ನಮ್ಮ ಮನೆಯಲ್ಲೊಂದು ನಾಯಿ ಸಾಕುತ್ತೇವೆ, ನಾವೆಲ್ಲಾ ಅದನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದು ಒಂದು ವರ್ಷದ ಹಿಂದೆ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೀಗ ನಾನೊಂದು ನಾಯಿಯ ಓಡತಿ, ನನ್ನ ದಿನಚರಿಯ ಮುಖ್ಯ ಭಾಗವನ್ನು ನಮ್ಮ ನಾಯಿ ಓರಿಯೋ ಆವರಿಸಿಕೊಂಡಿದ್ದಾನೆ. ಯಾರೋ ಬಿಟ್ಟು ಹೋದ ಒಂದು ನಾಯಿಮರಿಯನ್ನು ಮಗಳಿಗಾಗಿ, ಅವಳ ಏಕಾಂತವನ್ನು ಹೋಗಲಾಡಿಸುವ ಸಲುವಾಗಿ ಮನೆಗೆ ಸೇರಿಸಿಕೊಂಡೆ.
ನಾಯಣ್ಣ ಮೊದಲಿಗೆ ತುಂಬಾ ರಗಳೆ ಎನಿಸಿತು . ಅವನಿಗೆ ಮನೆಯೊಳಗೇ ಮಲ ಮೂತ್ರ ಮಾಡಬಾರದೆಂದು ಗೊತ್ತಿರಲಿಲ್ಲ. ಹಾಗಾಗಿ ಅವನಿಗೆ ಅದನ್ನು ಹೇಳಿಕೊಡಬೇಕಾಗಿತ್ತು. ಒಮ್ಮೆಮ್ಮೆ ನಾನು ಕರೆದುಕೊಂಡು ಹೋಗುವುದರಲ್ಲಿಯೀ ಅವನು ಮನೆಯಲ್ಲಿ ಮಾಡಿಕೊಂಡಿರುತ್ತಿದ್ದ. ಅವನಿಗೆ ಶಿಕ್ಷೆ ಕೊಟ್ಟರೆ ಅವನು ಸುಮ್ಮನೆ ಕುಳಿತು ಶಿಕ್ಷೆಯನ್ನು ಸ್ವೀಕರಿಸುತ್ತಿದ್ದ; ನನ್ನನ್ನು ನೋಡಿ ಹೆದರುತ್ತಿದ್ದ. ಆದರೆ ಅವನಿಗೆ ನಮ್ಮ ಮನೆಯ ನಿಯಮಗಳನ್ನು ತಿಳಿದುಕೊಳ್ಳಲು ಜಾಸ್ತಿ ದಿನ ಹಿಡಿಯಲಿಲ್ಲ. ನಾವು ಹೊರಗೆ ಬಿಟ್ಟಾಗ ಮಾತ್ರ, ಮಲ ಮೂತ್ರ ವಿಸರ್ಜಿಸುವುದನ್ನು ಬಹಳ ಬೇಗ ಕಲಿತುಕೊ೦ಡ. ಅಡಿಗೆ ಮನೆಯೊಳಗೆ ಬರಬಾರದು ಎಂದು ಹೇಳಿದರೆ ಅಡಿಗೆಮನೆಯ ಬಾಗಿಲಲ್ಲಿ ಕುಳಿತು ಕಾಯತೊಡಗಿದ
ನಾವು ಅವನನ್ನು ಬಿಟ್ಟು ಊರಿಗೆ ಹೋಗಿ ಬರುವಾಗ ದೊಡ್ಡ ನಾಯಿಯಾಗಿ ಬೆಳೆದ ಪಟ್ಟ ಓರಿಯೋವನ್ನು ನೋಡಿ ಪ್ರೀತಿ ಹೆದರಿದಳು. ಆದರೆ ಅವನು ಸ್ವಭಾವದಿಂದ ಪುಟ್ಟ ಓರಿಯೋನೇ ಆಗಿದ್ದ. ಹಾಗಾಗಿ ಅವನು ಮತ್ತೆ ಪ್ರೀತಿಗೆ ಹತ್ತಿರವಾದ. ಅವಳೊಡನೆ ವಾಕಿಂಗ್, ಅವಳು ಕರೆದೊಡನೆ ಎಲ್ಲಿದ್ದರೂ ಓಡಿಬರುವ ಅವನ ಉತ್ಸಾಹ, ತಿಂಡಿ ಕೊಡಲು ಅವಳು ಎಷ್ಟೇ ಸತಾಯಿಸಿದರೂ ಅವನು ಸಹಿಸುವ ಪರಿ ಇವೆಲ್ಲ ಅವರಿಬ್ಬರನ್ನು ತುಂಬಾ ಒಳ್ಳೆಯ ಗೆಳೆಯರನ್ನಾಗಿಸಿತು. ಪ್ರೀತಿಯ ಬದಲಾವಣೆಗೆ ಓರಿಯೊ ಕಾರಣನಾದ. ಇದೇ ವಿಚಾರವನ್ನು ಇಟ್ಟುಕೊಂಡು ಅವಳು ಗ್ಯಾವೆಲ್ ಕ್ಲಬ್ನಲ್ಲಿ ಮಾಡಿದ ಭಾಷಣ ತುಂಬಾ ಮೆಚ್ಚುಗೆ ಗಳಿಸಿತು.
ಎಲ್ಲರಿಗೂ ಬಿಡುವಿಲ್ಲ, ಕುಳಿತು ಮಾತನಾಡಲು ಯಾರಿಗೂ ವ್ಯವಧಾನವಿಲ್ಲ ಎಂಬತಹ ಏಕತಾನತೆಯ ನಮ್ಮ ಮನೆಗೆ ಒಂದು ಬದಲಾವಣೆಯನ್ನು ತಂದಿರುವ ಓರಿಯೂವನ್ನು ಶಶಿಯೂ ಇಷ್ಟಪಡತೊಡಗಿದ. ಬಾಲ್ಯದಿಂದ ಯಾವ ಪ್ರಾಣಿಯನ್ನೂ ಮುಟ್ಟದ ಶಶಿಯನ್ನು ಓರಿಯೋ ಬದಲಿಸಿದ್ದ !! ಶಶಿ ಬರುವ ಮೊದಲೇ ಅವನು ಬಂದನೆಂದು ತಿಳಿದುಕೊಳ್ಳುತ್ತಿದ್ದ ಓರಿಯೋ ಬಾಗಿಲಲ್ಲಿ ಹೋಗಿ ಕಾಯುತ್ತಾನೆ, ಶಶಿ ಒಳಗೆ ಬಂದವನು ಅವನನ್ನು ಮಾತನಾಡಿಸಿ ಮತ್ತೆ ಬೇರೆ ಕೆಲಸ ಮಾಡಬೇಕು . ಅವನಿಗೆ ಬೇಸರವಾದರೆ ಬಾಲುಗಳನ್ನು ತಂದು ತನ್ನೊಡನೆ ಆಡಿ ಎಂದು ಕರೆಯುವ ಅವನು ಮನೆಯೊಳಗೆ ಒಂದು ರೀತಿಯ ಲವಲವಿಕೆಯನ್ನು ತಂದಿಟ್ಟಿದ್ದಾನೆ. ಅವನಿದ್ದರೆ ನಾವು ಸೂಮರಿಯಾಗುವಂತೆಯೇ ಇಲ್ಲ, ಅವನನ್ನು ದಿನಕ್ಕೆ ಮೂರು ಬಾರಿ ಹೊರಗೆ ಕರೆದುಕೊಂಡು ಹೊಗಲೇಬೆಕು. ಅವನಿಂದಾಗಿ ನಮಗೆ ಈಗ ನಾಯಿ ಇರುವ ಮನೆಯವರೆಲ್ಲ ಸ್ನೆಹಿತರು.
ನಾವು ನಾಯಿಗಳನ್ನು ನೋಡುವ ರೀತಿಯೂ ಒರಿಯೋನಿ೦ದಾಗಿ ಬದಲಾಗಿದೆ. "ನಾಯಿ ಬಂದಿತ್ತಯ್ಯ ಮನುಜ ಎಚ್ಚರಿಕೆ ಎಚ್ಚರಿಕೆ ...." ಎಂಬ ಪುರಂದರ ದಾಸರ ಹಾಡು ತಪ್ಪು ಎನಿಸುತ್ತದೆ. ನಾಯಿಯಿಂದ ಮನುಷ್ಯ ಕಲಿಯ ಬೇಕಾದ ಪಾಟಗಳು ಬಹಳ ಇವೆ. ನಾವು ಎಷ್ಟು ಹೊತ್ತು, ಎಷ್ಟು ದಿನ ಅವನನ್ನು ಬಿಟ್ಟು ಹೋದರೂ ಅವನು ನಮಗೆ ನೀಡುವ ಸ್ವಾಗತ ಒಂದೇ ರೀತಿಯದಾಗಿರುತ್ತದೆ. ಅವನ ಆಹಾರ ಪದ್ದತಿಯನ್ನೂ ನಮಗೆ ಬೇಕಾದಂತೆ ಬದಲಿಸಿಕೊ೦ಡಿದ್ದಾನೆ. ಮೊಸರನ್ನ, ಚಪಾತಿ, ಇಡ್ಲಿ ದೋಸೆಗಳನ್ನು ಖುಷಿಯಿಂದ ತಿನ್ನುತ್ತಾನೆ. ತನಗೆ ಇರುವುದನ್ನು ಸಂತೋಷದಿಂದ ಅನುಭವಿಸುತ್ತಾ, ಜೀವನವನ್ನು ಆನಂದದಿಂದ ಅನುಭವಿಸುವ ಪಾಟವನ್ನು ಹೇಳಿಕೊಡುತ್ತಿರುವ ಓರಿಯೋ, ನಿಜವಾಗಿ ನಮ್ಮ ನೆಚ್ಚಿನ ಸಂಗಾತಿ.





ಓರಿಯೋ ! ಒಳ್ಳೆ ಹೆಸರು. ಅರ್ಥವೇನು?
ಪ್ರತ್ಯುತ್ತರಅಳಿಸಿ