ಶನಿವಾರ, ಡಿಸೆಂಬರ್ 28, 2024

ಹೊಸ ವರುಷ ಹೊಸ ಹರುಷ

ಮನುಷ್ಯ ನಿರಂತರ ಹೊಸತನ್ನು ನಿರೀಕ್ಷಿಸುವ, ಬಯಸುವ ಜೀವಿ. ಏಕತಾನತೆ ಅವನಿಗೆ ಬೇಸರ ತರುತ್ತದೆ. ಪ್ರತಿನಿತ್ಯ ಏನಾದರೊಂದು ಹೊಸತು ಎಲ್ಲರಿಗೂ ಬೇಕು. ಹೊಸದಕ್ಕೆ ತುಡಿಯುವ ಮನುಷ್ಯನ ಈ ಬುದ್ದಿಯೇ ನಮ್ಮ ಎಲ್ಲ ಹಬ್ಬಗಳಿಗೆ, ಆಚರಣೆಗಳಿಗೆ, ಆವಿಷ್ಕಾರಗಳಿಗೆ ಕಾರಣ. ಪ್ರಪಂಚದ ಎಲ್ಲ ಮಾನವ ಸಂಸ್ಕೃತಿಗಳಲ್ಲಿ ಕಂಡು ಬರುವ ಹಬ್ಬಗಳು, ಆಚರಣೆಗಳು ನನ್ನ ಈ ವಾದವನ್ನು ಪುಷ್ಟಿಗೊಳಿಸುತ್ತದೆ. ಹೊಸತು ಏನೇ ಆಗಿದ್ದರೂ ಅದು ಕುತೂಹಲ, ನಿರೀಕ್ಷೆಯನ್ನು ಹುಟ್ಟಿಸುತ್ತದೆ. ಒಂದು ಮಗುವಿಗೆ ಹೊಸ ಆಟಿಕೆಯೊಂದನ್ನು ತಂದು ಕೊಟ್ಟರೆ ಅದು ಮಗುವಿನ ಮನಸ್ಸಿನಲ್ಲಿ ಎಷ್ಟೊಂದು ಸಂತಸದ ಭಾವನೆಗಳನ್ನು ಅರಳಿಸುತ್ತದೆ!!

         ಅಂತೆಯೇ ಹೊಸ ವರ್ಷ. ಹೊಸ ನೀರೀಕ್ಷೆ, ಹುರುಪು, ಉತ್ಸಾಹ, ಹುಮ್ಮಸ್ಸುಗಳನ್ನು ಹೊತ್ತು ತರುವ ಸಂವತ್ಸರವನ್ನು ಎಲ್ಲರೂ ಎದಿರು ನೋಡಿತ್ತಿರುತ್ತಾರೆ. ಕಳೆದ ಕಾಲದಲ್ಲಾದ ಕಷ್ಟಗಳು ಮುಂದಿನ ಕಾಲದಲ್ಲಿ ಬಾರದಿರಲಿ ಎಂಬ ಪ್ರಾರ್ಥನೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಕಾಲ ಚಕ್ರದ ಉರುಳನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ. ಅದು ತಿರುಗುತ್ತಲೇ ಇರಬೇಕು. ತಿರುಗುವ ಕಾಲದ ನಡುವಿನ ರಸ ನಿಮಿಷಗಳೇ ಜೀವನ. ಆದ್ದರಿಂದಲೇ ಒಂದು ಕಾಲಘಟ್ಟ ಮುಗಿದು ಇನ್ನೊಂದು ಆರಂಭವಾಗುವ ಹೊತ್ತು ಮನುಷ್ಯನಿಗೆ ಅಪ್ಯಾಯಮಾನ. ಭಾರತೀಯ ಪಂಚಾಂಗದಲ್ಲಿ ಹೊಸ ಸಂವತ್ಸರದ ಆಗಮನವನ್ನು ಯುಗಾದಿ ಎಂದು ಸಂಭ್ರಮಿಸಿತ್ತೇವೆ. ಚೀನಾದಲ್ಲಿ ಅವರದ್ದೇ ಕ್ಯಾಲೆಂಡರ್ ನ ಹೊಸವರ್ಷ ವನ್ನು ಆಚರಿಸುತ್ತಾರೆ. ಮೊಹರಂ ಮುಸಲ್ಮಾನರಿಗೆ ಹೊಸವರ್ಷವನ್ನು ತರುವ ತಿಂಗಳು. ಹೀಗೆ ಪ್ರಪಂಚದ ಎಲ್ಲ ಮೂಲೆಗಳಲ್ಲೂ ಹೊಸ ಕಾಲಘಟ್ಟವನ್ನು ಸಂಭ್ರಮದಿಂದ ಸ್ವಾಗತಿಸುವ ಪದ್ದತಿ ಅನಾದಿಕಾಲದಿಂದಲೂ ಬಂದಿದೆ. ಕಾಲಘಟ್ಟದ ಬಗೆಗೆ ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಈಗ ನಾವೆಲ್ಲ ಗ್ರೇಗೊರಿಯನ್ ಕ್ಯಾಲೆಂಡರಿನ 2024ನೆಯ ಇಸವಿಯನ್ನು ಮುಗಿಸಿ 2025 ಎಂಬ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಆಧುನಿಕ ಯುಗದಲ್ಲಿ ಇಡೀ ಪ್ರಪಂಚವು ವ್ಯವಹಾರಕ್ಕಾಗಿ ಒಪ್ಪಿಕೊಂಡಿರುವ ಈ ಕ್ಯಾಲೆಂಡರ್ ಮತ್ತು ಅದರ ಆಚರಣೆಗಳು ಎಲ್ಲ ದೇಶ, ಸಂಸ್ಕೃತಿಗಳಿಗೂ ಮುಖ್ಯವೆನಿಸುತ್ತದೆ. ಹಾಗಾಗಿ ದೇಶ, ಧರ್ಮಗಳ ಭೇದವಿಲ್ಲದೇ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಈ ಹೊಸವರ್ಷವನ್ನು ವೈಭವೋಪೇತವಾಗಿ ಆಚರಿಸಲಾಗುತ್ತದೆ.

         ಪೂರ್ವದ ಜಪಾನಿನಿಂದ ಹಿಡಿದು ಪಶ್ಚಿಮದ ಅಮೆರಿಕಾದ ಪಶ್ಚಿಮ ತೀರದವರೆಗೆ ನಡೆಯುವ ಹೊಸ ವರ್ಷದ ಸಂಭ್ರಮ ಗಳನ್ನು ನಾವು ಮನೆಯಲ್ಲಿಯೇ ಕುಳಿತು ನೋಡಬಹುದು. ನ್ಯೂಯಾರ್ಕಿನ ಟೈಮ್ ಚೌಕ, ಅಸ್ಟ್ರೇಲಿಯಾದ ಸಿಡ್ನಿ, ದುಬೈನ ಬುರ್ಜ್ ಕಾಲೀಫಾ- ಇಂತಹ ಕಡೆಗಳಲ್ಲಿ ಹೊಸವರ್ಷದ ಆರಂಭದ ಕ್ಷಣಗಣನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿ ಹೊಸವರ್ಷವನ್ನು ಸ್ವಾಗತಿಸುವ ಪದ್ದತಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದೆ. ಇದನ್ನು ನೋಡಲು ಎಲ್ಲ ಕಡೆಗಳಿಂದಲೂ ಜನ ಹೋಗುವುದರಿಂದ ಆ ಊರುಗಳೇ ವರ್ಷದ ಕೊನೆಯ ದಿನಗಳಲ್ಲಿ ಜನಗಳಿಂದ ತುಂಬಿರುತ್ತದೆ. ಈ ಎಲ್ಲ ಊರುಗಳಲ್ಲಿ ಡಿಸೆಂಬರ್ 31ರಂದು ವಾಹನ ಹಿಡಿದು ಹೊರಗೆ ಹೋಗ ಲಾರದಷ್ಟು ವಾಹನ ದಟ್ಟಣೆ ಇರುತ್ತದೆ. ಹೊಟೇಲ್, ಪ್ರವಾಸ ಮುಂತಾದ ಉದ್ದಿಮೆಗಳಿಗೆ ಇದು ಸುಗ್ಗಿಯ ಕಾಲ. ಪತ್ರಿಕೆಗಳಲ್ಲಿ ಎಲ್ಲಿ ನೋಡಿದರೂ ರಿಯಾಯಿತಿ ಮಾರಾಟದ ಜಾಹೀರಾತುಗಳೇ! ಈಗಿನ ಸಾಮಾಜಿಕ ಜಾಲತಾಣದ ಸಮಯದಲ್ಲಂತೂ ಎಲ್ಲರಿಗೂ ತಮ್ಮ ಸಂಭ್ರಮ ವಿಭಿನ್ನವಾಗಿರಬೇಕು ಎಂಬ ಒತ್ತಡ ಬೇರೆ. ತಮ್ಮ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಫ್, ಇನ್ಸ್ಟಾ , ಫೇಸ್ಬುಕ್ ಗಳಲ್ಲಿ ಫೋಟೋ ಹಾಕಲೆಂದಾದರೂ ಒಂದು ಮೋಜುಕೂಟವನ್ನು ಮಾಡುತ್ತಾರೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಈ ಹೊಸವರ್ಷದ ಆಚರಣೆಯ ತುಡಿತ ಜಾಸ್ತಿಯಾಗಿ ನಗರಗಳಲ್ಲಿ ಇದು ಪೊಲೀಸರಿಗೊಂದು ತಲೆನೋವಾಗಿಯೂ ಪರಿಣಮಿಸುತ್ತದೆ.

    ಬರಿಯ ಮೋಜುಕೂಟಗಳಲ್ಲದೇ ಈ ಸಂಧರ್ಭವು ಎಲ್ಲರಿಗೂ ಆತ್ಮಾವಲೋಕನಕ್ಕೂ ಒಂದು ಅವಕಾಶ, ಕಳೆದ ವರ್ಷದಲ್ಲಾದ ತಪ್ಪುಗಳನ್ನು ತಿದ್ದಿಕೊಳ್ಳಲು, ಹೊಸ ಗುರಿಗಳನ್ನು ಮುಂದಿನ ವರ್ಷದಲ್ಲಿ ರೂಪಿಸಿಕೊಂಡು ಅವುಗಳನ್ನು ಸಾಧಿಸಲು ಶ್ರಮಿಸಲು ಒಂದು ಅವಕಾಶ. ನನಗಂತೂ ಪ್ರತೀ ವರ್ಷದ ಅಂತ್ಯದ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬರುವ ಈ ವರ್ಷದ ಸಾಧನೆ, ಸಾಧಕರು, ಪ್ರಮುಖ ಘಟನೆಗಳನ್ನು ಓದುವುದು, ಕೇಳುವುದು ತಿಳಿದುಕೊಳ್ಳುವುದು ಒಂದು ಅತ್ಯಂತ ಸಂತಸದ ಚಟುವಟಿಕೆ. ಈಗಿನ ಕೃತಕ ಬುದ್ಧಿಮತ್ತೆಯ, ವೇಗದ ಯುಗದಲ್ಲಿ ಒಂದು ಕಡೆ ಕುಳಿತು ಕಳೆದ ಕಾಲಮಾನದ ಬಗೆಗೆ ಚಿಂತಿಸಲು, ವೇಗಕ್ಕೊಂದು ಕಡಿವಾಣ ಹಾಕಿ ಶಾಂತವಾಗಿ ಯೋಚಿಸಲು ಇದೊಂದು ಸಂಧರ್ಭ ಎನ್ನುವುದು ನನ್ನ ಅಭಿಮತ. ಅವರವರ ಭಾವಕ್ಕೆ ತಕ್ಕಂತೆ ಹೊಸವರ್ಷವನ್ನು ಎಲ್ಲರೂ ಬರಮಾಡಿಕೊಳ್ಳಬಹುದು. 

     "ವರುಷ ವರುಷ ಕಳೆದರೂ ಹೊಸವರುಷ ಮರಳಿ ಬರುತಿದೆ
 ಹೊಸ ವರುಷಕೆ ಹೊಸ ಹರುಷವ ಮರಳಿ ಮರಳಿ ತರುತ್ತಿದೆ" - ಎಂದು ಬೇಂದ್ರೆಯವರ ಕವನವನ್ನು ಸ್ವಲ್ಪ ಬದಲಿಸಿ ಹೇಳುತ್ತಾ ಎಲ್ಲರಿಗೂ 2025 ಶುಭವನ್ನು ತರಲಿ ಎಂದು ಹಾರೈಸುತ್ತೇನೆ.


 ಲೇಖನ: ಸುಧಾ ಶಶಿಕಾಂತ್, ಮಸ್ಕತ್

ಉದಯವಾಣಿ ದೇಸೀಸ್ವರದಲ್ಲಿ ೨೭-೧೨-೨೦೨೪ ರಂದು  ಪ್ರಕಟವಾಗಿತ್ತು 


ಸೋಮವಾರ, ಸೆಪ್ಟೆಂಬರ್ 9, 2024

"ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರ...." ಸಂಸ್ಕ್ರತ ಶ್ಲೋಕ

"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" - ಎನ್ನುವ ದಾಸವಾಣಿ

"ಮನಶ್ಚೇನ್ನ ಲಗ್ನಮ್ ಗುರೊರಂಗ್ರಿ ಪದ್ಮೇ ತತಃ ಕಿಂ...." ಎನ್ನುವ ಶಂಕರಾಚಾರ್ಯರ ಗುರುವಷ್ಟಕ

ಮೇಲಿನ ಎಲ್ಲ ಮುಕ್ತಕಗಳು ನಮಗರಿವಿಲ್ಲದೆಯೇ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇವೆಲ್ಲ ಒಬ್ಬ ಮನುಷ್ಯನ ಜೀವನದಲ್ಲಿ ಗುರುವಿಗಿರುವ ಮಹತ್ವದ ಸ್ಥಾನವನ್ನು; ನಮ್ಮ ಭಾರತೀಯ ಸಂಸ್ಕೃತಿಯು ಗುರುವಿಗೆ ಕೊಟ್ಟಿರುವ ವಿಶೇಷ ಸ್ಥಾನವನ್ನು ತೋರಿಸುತ್ತದೆ.

ಚಾಣಕ್ಯ -ಚಂದ್ರಗುಪ್ತ; ಗುರು ರಾಮದಾಸ್ -ಶಿವಾಜಿ; ಹರಿಹರ,ಬುಕ್ಕ-ವಿದ್ಯಾರಣ್ಯರು- ಇವರೆಲ್ಲ. ಭಾರತದ ಇತಿಹಾಸ ಪ್ರಸಿದ್ಧ ಗುರುಶಿಷ್ಯರ ಜೋಡಿಗಳು. ಗುರುಗಳ ಮಾರ್ಗದರ್ಶನ ದಿಂದ ಶಿಷ್ಯರು ಏರಬಹುದಾದ ಎತ್ತರವನ್ನು ಸಾಧಿಸಿ ತೋರಿಸಿದವರು. ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು" ಎನ್ನುವ ಪ್ರಸಿದ್ಧ ಹೇಳಿಕೆಯನ್ನು ಸತ್ಯವಾಗಿಸಿದವರು.

ಮಣ್ಣಿನ ಮುದ್ದೆಯಂತಿರುವ ಮಗು ಈ ಜೀವನದಲ್ಲಿ ಬೆಳೆಯುತ್ತಾ ಮನುಷ್ಯ ಎನಿಸಿಕೊಳ್ಳುವ ಪಯಣದಲ್ಲಿ ಅವನು ಏನಾಗುತ್ತಾನೆ ಎನ್ನುವುದು ಅವನು ಬೆಳೆಯುವ ವಾತಾವರಣ, ಅವನ ಮೇಲೆ ಘಾಡವಾಗಿ ಪ್ರಭಾವ ಬೀರುವ ಜನಗಳಿಂದ ನಿರ್ಧಾರವಾಗುತ್ತದೆ. ಒಳ್ಳೆಯ ಗುರು  ಒಬ್ಬ ವ್ಯಕ್ತಿಯ ಜೀವನದಲ್ಲಿ ಬಹುಮುಖ್ಯ ನಾಗುತ್ತಾನೆ. ಹಾಗಾಗಿ ಶಿಕ್ಷಕನ ವೃತ್ತಿಯು ಪ್ರಪಂಚದಲ್ಲಿ ಅತ್ಯಂತ ಪವಿತ್ರವಾದ ವೃತ್ತಿ ಎನಿಸಿಕೊಳ್ಳುತ್ತದೆ. ಈ ಪವಿತ್ರ ವೃತ್ತಿಗೆ ಯಾಕೋ ನಮ್ಮ ಸಮಾಜದಲ್ಲಿ ಈಗ ಅದಕ್ಕೆ ಬೇಕಾದ ಮನ್ನಣೆ ಸಿಗುತ್ತಿಲ್ಲ ಎನಿಸುತ್ತದೆ. ಬೆಳೆಯುವ ಮಕ್ಕಳು ಏನಾಗುತ್ತೀರಿ ಎಂದು ಕೇಳಿದಾಗ ಶಿಕ್ಷಕ ಅಥವಾ ಶಿಕ್ಷಕಿ ಆಗುತ್ತೇನೆ ಎಂದರೆ ಅವರನ್ನು ನಾವು ಪ್ರೋತ್ಸಾಹಿಸಿ ಅವರು ದಿಕ್ಕಿನಲ್ಲಿ ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ.

ದಿನಬೆಳಗಾದರೆ ಅಮಾನವೀಯ ಕೃತ್ಯಗಳ ಸುದ್ದಿಗಳನ್ನು ಎಲ್ಲ ಕಡೆ ಕೇಳುತ್ತಿರುವ ಈ ದಿನಗಳಲ್ಲಿ ಸ್ವಸ್ಥ ಪ್ರಜೆಗಳನ್ನು ಬೆಳೆಸುವ ಉತ್ತಮ ಗುರುಗಳ ಅಗತ್ಯ ಬಹಳವಿದೆ.ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಎ. ಪಿ.ಜೆ ಅಬ್ದುಲ್ ಕಲಾಂ, ಕರ್ನಾಟಕದ ಅನುಭವಿ ಶಿಕ್ಷಣತಜ್ಞ ಶ್ರೀ ಗುರುರಾಜ ಕರ್ಜಗಿ -ಇವರೆಲ್ಲ ಸಾವಿರಾರು ವಿದ್ಯಾರ್ಥಿಗಳ ಸ್ಪೂರ್ತಿಗೆ ಕಾರಣರಾದಆಧುನಿಕ ಮಹಾನ್ ಗುರುಗಳು. ಅಂತಹ ಗುರುಗಳು ಸಾವಿರ ಸಂಖ್ಯೆಯಲ್ಲಿ ಬರಬೇಕು.

ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಬಹಳ ಮಹತ್ವದ ದಿನ. ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸಪ್ಟೆಂಬರ್ ಐದನ್ನು ಭಾರತದಲ್ಲಿ ಶಿಕ್ಷಕರದಿನವನ್ನಾಗಿ ಆಚರಿಸಿದರೆ, ಪಾಶ್ಚಾತ್ಯ ದೇಶಗಳಲ್ಲಿ ಆಕ್ಟೊಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಉತ್ತಮ ಶಿಕ್ಷಕರು ಬೆಳೆಯುವಂತೆ ಮಾಡುವುದು ಈಗಿನ  ಸಮಾಜದ ಅಗತ್ಯವಾಗಿದೆ.

ಲೇಖನ: ಸುಧಾ ಶಶಿಕಾಂತ್, ಮಸ್ಕತ್




ಶುಕ್ರವಾರ, ಆಗಸ್ಟ್ 23, 2024

ಸ್ವಾತಂತ್ರ್ಯದ ಸವಿಯುಣ್ಣಲಿ ಬದುಕು

"ಸ್ವಾತಂತ್ರ್ಯದ ಸವಿಯುಣ್ಣದ ಬದುಕೆಂಬುದು ಬರಡು" ಎನ್ನುವ ಕವಿವಾಣಿ ಸ್ವಾತಂತ್ರ್ಯ ಮನುಷ್ಯನ ಜೀವನದಲ್ಲಿ ಪಡೆಯುವ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ.  ಅದರಲ್ಲಿಯೂ ಒಂದು ದೇಶದ ಸ್ವಾತಂತ್ರ್ಯ ಆ ದೇಶದಲ್ಲಿ ವಾಸಿಸುವ ಎಲ್ಲ ಜನರಿಗೂ ಬಹಳ ಮುಖ್ಯವೆನಿಸುತ್ತಿದೆ. ಎಲ್ಲ ಕಡೆ ಯುಧ್ದ, ಅಶಾಂತಿ ಹರಡುತ್ತಿರುವ ಈ ದಿನಗಳಲ್ಲಿ ಸ್ವಾತಂತ್ರ್ಯದ ಬಗೆಗೆ ಚಿಂತಿಸುವ ಅಗತ್ಯ ಬಹಳವಾಗಿದೆ. ನಮ್ಮ ದೇಶಕ್ಕೆ  ಸ್ವಾತಂತ್ರ್ಯ ಬಂದು 77 ವರ್ಷಗಳಾಯಿತು. ಈ ಸಂದರ್ಭದಲ್ಲಿ ಅತ್ಯಂತ ಅಮೂಲ್ಯವಾದ ದೇಶದ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಸ್ವಲ್ಪ ಚಿಂತಿಸೋಣ. 
        ಸ್ವತಂತ್ರ ಭಾರತದಲ್ಲಿ ಜನಿಸಿದ ನಮಗೆಲ್ಲ ಈ ಸ್ವಾತಂತ್ರ್ಯದ ಬೆಲೆ ಅರ್ಥವಾಗುವುದು ಅಷ್ಟು ಸುಲಭವಲ್ಲ. ಯಾವುದು ಸುಲಭವಾಗಿ ಸಹಜವಾಗಿ ನಮಗೆ ಸಿಗುತ್ತದೋ ಅದರ ನಿಜವಾದ ಬೆಲೆ ಅರ್ಥವಾಗುವುದು ಮನುಷ್ಯನಿಗೆ ಕಷ್ಟ. ವಿದೇಶಿಯರ ಆಳ್ವಿಕೆ, ದಬ್ಬಾಳಿಕೆ ಇವೆಲ್ಲ ಈಗಿನ ಪೀಳಿಗೆಯ  ಶಾಲೆಯ ಇತಿಹಾಸದ ಪಾಠವಾಗಿ ಅವರು ಪರೀಕ್ಷೆಯ ದೃಷ್ಟಿಯಿಂದ ಮಾತ್ರ ಅವುಗಳನ್ನು ಓದುತ್ತಾರೆ.   ಸುಮಾರು ಇನ್ನೂರ ಐವತ್ತು ವರ್ಷಗಳ ಬ್ರಿಟೀಷರ ಆಡಳಿತದ ವಿರುದ್ಧ ಅನೇಕ ತರಹದ ಸ್ವಾತಂತ್ರ್ಯ ಹೋರಾಟಗಾರರು ಹಲವಾರು ರೀತಿಯ ತಂತ್ರಗಳನ್ನು ಪ್ರಯೋಗಿಸಿ, ಬಲಿದಾನಗಳನ್ನು ನೀಡಿ ಸಿಕ್ಕಿದ ಈ ಸ್ವಾತಂತ್ರ್ಯ ನಮ್ಮ ದೇಶವನ್ನು ಪ್ರಜಾಪ್ರಭುತ್ವವನ್ನಾಗಿ ಮಾಡಿದೆ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳೇ ಅಂದರೆ ನಾವೇ ಪ್ರಭುಗಳು. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಜನರು ಆರಿಸುವ ಪ್ರತಿನಿಧಿಗಳೇ ನಮ್ಮನ್ನಾಳುತ್ತಾರೆ. ಅವರ ರೀತಿ ನೀತಿಗಳು ಸರಿಯಾಗದಿದ್ದಲ್ಲಿ ನಮ್ಮ ಟೀಕೆಯನ್ನು, ಸಲಹೆಗಳನ್ನು ಸರ್ಕಾರಕ್ಕೆ ನೀಡಲು, ನಮ್ಮ ಪ್ರತಿಭಟನೆಗಳನ್ನು ತೋರ್ಪಡಿಸಲು ಪತ್ರಿಕೆಗಳು, ದೃಶ್ಯಮಾಧ್ಯಮ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬಹುದು. ಅವುಗಳಿಗೆಲ್ಲ ಪ್ರಜಾಪ್ರಭುತ್ವದಲ್ಲಿ ಮುಕ್ತ ಸ್ಥಾನವಿದೆ. 

     ಈ ಅಧಿಕಾರಗಳು, ಅವಕಾಶಗಳು ಇಲ್ಲದ ವ್ಯವಸ್ಥೆಯನ್ನು ನೋಡಿದಾಗಲೇ ಇದರ ಬೆಲೆ ನಮಗೆ ಅರಿವಾಗುವುದು. ಮಧ್ಯಪ್ರಾಚ್ಯದ ದೇಶಗಳಾದ ಯುಎಇ, ಬಹರೈನ್, ಸೌದಿ ಅರೇಬಿಯಾ, ಕತಾರ್ ಮುಂತಾದ ದೇಶಗಳಲ್ಲಿ ರಾಜಾಡಳಿತವಿದ್ದು ರಾಜನ ನಿಯಮಕ್ಕೆ ನಡೆಯುವುದು ಪ್ರಜೆಗಳ ಕರ್ತವ್ಯವಾಗಿದೆ. ನಾವು ಕಳೆದ 20 ವರ್ಷಗಳಿಂದ ವಾಸಿಸುತ್ತಿರುವ ಈ ಪ್ರದೇಶದಲ್ಲಿ  ಪತ್ರಿಕಾ ಸ್ವಾತಂತ್ರ್ಯಇಲ್ಲವೇ ಇಲ್ಲ. ಸುದ್ದಿ ಮಾಧ್ಯಮಗಳಲ್ಲಿ ಅನುಮತಿ ಇರುವ ಸುದ್ದಿಗಳನ್ನು ಮಾತ್ರ ಹಾಕಬಹುದು. ದೇಶದಲ್ಲಾದ ಯಾವುದೇ ಘಟನೆಯ ಮಾಹಿತಿ ಸರಿಯಾಗಿ ಯಾರಿಗೂ ಸಿಗುವುದಿಲ್ಲ. ನಮ್ಮ ಧ್ವನಿ ಎತ್ತಲು ಪ್ರಜೆಗಳಿಗೆ ಒಂದು ವೇದಿಕೆಯೇ ಈ ದೇಶಗಳಲ್ಲಿ ಇರುವುದಿಲ್ಲ. ಇಲ್ಲಿನ ವ್ಯವಸ್ಥೆಯನ್ನು ನೋಡುವಾಗ ಭಾರತದ ಜನಕ್ಕೆ ಎಷ್ಟು ಸ್ವಾತಂತ್ರ್ಯವಿದೆ ಎನ್ನುವ ಅರಿವು ಆಗುತ್ತದೆ. ನಮ್ಮ ಪ್ರಜಾಪ್ರಭುತ್ವ ಎಷ್ಟು ದೊಡ್ಡದು ಎನ್ನುವ ಅರಿವು ಆಗುತ್ತದೆ.. ಆದರೆ ಸ್ವಾತಂತ್ರ್ಯದ ಬೆಲೆಯರಿತು ನಡೆಯುವುದು ಆರೋಗ್ಯಕರ ಸಮಾಜಕ್ಕೆ ಬಹಳ ಮುಖ್ಯವೆನಿಸುತ್ತದೆ. ಈಗ ನಮ್ಮ ದೇಶದ ಸ್ವಾತಂತ್ರ್ಯ ಸ್ವೇಚ್ಛೆಯಾಗುತ್ತಿದೆ ಎಂದು ಅನೇಕವೇಳೆ ನಮಗೆ ಅನ್ನಿಸುತ್ತದೆ. ಯಾರಿಗೂ ಸಮಾಜದ, ಇತರರ ಪರಿವೆಯೇ ಇಲ್ಲ ತಮ್ಮ ಮೂಗಿನ ನೇರಕ್ಕೆ ನಿಯಮಗಳನ್ನು ಗಾಳಿಗೆ ತೂರುವ ಜನರು, ತಮ್ಮ ಲಾಭಕ್ಕಾಗಿ ಏನನ್ನು ಬೇಕಾದರೂ ಮಾಡಲು ತಯಾರಿರುವ ಜನರ ಅತಿಯಾಸೆಯ ಬುದ್ಧಿಯನ್ನು ನೋಡುವಾಗ ನಮ್ಮ ಸ್ವಾತಂತ್ರ್ಯ ಯಾವದಿಕ್ಕಿನಲ್ಲಿ ಸಾಗಿದೆ ಎಂದು ದಿಗಿಲಾಗುತ್ತದೆ. ನಮ್ಮ ವ್ಯವಸ್ಥೆಯಲ್ಲಿ ಏನು ತಪ್ಪಾಗಿದೆ ಎನ್ನುವತ್ತ ಮನಸ್ಸು ಯೋಚಿಸುತ್ತದೆ. ಕೊರೊನಾ ಸಂಕಷ್ಟದಲ್ಲಿ ನಡೆದ ಭ್ರಷ್ಟಾಚಾರ ಅಮಾನವೀಯ ಸ್ವಚ್ಛೆಯ ನಡತೆಗಳು, ರಾಜಕೀಯ ಲಾಭಕ್ಕಾಗಿ ದೇಶದ ಗೌರವವನ್ನು ಎಂತಹ ವೇದಿಕೆಯಲ್ಲಾದರೂ ಹರಾಜು ಹಾಕುವ ನಾಯಕರು, ದೇಶದ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ-ಇವುಗಳನ್ನೆಲ್ಲ ನೋಡುವಾಗ ಮಿತಿ ಮೀರಿದ ಸ್ವಾತಂತ್ರ್ಯವೇ ಇವುಗಳಿಗೆಲ್ಲ ಕಾರಣ ಎಂದು ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆಯೇ ಜಿಗುಪ್ಸೆ ಬರುವಂತಾಗುತ್ತದೆ. ಡಿ. ವಿ. ಜಿ ಯವರಂತಹ ಚಿಂತಕರೂ ದೇಶದ ಸ್ವಾತಂತ್ರ್ಯ ಹಳಿತಪ್ಪುತ್ತಿರುವ ಬಗೆಗೆ ತಮ್ಮ ಕಳಕಳಿಯನ್ನು ಅವರ ಅನೇಕ ಲೇಖನಗಳಲ್ಲಿ ವ್ಯಕ್ತಪಡಿಸಿದ್ದರು. ಸ್ವಾತಂತ್ರ್ಯ ಸ್ವೇಚ್ಚಾಚಾರವಾದಾಗ ವ್ಯವಸ್ಥೆ ಕುಸಿಯುತ್ತದೆ; ವ್ಯವಸ್ಥೆ ಕುಸಿದರೆ ಅರಾಜಕತೆ ದೇಶವನ್ನು ನಾಶಮಾಡುತ್ತದೆ. ಸ್ವಾತಂತ್ರ್ಯವನ್ನು ಅದರ ಬೆಲೆಯರಿತು ಅನುಭವಿಸುವುದು ಅತಿ ಅಗತ್ಯ.
       ಅಮೂಲ್ಯವಾದ. ಸ್ವಾತಂತ್ರ್ಯ ದಿನಾಚರಣೆಯನ್ನು ನಾವು ಪ್ರಪಂಚದ ಯಾವ ಭಾಗದಲ್ಲಿದ್ದರೂ  ಆಚರಿಸುವುದು ಸಂತೋಷ ತರುತ್ತದೆ. ಈ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸಿದಾಗ ಮಾತ್ರ ಇದರ ಮಹತ್ವವನ್ನು, ಮುಂದಿನ ತಲೆಮಾರಿಗೆ ತಿಳಿಸಲು ಸಾಧ್ಯ. ಭಾರತದಾದ್ಯಂತ ಒಂದು ಹಬ್ಬವಾಗಿ ಅಚರಿಸಲ್ಪಡುವ ಈ ದಿನವನ್ನು ಭಾರತೀಯರು ಇರುವಲ್ಲೆಲ್ಲ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ನಾವಿರುವ ಒಮಾನ್ ದೇಶದಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚಿನ ಭಾರತೀಯರು ಇರುವುದರಿಂದ ಇಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು  ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿನ ಇಂಗ್ಲಿಷ್ ಪತ್ರಿಕೆಗಳು ಭಾರತದ ಸ್ವಾತಂತ್ರ್ಯ ಉತ್ಸವದ ಶುಭಾಶಯಗಳ ಸಂದೇಶಗಳಿಂದ ತುಂಬಿರುತ್ತದೆ. ಇಲ್ಲಿ ಅನೇಕ.ಭಾರತೀಯ ಶಾಲೆಗಳಿವೆ. ಅಲ್ಲೆಲ್ಲ ಧ್ವಜಾರೋಹಣ ಮಾಡಿ ದೇಶಭಕ್ತಿಗೀತೆಲು, ಸಾಂಸ್ಕ್ರುತಿಕ ಕಾರ್ಯಕ್ರಮಗಳ ಮೂಲಕ ಭಾರತದ ಸ್ವಾತಂತ್ರ್ಯ ಹಬ್ಬವನ್ನು ಭಾರತದಲ್ಲಿ ಆಚರಿಸಿದಂತೆ ಆಚರಿಸಲಾಗುತ್ತದೆ. 

      ಇಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಅಮಂತ್ರಣವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಬೆಳಗ್ಗೆ ಭಾರತದ ರಾಯಭಾರಿಯಿಂದ ಧ್ವಜಾರೋಹಣ, ರಾಷ್ಟ್ರಗೀತೆಯ ಗಾಯನ ಅಲ್ಲದೆ ಭಾರತದ ಪ್ರಧಾನಿಯ ಕೆಂಪುಕೋಟೆಯ ಭಾಷಣದ ಪ್ರಮುಖ ಭಾಗಗಳನ್ನು ಓದಲಾಗುತ್ತದೆ. ನೆರೆದಿರುವ ಜನಸ್ತೋಮಕ್ಕೆ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿರುತ್ತದೆ. ವಿದೇಶದಲ್ಲಿ ನೆಲಸಿದ್ದೂ ಸ್ವದೇಶದ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸುವ ಸದವಕಾಶ ನಮಗೆಲ್ಲರಿಗೂ ಸಿಗುತ್ತದೆ.

ಸುಧಾ ಶಶಿಕಾಂತ್ , ಮಸ್ಕತ್ 

ಉದಯವಾಣಿ ದೇಸೀಸ್ವರ ಪತೃಕೆಯಲ್ಲಿ 16-08-2024 ರಂದು ಪ್ರಕಟವಾದ ಲೇಖನ



ಮಂಗಳವಾರ, ಜೂನ್ 18, 2024

ಬಸವತತ್ವ-ಯೋಗತತ್ವ ಅನುಸಂಧಾನ


ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಯೋಗದ ಅತ್ಯಂತ ದೊಡ್ಡ ವರ್ಷಾವಧಿ ಹಬ್ಬ. ವರ್ಷದ ಅತ್ಯಂತ ದೊಡ್ಡ ಹಗಲಾದ ಜೂನ್ 21 ರಂದು ಆಚರಿಸಲಾಗುತ್ತದೆ. 2015 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆರಂಭವಾದ ಈ ಆಚರಣೆಯು ಯೋಗಕ್ಕೆ ಅಂತಾರಾಷ್ಟ್ರೀಯ ಮಹತ್ವವನ್ನು ತಂದುಕೊಟ್ಟಿದೆ. ಈ ವರ್ಷ ಹತ್ತನೆಯ ಯೋಗ ದಿನಾಚರಣೆ. ಈ ಸಂಧರ್ಭದಲ್ಲಿ "ಯೋಗ ತತ್ವ ಮತ್ತು ಬಸವತತ್ವಗಳ ಅನುಸಂಧಾನ" ಎಂಬ ವಿಚಾರದ ಬಗೆಗೆ ೨೦೨೧ರ ಯೋಗ ದಿನಾಚರಣೆಯಾ ಸಂಧರ್ಭದಲ್ಲಿ ನೀಡಿದ ಒಂದು ಭಾಷಣವನ್ನು ಲೇಖನಕ್ಕೆ ಇಳಿಸಿದ್ದೇನೆ. ಅನಾದಿಕಾಲದಿಂದಲೂ ಭಾರತದ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದ "ಯೋಗ ತತ್ವ" ಮತ್ತು ಹನ್ನೆರಡನೆಯ ಶತಮಾನದಲ್ಲಿ  ಕರ್ನಾಟಕದಲ್ಲಿ ಕ್ರಾಂತಿಕಾರಿ ವಿಚಾರಗಳೊಂದಿಗೆ ಸಮಾಜದಲ್ಲಿ ಸಮಾನತೆಯನ್ನು ಬಯಸಿದ "ಬಸವತತ್ವ" ಗಳನ್ನು ಜೊತೆಯಾಗಿ ಅವಲೋಕಿಸುವ ಒಂದು ಪ್ರಯತ್ನವನ್ನು  ಮಾಡೋಣ   

ಯೋಗತತ್ವ:-

ಮೊದಲಿಗೆ  ಯೋಗತತ್ವ ಎಂದರೆನೆಂದು ನೋಡೋಣ. ಯೋಗ ಎನ್ನುವುದು ಒಂದು ಅಗಾಧವಾದ ಶಾಸ್ತ್ರ. ಇದರಹಿಂದೆ ದರ್ಶನ ಶಾಸ್ತ್ರವೇ ಇದೆ. ಇದೊಂದು ಜೀವನ ವಿಧಾನ ಜೀವನವಿಡೀ ಸಾಧನೆ ಮಾಡಬೇಕಾದ ಅನುಷ್ಠಾನ ವಿದ್ಯೆ. ಇವತ್ತು ಬಹಳ ಜನಪ್ರಿಯವಾಗಿರುವ ಆಸನಗಳು  ಯೋಗಶಾಸ್ತ್ರದ ಅಷ್ಟಾಂಗಗಳಲ್ಲಿ ಒಂದು. ಭಾರತೀಯ ಷಟ್ ದರ್ಶನಗಳೆಂದು ಪ್ರಸಿದ್ದವಾದ ನ್ಯಾಯ, ವೈಶೇಷಿಕ, ಸಾಂಖ್ಯ, ಮೀಮಾಂಸ, ವೇದಾಂತಗಳೊಂದಿಗೆ ಯೋಗಶಾಸ್ತ್ರವೂ ಬರುತ್ತದೆ ಎಂಬ ವಿಚಾರವೇ ಸನಾತನ ಸಂಸ್ಕೃತಿಯಲ್ಲಿ ಈ ಶಾಸ್ತ್ರಕ್ಕಿರುವ ಮಹತ್ವವನ್ನು ತಿಳಿಸುತ್ತದೆ. ಯೋಗವು ಚತುರ್ಮುಖ ಬ್ರಹ್ಮನಿಂದಲೇ ಪರಿಚಯಿಸಲ್ಪಟ್ಟಿತು ಅಂತ ಯೋಗ ಯಾಜ್ಞವಲ್ಕ್ಯನು ಹೇಳುತ್ತಾನೆ. ಆದರೆ ಈ ವಿದ್ಯೆಯನ್ನು ಸೂತ್ರರೂಪದಲ್ಲಿ ಬಂಧಿಸಿ ಕೊಟ್ಟಿರುವುದು ಪತಂಜಲಿ ಮುನಿಯ ಯೋಗಸೂತ್ರ ಎನ್ನುವ ಗ್ರಂಥ. ಈ ಗ್ರಂಥದ ಕಾಲವನ್ನು ಕ್ರಿ.ಪೂ. ೯೦೦ ನೆಯ ಶತಮಾನ , ಅಂದರೆ ಸುಮಾರು 3000 ವರ್ಷಗಳ ಹಿಂದೆ. ಸಮಾಧಿಪಾದ, ಸಾಧನಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದ ಎಂಬ ನಾಲ್ಕು ಅಧ್ಯಾಯಗಳಲ್ಲಿ 195 ಸೂತ್ರಗಳಿರುವ ಈ ಗ್ರಂಥದ ಆಳ ಮತ್ತು ಯೋಗ್ಯತೆಗಳು ಇದಕ್ಕೆ ಬಂದಿರುವ ಅಸಂಖ್ಯಾತ ವ್ಯಾಖ್ಯಾನಗಳನ್ನು ನೋಡಿದರೆ ತಿಳಿಯುತ್ತದೆ. 

ಮನಸ್ಸಿನ ನಿಗ್ರಹದ ಮೂಲಕ ನಮ್ಮ ವ್ಯಕ್ತಿತ್ವ ವನ್ನು ವಿಕಸನಗೊಳಿಸುತ್ತಾ ಬ್ರಹ್ಮಾನಂದ ವನ್ನು ಸಾಧಿಸುವುದು ಯೋಗಶಾಸ್ತ್ರದ ಗುರಿ. "ಯೋಗಃ  ಚಿತ್ತವೃತ್ತಿ ನಿರೋಧಃ " ಎನ್ನುವುದು  ಯೋಗಶಾಸ್ತ್ರವು ಯೋಗ ಎನ್ನುವ ಪದಕ್ಕೆ ಕೊಡುವ ಭಾಷ್ಯ. ಮನುಷ್ಯರಾದ ನಾವು ಚಿತ್ತದ ಮೂಲಕ ಈ ಪ್ರಪಂಚವನ್ನು ತಿಳಿಯುತ್ತೇವೆ. ಈ ಚಿತ್ತದಲ್ಲಿ ಬರುವ ಯೋಚನೆಗಳಿಂದ ಏಳುವ ಅಲೆಗಳೇ ವೃತ್ತಿಗಳು. ನಿರೋಧ ಎಂದರೆ ವ್ಯವಸ್ಥೆಯ ಸಮತೋಲನ ವನ್ನು ಕಾಯ್ದುಕೊಳ್ಳುವುದು. ಅಂದರೆ ಮನಸ್ಸಿನಲ್ಲಿ ಎದ್ದ ಭಾವನೆಗಳನ್ನು ಅಡಗಿಸುವುದು ಯೋಗವಲ್ಲ. ಹೊರಗಿನ ಏರುಪೇರುಗಳಿಂದ ಮನದ ಪ್ರಶಾಂತತೆಯನ್ನು ಕದಡದಂತೆ ಕಾಯುವ ಸ್ಥಿತಿಗೆ ಮನಸ್ಸನ್ನು ಕೊಂಡೊಯ್ಯುವುದೇ ಯೋಗವೆನಿಸುತ್ತದೆ.

ಶ್ರೀ ಕೃಷ್ಣನು ಭಗವದ್ಗಿತೆಯಲ್ಲಿ "ಯೋಗಃ ಕರ್ಮಸು ಕೌಶಲಮ್" ಎನ್ನುತ್ತಾನೆ. ಅಂದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಶುದ್ಧಚಿತ್ತದಿಂದ ಯಜ್ಞ ಭಾವನೆಯಿಂದ ಮಾಡಿ ಅದರ ಮೂಲಕ ಸಾರ್ಥ್ಕಕ್ಯವನ್ನು ಕಾಣುವುದು, ಭಗವಂತನಲ್ಲಿ ಐಕ್ಯನಾಗುವುದೇ ಯೋಗ ಎನ್ನುತ್ತಾನೆ. ಬಸವಣ್ಣನವರ ಕಾಯಕ ತತ್ವವು ಇದೇ ಅಲ್ಲವೇ !!

"ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು
ಅಸಮಂಜಸದಿ ಸಮನ್ವಯ ಸೂತ್ರ ನಯವ 
ವೆಸನಮಯ ಸಂಸಾರದಲಿ ವಿನಯವ ಕಾಣ್ವ 
ರಸಿಕತೆಯೇ ಯೋಗವೆಲೊ ಮಂಕುತಿಮ್ಮ' 
ಎನ್ನುವ ಡಿವಿಜಿ ಯವರ ಯೋಗದ ವಿವರಣೆಯು ಯೋಗವೆಂದರೇನೆಂದು ಸ್ಪಷ್ಟವಾಗಿ ವಿವರಿಸುತ್ತದೆ. ಈ ಸಮತೆಯನ್ನು  ಸಾಧಿಸುವ ಮಾರ್ಗವನ್ನು  ಅಷ್ಟಾಂಗಗಳ ಮೂಲಕ  ವಿವರಿಸುವ ಯೋಗತತ್ವವನ್ನು ಅರಿಯಲು ಅಷ್ಟಾಂಗಗನ್ನು ಸ್ಥೂಲವಾಗಿ ಪರಿಶೀಲಿಸೋಣ, ಯಮ, ನಿಯಮ, ಆಸನ, ಪ್ರಾಣಾಯಾಮ, ಧಾರಣ ಧ್ಯಾನ ಮತ್ತು ಸಮಾಧಿ - ಇವು ಯೋಗದ ಅಷ್ಟಾಂಗಗಳು ಎಂದು ಪತಂಜಲಿಯ ಯೋಗಸೂತ್ರವು ಪಟ್ಟಿ ಮಾಡುತ್ತದೆ. 
  • ಯಮ ಅಂದರೆ ಬಿಡುವುದು. ಜೀವನದಲ್ಲಿ ನಾವು ಬಿಡಬೇಕಾದ ಗುಣಗಳು ಯಾವುವು ಎಂದು ಇವು ತಿಳಿಸುತ್ತದೆ.  ಅಹಿಂಸೆ, ಅಸತ್ಯ ಅಸ್ತೇಯ, ಬ್ರಹ್ಮಚರ್ಯ ಅಪರಿಗ್ರಹಗಳು ಎಲ್ಲರೂ ಜೀವನದಲ್ಲಿ ಪಾಲಿಸಬೇಕಾದ ಸಾಮಾಜಿಕ ಕರ್ತವ್ಯಗಳು, ಸಮಾಜ ಜೀವಿಯಾದ ಮಾನವನ ಸಮಾಜ ಶಾಂತಿಯಿಂದ ಇರಬೇಕಾದರೆ ಎಲ್ಲರೂ ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಹಾಗಾಗಿ ಯಮ ಯೋಗ ಸಾಧನೆಯ ಮೊದಲ ಅಂಗ 
  • ನಿಯಮಗಳು- ಅಂದರೆ ಹಿಡಿದುಕೊಳ್ಳುವುದು ಅಂತ ಅರ್ಥ. ನಾವು ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳಿವು. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ - ಇವುಗಳು ನಿಯಮಗಳು. 
  • ಆಸನ- ಧ್ಯಾನದ ಅಭ್ಯಾಸಕ್ಕಾಗಿ ಸ್ಥಿರವಾಗಿ, ಸುಖವಾಗಿ ಕುಳಿತುಕೊಳ್ಳುವ ಅಂಗ ವಿನ್ಯಾಸವೇ ಆಸನಗಳು. ನಮ್ಮ ಪ್ರತಿಯೊಂದು ಆಸನವೂ ಸ್ಥಿರವಾಗಿ ಇರುವಂತೆ ನಾವು ಸಾಧನೆ ಮಾಡಿದಾಗ ಅವು ನಮ್ಮ ಮನಸ್ಸನ್ನು ಹದಗೊಳಿಸಿ ರಜಸ್ಸು ಮತ್ತು ತಮಸ್ ಗುಣಗಳನ್ನು ಕಡಿಮೆ ಮಾಡುವಲ್ಲಿ ಸಹಕಾರವನ್ನು ನೀಡುತ್ತದೆ. ಈ ಹಿನ್ನೆಲೆಯನ್ನೆಲ್ಲ ಅರಿತು ಆಸನಗಳ ಸಾಧನೆ ಮಾಡುವುದು ಬಹಳ ಮುಖ್ಯವೆನಿಸುತ್ತದೆ. ಬಾರಿಯ ಅಂಗ ಸೌಷ್ಠವವನ್ನು ಕಾಯ್ದುಕೊಳ್ಳುವ ದ್ರಿಷ್ಟಿಯಿಂದ ಮಾಡಿದ ಕ್ರಿಯೆಗಳು  ವ್ಯಾಯಾಮವೆನಿಸಿಕೊಳ್ಳುತ್ತವೆಯೋ ಹೊರತು ಯೋಗಾಭ್ಯಾಸವೆನಿಸದು. ಯೋಗತತ್ವದ ಅರಿವಿನಿಂದ ; ಯಮ-ನಿಯಮಗಳ ಆಚರಣೆಯಿಂದ ಮಾಡಿದ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುತ್ತದೆ. 
  • ಪ್ರಾಣಾಯಾಮ-ಉಸಿರಿನ ನಿಯಂತ್ರಣದ ಮೂಲಕ ಮನೋ ನಿಯಂತ್ರಣ ; ಆ ಮೂಲಕ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣಶಕ್ತಿಯನ್ನೂ, ಮನಸ್ಸನ್ನೂ ನಿಗ್ರಹಿಸುವ ಉಪಾಯವೇ ಪ್ರಾಣಾಯಾಮ
  • ಪ್ರತ್ಯಾಹಾರ- ಮನಸ್ಸನ್ನು ಮತ್ತು ಇಂದ್ರಿಯಗಳನ್ನು ಪ್ರಾಪಂಚಿಕ ಸೆಳೆತಗಳಿಂದ ವಿಮುಖಗೊಳಿಸುವುದೇ ಪ್ರತ್ಯಾಹಾರ.
  • ಧಾರಣ- ಮನಸ್ಸನ್ನು ಒಂದು ಕಡೆಗೆ ಕೇಂದ್ರೀಕ ರಿಸಲು ಮಾಡುವ ತಯಾರಿಯೇ ಧಾರಣ
  • ಧ್ಯಾನ - ಮನಸ್ಸನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವುದೇ ಧ್ಯಾನ
  • ಸಮಾಧಿ- ನಾವು ಧ್ಯಾನ ಮಾಡಿದ ವಿಷಯದ ಸಾಕ್ಷಾತ್ಕಾರ ವೇ ಸಮಾಧಿ
ಮೇಲಿನ ಐದು ಅಂಗಗಳು ಬಹಿರಂಗ ಸಾಧನೆಯ ಅಂಗಗಳೆಂದು ಪ್ರಸಿದ್ಧ ವಾಗಿವೆ. ಕೊನೆಯ ಮೂರು ಅಂಗಗಳಾದ ಧಾರಣ, ಧ್ಯಾನ ಮತ್ತು ಸಮಾಧಿಗಳು ಅಂತರಂಗ ಸಾಧನೆಯ ಅಂಗಗಳೆನಿಸಿವೆ.

ಈ ಅಷ್ಟಾಂಗಗಳ ನಿರಂತರ ಸಾಧನೆಯನ್ನು ಮಾಡುವ ಮೂಲಕ ಮಾನವನು ಅಂತರಂಗ ಮತ್ತು ಬಹಿರಂಗ ಶುದ್ದಿಯನ್ನು ಸಾಧಿಸಿ ಜೀವನ್ಮುಕ್ತನಾಗುವುದೇ ಯೋಗ ಸಾಧನೆ ಎನಿಸುತ್ತದೆ. ಇದನ್ನು ಹೇಳುವಲ್ಲಿ ಬಸವಣ್ಣನವರ ಒಂದು ಪ್ರಸಿದ್ಧ ವಚನ ನೆನಪಾಗುತ್ತದೆ.

ಬಸವತತ್ವ & ಯೋಗ:-

ಕಾಯಕವೇ ಕೈಲಾಸ ಎಂದು ಭೋದಿಸಿದ ಬಸವಣ್ಣ ನಾವು ಮಾಡುವ ಕಾಯಕದ ಮೂಲಕ ಭಗವಂತನಲ್ಲಿ ಐಕ್ಯ ಹೊಂದುವ ಬ್ರಹ್ಮಾನಂದ ವನ್ನು ಕಂಡುಕೊಳ್ಳುವ ಸೂತ್ರವನ್ನು ಹೇಳಿ ಸಮಾಜದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಮಹಾನ್ ಚೇತನ. ಅವರ ತತ್ವಗಳಲ್ಲಿ ಯೋಗತತ್ವ ಹೇಗೆ ಅಡಕವಾಗಿದೆ ಎಂದು ಕೆಲವು ವಚನಗಳ ಉದಾಹರಣೆಯ ಮೂಲಕ ನೋಡೋಣ.

ಕಳಬೇಡ, ಕೊಳಬೇಡ, ಹುಸಿಯನುಡಿಯಲುಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ 
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮದೇವ ನನೊಲಿಸುವ ಪರಿ

ಇಲ್ಲಿ ಮೊದಲನೆಯ ಸಾಲು ಅಷ್ಟಾಂಗದ ಮೊದಲ ಅಂಗವಾದ ಯಮಗಳನ್ನು ಭೋದಿಸುತ್ತದೆ. ಕಳಬೇಡ ಅಂದರೆ ಆಸ್ತೆಯ, ಕೊಲಬೇಡ ಅಂದರೆ ಅಹಿಂಸೆ ಯನ್ನು ಆಚರಿಸು ಎಂದು. ಎರಡನೆಯ ಸಾಲು ಎರಡನೆಯ ಅಂಗವಾದ ನಿಯಮಗಳಾದ ಶೌಚ, ಸಂತೋಷಗಳನ್ನು ಹೇಳುತ್ತದೆ. ಮುಂದೆ ಹೇಳುವ ಅಂತರಂಗ ಬಹಿರಂಗ ಶುದ್ದಿಗಳು, ಈಶ್ವರ ಪ್ರಣೀಧಾನ ಮತ್ತು ಜೀವನಮುಕ್ತಿ ಅಂದರೆ ಸಮಾಧಿಯನ್ನು ಹೇಳುತ್ತದೆ. 

ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬವಯ್ಯ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ ಕೊಡಲಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಇಲ್ಲಿ ಬಸವಣ್ಣನವರು ದೇಹದ ಮಾಧ್ಯಮದ ಮೂಲಕ ಮೋಕ್ಷವನ್ನು ಸಾಧಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದಾರೆ. ಎನ್ನ ಕಾಲೇ ಕಂಬ ಎಂದರೆ ಮನಸ್ಸಿನ ದೃಢ ನಿರ್ಧಾರದ ಬಲವೇ ದೇಹವೆಂಬ ದೇಹಾಲಯದ ಅಡಿಪಾಯ ಎಂದು ಮನಸ್ಸನ್ನು ಹದಗೊಳಿಸಬೇಕಾದ ಅಗತ್ಯತೆಯನ್ನು ಹೇಳುತ್ತಾರೆ. ದೇಹವೇ ದೇಗುಲವಾದಾಗ  ನಾವು ಮುಕ್ತರಾಗುವುದು ಖಂಡಿತ. ಶರೀರ ಮಾಧ್ಯಮ ದಿಂದ ಮನಸ್ಸಿನ ಶಕ್ತಿಯ ಮೂಲಕ ನಾವು ಸಾಧಿಸಬಹುದಾದ ಎತ್ತರವನ್ನು ಹೇಳುತ್ತಾರೆ.

 ಲೋಕಡದೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ 
ನೆರೆಮನೆಯ ದುಃಖಕ್ಕೆ ಆಳುವವರ ಮೆಚ್ಚ ಕೂಡಲಸಂಗಮದೇವ
ಎನ್ನುವಲ್ಲಿ ನಮ್ಮ ಮನಸ್ಸನ್ನು ನಾವು ಸ್ವಸ್ಥವಾಗಿಡಬೇಕಾದ ಮಹತ್ವವನ್ನು ತಿಳಿಸುತ್ತಾರೆ.

ಅತ್ತ್ತಲಿತ್ತಲು ನೋಡದಂತೆ ಹೇಳವನ ಮಾಡಯ್ಯ ತಂದೇ
ಸುತ್ತಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ
ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ

ಎನ್ನುವ ವಚನದಲ್ಲಿ ಇಂದ್ರಿಯಗಳ ನಿಗ್ರಹ ಅಂದರೆ ಪ್ರತ್ಯಾಹಾರ ವನ್ನು ಹೇಳಿದ್ದಾರೆ. ನಮಗಿಲ್ಲಿ ಮುಖ್ಯವಾಗುವುದು ಇವರ ಪ್ರತಿ ವಚನದಲ್ಲಿಯೂ ಬರುವ ಯೋಗಶಾಸ್ತ್ರದ ಅಷ್ಟಾಂಗಗಳು.  ಹೀಗೆ ಬಸವತತ್ವ ಬೇರೆಯಲ್ಲ ಯೋಗತತ್ವ ಬೇರೆಯಲ್ಲ. ಒಂದನ್ನು ನಾವು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಇನ್ನೊಂದು ತಾನಾಗಿಯೇ ನಮ್ಮ ಜೀವನದ ಭಾಗವಾಗುತ್ತದೆ.

ಮನಸ್ಸಿನ ಶೋಧನೆಯನ್ನು ಮಾಡುತ್ತಾ ಚಿತ್ತವೃತ್ತಿಯ ನಿರೋಧದ ಮೂಲಕ ಕೈವಲ್ಯವನ್ನು ವಿವರಿಸುವ ಯೋಗತತ್ವ; ತ್ರಿವಿಧ ದಾಸೋಹದ ಮೂಲಕ ಅನಾಚಾರವೇ ನರಕ, ಅಚಾರವೇ ಸ್ವರ್ಗ ಎಂದು ಹೇಳುವ ಬಸವತತ್ವ- ಎರಡೂ ಹೇಳುವುದು ಒಂದೇ ವಿಚಾರವನ್ನು. ಶುದ್ಧವಾದ ಮನಸ್ಸು ಮತ್ತು ಆರೋಗ್ಯವಂತ ದೇಹದ ಮೂಲಕ ಸಮಾಜಮುಖಿ ವ್ಯಕ್ತಿತ್ವ ವನ್ನು ಬೆಳೆಸಿಕೊಳ್ಳುವುದು ಎರಡರ ಮೂಲ ಉದ್ದೇಶ. ಎರಡು ತತ್ವಗಳ ಸ್ವಲ್ಪ ಭಾಗವನ್ನಾದರೂ ನಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡರೆ ಅದೇ ನಮ್ಮ ಸಾಫಲ್ಯ.

ಸುಧಾ ಶಶಿಕಾಂತ್ , ಮಸ್ಕತ್ 
(೨೦೨೧ ರ ಕೊರೋನಾ ಕಾಲದ ಅಂತರ್ಜಾಲದ ಯೋಗ ದಿನಾಚರಣೆಯಲ್ಲಿ ನೀಡಿದ ಭಾಷಣ )

ಉದಯವಾಣಿ ದೇಸೀಸ್ವರದಲ್ಲಿ  ಪ್ರಕಟವಾದ ಲೇಖನ 



ಭಾನುವಾರ, ಜೂನ್ 2, 2024

ಅಲೌಕಿಕ ಅನುಭವ ನೀಡಿದ ಆರೋಕಿ, ಟೆಕಾಪೋ , ಟಿ ಅನೌ ( ನ್ಯೂಜಿಲ್ಯಾಂಡ್ ಅನುಭವಗಳು-4)

ಸಮುದ್ರದ ಆಘಾದತೆಯನ್ನು  ಅನುಭವಿಸಿದವನು ದೇವರ ಅಸ್ತಿತ್ವವನ್ನು ಪ್ರಶ್ನಿಸುವುದಿಲ್ಲ ಎನ್ನುವ ಗೋವಿಂದ ಪೈ ಅವರ ಅನುಭವದ ಮಾತು ನನಗೆ ಅರ್ಥವಾಗಿದ್ದು,  ಅನುಭವಕ್ಕೆ ಬಂದಿದ್ದು ನ್ಯೂಜಿಲ್ಯಾಂಡಿನಲ್ಲಿ. ಪ್ರಕೃತಿಯ ಸೌಂದರ್ಯ ಮನಸ್ಸನ್ನು ಧ್ಯಾನ ಸ್ಥಿತಿಗೆ ಒಯ್ಯವ, ಮನಸ್ಸನ್ನು ಸ್ತಬ್ಧ ಗೊಳಿಸಿದ ಅನುಭವ ಇಲ್ಲಿನ ದಕ್ಷಿಣ ಅಲ್ಪ್ಸ್ ಪರ್ವತ ಶಿಖರಗಳ ದರ್ಶನ ನನಗೆ ನೀಡಿತು.
ಟ್ರಾಮ್ 
        ದಕ್ಷಿಣ ದ್ವೀಪ ಅಥವಾ ತೆ ವಾಯಿ ಪವನಾಮುವಿನ ನಮ್ಮ ಪ್ರವಾಸ ಕ್ರೈಸ್ಟ್ ಚರ್ಚ್ ಪಟ್ಟಣದಿಂದ ಆರಂಭವಾಯಿತು. ಚಿಕ್ಕ ಸುಂದರವಾದ  ಪಟ್ಟಣ ಕ್ರೈಸ್ಟ್ ಚರ್ಚ್ ಊರನ್ನು ಕ್ರಿಕೆಟ್ ಆಟಗಳ ನೇರಪ್ರಸಾರದಲ್ಲಿ ಬಾಲ್ಯದಿಂದ ಟಿವಿಯಲ್ಲಿ ನೋಡಿ ಇದು ದೊಡ್ಡ ನಗರ ಎಂದು ಭಾವಿಸಿದ್ದ ನಮಗೆ ಇದು ಇಷ್ಟು ಚಿಕ್ಕ ಊರೆಂದು ನೋಡಿ ಆಶ್ಚರ್ಯವಾಯಿತು. ಶಾಂತ ಪುಟ್ಟ ಊರಿನ ಪ್ರವಾಸೀ ತಾಣಗಳನ್ನು ಕಾಲ್ನಡಿಗೆಯಲ್ಲಿಯೇ ನೋಡಿಕೊಂಡು ಬರಬಹುದಿತ್ತು.

 ಪಟ್ಟಣದಲ್ಲಿ  ಕೆಲವು ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಿದೆವು. ಟ್ರಾಮ್ ಪ್ರವಾಸದ ಮೂಲಕ ನಗರ ವೀಕ್ಷಣೆ ಮಾಡಿದೆವು.  ಟ್ರಾಮಿನ ಚಾಲಕ/ ಚಾಲಾಕಿ ಸುತ್ತ ಕಾಣುವ ಕಟ್ಟಡಗಳ ಬಗೆಗೆ ಮಾಹಿತಿಯನ್ನು ಕೊಡುತ್ತಾ ಕರೆದೊಯ್ಯುತ್ತಿದ್ದರು. ಒಮ್ಮೆ ಟಿಕೇಟು ತೆಗೆದುಕೊಂಡರೆ ಪೂರ್ತಿ ದಿನ ಎಲ್ಲಿ ಬೇಕೋ ಅಲ್ಲಿ ಇದನ್ನು ಹತ್ತಿಕೊಂಡು ಎಲ್ಲಿಬೇಕೋ ಅಲ್ಲಿ ಇಳಿಯಬಹುದಿತ್ತು. 2011 ರ ಭೂಕಂಪದಲ್ಲಿ ಬಹಳ ಹಾನಿಗೊಳಗಾದ ಊರು ಇದಂತೆ. ಈಗ ಕಾಣುವ ಪಟ್ಟಣ ಆ ಹಾನಿಯ ಆಘಾತವನ್ನು ಸಹಿಸಿ ಮೇಲೆದ್ದು ನಿಂತ ಪಟ್ಟಣವಂತೆ. ಅನೇಕ ಪ್ರವಾಸಿ ಆಕರ್ಷಣೆಗಳು ಇನ್ನೂ ದುರಸ್ತಿಯಲ್ಲಿರುವುದು ಕಂಡುಬಂತು.
  ಇಲ್ಲಿನ ದೊಡ್ಡ ಬೋಟಾನಿಕಲ್ ಉದ್ಯಾನ ಅಗಾಧವಾದ ಸಸ್ಯ ವೈವಿಧ್ಯ, ಪಕ್ಷಿಗಳ ಕಲರವದಿಂದ ಒಳ್ಳೆಯ ಅನುಭವವನ್ನು ಕೊಟ್ಟಿತು. ಸುಮಾರು 150 ವರ್ಷಗಳಿಗೂ ಮಿಕ್ಕಿ ಇತಿಹಾಸ ಇರುವ ಈ ಉದ್ಯಾನ ಸಂದರ್ಶಿಸಬೇಕಾದ ಸ್ಥಳ.
ಬೊಟಾನಿಕಲ್ ಉದ್ಯಾನ 
 ಇಲ್ಲಿಯೇ ನಾವು ಬಾಡಿಗೆ ಕಾರನ್ನು ಪಡೆದು ನಾವೇ ಚಲಾಯಿಸಿಕೊಂಡು ಇನ್ನುಳಿದ ನಮ್ಮ ಪ್ರವಾಸವನ್ನು ಮಾಡುವವರಿದ್ದೆವು. ಇದು ನಾವು  ದ್ವೀಪದಲ್ಲಿ  ಮುಂದೆ ಸಂದರ್ಶಿಸುವ ಪ್ರದೇಶಗಳಿಗೆ ಹೋಲಿಸಿದರೆ ಸ್ವಲ್ಪ ದೊಡ್ಡ ಪಟ್ಟಣವಾಗಿದ್ದರಿಂದ ಇಲ್ಲಿನ ಭಾರತೀಯ ದಿನಸಿ ಅಂಗಡಿಗೆ ಹೋಗಿ ಮುಂದಿನ ನಮ್ಮ ಪ್ರವಾಸಕ್ಕೆ ಬೇಕಾದ ಅಡಿಗೆಯ ಸಾಮಾನುಗಳ ಖರೀದಿಯನ್ನೂ ಇಲ್ಲಿ ಮಾಡಿ ಪ್ರವಾಸಕ್ಕೆ ತಯಾರಾದೆವು.

ಕ್ರೈಸ್ಟ್  ಚರ್ಚ್ to  ಟೆಕಾಪೂ:-

ಗೆರಾಲ್ಡಿನ್ ಪಟ್ಟಣ 
ಕ್ರೈಸ್ಟ್ ಚರ್ಚಿನಿಂದ ನಮ್ಮ ಮುಂದಿನ ತಾಣ ಟೆಕಾಪೂ ಸುಮಾರು 200 ಕಿ ಮಿ ದೂರದಲ್ಲಿತ್ತು. ರಸ್ತೆಗಳು ವ್ಯವಸ್ಥಿತವಾಗಿ ಒಳ್ಳೆಯ ಸ್ಥಿತಿಯಲ್ಲಿತ್ತು. ಇಲ್ಲಿನ ಜನರು ಸಂಚಾರಿ ನಿಯಮಗಳಿಗೆ ತುಂಬಾ ಪ್ರಾಶಸ್ತ್ಯ ಕೊಡುತ್ತಾರೆ ಎಂದು ನಮ್ಮ ಅನುಭವಕ್ಕೆ ಬಂತು. ವೇಗದ ಮಿತಿಯನ್ನು ಚಾಚೂ ತಪ್ಪದೇ ಪಾಲಿಸುವ ಜನರ ಶಿಸ್ತು ನಮಗೆ ಮೆಚ್ಚುಗೆಯಾಯಿತು. ಮಧ್ಯದಲ್ಲಿ ಮುಂದಿನ ವಾಹನವನ್ನು ದಾಟಿ ಮುಂದೆ ಹೋಗಲೆಂದೇ ರಸ್ತೆಯನ್ನು ಅಗಲ ಮಾಡಿಟ್ಟಿರುತ್ತಾರೆ. ವೇಗವಾಗಿ ಹೋಗಬೇಕಾದವರು ನಿಗದಿತ ಜಾಗದಲ್ಲಿ. ನಿಧಾನವಾಗಿ ಹೋಗುತ್ತಿರುವ ವಾಹನವನ್ನು ಹಿಂದಿಕ್ಕಿ ಹೋಗಬಹುದು. ಎಲ್ಲರೂ ನಿಯಮವನ್ನು ಪಾಲಿಸುವವರಾದ್ದರಿಂದ ಇಲ್ಲಿ ವಾಹನ ಚಾಲನೆ ಬಹಳ ಆಹ್ಲಾದಕರ ಅನುಭವ. ನ್ಯೂಜಿಲೆಂಡಿನ ರೋಡ್ ಟ್ರಿಪ್ ಬಗೆಗೆ ಬಹಳ ಕೇಳಿದ್ದ ನಮಗೆ ಅದರ ಅನುಭವ ನಿರಾಸೆಗೊಳಿಸಲಿಲ್ಲ.
ಬಣ್ಣ ಬದಲಿಸಿ ನಿಂತ ಮರಗಳು 
    ಇದೀಗ ಎಲೆ ಉದುರುವ ಕಾಲವಾದ್ದರಿಂದ ಮರಗಳು ಬಣ್ಣ ಬದಲಿಸಿಕೊಂಡು ರಸ್ತೆಯ ಇಕ್ಕೆಲ ವಿವಿಧ ಬಣ್ಣಗಳಿಂದ ಸುಂದರವಾಗಿ ಕಾಣುತ್ತಿತ್ತು. ದಾರಿಯಲ್ಲಿ ಸಿಕ್ಕಿದ  ಜೆರಾಲ್ಡಿನ್ ಮತ್ತು ಆಶ್ ಬರ್ಟನ್   ಚಂದದ ಪುಟ್ಟ ಪಟ್ಟಣಗಳು ನಮ್ಮ ಪ್ರವಾಸದ ಉಲ್ಲಾಸವನ್ನು ಹೆಚ್ಚಿಸಿತು. 


             ಮನೆಗಳು ರಸ್ತೆಯ ಪಕ್ಕದಲ್ಲೇ ಇದ್ದರೂ ಕಿಟಕಿಗಳಿಗೆ ಗ್ರಿಲ್ ಗಳೇ ಇರದೇ ಇರುವುದನ್ನು ನೋಡಿ ಇಲ್ಲಿ  ಅಪರಾಧಗಳ ಸಂಖ್ಯೆ ಬಹಳ ಕಡಿಮೆ ಇರಬಹುದೆನ್ನಿಸಿತು. ದೇಶದಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ದಾರಿಯಲ್ಲಿ ಜನಗಳು ವಿರಳವಾಗಿ  ಕಾಣಸಿಗುತ್ತಿದ್ದರು. 

ಟೆಕಾಪೂ ಸರೋವರ ಮತ್ತು ಪಟ್ಟಣ:-

ಟೇಕಾಪು ಸರೋವರ 
ದೊಡ್ಡ ಸರೋವರ ಟೆಕಾಪೂ ಹೆಸರಿನದೇ ಪಟ್ಟಣ. ಚಿಕ್ಕ ಚಂದದ ಊರು. ನಾವು ನಿಗದಿಗೊಳಿಸಿದ ನಮ್ಮ ಮನೆಯೂ ಅದಕ್ಕೆ ತಕ್ಕಂತೆ ಚೆನ್ನಾಗಿತ್ತು. ಇಂದಿನ ಹವಾಮಾನದ ಮುನ್ಸೂಚನೆಯಂತೆ ಭಾರೀ ಮಳೆ ಯಾಗುತ್ತಿತ್ತು. ಮಳೆ, ಚಳಿಗೆ ಎಲ್ಲ ವ್ಯವಸ್ಥೆ ನಮ್ಮ ಮನೆಯಲ್ಲಿತ್ತು. ಕೋಣೆಯನ್ನು ಬಿಸಿ ಮಾಡುವ ಹಿಟರುಗಳಲ್ಲದೇ ಎಲೆಕ್ಟ್ರಿಕ್ ಹೊದಿಕೆಗಳೂ ಇದ್ದವು. 
ನಮ್ಮ ಊಟ 
ನಮ್ಮ ಮನೆ 


ಮಳೆಯಲ್ಲಿ ಕೊಡೆ ಹಿಡಿದು ಹೋಗಿ ಮುಸ್ಸಂಜೆಯಲ್ಲಿ ಸರೋವರದ ತೀರಕ್ಕೆ ಹೋಗಿ ಅಗಾಧವಾದ ಜಲರಾಶಿಯನ್ನು ಕಣ್ತುಂಬಿ ಕೊಂಡು, ಇಲ್ಲಿನ ಮಾರುಕಟ್ಟೆಗೆ ಹೋಗಿ ಬೆಳಗಿನ ಉಪಾಹಾರಕ್ಕೆ ಬೇಕಾದ ಹಾಲು, ಬ್ರೆಡ್, ಹಣ್ಣುಗಳನ್ನು ಕೊಂಡುಕೊಂಡು ಬಂದೆವು. ನಮ್ಮ ಸುತ್ತಮುತ್ತಲಿನ ಮನೆಗಳಲ್ಲೆಲ್ಲ ನಮ್ಮಂತಹ ಪ್ರವಾಸಿಗರೇ ಇದ್ದರು. ಇನ್ನೂ ಕೆಲವರು ನಮ್ಮಂತೆ ಸಾಮಾನು ತರುತ್ತಿರುವುದು ಕಂಡಿತು. ಎರಡು ಖಂಡಗಳನ್ನು ದಾಟಿ ಯಾವುದೋ ಅಪರಿಚಿತ ದೇಶದಲ್ಲಿ ಅಕ್ಕ ತಂಗಿಯರ ಸಂಸಾರ ಮನೆ ಮಾಡಿಕೊಂಡು ದಿನಸಿ ತಂದು ಅಡಿಗೆ ಮಾಡಿ ಊಟಮಾಡಿದ್ದು  ಒಂದು ಅನನ್ಯ ಅನುಭವ. 
      ಈ ಪ್ರದೇಶವೇ ಆಕಾಶ ವೀಕ್ಷಣೆಗೆ ಮೀಸಲಾಗಿರುವ ಪ್ರದೇಶ. ಹಾಗಾಗಿ ಇಲ್ಲಿ ಬೆಳಕಿನ ಮಾಲಿನ್ಯವಾಗದ ಹಾಗೆ ತುಂಬಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ರಾತ್ರಿ ರಸ್ತೆಯ ದೀಪಗಳಿರುವುದಿಲ್ಲ. ಇದು ಪ್ರಪಂಚದ ೧೭ ಇಂತಹ ಆಕಾಶ ವೀಕ್ಷಣೆಯ ತಾಣಗಳಲ್ಲಿ ಒಂದು. ಚಳಿಗಾಲದಲ್ಲಿ  ಇಲ್ಲಿಯಾ ಆಕಾಶ ಅತ್ಯಂತ ಸುಂದರವಾಗಿರುತ್ತದಂತೆ. ಶುಭ್ರ ಆಕಾಶವಿದ್ದರೆ ಇಲ್ಲಿ ರಾತ್ರಿ ಆಕಾಶವನ್ನು ನೋಡುವುದು ಒಂದು ವಿಶಿಷ್ಟವಾದ ಅನುಭವ. ಮೋಡ ಮತ್ತು ಮಳೆಯ ವಾತಾವರಣದ ಕಾರಣ ನಮಗೆ ಆಕಾಶ ವೀಕ್ಷಣೆಯ  ಅನುಭವವಾಗಲಿಲ್ಲ.

ಆರೋಕಿ /ಮೌಂಟ್ ಕುಕ್:-

ಹೂಕರ್ ಕಣಿವೆಯ ದಾರಿಯಲ್ಲಿ ಕಾಣುವ ಅರೋಕಿ ಪರ್ವತ 
ದಕ್ಷಿಣ ಅಲ್ಪ್ಸ್ ಪರ್ವತ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಆರೋಕಿ, ಇದು  ಇದರ ಮಾವೊರಿ ಹೆಸರು. ಅದಕ್ಕೆ ಇಂಗ್ಲಿಷ್ ಹೆಸರು ಮೌಂಟ್ ಕುಕ್. ಟೆಕಾಪೂ ಪಟ್ಟಣದಿಂದ 110 ಕಿ. ಮಿ ದೂರದಲ್ಲಿರುವ ಇದಕ್ಕೆ ಕಾರು ಚಲಾಯಿಸಿಕೊಂಡು ಹೋಗಲು ಉತ್ತಮವಾದ ರಸ್ತೆ , ದಾರಿಯಲ್ಲಿ ತಂಗುದಾಣಗಳು, ಮಾರ್ಗಸೂಚಿಗಳೆಲ್ಲವೂ ಇದೆ. ನಿನ್ನೆ ರಾತ್ರಿಯಿಂದಲೇ ಸುರಿಯಿತ್ತಿದ್ದ ಮಳೆ ಬೆಳಗ್ಗಾದ ಮೇಲೆ ಸ್ವಲ್ಪ ಕಡಿಮೆಯಾಗಿತ್ತು. ಮೋಡ ಕವಿದಿದ್ದರೆ ಪರ್ವತದ ನೋಟ ನಮಗೆ  ಸಿಗುವುದಿಲ್ಲ ಎಂಬ ಆತಂಕ. ನಾವು ಹೋಗುತ್ತಿದ್ದಂತೆ ವಾತಾವರಣ ತಿಳಿಯಾಗತೊಡಗಿತು. ಟೆಕಾಪೂ ಸರೋವರ, ಅದರ ದಡದಲ್ಲಿರುವ ಮೊನಾಸ್ಟರಿಯೆಲ್ಲ ಸುಂದರವಾಗಿ ಕಾಣತೊಡಗಿತು. ಸ್ವಲ್ಪ ಮುಂದೆ ಹೋದಂತೆ ಇನ್ನೊಂದು ವಿಶಾಲವಾದ ಪುಕಾಕಿ ಸರೋವರ ಹಿಮಾಚ್ಚಾಡಿತ ಬೆಟ್ಟಗಳ ಹಿನ್ನೆಲೆಯಲ್ಲಿ ಮನಮೋಹಕವಾಗಿ ಕಾಣುತ್ತಿತ್ತು. ಈ ಸರೋವರಗಳಿಗೆ ನೀರು ಹಿಮದ ಬೆಟ್ಟಗಳಿಂದ ಬರುತ್ತದೆ.  ಮುಂದುವರಿದು ಹೋಗುತ್ತಿದ್ದಂತೆ ಹಸಿರು ಗುಡ್ಡಗಳು, ಇವುಗಳ ಎಡೆಯಿಂದ ಧುಮುಕುವ ಜಲಪಾತಗಳು,, ಇನ್ನೊಂದು ಕಡೆ ಬಿಸಿಲು-ಮೋಡಗಳ ಕಣ್ಣುಮುಚ್ಚಾಲೆಯಲ್ಲಿ ಬಣ್ಣ ಬದಲಿಸುವ ಸರೋವರಗಳು, ನಡುನಡುವೆ ಹರಿಯುತ್ತಿರುವ ನದಿಗಳು- ಪರಿಸರದ ಭವ್ಯತೆ ನಮ್ಮೆದುರು ಅನಾವರಣಗೊಳ್ಳುತ್ತಾ ಹೋಯಿತು. ಆರೋಕಿ ಗ್ಲೇಶಿಯರ್ ತಲುಪಿ ಕಾರಿನಿಂದ ಇಳಿದು ನಡೆದು ಹೂಕರ್ ವ್ಯಾಲಿಯ ಚಾರಣದ ದಾರಿಯಲ್ಲಿ ಸಾಗತೊಡಗಿದೆವು. ಹೂಕರ್ ವ್ಯಾಲಿ ಚಾರಣದ ದಾರಿ ಇಲ್ಲಿನ ಅತ್ಯಂತ ಪ್ರಸಿದ್ಧ ಕಾಲ್ನಡಿಗೆಯ ದಾರಿ. ಹೆಸರಿಗೆ ತಕ್ಕಂತೆ ವಿಶಿಷ್ಟವಾಗಿದೆ. ತುಂಬಾ ಕಷ್ಟಕರ ಎನ್ನಿಸದ ಈ ನಡಿಗೆಯನ್ನು ಚಾರಣದ ಅಭ್ಯಾಸ ಇಲ್ಲದವರು ಮಾಡಬಹುದು. ನಡೆಯುತ್ತಾ ಹೋದಂತೆ ಸುತ್ತಲಿನ ಪರಿಸರ ಒಂದೊಂದು ತಿರುವಿನಲ್ಲಿ ಒಂದೊಂದು ಹೊಸಮುಖವನ್ನು ತೋರಿಸುತ್ತಾ ಸಾಗುತ್ತದೆ. ನಡುವೆ ಸಿಗುವ ತೂಗು ಸೇತುವೆ ಅವಿಸ್ಮರಣೀಯ ದೃಶ್ಯದ ಸೊಬಗನ್ನು ಕೊಡುತ್ತದೆ. 
ಪುಕಾಕಿ ಸರೋವರದ ವಿಹಂಗಮ ನೋಟ 
ಇಲ್ಲಿ ಆರೋಕಿ ಪರ್ವತ ಶಿಖರದ ತುತ್ತತುದಿಯ ದರ್ಶನ ನಮಗಾಯಿತು. ಆ ಪರ್ವತದಿಂಡುತಾದ ಸರೋವರ, ಅದರಿಂದ ರಭಸವಾಗಿ ಹರಿದು ಬರುತ್ತಿರುವ ನೀರು- ಇವುಗಳ ಸೌಂದರ್ಯ ವನ್ನು ಸಾಧ್ಯವಾದಷ್ಟು ಕಣ್ಣು ತುಂಬಿಕೊಳ್ಳುತ್ತಾ ಮನಸ್ಸು ಅರಿವೇ ಇಲ್ಲದಂತೆ ಓಂ ನಮಃ ಶಿವಾಯ ಎಂದು ಪ್ರಕೃತಿಯ ಈ ಭವ್ಯತೆಗೆ ನಮಿಸಿತು. ಇತ್ತೀಚೆಗೆ ಓದಿದ್ದ  'ದೇವಭೂಮಿಗೊಂದು ಪಯಣ ಪುಸ್ತಕದಲ್ಲಿದ್ದ ಮಾನಸಗಂಗೋತ್ರಿಯ ವರ್ಣನೆ ನನ್ನ ಮನಸ್ಸಿಗೆ ಬಂತು. ಅದೂ ಹೀಗೆಯೇ ಇರಬಹುದೆನಿಸಿತು. ಹೀಗೆಯೇ ಇಲ್ಲಿಯೇ ಇದ್ದುಬಿಡೋಣ ಎನ್ನುವಷ್ಟು ಮೋಡಿ ಆ ಪರಿಸರ ನಮ್ಮ ಮೇಲೆ ಮಾಡಿತ್ತು. 
ಹಿಮ ಸರಿಸಿ ನಮಗೆ ದರ್ಶನ ಕೊಟ್ಟ ಆರೋಕಿ ಪರ್ವತ ಶಿಖರ 

ತೆ ಅನೌ:-

ದಕ್ಷಿಣ ನ್ಯೂಜಿಲೆಂಡಿನ ಇನ್ನೊಂದು ಸುಂದರ ಶಾಂತ ಪಟ್ಟಣ ತೆ ಅನೌ. ಇದು ಫಿಯೋರ್ಡ್ ಲ್ಯಾಂಡ್ ನೇಷನಲ್ ಪಾರ್ಕಿನ ಭಾಗ. ಈ ಊರು ಫಿಯೋರ್ಡ್ ಲಾಂಡಿನ ದ್ವಾರದಂತಿದ್ದು ಮುಂದಿನ ಎಲ್ಲ ಚಟುವಟಿಕೆಗಳನ್ನು ಮಾಡಲು ಅನುಕೂಲವಾದ ಜಾಗದಲ್ಲಿರುವುದರಿಂದ ಇಲ್ಲಿ ಉಳಿಯಲು ವಿವಿಧ ತರಹದ ಹೋಟೆಲುಗಳು ದೊರೆಯುತ್ತದೆ. ವಿಶಾಲವಾದ  ತೇ ಅನೌ ಸರೋವರ ನ್ಯೂಜಿಲಾಂಡಿನ ಎರಡನೆಯ ಅತಿ ದೊಡ್ಡ ಸರೋವರವಾಗಿದೆ. ಸರೋವರಕ್ಕೆ ಹೊಂದಿಕೊಂಡು ಇರುವ ಈ ಊರಿನಲ್ಲಿ ನಾವಿದ್ದ  ಮರಾ ಕುರಾ .ಮೋಟಲ್ ಸರೋವರದ ತೀರದಲ್ಲಿ ಅತ್ಯಂತ ಸುಂದರವಾದ ದೃಶ್ಯವನ್ನು ನಾವು ದಿನವಿಡೀ ಆಸ್ವಾದಿಸುವಂತೆ ಮಾಡಿತು. ಸಂಜೆಯ ಸರೋವರದ ಪಕ್ಕದ ನಡಿಗೆ, ಆ ರಾತ್ರಿ ರೂಮಿನಲ್ಲಿ ಅಡಿಗೆ ಮಾಡಿ ಸರೋವರದ, ಆಕಾಶದ ನೋಟವನ್ನು ಸವಿಯುತ್ತಾ ಮಾಡಿದ ಊಟ ಮರೆಯಲಾರದ ಅನುಭವ. ಇಲ್ಲಿನ ಹಕ್ಕಿಗಳ ಉದ್ಯಾನವು ಪಕ್ಷಿ ವೀಕ್ಷಕರ ಮೆಚ್ಚಿನ ತಾಣ. 
ತೇ ಅನೌ ಸರೋವರ 
    ಬೆಳಗ್ಗೆದ್ದು ಸರೋವರದ ಮೇಲಿನಿಂದ ಹಾರಿ ಸುತ್ತಲಿನ ವೈಮಾನಿಕ ದೃಶ್ಯವನ್ನು ತೋರಿಸುವ ಸೀ-ಪ್ಲೇನ್(sea plane) ನಲ್ಲಿನ ಸವಾರಿ ಒಂದು ವಿಶಿಷ್ಟವಾದ ಅನುಭವ. ಹೊರಗಿನಿಂದ ತುಂಬಾ ಚಿಕ್ಕದಾಗಿ ಕಾಣುತ್ತಿದ್ದ ವಿಮಾನದೊಳಗೆ ಚಾಲಕರಲ್ಲದೆ ನಾಲ್ಕು ಜನ ಕುಳಿತುಕೊಳ್ಳುವ ಜಾಗವಿತ್ತು. ಹತ್ತಿ ಕುಳಿತ ನಂತರ ನೀರಿನ ಮೇಲೆ ಸ್ವಲ್ಪ ಹೊತ್ತು ಚಲಿಸಿ ಆಕಾಶಕ್ಕೆ ಜಿಗಿಯುವ ವಿಮಾನದಿಂದ ಸುತ್ತಲಿನ ಪ್ರದೇಶದ ಸೌಂದರ್ಯವನ್ನು ಮೇಲಿನಿಂದ ನೋಡಿ ಖುಷಿಪಡಲು ಸಾಧ್ಯವಾಗಿಸುತ್ತದೆ. ನಮ್ಮ ರಾಜಕಾರಣಿಗಳು ನೆರೆಪೀಡಿತ ಪ್ರದೇಶದಲ್ಲಿ ಮಾಡುವ ವೈಮಾನಿಕ ಸರ್ವೇಕ್ಷಣೆಯನ್ನು ನೆನಪಾಯಿತು. ಅವರಿಗೂ ಹೀಗೆಯೇ ಮೋಜಿನ ಸವಾರಿಯಾಗಿರಬಹುದು ಎನ್ನಿಸಿ ಮನಸ್ಸಿಗೆ ಸ್ವಲ್ಪ ಕಸಿವಿಸಿಯೂ ಆಯಿತು. 
       
ನಮ್ಮ ವಿಮಾನ 

ಸುಮಾರು 20 ನಿಮಿಷಗಳಲ್ಲಿ ಸುತ್ತಲಿನ ಪ್ರದೇಶಗಳ ಬಗೆಗೆ ಮಾಹಿತಿಯನ್ನು ಕೊಡುತ್ತ ಸಾಗಿದ ನಮ್ಮ ಚಾಲಕಿಯು  ವಿಮಾನ ಚಾಲನೆ ಎಷ್ಟು ಸುಲಭ ಎನ್ನಿಸುವಂತೆ ಈ ಸವಾರಿಯನ್ನ ಮುಗಿಸಿದಳು. ಅವಳೇ ನಮಗೆ ಟಿಕೇಟು ನೀಡಿ ಅವಳೇ ಕರೆದುಕೊಂಡು ಹೋಗಿ ಕರೆದುಕೊಂಡು ಬಂದಳು. ಅವಳದ್ದೊಂದು ಪುಟ್ಟ ನಾಯಿ ಅವಳ ಸಂಗಾತಿ. ಅದು ಅವಳೊಂದಿಗೆ ಪ್ರತಿದಿನ ಬಂದು ಅವಳು ಸವಾರಿಗೆ ಹೋದಾಗ ಆಫೀಸು ಕಾಯುತ್ತದೆ. ಅಲ್ಲೇ ಸುತ್ತಮುತ್ತಲು ಓಡಾಡಿಕೊಂಡು ಹತ್ತಿರ ಬರುವ ಬಾತುಕೋಳಿಗಳು ಓಡಿಸುತ್ತಾ ಮೋಜಿನ ಜೀವನ ನಡೆಸಿಕೊಂಡಿದೆ.

ವಿಮಾನ ಚಾಲಕಿಯ ನಾಯಿಯೊಂದಿಗೆ 



ಉಪಸಂಹಾರ:-

ನಮ್ಮ ಆರು ಜನರ ಗುಂಪು ೪-೫ ತಿಂಗಳ ತಯಾರಿ, ಚರ್ಚೆ, ಯೋಜನೆಗಳ ಮೂಲಕ ಬೆಂಗಳೂರು ಮತ್ತು ಮಸ್ಕತ್ತಿನಿಂದ ಹೊರಟು ದೂರದ ದೇಶ ನ್ಯುಜಿಲ್ಯಾಂಡನ್ನು ನೋಡಲು ಹೊರಟಿದ್ದೆವು. ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ನಮ್ಮೆಲ್ಲರ ಆಸಕ್ತಿ ಯಂತೆ ನೋಡುವ ಜಾಗಗಳನ್ನು, ಉಳಿಯುವ ತಾಣಗಳನ್ನು ನಿಗದಿಗೊಳಿಸಿ ಇಲ್ಲಿಗೆ ಬಂದೆವು. ದಕ್ಷಿಣ ದ್ವೀಪವನ್ನು ಮೊದಲು ಸುತ್ತಿದೆವು. ನಂತರ ಉತ್ತರ ದ್ವೀಪದ ಸುತ್ತಾಟ ಎಲ್ಲವೂ ನಾವು ಅಂದುಕೊಂಡಂತೆ ನಡೆಯಿತು.
     ನಾವು ಹೊರಡುವಾಗ ನಮ್ಮ ಒಮಾನ್ ಏರ್ ವಿಮಾನದ ಮೂಲಕ ದೊಹಾಕ್ಕೆ ಹೋಗಿ ಅಲ್ಲಿಂದ ಆಕ್ಲ್ಯಾಂಡಿಗೆ  ಹೋಗುವವರಿದ್ದೆವು. ಮಸ್ಕತ್ತಿನಿಂದ ದೋಹಾಗೆ ಹೋದರೆ ಅಲ್ಲಿಂದ ಮುಂದಿನ ವಿಮಾನದಲ್ಲಿ ನಮ್ಮ ಮುಂಗಡ ಬುಕಿಂಗ್ ಇಲ್ಲ ಎನ್ನುವ ಆಘಾತಕಾರಿ ಸುದ್ದಿಯೊಂದಿಗೆ ನಮ್ಮ ಪ್ರವಾಸ ಆರಂಭವಾದರೂ ಹೇಗೋ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡು ಮುಂದಿನ ವಿಮಾನ ಹತ್ತಿ ಸರಿಯಾದ ಸಮಯಕ್ಕೆ ಕ್ರೈಸ್ಟ್ ಚರ್ಚ್ ತಲುಪಿ ನಮ್ಮ ಪ್ರವಾಸ ಆರಂಭಿಸಿದ್ದೆವು. ಕ್ರೈಸ್ಟ್ ಚರ್ಚ್ ನಿಂದ ಟೇಕಾಪೋಗೆ ಹೋಗುವಾಗ ನಮ್ಮ ಪಾಸ್ಪೋರ್ಟ್ ಮತ್ತು ಲ್ಯಾಪ್ಟಾಪ್ ಇದ್ದ ಬ್ಯಾಗನ್ನು ಹೋಗುವ ಅವಸರದಲ್ಲಿ ನಮ್ಮ ಹೋಟೆಲಿನ ಲಾಬಿಯಲ್ಲಿ ಬಿಟ್ಟು ಹೋಗಿದ್ದು ನಮ್ಮ ಗಮನಕ್ಕೆ ಬಂದಿದ್ದು ಆ ದಿನ ರಾತ್ರಿ ಮಲಗುವಾಗ! ಏನು ಮಾಡುವುದು ಮತ್ತೆ ೨೦೦ ಕಿ ಮೀ ಕಾರು ಚಲಾಯಿಸಿಕೊಂಡು ಮರು ದಿನ ಬೆಳಗ್ಗೆ ಬೇಗ ಎದ್ದು ಟೇಕಾಪೋದಿಂದ ಮತ್ತೆ ಮರಳಿ ಹೋಗಿ ಬಿಟ್ಟು ಬಂದ ಸಾಮಾನನ್ನು ಮರಳಿ ತಂದುಕೊಂಡೆವು.ಮತ್ತೆ ಅರ್ಧ ದಿನ ವ್ಯರ್ಥವಾಗಿ ಕಳೆಯಬೇಕಾದರೂ ಇಲ್ಲಿನ ರೋಡ್ ಟ್ರಿಪ್ಪಿನ ಅನುಭವ ಜಾಸ್ತಿಯಾಯಿತೆಂದು ಸಮಾಧಾನ ಮಾಡಿಕೊಂಡೆವು. ದಕ್ಷಿಣ ದ್ವೀಪದ ಪ್ರವಾಸ ಮುಗಿಸಿ ಕ್ವೀನ್ಸ್ ಟೌನಿನ್ನಿಂದ  ಆಕ್ಲ್ಯಾಂಡಿಗೆ ಹೋಗಲು ಬೆಳಗ್ಗೆ ೧೦ ಗಂಟೆಗೆ ವಿಮಾನ ನಿಲ್ದಾಣ ತಲುಪಿದವರು ಸಂಜೆ ೫,೩೦ರ ವಿಮಾನದಲ್ಲಿ ಆಕ್ಲ್ಯಾಂಡಿಗೆ ಹೋಗಬೇಕಾಯಿತು. ತಾಂತ್ರಿಕ ಕಾರಣದಿಂದ ನಮ್ಮ ವಿಮಾನ ಮತ್ತೆ ಮತ್ತೆ ವಿಳಂಬವಾಗಿತ್ತು. ಇಡೀ ದಿನ ವಿಮಾನ ನಿಲ್ದಾಣದಲ್ಲಿ ಕುಳಿತು ಊಟ, ತಿಂಡಿಯ ಚೀಟಿಗಳನ್ನು ಪಡೆದು ಕಾಲ ಕಳೆಯಬೇಕಾಯಿತು. ಹಾಗೆ ಕುಳಿತಾಗ ನನ್ನ ಒಬ್ಬಳು ಬ್ಯಾಡ್ಮಿಂಟನ್ ಗೆಳತಿ ಎಂಟು ವರ್ಷಗಳ ನಂತರ ಇಲ್ಲಿ ಭೇಟಿಯಾಗಿದ್ದು ಒಂದು ವಿಶೇಷ. ಅವಳು ಮಸ್ಕತ್ತಿನಲ್ಲಿ ನಮ್ಮೊಡನೆ ಇದ್ದವಳು ಮಸ್ಕತ್ ಬಿಟ್ಟು ಅಮೆರಿಕಾದಲ್ಲಿ ಕೆಲವು ವರ್ಷ ನೆಲಸಿ ಈಗ ತನ್ನ ತಾಯ್ನಾಡು ಮಲೇಷಿಯಾದಲ್ಲಿ ನೆಲಸಿದ್ದಾಳಂತೆ. ಅವಳೂ ಅವಳ ಪರಿವಾರದೊಡನೆ ಪ್ರವಾಸಕ್ಕೆ ಬಂದಿದ್ದಳು. 
                ಈಗ ಎಲ್ಲವೂ ಅಂತರ್ಜಾಲದ ಯುಗ. ನಾವು ಹೊಸ ದೇಶ, ನೆಲಕ್ಕೆ ಇಳಿದು ಮೊದಲು ಮಾಡುವ ಕೆಲಸ ಅಲ್ಲಿನ ಒಂದು ಮೊಬೈಲ್ ಸಿಮ್ ತೆಗೆದುಕೊಂಡು ಅಂತರ್ಜಾಲವನ್ನು ನಮ್ಮ ಫೋನಿನಲ್ಲಿ ಜೀವಂತಗೊಳಿಸುವುದು, ಮುಂದೆ ಈ ಹೊಸ ನೆಲದ ನಮ್ಮ ಮಿತ್ರ, ಮಾರ್ಗದರ್ಶಕ ನಮ್ಮ ಕೈಯಲ್ಲಿರುವ ಮೊಬೈಲ್ ಆಗಿರುತ್ತದೆ. ಹಾಗಾಗಿ ಹೊಸ ಜನರೊಂದಿಗೆ ಮಾತನಾಡುವ ಅಗತ್ಯ ಬೀಳುವುದು ಬಹಳ ಕಡಿಮೆ. ನಾವು ಎಲ್ಲಿರುವುದು, ಅಲ್ಲಿಗೆ  ಹೇಗೆ ಹೋಗುವುದು, ಯಾವ ಹೋಟೆಲಿನಲ್ಲಿ ತಿಂಡಿ ತಿನ್ನಬೇಕು, ಏನೆಲ್ಲಾ ನೋಡಬೇಕು  ಎಲ್ಲವೂ ಮೊಬೈಲ್ ನೋಡಿಯೇ ತಿಳಿಯುತ್ತದೆ! ಏನಾದರೂ ತಿಳಿಯದಿದ್ದರೆ ಯಾರನ್ನಾದರೂ ಕೇಳಲು  ಹೋರಡುತ್ತಿದ್ದ ನಾನು, ಅಷ್ಟರಲ್ಲಿ ಮೊಬೈಲ್ ನೋಡಿಯೇ ಉತ್ತರ ಪಡೆಯುತ್ತಿದ್ದ ನನ್ನ ಪರಿವಾರ; ಬರಬರುತ್ತಾ ಮನುಷ್ಯರ ನಡುವಿನ ಸಂಪರ್ಕವನ್ನೇ ಈ ಅಂತರ್ಜಾಲ, ನಕಲಿ ಬುದ್ದಿಮತ್ತೆ ನುಂಗಿಹಾಕುತ್ತದೆ ಎನ್ನಿಸಿತು. 
       ದೊಡ್ಡ ದೇಶ ನ್ಯೂಜಿಲಾಂಡನ್ನು ೧೦ ಹತ್ತು ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ನೋಡಿ ಈ ಬಾರಿಯ ಪ್ರವಾಸ ಮುಗಿಸಿದ್ದೆವು.  ಸಪರಿವಾರವಾಗಿ ಇನ್ನೊಂದು ದೇಶವನ್ನು ಪ್ರವಾಸ ಮಾಡಿದ ಅನುಭವಕ್ಕೆ, ಅವಕಾಶಕ್ಕೆ ಅಭಿನಂದನೆ ಸಲ್ಲಿಸುತ್ತಾ ಈ ಪ್ರವಾಸ ಮುಗಿಸಿದೆ. ಒಟ್ಟಿನಲ್ಲಿ ಹತ್ತು ಹಲವು ಹೊಸ ಅನುಭವಗಳೊಂದಿಗೆ ಇನ್ನೊಮ್ಮೆ ಇಲ್ಲಿಗೆ ಬರಬೇಕು ಎಂಬ ಆಸೆಯನ್ನು ಉಳಿಸಿದ  ಒಂದು ವಿಶಿಷ್ಟ ಪ್ರವಾಸವಾಗಿ ನ್ಯೂಜಿಲಾಂಡ್ ನನ್ನ ನೆನಪಿನಲ್ಲಿ ಯಾವಾಗಲೂ ಉಳಿಯುತ್ತದೆ. 
 

ಲೇಖನ: ಸುಧಾ ಶಶಿಕಾಂತ್ , ಮಸ್ಕತ್ 

Published in Desiswara NRI Edition of Udayavani on 17-05-2025






ಗುರುವಾರ, ಮೇ 23, 2024

ಉತ್ತರ ನ್ಯೂಜಿಲ್ಯಾಂಡ್/ ತೆ ಇಕ ಆ ಮಾವುಯಿ( ನ್ಯೂಜಿಲ್ಯಾಂಡ್ ಅನುಭವಗಳು-೩)

ನ್ಯೂಜಿಲ್ಯಾಂಡ್ ವಿಶಾಲವಾದ ದ್ವೀಪ ರಾಷ್ಟ್ರ.  ಉತ್ತರ ಮತ್ತು ದಕ್ಷಿಣ ದ್ವೀಪಗಳಾಗಿ ದೇಶವನ್ನು ವಿಂಗಡಿಸಲಾಗಿದೆ. ಉತ್ತರ ದ್ವೀಪವು ರಾಜಧಾನಿಯಾದ ವೆಲ್ಲಿಂಗ್ಟನ್, ಅತ್ಯಂತ ದೊಡ್ಡ ನಗರವಾದ ಆಕಲಾಂಡ್ ಗಳನ್ನೊಳಗೊಂಡಿದೆ. ಕ್ರೈಸ್ಟ್ ಚರ್ಚ್, ಆರೋಕಿ ಪರ್ವತ, ಟೆಕಾಪೂ, ಟಿಅನೌ, ಮಿಲ್ಫಾರ್ಡ್ ಸೌಂಡ್, ಕ್ಯಿನ್ಸ್ ಟೌನ್ ಮುಂತಾದ ಸುಂದರ ಪ್ರದೇಶಗಳನ್ನು ಸಂದರ್ಶಿಸಿ ದಕ್ಷಿಣ ದ್ವೀಪದ ಪ್ರವಾಸ ಮುಗಿಸಿದ ನಾವು ಉತ್ತರದ್ವೀಪದ ಅತ್ಯಂತ ದೊಡ್ದನಗರವಾದ ಆಕಲಾಂಡಿಗೆ ಬಂದೆವು. ಮಹಾನಗರವು ಯಾವುದೇ ನಗರದಂತೆ ವಾಹನ ದಟ್ಟಣೆಯಿಂದ ನಮ್ಮನ್ನು ಸ್ವಾಗತಿಸಿತು. ಇಲ್ಲಿಗೆ ನಾವು ತಲುಪಬೇಕಾದ್ದಕ್ಕಿಂತ ಸುಮಾರು ಜಾಸ್ತಿ ಹೊತ್ತು ಬೇಕಾಗಿ ಬೆಂಗಳೂರಿನ ನೆನಪು ತರಿಸುತ್ತಿತ್ತು.


ಈಗ ಇಂಗ್ಲಿಷ್ ಭಾಷೆ ಮಾತನಾಡುವ ಕೋಮನ್ ವೆಲ್ತ್ ರಾಷ್ಟ್ರಗಳಲ್ಲಿ ಒಂದಾದ ಈ ದೇಶಕ್ಕೆ ಯುರೋಪಿನ ಜನರು ಬಂದು ವಾಸಿಸಲಾರಂಭಿಸಿದ್ದು ಸುಮಾರು 18 ನೆಯ ಶತಮಾನದ ಆರಂಭದಲ್ಲಿ. ಇದಕ್ಕೂ ಮೊದಲು ಪೊಲೀನೆಶಿಯಾದಿಂದ ಇಲ್ಲಿಗೆ 13ನೆಯ ಶತಮಾನದಲ್ಲಿ ಆಗಮಿಸಿದ್ದ 'ಮಾವೊರಿ' ಎಂಬ ಬುಡಕಟ್ಟು ಜನಾಂಗ ಈ.ನೆಲದ ಮೊದಲ ನಿವಾಸಿಗಳೆನಿಸಿದ್ದಾರೆ. ವಿಶಿಷ್ಟವಾದ  ಇವರ ಸಂಸ್ಕೃತಿ  ಇಲ್ಲಿಗೆ ಬರುವ ಪ್ರವಾಸಿಗರ ಒಂದು ಮುಖ್ಯ ಆಕರ್ಷಣೆ. ಮಾವೊರಿ ಭಾಷೆ ಇಲ್ಲಿನ ಅಧಿಕೃತ ಭಾಷೆಗಳಲ್ಲಿ ಒಂದು. ಎಲ್ಲ ಜಾಗಗಳಿಗೂ  ಮಾವೊರಿ ಹೆಸರು ಬೇರೆ ಇದೆ ಉದಾಹರಣೆಗೆ ಒಟೆರುವಾ (ನ್ಯೂಜಿಲ್ಯಾಂಡ್) ,ಫಿಯೋಫಿಯೊತಾಹಿ(ಮಿಲ್ಫರ್ಡಸೌಂಡ್ )  ಇತ್ಯಾದಿ. ಮಾವೊರಿ  ಸಂಸ್ಕೃತಿಯನ್ನು ಅನುಭವಿಸಲು, ಅರಿಯಲು ಉತ್ತರ ದ್ವೀಪವು ಸರಿಯಾದ ತಾಣ. 

ಆಕ್ಲ್ಯಾಂಡ್  ನಗರ 

ಆಕಲಾಂಡಿನ ಮೌಂಟ್ ಈಡನ್ ಇಲ್ಲಿನ ಒಂದು  ಸುಂದರ ಜಾಗ. ಅಲ್ಲಿಂದ ಇಡೀ ನಗರದ ದೃಶ್ಯ ಸುಂದರವಾಗಿ ಕಾಣುತ್ತದೆ. ಇಡೀ ನಗರ ಸ್ಥಬ್ಧವಾಗಿರುವ ಜ್ವಾಲಾಮುಖಿಯ ಮೇಲೆ ಬೆಳದಿದೆ. ಈಡನ್ ಗುಡ್ಡದ ಮೇಲೆ ಜ್ವಾಲಾಮುಖಿಯ ಕುರುಹಾಗಿ  ಒಂದು ದೊಡ್ಡ ಕಂದಕ ಇದೆ. ಇದು ಮಾವೋರಿಗಳ ಪವಿತ್ರ ಜಾಗವೂ ಹೌದು. ಅಲ್ಲಿಂದ ಇಳಿದು ಇಲ್ಲಿನ ಸಾರ್ವಜನಿಕ ಸಾರಿಗೆಯ ಬಸ್ಸಿನಲ್ಲಿ  ಇಲ್ಲಿನ ಫೆರ್ರಿ ನಿಲ್ದಾಣಕ್ಕೆ ಹೋದೆವು. 
ಈಡನ್ ಬೆಟ್ಟದಿಂದ ಕಾಣುವ ಆಕ್ಲ್ಯಾಂಡ್ ನಗರ 

ಮಹಡಿಯ ಬಸ್ಸಿನಲ್ಲಿ ಮೇಲೆ ಹತ್ತಿ ಕುಳಿತು ಮಾಡಿದ ಬಸ್ ಸವಾರಿ ಆಕಲಾಂಡ್ ನಗರದ ದರ್ಶನ ಮಾಡಿಸಿತು. ದಾರಿಯಲ್ಲಿ ಆಕಲಾಂಡ್ ವಿಶ್ವ ವಿದ್ಯಾಲಯ, ಅಲ್ಲಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು ಕಾಣಸಿಕ್ಕಿದರು. ಎಲ್ಲ ರಸ್ತೆಗಳಲ್ಲೂ ಬಸ್ಸಿಗೆಂದೇ ನಿರ್ದಿಷ್ಟ ಪಥವಿದ್ದು ವಾಹನಗಳು ಶಿಸ್ತಿನಿಂದ ಚಲಿಸುತ್ತಿದ್ದವು. ಉತ್ತಮಗುಣಮಟ್ಟದ ರಸ್ತೆಗಳು, ಶಿಸ್ತನ್ನು ಪಾಲಿಸುವ ಜನರಿಂದ ಊರಿನ ವಾಹನ ದಟ್ಟಣೆ ಸಹ್ಯ ಆಗಿತ್ತು.

ಸುಸಜ್ಜಿತ ಫೆರಿ ನಿಲ್ದಾಣದಲ್ಲಿ ಟಿಕೇಟು ಪಡೆದು ಡೆವನ್ ಪೋರ್ಟಿಗೆ ಹೋಗಿ ಅಲ್ಲಿಂದ ಕಾಣುವ ಆಕ್ಲ್ಯಾಂಡಿನ ದೃಶ್ಯವನ್ನು ನೋಡೋಣ ಎಂದು ಹೋದೆವು. ಊರಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದೋಣಿಯಲ್ಲಿ ಹೋಗುವ ಅನುಭವ ಚೆನ್ನಾಗಿರುತ್ತದೆ. ಶಾಂತ ಪ್ರದೇಶವಾದ ಈ ಜಾಗವು ಮನೆಗಳಿರುವ ಬಡಾವಣೆ. ಸಂಜೆಯ ಹೊತ್ತಿಗೆ ಅಲ್ಲಿ ಅಡ್ಡಾಡುವಾಗ ನಾವು ಅಲ್ಲಿರುವ ಬಾರುಗಳಲ್ಲಿ ಜನಸಂದಣಿ ಮತ್ತು ಹಬ್ಬದ ವಾತಾವರಣವನ್ನು ನೋಡಿದೆವು. ಇದೇ ಇಲ್ಲಿನ ಸಂಸ್ಕ್ರತಿಯಂತೆ. ಮನೆಯವರೆಲ್ಲ ಸೇರಿ ಕುಟುಂಬದ ವಾರ್ತಾಲಾಪ ಮಾಡುವ ರೀತಿ!
ಡೆವನ್ ಪೋರ್ಟ್ ನಿಂದ  ಕಾಣುವ ಆಕ್ಲ್ಯಾಂಡ ನಗರ 

ಇಲ್ಲಿ ಈಗ ಸೆಕೆಗಾಲ ಮುಗಿದು ಚಳಿಗಾಲ ಆರಂಭವಾಗುವ ಮೊದಲಿನ ಸಮಯ (autumn). ಹಾಗಾಗಿ ಮಳೆ ಬರುವ ಸಾಧ್ಯತೆ ಹೆಚ್ಚು. ನಾವು ಬರುವಾಗಲೇ ಮಳೆ ನಮ್ಮನ್ನು ಸ್ವಾಗತಿಸಿತ್ತು. ರಾತ್ರಿ ನಾವು ಫೇರ್ರಿಯಿಂದ ಹೊರಗೆ ಬರುವಾಗ ಮಳೆ ಆರಂಭವಾಗಿತ್ತು. ಮಳೆಯಲ್ಲಿ ಪಿಝ ತಿಂದು ಇಲ್ಲಿನ ಜನಪ್ರಿಯ ಐಸ್ ಕ್ರೀಂ ಅಂಗಡಿ 'GIAPPO' ನ ಸಾವಯವ ಐಸ್ಕ್ರೀಂ ತಿಂದು ಮಲಗಿದೆವು.
            ರಾತ್ರಿಯಿಡೀ ಮಳೆ ಸುರಿದಿತ್ತು. ಬೆಳಗ್ಗೆಯೂ ಮಳೆ ಬಿಡಲಿಲ್ಲ. ಇಲ್ಲಿನ ಪ್ರಾದೇಶಿಕ ಮಾರುಕಟ್ಟೆಗೆ ಹೋಗಬೇಕೆಂದುಕೊಂಡ ನಮ್ಮ ಯೋಚನೆಯನ್ನು ಕೈಬಿಟ್ಟು ಇಲ್ಲಿನ ಒಂದು ಮಾಲಿನೊಳಗೆ ಹೋದೆವು. ಮದ್ಯಾಹ್ನ ಬಿರುಗಾಳಿಯಲ್ಲಿ ನಡೆದುಕೊಂಡು Maritime Museum ಗೆ ಹೋದೆವು. ಈ ದೇಶದ ಕಡಲಿನೊಂದಿಗಿನ ನಂಟನ್ನು ಸುಂದರವಾಗಿ  ಈ ಸಂಗ್ರಹಾಲಯದಲ್ಲಿ ಪ್ರಸ್ತುತಪಡಿಸಿದ್ದಾರೆ. ಮಾವೋರಿಗಳು ಇಲ್ಲಿಗೆ ಬಂದ ಬಗೆ, ಯುರೋಪಿನ ಜನರು ನಿಧಾನವಾಗಿ ಬಂದು ಇಲ್ಲಿ ನೆಲಸಿದ ಬಗೆ, ತಿಮಿಂಗಿಲಗಳನ್ನು ಭೇಟಿಯಾಡಿದ ಜನರ ಸಾಹಸಗಳನ್ನೆಲ್ಲ ದಾಖಲಿಸಿಟ್ಟಿದ್ದಾರೆ. ಪ್ರಪಂಚದ ಎಲ್ಲ ಮೂಲೆಗಳನ್ನೂ ಆವರಿಸಿ ಪರಿಸರವನ್ನು ಮನುಷ್ಯ ತನಗೆ ಬೇಕಾದಂತೆ ಬಳಸಿದ ಬಗೆಯನ್ನು ಕಂಡು ಖೇದಗೊಳ್ಳುತ್ತಾ, ಮನುಷ್ಯನನ್ನೂ ಅವನಿಗೆ ಈ ಬುದ್ಧಿಶಕ್ತಿಯನ್ನು ಕೊಟ್ಟು ಸೃಷ್ಟಿಸಿದ ಪ್ರಕೃತಿಯೇ ನೋಡಿಕೊಳ್ಳುತ್ತದೆ ಎಂದುಕೊಳ್ಳುತ್ತಾ ಪ್ರವಾಸವನ್ನು ಮುಂದುವರಿಸಿದೆ. 

ರೋಟಾರುವಾ:- 
ಆಕ್ಲ್ಯಾಂಡಿನಿಂದ ಎರಡು ಗಂಟೆ ಪ್ರಯಾಣದ ದೂರದಲ್ಲಿರುವ ರೋಟಾರುವಾ  ಇಲ್ಲಿನ ವಿಶಿಷ್ಟ ಬಿಸಿನೀರಿನ ಬುಗ್ಗೆಗಳು (Geothermal geysers) ಮಾವೊರಿ ಸಂಸ್ಕ್ರತಿಯ ಕೇಂದ್ರಗಳಿಂದ  ನ್ಯೂಜಿಲೆಂಡ್ ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ನಾವು ಸಂದರ್ಶಿಸಿದ 'ತೆ ಪುಯಾ'  ಕೇಂದ್ರವು ವಿಶ್ವ ಪ್ರಸಿದ್ಧ ಪೊಕುಟು ಗೀಸರ್, ಮಾವೊರಿ ಸಂಸ್ಕ್ರತಿಯ ಪ್ರದರ್ಶನ, ಮಾವೊರಿ ಕಲೆಗಳ ತರಬೇತಿ ಕೇಂದ್ರ ಮತ್ತು ಇಲ್ಲಿನ ವಿಶಿಷ್ಟ ಹಕ್ಕಿಯಾಗಿರುವ ಕಿವಿ ಸಂರಕ್ಷಣಾ ಕೇಂದ್ರ ಎಲ್ಲವನ್ನೂ ಹೊಂದಿದ್ದು.ನಮಗೆ ಈ ಎಲ್ಲ ಅನುಭವಗಳನ್ನು  ಸುಂದರವಾಗಿ  ಒದಗಿಸಿ ತೇ ವಾಕರೇವಾ ಕಣಿವೆಯ ವೈಶಿಷ್ಟ್ಯಗಳನ್ನು ಪರಿಚಯಿಸಿತು. 


ಜಿಯೋ ಥರ್ಮಲ್ ಗೀಸರ್ 
ಲಕ್ಷಾಂತರ ವರ್ಷಗಳ ಹಿಂದೆ ಇಲ್ಲಿ ನಡೆದ ಜ್ವಾಲಾಮುಖಿಗಳ ಸ್ಫೋಟವು ಇಲ್ಲಿನ ಈಗಿನ ಈ  ಬಿಸಿನೀರಿನ ಬುಗ್ಗೆಗಳು, ಬಿಸಿ ಮಣ್ಣಿನ ಕುಂಡಗಳನ್ನು ಮತ್ತು ಈ ವಾತಾವಾರಣವನ್ನು ಸೃಷ್ಟಿಸಿದೆ. ಕುದಿಯುತ್ತಾ ಹೊಗೆಯಾಡುತ್ತಿರುವ ಈ ಬಿಸಿ ನೀರಿನ ಬುಗ್ಗೆಗಳ ನಡುವೆ ಓಡಾಡುವುದು ಒಂದು ಸುಂದರ ಅನುಭವ. ಅಷ್ಟು ದೊಡ್ಡ ಜಾಗದಲ್ಲಿ ನೆಲದ ಕೆಳಗಿನಿಂದ ಹಬೆಯಾಡುತ್ತ ಇರುವ ನೀರು ಅಲ್ಲಲ್ಲಿ ಕಾರಂಜಿಗಳಂತೆ ಚಿಮ್ಮುತ್ತದೆ. ಈ ನೀರು, ಮಣ್ಣು ಎಲ್ಲ ಚರ್ಮದ ಆರೋಗ್ಯವರ್ಧಕವೆಂದು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಪಟ್ಟಣದ ತುಂಬಾ ಸ್ಪಾಗಳನ್ನು ಬಿಸಿನೀರಿನ ಕುಂಡಗಳನ್ನು ನೋಡಬಹುದು. 

 ವಿಶಾಲವಾಗಿರುವ ರೋಟಾರುವಾ ಸರೋವರದ ಪಕ್ಕದಲ್ಲಿಯೇ ಬೆಳೆದಿರುವ ಈ ಪಟ್ಟಣ ಸುಂದರವಾಗಿದೆ.  

ಮಾವೊರಿ ಅನುಭವ ;-

ಮಾವೊರಿ ಜನರು ನೋಡಲು ವಿಭಿನ್ನವಾಗಿ ನೋಡಿದೊಡನೆ ಗುರುತಿಸಲು ಸಾಧ್ಯವಾಗುವಂತೆ ಇರುತ್ತಾರೆ. ಮೈಗೆಲ್ಲ ಹಚ್ಛೆ ಹಾಕಿಕೊಳ್ಳುವುದು ಇವರ ಸಂಪ್ರದಾಯ.   ಅವರ ಹಕ ನೃತ್ಯ, ಸಾಂಪ್ರದಾಯಿಕ ಸ್ವಾಗತ ಮತ್ತು ಕೆಲವು ನೃತ್ಯಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದರು. ಅವರ ಸಂಸ್ಕೃತಿಯ ಬಗೆಗೆ ಹೆಮ್ಮೆಯನ್ನು ಅವರ ಮಾತುಗಳಲ್ಲಿ ನಾವು ಅರಿತುಕೊಳ್ಳಬಹುದು . ಮಾವೊರಿ ಸಾಂಪ್ರದಾಯಿಕ ಮರದ ಕೆತ್ತನೆಯನ್ನು , ಇತರ ಸಾಂಪ್ರದಾಯಿಕ ಕಲೆಗಳಿಗೆ ತರಬೇತಿ ಕೊಡುವ ಕೇಂದ್ರವಿದೆ. 
ಹಕ ನೃತ್ಯ್ಸ
ಮಾವೊರಿ ಸ್ವಾಗತ 

ಇಲ್ಲಿ ತರಬೇತಿ ಪಡೆಯಲು ಅವರ ಜನಾಂಗದವರಿಗೆ ಮಾತ್ರ ಸಾಧ್ಯವಂತೆ. ಈಗ ಬೇರೆ ಬೇರೆ ದೇಶಗಳಲ್ಲಿ ನೆಲಸಿರುವ ಮಾವೊರಿ ಯುವಕರು ಇಲ್ಲಿ ನಿಷ್ಠೆಯಿಂದ ಮಾಡಿರುವ ಕಲಾಕೃತಿಗಳ ಮರದ ಕೆತ್ತನೆಗಳನ್ನು ನೋಡಬಹುದು. ನಾವು ಮರಳಿ ಮಸ್ಕತ್ತಿಗೆ ಹೋಗುವಾಗ ನಮ್ಮ ಸಹಪ್ರಯಾಣಿಕಳೊಬ್ಬಳು ಮಾವೊರಿ ಇದ್ದಳು. 

ವೈಟಾಮೋ ಮಿಂಚುಹುಳಗಳ ಗುಹೆಗಳು:-

ಇಲ್ಲಿಗೆ ಬಂದವರೆಲ್ಲ ಮಾಡುವ ಇನ್ನೊಂದು ಆಕರ್ಷಣೆಯೇ ಈ ಮಿಂಚುಹುಳಗಳ ಗುಹೆಗಳು. ಈ ಗುಹೆಗಳನ್ನು ನೋಡಲು ರೋಟಾರುವಾ ದಿಂದ 200 ಕಿ.ಮಿ ಕಾರು ಚಲಾಯಿಸಿಕೊಂಡು ಹೋಗಬೇಕಿತ್ತು. ಮತ್ತೆ ಸುಂದರವಾದ ದಾರಿಯನ್ನು ನೋಡುತ್ತಾ ಹೋಗುವ ಅನುಭವ ಚೆನ್ನಾಗಿತ್ತು. ದಾರಿಯಲ್ಲಿ ಇಕ್ಕೆಲಗಳಲ್ಲಿ ಕಾಣುವ ತೋಟಗಳ ಹೊರಗೆ ಇರುತ್ತಿದ್ದ ಅಂಚೆ ಡಬ್ಬಿಗಳು ನನ್ನನ್ನು ಎಲ್ಲಾ ಕಡೆ ಆಕರ್ಷಿಸುತ್ತಿದ್ದವು. ದೊಡ್ಡ ದೊಡ್ಡ ತೋಟಗಳಲ್ಲಿ ಮನೆಗಳು ತುಂಬಾ ಹಿಂದೆ ಇರುವುದರಿಂದ ರಸ್ತೆಯ ಅಂಚಿನಲ್ಲಿ ಅಲಂಕಾರಿಕವಾಗಿ ಈ ಡಬ್ಬಿಗಳನ್ನು ಮಾಡಿಟ್ಟಿದ್ದಾರೆ ಬಂದ ಅಂಚೆಯನ್ನು ಈ ಪೆಟ್ಟಿಗೆಗಳಲ್ಲಿ ಹಾಕಿ ಹೋಗುತ್ತಾರೆಂದು ಕಾಣುತ್ತದೆ. 

ದಾರಿಯಲ್ಲಿ ಎಲ್ಲಾ ಕಡೆ ಕಾಣ ಸಿಗುವ ಅಂಚೆಡಬ್ಬಿಗಳು 

ವೈಟಾಮೋ ಗುಹೆಗಳ ಒಳಗೆ ಒಂದು ಬಾರಿಗೆ ನಿಗದಿತ ಸಂಖ್ಯೆ ಯ ಜನಗಳನ್ನು ಮಾತ್ರ ಒಳಗೆ ಬಿಡುತ್ತಾರೆ. ಮೊದಲೇ ಟಿಕೇಟು ತೆಗೆದುಕೊಂಡು ನಮ್ಮ ಸಮಯವನ್ನು ಕಾಯ್ದಿರಿಸಬೇಕು. ಕತ್ತಲೆಯ ಗುಹೆಯೊಳಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಮಿನುಗುವ ಈ ಹುಳಗಳನ್ನು ನೋಡುವುದು ಒಂದು ಉತ್ತಮ ಅನುಭವ. ನಮಗೆ ಗುಹೆಯನ್ನು ತೋರಿಸಿದ ವ್ಯಕ್ತಿ ಮಾವೊರಿ ಜನಾಂಗದವನು. ಅವನ ಭಾಷೆ, ಮಾತನಾಡುವ ರೀತಿ ವಿಶಿಷ್ಟವಾಗಿತ್ತು   
    ಒಂದು ಚಿಕ್ಕ ವಿಶೇಷ ತಮ್ಮ ಊರಿನಲ್ಲಿದ್ದರೂ ಅದನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಗೊಳಿಸಿ ಸೌಕರ್ಯ ಗಳನ್ನು ಮಾಡಿ ಪ್ರವಾಸಿಗರು ಬರುವಂತೆ ಆಕರ್ಷಿಸಿ ಹಣಮಾಡುವುದನ್ನು ಕಲಿಯಲು ಇಲ್ಲಿಗೆಲ್ಲ ಬರಬೇಕು ಅನ್ನಿಸಿತು. ನಮ್ಮ ದೇಶದ ಪ್ರವಾಸೀ ತಾಣಗಳ ದುರವಸ್ಥೆ ನೆನಪಾಗಿ ಮನಸ್ಸಿಗೆ ಬೇಸರವೂ ಆಯಿತು.                                                                                                                                                                                                        
ಹೊರಗಿನಿಂದ ವೈಟಾಮೋ ಗುಹೆಯ ನೋಟ 

ನ್ಯೂಜಿಲ್ಯಾಂಡಿನಲ್ಲಿ ಭಾರತೀಯರು:-

ಇಲ್ಲಿ ಎಲ್ಲ ಕಡೆಗಳಲ್ಲಿಯೂ ಭಾರತೀಯರು ಕಾಣಸಿಗುತ್ತಾರೆ. ದಿನಸಿ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ ಕೆಲಸ ಮಾಡುತ್ತಿರುವ ಯುವಕ ಯುವತಿಯರು ಹೆಚ್ಚಾಗಿ ಭಾರತಿಯರಾಗಿರುತ್ತಿದ್ದುದನ್ನು ಗಮನಿಸಿದೆ. ಇಲ್ಲಿ ಪೌರತ್ವ ನೀಡುವ ಕಾರಣ ಅನೇಕ ಭಾರತೀಯರು ಇಲ್ಲಿಗೆ ವಲಸೆ ಬಂದಿದ್ದಾರೆ. ಭಾರತೀಯರ ಅಂಗಡಿಗಳಿವೆ.

ಇಲ್ಲಿ ಟ್ಯಾಕ್ಸಿ ಕರೆದರೆ ಭಾರತೀಯ ಪಂಜಾಬಿ ಜನರು ಬರುತ್ತಾರೆ ಅಲ್ಲದೇ. ನಮ್ಮನ್ನು ಮಾತಿಗೆಳೆಯುತ್ತಾರೆ. ಇಲ್ಲಿನ ಜೀವನದ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ನಮ್ಮನ್ನು ಟೆಸ್ಲಾ ಕಾರಿನಲ್ಲಿ ಕರೆದೊಯ್ದ ದೆಹಲಿಯ ಚಾಲಕ ಸುಮಾರು 17 ವರ್ಷಗಳಿಂದ ಇಲ್ಲಿದ್ದಾನಂತೆ. ಅವನು ಹೇಳುವಂತೆ ಇಲ್ಲೀಗ ಆರ್ಥಿಕ ಮುಗ್ಗಟ್ಟು ನಡೆಯುತ್ತಿರುವುದರಿಂದ ಜೀವನ ನಡೆಸುವುದು ಕಷ್ಟವಂತೆ.ಇಲ್ಲಿನ ಪೌರತ್ವ ಸಿಕ್ಕಿದ  ಬಳಿಕ ಆಸ್ಟ್ರೇಲಿಯಾಗೆ ಹೋದರೆ ಸಂಬಳ ಜಾಸ್ತಿL ಸಿಗುತ್ತದಂತೆ. ಇನ್ನೊಮ್ಮೆ ನಮನ್ನು ವಿಮಾನನಿಲ್ದಾಣಕ್ಕೆ ಬಿಟ್ಟ ಚಾಲಕ ಇಲ್ಲಿನ ವಿಶ್ವ ವಿದ್ಯಾಲಯದಲ್ಲಿ ಓದುತ್ತಾ ಈ ಕೆಲಸವನ್ನು ಮಾಡಿಕೊಂಡಿದ್ದಾನೆ. ನಾವಿರುವ ಮಸ್ಕತ್ತಿನ ಜೀವನದ ಬಗೆಗೆ ಆಸ್ಥೆಯಿಂದ ವಿಚಾರಿಸುತ್ತಿದ್ದ. ಇಲ್ಲಿನ ಪ್ರವಾಸಿಗರಲ್ಲಿ ಅನೇಕ ಭಾರತೀಯರು ಕಾಣುತ್ತಾರೆ. 
                            ಪ್ರವಾಸ ಮಾಡಲು ಸುಂದರವಾಗಿರುವ ಈ ದೇಶದಲ್ಲಿ ಜೀವನ ಮಾಡುವುದು ಸ್ವಲ್ಪ ನೀರಸ ಎನ್ನಿಸಿತು. ಜೀವನ ವೆಚ್ಚ ತುಂಬಾ ದುಬಾರಿ ಇರುವ ಈ ದೇಶಕ್ಕೆ ವಲಸೆ ಬಂದು ನೆಲೆಸಿ ಜೀವನವನ್ನು ಕಟ್ಟಿಕೊಳ್ಳುವುದು ಒಂದು ಹೋರಾಟವೇ ಅನ್ನಿಸಿತು.

ಮತ ಪ್ರಚಾರ :-

ನಮ್ಮ ಉತ್ತರ ದ್ವೀಪದ ಪ್ರಯಾಣದಲ್ಲಿ  ಅನೇಕ ಧರ್ಮದ  ಜನರು  ಮತ ಪ್ರಚಾರಕರೊಂದಿಗೆ ನಮ್ಮ ಭೇಟಿಯಾಗಿತ್ತು. ರೋಟೋರುವದಲ್ಲಿ ಸಂಜೆ  ಬಿಸಿನೀರಿನ ಬುಗ್ಗೆಯನ್ನು ಹುಡುಕಿಕೊಂಡು ಹೋಗುತ್ತಿರುವಾಗ ಪ್ಯಾಲಿಸ್ತೀನಿನ ಸಮ ಸಮರ್ಥಕರು ಧ್ವಜ ಹಿಡಿದು ಇಸ್ರೇಲಿನ ವಿರುದ್ಧ ಘೋಷಣೆ ಕೂಗುತ್ತಿದ್ದುದು ಕಂಡುಬಂತು. ಸುಮ್ಮನೆ ನಗರದಲ್ಲಿ ಒಂದು ಸುತ್ತು ಹೋಗುತ್ತ್ತಿರುವಾಗ ಅಲ್ಲೊಂದು ಸಣ್ಣ ಜಾತ್ರೆಯಂತೆ  ಜನಗಳು ಸೇರಿರುವ ರಸ್ತೆ ಕಂಡಿತು. ನೋಡಿದರೆ ಗುರುವಾರದ ಸ್ಥಳೀಯ ಮಾರುಕಟ್ಟೆಯಂತೆ. ಅಲ್ಲಿ ಶ್ರೀಲಂಕಾದ ಕ್ರೈಸ್ತ ಗುಂಪು ತಮ್ಮದೊಂದು ಮಳಿಗೆ ಇಟ್ಟುಕೊಂಡು ಸಂಗೀತ, ನೃತ್ಯಗಳೊಂದಿಗೆ ಕ್ರೈಸ್ತಮತ ಪ್ರಚಾರ ನಡೆಸುತ್ತಾ ಕ ರಪತ್ರಗಳನ್ನು ಹಂಚುತ್ತಿದ್ದರು. ಅಲ್ಲಿ ಸ್ಥಳೀಯ ಉದ್ಯಮಿಗಳ ಅಂಗಡಿಗಳು, ತರಕಾರಿ ಮಾರುವ ರೈತರು ಎಲ್ಲರ ಮಳಿಗೆಗಳು ಇದ್ದವು. ನಾವು ಅದೇ ರಸ್ತೆಯಲ್ಲಿದ್ದ  ಭಾರತೀಯ  ಬೈಲ್ ವಾಲಜಿ  ಹೋಟೆಲಿನಲ್ಲಿ  ಊಟಕ್ಕೆ ಹೋದರೆ ಅಲ್ಲಿ ಹನುಮಾನ್ ಚಾಲೀಸಾ ಹಾಡನ್ನು ಗಟ್ಟಿಯಾಗಿ ಹಾಕಿದ್ದರು ಹಾಕಿಕೊಂಡು ವಿವಿಧ ದೇಶಗಳ ಗ್ರಾಹಕರಿಗೆ ಊಟ ನೀಡುತ್ತಿದ್ದರು!! ಹೀಗೆ ಪ್ರಪಂಚದ ವಿವಿಧ ಧರ್ಮಗಳು ಈ ಒಂದು ರಸ್ತೆಯಲ್ಲಿ ಒಂದಾಗಿದ್ದುದು ಕಂಡುಬಂತು
              ಆಕ್ಲ್ಯಾಂಡಿನಲ್ಲಿ ಒಂದು ಮಾರುಕಟ್ಟೆಗೆ ಹೋಗುತ್ತಿರುವಾಗ ಕ್ರೈಸ್ತಮತದ ಪ್ರಚಾರಕರು  ಪ್ರಚಾರ  ನಡೆಸುತ್ತಿದ್ದರು. ಅದನ್ನು ನೋಡಿಕೊಂಡು ಮುಂದೆ ಹೋಗುತ್ತಿರುವಾಗ ಒಂದಿಷ್ಟು ಕರಪತ್ರಗಳನ್ನು ಹಿಡಿದುಕೊಂಡು ಜೆಹೋವಾ ಪಂಥದ ಪ್ರಚಾರ ಮಾಡುತ್ತಿದ್ದ ಯುವಕ ಸಿಕ್ಕಿದ. ಇದು ಮತ ಪ್ರಚಾರ  ಎಂದು ತಿಳಿಯದ ನಾನು ಅವನು ಹಿಡಿದಿದ್ದ ಕರಪತ್ರದ ಬಗೆಗೆ ಆಸಕ್ತಿ ತೋರಿಸಿದ್ದಕ್ಕೆ ಅವನು ಇದು ಸಂತೋಷದ ಕುಟುಂಬ ಜೀವನದ ಬಗ್ಗೆ ನನಗೆ ತಿಳಿಸುತ್ತದೆ ಎಂದು ಹೇಳಿ ನನಗೆ ಕೊಟ್ಟ !!  
 
ವಿವಿಧ ಹೊಸ ಅನುಭವಗಳನ್ನು ನೀಡಿದ ನಮ್ಮ ನ್ಯೂಜಿಲ್ಯಾಂಡ್ ಪ್ರವಾಸ ಕ್ರೈಸ್ಟ್ ಚರ್ಚ್ ನಲ್ಲಿ ಆರಂಭವಾಗಿ ಆಕ್ಲ್ಯಾಂಡಿನಲ್ಲಿ ಮುಗಿಯಿತು. ಇಲ್ಲಿಂದ ಮಲೇಷಿಯಾದ ಮಾರ್ಗವಾಗಿ ಸುಮಾರು ೧೯ ಗಂಟೆಗಳ ಪ್ರಯಾಣದ ನಂತರ ನಾವಿರುವ ಮಧ್ಯಪ್ರಾಚ್ಯದ ನಗರ ಮಸ್ಕತ್  ನಗರವನ್ನು ತಲುಪಿದೆವು                




ಸೋಮವಾರ, ಏಪ್ರಿಲ್ 29, 2024

ಫಿಯೋಫಿಯೊತಾಹಿ/ ಮಿಲ್ ಫರ್ಡ್ ಸೌಂಡ್ ಎಂಬ ದೇವ ಭೂಮಿ (ನ್ಯೂಜಿಲಾಂಡ್ ಅನುಭವಗಳು-೨)


"ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ ...... " ಎನ್ನುವ ಪಂಜೆ ಮಂಗೇಶರಾಯರ ಸಾಲುಗಳು ಮತ್ತೆ ಮತ್ತೆ ನೆನಪಾಗುವ ತಾಣ ನ್ಯೂಜಿಲ್ಯಾಂಡ್. ಪೃಕೃತಿ ಮಾತೆ ಕೈಯೆತ್ತಿ ಈ ಭೂಬಾಗವನ್ನು ಹರಸಿದ್ದಾಳೆ. ಪ್ರತಿಭಾಗವೂ  ತನ್ನದೇ ಆದ ವಿಭಿನ್ನ ಸೌಂದರ್ಯದಿಂದ ತುಂಬಿದೆ. ನ್ಯೂಜಿಲೆಂಡ್ ನ ದಕ್ಷಿಣ ದ್ವೀಪದ ಪಶ್ಮಿಮ ತೀರ ಬಹಳ ವಿಶಿಷ್ಟವಾದ ಪ್ರದೇಶ ಫಿಯೋರ್ಡ್ ಲ್ಯಾಂಡ್  ಎಂದು ಕರೆಯಲ್ಪಡುವ ಜಾಗ. 

   ಫಿಯೋರ್ಡ್ ಲ್ಯಾಂಡ್ ಭೂಮಿಯ ಅತ್ಯಂತ  ದಟ್ಟವಾದ ಕಾಡುಗಳ ಮಾನವರಿಂದ ಮುಟ್ಟಲ್ಪಡದ ಜಾಗ. ಆರೋಕಿ, ಅಲ್ಪೈನ್ ಪರ್ವತಗಳು, ಫಿಯೋರ್ಡ್ ಲ್ಯಾಂಡ್ ಗಳನ್ನೊಳಗೊಂಡ  ಸುಮಾರು 1.2 ಮಿಲಿಯನ್ ಹೆಕ್ಟೇರು ವಿಸ್ತೀರ್ಣವನ್ನು ಆವರಿಸಿರುವ ಈ ಪ್ರದೇಶವು ಸರೋವರ, ನದಿಗಳು, ಮೊನಚಾದ ಬೆಟ್ಟಗಳು, ಫಿಯೋರ್ಡ್ ಅಥವಾ ಸೌಂಡ್ ಮತ್ತು ದಟ್ಟ ನಿತ್ಯಹರಿದ್ವರ್ಣದ ಕಾಡುಗಳನ್ನೊಳಗೊಂಡಿದೆ. ಈ ಭಾಗವನ್ನು ಫಿಯೋರ್ಡ್ ಲ್ಯಾಂಡ್ ನ್ಯಾಷನಲ್ ಪಾರ್ಕ್ ಎಂದು 1952ರಲ್ಲಿ ನಿರ್ಮಿಸಲಾಯಿತು. ಜಾಗವು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ (World Heritage Sites) ಪಟ್ಟಿಯಲ್ಲಿದೆ.  ಸಮುದ್ರವು ಭೂಮಿಯನ್ನು ಸೀಳಿಕೊಂಡು ಒಳಕ್ಕೆ ಹರಿದಿರುವ ವಿಶಿಷ್ಟವಾದ ಭೂಭಾಗಕ್ಕೆ  ಫಿಯೋರ್ಡ್ ಅಥವಾ ಸೌಂಡ್ ಎಂದು ಭೂಗೋಳ ಶಾಸ್ತ್ರದ ಪ್ರಕಾರ ಹೇಳುತ್ತಾರೆ. ಸುಮಾರು ೧೪ ಫಿಯೋರ್ಡುಗಳು ನ್ಯೂಜಿಲ್ಯಾಂಡಿನ ಈ ಭಾಗದಲ್ಲಿದೆ. ಇಲ್ಲಿರುವ ಫಿಯೋರ್ಡ್ ಗಳ ಪೈಕಿ ರಸ್ತೆಯ ಮೂಲಕ ಹೋಗಲು ಸಾಧ್ಯವಾಗುವ ಒಂದೇ ಫಿಯೋರ್ಡ್ ನಾವು ಭೇಟಿ  ನೀಡಿದ ಮಿಲ್ಫರ್ಡ್ ಸೌಂಡ್ ಅಥವಾ ಫಿಯೋಫಿಯೋತಾಹಿ. ಪಿಯೋಪಿಯೊತಹಿ ಎನ್ನುವುದು ಈ ಜಾಗಕ್ಕೆ ಮಾವೋರಿ ಹೆಸರು. ವರ್ಷವಿಡೀ ಮಳೆ ಬರುವುದು ಈ ಜಾಗದ ವಿಶೇಷತೆ. ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ವರ್ಷದಲ್ಲಿ ಸುಮಾರು 182 ದಿನಗಳು ಇಲ್ಲಿ ಮಳೆಯಾಗುತ್ತದಂತೆ. ಇಷ್ಟು ಪೀಠಿಕೆಯೊಂದಿಗೆ ನಮ್ಮ ಪ್ರವಾಸ ಕಥನಕ್ಕೆ ಬರೋಣ

  ಈಗ ಪ್ರವಾಸ ಹೋಗುವುದೆಂದರೆ ಆ ಜಾಗದ ಮಾಹಿತಿ, ಅಲ್ಲಿನ ಫೋಟೋಗಳು, ವಿಡಿಯೋಗಳು , ಅಲ್ಲಿಗೆ ಹೋಗಿ ಬಂದವರ ಅನುಭವಗಳು - ಇವುಗಳನ್ನೆಲ್ಲ  ಅಂತರ್ಜಾಲದಲ್ಲಿ ನೋಡಿ ನಾವು ನೋಡಬೇಕಾದ ಜಾಗಗಳನ್ನು, ಮಾಡಬೇಕಾದ ಚಟುವಟಿಕೆಗಳನ್ನು ನಿರ್ಧರಿಸುತ್ತೇವೆ. ನಮ್ಮ ಸ್ನೇಹಿತರಲ್ಲಿ ಕೆಲವರು ನ್ಯೂಜಿಲಾಂಡ್ ಪ್ರವಾಸ ಮಾಡಿದ್ದರು. ಅವರ ಸಲಹೆಗಳನ್ನೂ ತೆಗೆದುಕೊಂಡು ಈ ಜಾಗವನ್ನು ನೋಡಬೇಕೆಂದು ನಿರ್ಧರಿಸಿದ್ದೆವು. ಫಿಯೋಫಿಯೋತಹಿಯ ಒಳ್ಳೆಯ ಅನುಭವವನ್ನು ಪಡೆಯಲು ರಿಯಲ್ ಏನ್ ಝಡ್ (REALNZ) ಸಂಸ್ಥೆಯ ರಾತ್ರಿಯೂ ಅಲ್ಲಿಯೇ ಉಳಿಯುವ ಹಡಗಿನಲ್ಲಿ ನಮ್ಮೆಲ್ಲರಿಗೂ ಕೋಣೆಯನ್ನು ಕಾಯ್ದಿರಿಸಿಕೊಂಡಿದ್ದೆವು. ನಾವು ಎಂದರೆ ನಾನು, ನನ್ನ ತಂಗಿ ನಮ್ಮಿಬ್ಬರ ಮಗಳಂದಿರು, ಗಂಡಂದಿರು- ಆರು ಜನರ ಗುಂಪು ಸಾವಿರಾರು ಮೈಲಿ ದಾಟಿ ಭೂಮಿಯ ಈ ತುದಿಗೆ ಪ್ರವಾಸಕ್ಕೆ ಬಂದಿದ್ದೆವು.
ನಮ್ಮ ಹಡಗು ಮಿಲ್ಫರ್ಡ್ ಮಾರಿನರ್ 

ಮಿಲ್ಫರ್ಡ್ ಮಾರಿನರ್  ದೋಣಿಯಲ್ಲಿ  ಮಿಲ್ಫರ್ಡ್ ಸೌಂಡ್/ಫಿಯೋಫಿಯೋತಹಿಯ  ಅನುಭವ:-

ನಿಗದಿತ ಸಮಯದಲ್ಲಿ ನಮ್ಮ ಹಡಗಿನ ಒಳಗೆ ಬಂದೆವು ಕ್ಯಾಪ್ಟನ್ ಸಿಬ್ಬಂದಿಗಳನ್ನು ಪರಿಚಯಿಸಿದ. ನಮ್ಮ ಹಡಗಿನಲ್ಲಿ ಅಡುಗೆ ಮಾಡುವವರು, ತಿಂಡಿಯನ್ನು ಕೊಡುವವರು, ಚಟುವಟಿಕೆಗಳನ್ನು ಮಾಡಿಸುವವರು ಮತ್ತು ಒಬ್ಬಳು ಪರಿಸರ ತಜ್ಞೆ ಇದ್ದರು. ನಂತರ ಎಲ್ಲ ಪ್ರವಾಸಿಗರಿಗೆ ಅವರವರ ಕೋಣೆಯ ಕೀಲಿಗಳನ್ನು ಕೊಟ್ಟು ಬಂದವರಿಗೆ ಚಹಾ ಮತ್ತು ತಿಂಡಿಗಳ ಸೇವೆಯಾಯಿತು. ನಮ್ಮೂರಿನ ಗೊಳಿಬಜೆಯನ್ನು ನೆನಸಿಕೊಂಡು ಇವರ ಕೇಕ್ ತಿಂದೆವು. ವಿವಿಧ ದೇಶಗಳ ವಿವಿಧ ವಯೋಮಾನದ ಪ್ರವಾಸಿಗರು ನಮ್ಮ ಹಡಗಿನಲ್ಲಿ ಇದ್ದರು.

 ಮೇಲಿನ ಡೆಕ್ ಗೆ ಹೋದರೆ ಭವ್ಯವಾದ ಪ್ರಕೃತಿಯ ರುದ್ರ ರಮಣೀಯ ನೋಟ ನಮ್ಮ ಕಣ್ಣು, ಮನಸ್ಸನ್ನು ತುಂಬಿತು. ಒಂದು ಕಡೆ ಹಸಿರು ಬೆಟ್ಟ, ಮಧ್ಯೆ ಮಧ್ಯೆ ಹರಿಯುವ ನೀರಿನ ಝರಿಗಳು, ಇನ್ನೊಂದು ಕಡೆ ಮೊನಚಾದ ಕಲ್ಲಿನ ಪರ್ವತ, ಮಧ್ಯದಲ್ಲಿ ಹಿಮವತ್ ಪರ್ವತ, ಸುತ್ತಲೂ ನೀರು- ವರ್ಣಿಸಲು ಶಬ್ದಗಳೇ ಸಾಲದಷ್ಟು ಪ್ರಕೃತಿ ಸೌಂದರ್ಯ. ಹಿಂದಿನ ದಿನ ಜೋರಾಗಿ ಮಳೆ ಬಂದು ಬಿಟ್ಟಿತ್ತು; ಇಂದು ಶುಭ್ರ ಆಕಾಶವಿತ್ತು - ಇಲ್ಲಿನ ಭವ್ಯತೆಯನ್ನು ಸವಿಯಲು ಇದು ಅತ್ಯಂತ ಪ್ರಶಸ್ತವಾದ ಸಮಯವಂತೆ. ನಮಗೆ ಇಲ್ಲಿನ ದೃಶ್ಯಗಳನ್ನು ಸುಂದರವಾಗಿ ತೋರಿಸಲು ಬೇಕಾದ ವೇದಿಕೆಯನ್ನು ಪ್ರಕ್ರತಿ ನಿರ್ಮಿಸಿತ್ತು 

ನಮ್ಮ ಹಡಗು ಚಲಿಸಲು ಆರಂಭಿಸಿತು. ಚಲಿಸುತ್ತ  ಭವ್ಯ ಸ್ಟ್ರಿಂಗ್ಜ ಜಲಪಾತದ ಸಮೀಪಕ್ಕೆ ಬಂತು. ಜಲಪಾತದ ತುಂತುರು ಹನಿಗಳು ನಮ್ಮ ಮೇಲೆಲ್ಲ ಪನ್ನೀರಿನಂತೆ ಹಾರುತ್ತಿತ್ತು. ಈ ಜಲಪಾತವು ಬೀಳುವ ಜಾಗದಲ್ಲಿ ನೀರು ತುಂಬಾ ಆರ ಇರುವುದರಿಂದ ಜಲಪಾತವು ಕಡ್ಡಿಯಂತೆ ಅಷ್ಟೇ ಆಳಕ್ಕೆ ಹೋಗುತ್ತದೆ. ಹಾಗಾಗಿ ದೋಣಿಗಳು ಇದರ ಹತ್ತಿರದವರೆಗೆ ಬರಲು ಸಾಧ್ಯವಾಗುತ್ತದೆ. ನಿನ್ನೆ ತಾನೇ ಮಳೆ ಬಂದಿದ್ದರಿಂದ ಅನೇಕ ತಾತ್ಕಾಲಿಕ ಜಲಪಾತಗಳೂ ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. 

ಸ್ಟ್ರಿಂಗ್ ಜಲಪಾತ 

ಜಲಪಾತದ ಅನುಭವದ ನಂತರ ಚಟುವಟಿಕೆಗಳು ಆರಂಭವಾದವು.ಕಯಾಕ್ ದೋಣಿಯ ಸವಾರಿ, ಗುಂಪುಗಳಲ್ಲಿ ಫಿಯೋರ್ಡಿನ ಮಾಹಿತಿ ಪಡೆದುಕೊಳ್ಳುತ್ತಾ ಮಾಡುವ ದೋಣಿ ಸವಾರಿಗಳನ್ನು ಮಾಡಬಾಗುದಾಗಿತ್ತು. ನಾವು ಆರು ಜನರಲ್ಲಿ ಮೂರು ಜನ ಕಯಾಕ್ ಸವಾರಿ ಮಾಡಿದರೆ ಮೂವರು ಪುಟ್ಟ ದೋಣಿಯ ಗುಂಪು ಸವಾರಿ ಮಾಡಿದೆವು. ಎರಡು ಸವಾರಿಯೂ ವಿಭಿನ್ನ ಅನುಭವ ನೀಡಿದವು. ನಂತರ ಇಲ್ಲಿ ಈಜುವವರಿಗೆ ಈಜಲೂ ಅವಕಾಶವಿತ್ತು. ದೋಣಿಯಲ್ಲಿ ಸಾಗುವಾಗ ಕಂಡ ಸುಂದರ ದೃಶ್ಯಗಳು ಕಣ್ಣು ಮತ್ತು ಮನಸ್ಸುಗಳನ್ನು ತಣಿಸುತ್ತಿತ್ತು. ಒಂದು ಕಡೆ ಪೆಮ್ಬ್ರೋಕ್ ಹಿಮಪರ್ವತ, ಅದರ ಕೆಳಗೆ ದಟ್ಟ ಕಾಡು, ಕಾಡಿನ ಮುಂದೆ ಹ್ಯಾರಿಸನ್ ನದಿ ಬಂದು ಸಮುದ್ರಕ್ಕೆ ಸೇರುವ ದೃಶ್ಯ- ಇವೆಲ್ಲ ಒಂದೇ ನೋಟಕ್ಕೆ ಸಿಗುತ್ತಿತ್ತು. ಈ ತರಹದ ದೃಶ್ಯ ಪ್ರಪಂಚದಲ್ಲಿ ಇಲ್ಲಿ ಬಿಟ್ಟರೆ ದಕ್ಷಿಣ ಅಮೆರಿಕಾದ ಚಿಲಿ ದೇಶದಲ್ಲಂತೆ !!  ಇಲ್ಲಿ ಸುತ್ತಲೂ ಕಾಣುವ ದಟ್ಟ ಕಾಡು ಇಲ್ಲಿನ ಈ ಕಲ್ಲುಗುಡ್ಡಗಳ ಚಡಿಯಲ್ಲಿಯೇ ತಮ್ಮ ಬೇರನ್ನು ಬಿಟ್ಟು ಮೇಲಿನ ಪದರದ ಮಣ್ಣೇ ಇಲ್ಲದೆಯೇ ಬೆಳೆದಿರುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯ. ಹಾಗಾಗಿ ಬಾರೀ ಮಳೆಗೆ ಸಿಕ್ಕು ಒಂದು ಬೇರು ಕಳಚಿತೆಂದರೆ ಸಂಪೂರ್ಣ ಪದರವೇ ಕಳಚಿ ಒಂದು ಭಾಗದ ಕಾಡೇ ನೀರಿನೊಳಕ್ಕೆ ಹೋಗುತ್ತದೆ. 

ಕಯಾಕ್ ಮಾಡುವ ದೃಶ್ಯ 

ಚಟುವಟಿಕೆಗಳು ಮುಗಿಯುವಷ್ಟರಲ್ಲಿ ಊಟದ ಸಮಯ. ವಿವಿಧ ದೇಶಗಳ ಪ್ರವಾಸಿಗರಿದ್ದ ಹಡಗಿನಲ್ಲಿ ಎಲ್ಲರಿಗೂ ನಿಗದಿತ ಟೇಬಲ್ಲುಗಳಲ್ಲಿ ಕೂಡಿಸಿ ಶಿಸ್ತಾಗಿ ಊಟ ಬಡಿಸುತ್ತಿದ್ದರು. ಸಸ್ಯಾಹಾರಿಗಳಾದ ನಮ್ಮ ಅಗತ್ಯವನ್ನು ಮೊದಲೇ ತಿಳಿಸಿದ್ದುದರಿಂದ ನಮಗೆ  ಊಟದಲ್ಲಿ ಸಾಕಷ್ಟ ಆಯ್ಕೆಗಳಿದ್ದವು. ಊಟದ ನಂತರ ಇಲ್ಲಿನ ಪರಿಸರದ ಬಗೆಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಹಡಗಿನ ಪರಿಸರ ತಜ್ಞೆ ನೀಡಿದಳು. ಸುಮಾರು ೧೫-೨೦ ನಿಮಿಷಗಳ ಅವಳ ಸಚಿತ್ರ ವಿವರಣೆ  ಇಲ್ಲಿನ ಜೀವ ಸಂಕುಲದ ಮಾಹಿತಿ, ಇಲ್ಲಿನ ವಾತಾವರಣದ ವಿವರಣೆ, ಹಡಗಿನಲ್ಲಿ ಪಯಣಿಸಿದ ಪ್ರಯಾಣಿಕರ ಅನುಭವಗಳನ್ನೊಳಗೊಂಡು  ಈ ಜಾಗದ ಭವ್ಯತೆಯ ಸಂಪೂರ್ಣ ಅರಿವನ್ನು ನಮ್ಮಲ್ಲಿ ಮೂಡಿಸಿತು. 

ನಮ್ಮ ದೋಣಿಯಿಂದ ತೆಗೆದ ಚಿತ್ರ 

ನಂತರ ಡೆಕ್ಕಿಗೆ ಹೋಗಿ ನಕ್ಷತ್ರ ವೀಕ್ಷಣೆ ಮಾಡಬಹುದಾಗಿತ್ತು. ಹೊರ ಪ್ರಪಂಚದ ದೀಪದ ಹಾವಳಿ ಇಲ್ಲದ ಇಲ್ಲಿನ ಆಕಾಶ ನಕ್ಷತ್ರಗಳಿಂದ ಝಗಝಗಿಸುತ್ತಿತ್ತು. 5 ಡಿಗ್ರಿಯ ಚಳಿಯಲ್ಲಿಯೂ ಈ ಆಕಾಶದ ವೀಕ್ಷಣೆ ಮುದಕೊಟ್ಟಿತ್ತು. ಡೆಕ್ಕಿನ ಮೇಲೆ ಅಂಗಾತ ಮಲಗಿ ಆಕಾಶ ವೀಕ್ಷಣೆ ಮಾಡಲು ಸಾಧ್ಯವಾಗುವಂತೆ ಮರದ ಬೆಂಚುಗಳನ್ನು ಹಾಕಿಟ್ಟಿದ್ದರು.

    ಬೆಳಗ್ಗೆದ್ದು ಸಮುದ್ರದ ಮಧ್ಯೆ ಸೂರ್ಯೋದಯದ ಅನುಭವವಾಯಿತು. ಹಡಗಿನಲ್ಲಿ ತಿಂಡಿ ತಿಂದು ಡೆಕ್ಕಿನಲ್ಲಿ ನಿಂತುಕೊಂಡು ಟಾಸ್ಮಾನ್ ಸಮುದ್ರದ ತನಕ ಹಡಗಿನಲ್ಲಿ ಚಲಿಸುವ ಅನುಭವವನ್ನು ಚಳಿಯಲ್ಲಿ ಅನುಭವಿಸಿದೆವು. ಫಿಯೋರ್ಡಿನಲ್ಲಿ ಶಾಂತವಾಗಿದ್ದ ಜಲರಾಶಿಯ ಅಪರಿಮಿತ ಶಕ್ತಿಯು ಅದು ಸಮುದ್ರಕ್ಕೆ ಸೇರುವಲ್ಲಿ ಅರಿವಿಗೆ ಬರುತಿತ್ತು. ಟಾಸ್ಮಾನ್  ಸಮುದಕ್ಕೆ ನಮ್ಮ ಹಡಗು ಬರುತ್ತಿದ್ದಂತೆ ಅಲೆಗಳ ಹೊಡೆತಕ್ಕೆ ದೋಣಿಯು ಅಲ್ಲಾಡತೊಡಗಿತು. ಆರಾಮವಾಗಿ ನಿಂತು ನೋಡುತ್ತಿದ್ದ ನಾವೆಲ್ಲ ಬೀಳುವಂತಾದೆವು!  ಇಲ್ಲಿನ ಶಾಶ್ವತ ಜಲಪಾತಗಳಾದ ಸ್ಟ್ರಿಂಗ್ ಜಲಪಾತ, ಬೋವೆನ್  ಜಲಪಾತಗಳ ದೃಶ್ಯವನ್ನು ಸವಿಯುತ್ತ ಮರಳಿ  ತೀರಕ್ಕೆ  ಬಂದೆವು. ಹತ್ತಿದ ಮೇಲೆ ಇಳಿಯುವ ತನಕ ಎಲ್ಲ ಪ್ರವಾಸಿಗರನ್ನು ಬಿಡುವಿಲ್ಲದ ಚಟುವಟಿಕೆಗಳ ಮೂಲಕ ಹಿಡಿದಿಟ್ಟಿದ್ದರು ನಮ್ಮ ಹಡಗಿನ ಸಿಬ್ಬಂದಿಗಳು. ಒಟ್ಟಿನಲ್ಲಿ ಹದಿನೈದು ಘಂಟೆಗಳ  ಈ ಸುಂದರ ಅನುಭವ  ಬಹುಕಾಲ ನಮ್ಮ ನೆನಪಿನಲ್ಲಿ ಇರತ್ತದೆ.  

                                                                                                                                              ಟೆಕಾಪೂ- ಟೇಯಾನೌ - ಮಿಲ್ಫರ್ಡ್ ಸೌಂಡ್ ದಾರಿ:-


ನ್ಯೂಜಿಲೆಂಡ್ ನಲ್ಲಿನ ಪ್ರವಾಸದ ಪ್ರಮುಖ ಭಾಗ ಇಲ್ಲಿನ ಸುಂದರವಾದ ರಸ್ತೆಯ ಮೇಲೆ ಪ್ರಕೃತಿ ಸೌಂದರ್ಯ ವನ್ನು ಸವಿಯುತ್ತಾ ಪ್ರಯಾಣ ಮಾಡುವುದು. ಟೆಕಾಪೊದಿಂದ ಮಿಲ್ಫರ್ಡ್ ಸೌಂಡ್  530 ಕಿ.ಮಿ ಗಳಷ್ಟು ದೂರದಲ್ಲಿತ್ತು. ಈ ದಾರಿಯನ್ನು ತಲುಪಲು ಸುಮಾರು ಆರು ಗಂಟೆಗಳು ಬೇಕಾಗುತ್ತೆಂದು ಗೂಗಲ್ ನಕ್ಷೆ ತೋರಿಸುತ್ತಿತ್ತು. ಅದಕ್ಕೆ ಸರಿಯಾಗಿ ನಾವು ಚುಮು ಚುಮು ಚಳಿಯಲ್ಲಿ ಇನ್ನೂ ಸೂರ್ಯೋದಯ ವಾಗುವ ಮೊದಲೇ ಹೊರಟೆವು. ಕತ್ತಲಲ್ಲಿ ಪುಟ್ಟ ಪಟ್ಟಣ ಟ್ವಿನ್ಜೆಲ್ ದಾಟಿದೆವು. ದಾರಿಯಲ್ಲಿ ರಸ್ತೆ ತಡೆ ಇದೆಯಾ ಎಂದು ಕೇಳಲು ಹೆದ್ದಾರಿ ಸ್ಥಿತಿಯ ಬಗೆಗೆ ವಿಚಾರಿಸಲು ಇದ್ದ ಸಂಖ್ಯೆಗೆ ಫೋನು ಮಾಡಿದಾಗ ಅಷ್ಟು ಬೆಳಗಿನ ಜಾವದಲ್ಲೂ ಫೋನೆತ್ತಿ ನಮ್ಮ ಪ್ರಶ್ನೆಗಳನ್ನು ಕೇಳಿ ನಮ್ಮ ದಾರಿಯಲ್ಲಿ ಏನೂ ತೊಂದರೆಯಿಲ್ಲ ಎಂದು ಖಾತ್ರಿ ಪಡಿಸಿದ ಇಲ್ಲಿನ ವ್ಯವಸ್ಥೆಯ ಬಗೆಗೆ ನಮಗೆ ಸಂತೋಷ ವಾಯಿತು.  

ನಿಧಾನವಾಗಿ ಬೆಳಕಾಗುತ್ತಿದ್ದಂತೆ ಸುತ್ತಲಿನ ಪ್ರಕೃತಿ ಸೌಂದರ್ಯ ನಮಗೆ ಗೋಚರಿಸತೊಡಗಿತು. ಡನ್ ಸ್ಟನ್ ಸರೋವರದ ಎದುರಿನ ಒಂದು ಚಂದದ ಜಾಗದಲ್ಲಿ ಚಹಾ ಕುಡಿಯೋಣವೆಂದು ನಿಲ್ಲಿಸಿದೆವು. ಹಿಂದೆಯೇ ತೋಟ, ಮುಂದೆ ಹಣ್ಣು, ತರಕಾರಿಗಳನ್ನು ಮಾರುವ ಸುಂದರವಾದ ಅಂಗಡಿ. ಅಲ್ಲೊಬ್ಬ ಚೂಟಿ ಹುಡುಗ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಅವನ ಅಮ್ಮನ ತೋಟವಂತೆ. ಇವತ್ತು ಅವನ ರಜೆಯ ಮೊದಲ ದಿನವಾದ್ದರಿಂದ ಅಮ್ಮನಿಗೆ ನೆರವಾಗಲು ಬಂದಿದ್ದ. 


ಅಲ್ಲಿಂದ ಸ್ವಲ್ಪ ಮುಂದೆ ಹೋದಾಗ  Roaring Meg Stream ಹರಿಯುತ್ತಿತ್ತು. ಇಳಿದು ನೋಡಿದರೆ ಹೆಸರಿಗೆ ತಕ್ಕಂತೆ ಬೋರ್ಗರೆಯುತ್ತ ಹರಿಯುತ್ತಿದ್ದ ಮೆಗ್ ನದಿ ಮತ್ತು ಅದಕ್ಕೆ ಕಟ್ಟಿದ ಜಲ ವಿದ್ಯುತ್ ಸ್ಥಾವರ ಕಂಡಿತು. ಇಲ್ಲಿನ ವಿದ್ಯುತ್ ಉತ್ಪಾದನೆಯ ಬಹುಪಾಲು ಇಂತಹ ಸ್ಥಾವರಗಳಿಂದ ಪೂರೈಕೆಯಾಗುತ್ತದಂತೆ. 

ಮುಂದಿನ ದಾರಿಯಲ್ಲಿ  ಬೃಹತ್ ವಕಾಟಿಪು ಸರೋವರ ಕಾಣಲು ಆರಂಭಿಸಿತು. ಈ ಸರೋವರದ ಸೌಂದರ್ಯ ನಮ್ಮನ್ನು ಬಹಳ ಆಕರ್ಷಿಸಿತು. ಪ್ರತಿ ತಿರುವಿನಲ್ಲೂ  ಹೊಸತರಂತೆ ಕಾಣುತ್ತಿದ್ದ ಈ ಸರೋವರ ಛಾಯಾಗ್ರಾಹಕರನ್ನು ಮರುಳುಗೊಳಿಸುತ್ತಿತ್ತು. ಅಲ್ಲಲ್ಲಿ ಕ್ಯಾಂಪಿಂಗ್ ಮಾಡುವವರಿಗೆ ಜಾಗ ಮಾಡಿಟ್ಟಿದ್ದರು. ಜನಗಳು ಕ್ಯಾನ್ಪರ್ ವ್ಯಾನುಗಳು, ಟೆಂಟುಗಳನ್ನು ಹಾಕಿಕೊಂಡು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದರು.

  ಟೇಯನೌನಲ್ಲಿ ನಿಲ್ಲಿಸಿ  ಊಟ ಮಾಡಿಕೊಂಡು ಕಾರುಗಳಿಗೆ ಪೆಟ್ರೋಲ್ ತುಂಬಿಸಿ ಮಿಲ್ಫಾರ್ಡ್ ರಸ್ತೆಯಲ್ಲಿ ಚಲಿಸಲು ಆರಂಭಿಸಿದೆವು.  ಇನ್ನು ಸುಮಾರು ೧೧೨ ಕಿ.ಮೀ ಗಳಷ್ಟು ದೂರ ಚಲಿಸಿದರೆ ಫಿಯೋಫಿಯೊತಹಿ ಈ ರಸ್ತೆ ಇಲ್ಲಿನ ಅತ್ಯಂತ ಸುಂದರ ರಸ್ತೆಗಳಲ್ಲಿ ಒಂದು. ದಾರಿಯುದ್ದಕ್ಕೂ ಅನೇಕ ಸುಂದರ ಜಾಗಗಳು ಸಿಗುತ್ತಾ ಹೋಗುತ್ತದೆ. ಆದರೆ ಯಾವುದೇ ತಿಂಡಿ ಅಂಗಡಿಗಳು, ಮೊಬೈಲ್ ಟವರುಗಳು ಇಲ್ಲಿಲ್ಲ. ಆದ್ದರಿಂದ ಪರಿಸರ ಶಾಂತವಾಗಿದೆ. 

ಮಿರರ್ ಸರೋವರ ಎಂಬ ಜಾಗದಲ್ಲಿ ಹೆಸರಿಗೆ ಅನ್ವರ್ಥವಾಗುವಂತೆ ಸುತ್ತಲಿನ ಅರಲ್ ಬೆಟ್ಟಗಳ ಪ್ರತಿಬಿಂಬ ಸರೋವರದ ನೀರಿನಲ್ಲಿ ಕಾಣುತ್ತದೆ. ಸರೋವರದ ಸುತ್ತಲೂ ಇರುವ ಪಕ್ಷಿಗಳು ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಸುತ್ತವೆ. ದಾರಿಯಲ್ಲಿ ಜಾಗಕ್ಕೂ ಮೊದಲು ಹಾಕಿರುವ ಫಲಕಗಳು, ಕಾರು ನಿಲ್ಲಿಸಲು ಮಾಡಿರುವ ಸುಸಜ್ಜಿತ ಜಾಗ, ಶೌಚಗ್ರಹಗಳು, ಜಾಗದ ಬಗೆಗೆ ಮಾಹಿತಿ- ಇವೆಲ್ಲ ಇಲ್ಲಿನ ಪ್ರವಾಸವನ್ನು ಮೆಲುಕು ಹಾಕುವಂತೆ ಮಾಡುತ್ತದೆ. 

ಮಿರರ್ ಸರೋವರ 
  ಹೊಲ್ಲಿಫೊರ್ಡ್ ನದಿಯ ಜಲಪಾತ, ಕ್ನೋಬ್ ಕಣಿವೆ, ಚಾಸ್ಮ್ ಅರಣ್ಯ ನಡಿಗೆ - ಇವೆಲ್ಲ ಈ ಸುಂದರ ದಾರಿಯಲ್ಲಿ ಸಿಕ್ಕಿದ ನಾವು ನಿಲ್ಲಿಸಿದ ಜಾಗಗಳು. ಎಲ್ಲ ಕಡೆ ೨-೩ ಗಂಟೆ ನಡೆದು ಹೋಗುವ ಚಾರಣದ ದಾರಿಗಳೂ ಇದ್ದವು. ಸಮಯದ ಅಭಾವದ ಕಾರಣ ನಮಗಿದ್ದ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಿ ಮುಂದುವರಿದೆವು. 
ಚಾಸ್ಮ್ ಅರಣ್ಯ 

ಹೀಗೆ ನಮ್ಮ ಪಿಯೋ ಪಿಯೋ ತಹಿಯ ಪ್ರವಾಸ ಒಂದು ದಿವ್ಯ ಅನುಭವ ನೀಡಿದ್ದರಲ್ಲಿ ಸಂಶಯವಿಲ್ಲ. ಸಾವಿರಾರು ಮೈಲಿ ಪಯಣಿಸಿ ಖಂಡಗಳನ್ನು ದಾಟಿ ಬಂದು ಒಂದು ಹೊಸ ಭೂಭಾಗವನ್ನು ನೋಡಿದ, ಅನುಭವಿಸಿದ ಧನ್ಯತೆ ನಮ್ಮದಾಗಿದೆ

Published on 10-05-2025



                                                                                                                                                                                                                                                                                                                                                                                                                             

ಭಾನುವಾರ, ಏಪ್ರಿಲ್ 21, 2024

ಸುಂದರ ತಾಣ ಕ್ವೀನ್ಸ್ ಟೌನ್ (ನ್ಯೂಜಿಲಾಂಡ್ ಅನುಭವಗಳು-1)


ವಕಾಟಿಪು ಸರೋವರದ ತೀರದಲ್ಲಿ ಕ್ವೀನ್ಸ್ ಟೌನ್ ಪಟ್ಟಣ 

ಭೂಮಿಯ ದಕ್ಷಿಣಾರ್ಧ ಗೋಳದ ಕಟ್ಟಕಡೆಯ ದೇಶವಾದ ನ್ಯೂಜಿಲ್ಯಾಂಡ್  ಪ್ರಪಂಚದ ಸುಂದರವಾದ ದೇಶಗಳಲ್ಲಿ ಒಂದು. ದೇಶದ ದಕ್ಷಿಣ ದ್ವೀಪಗಳ ಒಟಾಗೋ ಪ್ರಾಂತದ ಒಂದು ಪ್ರಮುಖ ಪ್ರವಾಸೀ ತಾಣ ಕ್ವೀನ್ಸ್ ಟೌನ್. ವಕಾಟಿಪು ಸರೋವರ ಮತ್ತು ಬೆಟ್ಟಗಳಿಂದ ಸುತ್ತುವರಿದಿರುವ ಈ ಊರು  ಒಂದು ಸುಂದರ ಪ್ರದೇಶ ಮತ್ತು ಪ್ರವಾಸಿಗರ ಸ್ವರ್ಗ. ವಕಾಟಿಪು ಮಹಾ ಸರೋವರ ನ್ಯೂಜಿಲಾಂಡಿನ ಅತ್ಯಂತ ದೊಡ್ಡ ಸರೋವರ. ಸುಮಾರು 275 ಚದರ ಮೈಲಿಗಳಷ್ಟು  ವಿಶಾಲವಾಗಿರುವ ಈ ಸರೋವರದ ಉದ್ದ 80 ಕಿ. ಮೀ ಗಳು. ಉತ್ತರದಲ್ಲಿ ಗ್ಲೆನೋರ್ಚಿ ಎಂಬ ಪಟ್ಟಣದಿಂದ ದಕ್ಷಿಣದಲ್ಲಿ ಕಿಂಗ್ಸ್ಟೋನ್ ಎಂಬ ಪಟ್ಟಣದ ತನಕ ಹಬ್ಬಿಕೊಂಡಿರುವ ಈ ಅಪಾರ ಜಲರಾಶಿಯ ಉತ್ತರದ ತೀರದಲ್ಲಿ ಕ್ವೀನ್ಸ್ ಟೌನ್ ಪಟ್ಟಣ ಇದೆ. ಸಿಹಿ ನೀರಿನ ಈ ಮಹಾ ಸರೋವರಕ್ಕೆ ರೀಸ್ ಮತ್ತು ಡಾರ್ಟ್ ನದಿಗಳಿಂದ ನೀರು ಹರಿಯುತ್ತದೆ. ಅಲ್ಲದೆ ಸುತ್ತುವರಿದಿರುವ ಹಿಮಾಚ್ಚಾದಿದ ಬೆಟ್ಟಗಳಿಂದ ಹಿಮ ಕರಗಿದ ನೀರು, ಮಳೆ ನೀರು ಹರಿದು ಬಂದು ಈ ಸರೋವರ ಸದಾ ತುಂಬಿರುವಂತೆ ನೋಡಿಕೊಳ್ಳುತ್ತದೆ.  ಇಲ್ಲಿನ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸುವುದೇ ಇಲ್ಲಿಗೆ ಬರುವ ಪ್ರವಾಸಿಗರ ಪ್ರಥಮ ಆಕರ್ಷಣೆ.  ಸುಸಜ್ಜಿತವಾದ ವಿಮಾನ ನಿಲ್ದಾಣ ಇರುವುದರಿಂದ ವಿಮಾನದಲ್ಲಿ ಇಲ್ಲಿಗೆ ಬರಬಹುದು. ಅಥವಾ ಇಲ್ಲಿನ ಸುಂದರ ರಸ್ತೆಗಳಲ್ಲಿ ಕಾರು ಚಲಾಯಿಸಿಕೊಂಡು ಸುಂದರವಾದ ದೃಶ್ಯಗಳನ್ನು ಸವಿಯುತ್ತಾ ಇಲ್ಲಿಗೆ  ಬರಬಹುದು. ರಸ್ತೆಗಳ   ಮೂಲಕ ಪ್ರವಾಸ ಮಾಡುವುದು ಈ ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಮಾಧ್ಯಮ.  ವಿದೇಶದಿಂದ ಬಂದು ಇಲ್ಲಿ ಪ್ರವಾಸ ಮಾಡ ಬಯಸುವ ಪ್ರವಾಸಿಗರಿಗೆ ಯಾವ ತರಹದ ಕಾರು ಬೇಕೋ ಆ ತರಹದ ಕಾರನ್ನು ಒದಗಿಸುವ ವ್ಯವಹಾರ ಇಲ್ಲಿನ ಲಾಭದಾಯಕ ಉದ್ಯಮ ಅನಿಸುತ್ತದೆ. ಅಂತಹ ಅನೇಕ ಸಂಸ್ಥೆಗಳು ಈ ಸೌಲಭ್ಯವನ್ನು ಒದಗಿಸುತ್ತವೆ.  ನಾವು ಕ್ರೈಸ್ಟ್ ಚರ್ಚ್ ಪಟ್ಟಣಕ್ಕೆ ವಿಮಾನದಲ್ಲಿ ಬಂದು ನಂತರ ಕಾರು ಚಲಾಯಿಸಿಕೊಂಡು  ಇಲ್ಲಿಗೆ ಬಂದೆವು. 

ನಮ್ಮ ಮನೆಯಿಂದ ಕಾಣುತ್ತಿದ್ದ ಸರೋವರದ ದೃಶ್ಯ 

ಬಂಜಿ ಜಂಪಿಂಗ್, ಜೆಟ್ ಬೋರ್ಡಿನ್ಗ್, ವೇಗದ ದೋಣಿಗಳು, ಪ್ಯಾರಾ ಗ್ಲಾಯ್ಡಿಂಗ್, ಸ್ಕಾಯ್ ಡೈವಿಂಗ್- ಇಂತಹ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಇಲ್ಲಿಗೆ ಬಂದರೆ ಇವುಗಳನ್ನೆಲ್ಲ ಮಾಡಬೇಕೆಂಬುದು ಯುವ ಪ್ರವಾಸಿಗರ ಅಭಿಮತ. .ಪ್ರವಾಸಿಗಳಿಗೆ ಈ ಸಾಹಸ ಚಟುವಟಿಕೆಗಳನ್ನು ಒದಗಿಸಲು ಪೈಪೋಟಿ ನಡೆಸುತ್ತಿರುವ ಅನೇಕ ಅಂಗಡಿಗಳು ಪಟ್ಟಣದಲ್ಲಿದೆ. ಸೈಕಲ್ ಮಾಡಿಕೊಂಡು ಬೆಟ್ಟಗಳನ್ನು ಹತ್ತುವುದು, ಚಾರಣ- ಇವೆಲ್ಲ ಈ ದೇಶದಲ್ಲಿ ಮಾಡಬಹುದಾದ ಕೆಲವು ಜನಪ್ರಿಯ ಚಟುವಟಿಕೆಗಳು. ಇವುಗಳಿಗೆಲ್ಲ ಬೇಕಾಗುವ ಸಲಕರಣೆಗಳನ್ನು ಎರವಲು ಪಡೆಯುವ ಅಂಗಡಿಗಳೂ ಇಲ್ಲಿವೆ. ಪ್ರವಾಸಿಗರಿಗೆ ಬೇಕಾದ ಚಿಕ್ಕ ಚಿಕ್ಕ ಅಗತ್ಯ ಗಳನ್ನು ಮನಗಂಡು ಸೌಲಭ್ಯಗಳನ್ನು ದೇಶದ ತುಂಬೆಲ್ಲ ಮಾಡಿಟ್ಟಿದ್ದಾರೆ. ಇಲ್ಲಿ ಮಾಡಬಹುದಾದ ಎಲ್ಲ ಚಟುವಟಿಕೆಗಳ ಮಾಹಿತಿ, ಅದಕ್ಕೆ ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಬೇಕಾದ ಎಲ್ಲ ಸೌಕರ್ಯ ಗಳೂ ಇಲ್ಲಿದೆ. ಇವನ್ನೆಲ್ಲ ಮಾಡಲು ಮನಸ್ಸಿಲ್ಲದಿದ್ದರೆ  ನಗರದಲ್ಲಿ ಸುಂದರ ಉದ್ಯಾನವಿದೆ. ಇಲ್ಲಿಗೆ ವಿಶಿಷ್ಟವಾದ ಪಕ್ಷಿ ಸಂಕುಲವಿದೆ. ಅವುಗಳ ವೀಕ್ಷಣೆ ಮಾಡಬಹುದು. ಗಾಂಡೊಲ ಸವಾರಿ ಮಾಡಬಹುದು. ದೊಡ್ಡ ದೊಡ್ಡ ದೋಣಿಗಳನ್ನು ಹತ್ತಿಕೊಂಡು ಸರೋವರದ ಮೂಲಕ ಸಂಚರಿಸುತ್ತ ಪ್ರಕ್ರತಿ ವೀಕ್ಷಣೆ ಮಾಡಬಹುದು. 

 ಪಟ್ಟಣದಲ್ಲಿ ವಿವಿಧ ರೀತಿಯ,ದೇಶದ ಪ್ರವಾಸಿಗರು ತುಂಬಿರುವುದು ಕಾಣುತ್ತದೆ. ಎಲ್ಲ ದೇಶದ ಜನರ ಆಹಾರದ ಅಗತ್ಯಗಳನ್ನು ಪೂರೈಸಲು ವಿವಿಧ ದೇಶಗಳ  ಆಹಾರವನ್ನು ಬಡಿಸುವ ಹೋಟೆಲುಗಳು ಇಲ್ಲಿವೆ. ಅನೇಕ ಭಾರತೀಯ ಹೋಟೆಲುಗಳೂ ಇಲ್ಲಿದ್ದವು.  ಇಷ್ಟು ಜನ ಬರುವ ಜಾಗವಾದರೂ ತುಂಬಾ ಚೊಕ್ಕವಾಗಿದ್ದು ಎಲ್ಲಿಯೂ ಒಂದು ಕಸ, ಬೇಡದ ಪ್ಲಾಸ್ಟಿಕ್ ಹುಡುಕಿದರೂ ಸಿಗುವುದಿಲ್ಲ.  ವಕಾಟಿಪು ಸರೋವರದ ಎದುರಿಗೇ ಇರುವ ನಮ್ಮ ವಾಸಸ್ಥಾನ ಪಟ್ಟಣದ ಕೇಂದ್ರ ಭಾಗದಲ್ಲಿತ್ತು. 


ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ :- 

        ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ ರಸ್ತೆ 

ಕ್ವೀನ್ಸ್ ಟೌನ್ ನಿಂದ 30 ಕಿ. ಮೀ ಉದ್ದದ ಟೊಮ್ಮಿ ತೊಂಸನ್ ಸಿನಿಕ್ ಡ್ರೈವ್ ಎನ್ನುವ ಸುಂದರವಾದ ರಸ್ತೆಯ ಮೂಲಕ ಹೋಗಿ ಬರುವುದು ಒಂದು ಸುಂದರ ಅನುಭವ. ಗ್ಲೆನೋರ್ಕಿ ಪಟ್ಟಣವನ್ನು ಕ್ವೀನ್ಸ್ ಟೌನ್ ನಗರಕ್ಕೆ ಸೇರಿಸುವ ಈ ರಸ್ತೆ ನಿರ್ಮಾಣವಾಗಿದ್ದು 1951 ರಿಂದ 1956 ರ ನಡುವೆ. ಈ ರಸ್ತೆಯ ನಿರ್ಮಾಣ ಈ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದೆ. ಈ ರಸ್ತೆ ನಿರ್ಮಾಣವಾಗುವ ಮೊದಲು ಸರೋವರದ ಜಲಮಾರ್ಗದಲ್ಲಿಯೇ ಈ ಎರಡು ಊರುಗಳ ಸಂಪರ್ಕವಂತೆ. ವಕಾಟಿಪು ಸರೋವರದ ಪಕ್ಕವೇ ಸಾಗುವ ಈ ಸುಂದರ ರಸ್ತೆ ಇಲ್ಲಿನ ಅತ್ಯುತ್ತಮ ಮತ್ತು ಸುಂದರ ರಸ್ತೆಗಳಲ್ಲಿ ಒಂದು. ದಾರಿಯಲ್ಲಿ ಬೆನೆಟ್ಟೊನ್ ಬ್ಲಫ್ ಒಂದು ಸುಂದರ ಜಾಗ ಸಿಗುತ್ತದೆ. ಅಲ್ಲಿ ಇಳಿದರೆ ಒಂದು ಚಿಕ್ಕ ಬೆಟ್ಟ. ಅದನ್ನು ಹತ್ತಿಕೊಂಡು ಹೋದರೆ ಮತ್ತೆ ವಿಶಾಲವಾದ ವಕಾಟಿಪು ಸರೋವರದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಯೂ ಮಧ್ಯೆ ಮಧ್ಯೆ ತಂಗುದಾಣಗಳನ್ನು ಮಾಡಿಟ್ಟು ತುಂಬಾ ಮಳೆ ಬಂದರೆ ನಿಲ್ಲಲು ಸೂರು ಇರುವಂತೆ ಮಾಡಿದ್ದಾರೆ.  ಇಂತಹ ಚಿಕ್ಕ ಚಿಕ್ಕ ಸುಂದರ ಜಾಗಗಳು ದಾರಿಯುದ್ದಕ್ಕೂ ಸಿಗುತ್ತವೆ. 
            ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ತೋಟಗಳು ಕಾಣಸಿಗುತ್ತವೆ. ಇಲ್ಲಿನ ತೋಟಗಳೆಂದರೆ ಅಲ್ಲಿ ಹಸು, ಕುರಿ, ಜಿಂಕೆಗಳು, ಅಲ್ಪಾಕಗಳು  ಸಾವಿರ ಸಾವಿರ ಸಂಖ್ಯೆಯಲ್ಲಿ ಮೇಯುತ್ತಿರುತ್ತವೆ. ಅವುಗಳನ್ನು ನೋಡುವುದೇ ಚಂದ. ಈ ದೃಶ್ಯ ಗಳನ್ನು ಸವಿಯುತ್ತಾ ತೆರಳುವುದು ಒಂದು ಆಹ್ಲಾದಕರ ಅನುಭವ.

ರಸ್ತೆಯ ಬದಿಯಲ್ಲಿ ಕಾಣ ಸಿಗುವ ದೃಶ್ಯ 

ಗ್ಲೆನೋರ್ಕಿ:-

ಕಾಮನಬಿಲ್ಲು ಮೂಡಿರುವ ವಕಾಟಿಪು ಸರೋವರ 

ಗ್ಲೆನೋರ್ಕಿ ಒಂದು ಸುಂದರವಾದ ಪುಟ್ಟ ಪಟ್ಟಣ. ಇಲ್ಲಿ ಮತ್ತೆ ವಕಾಟಿಪು ಸರೋವರದ ನೋಟವನ್ನು ಕಣ್ತುಂಬಿಕೊಳ್ಳಬಹುದು. ಅನೇಕ ಚಾರಣದ ರಸ್ತೆಗಳು ಇಲ್ಲಿಂದ ಆರಂಭವಾಗುವುದರಿಂದ ಚಾರಣಿಗರ ಜನಪ್ರಿಯ ಜಾಗ ಇದು. ಡಾರ್ಟ್ ನದಿಯು ಇಲ್ಲಿಯೇ ಬಂದು ಸರೋವರವನ್ನು ಸೇರುವುದರಿಂದ ನದಿಯ ಮೇಲೆ ಮಾಡುವ ಸಾಹಸ ಕ್ರೀಡೆಗಳಿಗೂ ಇಲ್ಲಿ ಅವಕಾಶವಿದೆ. ಅಲ್ಲಿ ಮಳೆ ಬರುತ್ತಿತ್ತು. ಮಳೆಯಲ್ಲಿ ಕೊಡೆ ಹಿಡಿದು ಎಲ್ಲರೂ ಇಲ್ಲಿನ ಲಗೂನ್ ಬಳಿ ಒಂದು ಚಿಕ್ಕ ನಡಿಗೆ ಮಾಡಿದೆವು. ಇಲ್ಲಿನ ಸುಂದರವಾದ  ಮೀ. & ಮಿಸೆಸ್ ಗ್ಲೇನ್ ಕೆಫೆಯಲ್ಲಿ ಕುಳಿತು ಊಟ ಮಾಡಿದೆವು .  

ಲಗೂನ್ 
ಪ್ಯಾರಾಡೈಸ್:-

ಪ್ಯಾರಾಡೈಸ್  ನ ವಿಹಂಗಮ ನೋಟ 

ಗ್ಲೆನೋರ್ಕಿ ಯಿಂದ ಸ್ವಲ್ಪ ಮುಂದೆ ಹೋದರೆ ಇನ್ನೊಂದು ಪ್ರವಾಸಿ ತಾಣ ಹೆಸರು ಪ್ಯಾರಾಡೈಸ್ ಅಂದರೆ ಸ್ವರ್ಗ! ನೋಡೋಣ ಎಂದು ಹೋದೆವು. ಇಲ್ಲಿಗೆ ತಲುಪುವ ದಾರಿ ಸ್ವಲ್ಪ ದುರ್ಗಮವಾಗಿತ್ತಾದರೂ ಸುಂದರ ರಮಣಿಯ ದೃಶ್ಯಗಳಿದ್ದವು. ಅಲ್ಲಿ ಜನರು ಪರ್ವತದಲ್ಲಿ ಬೈಕ್ ತೆಗೆದುಕೊಂಡು ಹೋಗಲು ತಯಾರಾಗುತ್ತಿದ್ದರು. ರಸ್ತೆಯನ್ನು ಬಿಟ್ಟು ಕಚ್ಚಾ ರಸ್ತೆಗಳಲ್ಲಿ ವಾಹನ ಚಲಾಯಿಸುವ ಆನಂದವನ್ನು ಸವಿಯುತ್ತಿದ್ದರು. ದೊಡ್ಡ ದೊಡ್ಡ ಕ್ಯಾರವಾನ್ ಗಳನ್ನು  ಕ್ಯಾನ್ಪರ್  ವ್ಯಾನುಗಳನ್ನು  ಬಾಡಿಗೆಗೆ ತೆಗೆದುಕೊಂಡು ಅದರಲ್ಲಿಯೇ ವಾಸವಿದ್ದು ಪ್ರವಾಸ ಮಾಡುವುದು ಈ ದೇಶದ ಇನ್ನೊಂದು ಜನಪ್ರಿಯ ಚಟುವಟಿಕೆ. ಅಂತಹ ಪ್ರವಾಸಿಗರ ಮತ್ತು ಮೌಂಟನ್ ಬೈಕಿಂಗ್ ಮಾಡುವವರ ಅಚ್ಚುಮೆಚ್ಚಿನ ತಾಣವಂತೆ ಪ್ಯಾರಾಡೈಸ್! 

ಲೇಖನ- ಸುಧಾ ಶಶಿಕಾಂತ್ , ಮಸ್ಕತ್ 

 ಈ ಪ್ರವಾಸ ಕಥನದ ಈ ಭಾಗ ಉದಯವಾಣಿ ದೇಸೀ ಸ್ವರದ  ಮೇ ೩, ೨೦೨೫ ರಂದು ಪ್ರಕಟವಾಗಿತ್ತು