ಭಾನುವಾರ, ಜೂನ್ 2, 2024

ಅಲೌಕಿಕ ಅನುಭವ ನೀಡಿದ ಆರೋಕಿ, ಟೆಕಾಪೋ , ಟಿ ಅನೌ ( ನ್ಯೂಜಿಲ್ಯಾಂಡ್ ಅನುಭವಗಳು-4)

ಸಮುದ್ರದ ಆಘಾದತೆಯನ್ನು  ಅನುಭವಿಸಿದವನು ದೇವರ ಅಸ್ತಿತ್ವವನ್ನು ಪ್ರಶ್ನಿಸುವುದಿಲ್ಲ ಎನ್ನುವ ಗೋವಿಂದ ಪೈ ಅವರ ಅನುಭವದ ಮಾತು ನನಗೆ ಅರ್ಥವಾಗಿದ್ದು,  ಅನುಭವಕ್ಕೆ ಬಂದಿದ್ದು ನ್ಯೂಜಿಲ್ಯಾಂಡಿನಲ್ಲಿ. ಪ್ರಕೃತಿಯ ಸೌಂದರ್ಯ ಮನಸ್ಸನ್ನು ಧ್ಯಾನ ಸ್ಥಿತಿಗೆ ಒಯ್ಯವ, ಮನಸ್ಸನ್ನು ಸ್ತಬ್ಧ ಗೊಳಿಸಿದ ಅನುಭವ ಇಲ್ಲಿನ ದಕ್ಷಿಣ ಅಲ್ಪ್ಸ್ ಪರ್ವತ ಶಿಖರಗಳ ದರ್ಶನ ನನಗೆ ನೀಡಿತು.
ಟ್ರಾಮ್ 
        ದಕ್ಷಿಣ ದ್ವೀಪ ಅಥವಾ ತೆ ವಾಯಿ ಪವನಾಮುವಿನ ನಮ್ಮ ಪ್ರವಾಸ ಕ್ರೈಸ್ಟ್ ಚರ್ಚ್ ಪಟ್ಟಣದಿಂದ ಆರಂಭವಾಯಿತು. ಚಿಕ್ಕ ಸುಂದರವಾದ  ಪಟ್ಟಣ ಕ್ರೈಸ್ಟ್ ಚರ್ಚ್ ಊರನ್ನು ಕ್ರಿಕೆಟ್ ಆಟಗಳ ನೇರಪ್ರಸಾರದಲ್ಲಿ ಬಾಲ್ಯದಿಂದ ಟಿವಿಯಲ್ಲಿ ನೋಡಿ ಇದು ದೊಡ್ಡ ನಗರ ಎಂದು ಭಾವಿಸಿದ್ದ ನಮಗೆ ಇದು ಇಷ್ಟು ಚಿಕ್ಕ ಊರೆಂದು ನೋಡಿ ಆಶ್ಚರ್ಯವಾಯಿತು. ಶಾಂತ ಪುಟ್ಟ ಊರಿನ ಪ್ರವಾಸೀ ತಾಣಗಳನ್ನು ಕಾಲ್ನಡಿಗೆಯಲ್ಲಿಯೇ ನೋಡಿಕೊಂಡು ಬರಬಹುದಿತ್ತು.

 ಪಟ್ಟಣದಲ್ಲಿ  ಕೆಲವು ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಿದೆವು. ಟ್ರಾಮ್ ಪ್ರವಾಸದ ಮೂಲಕ ನಗರ ವೀಕ್ಷಣೆ ಮಾಡಿದೆವು.  ಟ್ರಾಮಿನ ಚಾಲಕ/ ಚಾಲಾಕಿ ಸುತ್ತ ಕಾಣುವ ಕಟ್ಟಡಗಳ ಬಗೆಗೆ ಮಾಹಿತಿಯನ್ನು ಕೊಡುತ್ತಾ ಕರೆದೊಯ್ಯುತ್ತಿದ್ದರು. ಒಮ್ಮೆ ಟಿಕೇಟು ತೆಗೆದುಕೊಂಡರೆ ಪೂರ್ತಿ ದಿನ ಎಲ್ಲಿ ಬೇಕೋ ಅಲ್ಲಿ ಇದನ್ನು ಹತ್ತಿಕೊಂಡು ಎಲ್ಲಿಬೇಕೋ ಅಲ್ಲಿ ಇಳಿಯಬಹುದಿತ್ತು. 2011 ರ ಭೂಕಂಪದಲ್ಲಿ ಬಹಳ ಹಾನಿಗೊಳಗಾದ ಊರು ಇದಂತೆ. ಈಗ ಕಾಣುವ ಪಟ್ಟಣ ಆ ಹಾನಿಯ ಆಘಾತವನ್ನು ಸಹಿಸಿ ಮೇಲೆದ್ದು ನಿಂತ ಪಟ್ಟಣವಂತೆ. ಅನೇಕ ಪ್ರವಾಸಿ ಆಕರ್ಷಣೆಗಳು ಇನ್ನೂ ದುರಸ್ತಿಯಲ್ಲಿರುವುದು ಕಂಡುಬಂತು.
  ಇಲ್ಲಿನ ದೊಡ್ಡ ಬೋಟಾನಿಕಲ್ ಉದ್ಯಾನ ಅಗಾಧವಾದ ಸಸ್ಯ ವೈವಿಧ್ಯ, ಪಕ್ಷಿಗಳ ಕಲರವದಿಂದ ಒಳ್ಳೆಯ ಅನುಭವವನ್ನು ಕೊಟ್ಟಿತು. ಸುಮಾರು 150 ವರ್ಷಗಳಿಗೂ ಮಿಕ್ಕಿ ಇತಿಹಾಸ ಇರುವ ಈ ಉದ್ಯಾನ ಸಂದರ್ಶಿಸಬೇಕಾದ ಸ್ಥಳ.
ಬೊಟಾನಿಕಲ್ ಉದ್ಯಾನ 
 ಇಲ್ಲಿಯೇ ನಾವು ಬಾಡಿಗೆ ಕಾರನ್ನು ಪಡೆದು ನಾವೇ ಚಲಾಯಿಸಿಕೊಂಡು ಇನ್ನುಳಿದ ನಮ್ಮ ಪ್ರವಾಸವನ್ನು ಮಾಡುವವರಿದ್ದೆವು. ಇದು ನಾವು  ದ್ವೀಪದಲ್ಲಿ  ಮುಂದೆ ಸಂದರ್ಶಿಸುವ ಪ್ರದೇಶಗಳಿಗೆ ಹೋಲಿಸಿದರೆ ಸ್ವಲ್ಪ ದೊಡ್ಡ ಪಟ್ಟಣವಾಗಿದ್ದರಿಂದ ಇಲ್ಲಿನ ಭಾರತೀಯ ದಿನಸಿ ಅಂಗಡಿಗೆ ಹೋಗಿ ಮುಂದಿನ ನಮ್ಮ ಪ್ರವಾಸಕ್ಕೆ ಬೇಕಾದ ಅಡಿಗೆಯ ಸಾಮಾನುಗಳ ಖರೀದಿಯನ್ನೂ ಇಲ್ಲಿ ಮಾಡಿ ಪ್ರವಾಸಕ್ಕೆ ತಯಾರಾದೆವು.

ಕ್ರೈಸ್ಟ್  ಚರ್ಚ್ to  ಟೆಕಾಪೂ:-

ಗೆರಾಲ್ಡಿನ್ ಪಟ್ಟಣ 
ಕ್ರೈಸ್ಟ್ ಚರ್ಚಿನಿಂದ ನಮ್ಮ ಮುಂದಿನ ತಾಣ ಟೆಕಾಪೂ ಸುಮಾರು 200 ಕಿ ಮಿ ದೂರದಲ್ಲಿತ್ತು. ರಸ್ತೆಗಳು ವ್ಯವಸ್ಥಿತವಾಗಿ ಒಳ್ಳೆಯ ಸ್ಥಿತಿಯಲ್ಲಿತ್ತು. ಇಲ್ಲಿನ ಜನರು ಸಂಚಾರಿ ನಿಯಮಗಳಿಗೆ ತುಂಬಾ ಪ್ರಾಶಸ್ತ್ಯ ಕೊಡುತ್ತಾರೆ ಎಂದು ನಮ್ಮ ಅನುಭವಕ್ಕೆ ಬಂತು. ವೇಗದ ಮಿತಿಯನ್ನು ಚಾಚೂ ತಪ್ಪದೇ ಪಾಲಿಸುವ ಜನರ ಶಿಸ್ತು ನಮಗೆ ಮೆಚ್ಚುಗೆಯಾಯಿತು. ಮಧ್ಯದಲ್ಲಿ ಮುಂದಿನ ವಾಹನವನ್ನು ದಾಟಿ ಮುಂದೆ ಹೋಗಲೆಂದೇ ರಸ್ತೆಯನ್ನು ಅಗಲ ಮಾಡಿಟ್ಟಿರುತ್ತಾರೆ. ವೇಗವಾಗಿ ಹೋಗಬೇಕಾದವರು ನಿಗದಿತ ಜಾಗದಲ್ಲಿ. ನಿಧಾನವಾಗಿ ಹೋಗುತ್ತಿರುವ ವಾಹನವನ್ನು ಹಿಂದಿಕ್ಕಿ ಹೋಗಬಹುದು. ಎಲ್ಲರೂ ನಿಯಮವನ್ನು ಪಾಲಿಸುವವರಾದ್ದರಿಂದ ಇಲ್ಲಿ ವಾಹನ ಚಾಲನೆ ಬಹಳ ಆಹ್ಲಾದಕರ ಅನುಭವ. ನ್ಯೂಜಿಲೆಂಡಿನ ರೋಡ್ ಟ್ರಿಪ್ ಬಗೆಗೆ ಬಹಳ ಕೇಳಿದ್ದ ನಮಗೆ ಅದರ ಅನುಭವ ನಿರಾಸೆಗೊಳಿಸಲಿಲ್ಲ.
ಬಣ್ಣ ಬದಲಿಸಿ ನಿಂತ ಮರಗಳು 
    ಇದೀಗ ಎಲೆ ಉದುರುವ ಕಾಲವಾದ್ದರಿಂದ ಮರಗಳು ಬಣ್ಣ ಬದಲಿಸಿಕೊಂಡು ರಸ್ತೆಯ ಇಕ್ಕೆಲ ವಿವಿಧ ಬಣ್ಣಗಳಿಂದ ಸುಂದರವಾಗಿ ಕಾಣುತ್ತಿತ್ತು. ದಾರಿಯಲ್ಲಿ ಸಿಕ್ಕಿದ  ಜೆರಾಲ್ಡಿನ್ ಮತ್ತು ಆಶ್ ಬರ್ಟನ್   ಚಂದದ ಪುಟ್ಟ ಪಟ್ಟಣಗಳು ನಮ್ಮ ಪ್ರವಾಸದ ಉಲ್ಲಾಸವನ್ನು ಹೆಚ್ಚಿಸಿತು. 


             ಮನೆಗಳು ರಸ್ತೆಯ ಪಕ್ಕದಲ್ಲೇ ಇದ್ದರೂ ಕಿಟಕಿಗಳಿಗೆ ಗ್ರಿಲ್ ಗಳೇ ಇರದೇ ಇರುವುದನ್ನು ನೋಡಿ ಇಲ್ಲಿ  ಅಪರಾಧಗಳ ಸಂಖ್ಯೆ ಬಹಳ ಕಡಿಮೆ ಇರಬಹುದೆನ್ನಿಸಿತು. ದೇಶದಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ದಾರಿಯಲ್ಲಿ ಜನಗಳು ವಿರಳವಾಗಿ  ಕಾಣಸಿಗುತ್ತಿದ್ದರು. 

ಟೆಕಾಪೂ ಸರೋವರ ಮತ್ತು ಪಟ್ಟಣ:-

ಟೇಕಾಪು ಸರೋವರ 
ದೊಡ್ಡ ಸರೋವರ ಟೆಕಾಪೂ ಹೆಸರಿನದೇ ಪಟ್ಟಣ. ಚಿಕ್ಕ ಚಂದದ ಊರು. ನಾವು ನಿಗದಿಗೊಳಿಸಿದ ನಮ್ಮ ಮನೆಯೂ ಅದಕ್ಕೆ ತಕ್ಕಂತೆ ಚೆನ್ನಾಗಿತ್ತು. ಇಂದಿನ ಹವಾಮಾನದ ಮುನ್ಸೂಚನೆಯಂತೆ ಭಾರೀ ಮಳೆ ಯಾಗುತ್ತಿತ್ತು. ಮಳೆ, ಚಳಿಗೆ ಎಲ್ಲ ವ್ಯವಸ್ಥೆ ನಮ್ಮ ಮನೆಯಲ್ಲಿತ್ತು. ಕೋಣೆಯನ್ನು ಬಿಸಿ ಮಾಡುವ ಹಿಟರುಗಳಲ್ಲದೇ ಎಲೆಕ್ಟ್ರಿಕ್ ಹೊದಿಕೆಗಳೂ ಇದ್ದವು. 
ನಮ್ಮ ಊಟ 
ನಮ್ಮ ಮನೆ 


ಮಳೆಯಲ್ಲಿ ಕೊಡೆ ಹಿಡಿದು ಹೋಗಿ ಮುಸ್ಸಂಜೆಯಲ್ಲಿ ಸರೋವರದ ತೀರಕ್ಕೆ ಹೋಗಿ ಅಗಾಧವಾದ ಜಲರಾಶಿಯನ್ನು ಕಣ್ತುಂಬಿ ಕೊಂಡು, ಇಲ್ಲಿನ ಮಾರುಕಟ್ಟೆಗೆ ಹೋಗಿ ಬೆಳಗಿನ ಉಪಾಹಾರಕ್ಕೆ ಬೇಕಾದ ಹಾಲು, ಬ್ರೆಡ್, ಹಣ್ಣುಗಳನ್ನು ಕೊಂಡುಕೊಂಡು ಬಂದೆವು. ನಮ್ಮ ಸುತ್ತಮುತ್ತಲಿನ ಮನೆಗಳಲ್ಲೆಲ್ಲ ನಮ್ಮಂತಹ ಪ್ರವಾಸಿಗರೇ ಇದ್ದರು. ಇನ್ನೂ ಕೆಲವರು ನಮ್ಮಂತೆ ಸಾಮಾನು ತರುತ್ತಿರುವುದು ಕಂಡಿತು. ಎರಡು ಖಂಡಗಳನ್ನು ದಾಟಿ ಯಾವುದೋ ಅಪರಿಚಿತ ದೇಶದಲ್ಲಿ ಅಕ್ಕ ತಂಗಿಯರ ಸಂಸಾರ ಮನೆ ಮಾಡಿಕೊಂಡು ದಿನಸಿ ತಂದು ಅಡಿಗೆ ಮಾಡಿ ಊಟಮಾಡಿದ್ದು  ಒಂದು ಅನನ್ಯ ಅನುಭವ. 
      ಈ ಪ್ರದೇಶವೇ ಆಕಾಶ ವೀಕ್ಷಣೆಗೆ ಮೀಸಲಾಗಿರುವ ಪ್ರದೇಶ. ಹಾಗಾಗಿ ಇಲ್ಲಿ ಬೆಳಕಿನ ಮಾಲಿನ್ಯವಾಗದ ಹಾಗೆ ತುಂಬಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ರಾತ್ರಿ ರಸ್ತೆಯ ದೀಪಗಳಿರುವುದಿಲ್ಲ. ಇದು ಪ್ರಪಂಚದ ೧೭ ಇಂತಹ ಆಕಾಶ ವೀಕ್ಷಣೆಯ ತಾಣಗಳಲ್ಲಿ ಒಂದು. ಚಳಿಗಾಲದಲ್ಲಿ  ಇಲ್ಲಿಯಾ ಆಕಾಶ ಅತ್ಯಂತ ಸುಂದರವಾಗಿರುತ್ತದಂತೆ. ಶುಭ್ರ ಆಕಾಶವಿದ್ದರೆ ಇಲ್ಲಿ ರಾತ್ರಿ ಆಕಾಶವನ್ನು ನೋಡುವುದು ಒಂದು ವಿಶಿಷ್ಟವಾದ ಅನುಭವ. ಮೋಡ ಮತ್ತು ಮಳೆಯ ವಾತಾವರಣದ ಕಾರಣ ನಮಗೆ ಆಕಾಶ ವೀಕ್ಷಣೆಯ  ಅನುಭವವಾಗಲಿಲ್ಲ.

ಆರೋಕಿ /ಮೌಂಟ್ ಕುಕ್:-

ಹೂಕರ್ ಕಣಿವೆಯ ದಾರಿಯಲ್ಲಿ ಕಾಣುವ ಅರೋಕಿ ಪರ್ವತ 
ದಕ್ಷಿಣ ಅಲ್ಪ್ಸ್ ಪರ್ವತ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಆರೋಕಿ, ಇದು  ಇದರ ಮಾವೊರಿ ಹೆಸರು. ಅದಕ್ಕೆ ಇಂಗ್ಲಿಷ್ ಹೆಸರು ಮೌಂಟ್ ಕುಕ್. ಟೆಕಾಪೂ ಪಟ್ಟಣದಿಂದ 110 ಕಿ. ಮಿ ದೂರದಲ್ಲಿರುವ ಇದಕ್ಕೆ ಕಾರು ಚಲಾಯಿಸಿಕೊಂಡು ಹೋಗಲು ಉತ್ತಮವಾದ ರಸ್ತೆ , ದಾರಿಯಲ್ಲಿ ತಂಗುದಾಣಗಳು, ಮಾರ್ಗಸೂಚಿಗಳೆಲ್ಲವೂ ಇದೆ. ನಿನ್ನೆ ರಾತ್ರಿಯಿಂದಲೇ ಸುರಿಯಿತ್ತಿದ್ದ ಮಳೆ ಬೆಳಗ್ಗಾದ ಮೇಲೆ ಸ್ವಲ್ಪ ಕಡಿಮೆಯಾಗಿತ್ತು. ಮೋಡ ಕವಿದಿದ್ದರೆ ಪರ್ವತದ ನೋಟ ನಮಗೆ  ಸಿಗುವುದಿಲ್ಲ ಎಂಬ ಆತಂಕ. ನಾವು ಹೋಗುತ್ತಿದ್ದಂತೆ ವಾತಾವರಣ ತಿಳಿಯಾಗತೊಡಗಿತು. ಟೆಕಾಪೂ ಸರೋವರ, ಅದರ ದಡದಲ್ಲಿರುವ ಮೊನಾಸ್ಟರಿಯೆಲ್ಲ ಸುಂದರವಾಗಿ ಕಾಣತೊಡಗಿತು. ಸ್ವಲ್ಪ ಮುಂದೆ ಹೋದಂತೆ ಇನ್ನೊಂದು ವಿಶಾಲವಾದ ಪುಕಾಕಿ ಸರೋವರ ಹಿಮಾಚ್ಚಾಡಿತ ಬೆಟ್ಟಗಳ ಹಿನ್ನೆಲೆಯಲ್ಲಿ ಮನಮೋಹಕವಾಗಿ ಕಾಣುತ್ತಿತ್ತು. ಈ ಸರೋವರಗಳಿಗೆ ನೀರು ಹಿಮದ ಬೆಟ್ಟಗಳಿಂದ ಬರುತ್ತದೆ.  ಮುಂದುವರಿದು ಹೋಗುತ್ತಿದ್ದಂತೆ ಹಸಿರು ಗುಡ್ಡಗಳು, ಇವುಗಳ ಎಡೆಯಿಂದ ಧುಮುಕುವ ಜಲಪಾತಗಳು,, ಇನ್ನೊಂದು ಕಡೆ ಬಿಸಿಲು-ಮೋಡಗಳ ಕಣ್ಣುಮುಚ್ಚಾಲೆಯಲ್ಲಿ ಬಣ್ಣ ಬದಲಿಸುವ ಸರೋವರಗಳು, ನಡುನಡುವೆ ಹರಿಯುತ್ತಿರುವ ನದಿಗಳು- ಪರಿಸರದ ಭವ್ಯತೆ ನಮ್ಮೆದುರು ಅನಾವರಣಗೊಳ್ಳುತ್ತಾ ಹೋಯಿತು. ಆರೋಕಿ ಗ್ಲೇಶಿಯರ್ ತಲುಪಿ ಕಾರಿನಿಂದ ಇಳಿದು ನಡೆದು ಹೂಕರ್ ವ್ಯಾಲಿಯ ಚಾರಣದ ದಾರಿಯಲ್ಲಿ ಸಾಗತೊಡಗಿದೆವು. ಹೂಕರ್ ವ್ಯಾಲಿ ಚಾರಣದ ದಾರಿ ಇಲ್ಲಿನ ಅತ್ಯಂತ ಪ್ರಸಿದ್ಧ ಕಾಲ್ನಡಿಗೆಯ ದಾರಿ. ಹೆಸರಿಗೆ ತಕ್ಕಂತೆ ವಿಶಿಷ್ಟವಾಗಿದೆ. ತುಂಬಾ ಕಷ್ಟಕರ ಎನ್ನಿಸದ ಈ ನಡಿಗೆಯನ್ನು ಚಾರಣದ ಅಭ್ಯಾಸ ಇಲ್ಲದವರು ಮಾಡಬಹುದು. ನಡೆಯುತ್ತಾ ಹೋದಂತೆ ಸುತ್ತಲಿನ ಪರಿಸರ ಒಂದೊಂದು ತಿರುವಿನಲ್ಲಿ ಒಂದೊಂದು ಹೊಸಮುಖವನ್ನು ತೋರಿಸುತ್ತಾ ಸಾಗುತ್ತದೆ. ನಡುವೆ ಸಿಗುವ ತೂಗು ಸೇತುವೆ ಅವಿಸ್ಮರಣೀಯ ದೃಶ್ಯದ ಸೊಬಗನ್ನು ಕೊಡುತ್ತದೆ. 
ಪುಕಾಕಿ ಸರೋವರದ ವಿಹಂಗಮ ನೋಟ 
ಇಲ್ಲಿ ಆರೋಕಿ ಪರ್ವತ ಶಿಖರದ ತುತ್ತತುದಿಯ ದರ್ಶನ ನಮಗಾಯಿತು. ಆ ಪರ್ವತದಿಂಡುತಾದ ಸರೋವರ, ಅದರಿಂದ ರಭಸವಾಗಿ ಹರಿದು ಬರುತ್ತಿರುವ ನೀರು- ಇವುಗಳ ಸೌಂದರ್ಯ ವನ್ನು ಸಾಧ್ಯವಾದಷ್ಟು ಕಣ್ಣು ತುಂಬಿಕೊಳ್ಳುತ್ತಾ ಮನಸ್ಸು ಅರಿವೇ ಇಲ್ಲದಂತೆ ಓಂ ನಮಃ ಶಿವಾಯ ಎಂದು ಪ್ರಕೃತಿಯ ಈ ಭವ್ಯತೆಗೆ ನಮಿಸಿತು. ಇತ್ತೀಚೆಗೆ ಓದಿದ್ದ  'ದೇವಭೂಮಿಗೊಂದು ಪಯಣ ಪುಸ್ತಕದಲ್ಲಿದ್ದ ಮಾನಸಗಂಗೋತ್ರಿಯ ವರ್ಣನೆ ನನ್ನ ಮನಸ್ಸಿಗೆ ಬಂತು. ಅದೂ ಹೀಗೆಯೇ ಇರಬಹುದೆನಿಸಿತು. ಹೀಗೆಯೇ ಇಲ್ಲಿಯೇ ಇದ್ದುಬಿಡೋಣ ಎನ್ನುವಷ್ಟು ಮೋಡಿ ಆ ಪರಿಸರ ನಮ್ಮ ಮೇಲೆ ಮಾಡಿತ್ತು. 
ಹಿಮ ಸರಿಸಿ ನಮಗೆ ದರ್ಶನ ಕೊಟ್ಟ ಆರೋಕಿ ಪರ್ವತ ಶಿಖರ 

ತೆ ಅನೌ:-

ದಕ್ಷಿಣ ನ್ಯೂಜಿಲೆಂಡಿನ ಇನ್ನೊಂದು ಸುಂದರ ಶಾಂತ ಪಟ್ಟಣ ತೆ ಅನೌ. ಇದು ಫಿಯೋರ್ಡ್ ಲ್ಯಾಂಡ್ ನೇಷನಲ್ ಪಾರ್ಕಿನ ಭಾಗ. ಈ ಊರು ಫಿಯೋರ್ಡ್ ಲಾಂಡಿನ ದ್ವಾರದಂತಿದ್ದು ಮುಂದಿನ ಎಲ್ಲ ಚಟುವಟಿಕೆಗಳನ್ನು ಮಾಡಲು ಅನುಕೂಲವಾದ ಜಾಗದಲ್ಲಿರುವುದರಿಂದ ಇಲ್ಲಿ ಉಳಿಯಲು ವಿವಿಧ ತರಹದ ಹೋಟೆಲುಗಳು ದೊರೆಯುತ್ತದೆ. ವಿಶಾಲವಾದ  ತೇ ಅನೌ ಸರೋವರ ನ್ಯೂಜಿಲಾಂಡಿನ ಎರಡನೆಯ ಅತಿ ದೊಡ್ಡ ಸರೋವರವಾಗಿದೆ. ಸರೋವರಕ್ಕೆ ಹೊಂದಿಕೊಂಡು ಇರುವ ಈ ಊರಿನಲ್ಲಿ ನಾವಿದ್ದ  ಮರಾ ಕುರಾ .ಮೋಟಲ್ ಸರೋವರದ ತೀರದಲ್ಲಿ ಅತ್ಯಂತ ಸುಂದರವಾದ ದೃಶ್ಯವನ್ನು ನಾವು ದಿನವಿಡೀ ಆಸ್ವಾದಿಸುವಂತೆ ಮಾಡಿತು. ಸಂಜೆಯ ಸರೋವರದ ಪಕ್ಕದ ನಡಿಗೆ, ಆ ರಾತ್ರಿ ರೂಮಿನಲ್ಲಿ ಅಡಿಗೆ ಮಾಡಿ ಸರೋವರದ, ಆಕಾಶದ ನೋಟವನ್ನು ಸವಿಯುತ್ತಾ ಮಾಡಿದ ಊಟ ಮರೆಯಲಾರದ ಅನುಭವ. ಇಲ್ಲಿನ ಹಕ್ಕಿಗಳ ಉದ್ಯಾನವು ಪಕ್ಷಿ ವೀಕ್ಷಕರ ಮೆಚ್ಚಿನ ತಾಣ. 
ತೇ ಅನೌ ಸರೋವರ 
    ಬೆಳಗ್ಗೆದ್ದು ಸರೋವರದ ಮೇಲಿನಿಂದ ಹಾರಿ ಸುತ್ತಲಿನ ವೈಮಾನಿಕ ದೃಶ್ಯವನ್ನು ತೋರಿಸುವ ಸೀ-ಪ್ಲೇನ್(sea plane) ನಲ್ಲಿನ ಸವಾರಿ ಒಂದು ವಿಶಿಷ್ಟವಾದ ಅನುಭವ. ಹೊರಗಿನಿಂದ ತುಂಬಾ ಚಿಕ್ಕದಾಗಿ ಕಾಣುತ್ತಿದ್ದ ವಿಮಾನದೊಳಗೆ ಚಾಲಕರಲ್ಲದೆ ನಾಲ್ಕು ಜನ ಕುಳಿತುಕೊಳ್ಳುವ ಜಾಗವಿತ್ತು. ಹತ್ತಿ ಕುಳಿತ ನಂತರ ನೀರಿನ ಮೇಲೆ ಸ್ವಲ್ಪ ಹೊತ್ತು ಚಲಿಸಿ ಆಕಾಶಕ್ಕೆ ಜಿಗಿಯುವ ವಿಮಾನದಿಂದ ಸುತ್ತಲಿನ ಪ್ರದೇಶದ ಸೌಂದರ್ಯವನ್ನು ಮೇಲಿನಿಂದ ನೋಡಿ ಖುಷಿಪಡಲು ಸಾಧ್ಯವಾಗಿಸುತ್ತದೆ. ನಮ್ಮ ರಾಜಕಾರಣಿಗಳು ನೆರೆಪೀಡಿತ ಪ್ರದೇಶದಲ್ಲಿ ಮಾಡುವ ವೈಮಾನಿಕ ಸರ್ವೇಕ್ಷಣೆಯನ್ನು ನೆನಪಾಯಿತು. ಅವರಿಗೂ ಹೀಗೆಯೇ ಮೋಜಿನ ಸವಾರಿಯಾಗಿರಬಹುದು ಎನ್ನಿಸಿ ಮನಸ್ಸಿಗೆ ಸ್ವಲ್ಪ ಕಸಿವಿಸಿಯೂ ಆಯಿತು. 
       
ನಮ್ಮ ವಿಮಾನ 

ಸುಮಾರು 20 ನಿಮಿಷಗಳಲ್ಲಿ ಸುತ್ತಲಿನ ಪ್ರದೇಶಗಳ ಬಗೆಗೆ ಮಾಹಿತಿಯನ್ನು ಕೊಡುತ್ತ ಸಾಗಿದ ನಮ್ಮ ಚಾಲಕಿಯು  ವಿಮಾನ ಚಾಲನೆ ಎಷ್ಟು ಸುಲಭ ಎನ್ನಿಸುವಂತೆ ಈ ಸವಾರಿಯನ್ನ ಮುಗಿಸಿದಳು. ಅವಳೇ ನಮಗೆ ಟಿಕೇಟು ನೀಡಿ ಅವಳೇ ಕರೆದುಕೊಂಡು ಹೋಗಿ ಕರೆದುಕೊಂಡು ಬಂದಳು. ಅವಳದ್ದೊಂದು ಪುಟ್ಟ ನಾಯಿ ಅವಳ ಸಂಗಾತಿ. ಅದು ಅವಳೊಂದಿಗೆ ಪ್ರತಿದಿನ ಬಂದು ಅವಳು ಸವಾರಿಗೆ ಹೋದಾಗ ಆಫೀಸು ಕಾಯುತ್ತದೆ. ಅಲ್ಲೇ ಸುತ್ತಮುತ್ತಲು ಓಡಾಡಿಕೊಂಡು ಹತ್ತಿರ ಬರುವ ಬಾತುಕೋಳಿಗಳು ಓಡಿಸುತ್ತಾ ಮೋಜಿನ ಜೀವನ ನಡೆಸಿಕೊಂಡಿದೆ.

ವಿಮಾನ ಚಾಲಕಿಯ ನಾಯಿಯೊಂದಿಗೆ 



ಉಪಸಂಹಾರ:-

ನಮ್ಮ ಆರು ಜನರ ಗುಂಪು ೪-೫ ತಿಂಗಳ ತಯಾರಿ, ಚರ್ಚೆ, ಯೋಜನೆಗಳ ಮೂಲಕ ಬೆಂಗಳೂರು ಮತ್ತು ಮಸ್ಕತ್ತಿನಿಂದ ಹೊರಟು ದೂರದ ದೇಶ ನ್ಯುಜಿಲ್ಯಾಂಡನ್ನು ನೋಡಲು ಹೊರಟಿದ್ದೆವು. ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ನಮ್ಮೆಲ್ಲರ ಆಸಕ್ತಿ ಯಂತೆ ನೋಡುವ ಜಾಗಗಳನ್ನು, ಉಳಿಯುವ ತಾಣಗಳನ್ನು ನಿಗದಿಗೊಳಿಸಿ ಇಲ್ಲಿಗೆ ಬಂದೆವು. ದಕ್ಷಿಣ ದ್ವೀಪವನ್ನು ಮೊದಲು ಸುತ್ತಿದೆವು. ನಂತರ ಉತ್ತರ ದ್ವೀಪದ ಸುತ್ತಾಟ ಎಲ್ಲವೂ ನಾವು ಅಂದುಕೊಂಡಂತೆ ನಡೆಯಿತು.
     ನಾವು ಹೊರಡುವಾಗ ನಮ್ಮ ಒಮಾನ್ ಏರ್ ವಿಮಾನದ ಮೂಲಕ ದೊಹಾಕ್ಕೆ ಹೋಗಿ ಅಲ್ಲಿಂದ ಆಕ್ಲ್ಯಾಂಡಿಗೆ  ಹೋಗುವವರಿದ್ದೆವು. ಮಸ್ಕತ್ತಿನಿಂದ ದೋಹಾಗೆ ಹೋದರೆ ಅಲ್ಲಿಂದ ಮುಂದಿನ ವಿಮಾನದಲ್ಲಿ ನಮ್ಮ ಮುಂಗಡ ಬುಕಿಂಗ್ ಇಲ್ಲ ಎನ್ನುವ ಆಘಾತಕಾರಿ ಸುದ್ದಿಯೊಂದಿಗೆ ನಮ್ಮ ಪ್ರವಾಸ ಆರಂಭವಾದರೂ ಹೇಗೋ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡು ಮುಂದಿನ ವಿಮಾನ ಹತ್ತಿ ಸರಿಯಾದ ಸಮಯಕ್ಕೆ ಕ್ರೈಸ್ಟ್ ಚರ್ಚ್ ತಲುಪಿ ನಮ್ಮ ಪ್ರವಾಸ ಆರಂಭಿಸಿದ್ದೆವು. ಕ್ರೈಸ್ಟ್ ಚರ್ಚ್ ನಿಂದ ಟೇಕಾಪೋಗೆ ಹೋಗುವಾಗ ನಮ್ಮ ಪಾಸ್ಪೋರ್ಟ್ ಮತ್ತು ಲ್ಯಾಪ್ಟಾಪ್ ಇದ್ದ ಬ್ಯಾಗನ್ನು ಹೋಗುವ ಅವಸರದಲ್ಲಿ ನಮ್ಮ ಹೋಟೆಲಿನ ಲಾಬಿಯಲ್ಲಿ ಬಿಟ್ಟು ಹೋಗಿದ್ದು ನಮ್ಮ ಗಮನಕ್ಕೆ ಬಂದಿದ್ದು ಆ ದಿನ ರಾತ್ರಿ ಮಲಗುವಾಗ! ಏನು ಮಾಡುವುದು ಮತ್ತೆ ೨೦೦ ಕಿ ಮೀ ಕಾರು ಚಲಾಯಿಸಿಕೊಂಡು ಮರು ದಿನ ಬೆಳಗ್ಗೆ ಬೇಗ ಎದ್ದು ಟೇಕಾಪೋದಿಂದ ಮತ್ತೆ ಮರಳಿ ಹೋಗಿ ಬಿಟ್ಟು ಬಂದ ಸಾಮಾನನ್ನು ಮರಳಿ ತಂದುಕೊಂಡೆವು.ಮತ್ತೆ ಅರ್ಧ ದಿನ ವ್ಯರ್ಥವಾಗಿ ಕಳೆಯಬೇಕಾದರೂ ಇಲ್ಲಿನ ರೋಡ್ ಟ್ರಿಪ್ಪಿನ ಅನುಭವ ಜಾಸ್ತಿಯಾಯಿತೆಂದು ಸಮಾಧಾನ ಮಾಡಿಕೊಂಡೆವು. ದಕ್ಷಿಣ ದ್ವೀಪದ ಪ್ರವಾಸ ಮುಗಿಸಿ ಕ್ವೀನ್ಸ್ ಟೌನಿನ್ನಿಂದ  ಆಕ್ಲ್ಯಾಂಡಿಗೆ ಹೋಗಲು ಬೆಳಗ್ಗೆ ೧೦ ಗಂಟೆಗೆ ವಿಮಾನ ನಿಲ್ದಾಣ ತಲುಪಿದವರು ಸಂಜೆ ೫,೩೦ರ ವಿಮಾನದಲ್ಲಿ ಆಕ್ಲ್ಯಾಂಡಿಗೆ ಹೋಗಬೇಕಾಯಿತು. ತಾಂತ್ರಿಕ ಕಾರಣದಿಂದ ನಮ್ಮ ವಿಮಾನ ಮತ್ತೆ ಮತ್ತೆ ವಿಳಂಬವಾಗಿತ್ತು. ಇಡೀ ದಿನ ವಿಮಾನ ನಿಲ್ದಾಣದಲ್ಲಿ ಕುಳಿತು ಊಟ, ತಿಂಡಿಯ ಚೀಟಿಗಳನ್ನು ಪಡೆದು ಕಾಲ ಕಳೆಯಬೇಕಾಯಿತು. ಹಾಗೆ ಕುಳಿತಾಗ ನನ್ನ ಒಬ್ಬಳು ಬ್ಯಾಡ್ಮಿಂಟನ್ ಗೆಳತಿ ಎಂಟು ವರ್ಷಗಳ ನಂತರ ಇಲ್ಲಿ ಭೇಟಿಯಾಗಿದ್ದು ಒಂದು ವಿಶೇಷ. ಅವಳು ಮಸ್ಕತ್ತಿನಲ್ಲಿ ನಮ್ಮೊಡನೆ ಇದ್ದವಳು ಮಸ್ಕತ್ ಬಿಟ್ಟು ಅಮೆರಿಕಾದಲ್ಲಿ ಕೆಲವು ವರ್ಷ ನೆಲಸಿ ಈಗ ತನ್ನ ತಾಯ್ನಾಡು ಮಲೇಷಿಯಾದಲ್ಲಿ ನೆಲಸಿದ್ದಾಳಂತೆ. ಅವಳೂ ಅವಳ ಪರಿವಾರದೊಡನೆ ಪ್ರವಾಸಕ್ಕೆ ಬಂದಿದ್ದಳು. 
                ಈಗ ಎಲ್ಲವೂ ಅಂತರ್ಜಾಲದ ಯುಗ. ನಾವು ಹೊಸ ದೇಶ, ನೆಲಕ್ಕೆ ಇಳಿದು ಮೊದಲು ಮಾಡುವ ಕೆಲಸ ಅಲ್ಲಿನ ಒಂದು ಮೊಬೈಲ್ ಸಿಮ್ ತೆಗೆದುಕೊಂಡು ಅಂತರ್ಜಾಲವನ್ನು ನಮ್ಮ ಫೋನಿನಲ್ಲಿ ಜೀವಂತಗೊಳಿಸುವುದು, ಮುಂದೆ ಈ ಹೊಸ ನೆಲದ ನಮ್ಮ ಮಿತ್ರ, ಮಾರ್ಗದರ್ಶಕ ನಮ್ಮ ಕೈಯಲ್ಲಿರುವ ಮೊಬೈಲ್ ಆಗಿರುತ್ತದೆ. ಹಾಗಾಗಿ ಹೊಸ ಜನರೊಂದಿಗೆ ಮಾತನಾಡುವ ಅಗತ್ಯ ಬೀಳುವುದು ಬಹಳ ಕಡಿಮೆ. ನಾವು ಎಲ್ಲಿರುವುದು, ಅಲ್ಲಿಗೆ  ಹೇಗೆ ಹೋಗುವುದು, ಯಾವ ಹೋಟೆಲಿನಲ್ಲಿ ತಿಂಡಿ ತಿನ್ನಬೇಕು, ಏನೆಲ್ಲಾ ನೋಡಬೇಕು  ಎಲ್ಲವೂ ಮೊಬೈಲ್ ನೋಡಿಯೇ ತಿಳಿಯುತ್ತದೆ! ಏನಾದರೂ ತಿಳಿಯದಿದ್ದರೆ ಯಾರನ್ನಾದರೂ ಕೇಳಲು  ಹೋರಡುತ್ತಿದ್ದ ನಾನು, ಅಷ್ಟರಲ್ಲಿ ಮೊಬೈಲ್ ನೋಡಿಯೇ ಉತ್ತರ ಪಡೆಯುತ್ತಿದ್ದ ನನ್ನ ಪರಿವಾರ; ಬರಬರುತ್ತಾ ಮನುಷ್ಯರ ನಡುವಿನ ಸಂಪರ್ಕವನ್ನೇ ಈ ಅಂತರ್ಜಾಲ, ನಕಲಿ ಬುದ್ದಿಮತ್ತೆ ನುಂಗಿಹಾಕುತ್ತದೆ ಎನ್ನಿಸಿತು. 
       ದೊಡ್ಡ ದೇಶ ನ್ಯೂಜಿಲಾಂಡನ್ನು ೧೦ ಹತ್ತು ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ನೋಡಿ ಈ ಬಾರಿಯ ಪ್ರವಾಸ ಮುಗಿಸಿದ್ದೆವು.  ಸಪರಿವಾರವಾಗಿ ಇನ್ನೊಂದು ದೇಶವನ್ನು ಪ್ರವಾಸ ಮಾಡಿದ ಅನುಭವಕ್ಕೆ, ಅವಕಾಶಕ್ಕೆ ಅಭಿನಂದನೆ ಸಲ್ಲಿಸುತ್ತಾ ಈ ಪ್ರವಾಸ ಮುಗಿಸಿದೆ. ಒಟ್ಟಿನಲ್ಲಿ ಹತ್ತು ಹಲವು ಹೊಸ ಅನುಭವಗಳೊಂದಿಗೆ ಇನ್ನೊಮ್ಮೆ ಇಲ್ಲಿಗೆ ಬರಬೇಕು ಎಂಬ ಆಸೆಯನ್ನು ಉಳಿಸಿದ  ಒಂದು ವಿಶಿಷ್ಟ ಪ್ರವಾಸವಾಗಿ ನ್ಯೂಜಿಲಾಂಡ್ ನನ್ನ ನೆನಪಿನಲ್ಲಿ ಯಾವಾಗಲೂ ಉಳಿಯುತ್ತದೆ. 
 

ಲೇಖನ: ಸುಧಾ ಶಶಿಕಾಂತ್ , ಮಸ್ಕತ್ 

Published in Desiswara NRI Edition of Udayavani on 17-05-2025






8 ಕಾಮೆಂಟ್‌ಗಳು:

  1. ಡಾ ನಾಗಾರಾಜು ಜಿ ಬಿಜೂನ್ 5, 2024 ರಂದು 12:05 AM ಸಮಯಕ್ಕೆ

    ಅತ್ಯುತ್ತಮ ಬರಹ ಮೇಡಂ. ನೀವು ಲೇಖಕಿಯಾಗಿರುವುದರಿಂದ, ನೀವು ಕಂಡು ಅನುಭವಿಸಿದ ಸಂತಸದ ಗಳಿಗೆಗಳನ್ನು ಅಕ್ಷರರೂಪಕ್ಕಿಳಿಸಿದ ನ್ಯೂಜಿಲೆಂಡ್ ಪ್ರವಾಸ ಕಥನ ನಮ್ಮನ್ನು ಕೂಡ ಅಲ್ಲಿಗೆ ಕರೆದೊಯ್ಯುವಷ್ಟು ಸಮರ್ಥವಾಗಿದೆ. ನಾವು ಅಲ್ಲಿಗೆ ಹೋಗಿ ಬಂದಷ್ಟು ಸಂತೋಷವಾಯಿತು. ಧನ್ಯವಾದಗಳು ಮೇಡಂ.

    ಪ್ರತ್ಯುತ್ತರಅಳಿಸಿ
  2. ಡಾ ನಾಗಾರಾಜು ಜಿ ಬಿಜೂನ್ 5, 2024 ರಂದು 12:05 AM ಸಮಯಕ್ಕೆ

    ಅತ್ಯುತ್ತಮ ಬರಹ ಮೇಡಂ. ನೀವು ಲೇಖಕಿಯಾಗಿರುವುದರಿಂದ, ನೀವು ಕಂಡು ಅನುಭವಿಸಿದ ಸಂತಸದ ಗಳಿಗೆಗಳನ್ನು ಅಕ್ಷರರೂಪಕ್ಕಿಳಿಸಿದ ನ್ಯೂಜಿಲೆಂಡ್ ಪ್ರವಾಸ ಕಥನ ನಮ್ಮನ್ನು ಕೂಡ ಅಲ್ಲಿಗೆ ಕರೆದೊಯ್ಯುವಷ್ಟು ಸಮರ್ಥವಾಗಿದೆ. ನಾವು ಅಲ್ಲಿಗೆ ಹೋಗಿ ಬಂದಷ್ಟು ಸಂತೋಷವಾಯಿತು. ಧನ್ಯವಾದಗಳು ಮೇಡಂ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಸಮಯ ಮಾಡಿಕೊಂಡು ಓದಿ ಪ್ರತಿಕ್ರಿಯೆ ನೀಡಿದ ನಿಮಗೆ ಧನ್ಯವಾದಗಳು ಡಾಕ್ಟರೇ🙏

      ಅಳಿಸಿ
  3. ಅತ್ಯುತ್ತಮ ಪ್ರವಾಸ ಲೇಖನ ಸುಧಾ.

    ಪ್ರತ್ಯುತ್ತರಅಳಿಸಿ
  4. "ಸಮುದ್ರದ ಅಗಾಧತೆಯನ್ನು ದೇವರ ಅಸ್ತಿತ್ವವನ್ನು ಪ್ರಶ್ನಿಸುವುದಿಲ್ಲ" ಎನ್ನುವ ಆಧ್ಯಾತ್ಮಿಕ, ವೈಚಾರಿಕ, ತತ್ವಜ್ಞಾನ, ವ್ಯಾವಹಾರಿಕ, ತಾರ್ಕಿಕತೆಯಿಂದ ತುಂಬಿದ ಮಾತುಗಳಿಂದ ಆರಂಭಗೊಳ್ಳುವ ನಿಮ್ಮ ನ್ಯೂಜಿಲೆಂಡ್ ಪ್ರವಾಸದ ಸುಂದರ ಬರಹ, "ಕೋಶವನ್ನಾದರೂ ಓದು, ಇಲ್ಲ, ದೇಶವನ್ನಾದರೂ ಸುತ್ತು" ಎನ್ನುವ ಹಿರಿಯರ ಮಾತಿಗೆ ಸರಿ ಹೊಂದುವ ನಿದರ್ಶನವಾಗಿದೆ. ಕೋಶ ಓದಿದವರು ದೇಶವನ್ನು ಸುತ್ತಿದಾಗ ಮಾತ್ರ, ನೀವು ಪ್ರವಾಸ ಕಥನದ ಶುರುವಿನಲ್ಲಿ ಉಲ್ಲೇಖಿಸಿದಂತಹ ಅದ್ಭುತ ಮಾತುಗಳಿಗೆ ಆಶ್ರಯ ದೊರೆಯುತ್ತದೆ. ತಮ್ಮ ಪ್ರವಾಸದ ಅನುಭವದ ಕ್ಷಣಗಳನ್ನು ಸಾರ್ವತ್ರಿಕ ದೃಷ್ಟಿಕೋನದಿಂದ ಹಂಚಬಲ್ಲ ಬರಹಗಾರರು, ಖಾಸಗಿಯಾಗಿಯೇ ಉಳಿದು ಹೋಗಬಲ್ಲ ಯಾವತ್ತೂ ಮಧುರ ಕ್ಷಣಗಳಿಗೆ ಅಮೃತತ್ವವನ್ನು ಪ್ರಾಪ್ತಿ ಮಾಡುತ್ತಾರೆ. ದೇಶ ಸುತ್ತಿದವರ ಕೋಶವನ್ನ ಓದಿದಲ್ಲಿ, ಸದೃದಹಸ್ಥ ವಾಚಕರೂ ಲೇಖಕರ ಕಣ್ಣುಗಳ ಮೂಲಕ, ಬರಹಗಾರರು ಸುತ್ತಿದ ದೇಶಕಾಲಗಳ ಪ್ರಕೃತಿ ರಮ್ಯತೆಗೆ ಸಾಕ್ಷಿಯಾಗುತ್ತಾರೆ.

    ಶ್ರೀಮತಿ ಸುಧಾರವರ ಈ ಪ್ರವಾಸ ಲೇಖನವನ್ನು ತನ್ಮಯತೆಯಿಂದ ಓದಿದ ನಂತರ "ನಾನು ನ್ಯೂಜಿಲೆಂಡ್ ಪ್ರವಾಸ ಮಾಡಿಲ್ಲ" ಎನ್ನುವುದನ್ನು ಒಪ್ಪಲಿಕ್ಕೆ ಮನಸ್ಸು ತಯಾರಿಲ್ಲ. ಇದು ಪ್ರವಾಸ ಕಥನದ ಹೂರಣ, ಸರಸ ಶೈಲಿಯ ಬಗೆಗಿನ ಪ್ರಶಂಸೆಯ ಮಾತುಗಳಾಗಿಯಷ್ಟೇ ಉಳಿಯದೆ, ಇಂತಹ ಲೇಖನಗಳನ್ನು ಬರೆಯಬಲ್ಲ ಸಾಮರ್ಥ್ಯವುಳ್ಳ ನಮ್ಮ ಒಮಾನ್ ಕನ್ನಡ ಬರಹಗಾರರ ವೇದಿಕೆಯ ಸದಸ್ಯರಿಗೂ ಸ್ಫೂರ್ತಿಯ ಸೆಲೆಯಾಗಬೇಕು ಎನ್ನುವ ಉದ್ದೇಶವನ್ನೂ ಒಳಗೊಂಡಿದೆ.

    ನಿನ್ನೆಯ ಚುನಾವಣೆಯ ಫಲಿತಾಂಶದ ಕಾರಣ ವಿಹ್ಲವ, ವಿಪ್ಲವಗಳಿಗೆ ಒಳಗಾಗಿದ್ದ, ರಣರಂಗದಂತಹ ಮನಸ್ಸಿಗೆ ಮುಂಗಾರಿನ ಮಳೆಯ ಸಿಂಚನವನ್ನು ಈ ಲೇಖನ ಮಾಡಿದೆ ಎನ್ನುವುದು ಉತ್ಪ್ರೇಕ್ಷೆಯ ಮಾತಾಗಿ ಉಳಿಯುವುದಿಲ್ಲ.

    ನಿಮ್ಮ ಲೇಖನಿಯ ಮೊನಚಾದ ಮುಳ್ಳಿನ ತುದಿಯಿಂದ ಇನ್ನೂ ಇಂತಹ ಹತ್ತಾರು ಪ್ರವಾಸ ಲೇಖನಗಳು ಮೂಡಿ ಬಂದು ನಮ್ಮ ಲೋಕಜ್ಞಾನವನ್ನು ಹೆಚ್ಚಿಸಲಿ ಎನ್ನುವುದೇ ನಿಮಗೆ ನನ್ನ ಈ ಹೊತ್ತಿನ ಸವಿನಯ ಪ್ರಾರ್ಥನೆ.
    H.C.Shivaprakash, Muscat

    ಪ್ರತ್ಯುತ್ತರಅಳಿಸಿ
  5. ಲೇಖನ ಓದುತ್ತಿದ್ದಂತೆ ಪ್ರವಾಸಕ್ಕೆ ನಿಮ್ಮ ಜೊತೆ ಹೋಗಿಬಂದ ಅನುಭವವಾಯಿತು. ನಿಮ್ಮ ಪ್ರವಾಸ ಶುರುವಾದ ಗಳಿಗೆಯಿಂದ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳ ಕುರಿತು ನೋಡಿದ, ನೀವು ಅನುಭವಿಸಿದ ಸುಂದರ ಕ್ಷಣಗಳು ಜತೆಗೆ ಬ್ಯಾಗ್ ಅನ್ನು ರಿಸೆಪ್ಶನ್ ಅಲ್ಲಿ ಮರೆತು ಬಂದ ಅವಾಂತರ, ಅಡುಗೆಗೆ ಬೇಕಾದ ಸಾಮಾನುಗಳ ಖರೀದಿಸಿ ತಂದು ಅಡಿಗೆ ಮಾಡಿ ಊಟಮಾಡಿದ್ದು ಇತ್ಯಾದಿಯನ್ನು ತುಂಬಾ ಸುಂದರವಾಗಿ ವರ್ಣಿಸಿದ್ದೀರಿ.

    ನ್ಯೂಜಿಲೆಂಡ್ ಒಂದು ಚಿಕ್ಕ ಮತ್ತು ದೂರದ ದೇಶ ಎಂದುಕೊಂಡು, ಪ್ರವಾಸಕ್ಕೆ ಹೋಗದೆ ಇರುವವರಿಗೆ ಮುಂದಿನ ದಿನಗಳ ತಮ್ಮ ಪ್ರವಾಸಕ್ಕೆ ಹೋಗುವ ಪಟ್ಟಿಯಲ್ಲಿ, ಈ ದೇಶವನ್ನು ಸೇರಿಸುವ ಆಸೆಯನ್ನ ಮನದಲ್ಲಿ ಹುಟ್ಟಿಸಿದ್ದೀರಿ.

    ಲೇಖನದ ಮೊದಲ ಭಾಗದಲ್ಲಿ ತಾವು ಬರೆದ ಸಮುದ್ರದ ಅಗಾಧತೆ ಅನುಭವಿಸಿದವನು ದೇವರ ಅಸ್ತಿತ್ವವನ್ನು ಪ್ರಶ್ನಿಸಲ್ಲ ಎನ್ನುವ ಗೋವಿಂದ ಪೈ ಮಾತು ಬಹಳ ಇಷ್ಟವಾಯಿತು.

    ಕ್ರೈಸ್ಟ್ ಚರ್ಚ್ ಈ ಒಂದು ಸ್ಥಳದ ಬಗ್ಗೆ ಟಿವಿಯಲ್ಲಿ ಕ್ರಿಕೆಟ್ ಪಂದ್ಯ ಪ್ರಸಾದರ ಹೋದಾಗ ನೋಡುತ್ತಿದ್ದ ನೆನಪು ಅಷ್ಟೇ ನಿಮ್ಮಬರಹದ ಮೂಲಕ ಹೌದು ಚಿಕ್ಕ ಪಟ್ಟಣ ಎಂದು ಅರಿವಾಯಿತು.

    ಟೆಕಾಪು ಪಟ್ಟಣ ಆಕಾಶ ವೀಕ್ಷಣೆಗೆ ಮೀಸಲಾಾಗಿರುವ ಪ್ರದೇಶವೆಂದು ಈಗ ಗೊತ್ತಾಯಿತು. ನಮ್ಮ ಒಮಾನಿನ ರಾಸ್ ಅಲ್ ಹದ್ ಪ್ರದೇಶ ಆಮೆಗಳ ಸಂರಕ್ಷಣೆಗಾಗಿ ಆ ಪ್ರದೇಶದಲ್ಲೂ ಸಹ ಬೀದಿ ದೀಪಗಳನ್ನು, ನಿಯಂತ್ರಿಸಲಾಗಿದೆ. ಅಲ್ಲಿಯು ಸಹ ಆಕಾಶ ವೀಕ್ಷಣೆ ಮಾಡಬಹುದು.
    ಭೂಮಿಯ ಮೇಲಿನ ದೀಪಗಳ ಬೆಳಕು ಆಕಾಶದತ್ತ ಪ್ರತಿಫಲಿಸುವುದು ಸಹಜ. ಸಾಮಾನ್ಯವಾಗಿ ಹಳ್ಳಿಗಳಲ್ಲಿಯೂ ಬೆಳಕಿರುವುದು ಬಹಳ ಕಡಿಮೆ. ಇಂತಹ ಪ್ರದೇಶದಲ್ಲಿ ನಕ್ಷತ್ರಗಳು ನಕ್ಷತ್ರಪುಂಜ ಉಲ್ಕೆ ಇತ್ಯಾದಿಗಳನ್ನು ವೀಕ್ಷಿಸಬಹುದು. ನಗರ ಪ್ರದೇಶಗಳಲ್ಲಿ ಇದು ಅಸಾಧ್ಯವಾದ ಮಾತು.

    ಆರೋಕಿ ಪರ್ವತ ಶಿಖರ ತಮಗೆ ಮಾನಸ ಸರೋವರದ ಕಂಡು ಓಂ ನಮಃ ಶಿವಾಯ ಎಂದು ಉದ್ಘರಿಸಿದ್ದು ಕಂಡು ಎಲ್ಲೆಲ್ಲೂ ಶಿವನೆ‌ ಎನ್ನುವ ಭಾವ ನಮಗೆ ಕಂಡಿತು.

    ತೇ ಅನೌ ಸರೋವರದ ವೈಮಾನಿಕ ದೃಶ್ಯ
    ವನ್ನು ತೋರಿಸುವ ಸೀ-ಪ್ಲೇನ್(sea plane) ನಲ್ಲಿನ ಸವಾರಿಯ ಅನುಭವ, ನಮ್ಮ ದೇಶದ ರಾಜಕಾರಣಿಗಳು ನೆರೆಪೀಡಿತ ಪ್ರದೇಶದಲ್ಲಿ ಮಾಡುವ ವೈಮಾನಿಕ ಸರ್ವೇಕ್ಷಣೆಯನ್ನು ನೆನಪಾಯಿತು‌ ಎಂದಿರಿ, ನಿಜ, ಕೆಲ ರಾಜಕಾರಣಿಗಳು ನಾಮಕಾವಾಸ್ಥೆಗಾಗಿ ಬೇಕಾಬಿಟ್ಟಿ ವೀಕ್ಷಣೆ ಮಾಡಿದವರು ಇದ್ದಾರೆ‌. ಕೆಲವರು ಮೋಜಿನ ಸವಾರಿಯೂ ಮಾಡಿದ್ದಾರೆ. ಮನಸ್ಸಿಗೆ ಕಸಿವಿಸಿ ಮಾಡಿಕೊಳ್ಳುವ ಅಗತ್ಯ ವಿಲ್ಲ.

    ನಿಮ್ಮ ಪ್ರವಾಸಿ ಲೇಖನ ಓದಿ ನಾವು ಸಹ ನ್ಯೂಜಿಲೆಂಡ್ ಗೆ ಹೋಗಿಬಂದಂತಾಯ್ತು. ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಕೂಲಂಕಷವಾಗಿ ಓದಿ ಪ್ರತಿಕ್ರಿಯೆ ನೀಡಿದ ಸಹೃದಯತೆಗೆ ಧನ್ಯವಾದಗಳು ಸರ್

      ಅಳಿಸಿ