ಸುಧಾ ವಾರ ಪತ್ರಿಕೆಯು ನನ್ನ ಹಿರಿಯಕ್ಕನಿದ್ದಂತೆ. ಸುಧಾ ವಾರಪತ್ರಿಕೆಯ ವಯಸ್ಸು ಹದಿನೈದು ಇದ್ದಾಗಿನಿಂದ ಸುಧಾ ಓದುಗಳಾದ ನಾನು ಸುಮಾರು ನಲವತ್ತೈದು ವರ್ಷಗಳಿಂದ ಈ ವಾರಪತ್ರಿಕೆಯನ್ನು ಓದುತ್ತಾ ಜೀವನದ ವಿವಿಧ ಹಂತಗಳನ್ನು ದಾಟಿದ್ದೇನೆ. ಸುಧಾ ವಾರ ಪತ್ರಿಕೆಯು ನನ್ನ ಬಾಲ್ಯದ ಅವಿಭಾಜ್ಯ ಅಂಗ. ನನ್ನ ಹೆಸರೂ ಸುಧಾ ಆಗಿದ್ದರಿಂದಲೋ ಏನೋ ನನಗೆ ಬುದ್ದಿ ಬಂದಾಗಿನಿಂದ ಈ ಪುಸ್ತಕ ನನ್ನದೆಂಬ ಭಾವ. ಈಗಿನಂತೆ ಟಿ ವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿಲ್ಲದ ನಿಷ್ಕಲ್ಮಶ ಬಾಲ್ಯದ ಕಾಲ ನಮ್ಮದು. ನಾನು ನನ್ನ ತಮ್ಮ ಸುಧಾ ಪತ್ರಿಕೆಗಾಗಿ ಕಾದು ಅದರಲ್ಲಿ ಬರುವ ಫ್ಯಾನ್ಟ್ ಮ್ , ಪುಟ್ಟಿಗಳನ್ನು ಓದಲು ಮಾಡುತ್ತಿದ್ದ ಸ್ಪರ್ಧೆ ಈಗಲೂ ನನ್ನ ಮನಸ್ಸಿನಲ್ಲಿ ತಿಳಿನಗೆ ಮೂಡಿಸುತ್ತದೆ. ಹೀಗೆ ಆರಂಭವಾದ ನಮ್ಮ ಓದು ನಮ್ಮ ಅಮ್ಮ ಅಜ್ಜಿಗೆ ಓದಿ ಹೇಳುತ್ತಿದ್ದ ಧಾರಾವಾಹಿಗಳನ್ನು ಆಲಿಸುವುದರೊಂದಿಗೆ ಮುಂದುವರಿಯಿತು. ಸುಧಾದಲ್ಲಿ ಬರುತ್ತಿದ್ದ ಧಾರಾವಾಹಿಗಳು ಹೊಸಲೋಕವನ್ನು ನಮ್ಮ ಮುಂದೆ ತೆರೆದಿಡುವ ಕೆಲಸವನ್ನು ಮಾಡುತ್ತಿತ್ತು. ಕೇಳು ಪುಸ್ತಕಗಳ ಈ ಕಾಲದಲ್ಲಿ ಕೇಳ್ಮೆ ಎಂತಹ ಒಳ್ಳೆಯ ಭಾಷಾ ಕಲಿಕೆಯ ಅಭ್ಯಾಸ ಎನ್ನುವುದನ್ನು ಹೇಳಲು ಈಗ ನಾನು ಈ ಉದಾಹರಣೆಯನ್ನು ಕೊಡುತ್ತೇನೆ. ಪ್ರತೀವಾರ ಸುಧಾ ಬರುವ ದಿನವನ್ನು ತವಕದಿಂದ ಕಾಯುತ್ತಿದ್ದ ನಾವೆಲ್ಲ ಪುಸ್ತಕ ಕೈಗೆ ಬಂದೊಡನೆ ಅಮ್ಮನನ್ನು ಕೆಲಸ ಬೇಗ ಮುಗಿಸಿ ಕಥೆಯೋದುವಂತೆ ಪಿಡಿಸುತ್ತಿದ್ದೆವು. ನಾವೇ ಓದಲು ಶಕ್ತರಾದ ಮೇಲೂ ಸುಧಾದ ಧಾರಾವಾಹಿಗಳನ್ನು ಅಮ್ಮನ ಬಾಯಿಂದ ಕೇಳುವ ಚಪಲ ಹಾಗೆಯೇ ಉಳಿದಿತ್ತು. ಸುಧಾದ ನೀವು ಕೇಳಿದಿರಿ ಪುಟದಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು ಎನ್ನುವುದು ನಮ್ಮ ಬಾಲ್ಯದ ಅತಿದೊಡ್ಡ ಕುತೂಹಲ ಕೆರಳಿಸಿದ ಪ್ರಶ್ನೆಯಾಗಿತ್ತು. ಮನು, ರಾಜಶೇಖರ ಭೂಸನೂರುಮಟ, ವಸುಮತಿ ಉಡುಪ ಮುಂತಾದ ಲೇಖಕರನ್ನು ಒಂದು ತಲೆಮಾರಿಗೆ ಪರಿಚಯಿಸಿದ ಶ್ರೇಯಸ್ಸು ಸುಧಾಗೆ ಸಲ್ಲುತ್ತದೆ.
ಹೀಗೆಯೇ ನಮ್ಮ ಓದು ಸುಧಾ ಮುಂತಾದ ಪತ್ರಿಕೆಗಳ ಆಚೆಗೂ ಹರಡಿತು. ನಿಧಾನವಾಗಿ ರಜಾ ದಿನಗಳ ನಮ್ಮ ಚಟುವಟಿಕೆಯಾಗಿದ್ದ ಪತ್ರಿಕೆ, ನಿಯತಕಾಲಿಕಗಳ ಓದಿನ ಸಮಯವನ್ನು ಟಿ ವಿ ತೆಗೆದುಕೊಳ್ಳಲು ಆರಂಭಿಸಿತು. ಮೊದಲಿಗೆ ದೂರದರ್ಶನದ ಚಾನೆಲ್ ಗಳನ್ನು ಮಾತ್ರ ನೋಡುತ್ತಿದ್ದ ನಮಗೆ ಖಾಸಗಿ ಚಾನೆಲ್ ಗಳು ಬರಲಾರಂಭವಾದವು. ವಿವಿಧ ರೀತಿಯ , ವಿವಿಧ ಭಾಷೆಗಳ ಕಾರ್ಯಕ್ರಮಗಳು, ರಿಯಾಲಿಟಿ ಸ್ಪರ್ಧೆಗಳು - ಹೀಗೆ ನಮ್ಮ ಬಿಡುವಿನ ವೇಳೆಯನ್ನು ದೃಶ್ಯ ಮಾಧ್ಯಮ ತನ್ನ ವಶಕ್ಕೆ ತೆಗೆದುಕೊಳ್ಳುತ್ತ ಬಂದಿತು. ಮೊಬೈಲ್ ಫೋನುಗಳ ಮುಖಾಂತರ ನಮ್ಮ ಅಂಗೈನ ತುದಿಗೆ ಇಡೀ ಪ್ರಪಂಚ ಬಂದ ಮೇಲಂತೂ ಓದುವ ರೀತಿಯೇ ಸಂಪೂರ್ಣ ಬದಲಾಯಿತು. ಆದರೂ ಸುಧಾ ನನ್ನ ಜೀವನದ ಭಾಗವಾಗಿ ಈ ಎಲ್ಲ ಬದಲಾವಣೆಗಳ ನಡುವೆಯೂ ಮುಂದುವರಿದಿದ್ದಾಳೆ.
ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ನೆಲಸಿರುವ ನಾನು ಸುಧಾದ ನನ್ನ ಓದನ್ನು ನಿಲ್ಲಿಸಲಿಲ್ಲ. ಅಂತರ್ಜಾಲದ ಯುಗ ಆರಂಭವಾಗುವ ಮುನ್ನ ಇಲ್ಲಿನ ಅಂಗಡಿಗಳಲ್ಲಿ ಹುಡುಕಿ ಸುಧಾ ಖರೀದಿಸಿ ಓದುತ್ತಿದ್ದೆ. ಕೆಲವು ವಾರ ಸಿಗದೇ ಇದ್ದಾಗ ಬೇಸರಗೊಳ್ಳುತ್ತಿದ್ದೆ. ಕಾಲ ಬದಲಾಯಿತು, ಬದಲಾದ ಜೀವನಕ್ಕೆ ತಕ್ಕಂತೆ ಸುಧಾ ಕೂಡ ಬದಲಾದಳು. ಅಂತರ್ಜಾಲದಲ್ಲಿ ಪಿಡಿಎಫ್ ರೂಪದಲ್ಲಿ ಸುಧಾ ಸಿಗಲು ಆರಂಭವಾಗಿ ಈಗಾಗಲೇ ಅನೇಕ ವರ್ಷಗಳಾಗಿವೆ. ಸುಧಾ ಪತ್ರಿಕೆಯ ಮುಖ ಪುಸ್ತಕ (Facebook) ಪುಟದಲ್ಲಿ ಪ್ರತಿವಾರದ ಸುಧಾದಲ್ಲಿ ಏನೇನು ಆಕರ್ಷಣೆಗಳಿವೆ ಎಂದು ತಿಳಿಯುತ್ತದೆ. ಮ್ಯಾಗಸ್ಟರ್, ರೀಡ್ ವೇರ್ ಮುಂತಾದ ಆಪ್ (applications) ಗಳಲ್ಲಿ ಸುಧಾ ಓದಲು ಸುಲಭವಾಗಿ ದೊರೆಯುತ್ತದೆ. ನಾನೀಗ ಸುಧಾ ವಾರಪತ್ರಿಕೆ ಯನ್ನು ತಪ್ಪದೇ ಪ್ರಪಂಚದ ಯಾವುದೇ ಊರಿನಲ್ಲಿದ್ದರೂ ಓದುತ್ತೇನೆ. ಇಲ್ಲಿ ಅಂದರೆ ನಾನಿರುವ ವಿದೇಶದಲ್ಲಿ ಬೆಳೆಯುವ ಕನ್ನಡದ ಮಕ್ಕಳಿಗೆ ಹಲವು ವರ್ಷಗಳಿಂದ ಕನ್ನಡ ಕಲಿಸುತ್ತಿರುವ ನಾನು ನನ್ನ ವಿದ್ಯಾರ್ಥಿಗಳ ಕನ್ನಡ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಸುಧಾದ ಮಕ್ಕಳ ಪುಟದ ಸಹಾಯ ಪಡೆಯುತ್ತೇನೆ. ಸುಧಾದ 'ವಿಚಾರಲಹರಿ' , 'ನೀವು ಕೇಳಿದಿರಿ', 'ನಿಮ್ಮ ಪುಟ' - ಮುಂತಾದ ಅಂಕಣಗಳು ಈಗಲೂ ನನ್ನನ್ನು ಪುಸ್ತಕ ತೆಗೆದೊಡನೆ ಅದೇ ಉತ್ಸಾಹದಿಂದ ಓದಿಸಿಕೊಳ್ಳುತ್ತವೆ.
ಹೀಗೆ ಕಾಲ ಬದಲಾದರೂ ನನ್ನ ಮತ್ತು ಸುಧಾ ವಾರಪತ್ರಿಕೆಯ ನಂಟು ಬದಲಾಗಿಲ್ಲ. ಇನ್ನೂ ಆಪ್ತವಾಗಿ ಮುಂದುವರಿಯುತ್ತಿದೆ. ಇದು ಹೀಗೆಯೇ ಮುಂದುವರಿಯಲಿ. ಪ್ರಪಂಚದಾದ್ಯಂತದ ಕನ್ನಡಿಗರನ್ನು ಸುಧಾ ಇನ್ನೂ ಪ್ರೌಢ ಓದಿನತ್ತ ಸುಧಾ ಕೊಂಡೊಯ್ಯಲಿ ಎಂದು ಆಶಿಸುತ್ತಾ , ಹಾರೈಸುತ್ತಾ ಸುಧಾ ವಾರಪತ್ರಿಕೆಗೆ ಅರವತ್ತರ ಶುಭಾಶಯಗಳನ್ನು ಕೊರುತ್ತೇನೆ.
ಸುಧಾ ಶಶಿಕಾಂತ್, ಮಸ್ಕತ್

ಲೇಖನ ತುಂಬಾ ಚೆನ್ನಾಗಿದೆ ಸುಧಾ...ಓದಿ ಖುಷಿಯಾಯಿತು
ಪ್ರತ್ಯುತ್ತರಅಳಿಸಿಧನ್ಯವಾದಗಳು ಮಾಡಮ್
ಅಳಿಸಿನನ್ನ
ಪ್ರತ್ಯುತ್ತರಅಳಿಸಿ