ಭಾನುವಾರ, ನವೆಂಬರ್ 27, 2011

ಸೌದಿಯಲ್ಲಿ ನಾವು-೨ ನನ್ನ ಸಂಗೀತ ತರಗತಿಯ ಅನುಭವ


ಇಲ್ಲಿಗೆ ಬಂದು ಮಗಳಿಗೆ ನಮ್ಮ ಕಲೆ ಸಂಸ್ಕ್ರತಿಯ ಪರಿಚಯ ಮಾಡಿಸಬೇಕೆಂದು ನಿರ್ಧರಿಸಿ ಬಂದಿದ್ದ್ದೆ ನಾನು. ಇಲ್ಲಿ ಬಂದು ನೋಡಿದರೆ ಏನು ನೋಡುವುದು?! ಇಲ್ಲಿನ ಜನ ಜೀವನ ಧರ್ಮದ ಸುತ್ತಲೇ ಸುತ್ತುತ್ತಿದೆ. ಹೆಂಗಸರು ಸಂಪೂರ್ಣ ಕಪ್ಪು ವಸ್ತ್ರಗಳದಿಯಲ್ಲಿ ಕರಗಿ ಹೋಗಿದ್ದಾರೆ, ಅವರಿಗೆ ಹೊರಗಿನ ಗಾಳಿ ಕೂಡ ಸೋಕುವುದಿಲ್ಲ; ಮನೆಯ ಹೊರ ಚಾವಡಿಗೆ ಬರಬೇಕಾದರೆ  ತಲೆಯನ್ನೆಲ್ಲ ಮುಚ್ಚಿಕೊಂಡು ಬರಬೇಕು. ಇಲ್ಲಿ ಮನಸ್ಸಿಗೆ ಸಂತಸ ಕೊಡುವ ಸಂಗೀತ ನ್ರತ್ಯಗಳು ಕಾನೂನು ಬಾಹಿರ ಚಟುವಟಿಕೆಗಳು. ಅವನ್ನು ಬಹಿರಂಗವಾಗಿ ಇನ್ನೊಬ್ಬರ ಎದುರು ಪ್ರದರ್ಶಿಸುವುದು, ಹೇಳಿಕೊಡುವುದು ನಿಶಿದ್ದ.

ದೈರ್ಯ ಮಾಡಿ ನನ್ನೊಬ್ಬಳು ಗೆಳತಿಯೊಡನೆ ನಾನು ತಕ್ಕ ಮಟ್ಟಿಗೆ ಸಂಗೀತ ನ್ರತ್ಯಗಳನ್ನು ಕಲಿತಿರುವುದಾಗಿ ತಿಳಿಸಿದೆ. ನಮ್ಮ ಮಿತ್ರ ಸಮೂಹದಲ್ಲೆಲ್ಲ ವಿಚಾರ ತಿಳಿಸಿದಳು.ಸೌದಿ ಅರೇಬಿಯದಲ್ಲಿ ಉದ್ಯೋಗದ ಅನಿವಾರ್ಯತೆಯಿಂದ ವರ್ಷಾನುಗಟ್ಟಲೆ ಇರುವ ಭಾರತೀಯರು  ಸಾಂಸ್ಕ್ರತಿಕ ಹಸಿವೆಯಿಂದ ಬಳಲುತ್ತಿರುತ್ತಾರೆ. ನನ್ನ ವಿದ್ಯೆಯ ಬಗೆಗೆ ತಿಳಿದಿದ್ದೆ ತಡ ಮಕ್ಕಳಿಗೆ ಕಳಿಸಿಕೊಡುವಂತೆ ಭಾರತಿಯ ಸಮುದಾಯದಿಂದ ಕೋರಿಕೆಗಳು ಬರಲು ಆರಂಭವಾಯಿತು. ಒಬ್ಬಳು ತನ್ನ ಮಗಳನ್ನು ಕರೆದುಕೊಂಡು ಬಂದು ಅವತ್ತು ಒಳ್ಳೆಯ ದಿನ ತರಗತಿ ಆರಂಭಿಸು ಎಂದು ಹಠ ಹಿಡಿದಳು. ನನ್ನ ಸಂಗೀತ ತರಗತಿ ಇಬ್ಬರು ವಿದ್ಯಾರ್ಥಿಗಳೊಡನೆ ಆರಂಭವಾಯಿತು.

ತರಗತಿಯನ್ನು ಆರಂಭಿಸಿದ್ದೇನೋ ಆಗಿತ್ತು. ಆದರೆ ಭಯ ನನ್ನನ್ನು ಕಾಡುತ್ತಿತ್ತು. ಕೆಲವು ಸ್ನೇಹಿತೆಯರು ಇಲ್ಲಿ ಮೊದಲು ಇಂತಹ ತರಗತಿಗಳನ್ನು ಆರಂಭಿಸಿ, ಉಟ್ಟ ಬಟ್ಟೆಯಲ್ಲಿ ಭಾರತಕ್ಕೆ ಹೋಗಬೇಕಾದ ಪರಿಸ್ತಿತಿಯನ್ನು ತಂದುಕೊಂಡವರ  ಕಥೆಯನ್ನು ಹೇಳಿದಳು. ನನಗಂತೂ ಜೀವವೇ ಕೈಗೆ ಬಂದಂತಾಯಿತು. ಸುಮ್ಮನೆ ನಗೆಕೆ ಈ ಉಸಾಬರಿ ಎಂದು ತರಗತಿಯನ್ನು ನಿಲ್ಲಿಸುವ ಯೋಚನೆ ಮಾಡಿದೆ.ಆದರೆ ನನ್ನ ಸ್ನೇಹಿತೆಯರು ಒಪ್ಪಲಿಲ್ಲ, ಶಶಿ ಬಹಳ ದೈರ್ಯ ಹೇಳಿದ. ಹುಚ್ಚು ದೈರ್ಯ ದಿಂದ ನನ್ನ ತರಗತಿ ಮುಂದು ವರಿಯಿತು. ಬಹಳ ಶಬ್ದ ಮಾಡುತ್ತಿದ್ದ ನಮ್ಮ AC ಯನ್ನು ಜೋರಾಗಿ ಹಾಕಿಕೊಂಡು ( ಶಬ್ದ ಹೊರಗೆ ಕೇಳದಿರಲೆಂದು) ತರಗತಿ ನಡೆಯುತ್ತಿತ್ತು.

           ಇರದಿದ್ದ  ಶಿಷ್ಯವ್ರಿಂದ ಬಹಳ ಬೇಗ ೧೩ ಕ್ಕೇರಿತು. ವಾರಕ್ಕೆ ಎರಡೇ ದಿನಗಳಿದ್ದ ತರಗತಿಗಳನ್ನು ನಾಲ್ಕು ದಿನಗಳು ತೆಗೆದುಕೊಲ್ಲತೊಡಗಿದೆ. ಮಕ್ಕಳು ಸರಳೆ ವರಸೆ, ಜಂಟಿ ವರಸೆ, ಅಲಂಕಾರಗಳನ್ನು ಮುಗಿಸಿ ಗೀತೆಯ ತನಕ ಬಂದರು. ಪುಟ್ಟ ಪ್ರಿತಿಗಂತೂ ಸಂಗೀತ ತರಗತಿಯ ದಿನಗಳೆಂದರೆ ಸಂಬ್ರಮ. ಅವಳು ಶ್ರುತಿಬದ್ದವಾಗಿ ಹಾಡಲು ಕಲಿತಳು. ಕೇರಳ, ಬಂಗಾಳ, ಮುಂಬೈ , ಗೋವಾ , ಕರ್ನಾಟಕ ಹೀಗೆ ವಿವಿಧ ಪ್ರಾಂತ್ಯಗಳ   ಪುಟ್ಟ ಮಕ್ಕಳು ಒಟ್ಟಾಗಿ ಭಾರತದ  ವಿವಿದತೆಯಲ್ಲಿ  ಏಕತೆಯ ಸ ರೀ ಗ ಮ ವನ್ನು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹಾಡುವಾಗ ಮನಸ್ಸಿಗೆ ಬಹಳ ಸಂತಸವಾಗುತ್ತಿತ್ತು. ಭಯ ನನ್ನ ಮನಸ್ಸಿನಿಂದ ಮಾಯವಾಗುತ್ತಿತ್ತು. ಹೀಗೆ ನನ್ನ ತರಗತಿಗಳು ನಾವು ಸೌದಿ ಯನ್ನು ಬಿಡುವ ತನಕ ನಡೆಯಿತು. ಯಾರೂ ನಮ್ಮ ತಂಟೆಗೆ ಬರಲಿಲ್ಲ, ನಮ್ಮ ಕೆಳಗಿನ ಮನೆಯ ಪಾಕಿಸ್ತಾನಿ ಕುಟುಂಬವೂ ನಮ್ಮ ವಿರುಧ್ಧ ಏನನ್ನೂ ಹೇಳಲಿಲ್ಲ!!

 

2 ಕಾಮೆಂಟ್‌ಗಳು: