ಸೋಮವಾರ, ಏಪ್ರಿಲ್ 29, 2024

ಫಿಯೋಫಿಯೊತಾಹಿ/ ಮಿಲ್ ಫರ್ಡ್ ಸೌಂಡ್ ಎಂಬ ದೇವ ಭೂಮಿ (ನ್ಯೂಜಿಲಾಂಡ್ ಅನುಭವಗಳು-೨)


"ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ ...... " ಎನ್ನುವ ಪಂಜೆ ಮಂಗೇಶರಾಯರ ಸಾಲುಗಳು ಮತ್ತೆ ಮತ್ತೆ ನೆನಪಾಗುವ ತಾಣ ನ್ಯೂಜಿಲ್ಯಾಂಡ್. ಪೃಕೃತಿ ಮಾತೆ ಕೈಯೆತ್ತಿ ಈ ಭೂಬಾಗವನ್ನು ಹರಸಿದ್ದಾಳೆ. ಪ್ರತಿಭಾಗವೂ  ತನ್ನದೇ ಆದ ವಿಭಿನ್ನ ಸೌಂದರ್ಯದಿಂದ ತುಂಬಿದೆ. ನ್ಯೂಜಿಲೆಂಡ್ ನ ದಕ್ಷಿಣ ದ್ವೀಪದ ಪಶ್ಮಿಮ ತೀರ ಬಹಳ ವಿಶಿಷ್ಟವಾದ ಪ್ರದೇಶ ಫಿಯೋರ್ಡ್ ಲ್ಯಾಂಡ್  ಎಂದು ಕರೆಯಲ್ಪಡುವ ಜಾಗ. 

   ಫಿಯೋರ್ಡ್ ಲ್ಯಾಂಡ್ ಭೂಮಿಯ ಅತ್ಯಂತ  ದಟ್ಟವಾದ ಕಾಡುಗಳ ಮಾನವರಿಂದ ಮುಟ್ಟಲ್ಪಡದ ಜಾಗ. ಆರೋಕಿ, ಅಲ್ಪೈನ್ ಪರ್ವತಗಳು, ಫಿಯೋರ್ಡ್ ಲ್ಯಾಂಡ್ ಗಳನ್ನೊಳಗೊಂಡ  ಸುಮಾರು 1.2 ಮಿಲಿಯನ್ ಹೆಕ್ಟೇರು ವಿಸ್ತೀರ್ಣವನ್ನು ಆವರಿಸಿರುವ ಈ ಪ್ರದೇಶವು ಸರೋವರ, ನದಿಗಳು, ಮೊನಚಾದ ಬೆಟ್ಟಗಳು, ಫಿಯೋರ್ಡ್ ಅಥವಾ ಸೌಂಡ್ ಮತ್ತು ದಟ್ಟ ನಿತ್ಯಹರಿದ್ವರ್ಣದ ಕಾಡುಗಳನ್ನೊಳಗೊಂಡಿದೆ. ಈ ಭಾಗವನ್ನು ಫಿಯೋರ್ಡ್ ಲ್ಯಾಂಡ್ ನ್ಯಾಷನಲ್ ಪಾರ್ಕ್ ಎಂದು 1952ರಲ್ಲಿ ನಿರ್ಮಿಸಲಾಯಿತು. ಜಾಗವು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ (World Heritage Sites) ಪಟ್ಟಿಯಲ್ಲಿದೆ.  ಸಮುದ್ರವು ಭೂಮಿಯನ್ನು ಸೀಳಿಕೊಂಡು ಒಳಕ್ಕೆ ಹರಿದಿರುವ ವಿಶಿಷ್ಟವಾದ ಭೂಭಾಗಕ್ಕೆ  ಫಿಯೋರ್ಡ್ ಅಥವಾ ಸೌಂಡ್ ಎಂದು ಭೂಗೋಳ ಶಾಸ್ತ್ರದ ಪ್ರಕಾರ ಹೇಳುತ್ತಾರೆ. ಸುಮಾರು ೧೪ ಫಿಯೋರ್ಡುಗಳು ನ್ಯೂಜಿಲ್ಯಾಂಡಿನ ಈ ಭಾಗದಲ್ಲಿದೆ. ಇಲ್ಲಿರುವ ಫಿಯೋರ್ಡ್ ಗಳ ಪೈಕಿ ರಸ್ತೆಯ ಮೂಲಕ ಹೋಗಲು ಸಾಧ್ಯವಾಗುವ ಒಂದೇ ಫಿಯೋರ್ಡ್ ನಾವು ಭೇಟಿ  ನೀಡಿದ ಮಿಲ್ಫರ್ಡ್ ಸೌಂಡ್ ಅಥವಾ ಫಿಯೋಫಿಯೋತಾಹಿ. ಪಿಯೋಪಿಯೊತಹಿ ಎನ್ನುವುದು ಈ ಜಾಗಕ್ಕೆ ಮಾವೋರಿ ಹೆಸರು. ವರ್ಷವಿಡೀ ಮಳೆ ಬರುವುದು ಈ ಜಾಗದ ವಿಶೇಷತೆ. ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ವರ್ಷದಲ್ಲಿ ಸುಮಾರು 182 ದಿನಗಳು ಇಲ್ಲಿ ಮಳೆಯಾಗುತ್ತದಂತೆ. ಇಷ್ಟು ಪೀಠಿಕೆಯೊಂದಿಗೆ ನಮ್ಮ ಪ್ರವಾಸ ಕಥನಕ್ಕೆ ಬರೋಣ

  ಈಗ ಪ್ರವಾಸ ಹೋಗುವುದೆಂದರೆ ಆ ಜಾಗದ ಮಾಹಿತಿ, ಅಲ್ಲಿನ ಫೋಟೋಗಳು, ವಿಡಿಯೋಗಳು , ಅಲ್ಲಿಗೆ ಹೋಗಿ ಬಂದವರ ಅನುಭವಗಳು - ಇವುಗಳನ್ನೆಲ್ಲ  ಅಂತರ್ಜಾಲದಲ್ಲಿ ನೋಡಿ ನಾವು ನೋಡಬೇಕಾದ ಜಾಗಗಳನ್ನು, ಮಾಡಬೇಕಾದ ಚಟುವಟಿಕೆಗಳನ್ನು ನಿರ್ಧರಿಸುತ್ತೇವೆ. ನಮ್ಮ ಸ್ನೇಹಿತರಲ್ಲಿ ಕೆಲವರು ನ್ಯೂಜಿಲಾಂಡ್ ಪ್ರವಾಸ ಮಾಡಿದ್ದರು. ಅವರ ಸಲಹೆಗಳನ್ನೂ ತೆಗೆದುಕೊಂಡು ಈ ಜಾಗವನ್ನು ನೋಡಬೇಕೆಂದು ನಿರ್ಧರಿಸಿದ್ದೆವು. ಫಿಯೋಫಿಯೋತಹಿಯ ಒಳ್ಳೆಯ ಅನುಭವವನ್ನು ಪಡೆಯಲು ರಿಯಲ್ ಏನ್ ಝಡ್ (REALNZ) ಸಂಸ್ಥೆಯ ರಾತ್ರಿಯೂ ಅಲ್ಲಿಯೇ ಉಳಿಯುವ ಹಡಗಿನಲ್ಲಿ ನಮ್ಮೆಲ್ಲರಿಗೂ ಕೋಣೆಯನ್ನು ಕಾಯ್ದಿರಿಸಿಕೊಂಡಿದ್ದೆವು. ನಾವು ಎಂದರೆ ನಾನು, ನನ್ನ ತಂಗಿ ನಮ್ಮಿಬ್ಬರ ಮಗಳಂದಿರು, ಗಂಡಂದಿರು- ಆರು ಜನರ ಗುಂಪು ಸಾವಿರಾರು ಮೈಲಿ ದಾಟಿ ಭೂಮಿಯ ಈ ತುದಿಗೆ ಪ್ರವಾಸಕ್ಕೆ ಬಂದಿದ್ದೆವು.
ನಮ್ಮ ಹಡಗು ಮಿಲ್ಫರ್ಡ್ ಮಾರಿನರ್ 

ಮಿಲ್ಫರ್ಡ್ ಮಾರಿನರ್  ದೋಣಿಯಲ್ಲಿ  ಮಿಲ್ಫರ್ಡ್ ಸೌಂಡ್/ಫಿಯೋಫಿಯೋತಹಿಯ  ಅನುಭವ:-

ನಿಗದಿತ ಸಮಯದಲ್ಲಿ ನಮ್ಮ ಹಡಗಿನ ಒಳಗೆ ಬಂದೆವು ಕ್ಯಾಪ್ಟನ್ ಸಿಬ್ಬಂದಿಗಳನ್ನು ಪರಿಚಯಿಸಿದ. ನಮ್ಮ ಹಡಗಿನಲ್ಲಿ ಅಡುಗೆ ಮಾಡುವವರು, ತಿಂಡಿಯನ್ನು ಕೊಡುವವರು, ಚಟುವಟಿಕೆಗಳನ್ನು ಮಾಡಿಸುವವರು ಮತ್ತು ಒಬ್ಬಳು ಪರಿಸರ ತಜ್ಞೆ ಇದ್ದರು. ನಂತರ ಎಲ್ಲ ಪ್ರವಾಸಿಗರಿಗೆ ಅವರವರ ಕೋಣೆಯ ಕೀಲಿಗಳನ್ನು ಕೊಟ್ಟು ಬಂದವರಿಗೆ ಚಹಾ ಮತ್ತು ತಿಂಡಿಗಳ ಸೇವೆಯಾಯಿತು. ನಮ್ಮೂರಿನ ಗೊಳಿಬಜೆಯನ್ನು ನೆನಸಿಕೊಂಡು ಇವರ ಕೇಕ್ ತಿಂದೆವು. ವಿವಿಧ ದೇಶಗಳ ವಿವಿಧ ವಯೋಮಾನದ ಪ್ರವಾಸಿಗರು ನಮ್ಮ ಹಡಗಿನಲ್ಲಿ ಇದ್ದರು.

 ಮೇಲಿನ ಡೆಕ್ ಗೆ ಹೋದರೆ ಭವ್ಯವಾದ ಪ್ರಕೃತಿಯ ರುದ್ರ ರಮಣೀಯ ನೋಟ ನಮ್ಮ ಕಣ್ಣು, ಮನಸ್ಸನ್ನು ತುಂಬಿತು. ಒಂದು ಕಡೆ ಹಸಿರು ಬೆಟ್ಟ, ಮಧ್ಯೆ ಮಧ್ಯೆ ಹರಿಯುವ ನೀರಿನ ಝರಿಗಳು, ಇನ್ನೊಂದು ಕಡೆ ಮೊನಚಾದ ಕಲ್ಲಿನ ಪರ್ವತ, ಮಧ್ಯದಲ್ಲಿ ಹಿಮವತ್ ಪರ್ವತ, ಸುತ್ತಲೂ ನೀರು- ವರ್ಣಿಸಲು ಶಬ್ದಗಳೇ ಸಾಲದಷ್ಟು ಪ್ರಕೃತಿ ಸೌಂದರ್ಯ. ಹಿಂದಿನ ದಿನ ಜೋರಾಗಿ ಮಳೆ ಬಂದು ಬಿಟ್ಟಿತ್ತು; ಇಂದು ಶುಭ್ರ ಆಕಾಶವಿತ್ತು - ಇಲ್ಲಿನ ಭವ್ಯತೆಯನ್ನು ಸವಿಯಲು ಇದು ಅತ್ಯಂತ ಪ್ರಶಸ್ತವಾದ ಸಮಯವಂತೆ. ನಮಗೆ ಇಲ್ಲಿನ ದೃಶ್ಯಗಳನ್ನು ಸುಂದರವಾಗಿ ತೋರಿಸಲು ಬೇಕಾದ ವೇದಿಕೆಯನ್ನು ಪ್ರಕ್ರತಿ ನಿರ್ಮಿಸಿತ್ತು 

ನಮ್ಮ ಹಡಗು ಚಲಿಸಲು ಆರಂಭಿಸಿತು. ಚಲಿಸುತ್ತ  ಭವ್ಯ ಸ್ಟ್ರಿಂಗ್ಜ ಜಲಪಾತದ ಸಮೀಪಕ್ಕೆ ಬಂತು. ಜಲಪಾತದ ತುಂತುರು ಹನಿಗಳು ನಮ್ಮ ಮೇಲೆಲ್ಲ ಪನ್ನೀರಿನಂತೆ ಹಾರುತ್ತಿತ್ತು. ಈ ಜಲಪಾತವು ಬೀಳುವ ಜಾಗದಲ್ಲಿ ನೀರು ತುಂಬಾ ಆರ ಇರುವುದರಿಂದ ಜಲಪಾತವು ಕಡ್ಡಿಯಂತೆ ಅಷ್ಟೇ ಆಳಕ್ಕೆ ಹೋಗುತ್ತದೆ. ಹಾಗಾಗಿ ದೋಣಿಗಳು ಇದರ ಹತ್ತಿರದವರೆಗೆ ಬರಲು ಸಾಧ್ಯವಾಗುತ್ತದೆ. ನಿನ್ನೆ ತಾನೇ ಮಳೆ ಬಂದಿದ್ದರಿಂದ ಅನೇಕ ತಾತ್ಕಾಲಿಕ ಜಲಪಾತಗಳೂ ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. 

ಸ್ಟ್ರಿಂಗ್ ಜಲಪಾತ 

ಜಲಪಾತದ ಅನುಭವದ ನಂತರ ಚಟುವಟಿಕೆಗಳು ಆರಂಭವಾದವು.ಕಯಾಕ್ ದೋಣಿಯ ಸವಾರಿ, ಗುಂಪುಗಳಲ್ಲಿ ಫಿಯೋರ್ಡಿನ ಮಾಹಿತಿ ಪಡೆದುಕೊಳ್ಳುತ್ತಾ ಮಾಡುವ ದೋಣಿ ಸವಾರಿಗಳನ್ನು ಮಾಡಬಾಗುದಾಗಿತ್ತು. ನಾವು ಆರು ಜನರಲ್ಲಿ ಮೂರು ಜನ ಕಯಾಕ್ ಸವಾರಿ ಮಾಡಿದರೆ ಮೂವರು ಪುಟ್ಟ ದೋಣಿಯ ಗುಂಪು ಸವಾರಿ ಮಾಡಿದೆವು. ಎರಡು ಸವಾರಿಯೂ ವಿಭಿನ್ನ ಅನುಭವ ನೀಡಿದವು. ನಂತರ ಇಲ್ಲಿ ಈಜುವವರಿಗೆ ಈಜಲೂ ಅವಕಾಶವಿತ್ತು. ದೋಣಿಯಲ್ಲಿ ಸಾಗುವಾಗ ಕಂಡ ಸುಂದರ ದೃಶ್ಯಗಳು ಕಣ್ಣು ಮತ್ತು ಮನಸ್ಸುಗಳನ್ನು ತಣಿಸುತ್ತಿತ್ತು. ಒಂದು ಕಡೆ ಪೆಮ್ಬ್ರೋಕ್ ಹಿಮಪರ್ವತ, ಅದರ ಕೆಳಗೆ ದಟ್ಟ ಕಾಡು, ಕಾಡಿನ ಮುಂದೆ ಹ್ಯಾರಿಸನ್ ನದಿ ಬಂದು ಸಮುದ್ರಕ್ಕೆ ಸೇರುವ ದೃಶ್ಯ- ಇವೆಲ್ಲ ಒಂದೇ ನೋಟಕ್ಕೆ ಸಿಗುತ್ತಿತ್ತು. ಈ ತರಹದ ದೃಶ್ಯ ಪ್ರಪಂಚದಲ್ಲಿ ಇಲ್ಲಿ ಬಿಟ್ಟರೆ ದಕ್ಷಿಣ ಅಮೆರಿಕಾದ ಚಿಲಿ ದೇಶದಲ್ಲಂತೆ !!  ಇಲ್ಲಿ ಸುತ್ತಲೂ ಕಾಣುವ ದಟ್ಟ ಕಾಡು ಇಲ್ಲಿನ ಈ ಕಲ್ಲುಗುಡ್ಡಗಳ ಚಡಿಯಲ್ಲಿಯೇ ತಮ್ಮ ಬೇರನ್ನು ಬಿಟ್ಟು ಮೇಲಿನ ಪದರದ ಮಣ್ಣೇ ಇಲ್ಲದೆಯೇ ಬೆಳೆದಿರುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯ. ಹಾಗಾಗಿ ಬಾರೀ ಮಳೆಗೆ ಸಿಕ್ಕು ಒಂದು ಬೇರು ಕಳಚಿತೆಂದರೆ ಸಂಪೂರ್ಣ ಪದರವೇ ಕಳಚಿ ಒಂದು ಭಾಗದ ಕಾಡೇ ನೀರಿನೊಳಕ್ಕೆ ಹೋಗುತ್ತದೆ. 

ಕಯಾಕ್ ಮಾಡುವ ದೃಶ್ಯ 

ಚಟುವಟಿಕೆಗಳು ಮುಗಿಯುವಷ್ಟರಲ್ಲಿ ಊಟದ ಸಮಯ. ವಿವಿಧ ದೇಶಗಳ ಪ್ರವಾಸಿಗರಿದ್ದ ಹಡಗಿನಲ್ಲಿ ಎಲ್ಲರಿಗೂ ನಿಗದಿತ ಟೇಬಲ್ಲುಗಳಲ್ಲಿ ಕೂಡಿಸಿ ಶಿಸ್ತಾಗಿ ಊಟ ಬಡಿಸುತ್ತಿದ್ದರು. ಸಸ್ಯಾಹಾರಿಗಳಾದ ನಮ್ಮ ಅಗತ್ಯವನ್ನು ಮೊದಲೇ ತಿಳಿಸಿದ್ದುದರಿಂದ ನಮಗೆ  ಊಟದಲ್ಲಿ ಸಾಕಷ್ಟ ಆಯ್ಕೆಗಳಿದ್ದವು. ಊಟದ ನಂತರ ಇಲ್ಲಿನ ಪರಿಸರದ ಬಗೆಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಹಡಗಿನ ಪರಿಸರ ತಜ್ಞೆ ನೀಡಿದಳು. ಸುಮಾರು ೧೫-೨೦ ನಿಮಿಷಗಳ ಅವಳ ಸಚಿತ್ರ ವಿವರಣೆ  ಇಲ್ಲಿನ ಜೀವ ಸಂಕುಲದ ಮಾಹಿತಿ, ಇಲ್ಲಿನ ವಾತಾವರಣದ ವಿವರಣೆ, ಹಡಗಿನಲ್ಲಿ ಪಯಣಿಸಿದ ಪ್ರಯಾಣಿಕರ ಅನುಭವಗಳನ್ನೊಳಗೊಂಡು  ಈ ಜಾಗದ ಭವ್ಯತೆಯ ಸಂಪೂರ್ಣ ಅರಿವನ್ನು ನಮ್ಮಲ್ಲಿ ಮೂಡಿಸಿತು. 

ನಮ್ಮ ದೋಣಿಯಿಂದ ತೆಗೆದ ಚಿತ್ರ 

ನಂತರ ಡೆಕ್ಕಿಗೆ ಹೋಗಿ ನಕ್ಷತ್ರ ವೀಕ್ಷಣೆ ಮಾಡಬಹುದಾಗಿತ್ತು. ಹೊರ ಪ್ರಪಂಚದ ದೀಪದ ಹಾವಳಿ ಇಲ್ಲದ ಇಲ್ಲಿನ ಆಕಾಶ ನಕ್ಷತ್ರಗಳಿಂದ ಝಗಝಗಿಸುತ್ತಿತ್ತು. 5 ಡಿಗ್ರಿಯ ಚಳಿಯಲ್ಲಿಯೂ ಈ ಆಕಾಶದ ವೀಕ್ಷಣೆ ಮುದಕೊಟ್ಟಿತ್ತು. ಡೆಕ್ಕಿನ ಮೇಲೆ ಅಂಗಾತ ಮಲಗಿ ಆಕಾಶ ವೀಕ್ಷಣೆ ಮಾಡಲು ಸಾಧ್ಯವಾಗುವಂತೆ ಮರದ ಬೆಂಚುಗಳನ್ನು ಹಾಕಿಟ್ಟಿದ್ದರು.

    ಬೆಳಗ್ಗೆದ್ದು ಸಮುದ್ರದ ಮಧ್ಯೆ ಸೂರ್ಯೋದಯದ ಅನುಭವವಾಯಿತು. ಹಡಗಿನಲ್ಲಿ ತಿಂಡಿ ತಿಂದು ಡೆಕ್ಕಿನಲ್ಲಿ ನಿಂತುಕೊಂಡು ಟಾಸ್ಮಾನ್ ಸಮುದ್ರದ ತನಕ ಹಡಗಿನಲ್ಲಿ ಚಲಿಸುವ ಅನುಭವವನ್ನು ಚಳಿಯಲ್ಲಿ ಅನುಭವಿಸಿದೆವು. ಫಿಯೋರ್ಡಿನಲ್ಲಿ ಶಾಂತವಾಗಿದ್ದ ಜಲರಾಶಿಯ ಅಪರಿಮಿತ ಶಕ್ತಿಯು ಅದು ಸಮುದ್ರಕ್ಕೆ ಸೇರುವಲ್ಲಿ ಅರಿವಿಗೆ ಬರುತಿತ್ತು. ಟಾಸ್ಮಾನ್  ಸಮುದಕ್ಕೆ ನಮ್ಮ ಹಡಗು ಬರುತ್ತಿದ್ದಂತೆ ಅಲೆಗಳ ಹೊಡೆತಕ್ಕೆ ದೋಣಿಯು ಅಲ್ಲಾಡತೊಡಗಿತು. ಆರಾಮವಾಗಿ ನಿಂತು ನೋಡುತ್ತಿದ್ದ ನಾವೆಲ್ಲ ಬೀಳುವಂತಾದೆವು!  ಇಲ್ಲಿನ ಶಾಶ್ವತ ಜಲಪಾತಗಳಾದ ಸ್ಟ್ರಿಂಗ್ ಜಲಪಾತ, ಬೋವೆನ್  ಜಲಪಾತಗಳ ದೃಶ್ಯವನ್ನು ಸವಿಯುತ್ತ ಮರಳಿ  ತೀರಕ್ಕೆ  ಬಂದೆವು. ಹತ್ತಿದ ಮೇಲೆ ಇಳಿಯುವ ತನಕ ಎಲ್ಲ ಪ್ರವಾಸಿಗರನ್ನು ಬಿಡುವಿಲ್ಲದ ಚಟುವಟಿಕೆಗಳ ಮೂಲಕ ಹಿಡಿದಿಟ್ಟಿದ್ದರು ನಮ್ಮ ಹಡಗಿನ ಸಿಬ್ಬಂದಿಗಳು. ಒಟ್ಟಿನಲ್ಲಿ ಹದಿನೈದು ಘಂಟೆಗಳ  ಈ ಸುಂದರ ಅನುಭವ  ಬಹುಕಾಲ ನಮ್ಮ ನೆನಪಿನಲ್ಲಿ ಇರತ್ತದೆ.  

                                                                                                                                              ಟೆಕಾಪೂ- ಟೇಯಾನೌ - ಮಿಲ್ಫರ್ಡ್ ಸೌಂಡ್ ದಾರಿ:-


ನ್ಯೂಜಿಲೆಂಡ್ ನಲ್ಲಿನ ಪ್ರವಾಸದ ಪ್ರಮುಖ ಭಾಗ ಇಲ್ಲಿನ ಸುಂದರವಾದ ರಸ್ತೆಯ ಮೇಲೆ ಪ್ರಕೃತಿ ಸೌಂದರ್ಯ ವನ್ನು ಸವಿಯುತ್ತಾ ಪ್ರಯಾಣ ಮಾಡುವುದು. ಟೆಕಾಪೊದಿಂದ ಮಿಲ್ಫರ್ಡ್ ಸೌಂಡ್  530 ಕಿ.ಮಿ ಗಳಷ್ಟು ದೂರದಲ್ಲಿತ್ತು. ಈ ದಾರಿಯನ್ನು ತಲುಪಲು ಸುಮಾರು ಆರು ಗಂಟೆಗಳು ಬೇಕಾಗುತ್ತೆಂದು ಗೂಗಲ್ ನಕ್ಷೆ ತೋರಿಸುತ್ತಿತ್ತು. ಅದಕ್ಕೆ ಸರಿಯಾಗಿ ನಾವು ಚುಮು ಚುಮು ಚಳಿಯಲ್ಲಿ ಇನ್ನೂ ಸೂರ್ಯೋದಯ ವಾಗುವ ಮೊದಲೇ ಹೊರಟೆವು. ಕತ್ತಲಲ್ಲಿ ಪುಟ್ಟ ಪಟ್ಟಣ ಟ್ವಿನ್ಜೆಲ್ ದಾಟಿದೆವು. ದಾರಿಯಲ್ಲಿ ರಸ್ತೆ ತಡೆ ಇದೆಯಾ ಎಂದು ಕೇಳಲು ಹೆದ್ದಾರಿ ಸ್ಥಿತಿಯ ಬಗೆಗೆ ವಿಚಾರಿಸಲು ಇದ್ದ ಸಂಖ್ಯೆಗೆ ಫೋನು ಮಾಡಿದಾಗ ಅಷ್ಟು ಬೆಳಗಿನ ಜಾವದಲ್ಲೂ ಫೋನೆತ್ತಿ ನಮ್ಮ ಪ್ರಶ್ನೆಗಳನ್ನು ಕೇಳಿ ನಮ್ಮ ದಾರಿಯಲ್ಲಿ ಏನೂ ತೊಂದರೆಯಿಲ್ಲ ಎಂದು ಖಾತ್ರಿ ಪಡಿಸಿದ ಇಲ್ಲಿನ ವ್ಯವಸ್ಥೆಯ ಬಗೆಗೆ ನಮಗೆ ಸಂತೋಷ ವಾಯಿತು.  

ನಿಧಾನವಾಗಿ ಬೆಳಕಾಗುತ್ತಿದ್ದಂತೆ ಸುತ್ತಲಿನ ಪ್ರಕೃತಿ ಸೌಂದರ್ಯ ನಮಗೆ ಗೋಚರಿಸತೊಡಗಿತು. ಡನ್ ಸ್ಟನ್ ಸರೋವರದ ಎದುರಿನ ಒಂದು ಚಂದದ ಜಾಗದಲ್ಲಿ ಚಹಾ ಕುಡಿಯೋಣವೆಂದು ನಿಲ್ಲಿಸಿದೆವು. ಹಿಂದೆಯೇ ತೋಟ, ಮುಂದೆ ಹಣ್ಣು, ತರಕಾರಿಗಳನ್ನು ಮಾರುವ ಸುಂದರವಾದ ಅಂಗಡಿ. ಅಲ್ಲೊಬ್ಬ ಚೂಟಿ ಹುಡುಗ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಅವನ ಅಮ್ಮನ ತೋಟವಂತೆ. ಇವತ್ತು ಅವನ ರಜೆಯ ಮೊದಲ ದಿನವಾದ್ದರಿಂದ ಅಮ್ಮನಿಗೆ ನೆರವಾಗಲು ಬಂದಿದ್ದ. 


ಅಲ್ಲಿಂದ ಸ್ವಲ್ಪ ಮುಂದೆ ಹೋದಾಗ  Roaring Meg Stream ಹರಿಯುತ್ತಿತ್ತು. ಇಳಿದು ನೋಡಿದರೆ ಹೆಸರಿಗೆ ತಕ್ಕಂತೆ ಬೋರ್ಗರೆಯುತ್ತ ಹರಿಯುತ್ತಿದ್ದ ಮೆಗ್ ನದಿ ಮತ್ತು ಅದಕ್ಕೆ ಕಟ್ಟಿದ ಜಲ ವಿದ್ಯುತ್ ಸ್ಥಾವರ ಕಂಡಿತು. ಇಲ್ಲಿನ ವಿದ್ಯುತ್ ಉತ್ಪಾದನೆಯ ಬಹುಪಾಲು ಇಂತಹ ಸ್ಥಾವರಗಳಿಂದ ಪೂರೈಕೆಯಾಗುತ್ತದಂತೆ. 

ಮುಂದಿನ ದಾರಿಯಲ್ಲಿ  ಬೃಹತ್ ವಕಾಟಿಪು ಸರೋವರ ಕಾಣಲು ಆರಂಭಿಸಿತು. ಈ ಸರೋವರದ ಸೌಂದರ್ಯ ನಮ್ಮನ್ನು ಬಹಳ ಆಕರ್ಷಿಸಿತು. ಪ್ರತಿ ತಿರುವಿನಲ್ಲೂ  ಹೊಸತರಂತೆ ಕಾಣುತ್ತಿದ್ದ ಈ ಸರೋವರ ಛಾಯಾಗ್ರಾಹಕರನ್ನು ಮರುಳುಗೊಳಿಸುತ್ತಿತ್ತು. ಅಲ್ಲಲ್ಲಿ ಕ್ಯಾಂಪಿಂಗ್ ಮಾಡುವವರಿಗೆ ಜಾಗ ಮಾಡಿಟ್ಟಿದ್ದರು. ಜನಗಳು ಕ್ಯಾನ್ಪರ್ ವ್ಯಾನುಗಳು, ಟೆಂಟುಗಳನ್ನು ಹಾಕಿಕೊಂಡು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದರು.

  ಟೇಯನೌನಲ್ಲಿ ನಿಲ್ಲಿಸಿ  ಊಟ ಮಾಡಿಕೊಂಡು ಕಾರುಗಳಿಗೆ ಪೆಟ್ರೋಲ್ ತುಂಬಿಸಿ ಮಿಲ್ಫಾರ್ಡ್ ರಸ್ತೆಯಲ್ಲಿ ಚಲಿಸಲು ಆರಂಭಿಸಿದೆವು.  ಇನ್ನು ಸುಮಾರು ೧೧೨ ಕಿ.ಮೀ ಗಳಷ್ಟು ದೂರ ಚಲಿಸಿದರೆ ಫಿಯೋಫಿಯೊತಹಿ ಈ ರಸ್ತೆ ಇಲ್ಲಿನ ಅತ್ಯಂತ ಸುಂದರ ರಸ್ತೆಗಳಲ್ಲಿ ಒಂದು. ದಾರಿಯುದ್ದಕ್ಕೂ ಅನೇಕ ಸುಂದರ ಜಾಗಗಳು ಸಿಗುತ್ತಾ ಹೋಗುತ್ತದೆ. ಆದರೆ ಯಾವುದೇ ತಿಂಡಿ ಅಂಗಡಿಗಳು, ಮೊಬೈಲ್ ಟವರುಗಳು ಇಲ್ಲಿಲ್ಲ. ಆದ್ದರಿಂದ ಪರಿಸರ ಶಾಂತವಾಗಿದೆ. 

ಮಿರರ್ ಸರೋವರ ಎಂಬ ಜಾಗದಲ್ಲಿ ಹೆಸರಿಗೆ ಅನ್ವರ್ಥವಾಗುವಂತೆ ಸುತ್ತಲಿನ ಅರಲ್ ಬೆಟ್ಟಗಳ ಪ್ರತಿಬಿಂಬ ಸರೋವರದ ನೀರಿನಲ್ಲಿ ಕಾಣುತ್ತದೆ. ಸರೋವರದ ಸುತ್ತಲೂ ಇರುವ ಪಕ್ಷಿಗಳು ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಸುತ್ತವೆ. ದಾರಿಯಲ್ಲಿ ಜಾಗಕ್ಕೂ ಮೊದಲು ಹಾಕಿರುವ ಫಲಕಗಳು, ಕಾರು ನಿಲ್ಲಿಸಲು ಮಾಡಿರುವ ಸುಸಜ್ಜಿತ ಜಾಗ, ಶೌಚಗ್ರಹಗಳು, ಜಾಗದ ಬಗೆಗೆ ಮಾಹಿತಿ- ಇವೆಲ್ಲ ಇಲ್ಲಿನ ಪ್ರವಾಸವನ್ನು ಮೆಲುಕು ಹಾಕುವಂತೆ ಮಾಡುತ್ತದೆ. 

ಮಿರರ್ ಸರೋವರ 
  ಹೊಲ್ಲಿಫೊರ್ಡ್ ನದಿಯ ಜಲಪಾತ, ಕ್ನೋಬ್ ಕಣಿವೆ, ಚಾಸ್ಮ್ ಅರಣ್ಯ ನಡಿಗೆ - ಇವೆಲ್ಲ ಈ ಸುಂದರ ದಾರಿಯಲ್ಲಿ ಸಿಕ್ಕಿದ ನಾವು ನಿಲ್ಲಿಸಿದ ಜಾಗಗಳು. ಎಲ್ಲ ಕಡೆ ೨-೩ ಗಂಟೆ ನಡೆದು ಹೋಗುವ ಚಾರಣದ ದಾರಿಗಳೂ ಇದ್ದವು. ಸಮಯದ ಅಭಾವದ ಕಾರಣ ನಮಗಿದ್ದ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಿ ಮುಂದುವರಿದೆವು. 
ಚಾಸ್ಮ್ ಅರಣ್ಯ 

ಹೀಗೆ ನಮ್ಮ ಪಿಯೋ ಪಿಯೋ ತಹಿಯ ಪ್ರವಾಸ ಒಂದು ದಿವ್ಯ ಅನುಭವ ನೀಡಿದ್ದರಲ್ಲಿ ಸಂಶಯವಿಲ್ಲ. ಸಾವಿರಾರು ಮೈಲಿ ಪಯಣಿಸಿ ಖಂಡಗಳನ್ನು ದಾಟಿ ಬಂದು ಒಂದು ಹೊಸ ಭೂಭಾಗವನ್ನು ನೋಡಿದ, ಅನುಭವಿಸಿದ ಧನ್ಯತೆ ನಮ್ಮದಾಗಿದೆ

Published on 10-05-2025



                                                                                                                                                                                                                                                                                                                                                                                                                             

ಭಾನುವಾರ, ಏಪ್ರಿಲ್ 21, 2024

ಸುಂದರ ತಾಣ ಕ್ವೀನ್ಸ್ ಟೌನ್ (ನ್ಯೂಜಿಲಾಂಡ್ ಅನುಭವಗಳು-1)


ವಕಾಟಿಪು ಸರೋವರದ ತೀರದಲ್ಲಿ ಕ್ವೀನ್ಸ್ ಟೌನ್ ಪಟ್ಟಣ 

ಭೂಮಿಯ ದಕ್ಷಿಣಾರ್ಧ ಗೋಳದ ಕಟ್ಟಕಡೆಯ ದೇಶವಾದ ನ್ಯೂಜಿಲ್ಯಾಂಡ್  ಪ್ರಪಂಚದ ಸುಂದರವಾದ ದೇಶಗಳಲ್ಲಿ ಒಂದು. ದೇಶದ ದಕ್ಷಿಣ ದ್ವೀಪಗಳ ಒಟಾಗೋ ಪ್ರಾಂತದ ಒಂದು ಪ್ರಮುಖ ಪ್ರವಾಸೀ ತಾಣ ಕ್ವೀನ್ಸ್ ಟೌನ್. ವಕಾಟಿಪು ಸರೋವರ ಮತ್ತು ಬೆಟ್ಟಗಳಿಂದ ಸುತ್ತುವರಿದಿರುವ ಈ ಊರು  ಒಂದು ಸುಂದರ ಪ್ರದೇಶ ಮತ್ತು ಪ್ರವಾಸಿಗರ ಸ್ವರ್ಗ. ವಕಾಟಿಪು ಮಹಾ ಸರೋವರ ನ್ಯೂಜಿಲಾಂಡಿನ ಅತ್ಯಂತ ದೊಡ್ಡ ಸರೋವರ. ಸುಮಾರು 275 ಚದರ ಮೈಲಿಗಳಷ್ಟು  ವಿಶಾಲವಾಗಿರುವ ಈ ಸರೋವರದ ಉದ್ದ 80 ಕಿ. ಮೀ ಗಳು. ಉತ್ತರದಲ್ಲಿ ಗ್ಲೆನೋರ್ಚಿ ಎಂಬ ಪಟ್ಟಣದಿಂದ ದಕ್ಷಿಣದಲ್ಲಿ ಕಿಂಗ್ಸ್ಟೋನ್ ಎಂಬ ಪಟ್ಟಣದ ತನಕ ಹಬ್ಬಿಕೊಂಡಿರುವ ಈ ಅಪಾರ ಜಲರಾಶಿಯ ಉತ್ತರದ ತೀರದಲ್ಲಿ ಕ್ವೀನ್ಸ್ ಟೌನ್ ಪಟ್ಟಣ ಇದೆ. ಸಿಹಿ ನೀರಿನ ಈ ಮಹಾ ಸರೋವರಕ್ಕೆ ರೀಸ್ ಮತ್ತು ಡಾರ್ಟ್ ನದಿಗಳಿಂದ ನೀರು ಹರಿಯುತ್ತದೆ. ಅಲ್ಲದೆ ಸುತ್ತುವರಿದಿರುವ ಹಿಮಾಚ್ಚಾದಿದ ಬೆಟ್ಟಗಳಿಂದ ಹಿಮ ಕರಗಿದ ನೀರು, ಮಳೆ ನೀರು ಹರಿದು ಬಂದು ಈ ಸರೋವರ ಸದಾ ತುಂಬಿರುವಂತೆ ನೋಡಿಕೊಳ್ಳುತ್ತದೆ.  ಇಲ್ಲಿನ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸುವುದೇ ಇಲ್ಲಿಗೆ ಬರುವ ಪ್ರವಾಸಿಗರ ಪ್ರಥಮ ಆಕರ್ಷಣೆ.  ಸುಸಜ್ಜಿತವಾದ ವಿಮಾನ ನಿಲ್ದಾಣ ಇರುವುದರಿಂದ ವಿಮಾನದಲ್ಲಿ ಇಲ್ಲಿಗೆ ಬರಬಹುದು. ಅಥವಾ ಇಲ್ಲಿನ ಸುಂದರ ರಸ್ತೆಗಳಲ್ಲಿ ಕಾರು ಚಲಾಯಿಸಿಕೊಂಡು ಸುಂದರವಾದ ದೃಶ್ಯಗಳನ್ನು ಸವಿಯುತ್ತಾ ಇಲ್ಲಿಗೆ  ಬರಬಹುದು. ರಸ್ತೆಗಳ   ಮೂಲಕ ಪ್ರವಾಸ ಮಾಡುವುದು ಈ ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಮಾಧ್ಯಮ.  ವಿದೇಶದಿಂದ ಬಂದು ಇಲ್ಲಿ ಪ್ರವಾಸ ಮಾಡ ಬಯಸುವ ಪ್ರವಾಸಿಗರಿಗೆ ಯಾವ ತರಹದ ಕಾರು ಬೇಕೋ ಆ ತರಹದ ಕಾರನ್ನು ಒದಗಿಸುವ ವ್ಯವಹಾರ ಇಲ್ಲಿನ ಲಾಭದಾಯಕ ಉದ್ಯಮ ಅನಿಸುತ್ತದೆ. ಅಂತಹ ಅನೇಕ ಸಂಸ್ಥೆಗಳು ಈ ಸೌಲಭ್ಯವನ್ನು ಒದಗಿಸುತ್ತವೆ.  ನಾವು ಕ್ರೈಸ್ಟ್ ಚರ್ಚ್ ಪಟ್ಟಣಕ್ಕೆ ವಿಮಾನದಲ್ಲಿ ಬಂದು ನಂತರ ಕಾರು ಚಲಾಯಿಸಿಕೊಂಡು  ಇಲ್ಲಿಗೆ ಬಂದೆವು. 

ನಮ್ಮ ಮನೆಯಿಂದ ಕಾಣುತ್ತಿದ್ದ ಸರೋವರದ ದೃಶ್ಯ 

ಬಂಜಿ ಜಂಪಿಂಗ್, ಜೆಟ್ ಬೋರ್ಡಿನ್ಗ್, ವೇಗದ ದೋಣಿಗಳು, ಪ್ಯಾರಾ ಗ್ಲಾಯ್ಡಿಂಗ್, ಸ್ಕಾಯ್ ಡೈವಿಂಗ್- ಇಂತಹ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಇಲ್ಲಿಗೆ ಬಂದರೆ ಇವುಗಳನ್ನೆಲ್ಲ ಮಾಡಬೇಕೆಂಬುದು ಯುವ ಪ್ರವಾಸಿಗರ ಅಭಿಮತ. .ಪ್ರವಾಸಿಗಳಿಗೆ ಈ ಸಾಹಸ ಚಟುವಟಿಕೆಗಳನ್ನು ಒದಗಿಸಲು ಪೈಪೋಟಿ ನಡೆಸುತ್ತಿರುವ ಅನೇಕ ಅಂಗಡಿಗಳು ಪಟ್ಟಣದಲ್ಲಿದೆ. ಸೈಕಲ್ ಮಾಡಿಕೊಂಡು ಬೆಟ್ಟಗಳನ್ನು ಹತ್ತುವುದು, ಚಾರಣ- ಇವೆಲ್ಲ ಈ ದೇಶದಲ್ಲಿ ಮಾಡಬಹುದಾದ ಕೆಲವು ಜನಪ್ರಿಯ ಚಟುವಟಿಕೆಗಳು. ಇವುಗಳಿಗೆಲ್ಲ ಬೇಕಾಗುವ ಸಲಕರಣೆಗಳನ್ನು ಎರವಲು ಪಡೆಯುವ ಅಂಗಡಿಗಳೂ ಇಲ್ಲಿವೆ. ಪ್ರವಾಸಿಗರಿಗೆ ಬೇಕಾದ ಚಿಕ್ಕ ಚಿಕ್ಕ ಅಗತ್ಯ ಗಳನ್ನು ಮನಗಂಡು ಸೌಲಭ್ಯಗಳನ್ನು ದೇಶದ ತುಂಬೆಲ್ಲ ಮಾಡಿಟ್ಟಿದ್ದಾರೆ. ಇಲ್ಲಿ ಮಾಡಬಹುದಾದ ಎಲ್ಲ ಚಟುವಟಿಕೆಗಳ ಮಾಹಿತಿ, ಅದಕ್ಕೆ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಬೇಕಾದ ಎಲ್ಲ ಸೌಕರ್ಯ ಗಳೂ ಇಲ್ಲಿದೆ. ಇವನ್ನೆಲ್ಲ ಮಾಡಲು ಮನಸ್ಸಿಲ್ಲದಿದ್ದರೆ  ನಗರದಲ್ಲಿ ಸುಂದರ ಉದ್ಯಾನವಿದೆ. ಇಲ್ಲಿಗೆ ವಿಶಿಷ್ಟವಾದ ಪಕ್ಷಿ ಸಂಕುಲವಿದೆ. ಅವುಗಳ ವೀಕ್ಷಣೆ ಮಾಡಬಹುದು. ಗಾಂಡೊಲ ಸವಾರಿ ಮಾಡಬಹುದು. ದೊಡ್ಡ ದೊಡ್ಡ ದೋಣಿಗಳನ್ನು ಹತ್ತಿಕೊಂಡು ಸರೋವರದ ಮೂಲಕ ಸಂಚರಿಸುತ್ತ ಪ್ರಕ್ರತಿ ವೀಕ್ಷಣೆ ಮಾಡಬಹುದು. 

 ಪಟ್ಟಣದಲ್ಲಿ ವಿವಿಧ ರೀತಿಯ,ದೇಶದ ಪ್ರವಾಸಿಗರು ತುಂಬಿರುವುದು ಕಾಣುತ್ತದೆ. ಎಲ್ಲ ದೇಶದ ಜನರ ಆಹಾರದ ಅಗತ್ಯಗಳನ್ನು ಪೂರೈಸಲು ವಿವಿಧ ದೇಶಗಳ  ಆಹಾರವನ್ನು ಬಡಿಸುವ ಹೋಟೆಲುಗಳು ಇಲ್ಲಿವೆ. ಅನೇಕ ಭಾರತೀಯ ಹೋಟೆಲುಗಳೂ ಇಲ್ಲಿದ್ದವು.  ಇಷ್ಟು ಜನ ಬರುವ ಜಾಗವಾದರೂ ತುಂಬಾ ಚೊಕ್ಕವಾಗಿದ್ದು ಎಲ್ಲಿಯೂ ಒಂದು ಕಸ, ಬೇಡದ ಪ್ಲಾಸ್ಟಿಕ್ ಹುಡುಕಿದರೂ ಸಿಗುವುದಿಲ್ಲ.  ವಕಾಟಿಪು ಸರೋವರದ ಎದುರಿಗೇ ಇರುವ ನಮ್ಮ ವಾಸಸ್ಥಾನ ಪಟ್ಟಣದ ಕೇಂದ್ರ ಭಾಗದಲ್ಲಿತ್ತು. 


ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ :- 

        ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ ರಸ್ತೆ 

ಕ್ವೀನ್ಸ್ ಟೌನ್ ನಿಂದ 30 ಕಿ. ಮೀ ಉದ್ದದ ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ ಎನ್ನುವ ಸುಂದರವಾದ ರಸ್ತೆಯ ಮೂಲಕ ಹೋಗಿ ಬರುವುದು ಒಂದು ಸುಂದರ ಅನುಭವ. ಗ್ಲೆನೋರ್ಕಿ ಪಟ್ಟಣವನ್ನು ಕ್ವೀನ್ಸ್ ಟೌನ್ ನಗರಕ್ಕೆ ಸೇರಿಸುವ ಈ ರಸ್ತೆ ನಿರ್ಮಾಣವಾಗಿದ್ದು 1951 ರಿಂದ 1956 ರ ನಡುವೆ. ಈ ರಸ್ತೆಯ ನಿರ್ಮಾಣ ಈ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದೆ. ಈ ರಸ್ತೆ ನಿರ್ಮಾಣವಾಗುವ ಮೊದಲು ಸರೋವರದ ಜಲಮಾರ್ಗದಲ್ಲಿಯೇ ಈ ಎರಡು ಊರುಗಳ ಸಂಪರ್ಕವಂತೆ. ವಕಾಟಿಪು ಸರೋವರದ ಪಕ್ಕವೇ ಸಾಗುವ ಈ ಸುಂದರ ರಸ್ತೆ ಇಲ್ಲಿನ ಅತ್ಯುತ್ತಮ ಮತ್ತು ಸುಂದರ ರಸ್ತೆಗಳಲ್ಲಿ ಒಂದು. ದಾರಿಯಲ್ಲಿ ಬೆನೆಟ್ಟೊನ್ ಬ್ಲಫ್ ಒಂದು ಸುಂದರ ಜಾಗ ಸಿಗುತ್ತದೆ. ಅಲ್ಲಿ ಇಳಿದರೆ ಒಂದು ಚಿಕ್ಕ ಬೆಟ್ಟ. ಅದನ್ನು ಹತ್ತಿಕೊಂಡು ಹೋದರೆ ಮತ್ತೆ ವಿಶಾಲವಾದ ವಕಾಟಿಪು ಸರೋವರದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಯೂ ಮಧ್ಯೆ ಮಧ್ಯೆ ತಂಗುದಾಣಗಳನ್ನು ಮಾಡಿಟ್ಟು ತುಂಬಾ ಮಳೆ ಬಂದರೆ ನಿಲ್ಲಲು ಸೂರು ಇರುವಂತೆ ಮಾಡಿದ್ದಾರೆ.  ಇಂತಹ ಚಿಕ್ಕ ಚಿಕ್ಕ ಸುಂದರ ಜಾಗಗಳು ದಾರಿಯುದ್ದಕ್ಕೂ ಸಿಗುತ್ತವೆ. 
            ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ತೋಟಗಳು ಕಾಣಸಿಗುತ್ತವೆ. ಇಲ್ಲಿನ ತೋಟಗಳೆಂದರೆ ಅಲ್ಲಿ ಹಸು, ಕುರಿ, ಜಿಂಕೆಗಳು, ಅಲ್ಪಾಕಗಳು  ಸಾವಿರ ಸಾವಿರ ಸಂಖ್ಯೆಯಲ್ಲಿ ಮೇಯುತ್ತಿರುತ್ತವೆ. ಅವುಗಳನ್ನು ನೋಡುವುದೇ ಚಂದ. ಈ ದೃಶ್ಯ ಗಳನ್ನು ಸವಿಯುತ್ತಾ ತೆರಳುವುದು ಒಂದು ಆಹ್ಲಾದಕರ ಅನುಭವ.

ರಸ್ತೆಯ ಬದಿಯಲ್ಲಿ ಕಾಣ ಸಿಗುವ ದೃಶ್ಯ 

ಗ್ಲೆನೋರ್ಕಿ:-

ಕಾಮನಬಿಲ್ಲು ಮೂಡಿರುವ ವಕಾಟಿಪು ಸರೋವರ 

ಗ್ಲೆನೋರ್ಕಿ ಒಂದು ಸುಂದರವಾದ ಪುಟ್ಟ ಪಟ್ಟಣ. ಇಲ್ಲಿ ಮತ್ತೆ ವಕಾಟಿಪು ಸರೋವರದ ನೋಟವನ್ನು ಕಣ್ತುಂಬಿಕೊಳ್ಳಬಹುದು. ಅನೇಕ ಚಾರಣದ ರಸ್ತೆಗಳು ಇಲ್ಲಿಂದ ಆರಂಭವಾಗುವುದರಿಂದ ಚಾರಣಿಗರ ಜನಪ್ರಿಯ ಜಾಗ ಇದು. ಡಾರ್ಟ್ ನದಿಯು ಇಲ್ಲಿಯೇ ಬಂದು ಸರೋವರವನ್ನು ಸೇರುವುದರಿಂದ ನದಿಯ ಮೇಲೆ ಮಾಡುವ ಸಾಹಸ ಕ್ರೀಡೆಗಳಿಗೂ ಇಲ್ಲಿ ಅವಕಾಶವಿದೆ. ಅಲ್ಲಿ ಮಳೆ ಬರುತ್ತಿತ್ತು. ಮಳೆಯಲ್ಲಿ ಕೊಡೆ ಹಿಡಿದು ಎಲ್ಲರೂ ಇಲ್ಲಿನ ಲಗೂನ್ ಬಳಿ ಒಂದು ಚಿಕ್ಕ ನಡಿಗೆ ಮಾಡಿದೆವು. ಇಲ್ಲಿನ ಸುಂದರವಾದ  ಮೀ. & ಮಿಸೆಸ್ ಗ್ಲೇನ್ ಕೆಫೆಯಲ್ಲಿ ಕುಳಿತು ಊಟ ಮಾಡಿದೆವು .  

ಲಗೂನ್ 
ಪ್ಯಾರಾಡೈಸ್:-

ಪ್ಯಾರಾಡೈಸ್  ನ ವಿಹಂಗಮ ನೋಟ 

ಗ್ಲೆನೋರ್ಕಿ ಯಿಂದ ಸ್ವಲ್ಪ ಮುಂದೆ ಹೋದರೆ ಇನ್ನೊಂದು ಪ್ರವಾಸಿ ತಾಣ ಹೆಸರು ಪ್ಯಾರಾಡೈಸ್ ಅಂದರೆ ಸ್ವರ್ಗ! ನೋಡೋಣ ಎಂದು ಹೋದೆವು. ಇಲ್ಲಿಗೆ ತಲುಪುವ ದಾರಿ ಸ್ವಲ್ಪ ದುರ್ಗಮವಾಗಿತ್ತಾದರೂ ಸುಂದರ ರಮಣಿಯ ದೃಶ್ಯಗಳಿದ್ದವು. ಅಲ್ಲಿ ಜನರು ಪರ್ವತದಲ್ಲಿ ಬೈಕ್ ತೆಗೆದುಕೊಂಡು ಹೋಗಲು ತಯಾರಾಗುತ್ತಿದ್ದರು. ರಸ್ತೆಯನ್ನು ಬಿಟ್ಟು ಕಚ್ಚಾ ರಸ್ತೆಗಳಲ್ಲಿ ವಾಹನ ಚಲಾಯಿಸುವ ಆನಂದವನ್ನು ಸವಿಯುತ್ತಿದ್ದರು. ದೊಡ್ಡ ದೊಡ್ಡ ಕ್ಯಾರವಾನ್ ಗಳನ್ನು  ಕ್ಯಾನ್ಪರ್  ವ್ಯಾನುಗಳನ್ನು  ಬಾಡಿಗೆಗೆ ತೆಗೆದುಕೊಂಡು ಅದರಲ್ಲಿಯೇ ವಾಸವಿದ್ದು ಪ್ರವಾಸ ಮಾಡುವುದು ಈ ದೇಶದ ಇನ್ನೊಂದು ಜನಪ್ರಿಯ ಚಟುವಟಿಕೆ. ಅಂತಹ ಪ್ರವಾಸಿಗರ ಮತ್ತು ಮೌಂಟನ್ ಬೈಕಿಂಗ್ ಮಾಡುವವರ ಅಚ್ಚುಮೆಚ್ಚಿನ ತಾಣವಂತೆ ಪ್ಯಾರಾಡೈಸ್! 

ಲೇಖನ- ಸುಧಾ ಶಶಿಕಾಂತ್ , ಮಸ್ಕತ್ 

 ಈ ಪ್ರವಾಸ ಕಥನದ ಈ ಭಾಗ ಉದಯವಾಣಿ ದೇಸೀ ಸ್ವರದ  ಮೇ ೩, ೨೦೨೫ ರಂದು ಪ್ರಕಟವಾಗಿತ್ತು 


 













ಭಾನುವಾರ, ಏಪ್ರಿಲ್ 7, 2024

ಮಸ್ಕತ್ ಕನ್ನಡಿಗರ ಕುಲಪುರೋಹಿತ ಆಚಾರ್ಯರು






ಉದ್ಯೋಗಕ್ಕಾಗಿ ವಿದೇಶಕ್ಕೆ ಬಂದು ನೆಲೆಸುವುದು ಭಾರತಿಯರಿಗಂತೂ ಸಾಮಾನ್ಯವಾದ ವಿಚಾರ. ಮಧ್ಯಪ್ರಾಚ್ಯದ ದೇಶಗಳು ಭಾರತಿಯರ ಎರಡನೆಯ ಮನೆ ಅಂತಲೇ ಹೇಳಬಹುದು. ಈ ಮರಳುಗಾಡನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಇಲ್ಲಿಯ ಜೀವನಕ್ಕೆ ಹೊಂದಿಕೊಳ್ಳುತ್ತಾ ಸಾಧ್ಯವಿದ್ದಷ್ಟು ವರ್ಷ ಇಲ್ಲಿ ಕೆಲಸ ಮಾಡಿ, ಇಲ್ಲಿ ಉಳಿಸಿದ ಹಣದಿಂದ ಸ್ವದೇಶದಲ್ಲಿ ಮನೆ ಮಠ ಮಾಡಿಕೊಂಡು ಮತ್ತೆ ಭಾರತಕ್ಕೆ ಹೋಗಿ ನಿವೃತ್ತ ಜೀವನವನ್ನು ಕಳೆಯುವುದು ಗಲ್ಫ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಜೀವನ ನಿಯಮ. ಆದರೆ ಇಲ್ಲಿ ಬಂದು ನೆಲಸಿ ಇಲ್ಲಿನ ನೆಲದಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳಸಿ, ನಮ್ಮ ಪರಂಪರೆಯ ಒಂದು ಭದ್ರವಾದ ಬುನಾದಿಯನ್ನೇ ಹಾಕಿಕೊಟ್ಟು, ತಾವು ನೆಲಸಿದಲ್ಲೆಲ್ಲ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಅಂತಹ ಒಬ್ಬ ಅಪರೂಪದ ಮಸ್ಕತ್ತಿನ ಕನ್ನಡಿಗ ನಮ್ಮ ಶ್ರೀ ಕಲ್ಮಂಜೇ ಲಕ್ಷ್ಮೀ ನಾರಾಯಣ ಆಚಾರ್ಯರು. ಮಸ್ಕತ್ ಕನ್ನಡಿಗರಿಗೆ ತಂದೆಯಂತೆ ಇದ್ದು ಆಧ್ಯಾತ್ಮ ವೈದಿಕ ಪರಂಪರೆಯ ದೀಪವನ್ನು ಈ ಬಿಸಿಲುಭೂಮಿಯ ಮನೆ ಮನೆಯಲ್ಲಿ ಬೆಳಗಿ, ಅದಕ್ಕೊಂದು ಶ್ರೀಮಂತ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ನಗುಮುಖದ ಆಚಾರ್ಯರು ಸಂಪರ್ಕಕ್ಕೆ ಬಂದವರೆನ್ನೆಲ್ಲ ಸೆಳೆಯುತ್ತಿದ್ದ ಧೀಮಂತ ವ್ಯಕ್ತಿತ್ವ. ತಮ್ಮ ನಲವತ್ತೆರಡು ವರ್ಷಗಳ ಒಮಾನಿನನ ವಾಸದಲ್ಲಿ ಇಲ್ಲಿರುವ ಭಾರತಿಯರೆಲ್ಲರಿಗೆ ಸಮಾಧಾನವನ್ನು ಹೇಳುವ ಹಿರಿಯಣ್ಣನಾಗಿ, ಇಲ್ಲಿನ ದೇವಾಲಯಗಳಲ್ಲಿ ನಡೆಯುವ ವೈದಿಕ ಸಂಪ್ರದಾಯದ ಪೂಜೆಗಳ ಮುಂದಾಳುವಾಗಿ, ಸಂಘಟಕನಾಗಿ ಅವರು ಮಾಡಿದ ಸಮಾಜ ಸೇವೆ ಅತ್ಯಮೂಲ್ಯ ವಾದದ್ದು.

 ವೈಯ್ಯಕ್ತಿಕ ಜೀವನ:-

 ಉಡುಪಿಯಲ್ಲಿ ಶ್ರೀಮತಿ ಕಾವೇರಮ್ಮ ಮತ್ತು ಶ್ರೀ ಹಯವದನಾಚಾರ್ಯರ ಮಗನಾಗಿ ಜನಿಸಿದ ಆಚಾರ್ಯರ ವಿದ್ಯಾಭ್ಯಾಸ ಉಡುಪಿಯಲ್ಲಿ ಆಯಿತು. ಬಾಲ್ಯದಲ್ಲಿಯೇ ವೈದಿಕ ಪರಂಪರೆಯಲ್ಲಿ, ಆಚರಣೆಗಳಲ್ಲಿ ಆಸಕ್ತಿ ಬೆಳೆಯಲು ಅವರ ತಾತ ಕಾರಣರಾದರು. ಎಂಟು ವರ್ಷದ ಬಾಲಕ ಆಚಾರ್ಯರಿಗೆ ಉಪನಯನ ಮಾಡಿ ಪೂಜಾ ವಿಧಿ ವಿಧಾನಗಳನ್ನು ಅವರಿಗೆ ಅವರ ತಾತ ಕಲಿಸಿದರು. ಬಾಲ್ಯದಲ್ಲಿಯೇ ಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳನ್ನು ನೋಡುತ್ತಾ, ಮಾಡುತ್ತಾ ಆಚಾರ್ಯರು ಬೆಳೆದರು. ಬಿ ಕಾಮ್ ಪದವಿಯ ನಂತರ ಉದ್ಯೋಗ ನಿಮಿತ್ತ 1982 ರಲ್ಲಿ ಒಮಾನಿನ ಸಲಾಲಕ್ಕೆ ಬಂದಿಳಿದ ಆಚಾರ್ಯರು ಅಲ್ಲಿನ ಉಡುಪಿ ಹೋಟೆಲಿನ ಮ್ಯಾನೇಜರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅಲ್ಲಿ 3-4 ವರ್ಷಗಳ ಉದ್ಯೋಗದ ಬಳಿಕ ಉಷಾ ಅವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 1988 ರಲ್ಲಿ ಮಸ್ಕತ್ತಿಗೆ ಆಗಮಿಸಿದರು. ಅವರ ಪುತ್ರ ಗುರು ಇಲ್ಲಿಯೇ ಹುಟ್ಟಿ ಬೆಳೆದ. ಇವರು ರುವಿಯ ಒಮಾನ್ ಎಕ್ಸಪ್ರೆಸ್ ಹೋಟೆಲಿನಲ್ಲಿ ಮ್ಯಾನೇಜರ್ ಆಗಿ, ಇಲ್ಲಿನ ಅನೇಕ ಖಾಸಗಿ ಕಂಪನಿಗಳಲ್ಲಿ ಲೆಕ್ಕ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ನಡೆಸುತ್ತಾ 2019 ರಲ್ಲಿ ನಿವೃತ್ತಿ ಹೊಂದಿದರು. ಅಷ್ಟರಲ್ಲಿಯೇ ಅವರ ಪುತ್ರ ಇಲ್ಲಿಯೇ ಉದ್ಯೋಗ ಆರಂಭಿಸಿದ್ದರಿಂದ ತಮ್ಮ ವಾಸವನ್ನು ನಿವೃತ್ತಿಯ ನಂತರವೂ ಪತ್ನಿಯೊಂದಿಗೆ ತಮ್ಮ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಮುಂದುವರಿಸಿದ್ದರು.
 

 ಮಸ್ಕತ್ತಿನ ಸಾರ್ವಜನಿಕ ಉತ್ಸವಗಳಲ್ಲಿ ಆಚಾರ್ಯರು :- 

ಬಾಲ್ಯದ ಅವರ ಆಸಕ್ತಿಯಾದ ಪೂಜೆಗಳು ದೈವಭಕ್ತಿ ಆಚಾರ್ಯರ ವ್ಯಕ್ತಿತ್ವದ ಭಾಗವೇ ಆಗಿತ್ತು. ಹಾಗಾಗಿ ಅವರು ತಮ್ಮ ಈ ಆಸಕ್ತಿಯ ಕ್ಷೇತ್ರವನ್ನು ಮರಳುಗಾಡಿನ ಈ ಮುಸ್ಲಿಮ್ ದೇಶದಲ್ಲಿಯೂ ಮುಂದುವರಿಸಿದರು. ಮಸ್ಕತ್ತಿಗೆ ಬಂದ ಸ್ವಲ್ಪ ಸಮಯದಲ್ಲಿಯೇ ಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ತುಳುಕೂಟದ ಸಾರ್ವಜನಿಕ ಗಣೇಶೋತ್ಸವದ ಪೂಜೆಯ ಹೊಣೆಯನ್ನು ಹೊತ್ತು 2006 ರ ವರೆಗೆ ಸುಮಾರು 20 ವರ್ಷಗಳು ನಿರಂತರವಾಗಿ ಮಸ್ಕತ್ತಿನ ಸಾರ್ವಜನಿಕ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು ಪ್ರತೀವರ್ಷ ಈ ಪೂಜೆಯಲ್ಲಿ ಒಂದೊಂದು ಬದಲಾವಣೆಯನ್ನು ತಂದಿದ್ದರು. ಭಕ್ತರೂ ಈ ಸೇವೆಗಳಲ್ಲಿ ಪಾಲ್ಗೊಳ್ಳುವಂತಾಗಲು ಲಡ್ಡುಸೇವೆ, 108 ಕಾಯಿ ಸೇವೆ, ರಂಗಪೂಜೆ ಮುಂತಾದ ಹೊಸ ಸೇವೆಗಳನ್ನು ಆರಂಭಿಸಿದರು. ಮಹಾರಾಷ್ಟ್ರೀಯರು ನಡೆಸುವ ಸಾರ್ವಜನಿಕ ಗಣೇಶೋತ್ಸವದ ಪೂಜೆಯನ್ನೂ ಹಲವು ವರ್ಷ ಆಚಾರ್ಯರು ಮಾಡಿದ್ದಾರೆ. 1997 ರಲ್ಲಿ ಸಮಾನ ಮನಸ್ಕರೊಂದಿಗೆ ಇವರು ಆರಂಭಿಸಿದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಹೋತ್ಸವವು ಪ್ರತೀ ವರ್ಷವೂ ತಪ್ಪದೇ ನಡೆಯುತ್ತ ಬಂದಿದೆ. ಅನೇಕ ವರ್ಷ ಮನೆಗಳಲ್ಲಿ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮಧ್ಯ ಆರಾಧನೆ ಆಚಾರ್ಯರ ಮನೆಯಲ್ಲಿಯೇ ನಡೆಯುತ್ತಿತ್ತು. ಸುಮಾರು 2005 ರಿಂದ ಇಲ್ಲಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಾ ಬಂದಿದೆ. ಇಲ್ಲಿ ಅನೇಕ ದೊಡ್ಡ ಭಾರತೀಯ ಉದ್ಯಮಿಗಳು ಹಲವು ರೀತಿಯ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ.. ಅಂತಹ ಉದ್ಯಮಗಳ ದೀಪಾವಳಿಯ ಲಕ್ಷ್ಮಿ ಪೂಜೆ, ಗಣಹೋಮ, ಇವುಗಳನ್ನೆಲ್ಲ ಆಚಾರ್ಯರು ಮಾಡುತ್ತಿದ್ದರು. ಓಂಕಾರ ಸಮಿತಿ (ಒಮಾನ್ ಕರ್ನಾಟಕ ಆರಾಧನಾ ಸಮಿತಿ) ಎಂಬ ಸಮಾನ ಮನಸ್ಕರ ಗುಂಪು 2011 ರಲ್ಲಿ ರೂಪುಗೊಂಡು ಇಲ್ಲಿ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವವನ್ನು ಆರಂಭಿಸಿದಾಗ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸುಮಾರು 10 ವರ್ಷಗಳ ಕಾಲ ಇವರು ನಡೆಸುವ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದರು. ಇವಲ್ಲದೇ ಬಂಟರು, ವಿಶ್ವ ಕರ್ಮ, ತುಳುವರು, ಅಯ್ಯಪ್ಪ ಪೂಜೆ- ಹೀಗೇ ಯಾವುದೇ ಸಮುದಾಯದವರು ಧಾರ್ಮಿಕ ಕಾರ್ಯಕ್ರಮ ವನ್ನು ಆಯೋಜಿಸಿ ಆಹ್ವಾನ ನೀಡಿದರೂ ನಗುತ್ತಲೇ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದ ಆಚಾರ್ಯರು ಭಕ್ತಿ ಮತ್ತು ನಿಷ್ಠೆಯಿಂದ ಅವನ್ನು ನೆರವೇರಿಸುತ್ತಿದ್ದರು. ಸತ್ಯನಾರಾಯಣ ಪೂಜೆ ಮತ್ತು ಆಚಾರ್ಯರು:- 2006 ರಲ್ಲಿ ಅವರ ತಂದೆಯ ಸಲಹೆಯಂತೆ ಮನೆಗಳಿಂದ ಆಹ್ವಾನ ಬಂದಾಗ ಹೋಗಿ ಸತ್ಯನಾರಾಯಣ ಪೂಜೆಯನ್ನು ಮಾಡಿಸಲು ತೊಡಗಿದ ಆಚಾರ್ಯರು ಮುಂದಿನ ವರ್ಷಗಳಲ್ಲಿ ಮಸ್ಕತ್ತಿನಲ್ಲಿ ಸತ್ಯನಾರಾಯಣ ಪೂಜೆಗೆ ಒಂದು ಹೊಸ ಪರಂಪರೆಯನ್ನೇ ಹುಟ್ಟು ಹಾಕಿದರು. ಅವರ ಸ್ಪಷ್ಟ ಮಂತ್ರೋಚ್ಚಾರಣೆ, ಕನ್ನಡ, ತುಳು, ಹಿಂದಿ- ಹೀಗೆ ಯಾವ ಭಾಷೆಯಲ್ಲಿ ಬೇಕಾದರೂ ಕಥೆ ಹೇಳುವ ಸಾಮರ್ಥ್ಯ, ಪೂಜೆಗೆ ಬಂದವರೆನ್ನೆಲ್ಲ ಸೇರಿಸಿಕೊಂಡು ವಿಷ್ಣು ಸಹಸ್ರನಾಮ, ಭಜನೆಗಳನ್ನು ಮಾಡಿಸುವ ಅವರ ಕ್ರಮಗಳೆಲ್ಲ ಅವರನ್ನು ಮಸ್ಕತ್ ಕನ್ನಡಿಗರ ಕುಲಪುರೋಹಿತರನ್ನಾಗಿಸಿತು. ಪೂಜೆ ಎಂದರೆ ಆಚಾರ್ಯರು, ಆಚಾರ್ಯ ರೆಂದರೆ ಪೂಜೆ ಎಂಬಂತೆ ಇಲ್ಲಿ ನೆಲಸಿದ ನಮ್ಮೆಲ್ಲರ ಮನೋಭಾವವಾಯಿತು. ಯಾರ ಮನೆಗೆ ಹೋದರೆ ಅಲ್ಲಿ ಎನಿರುತ್ತದೋ ಅದರಲ್ಲಿಯೇ ಹೊಂದಿಕೊಂಡು, ಪೂಜೆಯ ತಯಾರಿಯನ್ನೆಲ್ಲ ತಾವೇ ಮಾಡಿಕೊಂಡು ಭಕ್ತಿಯಿಂದ ಆಚಾರ್ಯರು ಮಾಡುತ್ತಿದ್ದ ಸತ್ಯನಾರಾಯಣ ಪೂಜೆಗೆ ತಲೆಭಾಗದವರೇ ಇಲ್ಲ. ಅಲ್ಲದೇ ಪೂಜೆ ಮಾಡಿಸಿದವರಿಗೆ ಮಾತ್ರವಲ್ಲ ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಈ ಪೂಜೆ ತಮ್ಮದೆಂಬ ಭಾವ ಬರುವಂತಹ ಧನಾತ್ಮಕ ವಾತಾವರವನ್ನು ತಮ್ಮ ಪೂಜೆಗಳಲ್ಲಿ ಆಚಾರ್ಯರು ತರಿಸುತ್ತಿದ್ದರು. ಇಂತಹ ಅಸಂಖ್ಯ ಪೂಜೆಗಳನ್ನು 2023 ರ ಆಕ್ಟೊಬರ್ ತನಕ ಬಿಡುವಿಲ್ಲದೆ ಆಚಾರ್ಯರು ಮಾಡಿಸಿದರು.

 ಉಡುಪಿ ಬ್ರಾಹ್ಮಣ ಸಮಾಜ:( UBS)- 

2016 ರಲ್ಲಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ಆರಂಭವಾದ ಈ ಸಂಘವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಸಾಮಾಜ ಸೇವೆಯನ್ನು ಮಾಡುತ್ತ ಒಮಾನ್ ಕನ್ನಡಿಗರನ್ನು, ಪ್ರಮುಖವಾಗಿ ಕರಾವಳಿ ಕರ್ನಾಟಕದ ಭಾಗದ ಜನರನ್ನು ಒಂದುಗೂಡಿಸುವಲ್ಲಿ ಉತ್ತಮ ಕಾರ್ಯವನ್ನು ಕೈಗೊಂಡಿದೆ. ಸೌರಮಾನ ಯುಗಾದಿ ಮತ್ತು ಶ್ರೀಕೃಷ್ಣನ ಜನ್ಮಾಷ್ಟಮಿ ಈ ಸಮೂಹದಿಂದ ಆಚರಿಸಲ್ಪಡುವ ಪ್ರಮುಖ ಹಬ್ಬಗಳು. ಈ ಹಬ್ಬಗಳನ್ನು ಪ್ರತಿವರ್ಷ ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಪ್ರಮುಖ ವಾರ್ಷಿಕ ಕಾರ್ಯಕ್ರಮ ವೆಂದರೆ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಂಗೀತ ಸೇವೆ. ಇಲ್ಲಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮ ಇವರ ಪ್ರಮುಖ ಆಕರ್ಷಣೆ. ಉಡುಪಿ ಬ್ರಾಹ್ಮಣ ಸಮಾಜದ ಕಾರ್ಯಕ್ರಮಗಳ ಹಿಂದಿರುವ ಶಕ್ತಿ ಲಕ್ಷ್ಮೀನಾರಾಯಣ ಆಚಾರ್ಯರು. ಇಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಯನ್ನು ಮೊದಲಿನಿಂದ ಕೊನೆಯತನಕ ಆಚಾರ್ಯರು ವಹಿಸಿಕೊಂಡು ಎಲ್ಲರನ್ನೂ ಸೇರಿಸಿಕೊಂಡು ನಡೆಸುತ್ತಿದ್ದರು. ಉಡುಪಿ ಬ್ರಾಹ್ಮಣ ಮಹಿಳೆಯರಿಗೆ ಭಜನೆ ಹಾಡುವಂತೆ ಹುರಿದುಂಬಿಸಿ ಇವರ ಒಂದು ಭಜನಾ ಮಂಡಳಿಯನ್ನು ಆರಂಭಿಸುವಲ್ಲಿ ಆಚಾರ್ಯರ ಪಾತ್ರ ದೊಡ್ಡದಾಗಿದೆ. ತುಳಸಿ ಸಂಕೀರ್ತನೆಯನ್ನು ಗುಂಪಿನ ಸದಸ್ಯರಿಗೆ ಕಲಿಸಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರ ಎದುರಿಗೆ ಪ್ರದರ್ಶಿಸಿ ಅವರಿಂದ ಭೇಷ್ ಎನಿಸಿಕೊಂಡಿದ್ದರು. ಪೂಜಾ ಕೈಂಕರ್ಯ, ಶ್ರೀಸೂಕ್ತದ ಪಾರಾಯಣ ಮುಂತಾದವನ್ನು ಎಲ್ಲರಿಗೂ ಕಲಿಸುವುದರಲ್ಲಿಯೂ ಉತ್ಸಾಹ ತೋರಿಸುತ್ತಿದ್ದ ಆಚಾರ್ಯರು ಮಸ್ಕತ್ತಿನ ಅನೇಕರಿಗೆ ಇವುಗಳನ್ನು ಕಲಿಸಿದ ಗುರುವೂ ಆಗಿದ್ದಾರೆ. ಯು ಬಿ ಎಸ್ ಗುಂಪಿನ ಸದಸ್ಯರು ಹೇಳುವಂತೆ ಎಲ್ಲರಿಗೂ ಆಚಾರ್ ಅಣ್ಣನಾಗಿದ್ದ ಅವರ ಮನೆ ಮತ್ತು ಮನ ಯಾವಾಗಲೂ ತೆರೆದಿತ್ತು. ಸಂತೋಷ ಅಥವಾ ದುಃಖ ಯಾವುದನ್ನೇ ಹಂಚಿಕೊಳ್ಳಲು ಆಚಾರ್ಯ ದಂಪತಿಗಳು ತಯಾರಿದ್ದರು ಅವರು ತಮ್ಮ ನಗು, ತುಂಟತನದ ವರ್ತನೆಗಳಿಂದ ಗುಂಪಿನ ಮಕ್ಕಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಮಸ್ಕತ್ತಿನಲ್ಲಿ ಇತರೆ ಗುಂಪುಗಳು ಆಯೋಜಿಸುವ ವಿವಿಧ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಯುಬಿಎಸ್ (UBS) ಸದಸ್ಯರ ಭಾಗವಹಿಸುವಿಕೆಗೆ ಅವರ ಪ್ರೋತ್ಸಾಹ ನೀಡುತ್ತಿದ್ದರು..ಅವರ ಪತ್ನಿ ಉಷಕ್ಕ ಆಚಾರ್ಯರ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಆಚರಣೆಗೆ ತರಲು ಆಚಾರ್ಯ ರೊಂದಿಗೆ ಶ್ರಮಿಸಿದರು . ಮಸ್ಕತ್‌ನಲ್ಲಿ ಮೊಸರು ಕುಡಿಕೆ ಉತ್ಸವ, ತುಳಸಿ ಪೂಜೆ - ಯಾವುದನ್ನೂ ಮರೆಯದಂತೆ, ನಮ್ಮ ಊರಿನ ವಾತಾವರಣವನ್ನು ಇಲ್ಲಿಯೇ ಸೃಷ್ಟಿಸಿದರು. ಭಾರತದಿಂದ ವಿದ್ಯಾಭೂಷಣರು, ಪ್ರವೀಣ್ ಗೋಡ್ಕಿಂಡಿ ಮುಂತಾದ ಸಂಗೀತ ಕಲಾವಿದರನ್ನು ಕರೆಸಿ ಒಳ್ಳೆಯ ಸಂಗೀತ ಕಾರ್ಯಕ್ರಮವನ್ನು ಮಸ್ಕತ್ ಕನ್ನಡಿಗರಿಗೆ ಏರ್ಪಡಿಸಿದ್ದರು. ಕಳೆದ ವರ್ಷ ಅಂದರೆ 2023ರಲ್ಲಿ ಪುತ್ತಿಗೆ ಪೀಠಾಧೀಶರಾದ ಸುಗುಣೇಂದ್ರ ತೀರ್ಥರು ಆಗಮಿಸಿ ಫೆಬ್ರುವರಿ 10 ರಿಂದ 16 ರ ತನಕ ಇಲ್ಲಿ ಆಚಾರ್ಯರ ಮನೆಯಲ್ಲಿ ನೆಲೆಸಿ ಕಾರ್ಯಕ್ರಮ ವನ್ನು ನಡೆಸಿಕೊಟ್ಟರು. ಉಡುಪಿ ಬ್ರಾಹ್ಮಣ ಸಮಾಜವು ತಾಯ್ನಾಡಿನಿಂದ ದೂರವಿರುವ ಕರಾವಳಿ ಪ್ರದೇಶದ ಬ್ರಾಹ್ಮಣರ ಒಂದು ದನಿಯಾಗಿ ಇಲ್ಲಿ ಬೆಳೆಯುವ ಆ ಭಾಗದ ಮಕ್ಕಳಿಗೆ ಅಲ್ಲಿನ ಸಾಂಪ್ರದಾಯಿಕ ಆಚರಣೆಗಳನ್ನು ತಿಳಿಸುವ ವೇದಿಕೆಯಾಗಿ, ಸಾಮಾಜಿಕ ಕಾರಣಗಳಿಗೆ ಸ್ಪಂದಿಸುತ್ತಾ ಊರಿನಲ್ಲಿ ಅಗತ್ಯವಿದ್ದವರಿಗೆ ಧನ ಸಹಾಯ ಮಾಡುತ್ತಾ, ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ



 ಸ್ನೇಹಿತರು ಕಂಡಂತೆ ಆಚಾರ್ಯರು: -

 ಆಚಾರ್ಯರು ತುಂಬಾ ಶಿಸ್ತು ಮತ್ತು ಕಟ್ಟುನಿಟ್ಟಿನ ನಿಯಮಗಳ ಜೀವನ ನಡೆಸುತ್ತಿದ್ದರು. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಿದ್ದ ಅವರು ತಮ್ಮ ಬೆಳಗ್ಗಿನ ಪೂಜೆಯನ್ನೆಲ್ಲ ಮುಗಿಸುವ ತನಕ ನೀರನ್ನೂ ಕುಡಿಯಿತ್ತಿರಲಿಲ್ಲವಂತೆ. ಏಕಾದಶಿ , ಸಂಕಷ್ಟ ಚತುರ್ಥಿಯ ಉಪವಾಸಗಳನ್ನು ತಪ್ಪದೇ ಮಾಡುತ್ತಿದ್ದರು. ಆದರೆ ಅವರ ನಿಯಮ ಅನುಷ್ಠಾನಗಳು ಅವರ ಜೀವನ ಪ್ರೀತಿಗೆ ಅಡ್ಡಿಯಾಗಿರಲಿಲ್ಲ. ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಷ್ಟೇ ಆಸ್ಥೆಯಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಆಚಾರ್ಯರು ಅಜಾತಾಶತ್ರುವಾಗಿದ್ದರು. ಅವರ ಮಸ್ಕತ್ತಿನ ನಾಲ್ಕು ದಶಕಗಳ ಜೀವನದ ಒಡನಾಡಿಯಾಗಿದ್ದ ಶ್ರೀ ಶಶಿಧರ ಶೆಟ್ಟರು ಹೇಳುವಂತೆ ಹಿಡಿದ ಕೆಲಸವನ್ನು ಮಾಡಿಯೇ ಮುಗಿಸುವ ಸಕಾರಾತ್ಮಕ ಛಲ ಆಚಾರ್ಯರಲ್ಲಿ ಇತ್ತು. ಅವರೊಂದಿಗೆ ಸೇರಿ ಅನೇಕ ದೊಡ್ಡ ದೊಡ್ಡ ಪೂಜೆಗಳನ್ನು ಮಾಡಿಸಿದ್ದ ಇವರು ಅವರೊಂದಿಗಿನ ಸ್ನೇಹ ಮರೆಯಲಾಗದ್ದು ಎನ್ನುತ್ತಾ ಅವರ ಅಗಲಿಕೆ ಸಹೋದರನನ್ನು ಕಳೆದುಕೊಂಡಂತೆ ಆಗಿದೆ ಎನ್ನುತ್ತಾರೆ. ಅವರ ದೀರ್ಘ ಕಾಲದ ಸ್ನೇಹಿತರಲ್ಲಿ ಒಬ್ಬರಾದ ಶ್ರೀಮತಿ ರಾಜಶ್ರೀ ಮತ್ತು ಶ್ರೀ ಕೃಷ್ಣಪ್ರಸಾದ್ ಅವರು ಹೇಳುವಂತೆ ಅವರು ಎಲ್ಲರನ್ನು ಪ್ರೀತಿಸುವ ಆಧುನಿಕ ಸನ್ಯಾಸಿಯಾಗಿದ್ದರು. ಓಮಾನಿನಲ್ಲಿಯಾಗಲಿ ಅಥವಾ ಭಾರತದಲ್ಲಾಗಲೀ ತುಂಬಾ ಜನರ ಸಂಪರ್ಕವನ್ನು ಹೊಂದಿದ್ದ ಅವರು ಯಾರಿಗಾದರೂ ಸಹಾಯ ಬೇಕೆಂದಾಗ ಥಟ್ ಎಂದು ಸರಿಯಾದ ವ್ಯಕ್ತಿಯೊಡನೆ ಜೀವನವನ್ನು ನೋಡುವ ಅವರ ವಿಧಾನ, ಯಾವುದೇ ಸಂಸ್ಥೆಯ, ಸಾಮಾಜಿಕ ಕೆಲಸದ ಭಾಗವಾಗಲು ಸದಾ ನಗುತ್ತಾ ತಯಾರಿರುವ ಅವರ ಇಚ್ಚಾಶಕ್ತಿ, ಅವರನ್ನು ಮಸ್ಕತ್‌ನಲ್ಲಿ ಅಥವಾ ಒಮಾನಿನಲ್ಲಿ ಎಲ್ಲರ ಮೆಚ್ಚಿನ ವ್ಯಕ್ತಿಯಾಗಿಸಿತು ಅವರು ವಸುದೈವ ಕುಟುಂಬಕಂ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರ ನೆರಮನೆಯಲ್ಲಿದ್ದ ಪಾವನ ಕೌಸ್ತುಬ್ ಹೇಳುವಂತೆ ಆಚಾರ್ಯರು ಜೀವನದ ಎಲ್ಲ ಅನುಭವಗಳನ್ನು ಅಷ್ಟೇ ಲವವಿಕೆಯಿಂದ ಅನುಭವಿಸುತ್ತಿದ್ದರು. ತಮ್ಮ ನೆರೆಹೊರೆಯವರೊಂದಿಗೆ ಸೇರಿ ಸಂಭ್ರಮಿಸುವ ಯಾವುದೇ ಅವಕಾಶವನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಎಲ್ಲರೂ ಒಟ್ಟಾಗಿ ಆಡುವ ವಿನೋದದ ಆಟಗಳಲ್ಲಿ, ನಾಟಕಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ ಭಾಗವಹಿಸುತ್ತ ತಮ್ಮ ಪತ್ನಿಯನ್ನೂ ಈ ಚಟುವಟಿಕೆಗಳಿಗೆ ಪ್ರೊತ್ಸಾಹಿಸುತ್ತಿದ್ದರು. ಇಂತಹ ವಿಶಿಷ್ಟ ವ್ಯಕ್ತಿತ್ವದ ಆಚಾರ್ಯರು 2023ರ ಡಿಸೆಂಬರ್ 8ರಂದು ಅಲ್ಪಕಾಲದ ಆಸ್ವಾಸ್ತ್ಯದಿಂದ ಇಹಲೋಕ ತ್ಯಜಿಸಿದರು. ಅವರು ಇನ್ನಿಲ್ಲ ಅಂತ ಅಂದುಕೊಳ್ಳಲು ತುಂಬಾ ಕಷ್ಟವೆನಿಸುತ್ತದೆ. ಆದರೆ ವಿಧಿ ಬರೆದ ಈ ಕಠಿಣ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು.ಅವರು ಇವತ್ತು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು ಆದರೆ ಭಾವನಾತ್ಮಕ ವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಮನೆಯಲ್ಲಿ ಅಚ್ಚಳಿಯದೆ ಇರುವ ನೆನಪುಗಳನ್ನು ಉಳಿಸಿದ್ದಾರೆ. ನಮ್ಮ ಮನೆಗಳಲ್ಲಿ ನಾವು ಸತ್ಯನಾರಾಯಣ ಪೂಜೆ ಮಾಡಿದಾಗ ನಮ್ಮ ಕಣ್ಮುಂದೆ ಬಂದೇ ಬರುತ್ತಾರೆ "ಜಾತಸ್ಯ ಹಿ ಧ್ರುವಂ ಮೃತ್ಯು, ಧ್ರುವಂ ಜನ್ಮ ಮೃತಸ್ಯ ಚ ತಸ್ಮಾದ್ ಅಪರಿಹಾರ್ಯೇ ನ ತುಂ ಸೋಚಿತುಮರ್ಹಸಿ" ಎನ್ನುವ ಗೀತೆಯ ಶ್ಲೋಕದಂತೆ ಇಲ್ಲಿದ್ದವರೆಲ್ಲರೂ ಹೋಗಲೇಬೇಕು. ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ನುಡಿಯಂತೆ ನಗುನಗುತ್ತಾ ಜೀವನಕ್ಕೆ ವಿದಾಯ ಹೇಳಿದ ಆಚಾರ್ಯರಿಗೆ ಅನಾಯಾಸೇನ ಮರಣ, ವಿನಾ ದೈನ್ಯೇನ ಜೀವಿತವನ್ನು ಅವರು ಅಗಾಧವಾಗಿ ನಂಬಿದ್ದ ಆ ಪರಮಾತ್ಮ ದಯಪಾಲಿಸಿದ್ದ. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವು ಜೀವನ ನಡೆಸುವುದೇ ನಾವು ಅವರಿಗೆ ಕೊಡಬಹುದಾದ ಶ್ರದ್ಧಾಂಜಲಿ.

ಸುಧಾ ಶಶಿಕಾನ್ತ್, ಮಸ್ಕತ್


ಕನ್ನಡಪ್ರಭ ಎನ್ ಅರ್ ಐ ಅವ್ರತ್ತಿಯಲ್ಲಿ ಪ್ರಕಟವಾಗಿದ್ದು























 In Udayavani Desiswara























https://omankannadigaru.blogspot.com/2024/03/blog-post.html




ಸುಧಾ ವಾರಪತ್ರಿಕೆ ಮತ್ತು ನನ್ನ ನಂಟು- ಷಷ್ಟ್ಯಬ್ದದ ಹೊಸ್ತಿಲಿಲಲ್ಲಿರುವ ಸುಧಾ ಪತ್ರಿಕೆಗೆ ಬರೆದಿದ್ದು


ಸುಧಾ ವಾರ ಪತ್ರಿಕೆಯು ನನ್ನ ಹಿರಿಯಕ್ಕನಿದ್ದಂತೆ. ಸುಧಾ ವಾರಪತ್ರಿಕೆಯ ವಯಸ್ಸು ಹದಿನೈದು ಇದ್ದಾಗಿನಿಂದ ಸುಧಾ ಓದುಗಳಾದ ನಾನು ಸುಮಾರು ನಲವತ್ತೈದು ವರ್ಷಗಳಿಂದ ಈ ವಾರಪತ್ರಿಕೆಯನ್ನು ಓದುತ್ತಾ ಜೀವನದ ವಿವಿಧ ಹಂತಗಳನ್ನು ದಾಟಿದ್ದೇನೆ. ಸುಧಾ ವಾರ ಪತ್ರಿಕೆಯು ನನ್ನ ಬಾಲ್ಯದ ಅವಿಭಾಜ್ಯ ಅಂಗ. ನನ್ನ ಹೆಸರೂ ಸುಧಾ ಆಗಿದ್ದರಿಂದಲೋ ಏನೋ ನನಗೆ ಬುದ್ದಿ ಬಂದಾಗಿನಿಂದ ಈ ಪುಸ್ತಕ ನನ್ನದೆಂಬ ಭಾವ. ಈಗಿನಂತೆ ಟಿ ವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿಲ್ಲದ ನಿಷ್ಕಲ್ಮಶ ಬಾಲ್ಯದ ಕಾಲ ನಮ್ಮದು. ನಾನು ನನ್ನ ತಮ್ಮ ಸುಧಾ ಪತ್ರಿಕೆಗಾಗಿ ಕಾದು ಅದರಲ್ಲಿ ಬರುವ ಫ್ಯಾನ್ಟ್ ಮ್ , ಪುಟ್ಟಿಗಳನ್ನು ಓದಲು ಮಾಡುತ್ತಿದ್ದ ಸ್ಪರ್ಧೆ ಈಗಲೂ ನನ್ನ ಮನಸ್ಸಿನಲ್ಲಿ ತಿಳಿನಗೆ ಮೂಡಿಸುತ್ತದೆ. ಹೀಗೆ ಆರಂಭವಾದ ನಮ್ಮ ಓದು ನಮ್ಮ ಅಮ್ಮ ಅಜ್ಜಿಗೆ ಓದಿ ಹೇಳುತ್ತಿದ್ದ ಧಾರಾವಾಹಿಗಳನ್ನು ಆಲಿಸುವುದರೊಂದಿಗೆ ಮುಂದುವರಿಯಿತು. ಸುಧಾದಲ್ಲಿ ಬರುತ್ತಿದ್ದ ಧಾರಾವಾಹಿಗಳು ಹೊಸಲೋಕವನ್ನು ನಮ್ಮ ಮುಂದೆ ತೆರೆದಿಡುವ ಕೆಲಸವನ್ನು ಮಾಡುತ್ತಿತ್ತು. ಕೇಳು ಪುಸ್ತಕಗಳ ಈ ಕಾಲದಲ್ಲಿ ಕೇಳ್ಮೆ ಎಂತಹ ಒಳ್ಳೆಯ ಭಾಷಾ ಕಲಿಕೆಯ ಅಭ್ಯಾಸ ಎನ್ನುವುದನ್ನು ಹೇಳಲು ಈಗ ನಾನು ಈ ಉದಾಹರಣೆಯನ್ನು ಕೊಡುತ್ತೇನೆ. ಪ್ರತೀವಾರ ಸುಧಾ ಬರುವ ದಿನವನ್ನು ತವಕದಿಂದ ಕಾಯುತ್ತಿದ್ದ ನಾವೆಲ್ಲ ಪುಸ್ತಕ ಕೈಗೆ ಬಂದೊಡನೆ ಅಮ್ಮನನ್ನು ಕೆಲಸ ಬೇಗ ಮುಗಿಸಿ ಕಥೆಯೋದುವಂತೆ ಪಿಡಿಸುತ್ತಿದ್ದೆವು. ನಾವೇ ಓದಲು ಶಕ್ತರಾದ ಮೇಲೂ ಸುಧಾದ ಧಾರಾವಾಹಿಗಳನ್ನು ಅಮ್ಮನ ಬಾಯಿಂದ ಕೇಳುವ ಚಪಲ ಹಾಗೆಯೇ ಉಳಿದಿತ್ತು. ಸುಧಾದ ನೀವು ಕೇಳಿದಿರಿ ಪುಟದಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು ಎನ್ನುವುದು ನಮ್ಮ ಬಾಲ್ಯದ ಅತಿದೊಡ್ಡ ಕುತೂಹಲ ಕೆರಳಿಸಿದ ಪ್ರಶ್ನೆಯಾಗಿತ್ತು. ಮನು, ರಾಜಶೇಖರ ಭೂಸನೂರುಮಟ, ವಸುಮತಿ ಉಡುಪ ಮುಂತಾದ ಲೇಖಕರನ್ನು ಒಂದು ತಲೆಮಾರಿಗೆ ಪರಿಚಯಿಸಿದ ಶ್ರೇಯಸ್ಸು ಸುಧಾಗೆ ಸಲ್ಲುತ್ತದೆ. ಹೀಗೆಯೇ ನಮ್ಮ ಓದು ಸುಧಾ ಮುಂತಾದ ಪತ್ರಿಕೆಗಳ ಆಚೆಗೂ ಹರಡಿತು. ನಿಧಾನವಾಗಿ ರಜಾ ದಿನಗಳ ನಮ್ಮ ಚಟುವಟಿಕೆಯಾಗಿದ್ದ ಪತ್ರಿಕೆ, ನಿಯತಕಾಲಿಕಗಳ ಓದಿನ ಸಮಯವನ್ನು ಟಿ ವಿ ತೆಗೆದುಕೊಳ್ಳಲು ಆರಂಭಿಸಿತು. ಮೊದಲಿಗೆ ದೂರದರ್ಶನದ ಚಾನೆಲ್ ಗಳನ್ನು ಮಾತ್ರ ನೋಡುತ್ತಿದ್ದ ನಮಗೆ ಖಾಸಗಿ ಚಾನೆಲ್ ಗಳು ಬರಲಾರಂಭವಾದವು. ವಿವಿಧ ರೀತಿಯ , ವಿವಿಧ ಭಾಷೆಗಳ ಕಾರ್ಯಕ್ರಮಗಳು, ರಿಯಾಲಿಟಿ ಸ್ಪರ್ಧೆಗಳು - ಹೀಗೆ ನಮ್ಮ ಬಿಡುವಿನ ವೇಳೆಯನ್ನು ದೃಶ್ಯ ಮಾಧ್ಯಮ ತನ್ನ ವಶಕ್ಕೆ ತೆಗೆದುಕೊಳ್ಳುತ್ತ ಬಂದಿತು. ಮೊಬೈಲ್ ಫೋನುಗಳ ಮುಖಾಂತರ ನಮ್ಮ ಅಂಗೈನ ತುದಿಗೆ ಇಡೀ ಪ್ರಪಂಚ ಬಂದ ಮೇಲಂತೂ ಓದುವ ರೀತಿಯೇ ಸಂಪೂರ್ಣ ಬದಲಾಯಿತು. ಆದರೂ ಸುಧಾ ನನ್ನ ಜೀವನದ ಭಾಗವಾಗಿ ಈ ಎಲ್ಲ ಬದಲಾವಣೆಗಳ ನಡುವೆಯೂ ಮುಂದುವರಿದಿದ್ದಾಳೆ. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ನೆಲಸಿರುವ ನಾನು ಸುಧಾದ ನನ್ನ ಓದನ್ನು ನಿಲ್ಲಿಸಲಿಲ್ಲ. ಅಂತರ್ಜಾಲದ ಯುಗ ಆರಂಭವಾಗುವ ಮುನ್ನ ಇಲ್ಲಿನ ಅಂಗಡಿಗಳಲ್ಲಿ ಹುಡುಕಿ ಸುಧಾ ಖರೀದಿಸಿ ಓದುತ್ತಿದ್ದೆ. ಕೆಲವು ವಾರ ಸಿಗದೇ ಇದ್ದಾಗ ಬೇಸರಗೊಳ್ಳುತ್ತಿದ್ದೆ. ಕಾಲ ಬದಲಾಯಿತು, ಬದಲಾದ ಜೀವನಕ್ಕೆ ತಕ್ಕಂತೆ ಸುಧಾ ಕೂಡ ಬದಲಾದಳು. ಅಂತರ್ಜಾಲದಲ್ಲಿ ಪಿಡಿಎಫ್ ರೂಪದಲ್ಲಿ ಸುಧಾ ಸಿಗಲು ಆರಂಭವಾಗಿ ಈಗಾಗಲೇ ಅನೇಕ ವರ್ಷಗಳಾಗಿವೆ. ಸುಧಾ ಪತ್ರಿಕೆಯ ಮುಖ ಪುಸ್ತಕ (Facebook) ಪುಟದಲ್ಲಿ ಪ್ರತಿವಾರದ ಸುಧಾದಲ್ಲಿ ಏನೇನು ಆಕರ್ಷಣೆಗಳಿವೆ ಎಂದು ತಿಳಿಯುತ್ತದೆ. ಮ್ಯಾಗಸ್ಟರ್, ರೀಡ್ ವೇರ್ ಮುಂತಾದ ಆಪ್ (applications) ಗಳಲ್ಲಿ ಸುಧಾ ಓದಲು ಸುಲಭವಾಗಿ ದೊರೆಯುತ್ತದೆ. ನಾನೀಗ ಸುಧಾ ವಾರಪತ್ರಿಕೆ ಯನ್ನು ತಪ್ಪದೇ ಪ್ರಪಂಚದ ಯಾವುದೇ ಊರಿನಲ್ಲಿದ್ದರೂ ಓದುತ್ತೇನೆ. ಇಲ್ಲಿ ಅಂದರೆ ನಾನಿರುವ ವಿದೇಶದಲ್ಲಿ ಬೆಳೆಯುವ ಕನ್ನಡದ ಮಕ್ಕಳಿಗೆ ಹಲವು ವರ್ಷಗಳಿಂದ ಕನ್ನಡ ಕಲಿಸುತ್ತಿರುವ ನಾನು ನನ್ನ ವಿದ್ಯಾರ್ಥಿಗಳ ಕನ್ನಡ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಸುಧಾದ ಮಕ್ಕಳ ಪುಟದ ಸಹಾಯ ಪಡೆಯುತ್ತೇನೆ. ಸುಧಾದ 'ವಿಚಾರಲಹರಿ' , 'ನೀವು ಕೇಳಿದಿರಿ', 'ನಿಮ್ಮ ಪುಟ' - ಮುಂತಾದ ಅಂಕಣಗಳು ಈಗಲೂ ನನ್ನನ್ನು ಪುಸ್ತಕ ತೆಗೆದೊಡನೆ ಅದೇ ಉತ್ಸಾಹದಿಂದ ಓದಿಸಿಕೊಳ್ಳುತ್ತವೆ. ಹೀಗೆ ಕಾಲ ಬದಲಾದರೂ ನನ್ನ ಮತ್ತು ಸುಧಾ ವಾರಪತ್ರಿಕೆಯ ನಂಟು ಬದಲಾಗಿಲ್ಲ. ಇನ್ನೂ ಆಪ್ತವಾಗಿ ಮುಂದುವರಿಯುತ್ತಿದೆ. ಇದು ಹೀಗೆಯೇ ಮುಂದುವರಿಯಲಿ. ಪ್ರಪಂಚದಾದ್ಯಂತದ ಕನ್ನಡಿಗರನ್ನು ಸುಧಾ ಇನ್ನೂ ಪ್ರೌಢ ಓದಿನತ್ತ ಸುಧಾ ಕೊಂಡೊಯ್ಯಲಿ ಎಂದು ಆಶಿಸುತ್ತಾ , ಹಾರೈಸುತ್ತಾ ಸುಧಾ ವಾರಪತ್ರಿಕೆಗೆ ಅರವತ್ತರ ಶುಭಾಶಯಗಳನ್ನು ಕೊರುತ್ತೇನೆ. 
 
ಸುಧಾ ಶಶಿಕಾಂತ್,  ಮಸ್ಕತ್