೇ ಇವರ ದಿನಚರಿ ಸುತ್ತುತ್ತದೆ, ಇಡಿ ದೇಶವೇ ಆ ಸಮಯದ ಆಧಾರದ ಮೇಲೆ ನಡೆಯುತ್ತದೆ ಎನ್ನಬಹುದು. ಪ್ರತಿ ಪ್ರಾರ್ತನೆಯ ಕರೆ ಮಸೀದಿಯ ದ್ವನಿವರ್ಧಕದಲ್ಲಿ ಕೇಳಿದೊಡನೆ ಎಲ್ಲ ಅಂಗಡಿ ಮುಂಗಟ್ಟುಗಳು ವ್ಯವಹಾರ ನಿಲ್ಲಿಸಿ ಬಾಗಿಲು ಮುಚ್ಚುತ್ತಾರೆ. ಒಳಗಿದ್ದ ಗ್ರಾಹಕರು ಹೊರಗೆ ಹೋಗಬೇಕು!! ಅಲ್ಲದೆ ಮುತ್ತವಗಳು ಎಲ್ಲಾ  ಮುಸಲ್ಮಾನರೂ ಪ್ರಾರ್ಥನೆಗೆ  ಹೋಗಿದ್ದಾರ ಎಂದು ಮೇಲ್ವಿಚಾರಣೆ ನಡೆಸುತ್ತಿರುತ್ತಾರೆ. ಹೊರಗಿದ್ದ ಜನರ ಧರ್ಮ ಕೇಳಿ, ಅವರು ಮುಸಲ್ಮಾನರಾದರೆ ಪ್ರಾರ್ಥನೆಗೆ ಹೋಗುವಂತೆ ಕಳಿಸುತ್ತಾರೆ.
ಬೇರೆ ಧರ್ಮೀಯರು ಪ್ರಾರ್ಥನೆ ಮುಗಿದು ಬಾಗಿಲು ತೆಗೆಯುವ ತನಕ ಹೊರಗೆ ಕಾಯಬೇಕಾಗುತ್ತದೆ. ಅಲ್ಲದೆ ಇಲ್ಲಿ ಇಸ್ಲಾಂ ಅಲ್ಲದೆ ಬೇರೆ ಧರ್ಮಗಳ ಆಚರಣೆ ಸಾರ್ವಜನಿಕವಾಗಿ ಮಾಡುವಂತಿಲ್ಲ. ಆದ್ದರಿಂದ ಕ್ರ್ಯಸ್ತರ ಚರ್ಚುಗಲಾಗಲಿ, ಹಿಂದೂಗಳ ದೇವಾಲಯಗಲಾಗಲಿ ಇಲ್ಲ. ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳಗಳಾದ ಮಕ್ಕ ಮತ್ತು ಮದಿನಾಗಳಿಗೆ ಮುಸ್ಲ್ಮಾನರಲ್ಲದವರಿಗೆ ಪ್ರವೇಶವಿಲ್ಲ.ಈ ದೇಶ ಪ್ರವಾಸವನ್ನು ಪ್ರೋತ್ಸಾಹಿಸುವುದಿಲ್ಲ. ಆದ್ದರಿಂದ ಇಲ್ಲಿ  ಪ್ರವಾಸಿಗರಾಗಿ ಹೋಗುವಂತಿಲ್ಲ, ನಾವು ಅಲ್ಲಿ ಇದ್ದೇವೆಂದು ನಮ ತಂದೆ ತಾಯಿಯರನ್ನಗಲಿ, ಇನ್ನಾವುದೇ ಸಂದಿಕರನ್ನಗಲಿ ಅಲ್ಲಿಗೆ ಬರಹೇಳುವಂತಿಲ್ಲ!

          ಇಷ್ಟೆಲ್ಲಾ ಕಟ್ಟು ಕಟ್ಟಳೆಗಳ ನಡುವೆಯೂ ಇಲ್ಲಿ ಲಕ್ಷಾಂತರ ಮಂದಿ ವಿದೇಶಿಯರು,ಪೂರ್ವ ಪಶ್ಚಿಮಗಳ ಬೇದವಿಲ್ಲದೆ  ಉದ್ಯೋಗ ಅರಸಿಕೊಂಡು ಬಂದಿದ್ದಾರೆ, ಬರುತ್ತಿದ್ದಾರೆ; ಆ ನಿಯಮಾವಳಿಗಳ ನಡುವೆಯೂ ಸಂತೋಷದಿಂದ ಜೀವನ ಕಳೆಯುವ ವಿಧಾನವನ್ನು ತಿಳಿದುಕೊಂಡಿದ್ದಾರೆ.

       

             
         













































































































































































































































































































































































































































































































































































































































































































































































































































































ಗುರುವಾರ, ಜುಲೈ 28, 2011

ನಮ್ಮೂರಿನ ಮಳೆಗಾಲ

ನಮ್ಮೂರಿಗೆ ಮಗಳ ರಜೆಯೆಂದು ಬಂದೆ. ನಾನು ಇಪ್ಪತ್ತ ಮೂರು ವರ್ಷಗಳನ್ನು ಕಳೆದ ನಮ್ಮ ಊರು ನನಗೆ ಯಾವಾಗಲೂ ಆಪ್ಯಾಯಮಾನ. ಮೊದಲು ಪುಣೆಯಿಂದ ಬಸ್ಸಿನಲ್ಲಿ ಬರುವಾಗಲೂ ತೆಂಗಿನಮರಗಳ  ಸಾಲು , ಕೆಂಪು ಮಣ್ಣಿನ ನೆಲ ಬಂದೊಡನೆ ಮನಸ್ಸಿಗೆ ಏನೋ ಸಂತಸ. ಅವಲ್ಲ ನನ್ನವು ಎಂಬ ಭಾವನೆ.ನಾನು ಬೆಳೆದ ಮನೆ,ರಸ್ತೆಗಳು, ನಾನು ಹೋದ ಶಾಲೆ, ನಾನು ಚಿಕ್ಕವಳಿದ್ದಾಗ ಸಾಮಾನು ತರಲು ಹೋದ ಅಂಗಡಿಗಳು- ಪ್ರತಿಯೊಂದು ಕೊಡುವ, ತರುವ ನೆನಪು ಸಾವಿರಾರು.ಆದ್ದರಿಂದಲೇ ಇರಬೇಕು ರಾಮ ಸುವರ್ಣಮಯ ಲಂಕೆಯನ್ನು ಬಿಟ್ಟು ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಷಿ ಎಂದು ತಾಯ್ನಾಡಿಗೆ ಮರಳಿದ್ದು. ಈಗಂತೂ ನಾನಿರುವ ಮರುಭೂಮಿಯ ನಾಡಿಗೂ ನಮ್ಮೂರಿಗೂ ಹೊಲಿಕೆಯೀ ಅಸಾದ್ಯ. ನಮ್ಮೂರಿನಲ್ಲಿ ಹಸಿರಿದೆ, ಎಲ್ಲೆಂದರಲ್ಲಿ ಗಿಡಗಳು ಬೆಳೆಯುತ್ತವೆ,ನಮ್ಮೊರಿನ ಮಳೆಯಂತೂ ಅದರ ಸವಿಯನ್ನು ಸವಿಯಲು ಇಲ್ಲಿಗೆ ಬರಬೇಕು.
ಎಲ್ಲಿ ಭೂರಮೆ ದೇವಸಂನಿಧಿ ಬಯಸಿ ಭಿಮ್ಮನೆ ಬಂದಳೋ 

ಈಗ ಮಳೆಯೇ ಬರದ ನಾಡಿನಲ್ಲಿರುವ ನನಗೆ  ವರ್ಷಕ್ಕೆ ಒಮ್ಮೆ ಮಾತ್ರ ಕೆಲವು ದಿನ ಈ ಮಳೆಯ ಸವಿ ಸಿಗುತ್ತದೆ.ಕಳೆದ ವರ್ಷ ಬರಲಾಗಲಿಲ್ಲ ಆದ್ದರಿಂದ ಎರಡು ವರ್ಷದ ಬಳಿಕ ದೊರೆತಿರುವ ನಮ್ಮೊರಿನ ಮಳೆಯ ಬಗೆಗೆ ಅದು ನನಗೆ ತಂದು ಕೊಡು ನೆನಪುಗಳ ಬಗೆಗೆ ಬರೆಯುತ್ತೇನೆ. ಮಳೆಯನ್ನೂ ನೋಡುವ ಕಾತರದಿಂದ ಬಂದ ನನಗೆ ಬಿಸಿಲು, ಸೆಕೆ  ಸ್ವಾಗತಿಸಿತು. ನಾಳೆ ಬರಬಹುದು ಎಂದು ಕಾದೆ. ಎಂಟು ದಿನ ಕಾಯಿಸಿದ ಮಳೆರಾಯ ಕೊನೆಗೂ ಸುರಿಯಲಾರಂಬಿಸಿದ.ಎಷ್ಟು ಸುರಿದನೆಂದರೆ ನಾಲ್ಕು ದಿನ ನಾವು ಸೂರ್ಯನನ್ನು ನೋಡಲೇ ಇಲ್ಲ!!  ನೀರು ತುಂಬಿದ ರಸ್ತೆಗಳು, ಕೊಡೆ ಹಿಡಿದು ಹೋಗುವ ಮಕ್ಕಳು, ನಾನೂ ಕಾಲೇಜಿಗೆ ಹೋಗುವ ಆಸೆಯಾಯಿತು.ಮಳೆಯ ರಜೆಗಾಗಿ ನಾವು ಹಂಬಲಿಸುತ್ತಿದ್ದ ದಿನಗಳು ನೆನಪಾಯಿತು. ಶಾಲೆ ಕಾಲೇಜುಗಳನ್ನು ಮುಗಿಸಿ ಮಳೆಯಲ್ಲಿ ನಡೆದು ಬರುವ ಆ ಸಂತೋಷ ಅನುಭವಿಸಿದವರಿಗೆ ಗೊತ್ತು.


ಜೋರಾಗಿ ಮಳೆ ಸುರಿಯ ತೊಡಗಿತೆಂದರೆ ಮಕ್ಕಳಿಗೆ ಶಾಲೆಗೇ ರಜೆ ಕೊಡುವರೇನೋ  ಎಂಬ ಆಸೆ. ಮಳೆ ಗಾಳಿಗೆ ದಿನಗಟ್ಟಲೆ ಕರೆಂಟು ಇಲ್ಲದಿರುವುದು ನಮ್ಮೊರಿನ ಮಳೆಗಾಲದಲ್ಲಿ ಸಾಮಾನ್ಯ.ನಾನು ಕಾನೂನು ಪದವಿ ಪಡೆದ ಉದುಪಿಯಂತೂ ಮಳೆಯ ನೆರೆಗೆ ಪ್ರಸಿಧ್ಧ. ಊರಿನ ನಡುವೆ ಇರುವ ಕಲ್ಸಂಕದ ಕಟ್ಟೆ ತುಂಬಿ  ನೆರೆ ಬರುತಿತ್ತು. ಮಣಿಪಾಲ ಮತ್ತು ಉಡುಪಿಯ ನಡುವಿನ ಸಂಪರ್ಕ ಕಡಿದು ಹೋಗಿ ಅಲ್ಲಿಂದ ದಿನ ಪಯಣಿಸುವ ವಿದ್ಯಾರ್ಥಿಗಳಾದ ನಾವು ನೆರೆಯಲ್ಲಿ ನಡೆದು ಬಸ್ಸು ತಂಗುದಾಣ ತಲುಪಿ ಊರನ್ನು ಸೇರಬೇಕಿತ್ತು.  ಆದರೂ ವಿದ್ಯಾರ್ಥಿ ಜೀವನದ ಈ ಸವಿ ಇನ್ನು ಮರಳಿ ಬಾರದು. ಶಾಲೆಯಿಂದ ನಡೆದು ಬರುವಾಗ ರಸ್ತೆಯ ತುಂಬಾ ಕಾಣುವ ಬಣ್ಣಬಣ್ಣದ ಕೊಡೆಗಳು, ರೈನುಕೊಟುಗಳು ಕಲ್ಪನೆಗೆ ಒಳ್ಳೆಯ ಸ್ಪೂರ್ತಿಯನ್ನು ನೀಡುತ್ತವೆ.ಹಿತ್ತಲಿನಲ್ಲಿ  ನೀರು  ಸರಿಯಾಗಿ ಹರಿಯಲು ವ್ಯವಸ್ತೆ ಮಾಡುವ ಕೆಲಸ. ಅಮ್ಮನಿಗೂ ದೊಡ್ದಮ್ಮನಿಗೂ ನೀರು ಹಾಯಿಸುವ ಕೆಲಸದಿಂದ ಬಿಡುಗಡೆ.
   
       ಮೇಲಿನದು ನನ್ನ ಮಳೆಗಾಲವಾದರೆ ನನ್ನಜಿಯ ಮಳೆಗಾಲದ ಚಿತ್ರಣವೇ ಬೇರೆ. ನನಗಿಂತಲೂ ಸುಮಾರು ನಲವತ್ತು ವರ್ಷಗಳಷ್ಟು ಮೊದಲು ಬಾಲ್ಯವನ್ನು ಅನುಭವಿಸಿದ ಅವರ ಕಾಲದಲ್ಲಿ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಶಾಲೆಗೇ ಹೋಗುವ ಅವಕಾಶ ಸಿಗುತ್ತಿದುದು ಅಪರೂಪ. ಮಕ್ಕಳೆಂದರೆ ಮನೆಯ ಕೆಲಸಗಳಲ್ಲಿ ಪಾಲ್ಗೊಳ್ಳುವ ಎರಡು ಹೆಚ್ಚಿನ ಕೈಗಳು. ಆದ್ದರಿಂದ ಅವರಿಗೆಲ್ಲ ಮಳೆಗಾಲ ವೆಂದರೆ ಕೈತುಂಬಾ ಕೆಲಸದ ಕಾಲ. ಬೆಳಿಗ್ಗೆ ಎದ್ದು ಚುಮು ಚುಮು ಮಳೆಯಲ್ಲಿ ಗದ್ದೆಗೆ ಕೆಲಸಕ್ಕೆ ಹೋಗುತ್ತಿದ್ದ ಅವರು ಅದನ್ನೆಲ್ಲ ಸಂತೋಷದಿಂದಲೇ ನಮಗೆ ವಿವರಿಸುತ್ತಿದ್ದರು. ಮಳೆ ಬರುವ ಮೊದಲು ಮಾಡುವ ತಯ್ಯಾರಿ, ಮಳೆ ಬಂದ ನಂತರ ಬಿತ್ತುವುದು, ನೆಡುವುದು, ಕಳೆ ಕೀಳುವುದು ಎಲ್ಲದರಲ್ಲೂ ಮಕ್ಕಳಾದ ಇವರ ಪಾತ್ರ ಮಹತ್ತರದ್ದಾಗಿರುತ್ತಿತ್ತಂತೆ !! ನಟ್ಟಿಮಾಡಿದ  ನಂತರ ಇರುತ್ತಿದ್ದ ಬಿಡುವಿನ ಸಮಯದಲ್ಲಿ ಅವರು ಮೆಲ್ಲುತ್ತಿದ್ದ ಹಪ್ಪಳ ಸಂಡಿಗೆಯ ಸಂಬ್ರಮವನ್ನು ಅವರ ಬಾಯಿಯಲ್ಲಿಯೇ ಕೇಳಬೇಕು.

       ಈಗ ಮರುಭೂಮಿಯ ನಾಡಿನಲ್ಲಿ ಬೆಳೆಯುತ್ತಿರುವ ನನ್ನ ಮಗಳಿಗಂತೂ ಮಳೆಗಾಲವೆಂದರೆ ಕುಂದಾಪುರಕ್ಕೆ ಹೋದಾಗ ಸಿಗುವ ಮೋಜಿನ ಸಮಯ. ಮೋಜಿಗೆಂದು ಮಳೆಯಲ್ಲಿ ನೆನೆಯುವುದು, ಕಾಗದದ ದೋಣಿಗಳನ್ನು ಮಾಡಿ ನೀರಿನಲ್ಲಿ ಬಿಡುವುದು....ಇವಲ್ಲದೆ ಮಳೆಗಾಲದ ಇನ್ನಾವ ಚಿತ್ರಣವೂ ಅವಳಿಗೆ ಬರಲಾರದು!! ತಲೆಮಾರಿನಿದ ತಲೆಮಾರು ಬದಲಾದರೂ ಮಳೆರಾಯ ಮಾತ್ರ ಯಾರ ಪರಿವೆಯೂ ಇಲ್ಲದೆ ಪ್ರತಿ ವರ್ಷವೂ ಬರುತ್ತಾನೆ, ಹೊಸ ಅನುಭವಗಳೊಂದಿಗೆ, ಹೊಸರಿತಿಯ ಜನರಿಗಾಗಿ.

       


                     












           

ಗುರುವಾರ, ಜೂನ್ 16, 2011

ಅಬುಧಾಬಿಯಲ್ಲಿ ಒಂದು ವರ್ಷ


                 ಅರಬ್ ಸಂಯುಕ್ತ ಸಂಸ್ತಾನದ(ಯುಎಇ)  ರಾಜಧಾನಿ  ಅಬುಧಾಬಿಯಲ್ಲಿ ಒಂದು ವರ್ಷ ಕಳೆದು ಮರಳಿ ಮಸ್ಕತ್ತಿಗೆ ಹೊರಟಿರುವ ಈ ಸಂದರ್ಭದಲ್ಲಿ ಅಬುಧಾಬಿಯ ನನ್ನ ಅನುಭವಗಳನ್ನು ದಾಕಲಿಸೋಣ ಎನಿಸಿತು. ಕಳೆದ ವರ್ಷ ನನ್ನ ಪತಿ ಶಶಿಯನ್ನು ಒಂದು ಕೆಲಸದ ಮೇರೆ ಅವನ ಕಂಪೆನಿಯವರು ಇಲ್ಲಿಗೆ ಕಳುಹಿಸಿದಾಗ ನಾನೂ, ಮಗಳು ಪ್ರೀತಿಯೂ ಹೊರಟೆವು. ಆವಾಗ ತಿಳಿಯಿತು ಇಲ್ಲಿನ ಭಾರತಿಯ ಶಾಲೆಗಳಲ್ಲಿ ಪ್ರವೇಶ ಸಿಗುವುದು ಒಂದು ಯಜ್ಞವೆಂದು.  ಮಸ್ಕತ್ತಿನ ಕನ್ನಡ ಸಂಘದ ಅಧ್ಯಕ್ಷರ ಸಹಾಯದಿಂದ ಪ್ರವೇಶ ಪಡೆದು, ನಾವೆಲ್ಲರೂ ಇಲ್ಲಿಗೆ ಬಂದೆವು. ಕೇವಲ ನಲವತ್ತು ವರ್ಷಗಳ ಹಿಂದೆ ಮರುಭೂಮಿಯಾಗಿದ್ದ  ಈ ದೇಶ  ಇಷ್ಟು ಸ್ವಲ್ಪ ಸಮಯದಲ್ಲಿ  ಸಾಧಿಸಿದ ಪ್ರಗತಿಯನ್ನು ಇಲ್ಲಿ ಇದ್ದೆ ಅನುಭವಿಸಿ ನೋಡಬೇಕು.


ಕಾಂಕ್ರಿಟ್ ಕಾಡಿನ ಮದ್ಯ 
ಅಬುಧಾಬಿ ಒಂದು ಗಗನ ಚುಂಬಿ ಕಟ್ಟಡಗಳ ಕಾಂಕ್ರಿಟ್ ಕಾಡು.ಇಲ್ಲಿ ಬಂದು ವಾಸಿಸಲು ಶುರುಮಾಡಿದಾಗಲೇ ತಿಳಿದಿದ್ದು ಇಲ್ಲಿನ ಕಷ್ಟಗಳು. ಇಲ್ಲಿ ವಾಹನ ನಿಲುಗಡೆಗೆ ಜಾಗವೇ ಇಲ್ಲ . ಒಂದರ ಪಕ್ಕ ಒಂದು ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತ ಬಂದಿರುವ  ಈ ನಗರದಲ್ಲಿ ವಾಹನ ನಿಲುಗಡೆಗಾಗಿ ಹೋರಾಡಬೇಕು. ಕಿಟಕಿಯಿಂದ ಹೊರಗೆ ನೋಡಿದರೆ ಕಾಣುವುದು ಕಾರುಗಳ ಹೊಳೆ. ರಸ್ತೆಗಳ ಇಕ್ಕೆಲಗಳಲ್ಲಿ ಅಲ್ಲದೆ  ನಡುವೆಯೂ ಒಂದು ಸಾಲು ಕಾರುಗು ನಿಲುಗಡೆಯಾಗಿರುತ್ತವೆ. ಮಾನವ ನಾಗರಿಕತೆಯ ಕೊಡುಗೆಯಾದ ನಗರವನ್ನು  ಸರಿಯಾಗಿ ಯೋಜಿಸದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಅಬುಧಾಬಿಯ ಪಾರ್ಕಿಂಗ್ ಪರದಾಟ ಒಂದು ನಿದರ್ಶನ. ಈಗ ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿನ ನಗರಾಡಳಿತ ಹಲವು ವಿದಗಳಿಂದ ಪ್ರಯತ್ನಿಸುತ್ತಿದೆ, ಆದರೆ  ಕಾಲ   ಮಿಂಚಿದೆ!  ಗಗನಚುಂಬಿ ಕಟ್ಟಡಗಳಿಂದಾಗಿ ಚಿಕ್ಕ ಪ್ರದೇಶದಲ್ಲಿ  ಜನ ನಿಬಿಡತೆ ಜಾಸ್ತಿ. ಆದ್ದರಿಂದ ಇಲ್ಲಿನ ಗಲ್ಲಿಗಲ್ಲಿಗಳಲ್ಲಿ ಕಾಣುವುದು ಸಾಲು ಕಸದ ತೊಟ್ಟಿಗಳು ಮತ್ತು ಹೇಗಂದರೆ ಹಾಗೆ  ನಿಲ್ಲಿಸಿದ ಕಾರುಗಳು!! ಇಲ್ಲಿ ಆಕಾಶವನ್ನು ಸರಿಯಾಗಿ ನೋಡಲು  ಕಷ್ಟಪಡಬೇಕು.




 ಅಬುಧಾಬಿಯಲ್ಲಿ ದಾಕಲಿಸಬಹುದಾದ ಹಲವು ಒಳ್ಳೆಯ ವಿಚಾರಗಳು ಇವೆ. ಇಲ್ಲಿನ ಸುಮಾರು ಹತ್ತು ಕಿ.ಮಿ. ಉದ್ದದ ಕಾರ್ನಿಶ್ ( ಅರೇಬಿಕ್ ನಲ್ಲಿ ಸಮುದ್ರತೀರದ ಪಕ್ಕದ ದಾರಿ)  ನಿಜವಾಗಿಯೂ ನೋಡಬೇಕಾದ ಸ್ಥಳ. ಅಷ್ಟುದ್ದದ ಜಾಗಕ್ಕೂ ನಡೆಯುವ ಮಾರ್ಗ, ಸೈಕಲ್  ಮಾಡಲು ದಾರಿ, ಮಾರ್ಗದುದ್ದಕ್ಕೂ ಸುಂದರವಾಗಿ ಬೆಳಿಸಿ ಆರೈಕೆ ಮಾಡುತ್ತಿರುವ ಗಿಡಗಳು; ಇದು ಮರುಭೂಮಿ ಎನ್ನುವುದನ್ನೇ ಮರೆಸುತ್ತದೆ. ಇಲ್ಲಿನ ರಸ್ತೆಗಳು ಬಹಳ ಸುಸ್ತಿತಿಯಲ್ಲಿವೆ.  ಬಿಳಿಯ ಅಮ್ರತಶಿಲೆಯಲ್ಲಿ ನಿರ್ಮಾಣಗೊಂಡ  ಶೇಖ್ ಜ್ಹಾಯೇದ್ ಮಸೀದಿ ಇಲ್ಲಿನ ಇನ್ನೊದು ಆಕರ್ಷಣೆ. ಅಬುಧಾಬಿಯ ಇನ್ನೊಂದು ಸಾಧನೆಯೆಂದರೆ ಸಮುದ್ರವನ್ನು ಒತ್ತ್ತುವರಿ ಮಾಡಿ ಇವರು ಅಭಿವೃದ್ದಿಪಡಿಸಿರುವ ದ್ವೀಪಗಳು. ಇವು ಮಾನವನ ಅದಮ್ಯ ಸಾಮರ್ಥ್ಯಕ್ಕೆ ಸಂಕೆತಗಳಂತೆ ಕಾಣುತ್ತವೆ.


ಶೇಖ್ ಜ್ಹಾಯೇದ್  ಮಸೀದಿ
















ಅಬುಧಾಬಿ ಕನ್ನಡಿಗರೊಂದಿಗೆ : 

           ಪಾಕಿಸ್ತಾನ, ಪಿಲಿಪೈನ್ಸ್, ಲೆಬನೋನ್, ಈಜಿಪ್ಟ್  ಮತ್ತು ಇತರ ಅರಬ್ ದೇಶದ ಜನತೆಯೇ ಹೆಚ್ಚಾಗಿ ಕಾಣುವ ಈ ನಗರದಲ್ಲಿ ಭಾರತೀಯರು ಬಹಳ ಸಂಕ್ಯೆಯಲ್ಲಿ ಇದ್ದಾರೆ. ಭಾರತಿಯ ಸಮುದಾಯದಲ್ಲಿ ಕೇರಳದ ಜನತೆಗೆ ಮೊದಲ ಸ್ಥಾನ.
ಅವರು ಎಷ್ಟರ ಮಟ್ಟಿಗೆ ಇದ್ದಾರೆಂದರೆ ಹಲವು ಅಂಗಡಿಗಳ ನಾಮ ಪಳಕಗಳು ಮಲಯಾಳಿಯಲ್ಲಿ ಇರುತ್ತವೆ, ಮಲಯಾಳಿ ಭಾಷೆಯ ಎರಡು ರೇಡಿಯೋ ಕೇಂದ್ರಗಳಿವೆ!!  ಕನ್ನಡದವರು , ಅದರಲ್ಲಿಯೂ  ಕರಾವಳಿ ಕರ್ನಾಟಕದ ಜನ ಇಲ್ಲಿ ತುಂಬಾ ಇದ್ದಾರೆ. ಬಿ. ಆರ್. ಶೆಟ್ಟರು ಇದಕ್ಕೆ ಕಾರಣ ಎನಿಸುತ್ತದೆ. ಇಲ್ಲಿ ಇರುವುದು ಮಾತ್ರವಲ್ಲ, ನಿಜ ಅರ್ಥದಲ್ಲಿ ಭಾರತಿಯ ರಾಯಭಾರಿಯಾಗಿ, ಇಲ್ಲಿ ನಮ್ಮ ಸಂಸ್ಕೃತಿಯನ್ನು ಬೇರೂರಿಸಿದ್ದಾರೆ. ಇಲ್ಲಿ ದೇವಸ್ತಾನ ಮಾಡಲು ಇಲ್ಲಿನ ಆಡಳಿತ ಅನುಮತಿ ನೀಡದಿದ್ದರೂ ಮನೆಗಳಲಿ, ಸಭಾಬವನಗಳಲ್ಲಿ ಭಾರತಿಯ ಹಬ್ಬಗಳನ್ನು ಆಚರಿಸಿ, ಭಾರತೀಯರು ಸಂತೋಷ ಪಡುತ್ತಾರೆ.

           ಇಲ್ಲಿನ ಬ್ರಾಹ್ಮಣಸಂಘ ಒಂದು ಕನ್ನಡ ಬ್ರಾಹ್ಮಣ ಸಮುದಾಯದ ಗುಂಪು. ಇಪ್ಪತ್ತು- ಇಪ್ಪತ್ತೈದು ಕುಟುಂಬಗಳ ಈ ಗುಂಪು ಪ್ರತಿತಿಂಗಳು ಸರತಿಯಂತೆ ಪ್ರತಿ ಸದಸ್ಯರ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ. ಇದೆ ಹೆಳೆಯಲ್ಲಿ ಎಲ್ಲರ ಮಕ್ಕಳು ಶ್ಲೋಕಗಳನ್ನು ಕಲಿಯುತ್ತವೆ, ಪೂಜೆಯನ್ನು ನೋಡುತ್ತವೆ. ಹೆಂಗಸರ ಜರಿಸೀರೆಗಳು ಹೊರಬರುತ್ತವೆ. ನಮ್ಮ ಸಂಸ್ಕೃತಿಯು ಸ್ವಲ್ಪ ಅಂಶಗಳಾದರೂ ಮುಂದಿನ ಪೀಳಿಗೆಗೆ ಮುಂದುವರಿಯುತ್ತದೆ. ನಾವೂ ಹಲವು ಮನೆಗಳಲ್ಲಿ ಪೂಜೆಗೆ ಹೋಗುವಂತಾಯಿತು. ಇಲ್ಲಿನ ಮಹಿಳೆಯರ ಗುಂಪು ಪ್ರತೀ ಮಂಗಳವಾರ ಶಂಕರಾಚಾರ್ಯರ ಸೌಂದರ್ಯ ಲಹರಿ ಓದುತ್ತಾರೆ. ಈ ಗುಂಪನ್ನು ಸೇರಿದ್ದು ನನಗೆ ಒಳ್ಳೆಯ ಸಮಯಕಳೆಯುವ ಸಾದನವಾಯಿತು. ಸೌಂದರ್ಯ ಲಹರಿ ಸಪ್ತಾಹಕ್ಕೆ ಹಾಜರಾದೆ, ಶಂಕರ ಜಯಂತಿ ಪ್ರಯುಕ್ತ  ದಶಶ್ಲೋಕಿ, ಗುರುವಷ್ಟಕಂ ಓದಿದೆವು. ನಾನು ಇವುಗಳನ್ನೆಲ್ಲ ಕಲಿಯುವಂತಾಯಿತು.
          
             ಮಗಳ ಸಂಗೀತ ಪಾಟಗಳು ನಿಲ್ಲಬಾರದೆಂದು ನಾನು ಬಹಳ ಪ್ರಯತ್ನ ಮಾಡಿದೆ. ಆದರೆ  ಇಲ್ಲಿ ಸರಿಯಾದ ಗುರುವನ್ನು ಹುಡುಕಲು ನನ್ನಿಂದ ಸಾಧ್ಯವಾಗಲಿಲ್ಲ. ನಮಿತ ಮತ್ತು ಅನಂತ್ ಇಲ್ಲಿ ಕೆಲವು ವರ್ಷಗಳಿಂದ ನೆಲಸಿ ಕನ್ನಡತನವನ್ನು ಇಲ್ಲಿ ಉಳಿಸಲು ಪ್ರಯತ್ನಿಸುತ್ತಿರುವ  ದಂಪತಿಗಳು. ನಮಗೆ ದೂರದ ಸಂಬಂದಿಗಳಾದ  ಅವರ ಪರಿಚಯ ನಮ್ಮ ಅಬುಧಾಬಿಯ ವಾಸವನ್ನು ಬಿಡುವಿಲ್ಲದಂತೆ ಮಾಡಿಸಿತು.  ಅವರು ಆಯೋಜಿಸಿದ್ದ  ಪುರಂದರದಾಸರ ಆರಾದನೆಯಲ್ಲಿ, ರಾಜ್ಯೋತ್ಸವ ನ್ರತ್ಯ ನಾಟಕ 'ನಾಟ್ಯರಾಣಿ ಶಾಂತಲ' ದಲ್ಲಿ ಪ್ರೀತಿಯು ಬಾಗವಹಿಸಿದಳು. ಅವಳೊಡನೆ ಅಭ್ಯಾಸಕ್ಕೆ ಹೋಗುವುದು, ಅಲ್ಲಿ ಹಲವರ ಪರಿಚಯ, ಸಹಾಯ ಎಂದು ಕೆಲುವು ದಿನಗಳ ಚಟುವಟಿಕೆಗಳಾಯಿತು. ಮನೆಯಲ್ಲಿ ಎಲ್ಲರ ಬಾಯಿಯಲ್ಲಿಯೂ  ಅಂತಃಪುರದ ಗೀತೆಗಳು ನಲಿದಾಡಿದವು. ಕನ್ನಡ ಸಂಘದ ರಾಜ್ಯೋತ್ಸವ  ಆಚರಣೆಯು  ಗಂಗಾವತಿ ಬೀಚಿ, ನರಸಿಂಹ ಜೋಶಿಯರ ನಗೆ ಭಾಷಣದಿಂದ ಜನರನ್ನು ರಂಜಿಸಿತು.             


     
         
                       



ಪುರಂದರದಾಸರ ಆರಾದನೆ

ತ್ಯಾಗರಾಜ ಆರಾಧನೆಯಲ್ಲಿ ಹಾಡುತ್ತಿರುವಾಗ  


        ಇಲ್ಲಿನ ಕರ್ನಾಟಕ ಸಂಗೀತ ಸಭಾದವರು ಆಯೋಜಿಸಿದ್ದ ತ್ಯಾಗರಾಜ ಆರಾದನೆಯಲ್ಲೂ ಪ್ರೀತಿ ಪಾಲ್ಗೊಂಡಳು. ಶ್ರೀಯುತ ಕುಮಾರ್ ಆಯೋಜಿಸಿದ್ದ ಸಂಗೀತ ಉತ್ಸವದಲ್ಲ್ಲಿ ನಾಗಮಣಿ ಶ್ರೀನಾಥ್ ಮತ್ತು ಸುಮಾ ಸುಧೀಂದ್ರರ ಇದಿರಿನಲ್ಲಿ ನಮ್ಮ ನಮಿತಾಳ ತಂಡದ ಮಹಿಳೆಯರ ಹಾಡುಗಾರಿಕೆಯಿತ್ತು. ಈ ಬಾರಿ ನಾನು ಬಾಗವಹಿಸಿದ್ದೆ ಮಗಳಲ್ಲ. ಹೀಗೆ ಸಾಂಸ್ಕ್ರತಿಕವಾಗಿ ಇಲ್ಲಿನ ಭಾರತಿಯ ಸಮುದಾಯ ಬಹಳ ಚಟುವಟಿಕೆಯಿಂದಿದ್ದು , ನಮ್ಮನ್ನು  ತೊಡಗಿಸಿಕೊಳ್ಳಲು ತುಂಬಾ ಅವಕಾಶಗಳನ್ನು ಕೊಡುತ್ತದೆ.

           

ಯು ಎ ಇ ಯಲ್ಲಿ ನಮ್ಮ ಮನೆಯವರು:






 ನಮ್ಮ ಮನೆಗೆ  ಅತ್ತೆ- ಮಾವ, ಅಮ್ಮ, ನಮ್ಮ ತಂಗಿಯರ ಕುಟುಂಬಗಳು - ಹೀಗೆ ಬರುವವರು ಇದ್ದದ್ದು ನಮಗೆ ಇಲ್ಲಿ ದಿನ ಕಳೆದಿದ್ದು  ಗೊತ್ತಗದಂತಾಗಿತ್ತು. ಪಪ್ಪಾ, ಅಮ್ಮ ಇಬ್ಬರೂ ಒಟ್ಟಾಗಿ ಪುರುಸೋತ್ತಿನಲ್ಲಿ ಮಗಳ ಮನೆಗೆಂದು ಬರುವುದು ಕನಸಾಗಿಯೀ ಉಳಿಯಿತು, ವಿಧಿ ಪಪ್ಪನಿಗೆ ಅಷ್ಟು ಪುರುಸೊತ್ತು ಕೊಡಲೇ ಇಲ್ಲ. ಅಮ್ಮನಾದರೂ ಬರಲಿ ಎಂದು ಯೋಚಿಸಿ, 
ತಯಾರಿ ನಡೆಸಿದರೂ ಅಮ್ಮ ಬರುವವರೆಗೆ ನನಗೆ ಆತಂಕ ಏನಾದರೂ ಆಗಿ ಅಮ್ಮನ ಕಾರ್ಯಕ್ರಮ ರದ್ದಾಗಬಹುದೆಂಬ  ಆತಂಕ. ಆದರೆ ಈ ಬಾರಿ ದೇವರು ನಮ್ಮ ಪ್ರಾರ್ಥನೆ  ಆಲಿಸಿದ. ಅಮ್ಮ ಅಂದುಕೊಂಡಂತೆ ಮಸ್ಕತ್ತಿಗೆ ಬಂದು, ಅಲ್ಲಿ ನಾಲ್ಕು ದಿನ ತಿರುಗಾಡಿ ನಂತರ ಇಲ್ಲಿಗೆ ಬಂದಳು. ಅಮ್ಮನೊಡನೆ ಅಬುಧಾಬಿ ಯನ್ನು ಸುತ್ತುವ ಸಂಭ್ರಮ! ನನ್ನ ತಂಗಿ ಮಧುರಳು ಪರಿವಾರ ಸಮೇತ  ಬಂದಳು. ಪುಟ್ಟ ಶ್ರೇಯಾ ದೊಡ್ಡಮ್ಮ, ದೊಡ್ಡಪ್ಪ ಎಂದು ನಮ್ಮೊಡನೆ ತಿರುಗಾಡಿತು. ಎಲ್ಲರೂ ಕೂಡಿ ಅಲ ಇನ್ ಗೆ ಹೋದೆವು, ದುಬೈ ಮಾಲಿನ ಸಂಗೀತ ಕಾರಂಜಿ, ಅಬುಧಾಬಿಯ ಬ್ರಿಹತ್ ಮಸಿದಿ, ಎಂದೆಲ್ಲ ತಿರುಗಾಡಿದೆವು. ಪ್ರೀತಿಯು ಗೌಜಿನಿಂದ ಎಲ್ಲರೊಡನೆ ಬೆರೆತಳು. 

             ಅತ್ತೆ ಮಾವ  ಬಂದಾಗ ಬೇಸಿಗೆಯ ಜಳ! ಆದರೂ ಇಲ್ಲಿನ ಹವಾನಿಯನ್ತ್ರಕಗಳಿಂದಾಗಿ ಮನೆಯೊಳಗೇ ಚಳಿಯಲ್ಲಿ ಸಾಕಾಗುತ್ತೆ ಎನ್ನುತ್ತಿದ್ದರು. ಪ್ರೀತಿಯ ರಜೆ, ರಮಾದಾನ್ ಹಬ್ಬದ ಉಪವಾಸದ ವಾತಾವರಣಗಳಿಂದ ಅವರು ಬಂದಾಗ ದಿನಕಳೆದದ್ದು  ತಿಳಿಯುತ್ತಿರಲಿಲ್ಲ. ಇಲ್ಲಿ ಅಂದರೆ ಸಂಯುಕ್ತ ಅರಬ್ ಸಂಸ್ತಾನದಲ್ಲಿ ರಮಾದಾನ್ ತಿಂಗಳೆಂದರೆ ವಿಶೇಷ. ಇದು ಮುಸಲ್ಮಾನರ ರಾಜ್ಯವಾವಾದ್ದರಿಂದ ಸರಕಾರ ಉಪವಾಸಕ್ಕಾಗಿ ಹಲವು ವ್ಯವಸ್ತೆಗಳನ್ನು ಮಾಡುತ್ತದೆ. ಇಡಿ ದೇಶದ ಸರಕಾರೀ, ಖಾಸಗಿ ಕಚೇರಿಗಳೆಲ್ಲ ಅರ್ಧ ದಿನ ಕೆಲಸ ಮಾಡುತ್ತವೆ! ಉಪವಾಸವಿಲ್ಲದವರಿಗೂ ಮೋಜು. ಆದರೆ ಹಗಲೆಲ್ಲ ಹೋಟೆಲುಗಳು ಮುಚ್ಚಿರುತ್ತವೆ, ಸರಕಾರದ ಆದೇಶದಂತೆ. ಸಾರ್ವಜನಿಕ ಜಾಗ ಗಳಲ್ಲಿ  ತಿನ್ನುವುದು, ಕುಡಿಯುವುದು ಉಪವಾಸದ ಸಮಯಗಳಲ್ಲಿ ನಿಷೆದಿಸಲಾಗಿರುತ್ತದೆ. ಬೆಳಿಗ್ಗಿನ ಪ್ರಾರ್ಥನೆಯ ನಂತರ ಆರಂಭವಾದ ಉಪವಾಸ ಮುಸ್ಸಂಜೆಯ  ಪ್ರಾರ್ಥನೆಯ ತನಕ ನೀರನ್ನು ಕುಡಿಯದೆ  ನಡೆಯುತ್ತದೆ. ಶಾಲೆಗಳಿಗೂ ಅವಧಿಯನ್ನು ಕಡಿಮೆಮಾದಲಾಗಿರುತ್ತದೆ. ಒಟ್ಟಿನಲ್ಲಿ ಇಡಿ ದೇಶದ ದಿನಚರಿ ಒಂದು ತಿಂಗಳು ಬದಲಾಗುತ್ತದೆ. ತಡ ರಾತ್ರಿಯ ತನಕ  ಈ ಒಂದು ತಿಂಗಳು ಶಾಪ್ಪಿಂಗ್ ಮಾಲುಗಳು ತೆರೆದಿರುತ್ತವೆ. ಬೆಳಿಗ್ಗಿನಿಂದ ಸಂಜೆಯ ತನಕ ಬನಗುಡುವ ರಸ್ತೆಗಳು ರಾತ್ರಿ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತದೆ. ರಮಾದಾನ್ ತಿಂಗಳಿನಲ್ಲಿ ದಾನ ಧರ್ಮಗಳು ತುಂಬಾ ನಡೆಯುತ್ತವೆ. ಮಾಲುಗಳಲ್ಲಿ ಕರ್ಜೂರ ಮತ್ತು ಹುಣಸೆನಿರುಗಳನ್ನು ಉಪವಾಸ ಮುಗಿಸುವ ಹೊತ್ತಿನಲ್ಲಿ ಹಂಚಲಾಗುತ್ತದೆ. ಹೀಗೆ ಉಪವಾಸ ಮಾಡುವವರು, ಮಾಡದವರು ಎಲ್ಲರಿಗು ಹಬ್ಬ .

        ನನ್ನ  ಪತಿ ಶಶಿಯ ತಂಗಿ ಸೀಮಾ ಕುಟುಂಬ ಸಮೇತ ಅಮೆರಿಕಾದಿಂದ ಇಲ್ಲಿಗೆ ಬಂದಳು. ಅವರು ಅಮೆರಿಕಾದ ಪ್ರಜೆಯಾದ ಕಾರಣ ಅವರಿಗೆ ಇಲ್ಲಿನ ವೀಸಾದ  ರಗಳೆ ಇಲ್ಲ. ಅಮೇರಿಕಾದ ಪ್ರಜೆಗಳಿಗೆ ಇಲ್ಲಿ ಕಾರು ಚಲಾಯಿಸಲು ಕೊಡ ಅಲ್ಲಿನ ಲ್ಯಸೆನ್ಸ್ ನಡೆಯುತ್ತದೆ. ಮತ್ತೆ ಅವರೊಡನೆ  ಇಲ್ಲಿನ ಭಾರತಿಯ ಹೊಟೇಲುಗಳಲ್ಲಿ, ಮರುಭೂಮಿಯಲ್ಲಿ, ಮಾಲುಗಳಲ್ಲಿ ಸುತ್ತಿದೆವು!


ದುಬೈ ಎಂಬ ಮಾಯಾನಗರಿ: 


ಅತ್ಯಂತ ಎತ್ತರದ ಬುರ್ಜ್ ಖಲಿಫಾ 

 ದುಬೈ ಬಗೆಗೆ ಬರೆಯದೆ ಸಂಯುಕ್ತ ಅರಬ್ ಸಂಸ್ತಾನದ ಬಗೆಗಿನ ಲೇಖನ ಅಪೂರ್ಣ. ಯು ಎ ಇ ಯಾ ನಿಜವಾದ ಆಕರ್ಷಣೆ  ದುಬೈ ನಗರ. ಅರೇಬಿಯನ್ ನೈಟ್ಸ್ ನ ಕಲ್ಪನೆಯ ನಗರದಂದೆ ವಿದ್ಯುದ್ದೀಪಗಳಿಂದ ಕಂಗೊಳಿಸುವ ಈ ನಗರದಲ್ಲಿ ಇಲ್ಲದ ಪ್ರವಾಸಿ ಆಕರ್ಷಣೆಯೇ ಇಲ್ಲ. ಮರುಭೂಮಿಯ ಸವಾರಿ, ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಕಲಿಫಾ, ಹಿಮಗಿರಿಗಳ ತಂಪು  ಅನುಭವ ಕೊಡುವ ಸ್ಕಿ ಮಾಡುವ ತಾಣ!; ನಾವು ಹೆಸರಿಸಿದರೆ ಸಾಕು  ಅದು  ಅಲ್ಲಿದೆ. ಈ ಮಾಯಾನಗರಿಗೆ ನಾವು ಅಬುದಾಬಿಯಿಂದ ಒಂದು  ಗಂಟೆಯಲ್ಲಿ ತಲುಪಬಹುದು. ಹತ್ತು ಹಲವು ಬಾರಿ ಸಂದರ್ಶಿಸಿದರು ಪ್ರತಿ ಬಾರಿ ಏನಾದರು ಹೊಸತನ್ನು ನೋಡುವಂತೆ ಮಾಡುವ ಈ ನಗರ ನಿಜವಾಗಿ ಒಂದು ಮಾಯಾಲೋಕವನ್ನೇ ಸ್ರಷ್ಟಿ ಮಾಡಿದೆ. ಇಲ್ಲಿಯೂ ಸಮುದ್ರವನ್ನು ಒತ್ತುವರಿ  ಮಾಡಿ ನಿರ್ಮಿಸಿರುವ   ಪಾಮ್ ಜ್ಹುಮೈರ ದ್ವೀಪ ನೋಡಲು ಕಣ್ಣಿಗೊಂದು ಹಬ್ಬ.

       ಇಲ್ಲಿಯೂ ಕನ್ನಡಿಗರು ಹಲವು ಸಾಂಸ್ಕ್ರತಿಕ  ಕಾರ್ಯಕ್ರಮವನ್ನು ಆಯೋಜಿಸುತ್ತಾರೆ, ಭಾರತದಿಂದ ನಮ್ಮ ಕಲಾವಿದರನ್ನು, ಸಾಹಿತಿಗಳನ್ನು ಕರೆಸುತ್ತಾರೆ. `ನಮ್ಮ ಕುಂದಾಪುರದ ರೂಪಕಲಾ ತಂಡದ ಮೂರು ಮುತ್ತು ನಾಟಕ ಆಯೋಜಿಸಲಾಗಿತ್ತು. ನಮ್ಮೂರಿನಿಂದ ಇಲ್ಲಿಯ  ತನಕ ಬಂದು ಅವರು ಪ್ರದರ್ಶಿಸಿದ ನಾಟಕಕ್ಕೆ ಹೋಗಿದ್ದು ನನಗೆ ಒಂದು ಹ್ರದಯ ಸ್ಪರ್ಶಿ ಅನುಭವ. ಅಲ್ಲಿ ನನ್ನ ಪ್ರಾಥಮಿಕ ಶಾಲೆಯ ಕೆಲುವು ಗೆಳತಿಯರ ಬೇಟಿಯಾಯಿತು!  

          ದ್ವನಿ ಪ್ರತಿಷ್ಠಾನದವರು ಆಯೋಜಿಸಿದ್ದ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ನೀಡಿದ್ದ ಬೇಟಿ ಇನ್ನೊಂದು ಸ್ಮರಣಿಯ ಅನುಭವ.  ನಮ್ಮೊರಿನವರೆ ಆದ ಡುಂಡಿರಾಜರ ಅದ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಬಾಗವಹಿಸಿದ್ದ ಹವ್ಯಾಸಿ ಚುಟುಕು ಕವಿಗಳ ಕವಿತೆಗಳು ಉತ್ತಮವಾಗಿದ್ದವು. ಡುಂಡಿರಾಜರ ಮಾತೊಂತು ನಗೆಯ ಸ್ಪೋಟಕ್ಕೆ ಕಾರಣವಾಯಿತು. ಅವತ್ತು ಸನ್ಮಾನ ಗೊಂಡವರಲ್ಲಿ   ಜಯಪ್ರಕಾಶ್ ಮಾವಿನಕುಳಿಯವರಿದ್ದರು. ಬಾಲ್ಯದಲ್ಲಿ ನ್ರತ್ಯ ತರಗತಿಯಲ್ಲಿ ಪರಿಚಯವಿದ್ದ  ಇವರನ್ನು ಇಲ್ಲಿ ಬೆಟ್ಟಿಯಾಗಿದ್ದು, ಅವರಿಗೆ ನನ್ನ ಪರಿಚಯವಿದ್ದದ್ದು  ಒಂದು ಆಕಸ್ಮಿಕ!

          ನಮ್ಮೂರು, ದೇಶಗಳಿಂದ ದೂರವಾದ ಜನಗಳು ಎಲ್ಲಿಯೋ ಬಂದು ನಮ್ಮತನವನ್ನು ಅರಸುತ್ತ, ಈ ದೇಶದಲ್ಲೊಂದು ಮಿನಿ ಭಾರತವನ್ನೇ ನಿರ್ಮಾಣ ಮಾಡಿದ್ದಾರೆ. ಭಾರತದಲ್ಲಿದುಕೊಂಡು ಸಿಗದ ಸಾಂಸ್ಕ್ರತಿಕ ಲೋಕ ಈ ಅರಬ್ ನಾಡಿನಲ್ಲಿ ನನಗೆ ದೊರಕಿದೆ.











ಭಾನುವಾರ, ಜೂನ್ 12, 2011

ಶಾಂತಿಯುತ ನಾಡು ಒಮಾನಿಗೆನಾಯಿತು?

ಪ್ರಜಾಪ್ರಭುತ್ವದ ಗಾಳಿ ಎಲ್ಲೆಡೆ ಬೀಸುತ್ತಿದೆ. ಇರುವ ಆಡಳಿತದ ವಿರುದ್ದ ಜನರ ಚಳವಳಿ ನಡೆಯುತ್ತಿದೆ. ತುನಿಶಿಯ, ಅಲ್ಜೀರಿಯ, ಈಜಿಪ್ಟ್, ಲಿಬಿಯ, ಇಲ್ಲೆಲ್ಲಾ ಆಳುತ್ತಿದ್ದ ಸರಕಾರವನ್ನು ಬಿಳಿಸಿದ ಚಳವಳಿಗಳು ಈಗ ಬಹರೈನ್ ಮತ್ತು ಒಮಾನುಗಳಿಗೂ ಹಬ್ಬಿದೆ. ಸೌದಿ ಅರೇಬಿಯಾದಲ್ಲಿ ಸರಕಾರದ ವಿರುಧ್ಧ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆಯಂತೆ! ಬಹರೈನಿನಲ್ಲಿ ತುರ್ತು ಪರಿಸ್ತಿತಿ ಗೋಷಿಸಲಾಗಿದೆ.

                ಇಲ್ಲಿರುವ ಲಕ್ಷೋಪಲಕ್ಷ ಜನ ಭಾರತೀಯರು ಮೌನವಾಗಿ ಪರಿಸ್ತಿತಿಯನ್ನು ನೋಡುತ್ತ ದೇವರಲ್ಲಿ ಎಲ್ಲವೂ ಸರಿಯಾಗಲಿ ಎಂದು ಹಾರೈಸುತ್ತಿದ್ದಾರೆ.ಒಂದು ಪಕ್ಷ ಪರಿಸ್ತಿತಿ ಕೈ ಮಿರಿ ಭಾರತೀಯರು ಈ ದೇಶಗಳನ್ನು ಬಿಟ್ಟು ಹೋಗಬೇಕಾದರೆ ಏನಪ್ಪ ಗತಿ ಎಂದು ಯೋಚಿಸಲೂ ಭಯವಾಗುತ್ತದೆ.ನಾವು ಅರಬ್ಬರ ಪ್ರಪಂಚದಲ್ಲಿ ಸೇರಿ ಆರು ವರ್ಷಗಳಾಯಿತು. ಅದರಲ್ಲಿ ಮೊದಲ ಒಂದು ವರ್ಷ ಸೌದಿ ಅರೆಬಿಯಾದಲ್ಲಿ ಕಳೆದಿದ್ದೇವೆ. ಈ ವರ್ಷ ಸಂಯುಕ್ತ ಅರಬ್ ಸಂಸ್ತಾನದಲ್ಲಿ (ಯು ಎ ಇ ) ಇದ್ದೇವೆ. ಇಲ್ಲೆಲ್ಲಾ ಈ ವರ್ಷ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿದರೆ ಇನ್ನು ಹೆಚ್ಚು ಸಮಯ ಭಾರತೀಯರು ಇಲ್ಲಿರಲಾರರು ಎನಿಸುತ್ತಿದೆ.

           ನಾವು ಕಳೆದ ಐದು ವರ್ಷಗಳಿಂದ ವಾಸವಾಗಿರುವ ದೇಶ ಒಮಾನ್. ಶಾಂತಿ ಪ್ರಿಯ ಒಮಾನಿ ಜನತೆ ಸ್ನೇಹಪರರು. ಆದ್ದರಿಂದಲೇ, ಇಲ್ಲಿ ಶತಮಾನಗಳಿಂದ ಭಾರತೀಯರು ಬಂದು ಬೀಡು ಬಿಟ್ಟಿದ್ದಾರೆ ಎನಿಸುತ್ತದೆ..ಈ ದೇಶದ ಒಟ್ಟು ಜನಸಂಖ್ಯೆ ೨೭,೦೦,೦೦೦. ಅದರಲ್ಲಿ ೭,೦೦,೦೦೦ ಜನ ವಿದೇಶಿಯರು. ಅವರಲ್ಲಿ ೮೦% ಭಾರತೀಯರು. ಅಂದರೆ ಯೋಚಿಸಿ ಎಷ್ಟು ಭಾರತೀಯರು ಇಲ್ಲಿರಬಹುದೆಂದು! ನಾವು ಕಳೆದ ಐದು ವರ್ಷಗಳಲ್ಲಿ ಈ ದೇಶದ ಉದ್ದಗಲ ಸಂಚರಿಸಿದ್ದೇವೆ, ಇಲ್ಲಿ ನಡೆಯುವ ಸಾಮಾಜಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ, ಈ ದೇಶದ ಅನ್ನ, ನೀರು ಕುಡಿದಿದ್ದೇವೆ, ಇಲ್ಲಿನವರಾಗಿದ್ದೇವೆ. ಇಲ್ಲಿನ ದೊಡ್ಡ ಭಾರತಿಯ ಸಮುದಾಯ ಸಾಂಸ್ಕ್ರತಿಕವಾಗಿ ಬಹಳ ಚುರುಕಾಗಿದೆ. ಇಲ್ಲಿ ನಡೆಯುವಷ್ಟು ಸಂಗೀತ, ನೃತ್ಯ ಕಾರ್ಯಕ್ರಮಗಳು ಭಾರತದಲ್ಲಿ ನಡೆಯುವುದಿಲ್ಲ ಎನಿಸುತ್ತದೆ. ಇಲ್ಲಿದ್ದ ಐದು ವರ್ಷಗಳಲ್ಲಿ ನಾವು ಕುನ್ನುಕುಡಿ ವೈದ್ಯನಾಥನ್, ಹರಿಪ್ರಸಾದ್ ಚೌರಾಸಿಯಾ, ಏನ್.ರಮಣಿ, ಹಿಂದಿ ಹಾಡುಗಾರ ಶಾನ್, ರೆಮೋ, ಕನ್ನಡದ ಗುರುಕಿರಣ್, ಸಿ.ಅಶ್ವಥ್, ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್, ಮುಂತಾದ ಹತ್ತು ಹಲವು ಭಾರತಿಯ ಕಲಾವಿದರ ಪ್ರದರ್ಶನಗಳನ್ನು, ನಾಟಕಗಳನ್ನು ನೋಡಿದ್ದೇವೆ; ಅದೂ ಉಚಿತವಾಗಿ. ನನ್ನ ಮಗಳು ಮತ್ತು ನಾನು ಪ್ರಭಾತ್ ಕಲಾವಿದರ ತಂಡದೊಂದಿಗೆ ವೇದಿಕೆಯಲ್ಲಿ ಅಭಿನಯಿಸಿದ್ದೇವೆ, ಮಲ್ಲಾಡಿ ಸಹೋದರರಿಂದ ಕೆಲವು ಕೃತಿಗಳನ್ನು ಕಲಿತಿದ್ದೇವೆ. ಹಲವು ಭಾರತಿಯ ಶಾಲೆಗಳು ದೇಶದ ಎಲ್ಲ ನಗರಗಳಲ್ಲೂ ಇವೆ; ರಾಜಧಾನಿ ಮಸ್ಕತ್ತಿನಲ್ಲಿ ಈಗಾಗಲೇ ಐದು ಭಾರತಿಯ ಶಾಲೆಗಳಿವೆ. ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಇಲ್ಲಿನ ಅತಿ ದೊಡ್ಡ ಭಾರತಿಯ ಶಾಲೆಯಲ್ಲಿ ೭,೦೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ನಮ್ಮ ಮಗಳು ಇಲ್ಲಿ ಉತ್ತಮ ಗುರುವಿನ ಸಹಾಯದಿಂದ ಶಾಸ್ತ್ರಿಯ ಸಂಗೀತ ಕಲಿಯುತ್ತಿದ್ದಾಳೆ, ಎಲ್ಲ ಐದು ಪಂಚರತ್ನ ಕೃತಿಗಳನ್ನು ಹತ್ತು ವರ್ಷ ವಯಸ್ಸಿನಲ್ಲಿ ಹಾಡಬಲ್ಲವಲಾಗಿದ್ದಾಳೆ. ನಾನೂ ನನ್ನ ಹತ್ತು ವರ್ಷಗಳಿಂದ ಮುಉಲೇ ಹಿಡಿದು ಕುಳಿತಿದ್ದ ವೀಣೆಯನ್ನು ತಂದು ವೇದಿಕೆಯ ಮೇಲೆಯೂ ನುಡಿಸುವಂತಾಗಿದ್ದು ಮಸ್ಕತ್ತಿನಲ್ಲಿ! ಇಲ್ಲಿ ಹಿಂದುಗಳಿಗೆ ಎರಡು ದೇವಾಲಯಗಳು, ಕ್ರಿಸ್ತರಿಗೆ ಚರ್ಚು ಇದೆ. ಎಲ್ಲ ಹಬ್ಬಗಳನ್ನೂ ಒಟ್ಟಾಗಿ ಅವರವರ ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಬಹುದು. ಕನ್ನಡದವರ ಗಣೇಶ ಹಬ್ಬ, ಬಂಗಾಳದವರ ದುರ್ಗಾಪೂಜೆ, ದೇವಸ್ತಾನದ ದಂಡಿಯ, ಜನ್ಮಾಷ್ಟಮಿ, ಮೊಸರುಕುಡಿಕೆ......ಹೀಗೆ ಎಲ್ಲ ಹಬ್ಬಗಳು ಸಾಂಪ್ರದಾಯಿಕವಾಗಿ ಆಚರಿಸಲ್ಪದುತ್ತವೆ. ದೇವಸ್ಥಾನದ ಬಾಗಿಲಿನಲ್ಲಿ ಒಮಾನಿಗಳು ಕುಳಿತು "ಶಿವಜಿ ಕೇಳಿಯೇ ತೆಳ, ದೂದ್ಹ್", "ಬೆಹಂಜಿ ನಾರಿಯಲ್ ಲೇಲೋ", ಎಂದು ಮಾರುತ್ತಿರುತ್ತಾರೆ. ಆದ್ದರಿಂದ ಮಸ್ಕತ್ತಿನಲ್ಲಿ ನಮಗೆ ಯಾವತ್ತೂ ವಿದೇಶಲ್ಲಿದ್ದೇವೆಂದು ಅನಿಸಲೇ ಇಲ್ಲ. ಭಾರತೀಯ ಸಾಮಾಜಿಕ ಒಕ್ಕೂಟದ ಕೆಳಗೆ ಎಲ್ಲಾ ರಾಜ್ಯಗಳ ವಿವಿದ ಶಾಖೆಯಿದೆ. ಕನ್ನಡ ,ಸಂಘ ತುಂಬಾ ಚಟುವಟಿಕೆಯಿಂಡಿದೆ. ನಾವು ಕನ್ನಡ ತರಗತಿಗಳನ್ನು ನಡೆಸುತ್ತಿದೇವೆ. ತಮಿಳರು ತಮಿಳು ತರಗತಿಗಳನ್ನು ನಡೆಸುತ್ತಿದ್ದಾರೆ.ವರ್ಷಕ್ಕೊಮ್ಮೆ ಸ್ವಾತಂತ್ರ್ಯ ಹಬ್ಬವನ್ನು ಎಲ್ಲ ರಾಜ್ಯಗಳವರು ಒಟ್ಟಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳಿಂದ ಆಚರಿಸುತ್ತೇವೆ. ಒಟ್ಟಿನಲ್ಲಿ ಮಿನಿ ಭಾರತವೇ ಇಲ್ಲೇ ನಿರ್ಮಾಣವಾಗಿದೆ.

                 ಇಲ್ಲಿನ ಸುಲ್ತಾನ ಕಬುಸ್ ಬಿನ್ ಸೈದ್ ಭಾರತೀಯರಿಗೆ ಬಹಳ ಸಹಾಯಕಾರಿ ರಾಜ.ನಲವತ್ತು ವರ್ಷಗಳ ಹಿಂದೆ ಇವನು ಗದ್ದುಗೆಗೆ ಏರಿದಂದಿನಿಂದ ಓಮಾನಿನ ಈಗಿನ ಸ್ಥಿತಿಗೆ ಕಾರಣನಾಗಿದ್ದಾನೆ. ದೇಶದ ಮೂಳೆ ಮೂಲೆಗೂ ಉತ್ತಮ ರಸ್ತೆಗಳ ನಿರ್ಮಾಣವಾಗಿದೆ, ನಿರಂತರ ವಿದ್ಯುತ್ ಸರಬರಾಜಿದೆ. ವರ್ಷಕ್ಕೊಮ್ಮೆ ನಡೆಯುವ ಮಸ್ಕತ್ ಹಬ್ಬ ಸ್ಥಳಿಯರಿಗೆ, ವಿದೇಶಿಯರಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದು ತಿಂಗಳಿಡಿ ಉಚಿತವಾಗಿ ಒದಗಿಸುತ್ತದೆ. ರಾಜನ ಆಡಳಿತದಡಿಯು ಪ್ರಜೆಗಳಿಗೆ ಸ್ವಾತಂತ್ರ ಕೊಡಲು ಸಾಧ್ಯ ಎಂಬುದನ್ನು ತೋರಿಸಿದ್ದಾನೆ. ಸಾಮಾನ್ಯ ಜನರಿಗೂ ಭಾರತೀಯರೆಂದರೆ ಪ್ರೀತಿ. ನಾನು ಬೇಟಿಯಾದ ಒಬ್ಬ ಒಮಾನಿ ಮಹಿಳೆ ಹೇಳುತ್ತಿದ್ದಳು ಅವಳಿಗೆ ಭಾರತೀಯ ಕುಟುಂಬ, ನಾವು ಮಕ್ಕಳಿಗೆ ಕೊಡುವ ಶಿಕ್ಷಣ ಎಲ್ಲವು ಇಷ್ಟವಂತೆ. ಅವಳ ಮಕ್ಕಳಿಗೂ ಅದೇ ತರಹದ ಶಿಕ್ಷಣ ಬೇಕಂತೆ. ಮೊದಲಿಗೆ ಶಾಂತಿಯುತವಾಗಿ ಆರಂಭವಾದ ಹರತಾಲಗಳು ಕ್ರಮೇಣ ದೊಡ್ಡದಾಗುತ್ತಾ ಬಂದಿದೆ. ಮದ್ಯದಲ್ಲಿ ಕೆಲವು ಬಾರಿ ಲುಲು ಮಾರುಕಟ್ಟೆಯನ್ನು ಸುಟ್ಟರು, ಇಬ್ರಿ ಎಂಬಲ್ಲಿ ಅಲ್ಲಿನ ಶೇಖನ ಮನೆಗೆ ಬೆಂಕಿ ಇತ್ತ್ತರು. ಎಲ್ಲ ಸರಕಾರೀ, ಖಾಸಗಿ ಕಚೇರಿಯಲ್ಲೂ ಒಂದಾದ ಮೇಲೆ ಒಂದರಂತೆ ಹೆಚ್ಚಿನ ವೇತನ, ಉತ್ತಮ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಯುತ್ತಿದೆ. ಸುಲ್ತಾನರು ಮೊದಲ ವರ ಬೇಡಿಕೆಗಳಾದ ನಿರುದ್ಯೋಗ ಬತ್ಯೆ, ಕನಿಷ್ಠ ವೇತನಗಳನ್ನು ಹೆಚ್ಚಿಸಿದ್ದೆ ತಪ್ಪಯಿತೆನೂ ಎಂಬಂತೆ ದಿಡ್ನದಿಂದ ದಿನಕ್ಕೆ ಅವರ ಬೇಡಿಕೆಗಳು ಹೆಚ್ಚಾಗುತ್ತಲಿವೆ. ಮೊದಲಿಗೆ ದೇಶದ ಬ್ರಷ್ಟ ಅದಿಕಾರಿಗಳ ವಿರುಧ್ಧ ಮತ್ತು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಆರಂಭವಾದ ಚಳವಳಿ ಈಗ ದಿಕ್ಕು ತಪ್ಪ್ಪುತ್ತಿದೆ ಎನಿಸುತ್ತಿದೆ. ಪ್ರತಿಯೊಬ್ಬನು ಅವನದ್ದೇ ಒಂದು ಉದ್ದೇಶ ಸಾದನೆಗಾಗಿ ಚಳವಳಿ ಕುಳಿತಂತೆ ಕಾನುತ್ತಿದೆ. ಇನ್ಗಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೂ ಚಳವಳಿ ಮಾಡಿದರಂದೆ- ಬೇಡಿಕೆಯೆಂದರೆ ಅವರನ್ನು ಕಡಿಮೆ ಅಂಕಗಳಿಗೆ ಉತ್ತಿರ್ಣ ಮಾಡಬೇಕಂತೆ!

               ಹೀಗೆ ನಡೆದರೆ ಈ ದೇಶದಲ್ಲಿ ಬೀಡು ಬಿಟ್ಟಿರುವ ವಿದೇಶಿಯರ ಗತಿ ಏನೋ ಗೊತ್ತಿಲ್ಲ. ನಾನು ಈ ಲೆಖನವನ್ನು ಬ್ಲಾಗ್ಗರನನ್ನು ಅರ್ಥಮಾಡಿಕೊಂಡು ಮುಗಿಸುವ ಹೊತ್ತಿಗೆ ಒಮಾನಿನ ಪರಿಸ್ತಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ. ಸುಲ್ತಾನರು ಪ್ರಜೆಗಳ ಬೇಡಿಕೆಗಲನ್ನೆಲ್ಲ ಪೂರೈಸಿದ್ದಾರೆ ಎನಿಸುತ್ತಿದೆ. ಆದರೂ ಭಾರತೀಯ ಸಮುದಾಯದ ಮನಸ್ಥಿತಿ ಬದಲಾಗಿದೆ. ನೋಡೋಣ ಎಷ್ಟು ದಿನ ನಡೆಯುತ್ತದೆಂದು ಎಂಬ ಮನಸ್ಥಿತಿ ಹೆಚ್ಚಿನವರಿಗೆ ಬಂದಿದೆ ಎನಿಸುತ್ತಿದೆ. ಸ್ವದೇಶ, ಭಾಷೆ, ಜನರನ್ನೆಲ್ಲ ತೊರೆದು ಬದುಕು ಕಟ್ಟಲು ಬಂದಿರುವ ಜನರ ಅತಂತ್ರತೆ ಇಂತಹ ಪರಿಸ್ತಿತಿಯಲ್ಲಿ ಅರಿವಾಗುತ್ತದೆ. ಇಲ್ಲಿಯೇ ಹತತಿಪ್ಪತ್ತುತ್ತು ವರ್ಷ ಕಳೆದ ಜನರು ಅತ್ತ ತಮ್ಮ ದೇಶಕ್ಕೇ ಪರಕಿಯವಾಗಿ, ಇತ್ತ ಇಲ್ಲಿ ತಂಗಳು ಸಾಧ್ಯವಾಗದ  ಸ್ತಿತಿಯಲ್ಲಿರುತ್ತಾರೆ.

ಸೋಮವಾರ, ಮಾರ್ಚ್ 7, 2011

ನಾ ಕಂಡ ಈಜಿಪ್ಟ

                                     ನಮ್ಮ ಈಜಿಪ್ಟ್ ಪ್ರವಾಸ 



            ಈಜಿಪ್ಟ್- ಈಗ ಎಲ್ಲಿ  ನೋಡಿದರೂ ಈಜಿಪ್ತಿನದೇ ಸುದ್ದಿ. ನಮ್ಮ ಗಲ್ಫ್ ನ್ಯೂಸ್ ಪತ್ರಿಕೆಯಂತೂ ಪೂರ್ತಿ ಈಜಿಪ್ಟಿನ  ಕ್ರಾಂತಿಯ ಸುದ್ದಿಗಳಿಂದ ತುಂಬಿಹೊಗಿರುತ್ತದೆ. ಈಗ ಪತ್ರಿಕೆಗಳಲ್ಲಿ ಬರುವ ಈಜಿಪ್ಟಿನ ಚಿತ್ರಗಳನ್ನು ನೋಡಿದರೆ ನಾವು ಕಳೆದ ತಿಂಗಳು ನೋಡಿಬಂದಿದ್ದು ಈ ದೇಶವನ್ನೇ ಹೌದೆ ಎಂದು  ಅಚ್ಚರಿಯಾಗುತ್ತದೆ!!  ಈಗಿನ ಪರಿಸ್ತಿತಿಯನ್ನು ನೋಡಿದರೆ ಪುನಃ ಅಲ್ಲಿ ಪ್ರವಾಸಿಗರು ಹೋಗುವಂತಾಗುವುದು ಯಾವಾಗಲೋ?! ಆದ್ದರಿಂದ ಈಗ ನನ್ನ ಈಜಿಪ್ಟಿನ ಅನುಭವಗಳನ್ನು ದಾಕಲಿಸುವುದು ಅತ್ಯಂತ ಪ್ರಸ್ತುತ.
                
                 ನಾವು ಅರಬ್ಬರ ಪ್ರಪಂಚಕ್ಕೆ ಬಂದು ಐದು ವರ್ಷಗಳಿಂದಲೂ ಈಜಿಪ್ಟಿಗೆ ಹೋಗುವ ಯೋಚನೆಯನ್ನು ಮಾಡುತ್ತಲಿದ್ದೆವು. ಎರಡು ಬಾರಿ ಟಿಕೆಟುಗಳನ್ನು ಕಾದಿರಿಸಿಯೂ ನಮ್ಮ ಪ್ರವಾಸ ಕಾರಣಾಂತರಗಳಿಂದ ರದ್ದಾಗಿತ್ತು. ಆದರೆ ಈ ಬಾರಿ ಅದ್ದೂರಿಯಾಗಿ ಅಮ್ಮ, ಮಧುರಾಳ ಕುಟುಂಬದೊಂದಿಗೆ ನೆರವೇರಿತು. ೨೦೧೦ರ ಡಿಸೆಂಬರ್ ೨೬ ರಂದು ಬೆಸ್ಟ್ ವೇ ತ್ರವೆಲ್ನವರು ಮಾಡಿರುವ ವ್ಯವಸ್ಥೆಯನ್ನು ನಂಬಿ ಷಾರ್ಜಾದಿಂದ ಈಗಿಪ್ತಿನ luxor ಎಂಬ ನಗರಕ್ಕೆ ವಿಮಾನವೇರಿದೆವು. ರಾತ್ರಿ ಏರಡು ಗಂಟೆಗೆ ಚಳಿಯಲ್ಲಿ ಅಲ್ಲಿ ಇಳಿದಾಗ ನಮ್ಮನ್ನು ಕರೆದೊಯ್ಯಲು ಜನ ಕಾಯುತ್ತಿತ್ತು! ಒಂದು ಬಸ್ಸಿನಲ್ಲಿ ಒಬ್ಬ ನಮ್ಮನ್ನು ಕರೆದೊಯ್ದು. ಲಕ್ಷರ್ ಪಟ್ಟಣ ಆ ರಾತ್ರಿಯಲ್ಲಿಯೂ ಇನ್ನೂ ಮಲಗಿರಲಿಲ್ಲ. ಕ್ರಿಸಮಸ್   ಹಬ್ಬದ ವಿದ್ಯುತ್ ಅಲಂಕಾರಗಳು ಊರಿನ ಎಲ್ಲ ಕಡೆ ಪ್ರವಾಸಿಗರನ್ನು ಸ್ವಾಗತಿಸುತ್ತಿತ್ತು. ಊರು ಹಳೆಯದಾರೂ ಚೊಕ್ಕವಾಗಿತ್ತು. ನಮ್ಮನ್ನು ಕರೆದೊಯ್ಯುತ್ತಿದ್ದ ಆಸಾಮಿ  ಹಲವು ಏಟಿಎಂಗಳ ಬಳಿಯಲ್ಲಿ ನಿಲ್ಲಿಸಿ ಹಣವನ್ನು ತೆಗೆಸಿ ಸಂಪೂರ್ಣ  ಹಣ ಪಡೆದ ನಂತರ ನಮ್ಮನ್ನು  ಹಡಗಿಗೆ ಬಿಡಲಾಯಿತು. ಪ್ರೀತಿ ಮತ್ತು ಶ್ರೆಯಾರಿಗೆ ನಮ್ಮನ್ನು ಬಿಡಲು ಬಂದಿದ್ದ ಆಸಾಮಿಯ ಇಂಗ್ಲಿಶ್  ಮಾತನಾಡುವ ರೀತಿ ಸಮಯ ಕಳೆಯುವ ಮೋಜನ್ನು ಒದಗಿಸಿತು. ಅರಬ್ಬೀ ಬಾಷೆಯಲ್ಲಿ  ಅಕ್ಷರ ಇಲ್ಲದುದರಿಂದ ಇವರು ಅನ್ನು ಎಂದು ಉಚ್ಚರಿಸುತ್ತಾರೆ. ನಮ್ಮ guide ಪೀಟರ, ಬೀಟರ್ ಆಗುತ್ತಾನೆ. ಪ್ರೀತಿ ಅವುಗಳನ್ನು ಕೇಳಿ ನಗುವುದು, ಶ್ರೇಯಾ ಅವನ ಸದ್ದನ್ನು ಅನುಕರಿಸುವುದು: ನಮಗೂ ನಗುವೂ ನಗು.

ನಮ್ಮ ಕ್ರುಸಿನ ಅನುಭವ:
                    
            ಅಂತೂ ನಮ್ಮ ಹದಗಿನೊಳಗೆ  ಬಂದೆವು. ಅಲ್ಲಿನ  ಚಿಕ್ಕ, ಚಿಕ್ಕ ಕೋಣೆಗಳನ್ನು ನೋಡಿ ಸ್ವಲ್ಪ ಬೇಸರವಾದರೂ, ಮುಂದಿನ ನಾಲ್ಕು ದಿನಗಳ ಅನುಭವಗಳು ಅವನ್ನೆಲ್ಲ ಮರೆಯಿಸಿತು. ನ್ಯೇಲ್ ನದಿಯ ಮೇಲೆ ತೇಲುತ್ತ, ಅವಳ ತೀರದ ಮೇಲಿರುವ ಸ್ಮಾರಕಗಳನ್ನು ನೋಡುತ್ತಾ ನಾವು ಮೂರು ದಿನ ಕಳೆದೆವು. ಈ ಮೂರು ದಿನಗಳು ನಮ್ಮ ಜೀವನದ ಅತ್ಯತ್ತಮ್ಮ ದಿನಗಳಲ್ಲಿ ಕೆಲವು ಎನಿಸುತ್ತದೆ.  ಕೋಣೆಯ ಕಿಟಕಿಯಿಂದ ಶಾಂತವಾಗಿ ಹರಿಯುವ ನ್ಯೇಲ್ , ಪಕ್ಕದ ಹಸಿರು, ಅದರಾಚೆಗಿನ ಮರುಭೂಮಿಯ ದ್ರಶ್ಯ-ನೋಡಿದಸ್ಟೂ ಮನ ತಣಿಯುತ್ತಿರಲಿಲ್ಲ. ಮೂರು ಮಾಳಿಗೆಯ ಹಡಗಿನ ಮೇಲ್ಚಾವಾಣಿಯಲ್ಲಿ  ಒಂದು ಚಿಕ್ಕ ಈಜುಕೊಳವಿತ್ತು, ಸುತ್ತಲಿನ ನೋಟವಂತೂ ಅವಿಸ್ಮರಣೀಯ. ೭,೦೦೦ ವರುಷಗಳ ಮಾನವನ ಇತಿಹಾಸವನ್ನು ನೋಡುತ್ತಾ, ಎಲ್ಲದಕ್ಕೋ ಸಾಕ್ಷಿಯಗಿಯೂ, ತನ್ನಷ್ಟಕ್ಕೆ ತಾನು ಹರಿಯುತ್ತಿರುವ ನಯ್ಲನ್ನು   ನೋಡುವಾಗ ಮನಸ್ಸಿನಲ್ಲಿ ಹಲವು ಭಾವನೆಗಳು ಮೂಡುತ್ತಿದ್ದವು. ಅಗಲವಾಗಿ, ಶಾಂತವಾಗಿ ಹರಿಯುವ ಈ ನದಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ.  ಸಾವಿರಾರು ವರ್ಷಗಳಿಂದಲೂ ಈಜಿಪ್ಟಿನ ಜೀವನಾದಿಯಗಿರುವ ಈ ನದಿ ಇಂದಿಗೂ ಈಜಿಪ್ಟಿನ ಜನರ ಅನ್ನದಾತೆ.

ನ್ಯಲ್ನ ಮೇಲೆ ಹೋಗುತ್ತಿರುವ ವಿಹಾರಿ ಹಡಗು

ನ್ಯಲ್ನಲ್ಲಿ ಸೂರ್ಯಾಸ್ತ 


                ಲುಕ್ಷೊರ್ನಲ್ಲಿ ಹಡಗು  ಹತ್ತಿದ  ನಾವು ಅಸ್ವಾನ್ ತನಕ ಹೋಗುವವರಿದ್ದೆವು. ದಾರಿಯಲ್ಲಿ ಕರ್ನಾಕ್ ದೇವಸ್ತಾನ, ಲುಕ್ಷೊರ್ ದೇವಸ್ತಾನ, ಕೊಂ-ಒಮ್ಬೋ, ರಾಣಿ ನೆಫಾರ್ತರಿಯ ದೇವಾಲಯ, ಎದ್ಫು ದೇವಸ್ತಾನಗಳನ್ನು ನೋಡಿದೆವು.ದೊರೆಗಳ ಕಣಿವೆ (Valley of Kings) ಯನ್ನೂ  ನೋಡಿದೆವು. ಬರುತ್ತೇವೆಂದು ತಯಾರಿ ಸುರುವಾದಾಗಿನಿಂದ ಸಮಯ ಸಿಕ್ಕಾಗೆಲ್ಲ ಓದಿ ಈಜಿಪ್ಟಿನ ಬಗೆಗೆ ಒಂದು ಸ್ಥೂಲ ಕಲ್ಪನೆಯನ್ನು ಹಾಕಿಕೊಂಡು ಬಂದಿದ್ದೆ. ಈ ಸ್ಮಾರಕಗಳ ಚಿತ್ರಗಳನ್ನೂ ನೋಡಿದ್ದೇ. ಆದರೂ ಇವು ಯಾರೂ ಊಹಿಸಲೂ ಆಗದಷ್ಟು ಭವ್ಯವಾಗಿವೆ.ನಮ್ಮ ಹಿಂದೂ ಧರ್ಮದ ದೇವಸ್ತಾನಗಳಿಗೆ ಹೋಲುವ ಈ ದೇವಸ್ತಾನಗಳು ೪೦೦೦ ವರ್ಷಗಳ ಹಿಂದೆಯೇ ನಿರ್ಮಿಸಲ್ಪತ್ತಿದ್ದವು ಎಂದು ನೋಡುವಾಗ ವಿಸ್ಮಯ ಎನಿಸುತ್ತ.ದೆ. ನಮ್ಮ ದೇವಸ್ತಾನಗಳಂತೆ ಗರುಡಗಂಬ, ಗರ್ಭಗುಡಿ, ದೇವರ  ಪ್ರಥಿಮೆಗಳನ್ನೆಲ್ಲ ನೋಡಬಹುದು. ಇಲ್ಲಿನ ಅರಸರುಗಳು ಅರಮನೆಗಳ ಬದಲು ಭವ್ಯವಾದ ದೇವಾಲಯಗಳನ್ನು ಕಟ್ಟಿದ್ದಾರೆ.

                      ದೊರೆಗಳ ಕಣಿವೆ (valley of kings) ಬೆಟ್ಟಗಳ ನಡುವೆ ಇರುವ ಈ  ಜಾಗ  ಪ್ರಾಚಿನ ಈಜಿಪ್ಟಿನ ದೊರೆಗಳ ಸಮಾಧಿ ಸ್ಥಳ. ಇಲ್ಲಿ ಸಾಲಾಗಿ ಹಲವು ಖಾಲಿ ಸುರಂಗಗಳಂತಹ ಗುಹೆಗಳನ್ನು ಈಗ ನೋಡಬಹುದ. ಇಲ್ಲಿ ಪರೋಗಳನ್ನ್ನು ಮಮ್ಮಿ ಮಾಡಿ ಸಮಾಧಿ ಮಾಡಿದ್ದರು. ಆದರೆ ಆ ಸಮಾಧಿಗಳಲ್ಲಿ  ಅವರು ತುಂಬಿದ್ದ ನಿಧಿಗಾಗಿ ಹೆಚ್ಚಿನ ಎಲ್ಲ ಮಮ್ಮಿಗಳನ್ನು  ಲೂಟಿ ಮಾಡಲಾಗಿದೆಯಂತೆ. ಇಲ್ಲಿ ಸಿಕ್ಕಿದ ತುತಂಕಾಮನ್ ಎಂಬ ಬಾಲಕ ರಾಜನ ಸಮಾಧಿಯೂ ಸಂಪೂರ್ಣ ದೊರೆತ ಏಕಮಾತ್ರ ಸಮಾಧಿಯಂತೆ. ಉತ್ಕತನದಲ್ಲಿ ಸಿಕ್ಕಿದ ಈ ಬೆಲೆಬಾಳುವ ಸಾಮಗ್ರಿಗಳನ್ನು, ಮಮ್ಮಿಗಳನ್ನು ಕೈರೋದ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. 

ಕರ್ನಾಕ್ ದೇವಾಲಯದ ಸ್ಫಿನ್ಕ್ಷನ ಸಾಲು
                                         

ರಮ್ಸೆಸ್ ರಾಜನ ಪ್ರತಿಮೆಯ ಮುಂದೆ, ಕಾರ್ನಾಕ್ ದೇವಾಲಯಾ

             ಈ ಭವ್ಯ ಸ್ಮಾರಕಗಳನ್ನು ನಿರ್ಮಿಸಿದ ಈಜಿಪ್ಟಿನ ಪುರಾತನ ನಾಗರೀಕತೆ ಈಗ ಸಂಪೂರ್ಣ ನಶಿಸಿ ಹೋಗಿದೆ. ಅವರ ಧರ್ಮದ ಹೆಚ್ಚಿನ ಮಾಹಿತಿಗಳು ಈಗ ಲಭ್ಯವಿಲ್ಲ. ಈಗ ಲಭಿಸಿರುವ ಮಾಹಿತಿಗಳೂ ೧೮-೧೯ ನೇ ಶತಮಾನಗಲ್ಲಿನ ಪಾಶ್ಚಾತ್ಯ ಇತಿಹಾಸಕಾರರ ಪರಿಶ್ರಮಗಳಿಂದ. ನಮ್ಮ guide ಪೀಟರನ ಅರಬ್ ಇಂಗ್ಲಿಷನ್ನು ಅರ್ಥ ಮಾಡಿಕೊಳ್ಳುತ್ತ ಅವನು ಕೊಡುವ ವಿವರಣೆಗಳನ್ನು ಕೇಳುತ್ತ ಹಲವು ವಿಚಾರಗಳನ್ನು ತಿಳಿದೆವು. ಪುರಾತನ ಈಜಿಪ್ಟಿನ  ಜನರು ನಮ್ಮಂತೆ ಹಲವು ದೇವತೆಗಳ ಆರಾಧನೆ ಮಾದುತ್ತ್ತಿದ್ದರು. ಅಮೊನ್(ಲಕ್ಷರಿನ ದೇವ) ರಾ (ಸೂರ್ಯ ದೇವ), ಹೊರುಸ್(ರಕ್ಷಣೆಯ ದೇವತೆ), ಜಹುತಿ(ಮುಮ್ಮಿಗಳನ್ನು ಮಾಡುವಾಗ ನೆರವಾಗುವ ದೇವ), ಐಸಿಸ್ (ಎಲ್ಲ ದೇವರ ಮಾತೆ, ಇವಳಿಗೆ ಗೋವಿನ ಮುಖ)-ಇವೆಲ್ಲ ಕೆಲುವು ಪ್ರಮುಖ ದೇವತೆಗಳು. ಅಲ್ಲದೆ ನಮ್ಮಂತೆ ಗ್ರಾಮದೇವತೆಯ ಪೂಜೆಯನ್ನು  ಕಾಣಬಹುದು.ಇವರ ದೇವಸ್ತಾನಗಳ ಗೋಡೆಯ ಮೇಲೆ ರಾಜರು ದೇವರಿಗೆ  ಹಲವು ಸೇವೆಗಳನ್ನು ಅರ್ಪಿಸುತ್ತಿರುವ ಚಿತ್ರಗಳನ್ನು, ಹಲವು ರೀತಿಯ ಉತ್ಸವದ ಚಿತ್ರಗಳನ್ನೂ ಕಾಣಬಹುದು.  ಹಿಂದೂ ಧರ್ಮಕ್ಕೂ ಇವರ ಧರ್ಮಕ್ಕೋ ಹಲವು ಹೋಲಿಕೆಗಳು ಕಾಣುತ್ತವೆ. ನಮ್ಮಂತೆ ಇವರಿಗೂ ಗೋಮಾತೆ. ಭಾರತದಿಂದ ಸಾವಿರಾರು ಮೈಲುಗಳ ದೂರದಲ್ಲಿರುವ ಅಲ್ಲಿನ ಧರ್ಮಕು, ನಮ್ಮ ಸನಾತನ ಧರ್ಮಕ್ಕೂ ಹೋಲಿಕೆಯಿರುವುದು ಆಶ್ಚರ್ಯ!  ಹಿಂದೂ ಧರ್ಮ ಉಳಿದುಕೊಂಡು ಬಂದಿದೆ. ಈಜಿಪ್ಟ್ ಈಗ ಮುಸಲ್ಮಾನ ರಾಷ್ಟ್ರ. ಇಲ್ಲಿನ ೯೦% ಮಂದಿ ಮುಸಲ್ಮಾನರು. ಉಳಿದವರಲ್ಲಿ ಹೆಚ್ಚಿನವರು ಕಾಪ್ಟಿಕ್ ಕ್ರಿಸ್ತರು.
      
              
           ಭಾರತೀಯರಿಗೆ ಈಜಿಪ್ಟಿನ ಜನ ಬಹಳ ಹಾರ್ದಿಕ ಸ್ವಾಗತ ನೀಡುತ್ತಾರೆ. ನಾವು ಎಲ್ಲೀ ಹೋಗಲಿ, ನಮ್ಮನ್ನು ಕಂಡೊಡನೆ, "ಇಂಡಿಯಾ, ನಮಸ್ತೆ, ಅಮಿತಾಬ್ ಬಚ್ಚನ್" ಎಂಬ ನುಡಿಗಳು ನಮ್ಮ ಕಿವಿಗೆ ಬೀಳುತ್ತವೆ. ಹಿಂದಿ ಸಿನೆಮಾ ತಾರೆಯರ ಹೆಸರುಗಳಂತೂ ಸಾಲಾಗಿ ಬರುತ್ತಿತ್ತು. ಆದರೆ ಅಮಿತಾಬ್ ಬಚ್ಚನ್ ಮಾತ್ರ ಎಲ್ಲರಿಗೂ ತಿಳಿದಿರುವ ಮಹಾನ್ ನಟ. ಒಬ್ಬ ಈಜಿಪ್ತಿನ ಪೌರನಿಗೆ ಅಮಿತಾಬ್ ಬಚ್ಚನ್  ಧರ್ಮ ಯಾವುದೆಂದು ಬೇಕಿತ್ತು. ಅರಬ್ಬೀ ಮಿಶ್ರಿತ  ಇಂಗ್ಲಿಷಿನಲ್ಲಿ ಕಷ್ಟಪಟ್ಟು  ಅವನು ಹಿಂದುವೋ, ಮುಸಲ್ಮಾನನೋ? ಎಂದು ಕೇಳಿದ. ನಾನು ಅಮಿತಾಬ್ ಹಿಂದೂ ಎಂದಿದ್ದು ಈತನನ್ನು ಸ್ವಲ್ಪ ಪೆಚ್ಚಾಗಿಸಿತು! ಇನ್ನೊಮ್ಮೆ ನಾನು  ಮತ್ತು ಶಶಿ ಕುಡಿಯುವ ನೀರು ತರಲು ಹೋದಾಗ ಶಾಲೆಯ ಹುಡುಗಿಯರೊಂದಿಗೆ ನಮ್ಮ ಬೇಟಿಯಾಯಿತು. ಅವರಿಗೆ ನಮ್ಮೊಡನೆ ಮಾತನಾಡಲು ಭಾಷೆ ತೊಡಕಾದರೂ ಭಾರತೀಯರನ್ನು ಮಾತನಾಡಿಸುವ ಹುಮ್ಮಸ್ಸು. ಹಿಂದಿ ಸಿನೆಮಾದ ಕೆಲವು ಹೀರೋಗಳನ್ನು ನೋಡಿದ್ದಿರಾ?- ಎಂಬ ಹಲವು ಪ್ರಶ್ನೆಗಳನ್ನು ಕೇಳಿದರು, ತಾವು  ತಿನ್ನುತ್ತಿದ್ದ ಪೊಟ್ಟಣದಿಂದ ಒಂದೆರಡು ಚಿಪ್ಸುಗಳನ್ನೂ ನಮಗೆ ಕೊಟ್ಟರು. ನಮ್ಮ ಬಾಲಿವುಡ್ ಚಿತ್ರರಂಗ ಪ್ರಪಂಚದ ಎಲ್ಲ ಭಾಗಗಳಿಗೂ ಭಾರತದ ರಾಯಭಾರಿಯಾಗಿ  ಪ್ರಖ್ಯಾತವಾಗಿದೆಯಲ್ಲ ಎಂದು ನನಗೆ ಆಶ್ಚರ್ಯವಾಯಿತು. ಇಲ್ಲಿನ ಇನ್ನೊಂದು ಕಿರಿಕಿರಿಯಾಗುವ  ವಿಚಾರವೆಂದರೆ ವ್ಯಾಪಾರಗಳಲ್ಲಿ ಚರ್ಚೆ ಕುಡಿಯುವ ನೀರಿನ ಬಾಟಲಿಗೂ ಚರ್ಚೆ ಮಾಡಬೇಕಿತ್ತು! 

          ಶ್ರೇಯಾ ಹೋದಲ್ಲೆಲ್ಲ  ತನ್ನ  ಮುಗ್ಧ  ನುಡಿಗಳಿಂದ  ನಮಗೆಲ್ಲ ಒಳ್ಳೆಯ ಮನರಂಜನೆ ಒದಗಿಸುತ್ತಿದ್ದಳು. ಅಬುಧಾಬಿಗೆ ಬರುವಾಗ ದೊಡ್ದೊಪ್ಪನೆಂದರೆ ಅಳುತ್ತಿದ್ದವಳು ಈಗ  ದೊಡ್ಡಪ್ಪನ ಸ್ನೇಹಿತೆಯಾಗಿದ್ದಳು. ಪ್ರೀತಿಗೂ  ಈ  ಪ್ರವಾಸ  ಶ್ರೆಯಳಿಂದಾಗಿ ಬಹಳ  ಚಟುವಟಿಕೆಗಳಿಂದ ಕಳೆಯುತ್ತಿತ್ತು. ಅವಳ  ಆಸಕ್ತಿಯಂತೆ ಕೇಳಿದ ಈಜಿಪ್ಟಿನ ದೇವ, ದೇವತೆಯರ ಹೆಸರುಗಳನ್ನೂ ಒಂದು ಕಾಗದದಲ್ಲಿ ಬರೆಯುವ, ನೋಡಿದ ಜಾಗಗಳ ಬಗೆಗೆ ಸಾಧ್ಯವಾದ ಮಾಹಿತಿ ಕಲೆ ಹಾಕುವ ಕೆಲಸಗಳನ್ನು ಮಾಡುತ್ತಿದ್ದಳು. ಬೇರೆ ಸಮಯದಲ್ಲಿ ಶ್ರೆಯಾಳನ್ನು  ಗೊಂಬೇಯೇನೂ  ಎಂಬಂತೆ  ತನ್ನ  ಇಷ್ಟಕ್ಕನುಸಾರವಾಗಿ  ಆಡಿಸುತ್ತಿದ್ದಳು. ಅಮ್ಮ ಅವಳ ಮೊದಲ ವಿದೇಶ ಪ್ರವಾಸವನ್ನು ಮಕ್ಕಳು ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಅನುಭವಿಸುತ್ತಿದ್ದಳು. ದಿನವೂ ನೋಡಿದ ವಿಚಾರಗಳನ್ನು ಬರೆದುಕೊಳ್ಳುತ್ತಿದ್ದಳು, ಹೊಸ ವಿಚಾರಗಳ  ಬಗ್ಗೆ  ಟಿಪ್ಪಣಿ  ಮಾಡಿಕೊಳ್ಳುತ್ತಿದ್ದಳು.ಅಮ್ಮನ ಈ  ಜೀವನೋತ್ಸಾಹ ನಮಗೆ ಮಾದರಿಯಾಗಬೇಕು. ನಾನೂ, ಮಧುರಳೂ ಬಹು ದಿನಗಳ ಬಳಿಕ ನಮಗೆ ಒಟ್ಟಿಗೆ  ಕಳೆಯಲು  ದೊರಿಕದ ಸಮಯವನ್ನು ಅನುಭವಿಸಿದೆವು. ಪ್ರಸನ್ನನಿಗೆ ಸ್ವಲ್ಪ ಜ್ವರವಿದ್ದುದರಿಂದ ಎರಡು ದಿನ ಮಲಗಿರಬೀಕಾಯಿತು. ಶಶಿಗೆ ಈ ತರಹದ ಆರಾಮವೆಂದರೆ ಯಾವಾಗಲೂ ಇಷ್ಟ. ಅವನು ಅದರ ಆನಂದವನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದ.

                
                 ನಮ್ಮ ಹಡಗಿನಲ್ಲಿ  ಇದ್ದವರ  ಪೈಕಿ ಹೆಚ್ಚಿನವರು ಬಿಳಿಜನರು. ಒಂದು ಭಾರತಿಯ ದಂಪತಿಗಳು ಮುಂಬೈನಿಂದ ಬಂದವರು ನಮಗೆ ಪರಿಚಯವಾದರು. ಆದರೆ  ಸ್ಮಾರಕಗಳ ಬಳಿ ಹಲವು ಭಾರತಿಯ ಗುಂಪುಗಳು ಕಾಣಸಿಗುತ್ತಿದ್ದವು. ಒಂದು ದೊಡ್ಡ ತಮಿಳರ ಗುಂಪು ನನ್ನನ್ನು ಆಕರ್ಷಿಸಿತು. ಅವರ ಗುಂಪಿನಲ್ಲಿ ಬೇರೆ ಬೇರೆ ಕಡೆ ನೆಲಸಿರುವ ಒಂದೇ ಕುಟುಂಬದ ಸದಸ್ಯರು  ಅಮೆರಿಕದಿಂದ, ಇಂಗ್ಲೆಂಡಿನಿಂದ, ಕುವೈತಿನಿಂದ -ಎಲ್ಲ ಬಂದು ಇಲ್ಲಿ ಒಟ್ಟಾಗಿ ಈಜಿಪ್ತನ್ನು ಪ್ರವಾಸ ಮಾಡುತ್ತಿದರು.

                      
                   ನಮ್ಮ ಹಡಗಿನ ಊಟೋಪಚಾರಗಳ ಬಗೆಗೆ ಬರೆಯದೇ ನಮ್ಮ ಪ್ರವಾಸ ಕಥನವೇ ಅಪೂರ್ಣವಾಗುತ್ತದೆ. ಅಷ್ಟು ಚೆನ್ನಾಗಿತ್ತು ಅವರ ಅಡಿಗೆ ಮತ್ತು ಅದನ್ನು ಅವರು  ಪ್ರಸ್ತುತ ಪಡಿಸುತ್ತಿದ್ದ ರೀತಿ! ನಾವು  ಹೋಗುವ ಮೊದಲೇ ಹೋಗಿಬಂದ ಸ್ನೇಹಿತರು ಈಜಿಪ್ಟಿನಲ್ಲಿ ಸಸ್ಯಹಾರಿಗಳಿಗೆ ಕಷ್ಟ ಎಂದಿದ್ದರು. ಆದ್ದರಿಂದ ಊಟದ ಬಗ್ಗೆ ಸ್ವಲ್ಪವೂ ಅಪೇಕ್ಷೆಯನ್ನು ನಾವು ಇಟ್ಟು ಕೊಂಡಿರಲಿಲ್ಲ. ಆದರೆ ಇಲ್ಲಿ ಎಲ್ಲ ಪ್ರವಾಸಿಗರ ಗುಂಪುಗಳಿಗೂ ಪ್ರತ್ಯೇಕ ಮೇಜನ್ನು ನಿಗದಿಗೊಳಿಸಿದ್ದರು. ನಾವು ಪ್ರತಿ ಬಾರಿ  ಹೋದಾಗಲೂ ಅಲ್ಲಿಯೇ ಕುಳಿತುಕೊಳ್ಳಬೇಕು. ನಾವು ಮಾತ್ರ ಸಸ್ಯಾಹಾರಕ್ಕೆ  ವಿಶೇಷ ಬೇಡಿಕೆ ಕೊಟ್ಟವರೆನಿಸುತ್ತದೆ. ಆದ್ದರಿಂದ ಊಟಕ್ಕೆ ನಮ್ಮ ಮೇಜಿನ ಮೇಲೆ ಎರಡು ಸಸ್ಯಾಹಾರಿ ಬಕ್ಷ್ಯಗಳು ದಿನವೂ ನಮ್ಮನ್ನು ಕಾಯುತ್ತಿತ್ತು! ಅಲ್ಲದೆ ಸಲಾಡ್, ಸಿಹಿತಿಂಡಿಗಳು ಆರಿಸಲು ಆಗದಷ್ಟು ಬಗೆ ದಿನವೂ ಇರುತ್ತಿತ್ತು. ಊಟದ ಸಮಯವಾದೊಡನೆ ಒಬ್ಬ ಬಂದು ಹಡಗಿನ ಪ್ರತಿ ಕೋಣೆಯ ಎದುರಿಗೂ ಗಂಟೆ ಬಾರಿಸಿ ಸೂಚಿಸಿ ಹೋಗುತ್ತಿದ್ದ. ಕೂಡಲೇ ಎಲ್ಲರೂ ಊಟದ ಕೊನೆಗೆ ಧಾಳಿ! ಸಂಜೆಯ ವೇಳೆ  ಹಡಗಿನ ಮೇಲು ಚಾವಣಿಯಲ್ಲಿ ಬಿಸಿ ಬಿಸಿ ಕಾಫಿ, ಟೀ ; ಒಟ್ಟಿಗೆ ತಾಜಾ  ಕೇಕು ಬೆಣ್ಣೆ ಬಿಸ್ಕತ್ತುಗಳು. ರಾತ್ರಿಯೂ ಬಗೆ ಬಗೆ  ಮ್ರಷ್ಟಾನ್ನ ಭೋಜನ. ನಾವೆಲ್ಲರೂ ಒಟ್ಟಿಗೆ ಬಂದು ಅಲ್ಲಿ ಕುಳಿತು ಆರಾಮವಾಗಿ ಮಾತನಾಡುತ್ತ ಊಟ ಮದುತ್ತಿದುದನ್ನು ಮನಸ್ಲ್ಕು ಇನ್ನೂ ನೆನಪಿಸುತ್ತಿರುತ್ತದೆ  ದಿನ ಕಳೆದದ್ದು ಗೊತ್ತಾಗಲೇ ಇಲ್ಲ. ಕಣ್ಣಿಗೂ, ಬಾಯಿಗೂ, ಹೊಟ್ಟೆಗೂ ಹಬ್ಬ.



ಅಬು ಸಿಂಬಲ್ :

               ಕ್ರುಸಿನ ಕೊನೆಯ ದಿನ ನಮ್ಮ ಕಾರ್ಯಕ್ರಮ 'ಅಬು ಸಿಂಬಲ್ 'ನ ಬೇಟಿ. ಅಲ್ಲಿಗೆ ಹೋಗಲು ಆಸ್ವಾನ್ ನಿಂದ   ದಕ್ಷಿಣಕ್ಕೆ ೨೫೦ ಕಿ.ಮೀ. ಪ್ರಯಾಣ ಮಾಡಬೇಕಿತ್ತು. ಆ ದಾರಿಯು ಸಂಪೂರ್ಣ ಮರುಭೂಮಿಯಾಗಿರುವುದರಿಂದಲೋ , ರಕ್ಷಣೆಯ ದ್ರಿಸ್ತಿಯಿಂದಲೋ ಅಲ್ಲಿಗೆ ಒಂದು ಗುಂಪು ವಾಹನಗಳು ರಕ್ಷಣೆಯ ಸಮೇತ ದಿನಕ್ಕೆರಡು ಬಾರಿ ಮಾತ್ರ ಹೋಗುತ್ತಿತ್ತು. ನಮಗೆ ಸಂಜೆ ಐದು ಗಂಟೆಗೆ ಕೈರೋಗೆ ರೈಲು  ಹಿಡಿಯ ಬೇಕಾಗಿದ್ದುದರಿಂದ ನಾವು ಬೆಳಿಗ್ಗೆ ಮೂರು  ಗಂಟೆಯ ತಂದದೊಂದೊಗೆ ಹೊರಡಬೇಕಾಯಿತು. 'ಅಷ್ಟು ಬೇಗವಲ್ಲ!' ಎಂಬ ಚಿಂತೆಯಿಂದ ಎದ್ದು ಹೊರತು ಬಂದು ನೋಡುತ್ತೇವೆ ಏನು ನೋಡುವುದು ........ಜನರ ಉತ್ಸಾಹ ಹಬ್ಬದ ವಾತಾವರಣವನ್ನೇ ನಿರ್ಮಿಸಿತ್ತು. ಹೊರಡುವವರಿಗೆಲ್ಲ ಒಂದೊಂದು ತಿಂಡಿಯ ಪೊಟ್ಟಣ ತಯಾರಾಗಿ ಕುಳಿತಿತ್ತು. ಆ ರಾತ್ರಿಯಲ್ಲಿ ಎಲ್ಲರಿಗೂ ಬಿಸಿ ಕಾಪಿಯ ವ್ಯವಸ್ತೆಯೂ ಆಗಿತ್ತು. ಪ್ರೀತಿಗಂತೂ  ಉತ್ಸಾಹಕ್ಕೆ ಎಲ್ಲೆಯೇ ಇರಲಿಲ್ಲ.ನಮ್ಮ ಪೀಟರ್ ನಮಗೆ ಮುಂದಿನ ಜಾಗ ಕೊಡಿಸಿಲಿಕ್ಕಾಗ ಅಗತ್ಯಕ್ಕಿಂತ ಬೇಗ ಕರೆದೊಯ್ದಿದ್ದನೆಂದು ಬಸ್ಸಿಗಾಗಿ ಕಾಡು ನಾವೇ ಮೊದಲು ಹತ್ತಿದಾಗ ನಮಗೆ ತಿಳಿಯಿತು. ಬಸ್ಸು ಪೂರ್ತಿ ತುಂಬಿಸಿಕೊಂಡು ಮರುಭೂಮಿಯ ಹಾದಿಯಲ್ಲಿ ಸಾಗತೊಡಗಿತು. ನಮ್ಮ ಬಸ್ಸಿನ ಹಿಂದೆ, ಮುಂದೆ ಬಸ್ಸುಗಳ ಸಾಲು ಕಾಣುತ್ತಿತ್ತು. ಅರ್ಧ ನಿದ್ದೆಯಿಂದ ಬಂದಿದ್ದ ಜನಗಳೆಲ್ಲ ನಿದ್ದೆ ಹೋದರು. ಮದ್ಯದಲ್ಲಿ ಸೂರ್ಯೋದಯದ ದ್ರಶ್ಯ ಕಾಣತೊಡಗಿತು.....ಜನಗಳೆಲ್ಲ ಎದ್ದು ಫೋಟೋ ತೆಗೆಯ   ತೊಡಗಿದರು.  ಮತ್ತೆ ಎಲ್ಲರೂ ನಿದ್ದೆ!!

            ಅಬುಸಿಂಬಲ್ ಈಜಿಪ್ಟಿನ  ದಕ್ಷಿಣದ ತುದಿ. ಇಲ್ಲಿಂದ ಇನ್ನೂ ದಕ್ಷಿಣಕ್ಕೆ  ಹೋದರೆ ಸುಡಾನ್ ಸಿಗುತ್ತದೆ. ಭೂಮದ್ಯ ರೇಖೆಗೆ ಸಮಿಪವಾಗುತ್ತಿದುದರಿಂದ  ಇಲ್ಲಿ ಸೂಯ ಪ್ರಖರವಾಗಿ ಸೆಖೆ ಇತ್ತು. ನಾಸ್ಸೇರ್ ಸರೋವರದ ದಡದಲ್ಲಿರುವ ಎರಡು  ದೇವಸ್ತಾನಗಳು ಮಾತ್ರ ಅಧ್ಬುತವಾಗಿದ್ದವು. ರಮ್ಸೆಸ್,  ಹೊರಸ್, ಕತ್ತಲ ದೇವರು ಮತ್ತು ಐಸಿಸ್ - ಮೂರ್ತಿಗಳು, ಅವುಗಳ ಗಾತ್ರದಿಂದ ಅವಿಸ್ಮರಣೀಯ ಅನುಭವವನ್ನು ಕೊಡುತ್ತದೆ. ಮೂರು ಸಾವಿರ ವರ್ಷಗಳ ಹಿಂದೆಯೇ ಯಾವ ಆಧುನಿಕ ಸೌಲಭ್ಯಗಳ ಸಹಾಯವಿಲ್ಲದೆಯೇ ಅವಗಳನ್ನು ಕತ್ತಿರುವುದು ಆ ಪುರಾತನ ನಾಗರಿಕತೆಯ ಪ್ರಭುದ್ದತೆಯನ್ನು ತೋರಿಸುತ್ತದೆ. ಅಸ್ವಾನಿನ  ಆಣೆಕಟ್ಟು  ಕಟ್ಟುವಾಗ ಮುಳುಗಡೆಯಾಗುವ ಪ್ರದೇಶದಲ್ಲಿದ್ದ ಈ ಸ್ಮಾರಕವನ್ನು ೧೯೬೫ ರ ಸುಮಾರಿಗೆ ಈಗಿರುವ ಜಾಗದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಸಹಾಯದಿಂದ ಪುನರ್ನಿರ್ಮಾಣ ಮಾಡಿದ್ದಾರೆ. ಈ ದೇವಾಲಯಗಳ ಒಳಗೆ ಈಜಿಪ್ಟಿನ ಜನರ ಲಿಪಿಯಾದ ಹಿರೋಗ್ಲಫಿಯನ್ನು ಗೋಡೆಗಳ ಮೇಲೆಲ್ಲಾ ಕಾಣಬಹುದು. ನಮ್ಮ ಗೈಡ ಪೀಟರ್ಗೆ ಪುನಃ ಬಸ್ಸಿನಲ್ಲಿ ಜಾಗ  ಹಿಡಿಯುವ ತವಕ!
ರಾಣಿ ನೆಫಾರ್ತರಿ ದೇವಾಲಯ 

ರಮ್ಸೆಸನ ದೇವಾಲಯ 
               
ನಮ್ಮ ಮದುವೆಯ ೧೪ನೆಯ ವಾರ್ಷಿಕೋತ್ಸವವನ್ನು ಈ ಅಬುಸಿಇನ್ಬಲಿನ ಸ್ಮಾರಕಗಳ  ಬಳಿಯಲ್ಲಿ ಕಳೆದಿದ್ದು ಈ ದಿನವನ್ನು ಸ್ಮರಣೀಯವಾಗಿಸಿತು.  

ಈಜಿಪ್ಟಿನ ರಾಜಧಾನಿ ಕೈರೋ  :


      ಡಿಸೆಂಬರ್ ೨೯ರ ಸಂಜೆ ನಾವು ಆಸ್ವಾನಿನಿಂದ ಪ್ರಥಮದರ್ಜೆಯ ರೈಲಿನಲ್ಲಿ ಕೈರೋಗೆ ಪ್ರಯಾಣ ಮಾಡುವುದೆಂದು ನಿಗದಿಯಾಗಿತ್ತು. ಅದರಂತೆ ನಮ್ಮ ಹಡಗಿಗೆ ಭಾರವಾದ  ಮನಸ್ಸಿನಿಂದ ವಿದಾಯ ಹೇಳಿ ರೈಲು ನಿಲ್ದಾಣದತ್ತ ಹೊರಟೆವು. ನಾಲ್ಕೇ  ದಿನಗಳಲ್ಲಿ ಹದಗಿನೊಂದಿಗೆ ಅಲ್ಲಿನ ಸಿಬ್ಬಂದಿಗಳೊಂದಿಗೆ ಒಂದು ರೀತಿಯ ಭಾವನಾತ್ಮಕ ಸಂಭಂದ ಬೆಳೆದಿತ್ತು. ನಮ್ಮ ಇಷ್ಟು ಜನರ ಸಾಮಾನುಗಳೂ ಕಡಿಮೆಯೇನಿರಲಿಲ್ಲ. ಎಲ್ಲವನ್ನೂ ಸಾಗಿಸಿ ನಮ್ಮ ರೈಲು ಬರುವ ಜಾಗಕ್ಕೆ ಹೋಗುವಶ್ಟರಲ್ಲಿ  ಬೆವರು ಸುರಿಯುತ್ತಿತ್ತು.

          ನಮ್ಮ ಸಾಮಾನುಗಳಿಗೂ, ನಮಗೂ ಜಾಗ ಮಾಡಿ ಕುಳಿತೆವು. ಇದು ನಮ್ಮ ಭಾರತೀಯ ರೈಲಿನಂತಿರಲಿಲ್ಲ;  ಬಹಳ ಶಬ್ದ, ಕುಳುಕಾತಗಳೊಂದಿಗೆ  ಬೆಳಗ್ಗಿನ ತನಕ ಅದರಲ್ಲಿ ಕುಳಿತೆವು. ಶೌಚಾಲಯದಲ್ಲಿ ನೀರು ಇರಲಿಲ್ಲ, ಸ್ವಚ್ಚತೆಯೆಂಬ ಶಬ್ದವೇ ಇಲ್ಲಿನ ಜನರಿಗೆ ಗೊತ್ತಿಲ್ಲವೇನೂ ಎಂಬಷ್ಟು ಗಲೀಜು ಮಾಡಿದ್ದರು. ಅಂತೂ ಎರಡು ಗಂಟೆ ತಡವಾಗಿ ನಾವು ಕೈರೋ ತಲುಪಿದೆವು. ಕೈರೋ ಹತ್ತಿರುವಾಗುತ್ತಿದಂತೆ ನಮಗೆ  ಬಡತನದ, ಅಸೌಚ್ಯದ ಅರಿವು ಆಗಿತ್ತು. ನಾವು ಹಡಗಿನಲ್ಲಿ ತಿರುಗುವಾಗ  ಸ್ಮಾರಕಗಳ ವೀಕ್ಷಣೆಗೆ ಮಾತ್ರ ಹೊರಗೆ ಹೋಗುತ್ತಿದೆವು. ಆದ್ದರಿಂದ ಇಲ್ಲಿನ ಜನರ ಜೀವನ ಮಟ್ಟದ ಅರಿವು ಆಗಿರಲಿಲ್ಲ. ಮತ್ತ್ತು ದಕ್ಷಿಣ ಈಜಿಪ್ಟಿನ ಊರುಗಳು ಹಳೆಯದಾದರೂ ಸ್ವಚ್ಚವಾಗಿತ್ತಿದ್ದರು. ಊರುಗಳಲ್ಲಿ ಹಳೆಯ ವಾಹನಗಳನ್ನು ನೋಡಿ, ಎಂಬತ್ತರ ದಶಕದ ಭಾರತದಂತಿದೆ ಎಂದು ಮಾತನಾಡಿದ್ದೆವು. ಆದರೆ ಕೈರೋ ನೋಡಿದರೆ ಇವರು ಸ್ವತಂತ್ರ ಪೂರ್ವ ಭಾರತದ ಸ್ಥಿತಿಯಲ್ಲೂ ಇಲ್ಲ ಎನಿಸಿತು. ರಾಜಧಾನಿಯಾದ ನಗರದ ಒಂದು ಕಟ್ಟಡಕ್ಕೂ ಸುಣ್ಣ ಬಣ್ಣವಿಲ್ಲ, ಸಿಮೆಂಟಿನ ಗಾರೆಯೂ ಇಲ್ಲ. ಇಡಿ ಊರೇ   ಹಾಳು ಸುರಿಯುತ್ತಿತ್ತು.

          ನಮಗೆ ನಿಗದಿಗೊಳಿಸಿದ  ಕ್ಯಟರಾಕ್ಟ್  ಹೋಟೆಲಿನಲ್ಲಿ ಸಾಮಾನುಗಳನ್ನು ಇಟ್ಟು, ನಿತ್ಯಕರ್ಮಗಳನ್ನು  ಮುಗಿಸಿ, ಕೈರೋದಲ್ಲಿ ನಮಗೆ  ನಿಗದಿಯಾಗಿದ್ದ ಗೈಡ್ ಅಶ್ರಫನೊಂದಿಗೆ ನಾವು ಖಾತರದಿಂದ ಕಾದಿದ್ದ ಪಿರಮಿಡ್ಡುಗಳನ್ನು ನೋಡಲು ಹೋದೆವು. ನಾವು ಬೆಳಗ್ಗಿನಿಂದ ಏನೂ ತಿಂದಿರಲಿಲ್ಲ. ಭಾರತಿಯ ಊಟಕ್ಕೆ ಕರೆದೊಯ್ಯಲು ಅಶ್ರಫ್ನಿಗೆ ಹೇಳಿದೆವು.ತಾಜಮಹಲ್ ಗೆ ಕರೆದೊಯ್ದ ಭಾರತಿಯ ಮೂಲದ ಈಜಿಪ್ತಿನವರು ನಡೆಸುತ್ತಿದ್ದ ಈ ಖಾನಾವಳಿಯಲ್ಲಿ ಸ್ವಲ್ಪ ದುಬಾರಿಯೇನಿಸಿದರೂ ನಮಗೆ  ಭಾರತಿಯ ಊಟ, ಅದೂ ಸಸ್ಯಾಹಾರ ಸಿಕ್ಕಿತು. ಶ್ರೇಯಾ ನಿದ್ದೆ ಮಾಡಿದ್ದಳು. ಅವಳಿಗೆ ಊಟ ಕಟ್ಟಿಸಿ, ನಾವೆಲ್ಲಾ ತಿಂದು, ಪಿರಮಿಡ್ಡು ನೋಡಲು ತೆರಳಿದೆವು. ದಾರಿಯಲ್ಲಿ ಕಟ್ಟಡಗಳ ಸಂದಿಯಲ್ಲಿ ಪಿರಮಿಡ್ಡು ಕಂಡಾಗಲೆಲ್ಲ ರೋಮಾಂಚನ. ಚಿಕ್ಕಂದಿನಿಂದ ಚಿತ್ರಗಳಲ್ಲಿ ನೋಡಿದ,  ಅದರ ಬಗೆಗೆ ಕೇಳಿದ,  ಪಿರಮಿಡ್ಡುಗಳನ್ನು ಕಣ್ಣಾರೆ ನೋಡಲು ಹೂಗುತ್ತಿದೇವೆ; ಆದೂ ಅಕ್ಕ ತಂಗಿಯರ ಪರಿವಾರ ಒಟ್ಟಾಗಿ, ಅಮ್ಮನೊಂದಿಗೆ!!

                  ಪಿರಮಿಡ್ಡುಗಳ ಸಮೂಹದ ದ್ವಾರಕ್ಕೆ ನಮ್ಮ ವಾಹನ ನಿಂತುಕೊಂಡಿತು. ಆದರೆ ನಾವು ಎಣಿಸಿದಂತೆ ಪಿರಮಿಡ್ಡುಗಳು  ಮರುಭೂಮಿಯ ಪಕ್ಕದಲ್ಲಿ ಇರದೇ ಈ ಸ್ಮಾರಕದ ಪಕ್ಕದ ತನಕವೂ ಊರನ್ನು ಎದ್ವಾ ತದ್ವಾ ಕಟ್ಟಿದ್ದಾರೆ. ಟಿಕೇಟು ಪಡೆದು   ಪಿರಮಿಡ್ಡುಗಳ ಎದುರಿಗೆ ಬಂದೆವು. ಮೂರು ಪಿರಮಿಡ್ಡುಗಳ ಈ ಸಮುಚ್ಚಯ ಮಾನವ ನಿರ್ಮಿತ ಅತ್ಯಂತ ಹಳೆಯ ಸ್ಮಾರಕ.ಅಷ್ಟು ವರ್ಷಗಳಿಂದ ಮಾನವ ಇತಿಹಾಸದ ಎಲ್ಲ ಆಗು ಹೋಗುಗಳಿಗೂ ಸಾಕ್ಷಿಯಾಗಿ ಹಾಗೆಯೇ ನಿಂತಿವೆ. ಪ್ರಾಚೀನ ಈಜಿಪ್ಟಿನ ಪರೋಹಗಳಾದ ಕಫ್ರೆ , ಮನ್ಕಾಉರೆ ಮತ್ತು ಕುಫು -ಇವರ ಪಿರಮಿಡ್ಡುಳು ಇಲ್ಲಿವೆ .
                
               ಪಿರಮಿಡ್ಡುಗಳೆಂದರೆ ಈಜಿಪ್ಟಿನ ಜನರ ಸಮಾಧಿ.ಪ್ರಾಚೀನ ಈಜಿಪ್ಟಿನ ಜನರ ನಂಬಿಕೆಯಂತೆ ಒಬ್ಬ ಮನುಷ್ಯನಿಗೆ  ಸಾವಿನ ನಂತರ ಹೊಸ ಜೀವನ ಸಿಗುತ್ತದೆ; ಆ ಮುಂದಿನ ಜೀವನಕ್ಕೆ ಈ ದೇಹದ ಅಗತ್ಯವಿದೆ; ಆದ್ದರಿಂದ ಈ ದೇಹವನ್ನು ರಕ್ಷಿಸಬೇಕು.  ಪಿರಮಿಡ್ಡುಗಳ  ಒಳಗೆ ಹಲುವು ಕೋಣೆಗಳನ್ನು  ನಿರ್ಮಿಸಿ ಅದರಲ್ಲೆಲ್ಲ ಇನ್ನೊಂದು  ಜೀವನಕ್ಕೆ ಅಗತ್ಯವಾದ ಸಾಮಾನುಗಳನ್ನೆಲ್ಲ ಜೋಡಿಸಿ ಇಟ್ಟಿದ್ದರಂತೆ. ಅವರ ವಿಜ್ಞಾನ ಎಷ್ಟು ಮುಂದುವರಿದಿತ್ತೆಂದರೆ ಇನ್ನೂ ಆತಿ ದೊಡ್ಡ ಪಿರಮಿಡ್ಡಿನ  ಒಂದು ಬಾಗವನ್ನು ಮಾತ್ರ ಅದ್ಯಯನ ಮಾಡಲು ಸಾದ್ಯವಾಗಿದೆಯಂತೆ.

                   ಅತಿಚಿಕ್ಕ ಪಿರಮಿಡ್ಡು  ಮ್ಯನ್ಕುರೆಯದ್ದು. ನಾವು ಮತ್ತೊಂದು ಟಿಕೇಟು ಖರೀದಿಸಿ ಅದರೊಳಗೆ ತೆವಳಿಕೊಂಡು ಹೋಗಿಬಂದೆವು. ಅಮ್ಮ. ಮಧುರ ಮತ್ತು ಶ್ರೇಯಾ ಹೊರಗಡೆಯೇ ಉಳಿದರು. ಒಳಗಡೆ ಕಾಲಿ ಕೋಣೆಗಳನ್ನು ನೋಡಿ ಬಂದೆವು.  ಹೆಚ್ಚಿನ ಪಿರಮಿಡ್ಡುಗಳ ಒಳಗಿದ್ದ ಸೊತ್ತನ್ನೆಲ್ಲ ಜನರು ಲೂಟಿ ಮಾಡಿಯೇ ಖಾಲಿ ಮಾಡಿದ್ದರಂತೆ. ಸಿಕ್ಕಿದವುಗಳನ್ನು ಕೈರೋ ವಸ್ತು ಸಂಗ್ರಹಾಲಯದಲ್ಲಿ ಇಟ್ಟಿದ್ದಾರೆ.

                        ಜಗತ್ವಿಖ್ಯಾತ ಸ್ಪಿಂಕ್ಸ್ ಕೂಡ ಇದೇ ಸಮುಚ್ಚ್ಲ್ಲಯದಲ್ಲಿದೆ. ಐದು ಗಂಟೆಗೆ ಈ ಸ್ಮಾರಕಗಳ ಒಳ ಪ್ರವೇಶ ನಿಲ್ಲಿಸುವುದರಿಂದ  ಬಹಳ ಜನಸಂದಣಿ ಇತ್ತು. ಪ್ರಪಂಚದ ಹಲುವು ಮೂಲೆಗಳಿಂದ ಬಂದ ಜನ ಎಲ್ಲಿ ತಮಗೆ ತಪ್ಪಿ ಹೋಗುವುದೋ ಎಂದು ನುಗ್ಗುತ್ತಿದ್ದರು. ನಾವೂ ನುಗ್ಗಿದೆವು, ನೋಡಿದೆವು. ಒಬ್ಬ ಪರೋಹನ ಮುಖ, ಸಿಂಹದ ದೇಹದ ಸ್ಪಿಂಕ್ಸ್ ಇದಾವುದನ್ನೂ ಲೆಕ್ಕಿಸದೆ, ೫೦೦೦ ವರ್ಷಗಳಿಂದ ಹಾಗೆಯೇ ನಿಂತಿದ್ದ! ಸ್ಮಾರಕಗಳ ಬಳಿಯಲ್ಲೆಲ್ಲ ಮಾರಾಟ ಮಾಡುವವರ ಬರಾಟೆ, ಚರ್ಚೆ , ಖರೀದಿ -ಎಲ್ಲವೂ ನಡೆದಿತ್ತು. ನಾನೂ  ಕೆಲವು  ವಸ್ತುಗಳ ಖರೀದಿ ಮಾಡಿದೆ. ಅಲ್ಲಿನ ರಕ್ಷಣಾ ಸಿಬಂದಿಗಳು ಸಮಯವಾದೊದನೆ ಜನರನ್ನು ಸ್ಮಾರಕದಿಂದ ದೂರ ಓಡಿಸುವ ಕೆಲಸದಲ್ಲಿ ನಿರತರಾದರು. ನಾನು ಒಬ್ಬನೊಡನೆ ಸ್ವಲ್ಪ ವಾದವನ್ನೂ ಮಾಡಿದೆ, ಪ್ರಪಂಚಡಾದ್ಯಂತದಿಂದ ನಿಮ್ಮ ಸ್ಮಾರಕಗಳನ್ನು ನೋಡಲು ಬರುವ ಜನರಿಗೆ ಅದನ್ನು ಕಣ್ತುಂಬ ನೋಡಲೂ ಬಿಡದೆ ಓಡಿಸುತ್ತಿರುವಿರಲ್ಲ ಎಂದು. ಸಂಜೆ ೭.೩೦ಗೆ ಪಿರಮಿಡ್ಡು ಮತ್ತು ಸ್ಪಿಂಕ್ಸ್ನ ಇದಿರು ದ್ವನಿ ಮತ್ತು ಬೆಳಕಿನ ಪ್ರದರ್ಶನವಿತ್ತು. ಚಳಿಯಲ್ಲಿ ಕುಳಿತು ನೋಡಿದೆವು. ಆದರೆ ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಅದು ಇರಲಿಲ್ಲ.

                                   ಕೈರೋದ ಪ್ರಾಚ್ಯ ವಸ್ತು ಸಂಗ್ರಹಾಲಯ  ನೋಡಿದ್ದು ಒಂದು ಒಳ್ಳೆಯ ಅನುಭವ. ಇಲ್ಲಿ ತುತನ ಕಾಮನ್  ಸಮಾಧಿಯಲ್ಲಿ  ದೊರೆತ ಎಲ್ಲ ವಸ್ತುಗಳನ್ನು ಇಡಲಾಗಿದೆ.ಆ ಚಿನ್ನದ ವಸ್ತುಗಳ ಕರಕುಶಲತೆ ಅವರ ಪ್ರಾಚೀನ ಜನರ ನಾಗರಿಕತೆಯ ಪ್ರೌಡಿಮೆಯನ್ನು ತೋರುತ್ತದೆ. ಈ ಸಂಗ್ರಹಾಲಯದ ಮಮ್ಮಿಗಳ ಕೋಣೆ ಅತ್ಯಾಕರ್ಷಕವಾದ ಜಾಗ. ಆದ್ದರಿಂದ ಅದರೊಳಗೆ ಹೋಗಬೇಕಾದರೆ ಇನ್ನೊದು ಟಿಕೇಟು ಪಡೆಯಬೇಕು.ನಾವು ಪರವಾಗಿಲ್ಲವೆಂದು ಅದನ್ನು ಖರಿದಿಸಿ ಒಳಗೆ ಹೋದೆವು. ಸಾಲಾಗಿ ಮಲಗಿಸಿದ ಮಮ್ಮಿಗಳನ್ನು ನೋಡಿ ವಿಚಿತ್ರ ಭಾವನೆಯುಂಟಾಯಿತು. ಮಮ್ಮಿ ಎಂದರೆ ರಕ್ಷಿಸಿ ಇತ್ತ ಮೃತ ಶರೀರ. ರಾಜ ರಮ್ಸೆಸ್, ಕುಫು , ಮನ್ಕುರೆ.......ಇತ್ಯಾದಿಗಳ ಮಮ್ಮಿಗಳಿದ್ದವು. ಕೆಲವು ಸಾಕು ಪ್ರಾಣಿಗಳ ಮಮ್ಮಿಗಳೂ ನೋಡಸಿಕ್ಕಿದವು. ಸಾವಿನಾಚೆಗಿನ ಜೀವನದ  ಬಗೆಗಿನ ಮಾನವನ ಪ್ರಶ್ನೆಗಳು ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಮುಂದುವರಿದ ವಿಜ್ಞಾನವೂ  ಈ ನಿಟ್ಟಿನಲ್ಲಿ ಏನೂ ಸಹಕಾರಿಯಾಗಲಿಲ್ಲ.

ಅಲೆಕ್ಸಾಂಡ್ರಿಯಾ :

           ಈಜಿಪ್ಟಿನ  ಉತ್ತರದ ತುದಿಯ ನಗರ. ಅಲೆಕ್ಸಾಂಡರ್, ಗ್ರೀಕ್ ದೊರೆ ಕ್ರಿ. ಪೂ. ೩೫೦ ರಲ್ಲಿ ಈಜಿಪ್ಟಿನ ಮೇಲೆ ಯುಧ್ದ ಮಾಡಿ ವಶಪಡಿಸಿಕೊಂಡಾಗ ಕಟ್ಟಿದ ನಗರ. ಅಂದಿನಿಂದ ಈಜಿಪ್ಟಿನ ಪ್ರಮುಖ ನಗರವಾಗಿರುವ  ಇದು ನಮ್ಮ ಪ್ರವಾಸದ ಕೊನೆಯ ತಾಣ. ಕೈರೋದಿಂದ ೨೫೦  ಕಿ. ಮೀ. ದೂರದಲ್ಲಿರುವ ಈ ನಗರವನ್ನು ಮೂರು ಗಂಟೆಗಳ ಪ್ರಯಾಣದಲ್ಲಿ ಸೇರಿದೆವು.

        ಅಶ್ರಫ್ ನಮ್ಮೊಂದಿಗೆ ಬಂದಿದ್ದ. ದಾರಿಯಲ್ಲಿ ಈಜಿಪ್ಟಿನ ರಾಜಕೀಯದ ಬಗೆಗೆ ಅವನ ಅಭಿಪ್ರಾಯಗಳನ್ನು, ಅಸಮಾಧಾನಗಳನ್ನು ಹೇಳುತ್ತಾ ಬಂದ. ಇವನು ಪಿಟರನಿಗಿಂತ ಒಳ್ಳೆಯ ಗಯ್ದ್ .ನಾವು ಹಾಡುತ್ತ, ಶ್ರೆಯಾಳನ್ನು  ಮನರಂಜಿಸುತ್ತ  ದಾರಿ ಕಳೆದೆವು.
                
               ಮೆಡಿತರೆನಿಯನ್ ಸಮುದ್ರ ತೀರದಲ್ಲಿರುವ ಈ ನಗರ ಸುಂದರವಾಗಿದೆ. ಅವತ್ತು ಅಲ್ಲಿ ಮೋಡವಾಗಿ ಸಣ್ಣ ಮಳೆ ಹನಿ ಬಿಳುತ್ತಿದುದು ನಮ್ಮ ತಿರುಗಾಟಕ್ಕೆ ಅನುಕೂಲವಾಯಿತು., ಇಲ್ಲಿ ಕಾಪ್ಟಿಕ್ ಕ್ರಿಸ್ತರ ಹಳೆಯ ಚರ್ಚನ್ನು, ಯಹೂದಿಗಳ ಸಿನೆಗಾಗ್ನ್ನೂ ನೋಡಿದೆವು. ಎಲ್ಲ ಕಡೆಯೂ ಅಶ್ರಾಫ್ ಹಣ ಕೊಡುತ ನಮ್ಮನ್ನು ಕರೆದೊಯ್ಯುತ್ತಿದ್ದ. ಎಲ್ಲ ಕಡೆ ಬಹಳ ಭದ್ರತಾ ಸಿಬಂದಿಗಲಿದ್ದುದು ಕಾಣುತ್ತಿತ್ತು. ಕಡೆಗೆ ನಮಗೆ ಅಶ್ರಾಫ್  ಹೇಳಿದ ಅಲ್ಲಿ ಹಿಂದಿನ ರಾತ್ರಿ ಹೊಸವರ್ಷದ ಆಚರಣೆಯಲ್ಲಿದ್ದ ಕ್ರಿಸ್ತ  ಚರ್ಚಿನಲ್ಲಿ ಬಾಂಬುಸ್ಪೋಟಗೊಂಡು ಹಲವು ಸಾವು  ನೋವುಗಳಾಗಿತ್ತಂತೆ
                    
                     ಹೀಗೆ ನಮ್ಮ ಈಜಿಪ್ಟ್ ಪ್ರವಾಸ ಕೊನೆಯ ಹಂತ ತಲುಪಿತು. ರಾತ್ರಿ ರಾಡಿಸನ್ ಬ್ಲೂ ಹೋಟೆಲಿನಲ್ಲಿ ತಂಗಿ ಬೆಳಿಗ್ಗೆ ಮರಳಿ ಹೋಗಲು ವಿಮಾನ ನಿಲ್ದಾಣಕ್ಕೆ ಹೋದೆವು. ಇಲ್ಲಿ ಸಾಮಾನು ತೆಗೆದುಕೊಂದು ಹೋಗಲು ಇಟ್ಟಿದ್ದ ಕೈಗಾಡಿಗಳು  ತುಕ್ಕು ಹಿಡಿದು ಮುರಿದು ಹೋಗಿದ್ದವು. ಇವನ್ನೆಲ್ಲ ನೆನಸಿಕೊಂಡರೆ ಅಲ್ಲಿ ಇಷ್ಟು ವರ್ಷ ಕ್ರಾಂತಿ ಮಾಡದೆ ಅನ್ಯಾಯಗಳನ್ನು ಜನರು ಸಹಿಸಿದ್ದೆ ಆಶ್ಚರ್ಯವೆನಿಸುತ್ತದೆ. ಅಲ್ಲಿ ವಿಮಾನವೇರಿ ಮೂರೂ ಗಂಟೆಗಳ ಪ್ರಯಾಣದ ನಂತರ ಶಾರ್ಜಾದಲ್ಲಿ  ಇಳಿಯಿತು. ಇಲ್ಲಿಗೆ ಅಮ್ಮ, ಮಧುರ, ಪ್ರಸನ್ನ ಮತ್ತು ಶ್ರೇಯಾಗೆ ನಾವು ವಿದಾಯ ಹೇಳಬೇಕಿತ್ತು. ಅಮ್ಮ ತುಂಬಾ ಭಾವುಕಳಾಗಿದ್ದಳು. ನನಗೆ ಬೇಸರವೆನಿಸಿದರೂ ಇಷ್ಟು ದಿನ ಒಟ್ಟಿಗೆ ತಿರುಗಾಡಿದ ಸಂತೋಷ ಮನದಲ್ಲಿ ಹಸಿರಾಗಿತ್ತು. ಭಾರವಾದ ಮನಸ್ಸಿನಿಂದ ಎಲ್ಲರನ್ನೂ ಬಿಳ್ಕೊಟ್ಟು  ನಮ್ಮ ದಾರಿ  ಹಿಡಿದೆವು. ಒಂದು   ಕ್ರಾಂತಿಯ  ಮುನ್ನ  ನಾವು  ಮಾಡಿಬಂದ ಈ  ಪ್ರವಾಸವು ಬಹುಕಾಲ  ನಮ್ಮ  ನೆನಪಿನಲ್ಲಿರುವುದು ಮಾತ್ರ ಖಂಡಿತ.

ಸೋಮವಾರ, ಫೆಬ್ರವರಿ 7, 2011

ನಾನೂ ಬ್ಲಾಗ್ ಆರಂಭಿಸಿದೆ

ಬಹುದಿನಗಳಿಂದ ಬ್ಲಾಗ್ ಮಾಡಬೇಕೆಂದು ಹೆಣಗುತ್ತಿದ್ದೆ. ಆದರೆ ಹೇಗೆ ಮಾಡಬೇಕೆಂದು ತಿಳಿಯುತ್ತಿರಲಿಲ್ಲ. ನಿನ್ನೆ ಮಧುರ ಬ್ಲೋಗ್ಗೆರನ ವಿಷಯ  ಹೇಳಿದಳು. ನನ್ನ ಬ್ಲಾಗ್ ಶುರುವಾಯಿತು.ಬರವಣಿಗೆ ಆರಂಬಿಸಬೇಕೆಂಬ ನನ್ನ ಆಸೆಯೂ ಇಲ್ಲಿಂದ ಆಗಬಹುದು ಎನ್ನುವುದು ನನ್ನ ಆಶಯ. ನೋಡೋಣ ಎಷ್ಟೆಲ್ಲಾ  ಬರೆಯುತ್ತೇನೆಂದು!


         ಐದು ವರ್ಷಗಳಾಯಿತು ನಾವು ಭಾರತ ಬಿಟ್ಟು ವಿದೇಶಕ್ಕೆ ಬಂದು. ನಮ್ಮ ಜೀವನದ ಗತಿಯೇ  ಬದಲಾಗಿದೆ. ಸೌದಿ  ಅರೇಬಿಯ, ಒಮಾನ್, ಸ್ಪೇನ್, ಅಬುಧಾಬಿ....ಹೀಗೆ ತಿರುಗಿದ ದೇಶಗಳ ಪಟ್ಟಿ ಉದ್ದ ಇದೆ. ಹಾಗೆ ಈ ತಿರುಗಾಟಗಳು ಕೊಟ್ಟ ಅನುಭವಗಳೂ ಬಹಳ. ಅಲ್ಲದೆ ನನ್ನ ಮಿತ್ರನಂತಿದ್ದ  ನನ್ನ ತಂದೆ ನಮ್ಮನ್ನು ಅಗಲಿದ್ದು ಈ  ಸಮಯದಲ್ಲಿಯೇ. ಆ ಘಟನೆ ನಾನು ಜೀವನವನ್ನು ನೋಡುವ ರೀತಿಯನ್ನು ಬದಲಿಸಿತು. ಅನಾಥ ಪ್ರಜ್ಞೆ  ನನ್ನನ್ನು ಯಾವಾಗಲೂ ಕಾಡುತಿರುತ್ತದೆ, ಜೀವನದ ನಶ್ವರತೆ ಸರಿಯಾಗಿ ಅರಿವಾಗಿದೆ. ಇಡಿದಿನ ನನ್ನ ಮನಸ್ಸಿನಲ್ಲಿ ಮೂಡುವ ನೂರು ಭಾವನೆಗಳನ್ನು ಎಲ್ಲಾದರೂ ಹೊರಹಾಕುವ ಒಂದು ವೇದಿಕೆಯಾಗಿ ಈ ಬ್ಲಾಗು ನನಗೆ ಸಹಕಾರಿಯಾಗಬಹುದು  ಎನಿಸುತ್ತದೆ.


        ಜೀವನವು ನನಗೆ ಒದಗಿಸಿದ ಅನುಭವಗಳನ್ನು ಒಂದು ಕಡೆ ದಾಕಲಿಸಿದರೆ ನನ್ನ ಮಗಳೂ ಯಾವಾಗಲಾದರೂ ಓದಿಯಾಳು. ಈ ನಿಟ್ಟಿನಲ್ಲಿ ಅವಳು ಸ್ವಲ್ಪ ಕನ್ನಡ ಓದುವಳು-ಎಂಬ ಆಶಯವೂ ಈ ಬ್ಲಾಗನ್ನು ಮಾಡಿದ ಒಂದು ಉದ್ದೇಶ.ನಾನು ಏನೂ ಮಾಡದೇ ದಿನಗಳನ್ನು ಕೊಲ್ಲುತ್ತಿದ್ದೇನೆ ಎಂಬ ನನ್ನ ಕೊರಗು ಸ್ವಲ್ಪ ಮಟ್ಟಿಗಾದರೂ ಇದರಿಂದ ದೂರವಾಗಬಹುದು. ಹೀಗೆ ಇಂದು ಆರಂಭವಾದ ಸುಧಕ್ಕನ ಬ್ಲಾಗು ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ ಎಂದು ನನಗೆ ನಾನೇ ಹಾರೈಸಿಕೊಳ್ಳುತ್ತೇನೆ.