ಬ್ಲಾಗಿನಲ್ಲಿ ಬರೆಯದೇ ಬಹಳ ದಿನಗಳಾದವು, ಏನಾದರೂ ಬರೆಯುತ್ತಿರಬೇಕು ಎಂದುಕೊಳ್ಳುತ್ತಿರುವಾಗ ಅಮ್ಮ ಬರೆದುಕೊಟ್ಟ ಕವನಗಳು ಕಣ್ಣಿಗೆ ಬಿದ್ದವು. ಅವುಗಳನ್ನು ದಾಖಲಿಸಿ 2017 ಶುಭಾರಂಭವನ್ನು ಮಾಡುತ್ತಿದ್ದೇನೆ. ಈ ವರ್ಷ ಪ್ರತೀ ತಿಂಗಳೂ ಎರಡು ಬರಹಗಳನ್ನು ಇಲ್ಲಿ ಹಾಕುತ್ತೇನೆಂಬ ಹೊಸವರ್ಷದ ನಿರ್ಧಾರ ಮಾಡುತ್ತೇನೆ.
**ಮೊದಲನೆಯ ಕವನ ನಮ್ಮ ಮದುವೆಯ ವಿಂಶತಿ ವರ್ಷಗಳಿಗೆ ಅಮ್ಮನ ಹರಕೆ-
ಶಶಿ-ಸುಧಾಗೆ
ಮದುವೆಯಾದ ಈ ಹೊತ್ತು ಬಂದಿದೆ ಇವತ್ತು
ಸರಸರನೆ ಸರಿದಿವೆ ವರುಷಗಳು ಇಪ್ಪತ್ತು!
ಹದುಳ ಭಾವದ ಮುತ್ತು ಸುರಿದಿರಲು ಸುತ್ತೂ
ನಿಮ್ಮ ಮನೆಯಲ್ಲಿಯೇ ನಾನಿರುವ ಈ ಹೊತ್ತು
ಸಂತಸದಿ ದೇವರಿಗೆ ನಾನಿಲ್ಲಿ ನಮಿಸುತ್ತಾ
ನಾ ಹರಸುವೆನು
ನಿಮಗೆ ಒಳಿತಾಗಲೆಂದು
ಆಯುರಾರೋಗ್ಯ ಐಶ್ವರ್ಯ ನಿಮ್ಮದಾಗಲೆಂದು
ನಿಮ್ಮ ಮನೆ ಸುಖ ಶಾಂತಿಯ ನೆಲೆಯಾಗಲೆಂದು
ನಿಮ್ಮೆಲ್ಲ ಕನಸುಗಳು ನನಸಾಗಲೆಂದು
ದೇವರಾಶಿರ್ವಾದದ ಶ್ರೀರಕ್ಷೆಯಲಿ
ನಿಮ್ಮ ದಾಂಪತ್ಯ ಶತಕ ಸಾಧಿಸಲೆಂದು
**ಇನ್ನೊಂದು ಕವನ ನಮ್ಮ ಮನೆಯಲ್ಲಿರುವ ನಾಯಿ ಒರಿಯೋನ ಬಗೆಗೆ ಅಮ್ಮನ ನುಡಿಗಳು-
ಪ್ರೀತಿಯ ಓರಿಯೋ
ಪ್ರಾಣಿ ಸಾಕುವ ಬಗ್ಗೆ
ಸಾಕು ಪ್ರಾಣಿಯ ಬಗ್ಗೆ
ಏ ನೆಲ್ಲ ಮಾತು ಕಥೆ
ಸಾಕಿದವರಿಗೆ ಅದು ವಿಶಿಷ್ಠ
ಅನುದಿನದ ಕಲಿಕೆ
ಮೂಕ ಭಾಷೆಯ, ಭಾವಸ್ಪುರಣದ ಅನುರಣನ
ನಾಯಿಯೆನ್ನಿ, ಶ್ವಾನವೆನ್ನಿ, ಶುನಕವೆನ್ನಿ
ಓರಿ ಯೋ
ನಿನಗದೆಲ್ಲ ನಗಣ್ಯ
ಅದು ನಿನ್ನ ಸಾಕಿದವರ ಪುಣ್ಯ
ಏನೆಂದರೂ ಬದಲಾಗದ ನಿನ್ನ ನಿಷ್ಠೆ
ಮೂಕಪ್ರೇಮದವಿಪರಾಕಷ್ಟೆ!
ಶಶಿಯ ಕಂಡೊಡನೆ
ಅಂಬುಧಿ ಯುಕ್ಕಿದಂತೆ
ಬೀಸುಬಾಲದಿ ನೀ ಆಡುವ ಚಿನ್ನಾಟ
ಊಟದ ಮೇಜಿನ ಎದುರು ಕುಳಿತ
ನಿನ್ನ ಆಸೆ ತುಂಬಿದ ಕಣ್ಣೋಟ
ನಮಗದೊಂದು ರಮ್ಯ ನೋಟ
ನಿನ್ನ ಅಗಾಧ ಸ್ಮರಣಶಕ್ತಿ
ಮಾಡುವುದು ಎಲ್ಲರಿಗೆ ಮೋಡಿ.
ತಕರಾರಿಲ್ಲದ ನಡವಳಿಕೆ
ನಿನ್ನ ಹೆಗ್ಗಳಿಕೆ
ಕರಾರಿಲ್ಲದೇ ಪ್ರೇಮದ ಸುಧೆಯ
ಸುರಿಸಿ
ಸಹಜೀವನದ ಅನುಭವ
ಅನುಭಾವ ನೀಡಲೆಂದೇ ನೀನು
ಬಂದಿರುವೆಯೋ ಪ್ರೀತಿಯ ಓರಿಯೋ
ಪ್ರೀತಿಯ ಒರಿಯೋ
**ಸಮುದ್ರದ ದಡದಲ್ಲಿ ನಮ್ಮ ಬಿಡಾರಗಳನ್ನು ಹರಡಿಕೊಂಡು ರಾತ್ರಿಯನ್ನು ಕಳೆಯುವ ಮಗಳ ಬಯಕೆಯನ್ನು ಪೂರೈಸಲು ಹಲವು ಸ್ನೇಹಿತರನ್ನು ಕೂಡಿಕೊಂಡು, ಅಮ್ಮ ಮತ್ತು ಓರಿಯೋರನ್ನು ಕರೆದುಕೊಂಡು camping ಹೋದೆವು. ಅಲ್ಲಿ ರಾತ್ರಿಯ ಸಮುದ್ರವನ್ನ ನೋಡಿದ ಅಮ್ಮ ಅದನ್ನು ಈ ಕೆಳೆಗಿನ ಸಾಲುಗಳಲ್ಲಿ ವರ್ಣಿಸಿದ್ದಾಳೆ-
ಗುಡ್ಡದಡ್ಡಿಕೆಗೆ ಪಚ್ಛೆ ಮುತ್ತಿನ ಪದಕ
ಬೆಟ್ಟದಾ ಹಣೆಗೊಂದು ಕೆಂಪು ತಿಲಕ
ರಾತ್ರಿಯಾಕಾಶದಲಿ ತಾರೆಗಳ ಮಿನುಗು
ನಿಶೆಯ ನೀರವತೆಯ ತೊಡೆಯ ಕಡಲ ಮೊರೆತದ ಬೆಡಗು
ಜಗಬೆಳಗೆ ಶರಧಿಯೊಡಲಿಂದ ಮೂಡಿದ ರವಿಯ ಸೊಗಸು
ಎಲ್ಲವನು ಅಲುಗಿಸುವ ಮಲಯ ಮಾರುತದ ಬೀಸು
ನಿಸರ್ಗದಾಟದ ರಮಣೀಯತೆ ನನ್ನ ಮನವ ಸೆಳೆಯೆ
ಒಮಾನಿನ ಶಾಂತ ಸೊಬಗನ್ನು ನಾನೆಂದೂ ಮರೆಯೆ
**ಮಸ್ಕತ್ ಕನ್ನಡ ಸಂಘದ ಕನ್ನಡ ತರಗತಿಯ ಶಿಕ್ಷಕಿಯಾದ ನಾನು, ಕಳೆದ ಮೂರು ವರ್ಷಗಳಿಂದ ಮಕ್ಕಳಿಗೆ ಚಳಿಗಾಲದ ರಜೆಯಲ್ಲಿ ಕನ್ನಡ ಭಾಷೆಯ, ಸಂಸ್ಕೃತಿಯ ಅರಿವಿಗಾಗಿ ಕನ್ನಡ ಸಂಘದ ವತಿಯಿಂದ ಕನ್ನಡ ಶಿಬಿರವನ್ನು ಏರ್ಪಡಿಸುತ್ತಿದ್ದೇನೆ. ಈ ಬಾರಿ ಅಮ್ಮ ಶುಬಿರದ ಸ್ಪರ್ಧೆಗಳ ತೀರ್ಪುಗಾರರಲ್ಲಿ ಒಬ್ಬಳಾಗಿ ಸಹಾಯ ಮಾಡಿದ್ದಳು. ನಮ್ಮ ಕನ್ನಡ ಕಮ್ಮಟದ ಬಗೆಗೆ ಅಮ್ಮನ ಅನಿಸಿಕೆಗಳು ಈ ಕವನದಲ್ಲಿದೆ-
ಮಸ್ಕತ್ತಿನಲ್ಲಿ ಕನ್ನಡ ಕಮ್ಮಟ
ಇದು ಹಲವು ಸುಮನಸ್ಸುಗಳ ಕೂಟ
ಸಿಗುವುದಿಲ್ಲಿ ಚಿಣ್ಣರಿಗೆ ಕರ್ನಾಟಕದ
ವಿರಾಟ ದರ್ಶನದ ಪಕ್ಷಿನೋಟ
ಕನ್ನಡ ಸಂಸ್ಕೃತಿ ಸಂಪದದ ಸಂಕ್ಷಿಪ್ತ ಪಾಠ
ಮನಸ್ಸಿಗಾಗಿದೆ ಆನಂದ ನೋಡಲು ಚಿಣ್ಣರ ನಲಿದಾಟ
ಶಿಕ್ಷಕಿಯರ ಉತ್ಸಾಹದ ಓಡಾಟ
ಅಂದು ಕನ್ನಡಕ್ಕಾಗಿ ಕೈಯೆತ್ತು ಎಂದರು ಕುವೆಂಪು
ಇಂದು ನೀವಿಲ್ಲಿ ಹರಡುತ್ತಿರುವುರಿ ಕನ್ನಡದ ಕಂಪು
Very Nice & Thanks a lot for your continued support to ISCKW
ಪ್ರತ್ಯುತ್ತರಅಳಿಸಿVery Nice Poems
ಪ್ರತ್ಯುತ್ತರಅಳಿಸಿVery nice!!
ಪ್ರತ್ಯುತ್ತರಅಳಿಸಿಶಶಿ,ಸುಧಾ,ಪ್ರೀತಿ,ಓರಿಯೊ,
ಪ್ರತ್ಯುತ್ತರಅಳಿಸಿದಾಂಪತ್ಯ,ಸಾಕು-ಪ್ರಾಣಿ,ಗುಡ್ಡ-ಬೆಟ್ಟ,ಸಮುದ್ರ,
ಹೆಮ್ಮೆಯ ಕನ್ನಡ ಸಂಸ್ಕೃತಿಯ ಗುಣಗಾನ,
ಅಮ್ಮ,
ನಿಮಗೆ ನಮ್ಮೆಲ್ಲರ ಗೌರವಪೂರ್ವಕ ನಮನ.
ಶಶಿ,ಸುಧಾ,ಪ್ರೀತಿ,ಓರಿಯೊ,
ಪ್ರತ್ಯುತ್ತರಅಳಿಸಿದಾಂಪತ್ಯ,ಸಾಕು-ಪ್ರಾಣಿ,ಗುಡ್ಡ-ಬೆಟ್ಟ,ಸಮುದ್ರ,
ಹೆಮ್ಮೆಯ ಕನ್ನಡ ಸಂಸ್ಕೃತಿಯ ಗುಣಗಾನ,
ಅಮ್ಮ,
ನಿಮಗೆ ನಮ್ಮೆಲ್ಲರ ಗೌರವಪೂರ್ವಕ ನಮನ.
ನಿಮ್ಮೆಲ್ಲರ ಮೆಚ್ಚುಗೆಗಾಗಿ ಧನ್ಯವಾದಗಳು
ಪ್ರತ್ಯುತ್ತರಅಳಿಸಿ